ಕಾಯಿಲೆ ಬಂದರೂ ಕುಗ್ಗಿಹೋಗಲಿಲ್ಲ
ವರ್ಜಿನ್ಯ ಯೆಹೋವನ ಸಾಕ್ಷಿ. ಅವಳಿಗೆ ಒಳ್ಳೇ ಆರೋಗ್ಯ ಇತ್ತು. ಚುರುಕಾಗಿ ಓಡಾಡ್ತಿದ್ದಳು. ಆದ್ರೆ ಇಸವಿ 1997 ರಲ್ಲಿ ಒಂದಿನ ಬೆಳಗ್ಗೆ ದಿಢೀರಂತ ಅವಳಿಗೆ ತಲೆ ಹಿಂದೆ ಸಿಡಿಯುವಷ್ಟು ನೋವಾಯಿತು. ಅವಳ ಗಂಡ ಅವಳನ್ನು ಆಸ್ಪತ್ರೆಗೆ ಕರಕೊಂಡು ಹೋದ. ಸಂಜೆ ಅಷ್ಟರಲ್ಲಿ ಅವಳು ಕೋಮಗೆ ಹೋದಳು. ಎರಡು ವಾರ ಆದ ಮೇಲೆ ಅವಳು ಕಣ್ಣು ಬಿಟ್ಟಳು. ಆಗ ಅವಳು ICUನಲ್ಲಿ ಇದ್ದಳು, ವೆಂಟಿಲೇಟರ್ ಅಳವಡಿಸಿ ಚಿಕಿತ್ಸೆ ಕೊಡುತ್ತಿದ್ದರು. ಏಕೆಂದ್ರೆ ಅವಳಿಗೆ ಲಕ್ವ ಹೊಡೆದಿತ್ತು ಅಂದ್ರೆ ಲಾಕ್ಡ್-ಇನ್ ಸಿಂಡ್ರೋಮ್ ಅನ್ನೋ ಕಾಯಿಲೆ ಬಂದಿತ್ತು. ಅವಳಿಗೆ ಕಣ್ಣು ಕಾಣುತ್ತಿತ್ತು, ಕಿವಿ ಕೇಳುತ್ತಿತ್ತು, ಕಣ್ಣು ತೆರೆಯಲು ಮುಚ್ಚಲು ಆಗುತ್ತಿತ್ತು. ಆದ್ರೆ ಮಾತಾಡಲಿಕ್ಕೆ, ಊಟ ಮಾಡಲಿಕ್ಕೆ ಆಗ್ತಿರಲಿಲ್ಲ. ತಲೆನ ಸ್ವಲ್ಪ ಅಷ್ಟೇ ಅಲ್ಲಾಡಿಸಲಿಕ್ಕೆ ಆಗ್ತಿತ್ತು. ಸ್ವಲ್ಪ ದಿನ ಅವಳಿಗೆ ಏನೂ ನೆನಪಿರಲಿಲ್ಲ, ಅವಳು ಯಾರಂತ ಅವಳಿಗೇ ಗೊತ್ತಿರಲಿಲ್ಲ.
ಆಮೇಲೆ ಏನಾಯ್ತು ಅಂತ ವರ್ಜಿನ್ಯ ಹೇಳ್ತಾಳೆ ಕೇಳಿ, “ಮೆಲ್ಲಮೆಲ್ಲ ನೆನಪಿನಶಕ್ತಿ ಬಂತು. ತೀವ್ರವಾಗಿ ಪ್ರಾರ್ಥಿಸಿದೆ. ನನ್ನ ಮಗ ತುಂಬ ಚಿಕ್ಕವನು, ಇನ್ನು 9ವರ್ಷ ಆಷ್ಟೇ. ಅವನನ್ನ ತಾಯಿಯಿಲ್ಲದ ತಬ್ಬಲಿಯಾಗಿ ಮಾಡಿ ಸಾಯಲಿಕ್ಕೆ ಇಷ್ಟ ಇರಲಿಲ್ಲ. ಹಾಗಾಗಿ ಧೈರ್ಯ ಕಳಕೊಳ್ಳದೇ ಇರಲಿಕ್ಕೆ ನನ್ನಿಂದ ಎಷ್ಟು ಆಗುತ್ತೋ ಅಷ್ಟು ಬೈಬಲ್ ವಚನಗಳನ್ನು ನೆನಪು ಮಾಡಿಕೊಳ್ಳಲು ಪ್ರಯತ್ನಿಸಿದೆ.”
