ಮಾಹಿತಿ ಇರುವಲ್ಲಿ ಹೋಗಲು

ಬೈಬಲ್‌ ವಚನಗಳ ವಿವರಣೆ

ರೋಮನ್ನರಿಗೆ 12:2—“ನಿಮ್ಮ ಯೋಚಿಸೋ ವಿಧಾನವನ್ನ ಬದಲಾಯಿಸೋಕೆ ಬಿಟ್ಟುಕೊಡಿ”

ರೋಮನ್ನರಿಗೆ 12:2—“ನಿಮ್ಮ ಯೋಚಿಸೋ ವಿಧಾನವನ್ನ ಬದಲಾಯಿಸೋಕೆ ಬಿಟ್ಟುಕೊಡಿ”

“ಇನ್ಮುಂದೆ ಈ ಲೋಕ ನಿಮ್ಮನ್ನ ರೂಪಿಸೋಕೆ ಬಿಡಬೇಡಿ. ಬದಲಿಗೆ ದೇವರು ನಿಮ್ಮ ಯೋಚಿಸೋ ವಿಧಾನವನ್ನ ಬದಲಾಯಿಸೋಕೆ ಬಿಟ್ಟುಕೊಡಿ. ಆಗ ದೇವರು ಇಷ್ಟಪಡೋ ವಿಷ್ಯಗಳು ಯಾವಾಗ್ಲೂ ಒಳ್ಳೇದಾಗಿ, ಪರಿಪೂರ್ಣವಾಗಿ, ಸರಿಯಾಗಿ ಇರುತ್ತೆ ಅಂತ ಪರೀಕ್ಷಿಸಿ ಅರ್ಥ ಮಾಡ್ಕೊಳ್ತೀರ.”—ರೋಮನ್ನರಿಗೆ 12:2, ಹೊಸ ಲೋಕ ಭಾಷಾಂತರ

“ಇಹಲೋಕದ ನಡವಳಿಕೆಯನ್ನು ಅನುಸರಿಸದೆ ನೂತನಮನಸ್ಸನ್ನು ಹೊಂದಿಕೊಂಡು ಪರಲೋಕಭಾವದವರಾಗಿರಿ. ಹೀಗಾದರೆ ದೇವರ ಚಿತ್ತಕ್ಕನುಸಾರವಾದದ್ದು ಅಂದರೆ ಉತ್ತಮವಾದದ್ದೂ ಮೆಚ್ಚಿಕೆಯಾದದ್ದೂ ದೋಷವಿಲ್ಲದ್ದೂ ಯಾವ ಯಾವದೆಂದು ವಿವೇಚಿಸಿ ತಿಳುಕೊಳ್ಳುವಿರಿ.”—ರೋಮನ್ನರಿಗೆ 12:2, ಸತ್ಯವೇದ.

ರೋಮನ್ನರಿಗೆ 12:2—ಅರ್ಥ

ದೇವರನ್ನು ಮೆಚ್ಚಿಸಲು ಬಯಸುವವರು ನಕಾರಾತ್ಮಕ ಯೋಚನೆಗಳನ್ನು ಮಾತ್ರವಲ್ಲ ಗುಣಗಳನ್ನು ಸಹ ತಿರಸ್ಕರಿಸಬೇಕು.ತಮ್ಮನ್ನು ಬದಲಾಯಿಸಿಕೊಳ್ಳುವಂತೆ ದೇವರು ಯಾರನ್ನೂ ಒತ್ತಾಯ ಮಾಡುವುದಿಲ್ಲ. ದೇವರು ದಯಾಮಯಿ ಆತನು ಹೇಳೋದೆಲ್ಲಾ ತಮ್ಮ ಒಳ್ಳೇದಕ್ಕೆ ಅಂತ ಒಪ್ಪಿಕೊಳ್ಳುವವರು ದೇವರ ಮೇಲಿರೋ ಪ್ರೀತಿಯ ಕಾರಣ ಬದಲಾವಣೆಗಳನ್ನು ಮಾಡಿಕೊಳ್ಳುತ್ತಾರೆ.—ಯೆಶಾಯ 48:17.

