ಮಾಹಿತಿ ಇರುವಲ್ಲಿ ಹೋಗಲು

ಸುಖೀ ಸಂಸಾರಕ್ಕೆ ಸಲಹೆಗಳು

ಸೋಲೇ ಗೆಲುವಿನ ಸೋಪಾನ ಅನ್ನೋದನ್ನ ಕಲಿಸಿ

ಸೋಲೇ ಗೆಲುವಿನ ಸೋಪಾನ ಅನ್ನೋದನ್ನ ಕಲಿಸಿ

ಒಂದಲ್ಲ ಒಂದು ಸಮಯದಲ್ಲಿ ನಿಮ್ಮ ಮಕ್ಕಳು ಯಾವುದೋ ಒಂದು ವಿಷ್ಯದಲ್ಲಿ ಸೋಲಬಹುದು. ಇದ್ರಿಂದಾಗೋ ನಿರಾಶೆಯಿಂದ ಹೊರಬರೋಕೆ ನೀವು ಅವ್ರಿಗೆ ಹೇಗೆ ಸಹಾಯ ಮಾಡಬಹುದು?

 ನಿಮಗಿದು ತಿಳಿದಿರಲಿ

ನಾವೆಲ್ರೂ ಒಂದಲ್ಲ ಒಂದು ಸಮ್ಯ ಸೋಲ್ತೇವೆ. ‘ನಾವೆಲ್ಲರೂ ಎಡವುತ್ತೇವೆ’ ಅಂತ ಬೈಬಲ್‌ ಹೇಳುತ್ತೆ. (ಯಾಕೋಬ 3:2) ಮಕ್ಕಳು ಸಹ ಎಡವುತ್ತಾರೆ ಅಥ್ವಾ ಸೋಲನ್ನು ಅನುಭವಿಸ್ತಾರೆ. ಆದ್ರೆ ಈ ರೀತಿ ಎಡವೋದ್ರಿಂದ ಒಂದು ಪ್ರಯೋಜನನೂ ಇದೆ. ಏನಂದ್ರೆ ಇದ್ರಿಂದ ಮಕ್ಕಳು ಕಷ್ಟಕರ ಸನ್ನಿವೇಶಗಳನ್ನು ನಿಭಾಯಿಸೋಕೆ ಕಲಿತಾರೆ. ಈ ಸಾಮರ್ಥ್ಯ ಮಕ್ಕಳಿಗೆ ಹುಟ್ಟಿನಿಂದಲೇ ಬಂದುಬಿಡಲ್ಲ. ಅದನ್ನು ಅವ್ರು ಬೆಳೆಸಿಕೊಳ್ಳಬೇಕಾಗುತ್ತೆ. ಲಾರಾ ಅನ್ನೋ ಸ್ತ್ರೀ ಹೀಗೆ ಹೇಳ್ತಾರೆ: “ಮಕ್ಕಳು ಸೋಲನ್ನ ಅನುಭವಿಸಿದಾಗ ‘ಏನೂ ಆಗೇ ಇಲ್ಲ’ ಅನ್ನೋ ತರ ನಡಕೊಳ್ಳೋದಕ್ಕಿಂತ ಅದನ್ನ ನಿಭಾಯಿಸೋಕೆ ಕಲಿಯೋದು ತುಂಬ ಒಳ್ಳೇದು ಅನ್ನೋದನ್ನ ನಾನೂ ನಮ್ಮ ಯಜಮಾನ್ರು ಗಮನಿಸಿದ್ದೀವಿ. ಇದ್ರಿಂದ ತಾವು ಅಂದುಕೊಂಡ ಹಾಗೆ ಆಗದಿದ್ದಾಗಲೂ ಪ್ರಯತ್ನವನ್ನ ಬಿಡದಿರೋಕೆ ಮಕ್ಕಳು ಕಲಿತಾರೆ.”

