ಯುವಜನರ ಪ್ರಶ್ನೆಗಳು

ಜನ ನನ್‌ ಬಗ್ಗೆ ಗಾಳಿಸುದ್ದಿ ಹಬ್ಬಿಸಿದ್ರೆ ಏನ್‌ ಮಾಡ್ಲಿ?

ಜನ ನನ್‌ ಬಗ್ಗೆ ಗಾಳಿಸುದ್ದಿ ಹಬ್ಬಿಸಿದ್ರೆ ಏನ್‌ ಮಾಡ್ಲಿ?

 ನಿಮಗೆ ಯಾಕೆ ನೋವಾಗುತ್ತೆ?

 ಕೆಲವು ಗಾಳಿಸುದ್ದಿಗಳು ತುಂಬ ಕೆಟ್ಟದ್ದಾಗಿರುತ್ತೆ. ಅದು ನಿಮ್ಮ ಹೆಸ್ರನ್ನೇ ಹಾಳುಮಾಡಿಬಿಡುತ್ತೆ. ಇನ್ನೂ ಕೆಲವು ಗಾಳಿಸುದ್ದಿಗಳಿಂದ ನಿಮ್ಮ ಹೆಸ್ರು ಹಾಳಾಗದೇ ಇದ್ರೂ ಅದ್ರಿಂದ ನೋವಾಗುತ್ತೆ. ಅದ್ರಲ್ಲೂ ನಿಮ್ಮ ಕ್ಲೋಸ್‌ ಫ್ರೆಂಡೇ ಅದನ್ನ ಹಬ್ಬಿಸಿದ್ದಾರೆ ಅಂತ ಗೊತ್ತಾದಾಗ ನಿಮಗಿನ್ನೂ ದುಃಖ ಆಗುತ್ತೆ.—ಕೀರ್ತನೆ 55:12-14.

 “ನನ್ನ ಕ್ಲೋಸ್‌ ಫ್ರೆಂಡ್‌ ನನ್ನ ಬಗ್ಗೆ, ನಾನು ಯಾರ ಬಗ್ಗೆನೂ ಯೋಚ್ನೆ ಮಾಡಲ್ಲ, ಯಾರಿಗೂ ಸಹಾಯ ಮಾಡಲ್ಲ ಅಂತ ಬೆನ್ನ ಹಿಂದೆ ಮಾತಾಡಿದ್ದು ನಂಗೆ ಗೊತ್ತಾಯ್ತು. ಆಗ ತುಂಬ ಬೇಜಾರಾಯ್ತು! ಅವಳು ನನ್‌ ಬಗ್ಗೆ ಹಿಂಗೆಲ್ಲ ಮಾತಾಡಿದ್ಲು ಅಂತ ನಂಗೆ ನಂಬೋಕೆ ಆಗ್ಲಿಲ್ಲ.”—ಆ್ಯಶ್ಲಿ.

 ನಿಜ ಏನಂದ್ರೆ, ನಮ್ಮ ಬಗ್ಗೆ ಗಾಳಿಸುದ್ದಿ ಹಬ್ಬಿಸಿರೋದು ನಮ್ಮ ಫ್ರೆಂಡೇ ಆಗಿರಲಿ, ಬೇರೆ ಯಾರೇ ಆಗಿರಲಿ, ನಮ್ಮ ಬಗ್ಗೆ ತಪ್ಪಾಗಿ ಮಾತಾಡ್ತಿದ್ದಾರೆ ಅಂತ ಗೊತ್ತಾದಾಗ ನಮಗೆ ತುಂಬ ಬೇಜಾರಾಗುತ್ತೆ.

