ಯುವಜನರ ಪ್ರಶ್ನೆಗಳು
ವಿಡಿಯೋ ಗೇಮ್ಸ್ ಆಡೋದು ತಪ್ಪಾ?
ನಿಮ್ಮ ಉತ್ರ ಏನು?
ವಿಡಿಯೋ ಗೇಮ್ಸ್‌ಗಳನ್ನ ತಯಾರಿಸೋ ಕಂಪನಿಗಳು ಅಮೆರಿಕಾದಲ್ಲಿ ಕೋಟಿ ಕೋಟಿ ದುಡ್ಡು ಸಂಪಾದನೆ ಮಾಡ್ತಿವೆ. ನಿಮಗೆ ಏನನಿಸುತ್ತೆ . . .
ಅಲ್ಲಿ ಯಾವ ವಯಸ್ಸಿನವರು ವಿಡಿಯೋ ಗೇಮ್‌ನ ಜಾಸ್ತಿ ಆಡ್ತಾರೆ?
ಎ. 18
ಬಿ. 30
ಅವ್ರಲ್ಲಿ ಎಷ್ಟು ಪ್ರತಿಶತ (%) ಗಂಡಸ್ರು ಮತ್ತು ಹೆಂಗಸ್ರು ಇದ್ದಾರೆ?
ಎ. 55% ಗಂಡಸ್ರು; 45% ಹೆಂಗಸ್ರು
ಬಿ. 15% ಗಂಡಸ್ರು; 85% ಹೆಂಗಸ್ರು
ಈ ಎರಡೂ ಗುಂಪುಗಳಲ್ಲಿ ಯಾರು ಜಾಸ್ತಿ ವಿಡಿಯೋ ಗೇಮ್‌ಗಳನ್ನ ಆಡ್ತಾರೆ?
ಎ. 18 ಮತ್ತು ಅದಕ್ಕಿಂತ ಜಾಸ್ತಿ ವಯಸ್ಸಿನ ಹೆಂಗಸ್ರು
ಬಿ. 17 ಮತ್ತು ಅದಕ್ಕಿಂತ ಕಮ್ಮಿ ವಯಸ್ಸಿನ ಗಂಡಸ್ರು
ಉತ್ರಗಳು (2013ರ ಸರ್ವೇ ಪ್ರಕಾರ):
ಬಿ. 30.
ಎ. 45% ಹೆಂಗಸ್ರು. ಅಂದ್ರೆ ವಿಡಿಯೋ ಗೇಮ್ಸ್ ಆಡೋರಲ್ಲಿ ಅರ್ಧಕ್ಕರ್ಧ ಹೆಂಗಸ್ರೇ ಇದ್ದಾರೆ.
ಎ. ಗೇಮ್ಸ್ ಆಡೋರಲ್ಲಿ 31% 18 ಮತ್ತು ಅದಕ್ಕಿಂತ ಜಾಸ್ತಿ ವಯಸ್ಸಿನ ಹೆಂಗಸ್ರು ಇದ್ದಾರೆ. 19% 17 ಮತ್ತು ಅದಕ್ಕಿಂತ ಕಮ್ಮಿ ವಯಸ್ಸಿನ ಗಂಡಸ್ರು ಇದ್ದಾರೆ.
ಈ ಲೆಕ್ಕಗಳನ್ನ ನೋಡ್ತಿದ್ರೆ ವಿಡಿಯೋ ಗೇಮ್‌ಗಳನ್ನ ಯಾರು ಆಡ್ತಿದ್ದಾರೆ ಅಂತ ನಮಗೊಂದು ಐಡಿಯಾ ಸಿಗುತ್ತೆ. ಆದ್ರೆ ಆ ಗೇಮ್ಸ್‌ಗಳಿಂದ ಏನ್ ಒಳ್ಳೇದಾಗುತ್ತೆ, ಏನು ಕೆಟ್ಟದಾಗುತ್ತೆ ಅಂತ ಅದ್ರಿಂದ ಗೊತ್ತಾಗಲ್ಲ.
