ಯುವಜನರ ಪ್ರಶ್ನೆಗಳು
ಆಟದ ಬಗ್ಗೆ ಒಂದಿಷ್ಟು ಪಾಠಗಳು
ಆಟ ಆಡೋದ್ರಿಂದ ನಿಮಗೆ ಒಳ್ಳೇದೂ ಆಗುತ್ತೆ, ಕೆಟ್ಟದ್ದೂ ಆಗುತ್ತೆ. ಆದ್ರೆ ಅದು, ನೀವು ಯಾವ ಆಟ ಆಡ್ತೀರಾ? ಹೇಗೆ ಆಡ್ತೀರಾ? ಎಷ್ಟು ಹೊತ್ತು ಆಡ್ತೀರಾ ಅನ್ನೋದ್ರ ಮೇಲೆ ಹೊಂದ್ಕೊಂಡಿರುತ್ತೆ.
ಪ್ರಯೋಜನಗಳು
ಆಟ ಆಡೋದ್ರಿಂದ ನಮ್ಮ ಆರೋಗ್ಯ ಚೆನ್ನಾಗಿರುತ್ತೆ. “ವ್ಯಾಯಾಮದಿಂದ ಸ್ವಲ್ಪ ಪ್ರಯೋಜನ ಇದೆ” ಅಂತ ಬೈಬಲ್ ಹೇಳುತ್ತೆ. (1 ತಿಮೊತಿ 4:8) “ಆಟ ಆಡೋದ್ರಿಂದ ನಾವು ಚುರುಕಾಗಿ ಇರ್ತೀವಿ. ಮನೆ ಒಳಗೆ ಕೂತ್ಕೊಂಡು ವಿಡಿಯೋ ಗೇಮ್ ಆಡೋದಕ್ಕಿಂತ ಹೊರಗೆ ಹೋಗಿ ಆಟ ಆಡೋದು ಎಷ್ಟೋ ವಾಸಿ” ಅಂತ ರಾಯನ್ ಅನ್ನೋ ಯುವಕ ಹೇಳ್ತಾನೆ.
ಆಟಗಳು ಒಗ್ಗಟ್ಟಾಗಿ ಕೆಲಸ ಮಾಡೋದನ್ನ, ಶಿಸ್ತನ್ನ ಕಲಿಸುತ್ತೆ. ಬೈಬಲ್ ಕೂಡ ನಮಗೆ ಒಂದೊಳ್ಳೇ ಗುಣದ ಬಗ್ಗೆ ಕಲಿಸೋಕೆ ಆಟದ ಉದಾಹರಣೆಯನ್ನ ಬಳಸಿದೆ. “ಓಟದ ಸ್ಪರ್ಧೆಯಲ್ಲಿ ಎಲ್ರೂ ಓಡ್ತಾರೆ, ಆದ್ರೆ ಒಬ್ಬನಿಗೆ ಮಾತ್ರ ಬಹುಮಾನ ಸಿಗುತ್ತೆ . . . ಸ್ಪರ್ಧೆಯಲ್ಲಿ ಭಾಗವಹಿಸುವವರು ಎಲ್ಲ ವಿಷ್ಯಗಳಲ್ಲಿ ಸ್ವನಿಯಂತ್ರಣ ತೋರಿಸ್ತಾರೆ” ಅಂತ ಅಲ್ಲಿ ಹೇಳಿದೆ. (1 ಕೊರಿಂಥ 9:24, 25) ಇದ್ರ ಅರ್ಥ ಏನು? ಆಟಗಳಿಗೆ ಅದ್ರದ್ದೇ ಆದ ನಿಯಮ ಇರುತ್ತೆ. ಹಾಗಾಗಿ ಆಟ ಆಡುವಾಗ ನಾವು ಸ್ವನಿಯಂತ್ರಣ ತೋರಿಸ್ತೀವಿ ಮತ್ತು ಒಗ್ಗಟ್ಟಾಗಿ ಇರೋಕೆ ಕಲಿತೀವಿ. ಅಬೀಗೈಲ್ ಅನ್ನೋ ಯುವತಿ ಕೂಡ “ಆಟ ಆಡೋದ್ರಿಂದ ಬೇರೆಯವ್ರ ಜೊತೆ ಹೇಗೆ ಮಾತಾಡಬೇಕು, ಅವ್ರಿಗೆ ಹೇಗೆ ಸಹಕಾರ ಕೊಡಬೇಕು ಅನ್ನೋದನ್ನ ಕಲಿತೆ” ಅಂತ ಹೇಳಿದಳು.
