ಇಚ್ಛಾ ಸ್ವಾತಂತ್ರ್ಯದ ಬಗ್ಗೆ ಬೈಬಲ್ ಏನು ಹೇಳುತ್ತೆ? ದೇವರು ಕಂಟ್ರೋಲ್ ಮಾಡ್ತಾನಾ?
ಬೈಬಲ್ ಕೊಡೋ ಉತ್ತರ
ದೇವರು ನಮಗೆ ಇಚ್ಛಾ ಸ್ವಾತಂತ್ರ್ಯವನ್ನ ಕೊಟ್ಟು ನಮ್ಮನ್ನ ಗೌರವಿಸಿದ್ದಾನೆ. ಆದ್ದರಿಂದ ನಾವು ನಮ್ಮ ಸ್ವಂತ ನಿರ್ಧಾರಗಳನ್ನ ಮಾಡಬಹುದು. ದೇವರಾಗಲಿ ಅಥವಾ ಹಣೆಬರಹ ಆಗಲಿ ನಮ್ಮ ಜೀವನವನ್ನ ನಿರ್ಧರಿಸೋದಿಲ್ಲ. ಇದ್ರ ಬಗ್ಗೆ ಬೈಬಲ್ ಏನು ಹೇಳುತ್ತೆ ಅಂತ ನೋಡಿ.
ದೇವರು ನಮ್ಮನ್ನ ಆತನ ಹೋಲಿಕೆಯಲ್ಲಿ ಸೃಷ್ಟಿ ಮಾಡಿದ್ದಾನೆ. (ಆದಿಕಾಂಡ 1:26) ಆದ್ದರಿಂದ ನಾವು ಪ್ರಾಣಿಗಳ ಹಾಗೆ ಹುಟ್ಟರಿವಿನ ಪ್ರಕಾರ ನಡ್ಕೊಳ್ಳಲ್ಲ. ಬದಲಿಗೆ, ದೇವರಂತೆ ನಾವು ಪ್ರೀತಿ ಮತ್ತು ನ್ಯಾಯ ಅನ್ನೋ ಗುಣಗಳನ್ನ ತೋರಿಸೋ ಸಾಮರ್ಥ್ಯ ನಮಗಿದೆ. ಇದ್ರ ಜೊತೆಗೆ, ನಮಗೆ ದೇವರಿಗಿರೋ ಹಾಗೆ ಇಚ್ಛಾ ಸ್ವಾತಂತ್ರ್ಯ ಕೂಡ ಇದೆ.
ಎಷ್ಟೋ ಸಲ ನಮ್ಮ ಭವಿಷ್ಯ ನಮ್ಮ ಕೈಯಲ್ಲೇ ಇರುತ್ತೆ. ಆದ್ದರಿಂದಾನೇ ಬೈಬಲ್ ‘ದೇವರ ಮಾತನ್ನ ಕೇಳಿ ಜೀವವನ್ನೇ ಆರಿಸ್ಕೊಳ್ಳಿ’ ಅಂತ ಪ್ರೋತ್ಸಾಹಿಸುತ್ತೆ. (ಧರ್ಮೋಪದೇಶಕಾಂಡ 30:19, 20) ಒಂದುವೇಳೆ ನಮಗೆ ಆರಿಸ್ಕೊಳ್ಳೋ ಸ್ವಾತಂತ್ರ್ಯ ಇಲ್ಲ ಅಂದಿದ್ರೆ, ಬೈಬಲ್ ಹೇಳಿರೋ ಈ ಮಾತಿಗೆ ಅರ್ಥನೇ ಇರ್ತಿಲಿಲ್ಲ. ದೇವರು ನಮ್ಮನ್ನ ಯಾವತ್ತೂ ಯಾವ ಕೆಲಸಕ್ಕೂ ಒತ್ತಾಯ ಮಾಡಲ್ಲ. ಬದಲಿಗೆ ನಮ್ಮನ್ನ ಪ್ರೋತ್ಸಾಹಿಸ್ತಾನೆ. ಆದ್ದರಿಂದನೇ ಆತನು, “ನೀನು ನನ್ನ ಆಜ್ಞೆಗಳಿಗೆ ಗಮನಕೊಟ್ರೆ ಎಷ್ಟೋ ಚೆನ್ನಾಗಿರುತ್ತೆ! ನಿನ್ನ ಶಾಂತಿ ನದಿ ತರನೂ ನಿನ್ನ ನೀತಿ ಸಮುದ್ರದ ಅಲೆಗಳ ತರನೂ ಇರುತ್ತೆ” ಅಂತ ಹೇಳಿದ್ದಾನೆ.—ಯೆಶಾಯ 48:18.
