ಮಾಹಿತಿ ಇರುವಲ್ಲಿ ಹೋಗಲು

ನಾವು ಬೇರೆಯವರ ಜೊತೆ ಹೇಗಿರಬೇಕು ಅಂತ ಬೈಬಲ್‌ ಹೇಳುತ್ತೆ?

ನಾವು ಬೇರೆಯವರ ಜೊತೆ ಹೇಗಿರಬೇಕು ಅಂತ ಬೈಬಲ್‌ ಹೇಳುತ್ತೆ?

ಬೈಬಲ್‌ ಕೊಡೋ ಉತ್ತರ

ನಾವು ಬೇರೆಯವರ ಜೊತೆ ಹೇಗೆ ನಡ್ಕೊಳ್ಳಬೇಕು ಅನ್ನೋದ್ರ ಬಗ್ಗೆ ಯೇಸು ಪರ್ವತ ಪ್ರಸಂಗದಲ್ಲಿ ಒಂದು ಮಾತು ಹೇಳಿದ್ದಾನೆ. ಅದೇನಂದ್ರೆ “ಜನ ನಿಮಗೆ ಏನು ಮಾಡಬೇಕಂತ ಇಷ್ಟಪಡ್ತೀರೋ ಅದನ್ನೇ ಅವ್ರಿಗೆ ಮಾಡಿ.”—ಮತ್ತಾಯ 7:12; ಲೂಕ 6:31.

 ಮತ್ತಾಯ 7:12 ನೇ ವಚನದಲ್ಲಿ ಕೊಟ್ಟಿರೋ ನಿಯಮದ ಅರ್ಥ ಏನು?

ಈ ನಿಯಮದ ಪ್ರಕಾರ ಜನರು ನಮ್ಮ ಜೊತೆ ಹೇಗೆ ನಡ್ಕೊಳ್ಳಬೇಕು ಅಂತ ನಾವು ಇಷ್ಟಪಡ್ತೀವೋ ಅದೇ ತರ ನಾವು ಅವರ ಜೊತೆ ನಡ್ಕೊಳ್ಳಬೇಕು. ಬೇರೆಯವರು ನಮಗೆ ಗೌರವ ಕೊಟ್ಟು, ವಿನಯ, ಪ್ರೀತಿಯಿಂದ ನಡ್ಕೋಬೇಕು ಅಂತ ಆಸೆ ಇದ್ರೆ, ನಾವೂ “ಅದನ್ನೇ ಅವ್ರಿಗೆ ಮಾಡಬೇಕು.” ಅಂದ್ರೆ ನಾವೂ ಕೂಡ ಅವರ ಜೊತೆ ಗೌರವ, ಪ್ರೀತಿ, ವಿನಯದಿಂದ ನಡ್ಕೋಬೇಕು.—ಲೂಕ 6:31.

 ಈ ನಿಯಮದಿಂದ ನಮಗೇನು ಪ್ರಯೋಜನ?

ಈ ನಿಯಮ ನಮಗೆ ಎಲ್ಲಾ ಸಂದರ್ಭದಲ್ಲೂ ಪ್ರಯೋಜನ ತರುತ್ತೆ. ಉದಾಹರಣೆಗೆ ಅದು:

  • ಮದುವೆಯ ಸಂಬಂಧ ಗಟ್ಟಿಯಾಗಿ ಇರೋಕೆ ಸಹಾಯಮಾಡುತ್ತೆ.—ಎಫೆಸ 5:28, 33.

  • ಮಕ್ಕಳನ್ನ ಚೆನ್ನಾಗಿ ಬೆಳೆಸೋಕೆ ಹೆತ್ತವರಿಗೆ ಸಹಾಯಮಾಡುತ್ತೆ.—ಎಫೆಸ 6:4.

  • ಸ್ನೇಹಿತರ ಜೊತೆ, ಅಕ್ಕ-ಪಕ್ಕದವರ ಜೊತೆ, ನಮ್ಮೊಟ್ಟಿಗೆ ಕೆಲಸ ಮಾಡುವವರ ಜೊತೆ ಒಳ್ಳೇ ರೀತಿಯಲ್ಲಿ ನಡ್ಕೊಳ್ಳೋಕೆ ಸಹಾಯಮಾಡುತ್ತೆ.—ಜ್ಞಾನೋಕ್ತಿ 3:27, 28; ಕೊಲೊಸ್ಸೆ 3:13.