ಆಟ ಆಡೋದ್ರಿಂದ ನಮಗೆ ಸ್ನೇಹಿತರು ಸಿಕ್ತಾರೆ. ಆಟಗಳು ಜನ್ರನ್ನ ಒಟ್ಟು ಸೇರಿಸುತ್ತೆ. ಜೋರ್ಡನ್ ಅನ್ನೋ ಹುಡುಗ ಏನು ಹೇಳ್ತಾನೆ ನೋಡಿ: “ಎಲ್ಲಾ ಆಟದಲ್ಲೂ ಸ್ವಲ್ಪನಾದ್ರೂ ಪೈಪೋಟಿ ಇದ್ದೇ ಇರುತ್ತೆ. ಆದ್ರೆ ಖುಷಿಗಂತ ಆಡಿದ್ರೆ ನಮಗೆ ತುಂಬ ಸ್ನೇಹಿತರು ಸಿಕ್ತಾರೆ.”
ಅಪಾಯಗಳು
ಯಾವ ಆಟ ಆಡ್ತೀರಾ? “ಯೆಹೋವ ಒಳ್ಳೆಯವನನ್ನೂ ಕೆಟ್ಟವನನ್ನೂ ಪರೀಕ್ಷಿಸ್ತಾನೆ, ಹಿಂಸೆಯನ್ನ ಪ್ರೀತಿಸೋ ಜನ್ರನ್ನ ದ್ವೇಷಿಸ್ತಾನೆ” ಅಂತ ಬೈಬಲ್ ಹೇಳುತ್ತೆ.—ಕೀರ್ತನೆ 11:5.
ಕೆಲವು ಆಟಗಳಲ್ಲಂತೂ ಬರೀ ಹೊಡೆದಾಟನೇ ಇರುತ್ತೆ. ಉದಾಹರಣೆಗೆ, ಲಾರೆನ್ ಅನ್ನೋ ಯುವತಿ ಏನು ಹೇಳ್ತಾರೆ ನೋಡಿ: “ಬಾಕ್ಸಿಂಗ್ ಆಟದಲ್ಲಿ ಒಬ್ರನ್ನೊಬ್ರು ಹೊಡಿಯೋದೇ ಇರುತ್ತೆ. ದೇವರಿಗೆ ಇಷ್ಟ ಆಗೋ ತರ ನಡ್ಕೊಳ್ಳೋರು ಹೊಡೆದಾಡಲ್ಲ ಅಂದ್ಮೇಲೆ ಬೇರೆಯವರು ಹೊಡೆದಾಡೋದನ್ನ ನೋಡಿ ಮಜಾ ತಗೊಳ್ಳೋದು ಸರಿನಾ?”
ಯೋಚ್ನೆ ಮಾಡಿ: “ನಾನು ಹೊಡೆದಾಡೋ ಆಟಗಳನ್ನ ಬರೀ ಆಡ್ತೀನಷ್ಟೇ, ನೋಡ್ತೀನಷ್ಟೇ. ನಾನೇನು ಬೇರೆಯವ್ರಿಗೆ ಹೊಡಿಯೋಕೆ ಅಥವಾ ಹಿಂಸೆ ಕೊಡೋಕೆ ಹೋಗ್ತಿಲ್ವಲ್ಲಾ” ಅಂತ ನೀವು ಯಾವತ್ತಾದ್ರೂ ಅಂದ್ಕೊಂಡಿದ್ದೀರಾ? ಹಾಗಾದ್ರೆ ಕೀರ್ತನೆ 11:5ರಲ್ಲಿ ಏನು ಹೇಳಿದೆ ಅಂತ ನೆನಪಿಸ್ಕೊಳ್ಳಿ. ಅಲ್ಲಿ ಯೆಹೋವ ದೇವರು, ಹಿಂಸೆ ಮಾಡೋರನ್ನ ದ್ವೇಷಿಸ್ತಾನೆ ಅಂತ ಹೇಳಿಲ್ಲ, ಬದಲಿಗೆ “ಹಿಂಸೆಯನ್ನ ಪ್ರೀತಿಸೋ” ಜನ್ರನ್ನ ದ್ವೇಷಿಸ್ತಾನೆ ಅಂತ ಹೇಳಿದೆ.