ಅನೇಕ ಮಕ್ಕಳಿಗೆ ಸೋಲನ್ನು ನಿಭಾಯಿಸೋದು ಹೇಗಂತನೇ ಗೊತ್ತಿರಲ್ಲ. ಮಕ್ಕಳು ಸೋಲನ್ನು ಅನುಭವಿಸಿದಾಗ ಹೆತ್ತವ್ರು ಅವ್ರದೇನೂ ತಪ್ಪೇ ಇಲ್ಲ ಅಂತ ಹೇಳ್ತಾರೆ ಅಥ್ವಾ ಆ ರೀತಿ ನಡಕೊಳ್ತಾರೆ. ಇದ್ರಿಂದ ಮಕ್ಕಳು ಸೋಲನ್ನು ನಿಭಾಯಿಸೋಕೆ ಕಲಿಯಲ್ಲ. ಉದಾಹರಣೆಗೆ, ತಮ್ಮ ಮಗುಗೆ ಎಕ್ಸಾಮ್‌ನಲ್ಲಿ ಕಮ್ಮಿ ಮಾರ್ಕ್ಸ್‌ ಬಂದಾಗ ಹೆತ್ತವ್ರು ಟೀಚರ್‌ ಮೇಲೆ ತಪ್ಪು ಹೊರಿಸ್ತಾರೆ. ಅಥ್ವಾ ಒಂದು ಮಗು ತನ್ನ ಸ್ನೇಹಿತನ ಜೊತೆ ಜಗಳ ಮಾಡಿಕೊಂಡ್ರೆ ಹೆತ್ತವ್ರು ಆ ಸ್ನೇಹಿತನದ್ದೇ ತಪ್ಪು ಅಂತ ದೂರುತ್ತಾರೆ.

ಹೆತ್ತವ್ರು ಹೀಗೆ ಮಕ್ಕಳ ತಪ್ಪನ್ನು ಬೇರೆಯವ್ರ ಮೇಲೆ ಹಾಕೋದಾದ್ರೆ ಮಕ್ಕಳು ತಮ್ಮ ತಪ್ಪನ್ನು ಒಪ್ಪಿಕೊಂಡು ತಿದ್ದಿಕೊಳ್ಳೋಕೆ ಹೇಗೆ ತಾನೆ ಕಲಿತಾರೆ?

 ನೀವೇನು ಮಾಡಬಹುದು?

 • ನಾವು ಮಾಡೋ ಪ್ರತಿಯೊಂದು ಕೆಲ್ಸದ ಪರಿಣಾಮಗಳನ್ನ ಅನುಭವಿಸಬೇಕಾಗುತ್ತೆ ಅಂತ ಮಕ್ಕಳಿಗೆ ಕಲಿಸಿ.

  ಬೈಬಲ್‌ ತತ್ವ: “ಮನುಷ್ಯನು ಏನು ಬಿತ್ತುತ್ತಿದ್ದಾನೊ ಅದನ್ನೇ ಕೊಯ್ಯುವನು.”—ಗಲಾತ್ಯ 6:7.

