ಯುವಜನರ ಪ್ರಶ್ನೆಗಳು

ಕುಡಿಯೋಕೆ ಮುಂಚೆ ಏನೆಲ್ಲ ತಿಳ್ಕೊಬೇಕು?

ಕುಡಿಯೋಕೆ ಮುಂಚೆ ಏನೆಲ್ಲ ತಿಳ್ಕೊಬೇಕು?

 ಕಾನೂನು ಒಪ್ಪಿದ್ರೆ ಸ್ವಲ್ಪ ಕುಡಿಯೋದನ್ನ ಬೈಬಲ್‌ ತಪ್ಪು ಅಂತ ಹೇಳಲ್ಲ. ಆದ್ರೆ ಅತಿಯಾಗಿ ಕುಡಿಯೋದನ್ನ ಮತ್ತು ಕುಡಿಕತನವನ್ನ ತಪ್ಪು ಅಂತ ಬೈಬಲ್‌ ಹೇಳುತ್ತೆ.—ಕೀರ್ತನೆ 104:15; 1 ಕೊರಿಂಥ 6:10.

 ಕಾನೂನು ಅಥವಾ ನಿಮ್ಮ ಅಪ್ಪಅಮ್ಮ ಒಪ್ಪದೇ ಇದ್ರೂ ನಿಮಗೆ ಕುಡಿಬೇಕು ಅಂತ ಜಾಸ್ತಿ ಅನಿಸ್ತಿದ್ರೆ ಏನು ಮಾಡಬೇಕು?

 ಕುಡಿದ ಮೇಲೆ ಏನೆಲ್ಲಾ ಆಗಬಹುದು?

 ‘ಕುಡಿದಾಗ ಸಿಗೋ ಮಜಾನೇ ಬೇರೆ!’ ಅಂತ ನಿಮ್ಮ ಫ್ರೆಂಡ್ಸ್‌ ಹೇಳಬಹುದು. ಆದ್ರೆ ಕುಡಿದ್ಮೇಲೆ ಏನಾಗುತ್ತೆ ಗೊತ್ತಾ?

  •  ಪೊಲೀಸ್‌ ಕೇಸ್‌ ಆಗಬಹುದು. ಕೆಲವೊಂದು ಊರಲ್ಲಿ ಕುಡಿಯೋದನ್ನ ಕಾನೂನು ಒಪ್ಪಲ್ಲ. ಆದ್ರೂ ನೀವು ಕುಡಿದ್ರೆ ಅವರು ನಿಮಗೆ ದಂಡ ಹಾಕ್ತಾರೆ, ನಿಮ್ಮ ಮೇಲೆ ಪೊಲೀಸ್‌ ಕೇಸ್‌ ಹಾಕ್ತಾರೆ, ನಿಮ್ಮ ಡ್ರೈವಿಂಗ್‌ ಲೈಸನ್ಸ್‌ನ ಕಿತ್ಕೊತಾರೆ ಅಥವಾ ನಿಮ್ಮನ್ನ ಜೈಲಿಗೂ ಹಾಕ್ತಾರೆ.—ರೋಮನ್ನರಿಗೆ 13:3.

  •  ಹೆಸರು ಹಾಳಾಗುತ್ತೆ. ತುಂಬ ಕುಡಿಯೋದ್ರಿಂದ ನೀವು ನಿಮ್ಮ ಕಂಟ್ರೋಲಲ್ಲಿ ಇರಲ್ಲ. ಆಗ ನೀವು ಏನಾದ್ರೂ ತಪ್ಪಾಗಿ ಹೇಳಿಬಿಡಬಹುದು ಅಥವಾ ಮಾಡಿಬಿಡಬಹುದು. ಆಮೇಲೆ ಅದನ್ನ ನೆನೆಸ್ಕೊಂಡ್ರೆ ನಿಮಗೆ ಬೇಜಾರಾಗುತ್ತೆ. (ಜ್ಞಾನೋಕ್ತಿ 23:31-33) ಅಷ್ಟೇ ಅಲ್ಲ, ಇವತ್ತು ಸೋಶಿಯಲ್‌ ಮೀಡಿಯಾದಲ್ಲಿ ಕಣ್ಣು ಮುಚ್ಚಿ ಕಣ್ಣು ತೆಗೆಯೋಷ್ಟೊತ್ತಿಗೆ ನೀವು ಮಾಡಿದ ತಪ್ಪು ವೈರಲ್‌ ಆಗಿಬಿಡುತ್ತೆ. ಇದ್ರಿಂದ ನಿಮ್ಮ ಮರ್ಯಾದೆನೂ ಹೋಗುತ್ತೆ.