“ಆಮೇಲೆ ಡಾಕ್ಟರ್ಸ್ ನನ್ನನ್ನು ICUಯಿಂದ ವಾರ್ಡ್ಗೆ ಶಿಪ್ಟ್ ಮಾಡಿದ್ರು. ಆರು ತಿಂಗಳು ನಾನು ಬೇರೆ ಬೇರೆ ಆಸ್ಪತ್ರೆಯಲ್ಲಿದ್ದೆ, ಒಂದು ಪುನರ್ವಸತಿ ಕೇಂದ್ರದಲ್ಲೂ ಇದ್ದೆ. ಆಮೇಲೆ ನನ್ನನ್ನು ಮನೆಗೆ ಕಳುಹಿಸಿದ್ರು. ಲಕ್ವ ಹೊಡೆದದ್ರಿಂದ ಏನೇನೂ ಮಾಡಲಿಕ್ಕೆ ಆಗಲಿಲ್ಲ. ಪ್ರತಿಯೊಂದಕ್ಕೂ ಬೇರೆಯವರ ಸಹಾಯ ಬೇಕಿತ್ತು. ತುಂಬ ಬೇಸರ ಆಯ್ತು. ನಾನು ಎಲ್ಲರಿಗೂ ಭಾರವಾಗಿದ್ದೇನೆ, ನನ್ನಿಂದ ಮೂರು ಕಾಸು ಪ್ರಯೋಜನ ಇಲ್ಲ ಅಂತ ಅನಿಸಿತು. ನನ್ನಿಂದ ಯೆಹೋವನಿಗೂ ಪ್ರಯೋಜನ ಇಲ್ಲ ಅಂತ ಅನಿಸಿಬಿಟ್ಟಿತು. ನನ್ನ ಮಗನನ್ನ ನೋಡಿಕೊಳ್ಳಲಿಕ್ಕೆ ಆಗ್ತಿಲ್ವಲ್ಲಾ ಅಂತ ಕೊರಗುತ್ತಿದ್ದೆ.”
“ನನ್ನ ತರದ್ದೇ ಸನ್ನಿವೇಶದಲ್ಲಿ ಇರುವ ಸಹೋದರ ಸಹೋದರಿಯರ ಅನುಭವಗಳನ್ನು ಓದಲು ಶುರುಮಾಡಿದೆ. ಆರೋಗ್ಯ ಸಮಸ್ಯೆ ಇದ್ದರೂ ಅವರೆಲ್ಲಾ ಯೆಹೋವನಿಗೋಸ್ಕರ ಏನೇನು ಮಾಡ್ತಿದ್ದಾರೆ ಅಂತ ಓದಿ ತುಂಬ ಆಶ್ಚರ್ಯ ಆಯ್ತು. ನಾನು ಕೂಡ ನನ್ನಿಂದ ಏನು ಆಗಲ್ವೋ ಅದರ ಬಗ್ಗೆನೇ ಯೋಚನೆ ಮಾಡೋದನ್ನ ಬಿಟ್ಟು, ನನ್ನಿಂದ ಏನು ಆಗುತ್ತೋ ಅದನ್ನ ಮಾಡಿದೆ. ಮೊದಲೆಲ್ಲಾ ಪ್ರಾರ್ಥನೆ, ವೈಯಕ್ತಿಕ ಅಧ್ಯಾಯನಕ್ಕೆ ಅಷ್ಟು ಸಮಯ ಸಿಕ್ತಿರಲಿಲ್ಲ ಆದ್ರೆ ಈಗ ಅದನ್ನೆಲ್ಲಾ ಇಡೀ ದಿನ ಮಾಡಬಹುದು. ಹಾಗಾಗಿ ನನಗೆ ಹೀಗೆ ಆಗೋಯಿತಲ್ಲ ಅಂತ ಯೋಚನೆ ಮಾಡುವ ಬದಲು ಯೆಹೋವನ ಸೇವೆಗೆ ಗಮನ ಕೊಟ್ಚೆ.”