 ಏನ್‌ ಮಾಡಕ್ಕಾಗಲ್ಲ?—ಜನ ಗಾಳಿಸುದ್ದಿ ಹಬ್ಬಿಸೋದನ್ನ ನಿಮ್ಮಿಂದ ತಡಿಯಕ್ಕಾಗಲ್ಲ

 ಜನ ಬೇರೆಬೇರೆ ಕಾರಣಗಳಿಗೆ ಗಾಳಿಸುದ್ದಿ ಹಬ್ಬಿಸ್ತಾರೆ. ಕೆಲವು ಕಾರಣ ಇಲ್ಲಿದೆ ನೋಡಿ:

 ನಿಮ್ಮ ಮೇಲಿರೋ ಕಾಳಜಿ. ಮನುಷ್ಯರಿಗೆ ಒಂಟಿಯಾಗಿ ಬದುಕೋಕೆ ಆಗಲ್ಲ, ಅವ್ರಿಗೆ ಜನ ಬೇಕು. ಹಾಗಾಗಿ ಒಬ್ರು ಇನ್ನೊಬ್ರ ಹತ್ರ (ಅಥವಾ ಇನ್ನೊಬ್ರ ಬಗ್ಗೆ) ಮಾತಾಡೋದು ಸಹಜನೇ. ಬೈಬಲ್‌ ಕೂಡ ಸ್ವಲ್ಪಮಟ್ಟಿಗೆ “ಬೇರೆಯವ್ರ ಬಗ್ಗೆನೂ ಯೋಚ್ನೆ ಮಾಡಿ” ಅಂತ ಹೇಳುತ್ತೆ.—ಫಿಲಿಪ್ಪಿ 2:4.

 “ಜನ್ರ ಬಗ್ಗೆ ಮಾತಾಡೋದ್ರಲ್ಲಿ ಸಿಗೋ ಮಜಾನೇ ಬೇರೆ.”—ಬಿಯಾಂಕ.

 “ಬೇರೆಯವ್ರ ಲೈಫಲ್ಲಿ ಏನ್‌ ನಡೀತಿದೆ ಅಂತ ತಿಳ್ಕೊಳ್ಳೋಕೆ, ಅದ್ರ ಬಗ್ಗೆ ಬೇರೆಯವ್ರ ಹತ್ರ ಮಾತಾಡೋಕೆ ನಂಗೂ ಇಷ್ಟ. ಯಾಕಂತ ಗೊತ್ತಿಲ್ಲ, ಆದ್ರೆ ಅದ್ರಲ್ಲಿ ಏನೋ ಒಂದು ಖುಷಿ ಇದೆ.”—ಕೇಟಿ.

 ಸಮಯ ಕಳೆಯೋಕೆ. ಬೈಬಲ್‌ ಕಾಲದಲ್ಲಿ ಜನ “ಸಮಯ ಸಿಕ್ಕಾಗೆಲ್ಲಾ ಏನಾದ್ರೂ ಹೊಸ ವಿಷ್ಯಗಳನ್ನ ಹೇಳ್ತಾ ಕೇಳ್ತಾ ಇರ್ತಿದ್ರು.” (ಅಪೊಸ್ತಲರ ಕಾರ್ಯ 17:21) ಇವತ್ತೂ ಜನ ಹಾಗೇನೇ!

 “ಮಾತಾಡೋಕೆ ಏನೂ ವಿಷ್ಯ ಇಲ್ಲ ಅಂದಾಗ ಜನ ಏನಾದ್ರೂ ಹೊಸ ವಿಷ್ಯ ಹುಟ್ಟುಹಾಕ್ತಾರೆ. ಆಗ ಅವ್ರಿಗೆ ಮಾತಾಡೋಕೆ ಒಂದು ವಿಷ್ಯ ಸಿಗುತ್ತೆ.”—ಜೊಯನ್ನಾ.

