ಪ್ರಯತ್ನ ಒಂದು, ಪ್ರತಿಫಲ ಹಲವು
ಗ್ವಾಟೆಮಾಲದಲ್ಲಿರೋ ಮಾರ್ಟ ಒಬ್ಬ ಯೆಹೋವನ ಸಾಕ್ಷಿ. ಕೆಕ್ಚಿ ಭಾಷೆ ಮಾತಾಡುವವರಿಗೆ ಬೈಬಲಲ್ಲಿರೋ ವಿಷ್ಯಗಳನ್ನ ತಿಳಿಸಲಿಕ್ಕೆ ಅವಳು ಕೆಕ್ಚಿ ಭಾಷೆ ಕಲಿತ್ತಿದ್ದಾಳೆ. ಒಂದಿನ ಆಸ್ಪತ್ರೆಯಿಂದ ಹೊರಗೆ ಬರ್ತಿರೋ ಒಬ್ಬನನ್ನ ಅವಳು ನೋಡಿದಳು. ಆ ವ್ಯಕ್ತಿಯನ್ನ ನೋಡಿ ಅವನು ಕೆಕ್ಚಿ ಹಳ್ಳಿಯಿಂದ ಬಂದಿರಬಹುದು ಅಂತ ಅವಳಿಗೆ ಅನಿಸ್ತು. ಅದೊಂದು ಬೆಟ್ಟ ಪ್ರದೇಶ. ಯೆಹೋವನ ಸಾಕ್ಷಿಗಳು ಅಪರೂಪಕ್ಕೆ ಹೋಗಿ ಅಲ್ಲಿ ಸುವಾರ್ತೆ ಸಾರಿದ್ರು. ಅವಳು ಅವನ ಹತ್ರ ಹೋಗಿ ಅವಳಿಗೆ ಗೊತ್ತಿರೋ ಅಲ್ಪಸ್ವಲ್ಪ ಕೆಕ್ಚಿ ಭಾಷೆಯಲ್ಲಿ ಮಾತಾಡಿದಳು.
ನಿಮಗೆ ಇಷ್ಟ ಇರೋದಾದ್ರೆ ಬೈಬಲ್ ಕಲಿಸ್ತೀವಿ ಅಂತ ಹೇಳಿದಳು. ಅದಕ್ಕೆ ಅವನಿಗೆ ತುಂಬ ಖುಷಿ ಆಯ್ತು. ಆದ್ರೆ ಅದಕ್ಕೆಲ್ಲ ಕೊಡಕ್ಕೆ ನನ್ನ ಹತ್ರ ದುಡ್ಡು ಇಲ್ಲ ಅಂದ. ಜನ್ರಿಗೆ ಬೈಬಲ್ ಕಲಿಸಲಿಕ್ಕೆ ಯೆಹೋವನ ಸಾಕ್ಷಿಗಳು ದುಡ್ಡು ತಗೊಳ್ಳಲ್ಲ ಅಂತ ಮಾರ್ಟ ಹೇಳಿದಳು. ಫೋನ್ ಮೂಲಕ ನಿಮಗೆ ಬೈಬಲ್ ಕಲಿಸ್ತೀನಿ. ನೀವು, ನಿಮ್ಮ ಇಡೀ ಕುಟುಂಬ ಕೇಳಿಸ್ಕೊಬಹುದು ಅಂತಾನೂ ಹೇಳಿದಳು. ಅವನು ಒಪ್ಕೊಂಡ. ಅವನಿಗೆ ಸ್ಪ್ಯಾನಿಷ್ ಗೊತ್ತಿತ್ತು. ಹಾಗಾಗಿ ಮಾರ್ಟ ಅವನಿಗೆ ಸ್ಪ್ಯಾನಿಷ್ ಭಾಷೆಯಲ್ಲಿ ಪವಿತ್ರ ಶಾಸ್ತ್ರಗ್ರಂಥದ ನೂತನ ಲೋಕ ಭಾಷಾಂತರ ಬೈಬಲನ್ನ ಕೊಟ್ಟಳು. ಕೆಕ್ಚಿ ಭಾಷೆಯಲ್ಲಿ ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಅನ್ನೋ ಪುಸ್ತಕನೂ ಕೊಟ್ಟಳು. ಮುಂದಿನ ವಾರದಿಂದಾನೇ ವಾರಕ್ಕೆ ಎರಡು ಸಲ ಅವನು ಅವನ ಹೆಂಡತಿ ಮಗ-ಮಗಳು ಫೋನ್ ಮೂಲಕ ಬೈಬಲ್ ಕಲಿಯೋಕೆ ಶುರುಮಾಡಿದ್ರು. “ನನಗೆ ಕೆಕ್ಚಿ ಭಾಷೆ ಅಷ್ಟು ಗೊತ್ತಿರಲಿಲ್ಲ. ಹಾಗಾಗಿ ಸ್ಪ್ಯಾನಿಷ್ ಭಾಷೆಯಲ್ಲೇ ಬೈಬಲ್ ಕಲಿಸ್ತಿದ್ದೆ. ಆ ವ್ಯಕ್ತಿಗೆ ಮತ್ತು ಮಕ್ಕಳಿಗೆ ಸ್ಪ್ಯಾನಿಷ್ ಗೊತ್ತಿತ್ತು. ಆದ್ರೆ ಹೆಂಡತಿಗೆ ಗೊತ್ತಿರಲಿಲ್ಲ. ಅದಕ್ಕೇ ಅವನು ಕೇಳಿಸ್ಕೊಂಡ ವಿಷ್ಯನ ಅವಳಿಗೆ ಕೆಕ್ಚಿ ಭಾಷೆಯಲ್ಲಿ ಹೇಳ್ತಿದ್ದ” ಅನ್ನುತ್ತಾಳೆ ಮಾರ್ಟ.
ಆ ವ್ಯಕ್ತಿ ಚರ್ಚಲ್ಲಿ ಪಾಸ್ಟರ್ ಆಗಿದ್ದ. ಬೈಬಲಿಂದ ಅವನೇನು ಕಲಿತಿದ್ನೋ ಅದನ್ನ ಚರ್ಚಲ್ಲಿ ಇರುವವರಿಗೂ ಕಲಿಸಕ್ಕೆ ಶುರುಮಾಡಿದ. ಅವರಿಗೆ ಅವನು ಹೇಳಿದ ವಿಷ್ಯ ಇಷ್ಟ ಆಯ್ತು. ಈ ಹೊಸ ಹೊಸ ವಿಷ್ಯನ ಎಲ್ಲಿಂದ ಕಲಿತಿದ್ಯಾ ಅಂತ ಕೇಳಿದ್ರು. ಬೈಬಲ್ ಕಲಿತಿರೋ ವಿಷ್ಯ ಹೇಳಿದಾಗ ಅವನ ಜೊತೆ ಬೈಬಲ್ ಕಲಿಯಲು ಒಬ್ಬೊಬ್ಬರೇ ಬರೋಕೆ ಶುರುಮಾಡಿದ್ರು. ಮಾರ್ಟ ಫೋನ್ ಮೂಲಕ ಬೈಬಲ್ ಕಲಿಸುವಾಗ ಪ್ರತಿ ವಾರ ಸುಮಾರು 15 ಜನ ಬರ್ತಿದ್ರು. ಸ್ವಲ್ಪ ದಿನ ಆದಮೇಲೆ ಫೋನಲ್ಲಿ ಹೇಳೋದು ಎಲ್ಲರಿಗೆ ಕೇಳಿಸಬೇಕಂತ ಫೋನ್ ಪಕ್ಕದಲ್ಲಿ ಒಂದು ಮೈಕನ್ನ ಇಟ್ರು.