“ಇನ್ಮುಂದೆ ಈ ಲೋಕ ನಿಮ್ಮನ್ನ ರೂಪಿಸೋಕೆ ಬಿಡಬೇಡಿ.” ಈ “ಲೋಕ” ಅಂದರೆ ದೇವರಿಗೆ ಇಷ್ಟವಾಗದಿರೋ ತರ ಯೋಚಿಸುವವರು ಅಥವಾ ನಡಕೊಳ್ಳುವವರು. ಇದು ಅವರ ಮಟ್ಟಗಳು, ಮೌಲ್ಯಗಳು, ರೂಢಿಗಳು, ನಡವಳಿಕೆಗಳ ಬಗ್ಗೆ ಹೇಳುತ್ತೆ. (1 ಯೋಹಾನ 2:15-17) ಈ ಲೋಕ ಜನರ ಮನೋಭಾವ, ಯೋಚನೆ, ಗುಣಗಳನ್ನ ಬದಲಾಯಿಸಿಕೊಳ್ಳೋ ಹಾಗೆ ಒತ್ತಡ ಹಾಕುತ್ತದೆ. ದೇವರ ಇಷ್ಟದ ಪ್ರಕಾರ ಒಬ್ಬ ವ್ಯಕ್ತಿ ಇರಬೇಕಂದ್ರೆ ಅವನು ಈ ಲೋಕದ ಒತ್ತಡವನ್ನ ಜಯಿಸಬೇಕಾಗುತ್ತೆ. ಇಲ್ಲದಿದ್ರೆ ಅವನು ತನಗೆ ಹಾನಿಮಾಡಿಕೊಳ್ಳೋ ಗುಣಗಳನ್ನ ಬೆಳೆಸಿಕೊಳ್ತಾನೆ. ಇದು ದೇವರಿಂದ ಅವನನ್ನು ದೂರ ಮಾಡಿಬಿಡುತ್ತದೆ.—ಎಫೆಸ 2:1-3; 4:17-19.

“ದೇವರು ನಿಮ್ಮ ಯೋಚಿಸೋ ವಿಧಾನವನ್ನ ಬದಲಾಯಿಸೋಕೆ ಬಿಟ್ಟುಕೊಡಿ.” ಒಬ್ಬ ವ್ಯಕ್ತಿ ತನ್ನ ಮನಸಿನ ಆಳದಲ್ಲಿ ಯೋಚಿಸುವ ರೀತಿಯನ್ನೂ ಬದಲಾಯಿಸಿಕೊಳ್ಳುವ ಅವಶ್ಯಕತೆ ಇದೆ. ಎಷ್ಟರಮಟ್ಟಿಗೆ ನಾವು ಬದಲಾವಣೆಯನ್ನ ಮಾಡಿಕೊಳ್ಳಬೇಕು ಅನ್ನೋದನ್ನ ಈ ವಚನದಲ್ಲಿ ಉಪಯೋಗಿಸಿರೊ ಗ್ರೀಕ್‌ ಪದದಿಂದ ಗೊತ್ತಾಗುತ್ತೆ. “ಬದಲಾಯಿಸೋಕೆ ಬಿಟ್ಟುಕೊಡಿ” ಅಂದ್ರೆ ಒಂದು ಕಂಬಳಿ ಹುಳು ಚಿಟ್ಟೆಯಾಗಿ ಬದಲಾಗೋದನ್ನ ಸೂಚಿಸುತ್ತೆ. ಅಂದರೆ ದೇವರನ್ನ ಆರಾಧಿಸುವವರು “ಹೊಸ ವ್ಯಕ್ತಿತ್ವವನ್ನ” ಬೆಳಸಿಕೊಳ್ಳಲೆಬೇಕು ಅಂತ ಅರ್ಥ.—ಎಫೆಸ 4:23, 24; ಕೊಲೊಸ್ಸೆ 3:9, 10.

