ಮಾಹಿತಿ ಇರುವಲ್ಲಿ ಹೋಗಲು

ಯೇಸುವಿನ ಬಲಿ ಹೇಗೆ ತುಂಬ ಜನರಿಗೆ ಬಿಡುಗಡೆ ಬೆಲೆಯಾಗಿದೆ?

ಯೇಸುವಿನ ಬಲಿ ಹೇಗೆ ತುಂಬ ಜನರಿಗೆ ಬಿಡುಗಡೆ ಬೆಲೆಯಾಗಿದೆ?

ಬೈಬಲ್‌ ಕೊಡುವ ಉತ್ತರ

 ದೇವರು ಎಲ್ಲ ಮಾನವರನ್ನು ಪಾಪ ಮರಣದಿಂದ ಬಿಡಿಸುವುದು, ರಕ್ಷಿಸುವುದು ಯೇಸುವಿನ ಬಲಿಯ ಮೂಲಕ. ಯೇಸು ಸುರಿಸಿದ ರಕ್ತಕ್ಕೆ ಬೈಬಲಲ್ಲಿ ಬಿಡುಗಡೆ ಬೆಲೆ ಅಂತ ಹೇಳಲಾಗಿದೆ. (ಎಫೆಸ 1:7; 1 ಪೇತ್ರ 1:18, 19) ಅದಕ್ಕೇ ಯೇಸು “ತುಂಬ ಜನ್ರಿಗಾಗಿ ತನ್ನ ಪ್ರಾಣವನ್ನ ಬಿಡುಗಡೆಯ ಬೆಲೆಯಾಗಿ ಕೊಡೋಕೆ” ಬಂದೆ ಅಂತ ಹೇಳಿದನು.—ಮತ್ತಾಯ 20:28.

“ಬಿಡುಗಡೆ ಬೆಲೆ” ಯಾಕೆ ಬೇಕು?

 ದೇವರು ಮೊದಲನೇ ಮನುಷ್ಯನಾದ ಆದಾಮನನ್ನು ಸೃಷ್ಟಿಮಾಡಿದಾಗ ಅವನಲ್ಲಿ ಪಾಪ ಇರಲಿಲ್ಲ, ಅವನು ಪರಿಪೂರ್ಣ ವ್ಯಕ್ತಿ ಆಗಿದ್ದ. ಶಾಶ್ವತವಾಗಿ ಜೀವಿಸುವ ಅವಕಾಶ ಅವನಿಗಿತ್ತು. ಆದರೆ ದೇವರ ಮಾತು ಕೇಳದೆ ಪಾಪ ಮಾಡಿದ್ರಿಂದ ಆ ಅವಕಾಶ ಕಳೆದುಕೊಂಡ. (ಆದಿಕಾಂಡ 3:17-19) ಅವನು ತನ್ನ ಮಕ್ಕಳಿಗೂ ಆ ಪಾಪವನ್ನು ದಾಟಿಸಿದನು. (ರೋಮನ್ನರಿಗೆ 5:12) ಹಾಗಾಗಿ ಆದಾಮ ತನ್ನನ್ನು ತನ್ನ ಮಕ್ಕಳನ್ನು ಪಾಪ ಮತ್ತು ಮರಣಕ್ಕೆ ದಾಸರನ್ನಾಗಿ ‘ಮಾರಿದನು’ ಎಂದು ಬೈಬಲ್‌ ಹೇಳುತ್ತದೆ. (ರೋಮನ್ನರಿಗೆ 7:14) ಎಲ್ಲರೂ ಅಪರಿಪೂರ್ಣರಾಗಿ ಇರುವುದರಿಂದ ಆದಾಮ ಕಳೆದುಕೊಂಡದ್ದನ್ನು ಮತ್ತೆ ಕೊಂಡುಕೊಳ್ಳಲು ಯಾರಿಂದನೂ ಆಗಲಿಲ್ಲ.—ಕೀರ್ತನೆ 49:7, 8.

