ಯುವಜನರ ಪ್ರಶ್ನೆಗಳು

ನಾನು ಯಾಕೆ ಆಗಾಗ ಡಲ್‌ ಆಗ್ತೀನಿ?

ನಾನು ಯಾಕೆ ಆಗಾಗ ಡಲ್‌ ಆಗ್ತೀನಿ?

“ನಾನು ಒಂದೊಂದು ದಿನ ಒಂದೊಂದು ತರ ಇರ್ತೀನಿ. ಒಂದಿನ ಖುಷಿಯಾಗಿದ್ರೆ, ಇನ್ನೊಂದು ದಿನ ಡಲ್‌ ಆಗಿರ್ತೀನಿ. ನಿನ್ನೆ ಈಜ಼ಿ ಅನಿಸಿದ ವಿಷ್ಯ, ಇವತ್ತು ಮಾಡೋಕೆ ನಂಗೆ ತುಂಬ ಕಷ್ಟ ಅನ್ಸುತ್ತೆ.”—ಕೆರೀಸ್ಸಾ.

ನಿಮ್ಮ ಭಾವನೆಗಳು ಹಳ್ಳ-ದಿನ್ನೆ ಇರೋ ರೋಡಲ್ಲಿ ಗಾಡಿ ಓಡಿಸಿದಂತೆ, ಏರುಪೇರು ಆಗ್ತಾ ಇದ್ಯಾ? a ಹಾಗಾದ್ರೆ ಈ ಆರ್ಟಿಕಲ್‌ ಅಲ್ಲಿರೋ ಸಲಹೆ ನಿಮಗೆ ಸಹಾಯ ಮಾಡುತ್ತೆ.

 ಯಾಕೆ ಈ ತರ ಆಗುತ್ತೆ?

 ನೀವು ಪ್ರೌಢಾವಸ್ಥೆಗೆ ಬಂದಾಗ ಈ ತರ ನಿಮ್ಮ ಭಾವನೆಗಳು ಏರುಪೇರಾಗುತ್ತೆ, ಇದು ಮಾಮೂಲಿನೇ! ನೀವು ಹದಿವಯಸ್ಸಿಗೆ ಬಂದು ಸುಮಾರು ವರ್ಷ ಆದ್ಮೇಲೆ ಕೂಡ ಕೆಲವೊಮ್ಮೆ ನಿಮ್ಮ ಭಾವನೆಗಳು ಇದ್ದಕ್ಕಿದ್ದಂತೆ ಬದಲಾಗುತ್ತೆ. ಆಗ ನಿಮಗೆ ತುಂಬ ಆಶ್ಚರ್ಯ ಆಗುತ್ತೆ.

 ಆಗ ನಿಮಗೆ ಬೇಜಾರಾಗಬಹುದು. ಆದ್ರೆ ಇದೆಲ್ಲ ಯಾಕೆ ಈ ತರ ಆಗ್ತಿದೆ ಅಂತ ಅರ್ಥ ಮಾಡ್ಕೊಳ್ಳಿ. ನಿಮ್ಮ ಹಾರ್ಮೋನ್‌ನಲ್ಲಿ ಬದಲಾವಣೆ ಆಗೋದ್ರಿಂದ ಅಥವಾ ನಿಮ್ಮ ಪರಿಸ್ಥಿತಿಲಿ ಬದಲಾದಾಗ ಆಗೋ ಚಿಂತೆಯಿಂದಾನೂ ಹೀಗೆ ಆಗುತ್ತೆ. ಆದ್ರೆ ಇದನ್ನೆಲ್ಲ ನೀವು ಚೆನ್ನಾಗಿ ಅರ್ಥ ಮಾಡ್ಕೊಬಹುದು. ಇದನ್ನೆಲ್ಲ ಹೇಗೆ ಕಂಟ್ರೋಲ್‌ ಮಾಡೋದು ಅಂತಾನೂ ಕಲಿಬಹುದು.

 ಜೀವನ ಸತ್ಯ: ನೀವು ಯುವಕರಾಗಿರುವಾಗ್ಲೇ ನಿಮ್ಮ ಭಾವನೆಗಳನ್ನ ಹೇಗೆ ಕಂಟ್ರೋಲ್‌ ಮಾಡೋದು ಅನ್ನೋದನ್ನ ಕಲಿತು ಬಿಡಿ. ಯಾಕಂದ್ರೆ ದೊಡ್ಡವರು ಆದ್ಮೇಲೆ ನಿಮಗೆ ಬರೋ ಬೇರೆಬೇರೆ ಪರಿಸ್ಥಿತಿಗಳನ್ನ ನಿಭಾಯಿಸೋಕೆ ಈ ಕೌಶಲ್ಯ ತುಂಬ ಬೇಕಾಗುತ್ತೆ!