ಈ ಬೈಬಲ್ ಅಧ್ಯಯನದ ಬಗ್ಗೆ ಮಾರ್ಟ ಸಭೆಯಲ್ಲಿರೋ ಹಿರಿಯರಿಗೆ ಹೇಳಿದಳು. ಅವ್ರಲ್ಲಿ ಒಬ್ಬರು ಕೆಕ್ಚಿ ಹಳ್ಳಿಗೆ ಹೋಗಿ ಬೈಬಲ್ ಕಲಿತಿದ್ದವ್ರನ್ನ ಭೇಟಿ ಮಾಡಿದ್ರು. ಸರ್ಕಿಟ್ ಮೇಲ್ವಿಚಾರಕ a ಇನ್ನೊಂದು ಹಳ್ಳಿಯಲ್ಲಿ ಕೊಡೋ ಸಾರ್ವಜನಿಕ ಭಾಷಣ ಕೇಳಿಸಿಕೊಳ್ಳಕ್ಕೆ ಅವ್ರನ್ನ ಕರೆದ್ರು. ಅದು ಕೆಕ್ಚಿ ಹಳ್ಳಿಯಿಂದ ಸುಮಾರು ದೂರ ಇತ್ತು. ಒಂದು ಗಂಟೆ ಕಾರಲ್ಲಿ ಹೋಗಿ ಮತ್ತೆ ಎರಡು ಗಂಟೆ ನಡ್ಕೊಂಡು ಹೋಗಬೇಕಿತ್ತು. ಬೈಬಲ್ ಕಲಿತಿದ್ದವರು ಒಪ್ಕೊಂಡು 17 ಜನ ಭಾಷಣ ಕೇಳಿಸಿಕೊಳ್ಳಕ್ಕೆ ಹೋದ್ರು.
ಕೆಲವು ವಾರ ಆದ ಮೇಲೆ ಸರ್ಕಿಟ್ ಮೇಲ್ವಿಚಾರಕ ಮತ್ತು ಕೆಲವು ಸಾಕ್ಷಿಗಳು ಕೆಕ್ಚಿ ಹಳ್ಳಿಗೆ ಹೋಗಿ ನಾಲ್ಕು ದಿನ ಅಲ್ಲೇ ಉಳ್ಕೊಂಡ್ರು. ಬೆಳಗ್ಗೆ ಅವರು jw.orgನಲ್ಲಿರೋ ಕೆಕ್ಚಿ ಭಾಷೆಯ ವಿಡಿಯೋಗಳನ್ನ ಬೈಬಲ್ ಕಲಿತಿದ್ದವ್ರಿಗೆ ತೋರಿಸಿದ್ರು ಮತ್ತು ಯೆಹೋವ ದೇವರ ಇಷ್ಟವನ್ನು ಯಾರು ಮಾಡುತ್ತಿದ್ದಾರೆ? ಅನ್ನೋ ಬ್ರೋಷರಿಂದ ಅಧ್ಯಯನ ಮಾಡಿದ್ರು. ಮಧ್ಯಾಹ್ನ JW ಪ್ರಸಾರದ ಕಾರ್ಯಕ್ರಮಗಳನ್ನ ತೋರಿಸಿದ್ರು. ಅಲ್ಲದೆ, ಒಬ್ಬೊಬ್ರಿಗೆ ಒಬ್ಬೊಬ ಸಾಕ್ಷಿ ಬೈಬಲ್ ಕಲಿಸೋ ಹಾಗೇ ಸರ್ಕಿಟ್ ಮೇಲ್ವಿಚಾರಕ ಏರ್ಪಾಡು ಮಾಡಿದ್ರು.