 ಆದಾಮನ ವಂಶದವರು ಅವರಿಂದ ಏನೂ ಮಾಡಲಿಕ್ಕಾಗದೆ ನಿಸ್ಸಹಾಯಕ ಸ್ಥಿತಿಯಲ್ಲಿ ಇರುವುದನ್ನು ನೋಡಿ ದೇವರಿಗೆ ಕನಿಕರ ಹುಟ್ಟಿತು. (ಯೋಹಾನ 3:16) ದೇವರ ನ್ಯಾಯದ ಮಟ್ಟದ ಪ್ರಕಾರ ಆತನು ಅವರ ಪಾಪಗಳನ್ನು ಕ್ಷಮಿಸಬೇಕಾದರೆ ಏನಾದರೂ ಆಧಾರ ಬೇಕಿತ್ತು. ಆಧಾರ ಇಲ್ಲದೆ ಆ ಪಾಪಗಳನ್ನು ಬಿಟ್ಟುಬಿಡಲು, ಕ್ಷಮಿಸಲು ಆಗಲಿಲ್ಲ. (ಕೀರ್ತನೆ 89:14; ರೋಮನ್ನರಿಗೆ 3:23-26) ದೇವರು ಮನುಷ್ಯರನ್ನು ಪ್ರೀತಿಸುತ್ತಾನೆ. ಹಾಗಾಗಿ ಅವರು ಮಾಡಿದ ಪಾಪಗಳನ್ನು ಕ್ಷಮಿಸಲು ಮತ್ತು ಅದನ್ನು ತೆಗೆದುಹಾಕಲು ಏರ್ಪಾಡು ಮಾಡಿದ್ದಾನೆ. (ರೋಮನ್ನರಿಗೆ 5:6-8) ಬಿಡುಗಡೆಯ ಬೆಲೆಯೇ ಆ ಏರ್ಪಾಡು.

ಬಿಡುಗಡೆ ಬೆಲೆಯಿಂದ ಏನೆಲ್ಲಾ ಪ್ರಯೋಜನ?

 ಬೈಬಲಿನಲ್ಲಿರುವ “ಬಿಡುಗಡೆಯ ಬೆಲೆ” ಅನ್ನುವ ಪದದಲ್ಲಿ 3 ಅಂಶಗಳಿವೆ.

  1.   ಇದು, ಒಂದನ್ನು ಕೊಂಡುಕೊಳ್ಳಲು ಕೊಡುವ ಬೆಲೆ.—ಅರಣ್ಯಕಾಂಡ 3:46, 47.

  2.   ಇದರಿಂದ ಬಿಡುಗಡೆ ಮಾಡಲು, ಬಿಡಿಸಿಕೊಳ್ಳಲು ಆಗುತ್ತದೆ.—ವಿಮೋಚನಕಾಂಡ 21:30.

  3.   ಇದು, ಕಳೆದುಕೊಂಡಿರುವ ಒಂದನ್ನು ಪುನಃ ಕೊಂಡುಕೊಳ್ಳಲು ಕೊಡುವ ಸರಿಸಮವಾದ ಬೆಲೆ. a

 ಯೇಸು ಕ್ರಿಸ್ತನು ತನ್ನ ಬಲಿಯ ಮೂಲಕ ಕೊಟ್ಟ ಬಿಡುಗಡೆ ಬೆಲೆಯಲ್ಲಿ ಈ ಮೂರು ಅಂಶಗಳಿವೆ. ಹೇಗೆಂದು ನೋಡಿ.

  1.   ಕೊಂಡುಕೊಳ್ಳಲು ಕೊಡುವ ಬೆಲೆ. ಕ್ರೈಸ್ತರನ್ನು ದೇವರು “ಬೆಲೆಕೊಟ್ಟು ತಗೊಂಡಿದ್ದಾನೆ” ಅನ್ನುತ್ತದೆ ಬೈಬಲ್‌. (1 ಕೊರಿಂಥ 6:20; 7:23) ಆ ಬೆಲೆ ಯೇಸು ಸುರಿಸಿದ ರಕ್ತವಾಗಿದೆ. ಇದರಿಂದ ಆತನು ‘ಎಲ್ಲ ಭಾಷೆ, ಜಾತಿ, ದೇಶದಿಂದ ದೇವರಿಗೋಸ್ಕರ ಜನ್ರನ್ನ ಕೊಂಡ್ಕೊಂಡನು.’—ಪ್ರಕಟನೆ 5:8, 9.

  2.   ಬಿಡುಗಡೆ. ಯೇಸುವಿನ ಬಲಿಯು “ಬಿಡುಗಡೆ ಬೆಲೆ” ಆಗಿದೆ. ಇದನ್ನು ಕೊಟ್ಟು ನಮ್ಮನ್ನು ಪಾಪದಿಂದ ಬಿಡಿಸಲಾಗಿದೆ.—1 ಕೊರಿಂಥ 1:30; ಕೊಲೊಸ್ಸೆ 1:14; ಇಬ್ರಿಯ 9:15.