  ನಾವು ಮಾಡೋ ಪ್ರತಿಯೊಂದು ಕೆಲ್ಸಕ್ಕೂ ತಕ್ಕ ಪ್ರತಿಫಲ ಸಿಗುತ್ತೆ. ಏನಾದ್ರೂ ಹಾಳು ಮಾಡಿದಾಗ ಅದ್ರಿಂದಾಗೋ ನಷ್ಟನ ಭರ್ತಿ ಮಾಡಬೇಕಾಗುತ್ತೆ. ತಪ್ಪು ಮಾಡಿದಾಗ ಅದ್ರಿಂದಾಗೋ ಕಷ್ಟಗಳನ್ನು ಅನುಭವಿಸಬೇಕಾಗುತ್ತೆ. ಈ ವಿಷ್ಯವನ್ನ ಮಕ್ಕಳು ತಿಳುಕೊಂಡಿರಬೇಕು ಮತ್ತು ಏನಾದ್ರೂ ತಪ್ಪಾದಾಗ ಅದಕ್ಕೆ ತಾವು ಸಹ ಜವಾಬ್ದಾರರು ಅನ್ನೋದನ್ನ ಅರ್ಥಮಾಡಿಕೊಂಡಿರಬೇಕು. ಹಾಗಾಗಿ ಮಕ್ಕಳು ತಪ್ಪು ಮಾಡಿದಾಗ ಬೇರೆಯವ್ರನ್ನ ದೂರಬೇಡಿ ಅಥ್ವಾ ‘ನಮ್ಮ ಮಕ್ಕಳು ತಪ್ಪು ಮಾಡಿಲ್ಲ’ ಅಂತ ಸಮರ್ಥಿಸಬೇಡಿ. ಬದ್ಲಿಗೆ ತಪ್ಪಿನಿಂದಾಗಿ ಬರೋ ಕಷ್ಟಗಳನ್ನ ಮಕ್ಕಳು ಅನುಭವಿಸುವಂತೆ ಬಿಡಿ. ಆದ್ರೆ ಅವ್ರ ವಯಸ್ಸನ್ನ ಮನಸ್ಸಲ್ಲಿ ಇಟ್ಟುಕೊಳ್ಳಿ. ಮಕ್ಕಳಿಗೆ ತಮ್ಮ ತಪ್ಪಿನಿಂದಲೇ ಈ ಕಷ್ಟ ಬಂದಿದೆ ಅನ್ನೋದು ಚೆನ್ನಾಗಿ ಅರ್ಥ ಆಗಿರಬೇಕು.

 • ಸೋಲನ್ನು ಗೆಲುವಿನ ಮೆಟ್ಟಿಲಾಗಿ ಮಾಡಿಕೊಳ್ಳೋಕೆ ಮಕ್ಕಳಿಗೆ ಕಲಿಸಿ.

  ಬೈಬಲ್‌ ತತ್ವ: “ಶಿಷ್ಟನು ಏಳು ಸಾರಿ ಬಿದ್ದರೂ ಮತ್ತೆ ಏಳುವನು, ದುಷ್ಟನು ಕೇಡಿನಿಂದ ಬಿದ್ದೇಹೋಗುವನು.”—ಜ್ಞಾನೋಕ್ತಿ 24:16.

  ಸೋಲನ್ನು ಅನುಭವಿಸಿದಾಗ ತುಂಬ ನೋವಾಗಬಹುದು. ಆದ್ರೆ ಅದ್ರ ನಂತ್ರ ಏನೂ ಮಾಡೋಕಾಗಲ್ಲ ಅಂತೇನಿಲ್ಲ. ಯಾಕಂದ್ರೆ ಸೋಲೇ ಗೆಲುವಿನ ಮೆಟ್ಟಿಲು. ಮಕ್ಕಳು ಸೋತಾಗ ‘ಯಾಕೆ ಈ ತರ ಆಯ್ತು?’ ಅಂತ ಯೋಚಿಸೋ ಬದ್ಲಿಗೆ ‘ಮುಂದಿನ ಸಲ ಈ ತರ ಆಗಬಾರದಂದ್ರೆ ಏನು ಮಾಡಬೇಕು?’ ಅಂತ ಯೋಚಿಸೋಕೆ ಸಹಾಯ ಮಾಡಿ. ಒಂದ್ವೇಳೆ ನಿಮ್ಮ ಮಗ ಸ್ಕೂಲ್‌ ಟೆಸ್ಟ್‌ನಲ್ಲಿ ಫೇಲಾದ್ರೆ, ಮುಂದಿನ ಸಲ ಚೆನ್ನಾಗಿ ಓದಿ ಒಳ್ಳೇ ಮಾರ್ಕ್ಸ್‌ ತಗೋಬೇಕು ಅನ್ನೋ ಗುರಿ ಇಡೋಕೆ ಅವನಿಗೆ ಸಹಾಯ ಮಾಡಿ. (ಜ್ಞಾನೋಕ್ತಿ 20:4) ಒಂದ್ವೇಳೆ ನಿಮ್ಮ ಮಗಳಿಗೆ ಅವಳ ಫ್ರೆಂಡ್‌ ಜೊತೆ ಜಗಳ ಆಗಿದ್ರೆ ನಿಮ್ಮ ಮಗಳದ್ದು ತಪ್ಪೇ ಇಲ್ಲ ಅಂದ್ರುನೂ ಫ್ರೆಂಡ್‌ ಹತ್ರ ಹೋಗಿ ರಾಜಿಮಾಡಿಕೊಳ್ಳೋಕೆ ಏನು ಮಾಡಬೇಕು ಅಂತ ಯೋಚಿಸಲು ಅವಳಿಗೆ ಸಹಾಯ ಮಾಡಿ.—ರೋಮನ್ನರಿಗೆ 12:18; 2 ತಿಮೊತಿ 2:24.

