ವಿಕಾಸವೇ? ವಿನ್ಯಾಸವೇ?

ಜೀವಕೋಶಗಳ ಬದಲಾಗೋ ಅದ್ಭುತ ಸಾಮರ್ಥ್ಯ

ಜೀವಕೋಶಗಳ ಬದಲಾಗೋ ಅದ್ಭುತ ಸಾಮರ್ಥ್ಯ

 ನಿಮ್ಮ ತಾಯಿಯ ಗರ್ಭದಲ್ಲಿ ನಿಮ್ಮ ಜೀವ ಆರಂಭ ಆದಾಗ, ನೀವು ಕೇವಲ ಒಂದು ಚಿಕ್ಕ, ಅದೃಶ್ಯ ಜೀವಕೋಶ ಆಗಿದ್ರಿ. ಜೈಗೋಟ್‌ ಅಂತ ಕರೆಯೋ ಆ ಸಣ್ಣ ಜೀವಕೋಶ 200 ಕ್ಕೂ ಹೆಚ್ಚು ವಿಭಿನ್ನ ರೀತಿಯ ಜೀವಕೋಶಗಳಾಗಿ, ವಿಭಿನ್ನ ಆಕಾರ ಹಾಗೂ ಗಾತ್ರದಲ್ಲಿ ಬದಲಾಗುತ್ತೆ. ಆ ಪ್ರತಿಯೊಂದು ಜೀವಕೋಶವು ಬೇರೆ ಬೇರೆ ಕೆಲಸವನ್ನ ಮಾಡ್ತಾ ಕೆಲವೇ ತಿಂಗಳುಗಳಲ್ಲಿ, ನೀವು ಒಂದೇ ಜೀವಕೋಶದಿಂದ ಒಂದು ಮಗುವಾಗಿ ಬೆಳೆದ್ರಿ.

 ಪರಿಗಣಿಸಿ: ಒಂದು ಜೈಗೋಟ್‌ ತನ್ನ ಡಿಎನ್‌ಎ (DNA) ನಕಲು ಮಾಡಿ ಎರಡಾಗಿ ವಿಭಜನೆ ಆಗುತ್ತೆ. ಆಮೇಲೆ ಈ ಎರಡು ಜೀವಕೋಶಗಳು ಅದರ ಡಿಎನ್‌ಎಯ ನಕಲು ಮಾಡಿ ಇನ್ನೂ ಎರಡೆರಡಾಗಿ ವಿಭಜನೆ ಆಗುತ್ತೆ. ಇದರಿಂದಾಗಿ ಆಗೋ ಜೀವಕೋಶಗಳು ಈ ಪ್ರಕ್ರಿಯೆಯನ್ನ ಹಲವಾರು ಬಾರಿ ಮತ್ತೆ ಮತ್ತೆ ಮಾಡುತ್ತೆ. ಮೊದಲಿಗೆ, ಈ ಎಲ್ಲಾ ಹೊಸ ಜೀವಕೋಶಗಳು ಒಂದೇ ತರ ಇರುತ್ತೆ. ಆದರೆ, ಈ ಜೀವಕೋಶಗಳಲ್ಲಿ ಪ್ರತಿಯೊಂದೂ ಯಾವ ರೀತಿಯ ಜೀವಕೋಶ ಆಗಬೇಕು ಅಂತ ಎಲ್ಲಾ ಮಾಹಿತಿ ಅವುಗಳ ಡಿಎನ್‌ಎಯಲ್ಲಿ ಇರುತ್ತೆ.

 ಒಬ್ಬ ಸ್ತ್ರೀ ಗರ್ಭಧರಿಸಿದ ಒಂದು ವಾರದ ನಂತರ, ಆ ಜೀವಕೋಶಗಳು ಎರಡು ರೀತಿಯಲ್ಲಿ ಬದಲಾಗಿ ರೂಪುಗೊಳ್ಳಲು ಆರಂಭಿಸುತ್ತೆ. ಕೆಲವು ಜೀವಕೋಶಗಳು ಭ್ರೂಣವನ್ನ (embryo) ರೂಪಿಸುತ್ತೆ. ಬೇರೆ ಜೀವಕೋಶಗಳು ಜರಾಯು (placenta) ಮತ್ತು ಭ್ರೂಣದ ಬೆಳವಣಿಗೆಗೆ ಸಹಾಯ ಮಾಡೋ ಬೇರೆ ಸಂಬಂಧಿತ ಅಂಗಾಂಶಗಳಾಗಿ ಬೆಳೆಯುತ್ತೆ.