ಏನ್ ಒಳ್ಳೇದಿದೆ?
ವಿಡಿಯೋ ಗೇಮ್ಸ್‌ಗಳ ಬಗ್ಗೆ ಕೆಲವರು ಏನು ಹೇಳಿದ್ದಾರೆ ಅಂತ ಇಲ್ಲಿದೆ. ಇದ್ರಲ್ಲಿ ಯಾವುದನ್ನ ನೀವು ಒಪ್ಕೊಳ್ತೀರಾ?
“ವಿಡಿಯೋ ಗೇಮ್ಸ್ ಇಂದ ಕುಟುಂಬದವರು, ಫ್ರೆಂಡ್ಸು ಹತ್ರ ಆಗೋಕೆ, ಖುಷಿಯಾಗಿರೋಕೆ ಆಗುತ್ತೆ.”—ಐರೀನ್.
“ಈ ಜಗತ್ತಿಂದ ದೂರ ಒಂದು ಕಾಲ್ಪನಿಕ ಲೋಕದಲ್ಲಿ ಇದ್ದ ಹಾಗೆ ಅನಿಸುತ್ತೆ.”—ಆ್ಯನೆಟ್.
“ಚುರುಕಾಗಿ ಇರೋದು ಹೇಗೆ ಅಂತ ಕಲಿತೀವಿ.”—ಕ್ರಿಸ್ಟೋಫರ್.
“ಸಮಸ್ಯೆಗಳನ್ನ ಬಗೆಹರಿಸೋ ಕೌಶಲನ ಬೆಳೆಸ್ಕೊತೀವಿ.”—ಏಮಿ.
“ತಲೆಗೆ ಚೆನ್ನಾಗಿ ಕೆಲಸ ಕೊಡೋಕಾಗುತ್ತೆ. ಚೆನ್ನಾಗಿ ಯೋಚಿಸೋದನ್ನ, ಪ್ಲ್ಯಾನ್ ಮಾಡೋದನ್ನ ಕಲಿತೀವಿ.”—ಆ್ಯಂಥನಿ.
“ಕೆಲವು ಗೇಮ್‌ಗಳನ್ನ ಆಡೋದ್ರಿಂದ ಒಗ್ಗಟ್ಟಾಗಿರೋಕೆ, ಟೀಮ್ ಆಗಿ ಇರೋಕೆ ಕಲಿತೀವಿ.”—ಥಾಮಸ್.
“ಕೆಲವು ಗೇಮ್‌ಗಳು ವ್ಯಾಯಾಮ ಮಾಡೋಕೆ ಸಹಾಯ ಮಾಡುತ್ತೆ. ಹೀಗೆ ನಾವು ಫಿಟ್ ಆಗಿ ಇರ್ತೀವಿ.”—ಜಾಯೇಲ್.
ಇವ್ರಲ್ಲಿ ಕೆಲವರು ಹೇಳಿದ್ದು ಸರಿ ಅಂತ ನಿಮಗೆ ಅನಿಸುತ್ತಾ? ಅಥವಾ ಎಲ್ರೂ ಹೇಳಿದ್ದು ಸರಿ ಅನಿಸುತ್ತಾ? ನಿಜ, ವಿಡಿಯೋ ಗೇಮ್ಸ್ ಆಡೋದ್ರಿಂದ ನಮ್ಮ ಬುದ್ಧಿಶಕ್ತಿ ಮತ್ತು ದೇಹಕ್ಕೆ ಸ್ವಲ್ಪಮಟ್ಟಿಗೆ ಪ್ರಯೋಜನ ಇದೆ. ಕೆಲವು ಗೇಮ್ಸ್‌ಗಳು ಟೈಮ್ ಪಾಸ್ ಮಾಡೋಕೆ ಚೆನ್ನಾಗಿರುತ್ತೆ ಮತ್ತು ಆ್ಯನೆಟ್ ಹೇಳಿದ ಹಾಗೆ “ಕಾಲ್ಪನಿಕ ಲೋಕದಲ್ಲಿ ಇದ್ದ ಹಾಗೆ ಅನಿಸುತ್ತೆ.” ಅದನ್ನ ಯಾವಾಗ್ಲೂ ತಪ್ಪು ಅಂತ ಹೇಳಕ್ಕಾಗಲ್ಲ.