ನಾವು ಜೀವನದಲ್ಲಿ ಗೆಲ್ತಿವಾ ಸೋಲ್ತಿವಾ ಅಂತ ನಮ್ಮ ಹಣೆ ಬರಹ ನಿರ್ಧರಿಸಲ್ಲ. ನಾವು ಯಶಸ್ಸು ಪಡಿಬೇಕಂದ್ರೆ ಕಷ್ಟಪಟ್ಟು ಕೆಲಸ ಮಾಡಬೇಕು. ಅದಕ್ಕೆ ಬೈಬಲ್, “ನಿನ್ನ ಕೈಯಿಂದ ಆಗೋ ಕೆಲಸನೆಲ್ಲ ನಿನ್ನ ಪೂರ್ಣ ಶಕ್ತಿಯಿಂದ ಮಾಡು” ಅಂತ ಹೇಳುತ್ತೆ. (ಪ್ರಸಂಗಿ 9:10) ಜೊತೆಗೆ “ಕಷ್ಟಪಟ್ಟು ಕೆಲಸ ಮಾಡುವವನ ಯೋಜನೆಗಳು ಯಶಸ್ಸು ಪಡಿಯುತ್ತೆ” ಅಂತಾನೂ ಹೇಳುತ್ತೆ.—ಜ್ಞಾನೋಕ್ತಿ 21:5.
ಇಚ್ಛಾ ಸ್ವಾತಂತ್ರ್ಯ ದೇವರಿಂದ ನಮಗೆ ಸಿಕ್ಕಿರೋ ಬೆಸ್ಟ್ ಗಿಫ್ಟ್. ಇದ್ರಿಂದ ಆತನನ್ನ ನಾವು “ಪೂರ್ಣ ಹೃದಯದಿಂದ” ಪ್ರೀತಿಸೋಕೆ ಆಗುತ್ತೆ. ನಮಗೂ ಅದೇ ಇಷ್ಟ ಅಲ್ವಾ?—ಮತ್ತಾಯ 22:37.
ದೇವರೇ ಎಲ್ಲಾನೂ ಕಂಟ್ರೋಲ್ ಮಾಡ್ತಿರೋದಲ್ವಾ?
ದೇವರು ಸರ್ವಶಕ್ತನು ಅಂತ ಬೈಬಲ್ ಹೇಳುತ್ತೆ. ಅಷ್ಟೇ ಅಲ್ಲ, ಆತನಿಗಿರುವಷ್ಟು ಅಪಾರ ಶಕ್ತಿ ಬೇರೆ ಯಾರಿಗೂ ಇಲ್ಲ ಅಂತಾನೂ ಹೇಳುತ್ತೆ. (ಯೋಬ 37:23; ಯೆಶಾಯ 40:26) ಹಾಗಿದ್ರೂ, ದೇವರು ಪ್ರತಿಯೊಂದನ್ನೂ ಕಂಟ್ರೋಲ್ ಮಾಡ್ತಾ ಕೂತಿಲ್ಲ. ಉದಾಹರಣೆಗೆ, ತನ್ನ ಜನ್ರ ವಿರುದ್ಧ ಬಾಬೆಲಿನವರು ತಪ್ಪಾಗಿ ನಡ್ಕೊಂಡಾಗ, ದೇವರು ‘ತನ್ನನ್ನ ತಾನು ತಡೆದುಕೊಂಡನು’ ಅಂತ ಬೈಬಲ್ ಹೇಳುತ್ತೆ. (ಯೆಶಾಯ 42:14) ಇವತ್ತು ಸಹ ಕೆಲವರು ತಮಗಿರೋ ಇಚ್ಛಾ ಸ್ವಾತಂತ್ರ್ಯವನ್ನ ತಪ್ಪಾಗಿ ಬಳಸಿ ಬೇರೆಯವ್ರಿಗೆ ಹಾನಿ ಮಾಡ್ತಿದ್ದಾರೆ. ಇಂಥ ಜನ್ರ ವಿಷ್ಯದಲ್ಲೂ ದೇವರು ತನ್ನ ಕೋಪವನ್ನ ನಿಯಂತ್ರಿಸ್ಕೊಳ್ತಿದ್ದಾನೆ. ಹಾಗಂತ ಆತನು ಯಾವಾಗ್ಲೂ ಹೀಗೇ ಸುಮ್ಮನೆ ಇರಲ್ಲ.—ಕೀರ್ತನೆ 37:10, 11.

