ಮಾಹಿತಿ ಇರುವಲ್ಲಿ ಹೋಗಲು

ಸತ್ತವರು ಮತ್ತೆ ಬದುಕುವುದರ ಬಗ್ಗೆ ಬೈಬಲ್‌ ಏನು ಹೇಳುತ್ತದೆ?

ಸತ್ತವರು ಮತ್ತೆ ಬದುಕುವುದರ ಬಗ್ಗೆ ಬೈಬಲ್‌ ಏನು ಹೇಳುತ್ತದೆ?

ಬೈಬಲ್‌ ಕೊಡುವ ಉತ್ತರ

 ಸತ್ತವರು ಮತ್ತೆ ಬದುಕುವುದು ಅಥವಾ “ಪುನರುತ್ಥಾನ” ಅನ್ನುವುದಕ್ಕೆ ಗ್ರೀಕ್‌ ಭಾಷೆಯಲ್ಲಿರುವ ಪದ ಅನಾಸ್ಟಾಸಿಸ್‌. ಇದರ ಅರ್ಥ “ಎದ್ದೇಳುವುದು” ಅಥವಾ “ಮತ್ತೆ ಎದ್ದು ನಿಲ್ಲುವುದು.” ಸತ್ತಿರುವ ವ್ಯಕ್ತಿಗೆ ಜೀವ ಕೊಟ್ಟು ಮೊದಲಿನ ತರ ಜೀವಿಸುವಂತೆ ಮಾಡುವುದೇ ಪುನರುತ್ಥಾನ.—1 ಕೊರಿಂಥ 15:12, 13.

 ಹೀಬ್ರು ಪವಿತ್ರ ಗ್ರಂಥದಲ್ಲಿ (ಹಳೇ ಒಡಂಬಡಿಕೆ) “ಪುನರುತ್ಥಾನ” ಅನ್ನುವ ಪದ ಇಲ್ಲ. ಆದರೆ ಸತ್ತವರು ಮತ್ತೆ ಬದುಕುತ್ತಾರೆಂದು ಇದೆ. ಉದಾಹರಣೆಗೆ, ಪ್ರವಾದಿ ಹೋಶೇಯನ ಮೂಲಕ ದೇವರು ಹೀಗೆ ಮಾತುಕೊಟ್ಟನು: “ನಾನು ಅವ್ರನ್ನ ಸಮಾಧಿಯ ಅಧಿಕಾರದಿಂದ ಬಿಡಿಸ್ತೀನಿ, ನಾನು ಅವ್ರನ್ನ ಮರಣದಿಂದ ಬಿಡಿಸ್ತೀನಿ.”—ಹೋಶೇಯ 13:14; ಯೋಬ 14:13-15; ಯೆಶಾಯ 26:19; ದಾನಿಯೇಲ 12:2, 13.

 ಸತ್ತವರನ್ನು ಮತ್ತೆ ಬದುಕಿಸುವುದು ಎಲ್ಲಿ? ಸತ್ತವರಲ್ಲಿ ಕೆಲವರನ್ನು ದೇವರು ಮತ್ತೆ ಬದುಕಿಸುವುದು ಸ್ವರ್ಗದಲ್ಲಿ ಕ್ರಿಸ್ತನ ಜೊತೆ ರಾಜರಾಗಿ ಆಳಲಿಕ್ಕಾಗಿ. (2 ಕೊರಿಂಥ 5:1; ಪ್ರಕಟನೆ 5:9, 10) ಇದನ್ನೇ ಬೈಬಲ್‌ “ಮೊದಲ್ನೇ ಸಲ ಮತ್ತೆ ಜೀವ ಪಡ್ಕೊಂಡವರು” ಮತ್ತು ‘ಮೊದ್ಲು ಜೀವ ಪಡ್ಕೊಳ್ಳುವವರು’ ಎಂದು ಹೇಳುತ್ತದೆ. ಈ ವಚನಗಳಲ್ಲಿ ಮೊದಲನೇ ಅಥವಾ ಮೊದಲು ಎಂಬ ಪದಗಳು ಬೇರೆಯವರು ಕೂಡ ಮತ್ತೆ ಜೀವ ಪಡೆದುಕೊಳ್ಳುತ್ತಾರೆ ಎಂದು ಸೂಚಿಸುತ್ತವೆ. (ಪ್ರಕಟನೆ 20:5; ಫಿಲಿಪ್ಪಿ 3:11) ಇವರು ಕೋಟ್ಯಾಂತರ ಜನ ಇರುತ್ತಾರೆ ಮತ್ತು ಇದೇ ಭೂಮಿಯ ಮೇಲೆ ಖುಷಿಯಾಗಿ ಜೀವಿಸುತ್ತಾರೆ.—ಕೀರ್ತನೆ 37:29.