● “ಆಕಾಶದ ಕೆಳಗೆ ನಡಿಯೋ ಒಂದೊಂದು ಕೆಲಸಕ್ಕೂ ಒಂದೊಂದು ಸಮಯ ಇದೆ” ಅಂತ ಬೈಬಲ್ ಹೇಳುತ್ತೆ. ಹಾಗೇ ಆಟ ಆಡೋಕೂ ಒಂದು ಸಮಯ ಇದೆ.—ಪ್ರಸಂಗಿ 3:1-4.
ಏನ್ ಕೆಟ್ಟದಿದೆ?
ಈ ವಿಡಿಯೋ ಗೇಮ್ಸ್‌ಗಳನ್ನ ಆಡ್ತಾ ಆಡ್ತಾ ಟೈಮ್ ಹೋಗೋದೇ ನಿಮಗೆ ಗೊತ್ತಾಗಲ್ವಾ?
“ಆಡೋಕೆ ಶುರುಮಾಡಿದ್ರೆ ಅದನ್ನ ನಿಲ್ಲಿಸೋಕೆ ನಂಗೆ ಕಷ್ಟ ಆಗುತ್ತೆ. ಇನ್ನೊಂದು ಲೆವೆಲ್, ಇನ್ನೊಂದ್ ಲೆವೆಲ್ ಅಂತ ಆಡ್ತಾನೇ ಇರ್ತೀನಿ. ಹೀಗೆ ಎಷ್ಟೋ ಗಂಟೆಗಳು ನನಗೇ ಗೊತ್ತಿಲ್ದೆ ಕಳೆದುಹೋಗಿರುತ್ತೆ!”—ಆ್ಯನೆಟ್.
“ವಿಡಿಯೋ ಗೇಮ್ಸ್ ಆಡ್ತಾ ಕೂತ್ರೆ ಬೆಳಗಾಗೋದೂ ಗೊತ್ತಾಗಲ್ಲ, ರಾತ್ರಿ ಆಗೋದೂ ಗೊತ್ತಾಗಲ್ಲ. ನಾವೊಂದು 5 ಆಟ ಗೆದ್ರೆ ಏನೋ ದೊಡ್ಡ ಸಾಧನೆ ಮಾಡಿದಂಗೆ ಅನಿಸುತ್ತೆ. ಆದ್ರೆ ಆ ಸಾಧನೆ ಯಾವ ಲೆಕ್ಕಕ್ಕೂ ಬರಲ್ಲ.”—ಸೆರೀನಾ.
ನೆನಪಿಡಿ: ದುಡ್ಡು ಹೋದ್ರೆ ಮತ್ತೆ ಸಂಪಾದನೆ ಮಾಡಬಹುದು. ಆದ್ರೆ ಟೈಮ್ ಹೋದ್ರೆ ಮತ್ತೆ ಸಿಗಲ್ಲ. ದುಡ್ಡಿಗಿಂತ ಟೈಮ್‌ಗೆ ತುಂಬ ಬೆಲೆ ಇದೆ. ಅದಕ್ಕೇ ಅದನ್ನ ಕಳ್ಕೊಳ್ಳಬೇಡಿ!
● “ವಿವೇಕದಿಂದ ನಡ್ಕೊಳ್ಳಿ. ನಿಮಗಿರೋ ಸಮಯವನ್ನ ಮುಖ್ಯ ವಿಷ್ಯಗಳಿಗೆ ಬಳಸಿ” ಅಂತ ಬೈಬಲ್ ಹೇಳುತ್ತೆ.—ಕೊಲೊಸ್ಸೆ 4:5.
