ಮಾಹಿತಿ ಇರುವಲ್ಲಿ ಹೋಗಲು

ಬದುಕು ಬದಲಾದ ವಿಧ

‘ಕೀಳುಭಾವನೆ ಕಿತ್ತೆಸೆದೆ’

‘ಕೀಳುಭಾವನೆ ಕಿತ್ತೆಸೆದೆ’
  • ಜನನ: 1963

  • ದೇಶ: ಮೆಕ್ಸಿಕೊ

  • ಹಿಂದೆ: ತಿರುಪೆ ಎತ್ತುತ್ತಿದ್ದೆ, ಕೀಳುಭಾವನೆ ಇತ್ತು

ಹಿನ್ನೆಲೆ

 ನಾನು ಹುಟ್ಟಿದ್ದು ಉತ್ತರ ಮೆಕ್ಸಿಕೊದ ಚುಡಾಡ್‌ ಆರಿಗಾನ್‌ನಲ್ಲಿ. ನನ್ನ ಅಪ್ಪಅಮ್ಮಗೆ 9 ಮಕ್ಕಳು. ನಾನು ಐದನೆಯವನು. ನಾವು ನಗರದಿಂದ ತುಂಬ ದೂರದಲ್ಲಿ ವಾಸಿಸ್ತಿದ್ವಿ. ಅಲ್ಲಿ ಅಪ್ಪಗೆ ಒಂದು ಚಿಕ್ಕ ಗದ್ದೆ ಮತ್ತು ಫಾರ್ಮ್‌ ಇತ್ತು. ಆ ಸ್ಥಳ ತುಂಬ ಚೆನ್ನಾಗಿತ್ತು. ನಾವೆಲ್ಲ ಒಟ್ಟಿಗೆ ಖುಷಿಯಾಗಿದ್ವಿ. ಒಂದು ಸಲ ಒಂದು ಚಂಡಮಾರುತ ಬಂದು ನಮ್ಮ ಗದ್ದೆ ಮತ್ತು ಫಾರ್ಮ್‌ ಹಾಳಾಯ್ತು. ಹಾಗಾಗಿ ನಾವು ಬೇರೆ ಪಟ್ಟಣಕ್ಕೆ ಹೋಗಬೇಕಾಯ್ತು. ನನಗೆ ಆಗ ಐದು ವರ್ಷ.

 ಅಪ್ಪ ದುಡಿದು ತುಂಬ ಸಂಪಾದನೆ ಮಾಡ್ತಿದ್ರು. ಅದ್ರ ಜೊತೆ ತುಂಬ ಕುಡಿಯಕ್ಕೂ ಶುರುಮಾಡಿದ್ರು. ಇದ್ರಿಂದ ಅಪ್ಪಅಮ್ಮ ಮಧ್ಯೆ ಜಗಳ ಶುರುವಾಯಿತು. ಮಕ್ಕಳಾದ ನಾವು ದಾರಿ ತಪ್ಪಿದ್ವಿ. ನಾನು ನನ್ನ ಅಣ್ಣಂದಿರು ಅಪ್ಪನ ಸಿಗರೇಟ್‌ ಕದ್ದು ಸೇದಲು ಶುರುಮಾಡ್ವಿ. 6 ವರ್ಷ ಇದ್ದಾಗಲೇ ನಾನು ಸಾರಾಯಿ ರುಚಿ ನೋಡ್ದೆ. ಸ್ವಲ್ಪದ್ರಲ್ಲೇ ಅಪ್ಪಅಮ್ಮ ಬೇರೆ ಆದ್ರು. ನನಗಿದ್ದ ಕೆಟ್ಟ ಚಟ ಇನ್ನು ಜಾಸ್ತಿ ಆಯ್ತು.