ತಪ್ಪಾಗಿರೋ ಯೋಚನೆಗಳು, ಭಾವನೆಗಳು ರೋಡಲ್ಲಿ ಬರೋ ಹಳ್ಳಗಳ ತರ. ನೀವು ಸರಿಯಾಗಿರೋ ಕೌಶಲ್ಯನ ಬೆಳೆಸ್ಕೊಂಡ್ರೆ ಅವನ್ನೆಲ್ಲ ತಪ್ಪಿಸ್ಕೊಂಡು ನಿಮ್ಮ ಪ್ರಯಾಣ ಆನಂದಿಸಬಹುದು.

 ಮಾಡಬೇಕಾದ ಮೂರು ವಿಷ್ಯಗಳು

 ಮಾತಾಡಿ. “ನಿಜವಾದ ಸ್ನೇಹಿತ ಎಲ್ಲ ಸಮಯದಲ್ಲೂ ಪ್ರೀತಿಸ್ತಾನೆ. ಕಷ್ಟಕಾಲದಲ್ಲಿ ಅವನು ನಿಮ್ಮ ಸಹೋದರನಾಗ್ತಾನೆ” ಅಂತ ಬೈಬಲ್‌ ಹೇಳುತ್ತೆ.—ಜ್ಞಾನೋಕ್ತಿ 17:17.

 “ನಮ್ಮ ಫ್ಯಾಮಿಲಿಗೆ ತುಂಬಾ ಕ್ಲೋಸ್‌ ಆಗಿರೋ ಒಂದು ಆಂಟಿ ಇದ್ದಾರೆ. ಅವರು ನಾನು ಹೇಳೋದನ್ನ ಚೆನ್ನಾಗಿ ಕೇಳಿಸ್ಕೊಳ್ತಾರೆ. ಅದಕ್ಕೇ ನನಗೆ ಅವ್ರ ಹತ್ರ ಮಾತಾಡ್ಬೇಕು ಅಂತ ಅನ್ಸುತ್ತೆ. ನಾನು ಸರಿಯಾಗಿ ಮಾತಾಡಿದ್ರೆ ಅವರು ಅದನ್ನ ಕೇಳಿ ಖುಷಿ ಪಡ್ತಾರೆ. ನಾನೇನಾದ್ರೂ ನೆಗಟಿವಾಗಿ ಮಾತಾಡಿದ್ರೆ ಅವರು ನನ್ನನ್ನ ಪ್ರೀತಿಯಿಂದ ತಿದ್ದುತ್ತಾರೆ.”—ಯೋಲಂಡ.

 ಸಲಹೆ: ನಿಮ್ಮ ವಯಸ್ಸಿನ ಫ್ರೆಂಡ್ಸ್‌ಗೂ ಇದೇ ತರ ಪ್ರಾಬ್ಲಮ್‌ ಇರಬಹುದು. ಅದಕ್ಕೇ ಅವರ ಹತ್ರ ಇದ್ರ ಬಗ್ಗೆ ಮಾತಾಡೋ ಬದಲು, ನಿಮ್ಮ ಅಪ್ಪಅಮ್ಮ ಹತ್ರನೋ ಅಥವಾ ನೀವು ನಂಬುವ ಯಾರಾದ್ರೂ ದೊಡ್ಡವರ ಹತ್ರ ಮಾತಾಡಿ.

 ಬರೆಯಿರಿ. ಬೈಬಲಲ್ಲಿರೋ ಯೋಬ ಅನ್ನೋ ವ್ಯಕ್ತಿ ತನ್ನ ಭಾವನೆಗಳ ಬಗ್ಗೆ ಹೀಗೆ ಹೇಳ್ತಾನೆ, “ನನ್ನ ದುಃಖವನ್ನೆಲ್ಲ ಹೊರಗೆ ಹಾಕ್ತೀನಿ. ನೋವನ್ನೆಲ್ಲ ಮನಸ್ಸುಬಿಚ್ಚಿ ಹೇಳ್ಕೊಳ್ತೀನಿ.” (ಯೋಬ 10:1) ನೀವು ಕೂಡ ನಿಮ್ಮ ದುಃಖನ ಹೊರಗೆ ಹಾಕಬಹುದು. ಇದನ್ನ ಮಾಡೋ ಇನ್ನೊಂದು ವಿಧಾನ ಇದೆ. ನಿಮಗೆ ಹೇಗೆ ಅನಿಸ್ತಿದೆ ಅಂತೆ ನಿಮ್ಮ ಭಾವನೆಗಳನ್ನ ಬರೆದಿಡಿ.

  “ನಾನು ಎಲ್ಲೇ ಹೋದ್ರೂ ಒಂದು ಚಿಕ್ಕ ಬುಕ್‌ ತಗೊಂಡು ಹೋಗ್ತೀನಿ. ನನಗೇನಾದ್ರೂ ಬೇಜಾರಾಗೋ ವಿಷ್ಯ ಆದ್ರೆ ಅದ್ರ ಬಗ್ಗೆ ತಕ್ಷಣ ನಾನು ಬರೆದಿಡ್ತೀನಿ. ಈ ರೀತಿ ಬರೆದಿಡೋದು ಕೂಡ ಒಂದು ರೀತಿ ಔಷಧಿನೇ. ಇದ್ರಿಂದ ನನಗೆ ಸಹಾಯ ಆಗ್ತಿದೆ.”—ಇಲಿಯಾನ.