 ತಮ್ಮಲ್ಲಿರೋ ಕೊರತೆನ ಮುಚ್ಚಾಕೋಕೆ. ಬೇರೆಯವ್ರ ಜೊತೆ ನಿಮ್ಮನ್ನ ಹೋಲಿಸ್ಕೊಬೇಡಿ ಅಂತ ಬೈಬಲ್‌ ಎಚ್ಚರಿಸುತ್ತೆ. ಅದನ್ನ ಹೇಳಿರೋದು ನಮ್ಮ ಒಳ್ಳೇದಕ್ಕೇ. (ಗಲಾತ್ಯ 6:4) ಆದ್ರೆ ಎಷ್ಟೋ ಜನ ತಮ್ಮಲ್ಲಿರೋ ಕೊರತೆನ ಮುಚ್ಚಾಕೋಕೆ ಬೇರೆಯವ್ರ ಬಗ್ಗೆ ಕೆಟ್ಟಕೆಟ್ಟ ಗಾಳಿಸುದ್ದಿನ ಹಬ್ಬಿಸ್ತಾರೆ.

 “ಕೆಟ್ಟ ಗಾಳಿಸುದ್ದಿಗಳು ಅದನ್ನ ಹಬ್ಬಿಸಿದವರು ಎಂಥವರು ಅನ್ನೋದನ್ನ ತೋರಿಸುತ್ತೆ. ತುಂಬ ಜನ ನಮ್ಮ ಹೆಸ್ರನ್ನ ಹಾಳುಮಾಡೋದು ನಮ್ಮ ಮೇಲಿರೋ ಹೊಟ್ಟೆಕಿಚ್ಚಿಂದಾನೇ. ಅವರು ‘ನಾನೇ ಎಷ್ಟೋ ಪರ್ವಾಗಿಲ್ಲ’ ಅಂತ ತಮ್ಮನ್ನ ತಾವೇ ಸಮಾಧಾನ ಮಾಡ್ಕೊಳ್ಳೋಕೆ ನಮ್ಮ ಬಗ್ಗೆ ಗಾಳಿಸುದ್ದಿ ಹಬ್ಬಿಸ್ತಾರೆ.”—ಫಿಲ್‌.

 ನಿಜ ಏನಂದ್ರೆ, ನೀವು ಒಪ್ತಿರೋ ಬಿಡ್ತಿರೋ, ಜನ ಬೇರೆಯವ್ರ ಬಗ್ಗೆ ಮಾತಾಡೇ ಮಾತಾಡ್ತಾರೆ, ನಿಮ್ಮನ್ನೂ ಬಿಡಲ್ಲ.

 ಏನ್‌ ಮಾಡಕ್ಕಾಗುತ್ತೆ?—ದುಡುಕದೇ ಇರೋ ತರ ನಿಮ್ಮನ್ನ ನೀವು ತಡಿಯೋಕೆ ಆಗುತ್ತೆ

 ನಿಮ್ಮ ಬಗ್ಗೆ ಮಾತಾಡೋ ಎಲ್ರ ಬಾಯನ್ನ ಮುಚ್ಚಿಸೋದು ನಿಮ್ಮ ಕೈಯಲ್ಲಿಲ್ಲ. ಆದ್ರೆ ಆಗ ನೀವು ಏನ್‌ ಮಾಡ್ತೀರ ಅನ್ನೋದು ನಿಮ್ಮ ಕೈಯಲ್ಲಿದೆ. ನಿಮ್ಮ ಬಗ್ಗೆ ಯಾರೋ ಗಾಳಿಸುದ್ದಿ ಹಬ್ಬಿಸಿದ್ದಾರೆ ಅಂತ ನಿಮಗೆ ಗೊತ್ತಾಯ್ತು ಅಂದ್ಕೊಳ್ಳಿ. ಈಗ ನಿಮ್ಮ ಮುಂದೆ ಎರಡು ಆಯ್ಕೆ ಇದೆ:

