ದೇವರು ತನ್ನ ಮನಸ್ಸನ್ನ ಬದಲಾಯಿಸ್ತಾರಾ?

ದೇವರು ತನ್ನ ಮನಸ್ಸನ್ನ ಬದಲಾಯಿಸ್ತಾರಾ?

ಬೈಬಲ್‌ ಕೊಡೋ ಉತ್ತರ

 ಹೌದು, ಆತನು ತನ್ನ ಮನಸ್ಸನ್ನ ಬದಲಾಯಿಸ್ತಾನೆ. ಅದು ಹೇಗಂದ್ರೆ, ಜನರು ತಮ್ಮ ನಡತೆಯನ್ನ ಬದಲಾಯಿಸಿದಾಗ ದೇವರು ತನ್ನ ಯೋಚನೆಯನ್ನ ಬದಲಾಯಿಸ್ತಾನೆ. ಉದಾಹರಣೆಗೆ, ದೇವರು ಬೈಬಲ್‌ ಕಾಲದಲ್ಲಿದ್ದ ಇಸ್ರಾಯೇಲಿನ ಜನರಿಗೆ ನ್ಯಾಯ ತೀರ್ಪಿನ ಸಂದೇಶವನ್ನ ಕೊಟ್ಟಾಗ ಆತನು ಹೇಳಿದ್ದು: “ಆಗ ಅವರು ಅದನ್ನ ಕೇಳಿ ಪ್ರತಿಯೊಬ್ರು ತನ್ನ ಕೆಟ್ಟ ದಾರಿ ಬಿಟ್ಟು ವಾಪಸ್‌ ಬರಬಹುದು. ಹಾಗೆ ಮಾಡಿದ್ರೆ ನಾನು ಮನಸ್ಸು ಬದಲಾಯಿಸ್ಕೊಳ್ತೀನಿ. ಅವ್ರ ಕೆಟ್ಟ ಕೆಲಸಗಳಿಗಾಗಿ ಅವ್ರ ಮೇಲೆ ತರಬೇಕಂತ ಇದ್ದ ಕಷ್ಟ ತರಲ್ಲ.”—ಯೆರೆಮೀಯ 26:3.

 ಅನೇಕ ಬೈಬಲ್‌ ಭಾಷಾಂತರಗಳು ಈ ವಚನವನ್ನ, ದೇವರು ತಾನು ತರಬೇಕಂತ ಇದ್ದ ನಾಶದ ಬಗ್ಗೆ “ಪಶ್ಚಾತ್ತಾಪಪಡುತ್ತಾನೆ” ಅಂತ ಹೇಳುತ್ತೆ, ಇದು ಆತನು ತಪ್ಪು ಮಾಡಿದ್ದಾನೆ ಅನ್ನೋ ಅರ್ಥ ಕೊಡಬಹುದು. ಆದರೆ ಮೂಲ ಹೀಬ್ರು ಭಾಷೆಯಲ್ಲಿ ಈ ಪದ “ಮನಸ್ಸನ್ನ ಬದಲಾಯಿಸಿಕೊಳ್ಳುವುದು” ಅಥವಾ “ಉದ್ದೇಶವನ್ನ ಬದಲಾಯಿಸಿಕೊಳ್ಳುವುದು” ಅನ್ನೋ ಅರ್ಥ ಕೊಡುತ್ತೆ. ಒಬ್ಬ ವಿದ್ವಾಂಸ ಹೀಗೆ ಬರೆದನು: “ಒಬ್ಬ ವ್ಯಕ್ತಿ ತನ್ನ ನಡತೆಯನ್ನ ಬದಲಾಯಿಸಿದಾಗ, ದೇವರು ತನ್ನ ತೀರ್ಪನ್ನ ಬದಲಾಯಿಸ್ತಾನೆ.”

