ಫ್ರೆಂಡ್‌ಶಿಪ್ ಬಗ್ಗೆ ಬೈಬಲ್ ಏನು ಹೇಳುತ್ತೆ?
ಬೈಬಲ್ ಕೊಡೋ ಉತ್ತರ
ನಮ್ಮ ಜೀವನದ ಯಶಸ್ಸು ಮತ್ತು ಸಂತೋಷ ನಾವು ಮಾಡೋ ಸ್ನೇಹದ ಮೇಲೆ ಹೊಂದ್ಕೊಂಡಿದೆ. ಒಳ್ಳೇ ಫ್ರೆಂಡ್ಸ್ ಒಳ್ಳೇ ಗುಣಗಳನ್ನ ಮತ್ತು ಕೌಶಲಗಳನ್ನ ಬೆಳೆಸಿಕೊಳ್ಳೋಕೆ ಒಬ್ಬರಿಗೊಬ್ಬರು ಸಹಾಯ ಮಾಡ್ತಾರೆ. ಅಷ್ಟೇ ಅಲ್ಲ, ನಾವು ಸಮಾಜದಲ್ಲಿ ಒಳ್ಳೇ ವ್ಯಕ್ತಿಗಳಾಗೋಕೂ ಪ್ರೋತ್ಸಾಹ ಕೊಡ್ತಾರೆ.—ಜ್ಞಾನೋಕ್ತಿ 27:17.
ಅದಕ್ಕೆ ನಾವು ಸ್ನೇಹಿತರನ್ನ ಆರಿಸಿಕೊಳ್ಳೊವಾಗ ಹುಷಾರಾಗಿರಬೇಕು ಅಂತ ಬೈಬಲ್ ಹೇಳುತ್ತೆ. ಕೆಟ್ಟವರನ್ನ ಸ್ನೇಹಿತರಾಗಿ ಮಾಡ್ಕೊಂಡ್ರೆ ‘ಉಪ್ಪು ತಿಂದ ಮೇಲೆ ನೀರು ಕುಡಿಲೇಬೇಕು’ ಅನ್ನೋ ತರ ಸಮಸ್ಯೆಗಳನ್ನ ಎದುರಿಸಬೇಕಾಗುತ್ತೆ. (ಜ್ಞಾನೋಕ್ತಿ 13:20; 1 ಕೊರಿಂಥ 15:33) ಕೆಟ್ಟ ಫ್ರೆಂಡ್ಸ್ ಸಹವಾಸ ಮಾಡಿದ್ರೆ ನಾವು ತಪ್ಪು ದಾರಿ ಹಿಡಿತೀವಿ, ಅಷ್ಟೇ ಅಲ್ಲ ನಮ್ಮಲ್ಲಿರೋ ಒಳ್ಳೇ ಗುಣಗಳು ಹಾಳಾಗುತ್ತೆ.
ಈ ಲೇಖನದಲ್ಲಿ ಮುಂದಿನ ವಿಷ್ಯಗಳ ಬಗ್ಗೆ ನೋಡೋಣ.
ಒಳ್ಳೇ ಸ್ನೇಹಿತರು ಹೇಗಿರ್ತಾರೆ?
ಒಬ್ಬ ವ್ಯಕ್ತಿಯನ್ನ ನಾವು ಫ್ರೆಂಡ್ ಮಾಡ್ಕೊಬೇಕಾದ್ರೆ ನಮ್ಮ ತರದ್ದೇ ಹವ್ಯಾಸ ಇದ್ಯಾ, ಆಸಕ್ತಿ ಇದ್ಯಾ ಅಂತ ನೋಡಿದರಷ್ಟೇ ಸಾಕಾಗಲ್ಲ ಅಂತ ಬೈಬಲ್ ಹೇಳುತ್ತೆ. ಉದಾಹರಣೆಗೆ, ಕೀರ್ತನೆ 119:63 ಹೀಗೆ ಹೇಳುತ್ತೆ, “ಯಾರೆಲ್ಲಾ ನಿನಗೆ a ಭಯಪಡ್ತಾರೋ ಯಾರೆಲ್ಲಾ ನಿನ್ನ ಆಜ್ಞೆಗಳನ್ನ ಪಾಲಿಸ್ತಾರೋ ಅವ್ರಿಗೆಲ್ಲಾ ನಾನು ಸ್ನೇಹಿತ.” ಹಾಗಾದ್ರೆ ಈ ಮಾತುಗಳನ್ನ ಬರೆದಿರೋ ಕೀರ್ತನೆಗಾರ ಎಂಥವರನ್ನ ಫ್ರೆಂಡ್ ಮಾಡ್ಕೊಂಡ? ‘ಎಲ್ಲಿ ನಾನು ದೇವರ ಮನಸ್ಸನ್ನ ನೋಯಿಸಿಬಿಡ್ತೀನಿ’ ಅಂತ ಯೋಚ್ನೆ ಮಾಡೋ ಮತ್ತು ದೇವರ ನೀತಿ ನಿಯಮಗಳ ತರನೇ ಜೀವನ ಮಾಡೋ ವ್ಯಕ್ತಿಗಳನ್ನ ತನ್ನ ಸ್ನೇಹಿತರನ್ನಾಗಿ ಮಾಡ್ಕೊಂಡ.