  3.   ಸರಿಸಮವಾದ ಬೆಲೆ. ಆದಾಮ ಪರಿಪೂರ್ಣ ಜೀವವನ್ನು ಕಳೆದುಕೊಂಡ. ಯೇಸು ಪರಿಪೂರ್ಣ ಜೀವವನ್ನೇ ಬಲಿಯಾಗಿ ಕೊಟ್ಟ. ಹೀಗೆ ಆದಾಮ ಏನು ಕಳೆದುಕೊಂಡನೋ, ಯೇಸು ಏನು ಬಲಿಯಾಗಿ ಕೊಟ್ಟನೋ ಇವೆರಡೂ ಸಮವಾಗಿದೆ. (1 ಕೊರಿಂಥ 15:21, 22, 45, 46) “ಒಬ್ಬ [ಆದಾಮ] ಮಾತು ಕೇಳದೆ ಇದ್ದಿದ್ರಿಂದ ತುಂಬ ಜನ ಪಾಪಿಗಳಾದ್ರು. ಹಾಗೇ ಒಬ್ಬ [ಯೇಸು] ಮಾತು ಕೇಳಿದ್ರಿಂದ ತುಂಬ ಜನ ನೀತಿವಂತರು ಆಗ್ತಾರೆ” ಅನ್ನುತ್ತದೆ ಬೈಬಲ್‌. (ರೋಮನ್ನರಿಗೆ 5:19) ಈ ವಚನ, ಒಬ್ಬ ಮನುಷ್ಯನ ಸಾವು ಹೇಗೆ ಅನೇಕ ಪಾಪಿಗಳನ್ನು ಬಿಡಿಸಲು ಕೊಡುವ ಬೆಲೆಯಾಗಿದೆ ಎಂದು ವಿವರಿಸುತ್ತದೆ. ನಿಜ ಹೇಳಬೇಕಂದೆರೆ ಯೇಸುವಿನ ಬಲಿಯು ‘ಎಲ್ರನ್ನ ಬಿಡಿಸಲಿಕ್ಕಾಗಿ ಕೊಟ್ಟ ಸರಿಸಮವಾದ ಬಿಡುಗಡೆ ಬೆಲೆ’ ಆಗಿದೆ. ಈ ಬಲಿಯಿಂದ ಪ್ರಯೋಜನ ಪಡೆಯಬೇಕೆಂದು ಯಾರೆಲ್ಲ ಹೆಜ್ಜೆ ತೆಗೆದುಕೊಳ್ಳುತ್ತಾರೋ ಅವರೆಲ್ಲರಿಗೂ ಪಾಪ ಮರಣದಿಂದ ಬಿಡುಗಡೆ ಸಿಗುತ್ತದೆ.—1 ತಿಮೊತಿ 2:5, 6.

a ಬೈಬಲಿನಲ್ಲಿರುವ “ಬಿಡುಗಡೆ ಬೆಲೆ” ಎಂಬ ಪದಕ್ಕೆ ಮೂಲ ಭಾಷೆಗಳಲ್ಲಿರುವ ಪದಗಳ ಅರ್ಥ ಮೌಲ್ಯ, ಕೊಟ್ಟ ಬೆಲೆ ಎಂದಾಗಿದೆ. ಉದಾಹರಣೆಗೆ, ಬಿಡುಗಡೆ ಬೆಲೆಗೆ ಹೀಬ್ರು ಪದ ಕಾಫಾರ್‌. ಇದು ಕ್ರಿಯಾಪದ, ಅರ್ಥ “ಮುಚ್ಚು.” ಇದು ಪಾಪ ಮುಚ್ಚುವುದನ್ನು ಅಂದರೆ ಪಾಪಪರಿಹಾರವನ್ನು ಸೂಚಿಸುತ್ತದೆ. (ಕೀರ್ತನೆ 65:3) ಕೋಫರ್‌ ಅನ್ನುವುದು ನಾಮಪದ. ಇದು, ಮುಚ್ಚಲು ಕೊಡುವ ಬೆಲೆಗೆ ಅಥವಾ ಬಿಡಿಸಿಕೊಳ್ಳುವುದಕ್ಕೆ ಸೂಚಿಸುತ್ತದೆ. (ವಿಮೋಚನಕಾಂಡ 21:30) ಲಿಟ್ರೋನ್‌ ಎಂಬ ಗ್ರೀಕ್‌ ಪದವನ್ನು ಸಾಮಾನ್ಯವಾಗಿ ಬಿಡುಗಡೆ ಬೆಲೆ ಎಂದು ಭಾಷಾಂತರ ಮಾಡಲಾಗುತ್ತದೆ. ಆ ಪದವನ್ನು ‘ಬಿಡಿಸಿಕೊಳ್ಳಲು ಕೊಡುವ ಬೆಲೆ’ ಎಂದೂ ಭಾಷಾಂತರ ಮಾಡಬಹುದು. (ಮತ್ತಾಯ 20:28, ಸತ್ಯವೇದವು) ಯುದ್ಧ ಕೈದಿಯನ್ನು ಬಿಡುಗಡೆ ಮಾಡಲು ಕೊಡುವ ಹಣಕ್ಕೆ ಅಥವಾ ಗುಲಾಮ ದಾಸನನ್ನು ಬಿಡಿಸಿಕೊಳ್ಳಲು ಕೊಡುವ ಬೆಲೆಗೆ ಗ್ರೀಕ್‌ ಬರಹಗಾರರು ಆ ಪದವನ್ನೇ ಉಪಯೋಗಿಸುತ್ತಿದ್ದರು.