 ಆಯ್ಕೆ 1: ತಲೆಕೆಡಿಸ್ಕೊಳ್ಳದೆ ಇರೋದು. ನಿಮ್ಮ ಬಗ್ಗೆ ಗಾಳಿಸುದ್ದಿ ಹಬ್ಬಿದೆ ಅಂತ ಗೊತ್ತಾದ್ರೆ ಚಿಂತೆಮಾಡ್ಬೇಡಿ. ಅದ್ರಲ್ಲೂ ಅದು ನಿಮ್ಮ ಹೆಸ್ರನ್ನ ಹಾಳುಮಾಡ್ತಿಲ್ಲ ಅಂದ್ರೆ ತಲೆನೇ ಕೆಡಿಸ್ಕೊಬೇಡಿ. “ತಟ್ಟಂತ ಕೋಪ ಮಾಡ್ಕೊಬೇಡ” ಅನ್ನೋ ಬೈಬಲ್‌ ಸಲಹೆನ ಪಾಲಿಸಿ.—ಪ್ರಸಂಗಿ 7:9.

 “ನಾನು ಯಾವ ಹುಡುಗನನ್ನ ಭೇಟಿನೇ ಮಾಡಿರಲಿಲ್ವೋ ಅವನ ಜೊತೆ ಡೇಟಿಂಗ್‌ ಮಾಡ್ತಿದ್ದೀನಿ ಅಂತ ಯಾರೋ ಗಾಳಿಸುದ್ದಿ ಹಬ್ಬಿಸಿದ್ರು. ಇದನ್ನ ಕೇಳಿಸ್ಕೊಂಡಾಗ ನಂಗೆ ನಗು ಬಂತು, ನಾನ್‌ ಅದ್ರ ಬಗ್ಗೆ ತಲೆನೇ ಕೆಡಿಸ್ಕೊಳ್ಳಲಿಲ್ಲ.”—ಎಲೀಸ್‌.

 “ನೀವು ಒಳ್ಳೇ ಹೆಸ್ರನ್ನ ಸಂಪಾದಿಸಿದ್ರೆ ಈ ಗಾಳಿಸುದ್ದಿಗಳ್ಯಾವುದೂ ನಿಲ್ಲಲ್ಲ. ಯಾಕಂದ್ರೆ ನೀವು ಎಂಥವರು ಅಂತ ತುಂಬ ಜನ್ರಿಗೆ ಗೊತ್ತಿರುತ್ತೆ. ಒಂದುವೇಳೆ ನಿಮ್ಮ ಬಗ್ಗೆ ತಪ್ಪಾದ ಗಾಳಿಸುದ್ದಿಗಳು ಹಬ್ಬಿದ್ರೂ ಅದನ್ನ ನಂಬೋರು ತುಂಬ ಕಮ್ಮಿ. ಗಾಳಿಸುದ್ದಿ ಮುಂದೆ ನಿಮ್ಮ ಒಳ್ಳೇತನ ಗೆಲ್ಲುತ್ತೆ.”—ಆ್ಯಲಿಸನ್‌.

 ಹೀಗೆ ಮಾಡಿ: (1) ನಿಮ್ಮ ಬಗ್ಗೆ ಏನ್‌ ಹಬ್ಬಿಸಿದ್ದಾರೆ, (2) ಅದನ್ನ ಕೇಳಿಸ್ಕೊಂಡಾಗ ನಿಮಗೆ ಹೇಗನಿಸ್ತು ಅಂತ ಬರೆದಿಡಿ. ನಿಮಗೆ ಅನಿಸಿದ್ದನ್ನೆಲ್ಲ ‘ಮನಸ್ಸಲ್ಲಿ ಹೇಳ್ಕೊಂಡ್ರೆ’ ಸಮಾಧಾನ ಆಗುತ್ತೆ, ಆಗಿದ್ದನ್ನ ಮರಿಯೋಕೆ ಸುಲಭ ಆಗುತ್ತೆ.—ಕೀರ್ತನೆ 4:4.