 • ‘ನಾನ್ಯಾವತ್ತೂ ಸೋಲಲ್ಲ’ ಅಂತ ಯೋಚಿಸೋದು ಒಳ್ಳೇದಲ್ಲ ಅನ್ನೋದನ್ನ ಮಕ್ಕಳಿಗೆ ಕಲಿಸಿ.

  ಬೈಬಲ್‌ ತತ್ವ: “ನಾನು ನಿಮ್ಮಲ್ಲಿ ಪ್ರತಿಯೊಬ್ಬರಿಗೂ ಹೇಳುವುದೇನೆಂದರೆ, ನಿಮ್ಮಲ್ಲಿ ಯಾವನೂ ತನ್ನ ಕುರಿತು ಅಗತ್ಯಕ್ಕಿಂತ ಹೆಚ್ಚಾಗಿ ಭಾವಿಸಿಕೊಳ್ಳಬಾರದು.”—ರೋಮನ್ನರಿಗೆ 12:3.

  “ಎಲ್ರಿಗಿಂತ ನೀನೇ ಬೆಸ್ಟ್‌” ಅಂತ ಮಕ್ಕಳಿಗೆ ಹೇಳೋದ್ರಿಂದ ಯಾವ ಪ್ರಯೋಜನನೂ ಆಗಲ್ಲ ಮತ್ತು ಅದು ನಿಜನೂ ಅಲ್ಲ. ಯಾಕಂದ್ರೆ ಚೆನ್ನಾಗಿ ಓದೋ ಮಕ್ಕಳು ಸಹ ಎಲ್ಲಾ ಟೈಮಲ್ಲೂ ಒಳ್ಳೇ ಮಾರ್ಕ್ಸ್‌ ತೆಗೆಯುತ್ತಾರೆ ಅಂತ ಹೇಳಕ್ಕಾಗಲ್ಲ. ಅಥ್ವಾ ಒಂದು ಆಟನ ಚೆನ್ನಾಗಿ ಆಡೋ ಮಕ್ಕಳು ಯಾವಾಗ್ಲೂ ಗೆಲ್ತಾರೆ ಅಂತ ಹೇಳಕ್ಕಾಗಲ್ಲ. ‘ನಾನೇನು ಪರ್ಫೆಕ್ಟ್‌ ಅಲ್ಲ, ನಾನೂ ಕೆಲವೊಮ್ಮೆ ಸೋಲ್ತೀನಿ’ ಅಂತ ಅರ್ಥ ಮಾಡ್ಕೊಂಡಿರೋ ಮಕ್ಕಳು ಸೋಲನ್ನು ಅನುಭವಿಸಿದಾಗ ನಿಭಾಯಿಸಿಕೊಂಡು ಹೋಗ್ತಾರೆ ಮತ್ತು ಬಿದ್ದಾಗ ಮತ್ತೆ ಎದ್ದು ನಿಲ್ತಾರೆ.