 ದೇವರು ತನ್ನ ಮನಸ್ಸನ್ನ ಬದಲಾಯಿಸ್ತಾನೆ ಅಂದ ಮಾತ್ರಕ್ಕೆ ಆತನು ಪ್ರತಿ ಬಾರಿ ತನ್ನ ಮನಸ್ಸನ್ನ ಬದಲಾಯಿಸಿಕೊಳ್ಳಲೇಬೇಕು ಅಂತೇನಿಲ್ಲ. ಬೈಬಲ್‌ನಲ್ಲಿ, ದೇವರು ತನ್ನ ಮನಸ್ಸನ್ನ ಬದಲಾಯಿಸಲಿಲ್ಲ ಅಂತ ತೋರಿಸೋ ಕೆಲವು ಸನ್ನಿವೇಶಗಳನ್ನ ನೋಡಿ:

  •   ಬಾಲಾಕನು, ದೇವರು ತನ್ನ ಮನಸ್ಸನ್ನ ಬದಲಾಯಿಸುವಂತೆ ಮಾಡಲು ಮತ್ತು ಇಸ್ರಾಯೇಲ್‌ ಜನಾಂಗವನ್ನ ಶಪಿಸುವಂತೆ ಮಾಡಲು ಆತನು ಅನುಮತಿಸಲಿಲ್ಲ.—ಅರಣ್ಯಕಾಂಡ 23:18-20.

  •   ಇಸ್ರಾಯೇಲಿನ ರಾಜನಾದ ಸೌಲ ತುಂಬಾ ಕೆಟ್ಟ ವಿಷಯಗಳನ್ನೇ ಯಾವಾಗಲೂ ಮಾಡುತ್ತಿದ್ದಾಗ, ಅವನನ್ನ ರಾಜನಾಗಿ ತಿರಸ್ಕರಿಸಲು ಮಾಡಿದ ನಿರ್ಧಾರವನ್ನ ದೇವರು ಬದಲಾಯಿಸಲಿಲ್ಲ.—1 ಸಮುವೇಲ 15:28, 29.

  •   ದೇವರು ತನ್ನ ಮಗನಿಗೆ, ನೀನು ಸದಾಕಾಲ ಪುರೋಹಿತನಾಗೇ ಇರ್ತೀಯ ಅಂತ ಕೊಟ್ಟಿರೋ ಮಾತನ್ನ ನೆರವೇರಿಸ್ತಾನೆ. ಆತನು ತನ್ನ ಮನಸ್ಸನ್ನ ಬದಲಾಯಿಸಲ್ಲ.—ಕೀರ್ತನೆ 110:4.

ದೇವರು ಬದಲಾಗಲ್ಲ ಅಂತ ಬೈಬಲ್‌ ಹೇಳುತ್ತೆ ಅಲ್ವಾ?

 ಹೌದು, ಬೈಬಲಲ್ಲಿ ದೇವರು ಹೀಗೆ ಹೇಳಿದ್ದಾನೆ: “ನಾನು ಯೆಹೋವ. ನಾನು ಬದಲಾಗಲ್ಲ.” (ಮಲಾಕಿ 3:6) ಇನ್ನೊಂದು ವಚನದಲ್ಲಿ ಬೈಬಲ್‌ ದೇವರ ಬಗ್ಗೆ “ಆತನು ನೆರಳಿನ ತರ ಬದಲಾಗ್ತಾ ಇರಲ್ಲ” ಅಂತ ಹೇಳುತ್ತೆ. (ಯಾಕೋಬ 1:17) ಹಾಗಂತ, ಇದು ಬೈಬಲ್‌ನಲ್ಲಿ ದೇವರು ತನ್ನ ಮನಸ್ಸನ್ನ ಬದಲಾಯಿಸುತ್ತಾನೆ ಅಂತ ಹೇಳೋ ವಿಷಯಕ್ಕೆ ವಿರುದ್ಧವಾಗಿಲ್ಲ. ಇದರ ಅರ್ಥ ಏನಂದ್ರೆ, ದೇವರ ವ್ಯಕ್ತಿತ್ವ ಯಾವತ್ತೂ ಬದಲಾಗಲ್ಲ, ಆತನ ಪ್ರೀತಿ ಹಾಗೂ ನ್ಯಾಯದ ನೀತಿ-ನಿಯಮಗಳಲ್ಲಿ ಯಾವುದೇ ಬದಲಾವಣೆ ಆಗಲ್ಲ. (ಧರ್ಮೋಪದೇಶಕಾಂಡ 32:4; 1 ಯೋಹಾನ 4:8) ಆತನು ಬೇರೆ ಬೇರೆ ಸಮಯದಲ್ಲಿ ಜೀವಿಸುವ ಜನರಿಗೆ ಬೇರೆ ಬೇರೆ ಸಲಹೆ ಸೂಚನೆಗಳನ್ನ ಕೊಡಬಹುದು. ಉದಾಹರಣೆಗೆ, ದಾವೀದ ಒಂದು ಯುದ್ಧ ಮಾಡುವಾಗ ದೇವರು ಆತನಿಗೆ ಒಂದು ನಿರ್ದೇಶನ ಕೊಟ್ಟನು. ಆಮೇಲೆ ಇನ್ನೊಂದು ಯುದ್ಧ ಮಾಡುವಾಗ ಭಿನ್ನವಾದ ಇನ್ನೊಂದು ನಿರ್ದೇಶನ ಕೊಟ್ಟನು. ಆ ಎರಡೂ ಯುದ್ಧಗಳಲ್ಲಿ ದಾವೀದ ಗೆದ್ದನು.—2 ಸಮುವೇಲ 5:18-25.