 ಆಯ್ಕೆ 2: ನಿಮ್ಮ ಬಗ್ಗೆ ಗಾಳಿಸುದ್ದಿ ಹಬ್ಬಿಸಿರೋ ವ್ಯಕ್ತಿ ಹತ್ರ ಹೋಗಿ ಮಾತಾಡೋದು. ಕೆಲವೊಂದು ಸಲ ನಿಮ್ಮ ಬಗ್ಗೆ ಹಬ್ಬಿರೋ ಗಾಳಿಸುದ್ದಿ ಎಷ್ಟು ಕೆಟ್ಟದಾಗಿರುತ್ತೆ ಅಂದ್ರೆ ಅದನ್ನ ಹಬ್ಬಿಸಿರೋ ವ್ಯಕ್ತಿ ಹತ್ರ ಹೋಗಿ ಮಾತಾಡಬೇಕು ಅಂತ ನಿಮಗೆ ಅನಿಸಬಹುದು.

 “ನಿಮ್ಮ ಬಗ್ಗೆ ಗಾಳಿಸುದ್ದಿ ಹಬ್ಬಿಸಿರೋರ ಹತ್ರ ಹೋಗಿ ಮಾತಾಡಿದ್ರೆ ಇನ್ಮುಂದೆ ಅವರು ನಿಮ್ಮ ಬಗ್ಗೆ ಏನೇ ಮಾತಾಡಿದ್ರೂ ಅದು ನಿಮ್ಮ ಕಿವಿಗೆ ಬೀಳುತ್ತೆ ಅಂತ ಅವ್ರಿಗೆ ಗೊತ್ತಾಗುತ್ತೆ. ಅಷ್ಟೇ ಅಲ್ಲ, ನಿಮಗೆ ಅನಿಸಿದ್ದನ್ನ ಹೇಳಿದ್ರೆ ಸಮಸ್ಯೆನ ಸರಿಮಾಡೋಕೆ ಆಗುತ್ತೆ.”—ಎಲೀಸ್‌.

 ನಿಮ್ಮ ಬಗ್ಗೆ ಗಾಳಿಸುದ್ದಿ ಹಬ್ಬಿಸಿರೋರ ಹತ್ರ ಹೋಗಿ ಮಾತಾಡೋಕೆ ಮುಂಚೆ ಈ ಬೈಬಲ್‌ ತತ್ವಗಳ ಬಗ್ಗೆ ಯೋಚ್ನೆ ಮಾಡಿ ಮತ್ತು ಇಲ್ಲಿ ಕೊಟ್ಟಿರೋ ಪ್ರಶ್ನೆಗಳನ್ನ ಕೇಳ್ಕೊಳ್ಳಿ.

  •   “ನಿಜ ಏನಂತ ಅರ್ಥ ಮಾಡ್ಕೊಳ್ಳದೆ ಉತ್ತರ ಕೊಡುವವನು ಮೂರ್ಖ.” (ಜ್ಞಾನೋಕ್ತಿ 18:13) ‘ನಾನು ಕೇಳಿಸ್ಕೊಂಡಿರೋದು ನಿಜ ಅನ್ನೋದಕ್ಕೆ ಏನಾದ್ರೂ ಆಧಾರ ಇದ್ಯಾ? ನನ್ನ ಹತ್ರ ಬಂದು ಈ ವಿಷ್ಯ ಹೇಳಿದವರು ಅವ್ರ ಕಿವಿಗೆ ಬಿದ್ದಿದ್ದನ್ನ ತಪ್ಪರ್ಥ ಮಾಡ್ಕೊಂಡಿರಬಹುದಾ?’