ಒಳ್ಳೇ ಫ್ರೆಂಡಲ್ಲಿ ಇರಬೇಕಾದ ಗುಣಗಳ ಬಗ್ಗೆನೂ ಬೈಬಲ್ ಹೇಳುತ್ತೆ. ಉದಾಹರಣೆಗೆ,
“ನಿಜವಾದ ಸ್ನೇಹಿತ ಎಲ್ಲ ಸಮಯದಲ್ಲೂ ಪ್ರೀತಿಸ್ತಾನೆ. ಕಷ್ಟಕಾಲದಲ್ಲಿ ಅವನು ನಿಮ್ಮ ಸಹೋದರನಾಗ್ತಾನೆ.”—ಜ್ಞಾನೋಕ್ತಿ 17:17.
“ಒಬ್ರನ್ನೊಬ್ರು ಜಜ್ಜಿಬಿಡಬೇಕು ಅಂತ ಕಾಯೋ ಜೊತೆಗಾರರೂ ಇದ್ದಾರೆ, ಒಡಹುಟ್ಟಿದವನಿಗಿಂತ ಜಾಸ್ತಿ ಪ್ರೀತಿಸೋ ಸ್ನೇಹಿತನೂ ಇರ್ತಾನೆ.”—ಜ್ಞಾನೋಕ್ತಿ 18:24.
ಒಬ್ಬ ಒಳ್ಳೇ ಫ್ರೆಂಡಲ್ಲಿ ಪ್ರೀತಿ, ದಯೆ, ಉದಾರತೆ, ನಿಯತ್ತು ಅನ್ನೋ ಗುಣಗಳಿರುತ್ತೆ ಅಂತ ಈ ವಚನಗಳಿಂದ ಗೊತ್ತಾಗುತ್ತೆ. ಒಳ್ಳೇ ಫ್ರೆಂಡ್ ನಮ್ಮ ಜೀವನದ ಏಳು ಬೀಳುಗಳಲ್ಲಿ ಯಾವಾಗ್ಲೂ ನಮ್ಮ ಜೊತೆ ಇರ್ತಾನೆ, ಕೈ ಹಿಡೀತಾನೆ. ಅಷ್ಟೇ ಅಲ್ಲ, ನಾವು ತಪ್ಪು ಹೆಜ್ಜೆ ಇಡ್ತಿದ್ರೆ, ತಪ್ಪಾದ ನಿರ್ಧಾರ ಮಾಡ್ತಿದ್ರೆ ಧೈರ್ಯವಾಗಿ ನಮ್ಮನ್ನ ತಿದ್ತಾನೆ.—ಜ್ಞಾನೋಕ್ತಿ 27:6, 9.
ಬೈಬಲಿನಲ್ಲಿರೋ ಒಳ್ಳೇ ಸ್ನೇಹಿತರ ಕೆಲವು ಉದಾಹರಣೆಗಳು
ಬೈಬಲಿನಲ್ಲಿ ಒಳ್ಳೇ ಸ್ನೇಹಿತರ ಎಷ್ಟೋ ಉದಾಹರಣೆಗಳು ಇವೆ. ಅವರ ವಯಸ್ಸು, ಹಿನ್ನಲೆ, ಸಂಸ್ಕೃತಿ, ಅಧಿಕಾರ ಬೇರೆ ಬೇರೆ ಇದ್ರೂ ಅವರು ತಮ್ಮ ಮಧ್ಯೆ ಒಳ್ಳೇ ಸ್ನೇಹವನ್ನ ಕಾಪಾಡಿಕೊಂಡ್ರು. ಈಗ ಅಂಥಾ ಮೂರು ಉದಾಹರಣೆಗಳನ್ನ ನಾವು ನೋಡೋಣ.
ರೂತ್ ಮತ್ತು ನವೋಮಿ. ರೂತ್ ಮತ್ತು ನವೋಮಿ ಅತ್ತೆ ಸೊಸೆ. ಅವ್ರ ವಯಸ್ಸು, ಸಂಸ್ಕೃತಿ, ಹಿನ್ನಲೆ ಬೇರೆ ಬೇರೆ ಆಗಿತ್ತು. ಅವ್ರ ಮಧ್ಯೆ ಇಷ್ಟೊಂದು ಅಂತರ ಇದ್ರೂ ಅವರ ಸ್ನೇಹಕ್ಕೆ ಅಂತರ ಇರಲಿಲ್ಲ. ಅವ್ರ ಮಧ್ಯೆ ಪ್ರೀತಿ, ಸ್ನೇಹಕ್ಕೆ ಕೊರತೆನೇ ಇರಲಿಲ್ಲ.—ರೂತ್ 1:16.