ಯೇಸು ಕೊಟ್ಟಿರುವ ಈ ನಿಯಮದ ತತ್ವ, ಹಳೇ ಒಡಂಬಡಿಕೆಯ ಅನೇಕ ಪುಸ್ತಕಗಳಲ್ಲಿ ಕೂಡ ಇದೆ. ಅದಕ್ಕೆ ಯೇಸು, “ನಿಯಮ ಪುಸ್ತಕ [ಬೈಬಲಿನ ಮೊದಲ ಐದು ಪುಸ್ತಕಗಳು] ಮತ್ತು ಪ್ರವಾದಿಗಳು [ಪ್ರವಾದಿಗಳು ಬರೆದ ಪುಸ್ತಕಗಳು] ಹೇಳಿರೋದು ಇದನ್ನೇ ಅಲ್ವಾ?” ಅಂತ ಕೇಳಿರೋದು. (ಮತ್ತಾಯ 7:12) ಒಂದು ಮಾತಲ್ಲಿ ಹೇಳೋದಾದ್ರೆ, ಮತ್ತಾಯ 7:12 ರಲ್ಲಿ ಯೇಸು ಕೊಟ್ಟಿರುವ ಈ ನಿಯಮ ಹಳೇ ಒಡಂಬಡಿಕೆಯಲ್ಲಿ ಇರುವ ಒಂದು ನಿಯಮನ ಒತ್ತಿ ಹೇಳುತ್ತೆ. ಅದು ‘ಬೇರೆಯವ್ರನ್ನ ಪ್ರೀತಿಸೋದೇ’ ಆಗಿದೆ.—ರೋಮನ್ನರಿಗೆ 13:8-10.

 ಈ ನಿಯಮ ಕೇವಲ ಕೊಡೋದು-ತಗೊಳೋದ್ರ ಬಗ್ಗೆ ಮಾತ್ರ ಮಾತಾಡುತ್ತಾ?

ಇಲ್ಲ. ಈ ನಿಯಮ ಮುಖ್ಯವಾಗಿ ‘ಕೊಡೋದರ’ ಬಗ್ಗೆ ಮಾತಾಡುತ್ತೆ. ಯೇಸು ಈ ನಿಯಮದ ಬಗ್ಗೆ ಮಾತಾಡ್ತಿದ್ದಾಗ ಜನರ ಜೊತೆ ಹೇಗೆ ಇರಬೇಕು ಅಂತ ಮಾತ್ರ ಹೇಳಿಲ್ಲ, ಬದಲಾಗಿ ಶತ್ರುಗಳ ಜೊತೆ ಕೂಡ ನಾವು ಹೇಗೆ ನಡ್ಕೋಬೇಕು ಅನ್ನೋದನ್ನ ಹೇಳಿಕೊಟ್ಟನು. (ಲೂಕ 6:27-31, 35) ಈ ನಿಯಮದಿಂದ ನಾವೇನು ಕಲಿಬಹುದು? ನಾವು ಎಲ್ಲರ ಜೊತೆ ಚೆನ್ನಾಗಿ ನಡ್ಕೋಬೇಕು.

 ಈ ನಿಯಮಾನ ನಾವು ಹೇಗೆ ಅನ್ವಯಿಸಬಹುದು?

