ಮಾಹಿತಿ ಇರುವಲ್ಲಿ ಹೋಗಲು

ಯೇಸುವೇ ನಮ್ಮ ರಕ್ಷಕ—ಇದರ ಅರ್ಥ ಏನು?

ಯೇಸುವೇ ನಮ್ಮ ರಕ್ಷಕ—ಇದರ ಅರ್ಥ ಏನು?

ಬೈಬಲ್‌ ಕೊಡೋ ಉತ್ತರ

 ಯೇಸು ನಮ್ಮೆಲ್ಲರಿಗಾಗಿ ತನ್ನ ಜೀವವನ್ನೇ ಕೊಟ್ಟನು. ದೇವರಿಗೆ ನಂಬಿಗಸ್ತರಾಗಿ ಇರುವವರನ್ನ ರಕ್ಷಿಸಲಿಕ್ಕಾಗಿ ಆತನು ತನ್ನ ಜೀವವನ್ನ ಬಿಡುಗಡೆ ಬೆಲೆಯಾಗಿ ಕೊಟ್ಟನು. (ಮತ್ತಾಯ 20:28) ಹಾಗಾಗಿಯೇ ಯೇಸುವನ್ನು “ಲೋಕದ ರಕ್ಷಕ” ಅಂತ ಬೈಬಲ್‌ ಹೇಳ್ತದೆ. (1 ಯೋಹಾನ 4:14) ಅಲ್ಲದೇ ಬೈಬಲ್‌ ಇನ್ನೇನು ಹೇಳುತ್ತೆ ನೋಡಿ, “ಬೇರೆ ಯಾರಿಂದಲೂ ರಕ್ಷಣೆಯು ದೊರಕುವುದಿಲ್ಲ; ಆ ಹೆಸರಿನಿಂದಲೇ ಹೊರತು ಆಕಾಶದ ಕೆಳಗೆ ಮನುಷ್ಯರಲ್ಲಿ ಕೊಡಲ್ಪಟ್ಟಿರುವ ಬೇರೆ ಯಾವ ಹೆಸರಿನಿಂದಲೂ ನಾವು ರಕ್ಷಣೆಯನ್ನು ಹೊಂದಸಾಧ್ಯವಿಲ್ಲ.”—ಅಪೊಸ್ತಲರ ಕಾರ್ಯ 4:12.

 ಯೇಸುವಲ್ಲಿ ನಂಬಿಕೆ ಇಡೋ ಪ್ರತಿಯೊಬ್ಬನಿಗಾಗಿ ಆತನು “ಮರಣವನ್ನು ಅನುಭವಿಸಿದನು.” (ಇಬ್ರಿಯ 2:9; ಯೋಹಾನ 3:16) ಆಮೇಲೆ ದೇವರು ಆತನನ್ನ ಜೀವಂತವಾಗಿ ಎಬ್ಬಿಸಿದನು. ಯೇಸು ಆತ್ಮಜೀವಿಯಾಗಿ ಪುನಃ ಸ್ವರ್ಗಕ್ಕೆ ಹೋದನು. (ಅಪೊಸ್ತಲರ ಕಾರ್ಯ 3:15) ಅಲ್ಲಿ ಯೇಸು “ತನ್ನ ಮೂಲಕ ದೇವರ ಸಮೀಪಕ್ಕೆ ಬರುವವರನ್ನು ಸಂಪೂರ್ಣವಾಗಿ ರಕ್ಷಿಸುವುದಕ್ಕೆ ಶಕ್ತನಾಗಿದ್ದಾನೆ. ಏಕೆಂದರೆ ಅವರಿಗೋಸ್ಕರ ಬೇಡಿಕೊಳ್ಳಲು ಆತನು ಯಾವಾಗಲೂ ಜೀವದಿಂದ ಇರುತ್ತಾನೆ.”—ಇಬ್ರಿಯ 7:25.

ನಮಗೋಸ್ಕರ ಯಾಕೆ ಯೇಸು ಬೇಡಬೇಕು?