ದಾವೀದ ಮತ್ತು ಯೋನಾತಾನ. ಯೋನಾತಾನ ದಾವೀದನಿಗಿಂತ 30 ವರ್ಷ ದೊಡ್ಡವನಾಗಿದ್ರೂ ಅವ್ರಿಬ್ರ ಮಧ್ಯೆ “ಗಾಢ ಸ್ನೇಹ” ಇತ್ತು ಅಂತ ಬೈಬಲ್ ಹೇಳುತ್ತೆ.—1 ಸಮುವೇಲ 18:1.
ಯೇಸು ಮತ್ತು ಅಪೊಸ್ತಲರು. ಯೇಸುಗೆ ಅಪೊಸ್ತಲರಿಗಿಂತ ಜಾಸ್ತಿ ಅಧಿಕಾರ ಇತ್ತು. ಆತನು ಅವ್ರಿಗೆ ಗುರು ಆಗಿದ್ದ, ತುಂಬಾ ವಿಷ್ಯಗಳನ್ನ ಕಲಿಸ್ತಿದ್ದ. (ಯೋಹಾನ 13:13) ಯೇಸು ತನಗೆ ಜಾಸ್ತಿ ಅಧಿಕಾರ ಇರೋದ್ರಿಂದ ‘ಇವ್ರಿಗೆ ನನ್ನ ಫ್ರೆಂಡ್ಸ್ ಆಗೋ ಯೋಗ್ಯತೆ ಇಲ್ಲ’ ಅಂತ ಯಾವತ್ತೂ ಅಂದ್ಕೊಳ್ಲಿಲ್ಲ. ಬದಲಿಗೆ ಯಾರು ತಾನು ಕಲಿಸೋ ವಿಷ್ಯಗಳನ್ನ ಪಾಲಿಸ್ತಿದ್ರೋ ಅವ್ರ ಜೊತೆ ಸ್ನೇಹ ಬೆಳೆಸಿಕೊಂಡ. ಅದಕ್ಕೆ ಆತನು ಹೀಗೆ ಹೇಳಿದ: “ನಿಮ್ಮನ್ನ ಸ್ನೇಹಿತರಂತ ಕರಿದಿದ್ದೀನಿ. ಯಾಕಂದ್ರೆ ಅಪ್ಪನ ಹತ್ರ ನಾನು ಕೇಳಿಸ್ಕೊಂಡ ಎಲ್ಲ ವಿಷ್ಯ ನಿಮಗೆ ಹೇಳಿದ್ದೀನಿ.”—ಯೋಹಾನ 15:14, 15.
ಒಬ್ಬ ವ್ಯಕ್ತಿ ದೇವರ ಸ್ನೇಹಿತನಾಗಬಹುದಾ?
ಖಂಡಿತ ಆಗಬಹುದು. ಅದಕ್ಕೆ ಬೈಬಲ್ “ಆತನು ಪ್ರಾಮಾಣಿಕನ ಆಪ್ತ ಸ್ನೇಹಿತ” ಅಂತ ಹೇಳುತ್ತೆ. (ಜ್ಞಾನೋಕ್ತಿ 3:32) ಇನ್ನೊಂದು ಮಾತಿನಲ್ಲಿ ಹೇಳೋದಾದರೆ ಯಾರು ಪ್ರಾಮಾಣಿಕವಾಗಿ, ಗೌರವದಿಂದ ನಡ್ಕೊತಾರೋ, ದೇವರು ಇಟ್ಟಿರೋ ನೀತಿ ನಿಯಮಗಳಿಗೆ ತಕ್ಕ ಹಾಗೆ ಜೀವನ ಮಾಡ್ತಾರೋ ಅಂಥವ್ರನ್ನ ದೇವರು ತನ್ನ ಸ್ನೇಹಿತರನ್ನಾಗಿ ಆರಿಸಿಕೊಳ್ತಾನೆ. ಉದಾಹರಣೆಗೆ ನಂಬಿಗಸ್ತನಾಗಿದ್ದ ಅಬ್ರಹಾಮನನ್ನ ಬೈಬಲಿನಲ್ಲಿ ದೇವರ ಸ್ನೇಹಿತ ಅಂತ ಕರೆಯಲಾಗಿದೆ.—2 ಪೂರ್ವಕಾಲವೃತ್ತಾಂತ 20:7; ಯೆಶಾಯ 41:8; ಯಾಕೋಬ 2:23.
a ಈ ಕೀರ್ತನೆಯ ಹಿನ್ನಲೆ ನೋಡೋವಾಗ “ನಿನಗೆ” ಅನ್ನೋ ಪದ ದೇವರನ್ನ ಸೂಚಿಸುತ್ತೆ.