 ಸತ್ತವರನ್ನು ಮತ್ತೆ ಬದುಕಿಸುವುದು ಹೇಗೆ? ದೇವರು ಯೇಸುವಿಗೆ ಸತ್ತವರನ್ನು ಮತ್ತೆ ಬದುಕಿಸಲು ಶಕ್ತಿ ಕೊಟ್ಟಿದ್ದಾನೆ. (ಯೋಹಾನ 11:25) ‘ಸಮಾಧಿಗಳಲ್ಲಿ ಇರುವವರನ್ನೆಲ್ಲ’ ಯೇಸು ಮತ್ತೆ ಜೀವಂತವಾಗಿ ಎಬ್ಬಿಸುತ್ತಾನೆ. ಜೀವಂತವಾಗಿ ಎದ್ದು ಬರುವ ಪ್ರತಿಯೊಬ್ಬರ ಗುಣ, ಸ್ವರೂಪ, ವ್ಯಕ್ತಿತ್ವ, ನೆನಪು ಎಲ್ಲ ಮೊದಲು ಹೇಗಿತ್ತೋ ಹಾಗೇ ಇರುತ್ತದೆ. (ಯೋಹಾನ 5:28, 29) ಸ್ವರ್ಗಕ್ಕೆ ಹೋಗಲು ಪುನರುತ್ಥಾನ ಆಗುವವರಿಗೆ ಕೊಡಲಾಗುವ ದೇಹ ನಮ್ಮ ಕಣ್ಣಿಗೆ ಕಾಣಲ್ಲ. ಭೂಮಿಯಲ್ಲಿ ಜೀವನ ಮಾಡಲು ಪುನರುತ್ಥಾನ ಆಗುವವರಿಗೆ ಏನೂ ಕುಂದುಕೊರತೆ ಇಲ್ಲದ ಆರೋಗ್ಯಕರ ದೇಹವನ್ನು ಕೊಡಲಾಗುತ್ತದೆ.—ಯೆಶಾಯ 33:24; 35:5, 6; 1 ಕೊರಿಂಥ 15:42-44, 50.

 ಯಾರೆಲ್ಲ ಜೀವಂತವಾಗಿ ಬರುತ್ತಾರೆ? ಬೈಬಲ್‌ ಹೀಗೆ ಹೇಳುತ್ತದೆ: “ನೀತಿವಂತರು ಮತ್ತು ಅನೀತಿವಂತರು ಮತ್ತೆ ಬದುಕೋ ತರ ದೇವರು ಮಾಡ್ತಾನೆ.” (ಅಪೊಸ್ತಲರ ಕಾರ್ಯ 24:15) ನೀತಿವಂತರು ಅಂದರೆ ನೋಹ, ಸಾರ, ಅಬ್ರಹಾಮ ಇಂಥ ನಂಬಿಗಸ್ತ ಜನರು. (ಆದಿಕಾಂಡ 6:9; ಇಬ್ರಿಯ 11:11; ಯಾಕೋಬ 2:21) ಅನೀತಿವಂತರು ಅಂದರೆ ದೇವರ ಮಟ್ಟಗಳನ್ನು ಕಲಿಯಲು, ಪಾಲಿಸಲು ಅವಕಾಶ ಸಿಗದೆ ತಪ್ಪು ಮಾಡಿದ ಜನರು.