  •   “ಕೇಳಿಸ್ಕೊಳ್ಳೋದನ್ನ ಜಾಸ್ತಿ ಮಾಡಿ, ಮಾತಾಡೋದನ್ನ ಕಮ್ಮಿ ಮಾಡಿ, ಬೇಗ ಕೋಪ ಮಾಡ್ಕೊಬೇಡಿ.” (ಯಾಕೋಬ 1:19) ನನ್ನ ಬಗ್ಗೆ ಗಾಳಿಸುದ್ದಿ ಹಬ್ಬಿಸಿರೋರ ಹತ್ರ ಈಗ್ಲೇ ಹೋಗಿ ಮಾತಾಡಿದ್ರೆ ಸರಿ ಇರುತ್ತಾ? ಅಥವಾ ನನ್ನ ಕೋಪ ಇಳಿದ ಮೇಲೆ ಹೋಗಿ ಮಾತಾಡಿದ್ರೆ ಚೆನ್ನಾಗಿರುತ್ತಾ? ನಾನು ಸರಿಯಾಗಿ ಯೋಚ್ನೆ ಮಾಡ್ತಿದ್ದೀನಾ? ಅಥವಾ ಕೇಳಿದ್ದೆಲ್ಲಾ ನಿಜ ಅಂತ ನಂಬಿಬಿಟ್ಟಿದ್ದೀನಾ?

  •   “ಜನ ನಿಮಗೆ ಏನು ಮಾಡಬೇಕಂತ ಇಷ್ಟಪಡ್ತೀರೋ ಅದನ್ನೇ ಅವ್ರಿಗೆ ಮಾಡಿ.” (ಮತ್ತಾಯ 7:12) ‘ಅವ್ರ ಜಾಗದಲ್ಲಿ ನಾನಿದ್ದಿದ್ರೆ ಅವರು ನನ್ನತ್ರ ಹೇಗೆ ಮಾತಾಡ್ಬೇಕು ಅಂತ ಅಂದ್ಕೊಳ್ತಿದ್ದೆ? ಎಲ್ಲಿ ಮಾತಾಡ್ಬೇಕು ಅಂದ್ಕೊಳ್ತಿದ್ದೆ? ಯಾವ ಪದಗಳನ್ನ, ಯಾವ ತರ ಬಳಸ್ಬೇಕು ಅಂತ ಇಷ್ಟಪಡ್ತಿದ್ದೆ?’

 ಹೀಗೆ ಮಾಡಿ: ನಿಮ್ಮ ಬಗ್ಗೆ ಗಾಳಿಸುದ್ದಿ ಹಬ್ಬಿಸಿರೋರ ಹತ್ರ ಮಾತಾಡೋಕೆ ಮುಂಚೆ ಏನ್‌ ಮಾತಾಡ್ಬೇಕು ಅಂತ ಬರೆದಿಡಿ. ಒಂದೆರಡು ವಾರ ಕಾದು ಅದನ್ನ ಮತ್ತೆ ಓದಿ. ಅದ್ರಲ್ಲಿ ಏನಾದ್ರೂ ಸರಿಮಾಡ್ಬೇಕಾ ಅಂತ ನೋಡಿ. ಇದ್ರ ಬಗ್ಗೆ ನಿಮ್ಮ ಅಪ್ಪ-ಅಮ್ಮನ ಹತ್ರ ಅಥವಾ ಒಳ್ಳೇ ಫ್ರೆಂಡ್‌ ಹತ್ರ ಮಾತಾಡಿ, ಅವರು ಏನ್‌ ಹೇಳ್ತಾರೆ ಅಂತ ಕೇಳಿ.

 ನಿಜ ಏನಂದ್ರೆ, ನಿಮ್ಮ ಜೀವನದಲ್ಲಿ ನಡಿಯೋ ಎಷ್ಟೋ ವಿಷ್ಯಗಳನ್ನ ನೀವು ಹೇಗೆ ತಡಿಯೋಕೆ ಆಗಲ್ವೋ, ಹಾಗೇ ಗಾಳಿಸುದ್ದಿನೂ ತಡಿಯೋಕೆ ಆಗಲ್ಲ. ಆದ್ರೆ ದುಡುಕದೇ ಇರೋ ತರ ನೀವು ನಿಮ್ಮನ್ನ ತಡೀಬಹುದು!