 ಅಮ್ಮ ಇನ್ನೊಬ್ಬನ ಜೊತೆ ಹೋದ್ರು. ಜೊತೆಗೆ ನಮ್ಮನ್ನೂ ಕರಕೊಂಡು ಹೋದ್ರು. ಅವನು ಅಮ್ಮಗೆ ದುಡ್ಡು ಕೊಡ್ತಿರಲಿಲ್ಲ. ಅಮ್ಮ ದುಡಿತಿದ್ದ ಹಣದಿಂದ ನಾವೆಲ್ಲರೂ ಜೀವನ ಮಾಡೋದು ತುಂಬ ಕಷ್ಟ ಆಯ್ತು. ಅದಕ್ಕೆ ನಾನು ಮತ್ತು ನನ್ನ ಒಡಹುಟ್ಟಿದವರು ನಮ್ಮಿಂದ ಆಗೋ ಕೆಲಸ ಮಾಡಿದ್ವಿ. ಆದ್ರೆ ಅದೂ ಸಾಕಾಗ್ತಿರಲಿಲ್ಲ. ನಾನು ಶೂ ಪಾಲಿಷ್‌ ಮಾಡ್ತಿದ್ದೆ, ಬ್ರೆಡ್‌ ಮಾರುತ್ತಿದ್ದೆ, ನ್ಯೂಸ್‌ ಪೇಪರ್‌ ಹಾಕ್ತಿದ್ದೆ, ಬಬಲ್‌ಗಮ್‌ ಅದೂ ಇದೂ ಮಾರುತ್ತಿದ್ದೆ. ಶ್ರೀಮಂತರ ಮನೆ ಮುಂದೆ ಇರ್ತಿದ್ದ ಕಸದ ಕ್ಯಾನ್‌ಗಳಲ್ಲಿ ಊಟ ಹುಡ್ಕೊಂಡು ಬೀದಿ ಬೀದಿ ಅಲಿತ್ತಿದ್ದೆ.

 ನನಗೆ 10 ವರ್ಷ ಇದ್ದಾಗ ನಗರದ ಕಸದ ಕೊಂಪೆಯಲ್ಲಿ ಕೆಲಸ ಮಾಡಲಿಕ್ಕೆ ಒಬ್ಬ ನನ್ನನ್ನ ಕರೆದ. ನಾನು ಸ್ಕೂಲ್‌ಗೆ ಹೋಗೋದನ್ನ ಬಿಟ್ಟು, ಮನೆ ಬಿಟ್ಟು ಆ ಕೆಲಸಕ್ಕೆ ಹೋದೆ. ಅವನು ದಿನಕ್ಕೆ ಒಂದು ಡಾಲರ್‌ಕ್ಕಿಂತ ಕಡಿಮೆ ಕೂಲಿ ಕೊಡ್ತಿದ್ದ. ಕಸದ ಕೊಂಪೆಯಿಂದ ಏನಾದ್ರೂ ಕೂಡಿಸಿ ಊಟಕ್ಕೆ ಕೊಡ್ತಿದ್ದ. ಗುಜುಡಿ ವಸ್ತುಗಳಿಂದ ನಾನೇ ಒಂದು ಶೆಡ್‌ ತರ ಮಾಡ್ಕೊಂಡು ಅದ್ರಲ್ಲಿದ್ದೆ. ಸುತ್ತಮುತ್ತ ಇದ್ದ ಜನ ಕೆಟ್ಟ ಕೆಟ್ಟ ಮಾತು ಆಡ್ತಿದ್ರು. ಅನೈತಿಕ ಜೀವನ ನಡಿಸ್ತಿದ್ರು. ಅಮಲೌಷಧಕ್ಕೆ ಕುಡಿತಕ್ಕೆ ದಾಸರಾಗಿದ್ರು. ಅವು ನನ್ನ ಬಾಳಿನ ಕತ್ತಲ ದಿನಗಳು. ಪ್ರತಿದಿನ ರಾತ್ರಿ ನಾನು ಹೆದರಿಕೊಂಡು ಅಳ್ತಿದ್ದೆ. ಓದು ಕಡಿಮೆ, ಬಡತನ ಕಿತ್ತು ತಿನ್ನುತ್ತಿತ್ತು. ಹಾಗಾಗಿ ನನ್ನ ಬಗ್ಗೆ ನನಗೇ ನಾಚಿಕೆ ಆಗ್ತಿತ್ತು. ಸುಮಾರು 3 ವರ್ಷ ಆ ಕಸದ ಕೊಂಪೆಯಲ್ಲೇ ಇದ್ದೆ. ಆಮೇಲೆ ಮೆಕ್ಸಿಕೊದಲ್ಲಿ ಇರೋ ಇನ್ನೊಂದು ರಾಜ್ಯಕ್ಕೆ ಹೋದೆ. ಅಲ್ಲಿ ಗದ್ದೆ ಕೆಲಸ ಮಾಡ್ತಿದ್ದೆ. ಹೂ, ಹತ್ತಿ ಕೀಳ್ತಿದ್ದೆ. ಕಬ್ಬು, ಆಲುಗಡ್ಡೆ ಕೂಡಿಸುತ್ತಿದ್ದೆ.

