ದೇವರು ವಿಕಾಸದ ಮೂಲಕ ಎಲ್ಲಾ ಜೀವಿಗಳನ್ನ ಸೃಷ್ಟಿ ಮಾಡಿದ್ನಾ?
ಬೈಬಲ್ ಕೊಡೋ ಉತ್ತರ
ಇಲ್ಲ. ಭೂಮಿ ಮೇಲಿರೋ ಮನುಷ್ಯರನ್ನ ಮತ್ತು ಎಲ್ಲಾ “ಜಾತಿಯ” ಪ್ರಾಣಿ ಪಕ್ಷಿ ಗಿಡ ಮರಗಳನ್ನ ದೇವರು ಸೃಷ್ಟಿ ಮಾಡಿದನು ಅಂತ ಬೈಬಲ್ ಸ್ಪಷ್ಟವಾಗಿ ಹೇಳುತ್ತೆ. a (ಆದಿಕಾಂಡ 1:12, 21, 25, 27; ಪ್ರಕಟನೆ 4:11) ಭೂಮಿ ಮೇಲಿರೋ ಎಲ್ಲಾ ಮನುಷ್ಯರು ಆದಾಮ ಹವ್ವರ ಮಕ್ಕಳು ಅಂತನೂ ಹೇಳುತ್ತೆ. (ಆದಿಕಾಂಡ 3:20; 4:1) ಬೈಬಲ್‌ನಲ್ಲಿ ಎಲ್ಲೂ ಕೂಡ ದೇವರು ವಿಕಾಸ ಉಪಯೋಗಿಸಿ ಬೇರೆ ಬೇರೆ ಜೀವಿಗಳನ್ನ ಸೃಷ್ಟಿ ಮಾಡಿದ್ರು ಅಂತ ಹೇಳಲ್ಲ. ಆದ್ರೆ ಪ್ರತಿಯೊಂದು ಜಾತಿಯ ಜೀವಿಗಳಲ್ಲೂ ಕೆಲವು ವ್ಯತ್ಯಾಸಳಾಗುತ್ತೆ ಅಂತ ವಿಜ್ಞಾನಿಗಳು ಹೇಳೋ ಮಾತನ್ನ ಬೈಬಲ್ ಕೂಡ ಒಪ್ಪುತ್ತೆ.
ಕೆಲವ್ರು ಏನನ್ನ ನಂಬ್ತಾರೆ?
ದೇವರು ಬೇರೆ ಬೇರೆ ಜೀವಿಗಳನ್ನ ವಿಕಾಸದ ಮೂಲಕ ಸೃಷ್ಟಿಸಿದ ಅಂತ ಕೆಲವ್ರು ನಂಬ್ತಾರೆ. ಆದ್ರೆ ಅವ್ರಿಗೆ ದೇವರು ಇದನ್ನೆಲ್ಲಾ ಹೇಗೆ ಮಾಡ್ದ ಅನ್ನೋ ವಿಷ್ಯದಲ್ಲಿ ಬೇರೆ ಬೇರೆ ಅಭಿಪ್ರಾಯಗಳಿವೆ. ಎನ್‌ಸೈಕ್ಲಪೀಡಿಯ ಬ್ರಿಟ್ಯಾನಿಕ ಹೇಳೋ ಪ್ರಕಾರ ಪ್ರಾಣಿಗಳು ಮತ್ತು ಸಸ್ಯಗಳು ಪರಿಸರಕ್ಕೆ ಹೊಂದಿಕೊಳ್ಳೋ ಮೂಲಕ ಬದುಕುತ್ತೆ. ಈ “ನೈಸರ್ಗಿಕ ಆಯ್ಕೆ ಮೂಲಕನೇ ದೇವ್ರು ಎಲ್ಲವನ್ನ ಮಾರ್ಗದರ್ಶಿಸ್ತಾರೆ” ಅಂತ ಕೆಲವ್ರು ನಂಬ್ತಾರೆ.
ಅವ್ರು ಈ ವಿಷ್ಯಗಳನ್ನೂ ನಂಬ್ತಾರೆ:
ಸಾವಿರಾರು ವರ್ಷಗಳ ಹಿಂದೆ ಎಲ್ಲಾ ಜೀವಿಗಳು ಒಂದೇ ಜೀವಿಯಿಂದ ಹುಟ್ಟಿಕೊಳ್ತು.
ಒಂದು ಜೀವಿ ನಿಧಾನವಾಗಿ ಸ್ವಲ್ಪ ಸ್ವಲ್ಪನೇ ವಿಕಾಸ ಆಗಿ ಒಂದು ಹೊಸ ಜಾತಿಯ ಜೀವಿ ಆಗುತ್ತೆ.
ಈ ಪ್ರಕ್ರಿಯೆ ಹಿಂದೆ ದೇವರ ಕೈಯಿದೆ.
ವಿಕಾಸವಾದವನ್ನ ಬೈಬಲ್ ಒಪ್ಪುತ್ತಾ?