  •  ವೀಕ್‌ ಆಗ್ತೀರ. ನೀವು ನಶೆಯಲ್ಲಿದ್ದಾಗ ಜನ ನಿಮ್ಮನ್ನ ಹೊಡೀಬಹುದು ಅಥವಾ ನಿಮ್ಮ ಮೇಲೆ ಲೈಂಗಿಕ ದೌರ್ಜನ್ಯ ಮಾಡಬಹುದು. ಅಷ್ಟೇ ಅಲ್ಲ, ಜನ ಹೇಳೋದನ್ನ ನೀವು ಸರಿ ತಪ್ಪು ಯೋಚ್ನೆ ಮಾಡದೇ ಮಾಡಿ ಬಿಡಬಹುದು. ಆಗ ಅದ್ರಿಂದ ನಿಮಗೇ ತೊಂದ್ರೆ ಆಗುತ್ತೆ. ನಿಮ್ಮ ಜೀವನನ ನೀವೇ ಕೈಯ್ಯಾರೆ ನಾಶ ಮಾಡ್ಕೊತೀರ.

  •  ಚಟಕ್ಕೆ ಬಲಿ ಬೀಳ್ತೀರ. ಚಿಕ್ಕ ವಯಸ್ಸಲ್ಲೇ ಕುಡಿಯೋಕೆ ಶುರು ಮಾಡಿದ್ರೆ ಹೋಗ್ತಾ ಹೋಗ್ತಾ ಅದು ಚಟ ಆಗಿಬಿಡುತ್ತೆ ಅಂತ ಸಂಶೋಧನೆ ಹೇಳುತ್ತೆ. ‘ಚಿಂತೆ ಆಗ್ತಿದೆ, ಬೋರ್‌ ಆಗ್ತಿದೆ ಮತ್ತು ನಾನು ಒಂಟಿಯಾಗಿದ್ದೀನಿ’ ಅಂತ ಕುಡಿಬೇಡಿ. ಇಲ್ಲಾಂದ್ರೆ ಅದು ಚಟ ಆಗುತ್ತೆ. ಆಮೇಲೆ ಅದನ್ನ ಬಿಡೋದು ತುಂಬ ಕಷ್ಟ ಆಗಿಬಿಡುತ್ತೆ.

  •  ಜೀವ ಕಳ್ಕೊತೀರ. ಇತ್ತೀಚಿನ ವರ್ಷದಲ್ಲಿ ಅಮೇರಿಕಾದಲ್ಲಿ ಕುಡಿದು ಗಾಡಿ ಓಡಿಸಿದ್ರಿಂದ ಪ್ರತಿ 52 ನಿಮಿಷಕ್ಕೆ ಒಬ್ರು ಸತ್ತೋಗಿದ್ದಾರೆ. ಐದು ವರ್ಷಗಳ ಸಂಖ್ಯೆ ನೋಡಿದ್ರೆ ಪ್ರತಿ ವರ್ಷ ಸುಮಾರು 1,500 ಜನ ಕುಡಿದು ಗಾಡಿ ಓಡಿಸಿ ಜೀವ ಕಳ್ಕೊಂಡಿದ್ದಾರೆ. ಈ ತರ ಸತ್ತವರ ವಯಸ್ಸು 21ಕ್ಕಿಂತ ಕಮ್ಮಿ ಆಗಿದೆ. ‘ಅಯ್ಯೋ ನಾನಂತೂ ಕುಡಿಯಲ್ಲ’ ಅಂತ ನೀವು ಹೇಳಬಹುದು. ಆದ್ರೆ ಕುಡಿದು ಗಾಡಿ ಓಡಿಸೋರ ಜೊತೆ ಹೋದ್ರೂ ನಿಮ್ಮ ಜೀವಕ್ಕೆ ಅಪಾಯ ಇದೆ ಅಂತ ನೆನಪಿಡಿ.