ನಾನು 3 ವರ್ಷ ಇದ್ದದ್ದು ಈ ತರದ ಕಸದ ಕೊಂಪೆಯಲ್ಲೇ

 ನಾಲ್ಕು ವರ್ಷ ಆದ ಮೇಲೆ ನನ್ನ ಹುಟ್ಟೂರಿಗೆ ವಾಪಸ್‌ ಹೋದೆ. ನನ್ನ ಅತ್ತೆ ಅವ್ರ ಮನೇಲಿ ನನಗೊಂದು ರೂಮ್‌ ಕೊಟ್ರು. ಅತ್ತೆ ಮಾಟಗಾತಿ ವೈದ್ಯೆ ಆಗಿದ್ದಳು. ನನಗೆ ರಾತ್ರಿ ಕೆಟ್ಟ ಕೆಟ್ಟ ಕನಸು ಬೀಳ್ತಿತ್ತು. ಜೀವನ ಎಷ್ಟು ಬೇಸತ್ತು ಹೋಗಿತ್ತಂದ್ರೆ ಸತ್ತು ಹೋಗೋಣ ಅಂತ ಅನಿಸ್ತಿತ್ತು. ಒಂದು ರಾತ್ರಿ ನಾನು ದೇವರ ಹತ್ರ, “ಸ್ವಾಮಿ, ನೀನು ನಿಜವಾಗ್ಲೂ ಇದ್ದೀಯಾ? ಇರೋದಾದ್ರೆ ನನಗೆ ನಿನ್ನ ಬಗ್ಗೆ ಗೊತ್ತಾಗಬೇಕು. ಜೀವಮಾನ ಪೂರ್ತಿ ನಿನ್ನ ಸೇವೆ ಮಾಡ್ತೀನಿ. ಸತ್ಯ ಧರ್ಮ ಅನ್ನೋದು ಒಂದಿದ್ರೆ ಅದು ಯಾವುದು ಅಂತ ನಾನು ತಿಳ್ಕೊಬೇಕು” ಅಂದೆ.

ಬದುಕನ್ನೇ ಬದಲಾಯಿಸಿತು ಬೈಬಲ್‌

 ಚಿಕ್ಕವಯಸ್ಸಿಂದಾನೇ ನನಗೆ ದೇವರ ಬಗ್ಗೆ ತಿಳ್ಕೊಬೇಕು ಅಂತ ಆಸೆ. ಹಾಗಾಗಿ ಮೊದಲಿಂದಾನೂ ಬೇರೆ ಬೇರೆ ಚರ್ಚ್‌ಗೆ ಹೋಗ್ತಿದ್ದೆ. ಆದ್ರೆ ಯಾರೂ ನನಗೆ ಬೈಬಲ್‌ ಬಗ್ಗೆ ಆಗಲಿ ದೇವರ ಬಗ್ಗೆ ಆಗಲಿ ಹೇಳಿಕೊಡಲಿಲ್ಲ. ಕೆಲವ್ರಿಗೆ ದುಡ್ಡಿದ್ರೆ ಸಾಕು, ಇನ್ನು ಕೆಲವ್ರಿಗೆ ದೇಹಸುಖದ್ದೇ ಚಿಂತೆ. ಇದೆಲ್ಲ ನೋಡಿ ಬೇಜಾರಾಗಿ ಏನೂ ಬೇಡ ಅಂತ ಅನಿಸಿಬಿಡ್ತು.