ವಿಕಾಸದ ಮೂಲಕ ಎಲ್ಲಾ ಜೀವಿಗಳನ್ನ ದೇವ್ರು ಸೃಷ್ಟಿ ಮಾಡಿದ ಅಂತ ನಂಬೋರು, ಸೃಷ್ಟಿ ಬಗ್ಗೆ ಬೈಬಲಿನ ಆದಿಕಾಂಡ ಪುಸ್ತಕದಲ್ಲಿರೋ ಮಾಹಿತಿನ ಒಪ್ಪೋದಿಲ್ಲ. ಆದ್ರೆ ಯೇಸು ಭೂಮಿಲಿದ್ದಾಗ ಸೃಷ್ಟಿ ಬಗ್ಗೆ ಆದಿಕಾಂಡ ಪುಸ್ತಕದಲ್ಲಿರೋದನ್ನೇ ಹೇಳ್ದ. ಯಾಕಂದ್ರೆ ಅದು ಸತ್ಯ ಅಂತ ಅವನಿಗೆ ಗೊತ್ತಿತ್ತು. (ಆದಿಕಾಂಡ 1:26, 27; 2:18-24; ಮತ್ತಾಯ 19:4-6) ಯೇಸು ಭೂಮಿಗೆ ಬರೋದಕ್ಕಿಂತ ಮುಂಚೆ ಸ್ವರ್ಗದಲ್ಲಿ ದೇವರ ಜೊತೆ ಇದ್ದ ಮತ್ತೆ ‘ಸಮಸ್ತವನ್ನ’ ಸೃಷ್ಟಿಸಲು ದೇವರಿಗೆ ಸಹಾಯ ಮಾಡ್ದ ಅಂತ ಬೈಬಲ್ ಹೇಳುತ್ತೆ. (ಯೋಹಾನ 1:3) ಆದ್ರಿಂದ ದೇವರು ಎಲ್ಲವನ್ನ ಸೃಷ್ಟಿಸಲು ವಿಕಾಸವನ್ನ ಉಪಯೋಗಿಸಿದ ಅನ್ನೋದನ್ನ ಬೈಬಲ್ ಒಪ್ಪೋದಿಲ್ಲ.
ಸಸ್ಯಗಳು ಮತ್ತು ಪ್ರಾಣಿಗಳು ವಾತಾವರಣಕ್ಕೆ ತಕ್ಕ ಹಾಗೆ ಹೊಂದಿಸಿಕೊಂಡು ಬದಲಾಗೋದು ವಿಕಾಸನಾ?
ಜೀವಿಗಳ ಜಾತಿಯಲ್ಲಿ ಎಷ್ಟರ ಮಟ್ಟಿಗೆ ಬದಲಾವಣೆ ಆಗುತ್ತೆ ಅಂತ ಬೈಬಲ್ ಹೇಳಲ್ಲ. ಆದ್ರೆ ದೇವರಿಂದ ಸೃಷ್ಟಿಯಾದ ಪ್ರಾಣಿಗಳು ಹೊಸ ವಾತಾವರಣಕ್ಕೆ ಹೊಂದಿಕೊಳ್ಳುತ್ತೆ ಅಥ್ವಾ ತಮ್ಮದೇ ಜಾತಿಯ ಸಸ್ಯಗಳನ್ನ ಪ್ರಾಣಿಗಳನ್ನ ಹುಟ್ಟಿಸುತ್ತೆ. ಅದ್ರಲ್ಲಿ ಬದಲಾವಣೆಗಳಿರುತ್ತೆ ಅನ್ನೋದನ್ನೂ ಬೈಬಲ್ ಒಪ್ಪುತ್ತೆ. ಇದನ್ನ ಕೆಲವ್ರು ನೋಡ್ದಾಗ ಒಂದು ಹೊಸ ಜಾತಿಯ ವಿಕಾಸ ಆಯ್ತು ಅಂತ ಅಂದ್ಕೊಳ್ತಾರೆ. ನಿಜ ಏನಂದ್ರೆ ವಾತಾವರಣಕ್ಕೆ ಹೊಂದಿಕೊಳ್ಳೋದ್ರಿಂದ ಒಂದು ಜಾತಿಯಲ್ಲಿ ಬದಲಾವಣೆ ಆಗುತ್ತೆ ಹೊರತು ಒಂದು ಹೊಸ ಜಾತಿ ಸೃಷ್ಟಿ ಆಗಲ್ಲ.
a ಬೈಬಲ್‌ನಲ್ಲಿ ಉಪಯೋಗಿಸಿರೋ “ಜಾತಿ” ಅನ್ನೋ ಪದಕ್ಕೆ ವಿಜ್ಞಾನಿಗಳು ಉಪಯೋಗಿಸೋ “ಸ್ಪೀಷೀಸ್” ಅನ್ನೋ ಪದಕ್ಕಿಂತ ಹೆಚ್ಚು ಅರ್ಥ ಇದೆ. ಬೈಬಲ್‌ನಲ್ಲಿ ತಿಳಿಸಿರೋ ಜಾತಿಯಲ್ಲಿ ಅನೇಕ ಸ್ಪೀಷೀಸ್‌ಗಳು ಒಳಗೂಡಿರಬಹುದು. ಒಂದು ಜಾತಿಯ ಜೀವಿಯಲ್ಲಿ ಬದಲಾವಣೆ ಆದಾಗ ಒಂದು ಹೊಸ ಸ್ಪೀಷೀಸ್ ವಿಕಾಸವಾಯ್ತು ಅಂತ ವಿಜ್ಞಾನಿಗಳು ಹೇಳ್ತಾರೆ. ಆದ್ರೆ ಅದು ವಿಕಾಸ ಅಲ್ಲ, ಜಾತಿಯಲ್ಲಿ ಆದ ಬದಲಾವಣೆ ಆಗಿದೆ. ಆದಿಕಾಂಡ ಪುಸ್ತಕದಲ್ಲಿ ಉಪಯೋಗಿಸಿದ ಜಾತಿ ಪದ ಇದನ್ನೇ ಹೇಳುತ್ತೆ.