 ನಿರ್ಧಾರ ಮಾಡಿ

 ಅಪಾಯಕ್ಕೆ ಮತ್ತು ದೊಡ್ಡದೊಡ್ಡ ತೊಂದ್ರೆಗೆ ನೀವು ಸಿಕ್ಕಿ ಹಾಕಿಕೊಳ್ಳಬಾರದು ಅಂದ್ರೆ ಕುಡಿಯೋ ಮುಂಚೆನೇ ನೀವು ಏನು ಮಾಡ್ತೀರ ಅನ್ನೋ ನಿರ್ಧಾರ ಮಾಡಬೇಕು.

 ಬೈಬಲ್‌ ತತ್ವ: “ಜಾಣ ಅಪಾಯ ನೋಡಿ ಅಡಗಿಕೊಳ್ತಾನೆ.” (ಜ್ಞಾನೋಕ್ತಿ 22:3) ಗಾಡಿ ಓಡಿಸೋ ಮುಂಚೆ ಮತ್ತು ಯಾವುದಾದ್ರೂ ಮುಖ್ಯವಾಗಿರೋ ಕೆಲ್ಸ ಮಾಡೋ ಮುಂಚೆ ಕುಡಿಯೋದು ಒಳ್ಳೇದಲ್ಲ.

 ನಿರ್ಧಾರ: ‘ಕಾನೂನು ಒಪ್ಪಿಗೆ ಇದ್ರೆ ಮತ್ತು ನಾನು ಸರಿಯಾದ ಪರಿಸ್ಥಿತಿಯಲ್ಲಿ ಇದ್ರೆ ಮಾತ್ರ ಕುಡಿತೀನಿ.’

 ಬೈಬಲ್‌ ತತ್ವ: “ನೀವು ಒಬ್ಬನ ಕೈಕೆಳಗಿದ್ದು ಅವನು ಹೇಳಿದ್ದನ್ನೆಲ್ಲ ಮಾಡ್ತಿದ್ರೆ ನೀವು ಅವನ ದಾಸರಾಗಲ್ವಾ?” (ರೋಮನ್ನರಿಗೆ 6:16) ನಿಮ್ಮ ಫ್ರೆಂಡ್ಸ್‌ ಕುಡಿತಿದ್ದಾರೆ ಅಂತ ನೀವೂ ಕುಡಿದ್ರೆ ಅವರು ನಿಮ್ಮನ್ನ ಕಂಟ್ರೋಲ್‌ ಮಾಡೋಕೆ ನೀವು ಬಿಡ್ತಿದ್ದೀರ ಅಂತ ಅಲ್ವಾ? ಬೋರ್‌ ಆಗ್ತಿದೆ, ಚಿಂತೆ ಆಗ್ತಿದೆ ಅನ್ನೋ ಕಾರಣಕ್ಕೆ ಕುಡಿಯೋದನ್ನ ಕಲಿತ್ರೆ, ನೀವು ಪ್ರಾಬ್ಲಮ್‌ನ ಎದುರಿಸೋಕೆ ಬೇಕಾಗಿರೋ ಸ್ಕಿಲ್‌ ಕಲಿತಿಲ್ಲ ಅಂತರ್ಥ.

 ನಿರ್ಧಾರ: ‘ನನ್ನ ಫ್ರೆಂಡ್ಸ್‌ ಫೋರ್ಸ್‌ ಮಾಡ್ತಿದ್ದಾರೆ ಅಂತ ನಾನು ಯಾವತ್ತೂ ಕುಡಿಯಲ್ಲ.’

 ಬೈಬಲ್‌ ತತ್ವ: “ಕಂಠಪೂರ್ತಿ ದ್ರಾಕ್ಷಾಮದ್ಯ ಕುಡಿಯುವವ್ರ ಜೊತೆ ಸೇರಬೇಡ.” (ಜ್ಞಾನೋಕ್ತಿ 23:20) ತುಂಬ ಕುಡಿಯೋರ ಜೊತೆ ಸಹವಾಸ ಮಾಡಿದ್ರೆ ನೀವು ನಿಮ್ಮ ನಿರ್ಧಾರನ ಬಿಟ್ಟುಬಿಡ್ತೀರ. ಆಮೇಲೆ ನೀವೂ ಅವ್ರ ತರಾನೇ ಕುಡುಕರಾಗ್ತೀರ.

 ನಿರ್ಧಾರ: ‘ತುಂಬ ಕುಡಿಯೋರ ಜೊತೆ ನಾನು ಸಹವಾಸ ಮಾಡಲ್ಲ.’