ಮನುಷ್ಯರನ್ನ ಸೃಷ್ಟಿಸಿದ್ದಕ್ಕೆ ದೇವರಿಗೆ ಬೇಜಾರಾಯ್ತಾ?

 ಇಲ್ಲ. ಆದರೆ ಜನರು ತನ್ನ ಮಾತನ್ನ ಕೇಳದಿದ್ದಾಗ, ಆತನನ್ನ ತಿರಸ್ಕರಿಸಿದಾಗ ದೇವರಿಗೆ ತುಂಬಾ ಬೇಜಾರಾಗುತ್ತೆ. ನೋಹನ ದಿನದಲ್ಲಾದ ಜಲಪ್ರಳಯಕ್ಕೆ ಮುಂಚೆ ಭೂಮಿಯ ಪರಿಸ್ಥಿತಿ ಬಗ್ಗೆ ಹೇಳ್ತಾ ಬೈಬಲಲ್ಲಿ: “ಯೆಹೋವ ತಾನು ಭೂಮಿಯಲ್ಲಿ ಸೃಷ್ಟಿ ಮಾಡಿದ ಮನುಷ್ಯರಿಂದಾಗಿ ತುಂಬ ದುಃಖಪಟ್ಟು ಹೃದಯದಲ್ಲಿ ನೊಂದ್ಕೊಂಡನು.” ಅಂತ ಹೇಳುತ್ತೆ. (ಆದಿಕಾಂಡ 6:6) ಈ ವಚನದಲ್ಲಿ ‘ದುಃಖಪಟ್ಟ’ ಅಥವಾ ‘ವಿಷಾದಿಸಿದ’ ಅನ್ನೋ ಪದವು ತನ್ನ ಮನಸ್ಸನ್ನ ಬದಲಾಯಿಸಿದ ಅನ್ನೋ ಅರ್ಥ ಕೊಡೋ ಹೀಬ್ರು ಪದದಿಂದ ಬಂದಿದೆ. ಜಲಪ್ರಳಯಕ್ಕೆ ಮುಂಚೆ ಜೀವಿಸಿದ ಜನರಲ್ಲಿ ಹೆಚ್ಚಿನವರು ತುಂಬಾ ಕೆಟ್ಟು ಹೋಗಿರೋದನ್ನ ನೋಡಿ ದೇವರು ತನ್ನ ಮನಸ್ಸನ್ನು ಬದಲಾಯಿಸಿದನು. (ಆದಿಕಾಂಡ 6:5, 11) ಅವರು ಕೆಟ್ಟ ದಾರಿಯಲ್ಲಿ ನಡಿತಾ ಇರೋದನ್ನ ನೋಡಿ ದೇವರಿಗೆ ತುಂಬಾ ಬೇಜಾರಾಯ್ತು, ಆತನು ದುಃಖಪಟ್ಟ ನಿಜ. ಆದರೆ ಇಡೀ ಮಾನವ ಕುಲದ ಕಡೆಗೆ ದೇವರಿಗಿರೋ ಮನೋಭಾವ ಬದಲಾಗಲಿಲ್ಲ. ಅದಕ್ಕೆ, ಜಲಪ್ರಳಯ ತಂದರೂ ಮಾನವ ಕುಲವನ್ನ ಕಾಪಾಡಲು ದೇವರು ನೋಹ ಹಾಗೂ ಅವನ ಕುಟುಂಬದವರನ್ನ ರಕ್ಷಿಸಿದನು.—ಆದಿಕಾಂಡ 8:21; 2 ಪೇತ್ರ 2:5, 9.