 ಒಂದು ಸಲ ಯೆಹೋವನ ಸಾಕ್ಷಿಗಳು ನನ್ನ ಭಾವನಿಗೆ ಮೂರ್ತಿಗಳ ಬಗ್ಗೆ ಬೈಬಲ್‌ ಏನು ಹೇಳುತ್ತೆ ಅಂತ ತೋರಿಸಿದ್ರು. ಭಾವ ನನ್ನ ಹತ್ರ ಮಾತಾಡುವಾಗ ಆ ವಿಷ್ಯ ಹೇಳಿದ್ರು. ನನಗಾಗ 19 ವರ್ಷ. ವಿಮೋಚನಕಾಂಡ 20:4, 5 ನ್ನು ಭಾವ ಓದಿದ್ರು. ಆ ವಚನದಲ್ಲಿ ಯಾವ ಮೂರ್ತಿಯನ್ನೂ ಮಾಡಿಕೊಳ್ಳಬಾರದು ಅಂತಿದೆ. ವಚನ 5 ರಲ್ಲಿ ಹೀಗಿದೆ: ‘ಅವುಗಳಿಗೆ ಅಡ್ಡಬೀಳಲೂಬಾರದು ಪೂಜೆಮಾಡಲೂಬಾರದು.‏ ನಿನ್ನ ದೇವರಾದ ಯೆಹೋವನೆಂಬ ನಾನು ನನಗೆ ಸಲ್ಲತಕ್ಕ ಗೌರವವನ್ನು ಮತ್ತೊಬ್ಬನಿಗೆ ಸಲ್ಲಗೊಡಿಸಲ್ಲ.’ ವಚನ ಓದಿದ ಮೇಲೆ ಭಾವ, “ಮೂರ್ತಿಗಳ ಮೂಲಕ ದೇವರು ಅದ್ಭುತಗಳನ್ನ ಮಾಡೋದಾದ್ರೆ, ಅವುಗಳನ್ನ ನಾವು ಆರಾಧಿಸಬೇಕು ಅಂತ ಆತನು ಇಷ್ಟಪಡೋದಾದ್ರೆ ಮೂರ್ತಿಗಳನ್ನು ಮಾಡಿಕೊಳ್ಳಬಾರದು ಅಂತ ಯಾಕೆ ಹೇಳ್ತಿದ್ದಾನೆ?” ಅಂತ ಕೇಳಿದ್ರು. ಆ ಪ್ರಶ್ನೆ ಕೇಳಿ “ಹೌದಲ್ವಾ” ಅಂತ ಯೋಚನೆ ಶುರುವಾಯ್ತು. ಇದಾದ ಮೇಲೆ ಬೈಬಲ್‌ ವಿಷ್ಯಗಳ ಬಗ್ಗೆ ನಾವು ತುಂಬ ಚರ್ಚೆ ಮಾಡ್ತಿದ್ವಿ. ಆ ತರ ಚರ್ಚೆ ಮಾಡೋದು ನನಗೆ ತುಂಬ ಇಷ್ಟ ಆಗ್ತಿತ್ತು. ಟೈಮ್‌ ಹೋಗೋದೇ ಗೊತ್ತಾಗ್ತಿರಲಿಲ್ಲ.

 ಒಮ್ಮೆ ಭಾವ ನನ್ನನ್ನ ಯೆಹೋವನ ಸಾಕ್ಷಿಗಳ ಕೂಟಕ್ಕೆ ಕರಕೊಂಡು ಹೋದ್ರು. ಅಲ್ಲಿ ಕೇಳಿಸಿಕೊಂಡಿದ್ದು, ನೋಡಿದ್ದು ಎಲ್ಲ ನನಗೆ ತುಂಬ ಇಷ್ಟ ಆಗಿಬಿಡ್ತು. ಚಿಕ್ಕ ಚಿಕ್ಕ ಮಕ್ಕಳು ಕೂಡ ಕೂಟದಲ್ಲಿ ಭಾಗವಹಿಸ್ತಿದ್ರು, ಸ್ಟೇಜಿಂದ ತುಂಬ ಸರಾಗವಾಗಿ ಮಾತಾಡ್ತಿದ್ರು. ಇದನ್ನ ನೋಡಿ ‘ವಾವ್‌! ಇಲ್ಲಿ ಎಷ್ಟು ಒಳ್ಳೇ ಶಿಕ್ಷಣ ಸಿಗ್ತಿದೆ’ ಅಂತ ಅಂದುಕೊಂಡೆ. ನನಗೆ ಉದ್ದುದ್ದ ಕೂದಲಿತ್ತು, ನಾನು ಹಾಕಿದ ಬಟ್ಟೆನೂ ಚೆನ್ನಾಗಿರಲಿಲ್ಲ. ಆದ್ರೂ ಸಾಕ್ಷಿಗಳು ನಗುಮುಖದಿಂದ ಮಾತಾಡಿಸಿದ್ರು. ಕೂಟ ಆದ ಮೇಲೆ ಒಬ್ಬರು ನನ್ನನ್ನ ಊಟಕ್ಕೂ ಕರೆದ್ರು.