ಹೇಗೆ ಆಡ್ತೀರಾ? “ಏನೇ ಆದ್ರೂ ಜಗಳ ಮಾಡಬೇಡಿ, ‘ನಾನೇ ಮೇಲು’ ಅಂತ ಹೆಮ್ಮೆಪಡದೆ ದೀನತೆ ತೋರಿಸಿ, ನಿಮಗಿಂತ ಬೇರೆಯವ್ರನ್ನ ಶ್ರೇಷ್ಠವಾಗಿ ನೋಡಿ” ಅಂತ ಬೈಬಲ್ ಹೇಳುತ್ತೆ.—ಫಿಲಿಪ್ಪಿ 2:3.
ಒಂದು ಆಟದಲ್ಲಿ ಎರಡು ಟೀಮ್‌ಗಳು ಇದ್ಮೇಲೆ ಸ್ವಲ್ಪನಾದ್ರೂ ಪೈಪೋಟಿ ಇದ್ದೇ ಇರುತ್ತೆ. ಏನೇ ಆದ್ರೂ ಗೆಲ್ಲಲೇಬೇಕು ಅಂದ್ಕೊಂಡು ಆಡಿದ್ರೆ ಆಟದಲ್ಲಿರೋ ಮಜಾನೇ ಹೋಗಿಬಿಡುತ್ತೆ. ಬ್ರಾಯನ್ ಅನ್ನೋ ಯುವಕ ಹೇಳೋದೇನಂದ್ರೆ “ಆಟ ಆಡುವಾಗ ನಿಮಗೇ ಗೊತ್ತಿಲ್ದೇ ನೀವು ಪೈಪೋಟಿ ಮಾಡೋಕೆ ಹೋಗಿಬಿಡಬಹುದು. ಹಾಗಾಗಿ ನೀವು ಎಷ್ಟು ಚೆನ್ನಾಗಿ ಆಟ ಆಡ್ತೀರೋ ಅಷ್ಟು ಜಾಸ್ತಿ ದೀನತೆ ಬೆಳೆಸ್ಕೊಬೇಕು.”
ಯೋಚ್ನೆ ಮಾಡಿ: “ನಾವು ಪ್ರತಿವಾರ ಫುಟ್‌ಬಾಲ್ ಆಡ್ತೀವಿ, ಆಗ ನಮ್ಮಲ್ಲಿ ತುಂಬ ಜನ್ರಿಗೆ ಗಾಯಗಳಾಗುತ್ತೆ” ಅಂತ ಕ್ರಿಸ್ ಹೇಳ್ತಾನೆ. ‘ಗಾಯ ಆಗೋಕೆ ಕಾರಣ ಏನು? ಗಾಯ ಮಾಡ್ಕೊಳ್ಳದೆ ಆಡೋಕೆ ಏನು ಮಾಡಬೇಕು?’ ಅಂತ ಕೇಳ್ಕೊಳ್ಳಿ.
ಎಷ್ಟು ಹೊತ್ತು ಆಡ್ತೀರಾ? “ತುಂಬ ಮುಖ್ಯವಾದ ವಿಷ್ಯ ಯಾವುದು ಅಂತ ನೀವು ಚೆನ್ನಾಗಿ ತಿಳ್ಕೊಬೇಕು” ಅಂತ ಬೈಬಲ್ ಹೇಳುತ್ತೆ.—ಫಿಲಿಪ್ಪಿ 1:10.