ಸಾಕ್ಷಿಗಳು ಕೆಕ್ಚಿ ಹಳ್ಳಿಯಲ್ಲಿ ನಾಲ್ಕು ದಿನ ಇದ್ದಾಗ ಅಕ್ಕಪಕ್ಕದ ಸ್ಥಳಗಳಿಗೂ ಹೋಗಿ ಸುವಾರ್ತೆ ಸಾರಿದ್ರು. ಅಲ್ಲದೆ ಒಂದು ವಿಶೇಷ ಕೂಟಕ್ಕೆ ಎಲ್ರನ್ನ ಕರೆದ್ರು. ಆ ಕೂಟಕ್ಕೆ ಒಟ್ಟು 47 ಜನ ಬಂದಿದ್ರು. ಅವರೆಲ್ಲರಿಗೂ ಬೈಬಲ್ ಅಧ್ಯಯನ ಮಾಡಲಿಕ್ಕೆ ಪ್ರೋತ್ಸಾಹಿಸಿದರು. 11 ಕುಟುಂಬಗಳು ಇದಕ್ಕೆ ಒಪ್ಪಿಕೊಂಡಿತು.
ಕೆಲವು ತಿಂಗಳು ಆದ ಮೇಲೆ ಕೆಕ್ಚಿ ಹಳ್ಳಿಯಲ್ಲಿ ಪ್ರತಿವಾರ ಕೂಟ ನಡೆಸೋಕ್ಕೆ ಹಿರಿಯರು ಏರ್ಪಾಡು ಮಾಡಿದ್ರು. ಇವತ್ತು ಸುಮಾರು 40 ಜನ ಕೂಟಕ್ಕೆ ತಪ್ಪದೇ ಬರ್ತಿದ್ದಾರೆ. ಅಲ್ಲಿ ಯೇಸುವಿನ ಮರಣದ ಸ್ಮರಣೆಗೆ 91 ಜನ ಬಂದಿದ್ದನ್ನ ನೋಡಿ ಸಹೋದರರಿಗೆ ತುಂಬ ಖುಷಿ ಆಯ್ತು.
ಇದೆಲ್ಲ ಹೇಗಾಯ್ತು ಅಂತ ನೆನಸ್ಕೊಂಡು ಮಾರ್ಟ ಹೀಗೆ ಹೇಳ್ತಾಳೆ: “ನಾನು ಯೆಹೋವನಿಗೆ ಥ್ಯಾಂಕ್ಸ್ ಹೇಳ್ತಿನಿ. ನನ್ನಿಂದ ಜಾಸ್ತಿ ಮಾಡಕ್ಕಾಗಲ್ಲ ಅಂತ ಕೆಲವೊಮ್ಮೆ ಅನಿಸುತ್ತೆ. ಆದ್ರೆ ಬೇರೆಯವರಿಗೆ ಸಹಾಯ ಮಾಡೋಕೆ ಆತನು ನಮ್ಮನ್ನ ಉಪಯೋಗಿಸ್ತಾನೆ. ಆ ಹಳ್ಳಿಯಲ್ಲಿರೋ ಜನರ ಹೃದಯದಲ್ಲಿ ಏನಿದೆ ಅಂತ ಯೆಹೋವನಿಗೆ ಗೊತ್ತಿತ್ತು. ಅದಕ್ಕೇ ಆತನು ಅವರನ್ನ ತನ್ನ ಜನರ ಹತ್ರಕ್ಕೆ ಸೆಳೆದನು. ಯೆಹೋವನು ಅವರನ್ನ ಪ್ರೀತಿಸ್ತಾನೆ.”
a ಒಂದು ವಲಯದಲ್ಲಿರೋ ಯೆಹೋವನ ಸಾಕ್ಷಿಗಳ ಸಭೆಗೆ ಸರ್ಕಿಟ್ ಅಂತ ಹೆಸರು. ಆ ವಲಯದಲ್ಲಿ ಸುಮಾರು 20 ಸಭೆಗಳು ಇರ್ತವೆ. ಆ ಸಭೆಗಳನ್ನ ಭೇಟಿ ಮಾಡುವವನಿಗೆ ಸರ್ಕಿಟ್ ಮೇಲ್ವಿಚಾರಕ ಅಂತ ಹೆಸರು.