 ಮೂರನೇ ವಾರದಷ್ಟಕ್ಕೆ, ಭ್ರೂಣದ ಜೀವಕೋಶಗಳು ಮೂರು ಪದರಗಳಾಗಿ ಬದಲಾಗಿ ವ್ಯವಸ್ಥಿತವಾಗಿ ರೂಪುಗೊಳ್ಳುತ್ತೆ. ಹೊರಗಿನ ಪದರದಲ್ಲಿರೋ ಜೀವಕೋಶಗಳು, ನರ, ಮೆದುಳು, ಬಾಯಿ, ಹೊರ ಚರ್ಮ ಮತ್ತು ಇನ್ನೂ ಬೇರೆ ಜೀವಕೋಶಗಳಾಗಿ ಬದಲಾಗುತ್ತೆ. ಮಧ್ಯದ ಪದರದ ಜೀವಕೋಶಗಳು ರಕ್ತ, ಮೂಳೆಗಳು, ಮೂತ್ರಪಿಂಡಗಳು, ಸ್ನಾಯುಗಳು ಮತ್ತು ಬೇರೆ ಅಂಗಾಂಶಗಳಾಗಿ ಬದಲಾಗುತ್ತೆ. ಒಳ ಪದರದ ಜೀವಕೋಶಗಳು ಶ್ವಾಸಕೋಶಗಳು, ಮೂತ್ರಕೋಶಗಳು ಮತ್ತು ಜೀರ್ಣಾಂಗ ವ್ಯವಸ್ಥೆಯ ಅಂಗಗಳಾಗಿ ಬದಲಾಗುತ್ತೆ.

ಗರ್ಭದಲ್ಲಿರುವ ಮಗು ಬೆಳೆದಂತೆ, ಜೀವಕೋಶಗಳು ವಿಭಜನೆಯಾಗಿ 200 ಕ್ಕೂ ಹೆಚ್ಚು ಬೇರೆ ಬೇರೆ ರೀತಿಯ ಜೀವಕೋಶಗಳಾಗಿ ಬದಲಾಗುತ್ತೆ.

 ಬೆಳವಣಿಗೆಯ ಉದ್ದಕ್ಕೂ, ಕೆಲವು ಜೀವಕೋಶಗಳು ಭ್ರೂಣದೊಳಗೆ ಪ್ರತ್ಯೇಕವಾಗಿ ಅಥವಾ ಗುಂಪುಗಳಾಗಿ ಭ್ರೂಣದ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗುತ್ತಿರುತ್ತೆ. ಇನ್ನು ಬೇರೆ ಜೀವಕೋಶಗಳು ಗುಂಪುಗಳಾಗಿ ಸೇರಿ ಕೆಲವು ಕಾಗದದ ಹಾಳೆಗಳಂತೆ ಚಪ್ಪಟೆಯಾಗುತ್ತೆ, ಹಗ್ಗಗಳಂತೆ ಸುರುಳಿಯಾಗುತ್ತೆ ಅಥವಾ ಮಡಚಿಕೊಳ್ಳುತ್ತೆ. ಜೀವಕೋಶಗಳು ಒಳ್ಳೆ ಸಾಮರಸ್ಯದಿಂದ ಒಟ್ಟಿಗೆ ಕೆಲಸ ಮಾಡೋದರಿಂದ ಇದೆಲ್ಲವೂ ಸಾಧ್ಯ! ಉದಾಹರಣೆಗೆ, ಒಂದು ಹಂತದಲ್ಲಿ, ಜೀವಕೋಶಗಳ ಹಾಳೆಗಳು ತಮ್ಮನ್ನು ಸಣ್ಣ ಕೊಳವೆಗಳಾಗಿ, ಸುರುಳಿಯಾಗಿ ಸುತ್ತಿಕೊಳ್ಳುತ್ತೆ. ಇದು ಭ್ರೂಣದಾದ್ಯಂತ ಒಂದೇ ಸಮಯದಲ್ಲಿ ಅನೇಕ ಸ್ಥಳಗಳಲ್ಲಿ ಆಗುತ್ತೆ. ಆಮೇಲೆ, ಈ ಕೊಳವೆಗಳು ಉದ್ದವಾಗಿ ಬೆಳೆದು ಕವಲೊಡೆಯುತ್ತೆ. ಕೊನೆಗೆ, ಇದೆಲ್ಲಾ ಒಟ್ಟಾಗಿ ದೇಹದ ರಕ್ತಪರಿಚಲನಾ ವ್ಯವಸ್ಥೆಯಾಗಿ ಬದಲಾಗುತ್ತೆ.

 ಆರೋಗ್ಯವಂತ ಮಗು ಹುಟ್ಟೋ ಸಮಯದಷ್ಟಕ್ಕೆ, ಕೋಟ್ಯಂತರ ಜೀವಕೋಶಗಳು ಸರಿಯಾದ ರೀತಿಯಲ್ಲಿ, ಸರಿಯಾದ ಸ್ಥಳದಲ್ಲಿ ಮತ್ತು ಸರಿಯಾದ ಸಮಯದಲ್ಲಿ ಬದಲಾಗಿ ಬೇರೆ ಬೇರೆ ಅಂಗಗಳಾಗಿ ರೂಪುಗೊಂಡಿರುತ್ತೆ.

 ನೀವೇನು ನೆನಸುತ್ತೀರಿ? ಜೀವಕೋಶಗಳ ಬದಲಾಗೋ ಅದ್ಭುತ ಸಾಮರ್ಥ್ಯ ವಿಕಾಸದಿಂದ ಬಂತಾ? ಅಥವಾ ಸೃಷ್ಟಿಕರ್ತ ವಿನ್ಯಾಸಿಸಿದನಾ?