ನೀವು ಆಡ್ತಿರೋ ಗೇಮ್ಸ್‌ಗಳು ನಿಮ್ಮ ಯೋಚ್ನೆನ ಬದಲಾಯಿಸ್ತಾ ಇದ್ಯಾ?
“ಯಾವ ಅಪರಾಧಗಳನ್ನ ಮಾಡಿದ್ರೆ ಜೈಲುಶಿಕ್ಷೆ ಆಗುತ್ತೋ, ಮರಣ ಶಿಕ್ಷೆ ಆಗುತ್ತೋ ಅಂಥ ಅಪರಾಧಗಳನ್ನ ವಿಡಿಯೋ ಗೇಮ್‌ಗಳಲ್ಲಿ ನಾವು ಹಿಂದೆಮುಂದೆ ಯೋಚ್ನೆ ಮಾಡದೇ ಮಾಡಿಬಿಡ್ತೀವಿ.”—ಸೆತ್.
“ತುಂಬ ಗೇಮ್ಸ್‌ಗಳಲ್ಲಿ ಶತ್ರುಗಳನ್ನ ಸೋಲಿಸಿ ನಮ್ಮ ಗುರಿನ ಮುಟ್ಟಬೇಕಾಗಿರುತ್ತೆ. ಅದನ್ನ ಮಾಡೋಕೆ ಅವ್ರನ್ನ ಕ್ರೂರವಾಗಿ ಸಾಯಿಸಬೇಕಾಗುತ್ತೆ.”—ಆ್ಯನೆಟ್.
“ಆಡುವಾಗ ನೀವು ನಿಮ್ಮ ಫ್ರೆಂಡ್ಸ್‌ಗೆ ಹೇಳಬಾರದ್ದನ್ನೆಲ್ಲಾ ಅಂದ್ರೆ ‘ಸಾಯಿ’ ಅಂತನೋ, ‘ನಾನು ನಿನ್ನನ್ನ ಸಾಯಿಸಿಬಿಡ್ತೀನಿ’ ಅಂತನೋ ಹೇಳ್ತಾ ಇರ್ತೀರ. ಆಮೇಲೆ ಯೋಚ್ನೆ ಮಾಡಿದ್ರೆ ನಾನು ಹಿಂಗೆಲ್ಲ ಹೇಳಿದ್ನಾ ಅಂತ ನಿಮಗೇ ಅನಿಸುತ್ತೆ.”—ನೇತನ್.
ನೆನಪಿಡಿ: ದೇವರು ದ್ವೇಷಿಸೋ ವಿಷ್ಯಗಳು ಅಂದ್ರೆ ಹಿಂಸೆ, ಲೈಂಗಿಕ ಅನೈತಿಕತೆ ಮತ್ತು ಮಾಟಮಂತ್ರ ಇರೋ ವಿಡಿಯೋ ಗೇಮ್ಸ್‌ಗಳನ್ನ ಆಡಬೇಡಿ.—ಗಲಾತ್ಯ 5:19-21; ಎಫೆಸ 5:10; 1 ಯೋಹಾನ 2:15, 16.
● ಬೈಬಲಲ್ಲಿ, ಯೆಹೋವ ದೇವರು ಹಿಂಸೆ ಮಾಡೋರನ್ನ ದ್ವೇಷಿಸ್ತಾನೆ ಅಂತ ಹೇಳಿಲ್ಲ, ಬದಲಿಗೆ “ಹಿಂಸೆಯನ್ನ ಪ್ರೀತಿಸೋ” ಜನ್ರನ್ನ ದ್ವೇಷಿಸ್ತಾನೆ ಅಂತ ಹೇಳಿದೆ. (ಕೀರ್ತನೆ 11:5) ನೀವು ಆಡೋ ವಿಡಿಯೋ ಗೇಮ್‌ಗಳು ಮುಂದೆ ನೀವು ಎಂಥ ವ್ಯಕ್ತಿಗಳಾಗ್ತೀರ ಅನ್ನೋದನ್ನ ತೋರಿಸದೇ ಇದ್ರೂ ನೀವು ಈಗ ಎಂಥ ವ್ಯಕ್ತಿ ಆಗಿದ್ದೀರ ಅನ್ನೋದನ್ನ ತೋರಿಸಬಹುದು.