 ಬದಲಾಗುವ ಉದ್ದೇಶನೇ ಇಲ್ಲದೆ ದುಷ್ಟತನ ಮಾಡುತ್ತಾ ಇದ್ದವರು ಪುನರುತ್ಥಾನ ಆಗುವುದಿಲ್ಲ. ಅಂಥವರು ಸತ್ತಾಗ ಅಲ್ಲಿಗೇ ಅವರ ಕಥೆ ಮುಗಿಯಿತು, ಮತ್ತೆ ಜೀವಂತವಾಗಿ ಎದ್ದು ಬರುವುದೇ ಇಲ್ಲ.—ಮತ್ತಾಯ 23:33; ಇಬ್ರಿಯ 10:26, 27.

 ಸತ್ತವರು ಯಾವಾಗ ಜೀವಂತವಾಗಿ ಎದ್ದು ಬರುತ್ತಾರೆ? ಸ್ವರ್ಗಕ್ಕೆ ಹೋಗುವವರ ಪುನರುತ್ಥಾನವು ಕ್ರಿಸ್ತನು ಮತ್ತೆ ಬರುವ ಕಾಲದಲ್ಲಿ ಆಗುತ್ತದೆ ಎಂದು ಬೈಬಲ್‌ ಮೊದಲೇ ತಿಳಿಸಿತ್ತು. ಆ ಕಾಲವು 1914 ರಲ್ಲಿ ಶುರುವಾಯಿತು. (1 ಕೊರಿಂಥ 15:21-23) ಭೂಮಿಯಲ್ಲಿ ಜೀವಿಸುವವರ ಪುನರುತ್ಥಾನವು ಯೇಸು ಕ್ರಿಸ್ತನ ಸಾವಿರ ವರ್ಷದ ಆಳ್ವಿಕೆಯಲ್ಲಿ ಆಗುತ್ತದೆ. ಆಗ ಈ ಭೂಮಿ ಒಂದು ಪರದೈಸ್‌ ಅಂದರೆ ಸುಂದರ ತೋಟದಂತೆ ಆಗುತ್ತದೆ.—ಲೂಕ 23:43; ಪ್ರಕಟನೆ 20:6, 12, 13.

 ಸತ್ತವರು ಜೀವಂತವಾಗಿ ಬರುತ್ತಾರೆಂದು ಏಕೆ ನಂಬಬಹುದು? 9 ಪುನರುತ್ಥಾನಗಳ ಬಗ್ಗೆ ಬೈಬಲಲ್ಲಿ ಇದೆ. ಪ್ರತಿಯೊಂದು ಪುನರುತ್ಥಾನಕ್ಕೂ ಪ್ರತ್ಯಕ್ಷ ಸಾಕ್ಷಿಗಳು ಇದ್ದರೆಂಬ ವಿವರವೂ ಇದೆ. (1 ಅರಸು 17:17-24; 2 ಅರಸು 4:32-37; 13:20, 21; ಲೂಕ 7:11-17; 8:40-56; ಯೋಹಾನ 11:38-44; ಅಪೊಸ್ತಲರ ಕಾರ್ಯ 9:36-42; 20:7-12; 1 ಕೊರಿಂಥ 15:3-6) ಸತ್ತಿದ್ದ ಲಾಜರನನ್ನು ಯೇಸು ಮತ್ತೆ ಜೀವಂತವಾಗಿ ಎಬ್ಬಿಸಿದ್ದು ತುಂಬ ಆಸಕ್ತಿಕರ. ಏಕೆಂದರೆ ಲಾಜರ ಸತ್ತು 4 ದಿನ ಆಗಿತ್ತು. ಅಲ್ಲದೆ ಗುಂಪು ಕೂಡಿದ್ದ ಜನರ ಕಣ್ಣೆದುರಲ್ಲೇ ಯೇಸು ಅವನನ್ನು ಜೀವಂತವಾಗಿ ಎಬ್ಬಿಸಿದನು. (ಯೋಹಾನ 11:39, 42) ಯೇಸುವಿನ ವಿರೋಧಿಗಳಿಗೂ ಆ ಅದ್ಭುತದ ಬಗ್ಗೆ ಪ್ರಶ್ನೆ ಮಾಡಲಿಕ್ಕೆ ಆಗಲಿಲ್ಲ. ಹಾಗಾಗಿ ಅವರು ಯೇಸು ಮತ್ತು ಲಾಜರ ಇಬ್ಬರನ್ನೂ ಕೊಲ್ಲಲು ಹೊಂಚು ಹಾಕಿದರು.—ಯೋಹಾನ 11:47, 53; 12:9-11.