 ಸಾಕ್ಷಿಗಳ ಹತ್ರ ಬೈಬಲ್‌ ಕಲಿತದ್ರಿಂದ ಯೆಹೋವ ದೇವರು ಒಬ್ಬ ಪ್ರೀತಿಯ ತಂದೆ ಅಂತ ಕಲಿತುಕೊಂಡೆ. ನಮ್ಮ ಹತ್ರ ದುಡ್ಡು ಇಲ್ಲದಿದ್ರೂ, ನಾವು ಓದದಿದ್ರೂ, ಸಮಾಜದಲ್ಲಿ ಸ್ಥಾನಮಾನ ಇಲ್ಲದಿದ್ರೂ, ಯಾವುದೇ ಜಾತಿಯವರಾಗಿದ್ರೂ ಆತನು ನಮ್ಮ ಬಗ್ಗೆ ಕಾಳಜಿ ವಹಿಸ್ತಾನೆ, ಬೇಧಭಾವ ಮಾಡಲ್ಲ ಅಂತ ತಿಳ್ಕೊಂಡೆ. (ಅಪೊಸ್ತಲರ ಕಾರ್ಯ 10:34, 35) ದೇವರ ಬಗ್ಗೆ ತಿಳ್ಕೊಬೇಕು ಅನ್ನೋ ನನ್ನ ಆಸೆ ಕೊನೆಗೂ ಈಡೇರಿತು. ಏನೋ ಕಳ್ಕೊಂಡಿದ್ದೀನಿ ಅನ್ನೋ ಭಾವನೆ ಹೋಯ್ತು, ಸಂತೋಷ ಸಿಕ್ತು.

ಸಿಕ್ಕಿದ ಪ್ರಯೋಜನಗಳು

 ಅಲ್ಲಿಂದ ನನ್ನ ಜೀವನ ಸುಧಾರಣೆ ಆಗ್ತಾ ಹೋಯ್ತು. ಸಿಗರೇಟ್‌ ಸೇದೋದು, ಕುಡಿಯೋದು, ಕೆಟ್ಟ ಕೆಟ್ಟ ಮಾತು ಆಡೋದು ಎಲ್ಲ ಬಿಟ್ಟುಬಿಟ್ಟೆ. ಭಯಹುಟ್ಟಿಸೋ ಕನಸುಗಳು, ಚಿಕ್ಕಂದಿನಿಂದ ನನಗಿದ್ದ ಕಹಿ ಭಾವನೆಗಳು ಕಡಿಮೆಯಾಗ್ತಾ ಹೋಯ್ತು. ದುಃಖದ ಬಾಲ್ಯದಿಂದ, ಓದು ಕಡಿಮೆ ಇದ್ದದ್ರಿಂದ ನನ್ನಲ್ಲಿ ಆಳವಾಗಿ ಬೇರು ಬಿಟ್ಟಿದ್ದ ಕೀಳುಭಾವನೆಯನ್ನು ಸಹ ಬೇರು ಸಮೇತ ಕಿತ್ತು ಹಾಕಿದೆ.

 ಯೆಹೋವನನ್ನು ಪ್ರೀತಿಸೋ ಚಿನ್ನದಂಥ ಹೆಂಡತಿ ನನಗೆ ಸಿಕ್ಕಿದ್ದು ದೊಡ್ಡ ಆಶೀರ್ವಾದ! ಅವಳು ನನಗೆ ತುಂಬ ಬೆಂಬಲ ಕೊಡ್ತಾಳೆ. ಈಗ ನಾನು ಯೆಹೋವನ ಸಾಕ್ಷಿಗಳ ಸಂಚರಣ ಮೇಲ್ವಿಚಾರಕನಾಗಿ ಸೇವೆ ಮಾಡ್ತಿದ್ದೀನಿ ಅಂದ್ರೆ ಸಭೆಗಳನ್ನ ಭೇಟಿ ಮಾಡಿ ನನ್ನ ಒಡಹುಟ್ಟಿದವರ ತರ ಇರೋ ಸಹೋದರ ಸಹೋದರಿಯರನ್ನ ಪ್ರೋತ್ಸಾಹಿಸ್ತೀನಿ, ಅವರಿಗೆ ಕಲಿಸ್ತೀನಿ. ಒಬ್ಬನನ್ನ ಪೂರ್ತಿ ಬದಲಾಯಿಸೋ ಶಕ್ತಿ ಇರುವ ಬೈಬಲಿಗೆ ಮತ್ತು ಅತ್ಯುತ್ತಮ ಶಿಕ್ಷಣ ಕೊಡ್ತಿರೋ ದೇವರಿಗೆ ನಾನು ತುಂಬ ಋಣಿಯಾಗಿದ್ದೇನೆ. ನನಲ್ಲಿದ್ದ ಕೀಳುಭಾವನೆನೂ ಕಣ್ಮರೆಯಾಯಿತು.

ನನಗೆ ಬೇರೆಯವರು ಸಹಾಯ ಮಾಡಿದ ಹಾಗೆ ನಾನು ನನ್ನ ಹೆಂಡತಿ ಬೇರೆಯವರಿಗೆ ಖುಷಿಯಿಂದ ಸಹಾಯ ಮಾಡ್ತಿವಿ