ಯಾವುದು ತುಂಬ ಮುಖ್ಯ ಅಂತ ನಿಮಗೆ ಗೊತ್ತಿರಬೇಕು. ದೇವ್ರಿಗೆ ಇಷ್ಟ ಆಗೋ ವಿಷ್ಯಗಳನ್ನ ಮಾಡೋಕೆ ನಾವು ಮೊದ್ಲು ಸಮಯ ಕೊಡಬೇಕು. ನಾವು ಆಟ ಆಡ್ತಾ, ನೋಡ್ತಾ ಸಮಯ ಹೋಗೋದೇ ಗೊತ್ತಾಗಲ್ಲ, ಎಷ್ಟೋ ಗಂಟೆಗಳೇ ಕಳೆದುಹೋಗಿರುತ್ತೆ. “ಟಿ.ವಿಯಲ್ಲಿ ಬರೋ ಆಟಗಳನ್ನ ನೋಡ್ತಾ ನಾನು ತುಂಬ ಟೈಮ್ ವೇಸ್ಟ್ ಮಾಡ್ತಿದ್ದೆ. ಆಗ ಅಮ್ಮ ‘ಆ ಟೈಮ್‌ನ ಬೇರೆ ಏನಾದ್ರೂ ಒಳ್ಳೇ ಕೆಲಸ ಮಾಡೋಕೆ ಬಳಸಬಹುದಿತ್ತಲ್ವಾ’ ಅಂತ ಬೈತಿದ್ರು” ಅಂತ ದಾರಿಯಾ ಹೇಳ್ತಾಳೆ.
ಆಟ ಆಡೋದ್ರಲ್ಲೇ ಯಾವಾಗ್ಲೂ ಮುಳುಗಿರೋದು ಊಟಕ್ಕೆ ಜಾಸ್ತಿ ಉಪ್ಪು ಸುರಿದಂಗೆ
ಯೋಚ್ನೆ ಮಾಡಿ: ಜೀವನದಲ್ಲಿ ಯಾವುದು ಮುಖ್ಯವಾಗಿರಬೇಕು ಅಂತ ನಿಮ್ಮ ಅಪ್ಪ-ಅಮ್ಮ ಹೇಳಿದ್ರೆ ಅದನ್ನ ಕೇಳಿಸ್ಕೊಳ್ತೀರಾ? ಟ್ರೀನಾ ಏನು ಹೇಳ್ತಾರೆ ನೋಡಿ: “ನಾವು ಟಿ.ವಿಯಲ್ಲಿ ಬರೋ ಆಟಗಳನ್ನ ನೋಡ್ತಾ ಮಾಡಬೇಕಾಗಿದ್ದ ಕೆಲ್ಸಗಳನ್ನ ಮಾಡ್ತಿರಲಿಲ್ಲ. ಆಗ ನಮ್ಮಮ್ಮ ನಮಗೆ ‘ನೀವು ಅದನ್ನ ನೋಡಿದ್ರೂ ನೋಡಿಲ್ಲಾಂದ್ರೂ ಅವ್ರಿಗೆ ಸಂಬಳ ಸಿಗುತ್ತೆ. ಆದ್ರೆ ನಿಮಗೇನು ಸಿಗುತ್ತೆ?’ ಅಂತ ಕೇಳ್ತಿದ್ರು. ಅಂದ್ರೆ ಅಲ್ಲಿ ಆಟ ಆಡೋರಿಗೆ ಈಗಾಗ್ಲೇ ಒಂದು ಕೆಲಸ ಇದೆ. ಅವ್ರನ್ನ ನೋಡ್ಕೊಂಡು ನಾವು ಓದದೇ ಇದ್ರೆ, ಹೋಮ್‌ವರ್ಕ್ ಮಾಡದೇ ಇದ್ರೆ ಮುಂದೆ ನಮಗೆ ಕೆಲಸ ಸಿಗಲ್ಲ. ನಮ್ಮನ್ನ ನಾವು ನೋಡ್ಕೊಳ್ಳೋಕೆ ಆಗಲ್ಲ. ಆಟ ಆಡೋದು ಮತ್ತು ಅದನ್ನ ನೋಡೋದೇ ನಮ್ಮ ಜೀವನದಲ್ಲಿ ಮುಖ್ಯ ಆಗಬಾರದು ಅಂತ ನಮ್ಮಮ್ಮ ಹೇಳ್ತಿದ್ರು.