 ಸರ್ವಶಕ್ತ ದೇವರಿಗೆ ಸತ್ತವರನ್ನು ಮತ್ತೆ ಬದುಕಿಸುವಷ್ಟು ಅಪಾರ ಶಕ್ತಿ ಇದೆ, ಆಸೆನೂ ಇದೆ ಎಂದು ಬೈಬಲ್‌ ಹೇಳುತ್ತದೆ. ಆತನು ಪುನರುತ್ಥಾನ ಮಾಡಲಿಕ್ಕಿರುವ ಪ್ರತಿಯೊಬ್ಬರ ಸಂಪೂರ್ಣ ವಿವರವನ್ನು ನೆನಪಿಟ್ಟುಕೊಂಡಿದ್ದಾನೆ. ನಮ್ಮಿಂದ ಊಹಿಸಿಲಿಕ್ಕೂ ಆಗದಿರುವಷ್ಟು ನೆನಪಿನಶಕ್ತಿ ಆತನಿಗಿದೆ. (ಯೋಬ 37:23; ಮತ್ತಾಯ 10:30; ಲೂಕ 20:37, 38) ಸತ್ತವರನ್ನು ಮತ್ತೆ ಬದುಕಿಸಲು ದೇವರಿಂದ ಆಗುತ್ತದೆ ಮತ್ತು ಆ ಸಮಯಕ್ಕಾಗಿ ಆಸೆಯಿಂದ ಕಾಯುತ್ತಾ ಇದ್ದಾನೆ. ಅದಕ್ಕೇ ಬೈಬಲ್‌ ಹೀಗೆ ಹೇಳುತ್ತದೆ: “ನಿನ್ನ ಕೈಯಾರೆ ಸೃಷ್ಟಿ ಮಾಡಿದ ನನ್ನನ್ನ ಮತ್ತೆ ನೋಡೋಕೆ ಹಂಬಲಿಸ್ತೀಯ.”—ಯೋಬ 14:15.

ಪುನರುತ್ಥಾನದ ಬಗ್ಗೆ ತಪ್ಪು ಕಲ್ಪನೆಗಳು

 ತಪ್ಪು: ದೇಹ ಮತ್ತು ಆತ್ಮ ಮತ್ತೆ ಒಂದಾಗುವುದೇ ಪುನರುತ್ಥಾನ.