ಯೋಚ್ನೆ ಮಾಡಿ: ಗೆಟ್ಟಿಂಗ್ ಟು ಕಾಮ್ ಅನ್ನೋ ಪುಸ್ತಕ ಏನ್ ಹೇಳುತ್ತೆ ನೋಡಿ: “ಟಿವಿನ ನೋಡೋ ಮಕ್ಕಳಿಗಿಂತ ವಿಡಿಯೋ ಗೇಮ್ಸ್ ಆಡೋ ಮಕ್ಕಳ ವರ್ತನೆಯಲ್ಲಿ ಬೇಗ ಬದಲಾವಣೆ ಆಗುತ್ತೆ. ಯಾಕಂದ್ರೆ ಟಿವಿಯಲ್ಲಿ ಒಬ್ಬ ಹೀರೋ ಹೊಡಿತಾನೆ ಅಥವಾ ಸಾಯಿಸ್ತಾನೆ. ಆದ್ರೆ ವಿಡಿಯೋ ಗೇಮ್ಸ್‌ಗಳಲ್ಲಿ ಮಕ್ಕಳೇ ಹೀರೋಗಳಾಗಿ ಹೊಡಿಬೇಕಾಗುತ್ತೆ, ಸಾಯಿಸಬೇಕಾಗುತ್ತೆ. ಅಷ್ಟೇ ಅಲ್ಲ, ಇಂಥ ಗೇಮ್ಸ್‌ಗಳು ಒಬ್ಬ ಟೀಚರ್ ತರ ಮಕ್ಕಳಿಗೆ ಕಲಿಸುತ್ತೆ. ಆದ್ರೆ ಒಳ್ಳೇ ವಿಷ್ಯಗಳನ್ನಲ್ಲ, ಹಿಂಸೆ ಮಾಡೋದನ್ನ ಕಲಿಸುತ್ತೆ.”—ಯೆಶಾಯ 2:4 ಹೋಲಿಸಿ.
ಕಲ್ಪನೆಯ ಜಗತ್ತಿಂದ ಆಚೆ ಬನ್ನಿ!
ಎಷ್ಟೋ ಯುವಜನರು ವಿಡಿಯೋ ಗೇಮ್ಸ್‌ಗಳನ್ನ ಅದ್ರ ಜಾಗದಲ್ಲಿ ಇಡೋಕೆ ಕಲ್ತಿದ್ದಾರೆ. ಅವ್ರಲ್ಲಿ ಇಬ್ರ ಉದಾಹರಣೆ ನೋಡಿ:
“ನನಗೆ 5 ಗಂಟೆ ನಿದ್ದೆ ಸಿಕ್ಕಿದ್ರೆ ಸಾಕು ಅಂದ್ಕೊಂಡು ಇನ್ನೊಂದು ಲೆವೆಲ್ ಇನ್ನೊಂದು ಲೆವೆಲ್ ಅಂತ ಕೊನೇ ತನಕ ಆಡ್ತಾನೇ ಇರ್ತಿದ್ದೆ. ಆದ್ರೆ ಈಗ ವಿಡಿಯೋ ಗೇಮ್‌ಗಳನ್ನ ಎಷ್ಟು ಆಡಬೇಕೋ ಅಷ್ಟೇ ಆಡಬೇಕು ಅಂತ ಕಲ್ತಿದ್ದೀನಿ. ಬೇರೆ ಹವ್ಯಾಸಗಳ ತರಾನೇ ಇದನ್ನೂ ಒಂದು ಒಳ್ಳೇ ಹವ್ಯಾಸದ ತರ ನೋಡ್ತಾ ಆಗಾಗ ಆಡ್ತೀನಿ. ಆದ್ರೆ ಎಲ್ಲದಕ್ಕೂ ಒಂದು ಲಿಮಿಟ್ ಇರ್ಬೇಕು.”—ಜೋಸೆಫ್.