  1. 1. ಅವಕಾಶಗಳಿಗಾಗಿ ಕಾಯ್ತಾ ಇರಿ. ನಿಮ್ಮ ಸುತ್ತಮುತ್ತಲೂ ಯಾರಿಗಾದರೂ ಸಹಾಯ ಬೇಕಾ ಅಂತ ಗಮನಿಸುತ್ತಾ ಇರಿ. ಯಾರಾದ್ರೂ ಭಾರವಾದ ಬ್ಯಾಗನ್ನ ಹೊತ್ತುಕೊಂಡು ಹೋಗಕ್ಕೆ ಕಷ್ಟಪಡುತ್ತಿದ್ರೆ ಅವರಿಗೆ ಸಹಾಯ ಮಾಡಿ. ನಿಮ್ಮ ಅಕ್ಕಪಕ್ಕದಲ್ಲಿ ಇರೋರು ಹಾಸ್ಪಿಟಲ್‌ನಲ್ಲಿ ಅಡ್ಮಿಟ್‌ ಆಗಿದ್ದಾರಾ? ಅವರಿಗೆ ಏನಾದ್ರೂ ಸಹಾಯ ಬೇಕಿದೆಯಾ? ಅಥವಾ ನಮ್ಮ ಜೊತೆ ಕೆಲಸ ಮಾಡುವವರಿಗೆ ಬೇಜಾರಾಗಿದ್ಯಾ? ಅವರಿಗೆ ನೀವು ಪ್ರೋತ್ಸಾಹ ಕೊಡಬಹುದಾ? ಹೀಗೆ, ನಾವು ‘ಬೇರೆಯವ್ರ ಬಗ್ಗೆ ಯೋಚನೆ ಮಾಡಿದರೆ’ ಅವರಿಗೆ ಹೇಗೆಲ್ಲ ಸಹಾಯ ಮಾಡಬಹುದು ಅನ್ನೋ ದಾರಿ ನಮಗೆ ಕಾಣಿಸುತ್ತೆ. ಆಗ ಅವರಿಗೆ ಬೇಕಾದ ಸಹಾಯನ ನಾವು ಮಾಡಬಹುದು.—ಫಿಲಿಪ್ಪಿ 2:4.

  2. 2. ಬೇರೆಯವರ ನೋವನ್ನ ಅರ್ಥ ಮಾಡಿಕೊಳ್ಳೋಕೆ ಪ್ರಯತ್ನ ಮಾಡಿ. ಯಾರಾದ್ರೂ ಕಷ್ಟ ಅನುಭವಿಸುತ್ತಿದ್ದರೆ, ನೀವು ಆ ವ್ಯಕ್ತಿಯ ಪರಿಸ್ಥಿತಿಯಲ್ಲಿ ಇದ್ದಿದ್ರೆ, ನಿಮಗೆ ಹೇಗೆ ಅನಿಸುತ್ತಿತ್ತು ಅನ್ನೋದನ್ನ ಒಂದು ಸಲ ಯೋಚನೆ ಮಾಡಿ. (ರೋಮನ್ನರಿಗೆ 12:15) ಬೇರೆಯವರ ಭಾವನೆಗಳು, ಅನಿಸಿಕೆಗಳನ್ನ ನೀವು ಚೆನ್ನಾಗಿ ಅರ್ಥ ಮಾಡಿಕೊಂಡರೆ ಅವರಿಗೆ ಸಹಾಯ ಮಾಡೋಕೆ ನೀವು ಮುಂದೆ ಬರ್ತೀರ.

  3. 3. ಹೊಂದ್ಕೊಂಡು ಹೋಗೋದನ್ನ ಕಲಿರಿ. ಎಲ್ಲರೂ ಒಂದೇ ತರ ಇರಲ್ಲ ಅಂತ ಅರ್ಥ ಮಾಡಿಕೊಳ್ಳಿ. ಕೆಲವೊಂದು ಸಲ ಬೇರೆಯವರಿಗೆ ಇಷ್ಟ ಆಗೋದು ನಿಮಗೆ ಇಷ್ಟ ಆಗದೇ ಇರಬಹುದು, ಇನ್ನೊಂದ್ಸಲ ನಿಮಗೆ ಇಷ್ಟ ಆಗೋದು ಬೇರೆಯವರಿಗೆ ಇಷ್ಟ ಆಗದೇ ಇರಬಹುದು. ಇದ್ರಿಂದ ನಮಗೇನು ಪಾಠ? ನಾವು ಹೊಂದ್ಕೊಂಡು ಹೋಗೋದನ್ನ ಕಲಿಬೇಕು. ಬೇರೆಯವರು ಏನು ಇಷ್ಟಪಡುತ್ತಾರೋ ಅದನ್ನ ನಾವು ಜಾಸ್ತಿ ಮಾಡೋಕೆ ಪ್ರಯತ್ನ ಮಾಡಬೇಕು.—1 ಕೊರಿಂಥ 10:24.