“ಕಂಪ್ಯೂಟರ್ನ ಹೇಗೆ ಉಪಯೋಗಿಸೋದು ಅಂತ ಕಲಿತೆ. ಅದರಲ್ಲಿರುವ ಸಾಫ್ಟ್ವೇರ್ ಹೇಗಂದ್ರೆ ಟೈಪ್ ಮಾಡಲು ಕೈ ಉಪಯೋಗಿಸಬೇಕಾಗಿಲ್ಲ, ತಲೆ ಆಡಿಸುತ್ತಿದ್ರೆ ಸಾಕು ಅದೇ ಟೈಪ್ ಆಗಿಬಿಡುತ್ತೆ. ಹೀಗೆ ಮಾಡೋದ್ರಿಂದ ತುಂಬ ಸುಸ್ತಾಗುತ್ತೆ. ಆದ್ರೆ ಬೈಬಲ್ ಓದಲು, ಪತ್ರ ಮತ್ತು ಇ-ಮೇಲ್ ಮೂಲಕ ಬೇರೆಯವರಿಗೆ ಸುವಾರ್ತೆ ಸಾರಲು ಆಗುತ್ತೆ. ಬೇರೆಯವರ ಜೊತೆ ಮಾತಾಡಲು ನನ್ನ ಹತ್ತಿರ ಒಂದು ಐಡಿಯಾ ಇದೆ. ಒಂದು ಬೋರ್ಡ್ ಮೇಲೆ ಎಲ್ಲಾ ಅಕ್ಷರಗಳಿವೆ. ಒಬ್ಬರು ಒಂದೊಂದೇ ಅಕ್ಷರಕ್ಕೆ ಬೆಟ್ಟು ಮಾಡಿ ತೋರಿಸುತ್ತಾರೆ. ಸರಿಯಾದ ಅಕ್ಷರದ ಮೇಲೆ ಬೆರಳು ಇಟ್ಟ ತಕ್ಷಣ ನಾನು ಕಣ್ಣು ಮುಚ್ಚುತ್ತೇನೆ. ತಪ್ಪಾದ ಅಕ್ಷರದ ಮೇಲೆ ಬೆರಳು ಇಟ್ಟ ತಕ್ಷಣ ಕಣ್ಣು ಅಗಲ ಮಾಡಿ ನೋಡುತ್ತೇನೆ. ಹೀಗೆ ಮಾಡ್ತಾ ಪದ, ವಾಕ್ಯ ರಚಿಸಿ ನಾನು ಏನು ಹೇಳಬೇಕೊ ಅದನ್ನ ಅವರಿಗೆ ಹೇಳ್ತೇನೆ. ನನ್ನ ಜೊತೆ ತುಂಬ ಸಮಯ ಕಳೆಯುವ ಕೆಲವು ಸಹೋದರಿಯರು ಈ ಟೆಕ್ನಿಕ್ಕಲ್ಲಿ ಎಷ್ಟು ಎಕ್ಸ್ಪರ್ಟ್ ಆಗಿದ್ದಾರಂದ್ರೆ ನಾನು ಕಣ್ಣು ಮಿಟುಕಿಸುವುದಕ್ಕೆ ಮುಂಚೆನೇ ನಾನು ಏನು ಹೇಳಬೇಕೋ ಅದನ್ನ ಕಂಡುಹಿಡಿದಿರುತ್ತಾರೆ. ಕೆಲವೊಮ್ಮೆ ತಪ್ಪಾದಾಗ ಎಲ್ಲರು ಸೇರಿ ನಗುತ್ತೇವೆ.”
“ಸಭೆಯ ಬೇರೆ ಬೇರೆ ಚಟುವಟಿಕೆಯಲ್ಲಿ ನಾನು ಭಾಗವಹಿಸುತ್ತೀನಿ. ಇದು ನನಗೆ ತುಂಬ ಖುಷಿಕೊಡುತ್ತೆ. ವಿಡಿಯೋ ಮೂಲಕ ತಪ್ಪದೆ ಕೂಟಗಳಿಗೆ ಹಾಜರಾಗುತ್ತೇನೆ. ಪ್ರಶ್ನೆ-ಉತ್ತರ ಭಾಗಗಳಿಗೆ ಉತ್ತರಗಳನ್ನು ಟೈಪ್ ಮಾಡಿ ಕೊಡ್ತೇನೆ, ಯಾರಾದರೂ ಅದನ್ನು ಓದುತ್ತಾರೆ. ವಿಡಿಯೊ ಮೂಲಕ ಬೇರೆ ಸಹೋದರ-ಸಹೋದರಿಯರ ಜೊತೆ ಸೇರಿ ಪ್ರತಿ ತಿಂಗಳು JW ಪ್ರಸಾರ ನೋಡ್ತೇನೆ.” a
“23 ವರ್ಷದಿಂದ ನನಗೆ ಲಾಕ್ಡ್-ಇನ್ ಸಿಂಡ್ರೋಮ್ ಕಾಯಿಲೆ ಇದೆ. ಕೆಲವು ಸಲ ತುಂಬ ಬೇಸರ ಆಗುತ್ತೆ. ಆ ನೋವು ಮರೆಯಲು ಪ್ರಾರ್ಥನೆ ಮಾಡ್ತೇನೆ, ಸಹೋದರರ ಜೊತೆ ಸಮಯ ಕಳೆಯುತ್ತೇನೆ, ಆದಷ್ಟು ಯೆಹೋವನ ಸೇವೆಯಲ್ಲಿ ಬ್ಯೂಸಿಯಾಗಿರುತ್ತೇನೆ. 6ವರ್ಷದಿಂದ ಆಕ್ಸಿಲರಿ ಪಯನೀಯರ್ ಸೇವೆ ಮಾಡಲಿಕ್ಕೂ ಆಗ್ತಿದೆ. ಸಭೆಯಲ್ಲಿ ಇರುವವರು ಇದಕ್ಕೆ ತುಂಬ ಸಹಾಯ ಮಾಡಿದ್ದಾರೆ. ನನ್ನ ಮಗ ಅಲೆಸ್ಸಾಂಡ್ರೋಗೆ ಒಳ್ಳೇ ಮಾದರಿಯಾಗಿ ಇರಬೇಕು ಅನ್ನೋದೇ ನನ್ನಾಸೆ. ಈಗ ಅವನಿಗೆ ಮದುವೆ ಆಗಿ ಹೆಂಡತಿ ಜೊತೆ ಪಯನೀಯರ್ ಸೇವೆ ಮಾಡ್ತಿದ್ದಾನೆ ಮತ್ತು ಸಭೆಯಲ್ಲಿ ಹಿರಿಯನಾಗಿದ್ದಾನೆ.”