“ಗೇಮ್ಸ್ ಆಡೋದನ್ನ ನಿಲ್ಸಿದ್ರಿಂದ ನನಗೀಗ ಬೇರೆ ಕೆಲಸಗಳನ್ನ ಮಾಡೋಕೆ ತುಂಬ ಟೈಮ್ ಸಿಕ್ತಿದೆ. ಈಗ ನಾನು ಚೆನ್ನಾಗಿ ಸಿಹಿಸುದ್ದಿ ಸಾರ್ತಿದ್ದೀನಿ, ಸಭೆಲಿರೋರಿಗೆ ಸಹಾಯ ಮಾಡ್ತಿದ್ದೀನಿ, ಪಿಯಾನೋ ಕಲೀತಿದ್ದೀನಿ. ವಿಡಿಯೋ ಗೇಮ್ಸ್‌ನ ಬಿಟ್ಟು ಹೊರಗೆ ಬಂದ್ರೆ ಸುಂದರವಾಗಿರೋ ದೊಡ್ಡ ಪ್ರಪಂಚ ಕಾಣಿಸುತ್ತೆ!”—ಡೇವಿಡ್.
● ಬುದ್ಧಿ ಇರೋರು ‘ಎಲ್ಲ ವಿಷ್ಯಗಳಲ್ಲೂ ಇತಿಮಿತಿಯಿಂದ’ ಇರ್ತಾರೆ ಅಂತ ಬೈಬಲ್ ಹೇಳುತ್ತೆ. (1 ತಿಮೊತಿ 3:2, 11) ಅವರೂ ಆಟ ಆಡ್ತಾರೆ. ಆದ್ರೆ ಅದ್ರಲ್ಲೇ ಮುಳುಗಿರಲ್ಲ, ಅದನ್ನ ಯಾವಾಗ ನಿಲ್ಲಿಸಬೇಕು ಅಂತ ಅವ್ರಿಗೆ ಚೆನ್ನಾಗಿ ಗೊತ್ತಿರುತ್ತೆ.—ಎಫೆಸ 5:10.
ನೆನಪಿಡಿ: ವಿಡಿಯೋ ಗೇಮ್‌ನ ಎಷ್ಟು ಆಡಬೇಕೋ ಅಷ್ಟೇ ಆಡಿದ್ರೆ ಚೆನ್ನಾಗಿರುತ್ತೆ. ನಿಮ್ಮ ಟೈಮೆಲ್ಲ ಹಾಳುಮಾಡ್ಕೊಬೇಡಿ. ಜೀವನದಲ್ಲಿ ಮಾಡಬೇಕಾಗಿರೋ ವಿಷ್ಯಗಳು ತುಂಬ ಇದೆ, ಅದ್ರ ಕಡೆ ಗಮನಕೊಡಿ. ಗೇಮಲ್ಲಿ ಗೆದ್ರೆ ನೀವು ನಿಜವಾದ ಹೀರೋ ಆಗಲ್ಲ, ಜೀವನದಲ್ಲಿ ಗೆದ್ರೆ ನಿಜವಾದ ಹೀರೋಗಳಾಗ್ತೀರ. ಹಾಗಾಗಿ ಅಲ್ಲಿ ಹಾಕೋ ಪ್ರಯತ್ನನ ಇಲ್ಲಿ ಹಾಕಿ. ಆಗ ಜೀವನದಲ್ಲಿ ನೀವು ನಿಜವಾಗ್ಲೂ ಗುರಿ ಮುಟ್ತೀರ.