 ಸರಿ: ಒಬ್ಬ ಸತ್ತ ಮೇಲೆ ಅವನು ಇಲ್ಲದೇ ಹೋಗುತ್ತಾನೆ ಎಂದು ಬೈಬಲ್‌ ಕಲಿಸುತ್ತದೆ. ದೇಹ ಸತ್ತ ಮೇಲೆ ಆತ್ಮ ಇರುತ್ತದೆ, ಅದಕ್ಕೆ ಸಾವಿಲ್ಲ ಎಂದು ಬೈಬಲ್‌ ಕಲಿಸುವುದಿಲ್ಲ. (ಪ್ರಸಂಗಿ 9:5, 10) ದೇವರು ಒಬ್ಬ ವ್ಯಕ್ತಿಯನ್ನು ಪುನರುತ್ಥಾನ ಮಾಡುವಾಗ ಅವನಿಗೆ ಒಂದು ಹೊಸ ದೇಹವನ್ನು ಕೊಡುತ್ತಾನೆ. ದೇಹ ಮತ್ತು ಆತ್ಮವನ್ನು ಒಂದು ಮಾಡಲ್ಲ.

 ತಪ್ಪು: ಕೆಲವರನ್ನು ಪುನರುತ್ಥಾನ ಮಾಡಿ ತಕ್ಷಣ ಸಾಯಿಸಲಾಗುತ್ತದೆ.

 ಸರಿ: ಪುನರುತ್ಥಾನ ಆದವರಲ್ಲಿ “ಕೆಟ್ಟ ಕೆಲಸ ಮಾಡ್ತಾ ಇದ್ದವರು ನ್ಯಾಯತೀರ್ಪಿಗಾಗಿ ಎದ್ದು ಬರ್ತಾರೆ” ಎಂದು ಬೈಬಲ್‌ ಹೇಳುತ್ತದೆ. (ಯೋಹಾನ 5:29) ಪುನರುತ್ಥಾನ ಆದ ಮೇಲೆ ಅವರು ಮಾಡುವ ತಪ್ಪಿಗೆ ನ್ಯಾಯತೀರ್ಪು ಸಿಗುತ್ತದೆಯೇ ಹೊರತು ಅವರು ಸಾಯುವುದಕ್ಕಿಂತ ಮುಂಚೆ ಮಾಡಿದ ತಪ್ಪಿಗೆ ನ್ಯಾಯತೀರ್ಪು ಆಗುವುದಿಲ್ಲ. ಯೇಸು ಹೀಗಂದನು: “ಸತ್ತವರು ದೇವರ ಮಗನ ಸ್ವರ ಕೇಳೋ ಸಮಯ ಬರುತ್ತೆ ... ಆತನು ಹೇಳೋದನ್ನ ಕೇಳಿಸ್ಕೊಂಡು ಪಾಲಿಸೋರು ಬದುಕ್ತಾರೆ.” (ಯೋಹಾನ 5:25) ಪುನರುತ್ಥಾನ ಆದ ಮೇಲೆ ‘ಕೇಳಿಸಿಕೊಳ್ಳುವ’ ಅಂದರೆ ಕಲಿಯುವ ವಿಷಯಗಳ ಪ್ರಕಾರ ನಡೆಯುವವರ ಹೆಸರುಗಳನ್ನು ‘ಜೀವದ ಸುರುಳಿಯಲ್ಲಿ’ ಬರೆಯಲಾಗುತ್ತದೆ.—ಪ್ರಕಟನೆ 20:12, 13.

 ತಪ್ಪು: ಒಬ್ಬ ವ್ಯಕ್ತಿ ಸಾಯುವುದಕ್ಕಿಂತ ಮುಂಚೆ ಅವನಿಗೆ ಯಾವ ದೇಹ ಇತ್ತೋ ಅದೇ ದೇಹವನ್ನು ಪುನರುತ್ಥಾನ ಆದಾಗ ಕೊಡಲಾಗುತ್ತದೆ.

 ಸರಿ: ಸತ್ತ ಮೇಲೆ ಒಬ್ಬನ ದೇಹ ಕೊಳೆತು ಮಣ್ಣಿಗೆ ಮಣ್ಣಾಗಿ ಹೋಗುತ್ತದೆ.—ಪ್ರಸಂಗಿ 3:19, 20.