 ಸಲಹೆ: ನಿಮಗೆ ಹೇಗೆ ಅನಿಸುತ್ತೆ ಅಂತ ನಿಮ್ಮ ಭಾವನೆಗಳನ್ನ ಬರೆದಿಡೋಕೆ ಒಂದು ಬುಕ್‌ನ ನಿಮ್ಮ ಹತ್ರ ಯಾವಾಗ್ಲೂ ಇಟ್ಕೊಳ್ಳಿ. ನಿಮ್ಗೆ ಯಾಕೆ ಬೇಜಾರಾಯ್ತು? ಆ ಪರಿಸ್ಥಿತಿನ ನೀವು ಹೇಗೆ ಕಂಟ್ರೋಲ್‌ ಮಾಡಬಹುದು? ಅಂತ ಅದ್ರಲ್ಲಿ ಬರೆದಿಡಿ. ಈ ಆರ್ಟಿಕಲ್‌ ಜೊತೆ ಇರೋ ವರ್ಕ್‌ಶೀಟ್‌ (ಇಂಗ್ಲಿಷ್‌) ಇದನ್ನ ಮಾಡೋಕೆ ನಿಮಗೆ ಸಹಾಯ ಮಾಡುತ್ತೆ.

 ಪ್ರಾರ್ಥನೆ ಮಾಡಿ. “ನಿನಗಿರೋ ಭಾರನೆಲ್ಲ ಯೆಹೋವನ ಮೇಲೆ ಹಾಕು, ಆತನೇ ನಿನಗೆ ಆಧಾರವಾಗಿ ಇರ್ತಾನೆ. ನೀತಿವಂತ ಬಿದ್ದುಹೋಗೋಕೆ ಆತನು ಯಾವತ್ತೂ ಬಿಡಲ್ಲ” ಅಂತ ಬೈಬಲ್‌ ಹೇಳುತ್ತೆ.—ಕೀರ್ತನೆ 55:22.

 “ನನಗೆ ಬೇಜಾರಾದಾಗೆಲ್ಲ ನಾನು ಯೆಹೋವ ದೇವ್ರಿಗೆ ಪ್ರಾರ್ಥನೆ ಮಾಡ್ತೀನಿ. ನನಗೆ ಹೇಗೆ ಅನಿಸುತ್ತೆ ಅಂತ ನನ್ನ ಮನಸ್ಸಲ್ಲಿ ಇರೋದನ್ನೆಲ್ಲಾ ಆತನಿಗೆ ಹೇಳ್ತೀನಿ. ಆಮೇಲೆ ನನಗೆ ತುಂಬ ನೆಮ್ಮದಿ ಅನಿಸುತ್ತೆ.”—ಜಾಸ್ಮಿನ್‌.

 ಸಲಹೆ: ನಿಮಗೆ ಬೇಜಾರಾಗುತ್ತೆ ನಿಜ. ಆದ್ರೂ ನೀವು ಥ್ಯಾಂಕ್ಸ್‌ ಹೇಳೋಕೆ ಇಷ್ಟ ಪಡೋ ಮೂರು ವಿಷ್ಯಗಳ ಬಗ್ಗೆ ಯೋಚನೆ ಮಾಡಿ. ನೀವು ಯೆಹೋವ ದೇವ್ರಿಗೆ ಪ್ರಾರ್ಥನೆ ಮಾಡಿದಾಗ ನಿಮಗೆ ಬೇಕಿರೋ ಸಹಾಯ ಕೇಳಿ, ಆದ್ರೆ ಥ್ಯಾಂಕ್ಸ್‌ ಹೇಳೋಕೆ ಮರೀಬೇಡಿ.

a ತುಂಬ ಯುವ ಜನ್ರಿಗೆ ಅವ್ರ ಭಾವನೆಗಳು ಏರುಪೇರು ಆಗ್ತಾ ಇರುತ್ತೆ. ಅದ್ರ ಬಗ್ಗೆನೇ ಈ ಆರ್ಟಿಕಲ್‌ನಲ್ಲಿ ಚರ್ಚಿಸಲಾಗಿದೆ. ಒಂದುವೇಳೆ ನಿಮಗೆ ಬೈಪೋಲರ್‌ ಕಾಯಿಲೆ ಇರೋದಾದ್ರೆ ಅಥವಾ ಯಾವುದೇ ರೀತಿ ಡಿಪ್ರೆಷನ್‌ ಇರೋದಾದ್ರೆ ಹೌ ಕ್ಯಾನ್‌ ಐ ಡೀಲ್‌ ವಿತ್‌ ಡಿಪ್ರೆಷನ್‌? ಅನ್ನೋ ಆರ್ಟಿಕಲ್‌ ನೋಡಿ.