  ನಮಗೆ ಬರೋ ಕಷ್ಟಗಳು ನಮ್ಮನ್ನು ಇನ್ನೂ ಬಲಪಡಿಸುತ್ತವೆ ಮತ್ತು ಸಹಿಸಿಕೊಳ್ಳೋ ಗುಣವನ್ನ ಬೆಳೆಸಿಕೊಳ್ಳೋಕೆ ಸಹಾಯ ಮಾಡುತ್ತವೆ. (ಯಾಕೋಬ 1:2-4) ಸೋತಾಗ ಮಕ್ಕಳಿಗೆ ನೋವಾಗೋದಾದ್ರೂ ಅವ್ರು ಅತಿಯಾಗಿ ನಿರಾಶರಾಗದಿರೋಕೆ ಮತ್ತು ‘ಮುಂದೆ ಗೆಲ್ತೇವೆ’ ಅಂತ ಯೋಚಿಸೋಕೆ ಅವ್ರಿಗೆ ಸಹಾಯ ಮಾಡಿ.

  ಕಷ್ಟದ ಸನ್ನಿವೇಶವನ್ನ ನಿಭಾಯಿಸಿಕೊಂಡು ಹೋಗೋಕೆ ಮಕ್ಕಳಿಗೆ ಕಲಿಸಬೇಕಂದ್ರೆ ತುಂಬ ಸಮಯ ಹಾಗೂ ಪ್ರಯತ್ನ ಬೇಕು. ಆದ್ರೆ ಚಿಕ್ಕ ವಯಸ್ಸಲ್ಲೇ ಸೋಲನ್ನು ನಿಭಾಯಿಸಿಕೊಂಡು ಹೋಗೋಕೆ ಕಲಿತಿರೋ ಮಕ್ಕಳು ದೊಡ್ಡವರಾದ ಮೇಲೆ ಅದನ್ನ ಇನ್ನೂ ಚೆನ್ನಾಗಿ ನಿಭಾಯಿಸಿಕೊಂಡು ಹೋಗ್ತಾರೆ. “ಯಾವುದೇ ಪರಿಸ್ಥಿತಿಯನ್ನ ನಿಭಾಯಿಸಿಕೊಂಡು ಹೋಗುವಂಥ ಸಾಮರ್ಥ್ಯ ಇರೋ ಹದಿವಯಸ್ಸಿನವರು ಸಮಸ್ಯೆಗಳು ಬಂದಾಗ ಅಪಾಯಕರ ವಿಷ್ಯಗಳನ್ನ ಅಥ್ವಾ ಮೂರ್ಖತನದ ನಿರ್ಣಯಗಳನ್ನ ಮಾಡಲ್ಲ. ಅನಿರೀಕ್ಷಿತವಾಗಿ ಪರಿಸ್ಥಿತಿಗಳು ಬದಲಾದ್ರೂ ಚೆನ್ನಾಗಿ ನಿಭಾಯಿಸಿಕೊಂಡು ಹೋಗ್ತಾರೆ” ಅಂತ ಲೆಟ್ಟಿಂಗ್‌ ಗೋ ವಿಥ್‌ ಲವ್‌ ಆಂಡ್‌ ಕಾನ್ಫಿಡೆನ್ಸ್‌ ಅನ್ನೋ ಪುಸ್ತಕ ಹೇಳುತ್ತೆ. ಕಷ್ಟಕರ ಸನ್ನಿವೇಶಗಳನ್ನ ನಿಭಾಯಿಸೋಕೆ ಮಕ್ಕಳು ಕಲಿತರೆ ಅವ್ರಿಗೆ ದೊಡ್ಡವರಾದ ಮೇಲೂ ಸಹಾಯ ಆಗುತ್ತೆ.

ಕಿವಿಮಾತು. ಮೊದಲು ನೀವು ಮಾದರಿ ಇಡಿ. ನಿಮ್ಮ ಜೀವನದಲ್ಲಿ ಬರೋ ಸೋಲನ್ನು ನೀವು ಚೆನ್ನಾಗಿ ನಿಭಾಯಿಸಿದ್ರೆ ನಿಮ್ಮ ಮಕ್ಕಳು ಅದನ್ನು ನೋಡಿ ಅವ್ರ ಜೀವನದಲ್ಲಿ ಬರೋ ಸೋಲನ್ನು ಚೆನ್ನಾಗಿ ನಿಭಾಯಿಸ್ತಾರೆ.