 ಯಾಕೆಂದರೆ ನಾವೆಲ್ಲ ಪಾಪಿಗಳು. (ರೋಮನ್ನರಿಗೆ 3:23) ನಮಗೂ ದೇವರಿಗೂ ಮಧ್ಯೆ ಈ ಪಾಪ ಒಂದು ಗೋಡೆ ತರ ಇದೆ. ಪಾಪದಿಂದ ನಮಗೆ ಸಾವು ಬಂದಿದೆ. (ರೋಮನ್ನರಿಗೆ 6:23) ಆದ್ರೆ ಯೇಸು ನಮಗಾಗಿ ಜೀವ ಕೊಟ್ಟಿದಾನೆ ಅಂತ ಯಾರು ನಂಬುತ್ತಾರೋ ಅವರಿಗೆ ಆತನು “ಸಹಾಯಕನಾಗಿದ್ದಾನೆ.“ ಇನ್ನೊಂದು ಮಾತಲ್ಲಿ ಹೇಳೋದಾದ್ರೆ ನಮ್ಮ ಪರವಾಗಿ ದೇವರ ಹತ್ರ ಮಾತಾಡ್ತಾನೆ. (1 ಯೋಹಾನ 2:1) ಆತನು ಅವರಿಗೋಸ್ಕರ ದೇವರ ಹತ್ತಿರ ಬೇಡ್ತಾನೆ. ಏನಿಕೋಸ್ಕರ? ನಾವು ಮಾಡೋ ಪ್ರಾರ್ಥನೆಯನ್ನ ದೇವರು ಕೇಳಬೇಕಂತ, ನಮ್ಮ ಪಾಪಗಳನ್ನ ಕ್ಷಮಿಸಬೇಕಂತ ಬೇಡ್ತಾನೆ. ಇದನ್ನ ತಾನು ಬಲಿಯಾಗಿ ಕೊಟ್ಟ ಜೀವದ ಆಧಾರದ ಮೇಲೆ ಮಾಡಬೇಕು ಅಂತ ಕೇಳಿಕೊಳ್ತಾನೆ. (ಮತ್ತಾಯ 1:21; ರೋಮನ್ನರಿಗೆ 8:34) ಈ ಬೇಡಿಕೆಗಳಿಗೆ ದೇವರು ಉತ್ತರ ಕೊಡ್ತಾನೆ. ಯಾಕಂದ್ರೆ ಅವು ದೇವರ ಚಿತ್ತಕ್ಕೆ ಹೊಂದಿಕೆಯಲ್ಲಿವೆ. ಯೇಸುವಿನ ಮೂಲಕ “ಲೋಕವನ್ನು ರಕ್ಷಿಸುವುದಕ್ಕಾಗಿಯೇ” ಆತನನ್ನ ದೇವರು ಈ ಭೂಮಿಗೆ ಕಳಿಸಿದನು.—ಯೋಹಾನ 3:17.

ರಕ್ಷಣೆ ಪಡಿಬೇಕಾದರೆ ಯೇಸುವಿನಲ್ಲಿ ನಂಬಿಕೆ ಇಟ್ಟರೆ ಸಾಕಾ?

 ಸಾಕಾಗಲ್ಲ! ರಕ್ಷಣೆ ಪಡೆಯಲು ಯೇಸು ಮೇಲೆ ನಂಬಿಕೆ ಇಡಬೇಕು ನಿಜ. ಆದರೆ ನಾವು ಇನ್ನು ಏನೋ ಮಾಡಬೇಕು. (ಅಪೊಸ್ತಲರ ಕಾರ್ಯ 16:30, 31) ಬೈಬಲ್‌ ಏನು ಹೇಳ್ತದೆ ಅಂದ್ರೆ, “ಜೀವವಿಲ್ಲದ ದೇಹವು ಸತ್ತದ್ದಾಗಿರುವ ಪ್ರಕಾರವೇ ಕ್ರಿಯೆಗಳಿಲ್ಲದ ನಂಬಿಕೆಯು ಸಹ ಸತ್ತದ್ದಾಗಿದೆ.” (ಯಾಕೋಬ 2:26) ರಕ್ಷಣೆ ಪಡೆಯಲು ನಾವು ಕೆಳಗಿರೋ ವಿಷ್ಯಗಳನ್ನೆಲ್ಲ ಮಾಡಬೇಕು.

  •   ಯೇಸು ಬಗ್ಗೆ, ಆತನ ತಂದೆಯಾದ ಯೆಹೋವನ ಬಗ್ಗೆ ಕಲಿಯಬೇಕು.—ಯೋಹಾನ 17:3.

  •   ಅವರಿಬ್ಬರ ಮೇಲೆ ನಂಬಿಕೆ ಬೆಳಸ್ಕೊಬೇಕು.—ಯೋಹಾನ 12:44; 14:1.

  •   ಅವರ ಮೇಲೆ ನಮಗೆ ನಿಜವಾಗಲೂ ನಂಬಿಕೆ ಇದೆ ಅಂತ ಅವರ ಆಜ್ಞೆಗಳನ್ನ ಪಾಲಿಸೋ ಮೂಲಕ ತೋರಿಸಬೇಕು. (ಲೂಕ 6:46; 1 ಯೋಹಾನ 2:17) ಯೇಸುವನ್ನ “ಕರ್ತನೇ, ಕರ್ತನೇ” ಅಂತ ಹೇಳುವವರೆಲ್ಲ ರಕ್ಷಣೆ ಪಡೆಯಲ್ಲ, ಆತನ “ತಂದೆಯ ಚಿತ್ತವನ್ನು“ ಮಾಡುವವರು ಮಾತ್ರ ರಕ್ಷಣೆ ಪಡಿತಾರೆ ಅಂತ ಯೇಸುನೇ ಹೇಳಿದ್ದಾನೆ.—ಮತ್ತಾಯ 7:21.

  •   ಎಷ್ಟೇ ಕಷ್ಟ ಬಂದ್ರೂ ಯೇಸು ಮತ್ತು ಆತನ ತಂದೆ ಮೇಲೆ ನಂಬಿಕೆ ಕಳ್ಕೊಬೇಡಿ. ಇದರ ಬಗ್ಗೆ ಯೇಸುವೇ ಹೇಳಿರೋದು ಏನಂದ್ರೆ, “ಕಡೇ ವರೆಗೆ ತಾಳಿಕೊಂಡಿರುವವನೇ ರಕ್ಷಿಸಲ್ಪಡುವನು.”—ಮತ್ತಾಯ 24:13.