“ಪರದೈಸಲ್ಲಿ ನಾನು ಏನೇನೋ ಮಾಡಬೇಕು ಅಂತ ಅಂದುಕೊಂಡಿದ್ದೇನೆ. ಮೊದಲು ನಾನು ಬಾಯಿ ತುಂಬ ಯೆಹೋವನ ಬಗ್ಗೆ ಮಾತಾಡಬೇಕು. ಹರಿಯುವ ನೀರಿನ ಪಕ್ಕದಲ್ಲಿ ನಡೆಯುತ್ತಾ ಪ್ರಕೃತಿ ಸೌಂದರ್ಯವನ್ನು ಸವಿಯಬೇಕು ಅಂತ ತುಂಬ ಇಷ್ಟ. 20ವರ್ಷದಿಂದ ಬರೀ ನೀರು, ಗಂಜಿ, ಜ್ಯೂಸ್ ಕುಡಿತಾ ಜೀವನ ಕಳೆದುಬಿಟ್ಟೆ. ನನ್ನ ಕೈಯಾರೆ ಮರದಿಂದ ಆಪಲ್ ಕಿತ್ತು ತಿನ್ನುವ ದಿನಕ್ಕಾಗಿ ಕಾಯ್ತಾ ಇದ್ದೀನಿ. ನಾನು ಇಟಾಲಿಯನ್ ಅಲ್ವಾ, ಹಾಗಾಗಿ ಇಟಾಲಿಯನ್ ಫುಡ್ ಅಂದ್ರೆ ನನಗೆ ತುಂಬ ಇಷ್ಟ. ಅದ್ರಲ್ಲೂ ಪಿಸ್ಜಾ ಅಂದ್ರೆ ಪ್ರಾಣ! ಅದನ್ನೆಲ್ಲ ನಾನೇ ಮಾಡಿ ತಿನ್ನಬೇಕು ಅಂತ ಆಸೆ.”
“ಪರದೈಸಿನ ಈ ನಿರೀಕ್ಷೆ ಕುಗ್ಗಿ ಹೋಗದೇ ಇರಲಿಕ್ಕೆ ನನಗೆ ಸಹಾಯ ಮಾಡಿದೆ. (1 ಥೆಸಲೊನೀಕ 5:8) ಈಗ ಕಾಯಿಲೆಯಿಂದ ನಾನು ಕಷ್ಟಪಡ್ತಿದ್ದೇನೆ ನಿಜ. ಆದ್ರೆ ಹೊಸ ಲೋಕದಲ್ಲಿ ನನಗೆ ಈ ಕಾಯಿಲೆ ಎಲ್ಲ ಇರಲ್ಲ ಅಂತ ನೆನಸ್ಕೊಂಡಾಗ ತುಂಬ ಖುಷಿಯಾಗುತ್ತೆ. ಯೆಹೋವನು ತನ್ನ ರಾಜ್ಯದ ಮೂಲಕ ಆ ಸಂತೋಷದ ದಿನವನ್ನು ಯಾವಾಗ ತರುತ್ತಾನೋ ಅಂತ ತುಂಬ ಹಂಬಲಿಸ್ತಾ ಇದ್ದೇನೆ.”—1 ತಿಮೊತಿ 6:19; ಮತ್ತಾಯ 6:9, 10.
a JW ಪ್ರಸಾರ ನೋಡಲಿಕ್ಕಾಗಿ jw.org ವೆಬ್ಸೈಟ್ ನೋಡಿ.