“ದೇವರು ಇಷ್ಟಪಡೋ ವಿಷ್ಯಗಳು ಯಾವಾಗ್ಲೂ ಒಳ್ಳೇದಾಗಿ, ಪರಿಪೂರ್ಣವಾಗಿ, ಸರಿಯಾಗಿ ಇರುತ್ತೆ ಅಂತ ಪರೀಕ್ಷಿಸಿ ಅರ್ಥ ಮಾಡ್ಕೊಳ್ತೀರ.” ದೇವರು ತನ್ನನ್ನ ಆರಾಧಿಸುವವರು, ತಾವು ನಂಬುವ ವಿಷಯಗಳನ್ನ ಚೆನ್ನಾಗಿ ಅರ್ಥಮಾಡಿಕೊಂಡಿರಬೇಕು ಅಂತ ಇಷ್ಟಪಡ್ತಾನೆ. ಅಂಥ ವ್ಯಕ್ತಿ ದೇವರ ವಾಕ್ಯವನ್ನ ಓದುತ್ತಾನೆ, ಓದಿದ ಪ್ರಕಾರ ನಡಕೊಳ್ತಾನೆ ಮತ್ತು ದೇವರ ನಿಯಮಗಳನ್ನ ಪಾಲಿಸಿ ಜೀವನದಲ್ಲಿ ಸಂತೋಷವಾಗಿ ಇರ್ತಾನೆ. ದೇವರ ಮಾತು ಕೇಳಿದರೆ ಮಾತ್ರ ಜೀವನದಲ್ಲಿ ನಿಜ ಸಂತೋಷ ಸಿಗುತ್ತೆ ಅನ್ನೋದನ್ನ ಅರ್ಥಮಾಡಿಕೊಳ್ತಾನೆ.—ಕೀರ್ತನೆ 34:8.

ರೋಮನ್ನರಿಗೆ 12:2—ಸಂದರ್ಭ

ರೋಮನ್ನರಿಗೆ ಅಧ್ಯಾಯ 12 ದೇವರು ನಮ್ಮ ಆರಾಧನೆಯನ್ನ ಒಪ್ಕೊಬೇಕಾದ್ರೆ ಏನೆಲ್ಲಾ ಮಾಡಬೇಕು ಅಂತ ವಿವರಿಸುತ್ತೆ. ದೇವರ ಮೇಲಿನ ನಂಬಿಕೆ ಬರೀ ಒಂದು ಭಾವನಾತ್ಮಕ ವಿಷ್ಯನೋ ಅಥವಾ ಕುರುಡು ನಂಬಿಕೆಯಾಗಿ ಇರಬಾರದು. ಬದಲಾಗಿ “ಯೋಚನಾ ಸಾಮರ್ಥ್ಯ”ವನ್ನ ಉಪಯೋಗಿಸಿ ವಿಷಯಗಳನ್ನ ಚೆನ್ನಾಗಿ ಅರ್ಥ ಮಾಡಿಕೊಂಡು ಜೀವನದ ಪ್ರತಿಯೊಂದು ಸಂದರ್ಭದಲ್ಲೂ ಅದರ ಪ್ರಕಾರನೇ ನಡಕೊಳ್ಳಬೇಕು. (ರೋಮನ್ನರಿಗೆ 12:1, 3) ಈ ಅಧ್ಯಾಯ ದೇವರಿಗೆ ಇಷ್ಟವಾಗುವ ರೀತಿಯಲ್ಲಿ ನಡಕೊಳ್ಳೋದು ಹೇಗೆ, ಬೇರೆಯವರ ಜೊತೆ ಹೇಗೆ ವ್ಯವಹರಿಸಬೇಕು ಮತ್ತು ಬೇರೆಯವರು ನೋವು ಮಾಡಿದಾಗ ನಾವು ಏನು ಮಾಡಬೇಕು ಅನ್ನೋದನ್ನ ತಿಳಿಸುತ್ತೆ.—ರೋಮನ್ನರಿಗೆ 12:9-21.