ಮಾಹಿತಿ ಇರುವಲ್ಲಿ ಹೋಗಲು

ಸುಖೀ ಸಂಸಾರಕ್ಕೆ ಸಲಹೆಗಳು | ಮಕ್ಕಳ ಪಾಲನೆ

ಸ್ಮಾರ್ಟ್‌ಫೋನ್‌ ಲೋಕದಲ್ಲಿ ಮಕ್ಕಳು—ಭಾಗ 2: ಮಕ್ಕಳಿಗೆ ಸ್ಮಾರ್ಟ್‌ಫೋನ್‌ ಬೇಕಾ? ಬೇಡ್ವಾ?

ಸ್ಮಾರ್ಟ್‌ಫೋನ್‌ ಲೋಕದಲ್ಲಿ ಮಕ್ಕಳು—ಭಾಗ 2: ಮಕ್ಕಳಿಗೆ ಸ್ಮಾರ್ಟ್‌ಫೋನ್‌ ಬೇಕಾ? ಬೇಡ್ವಾ?

ಸ್ಮಾರ್ಟ್‌ಫೋನ್‌ ಒಂದು ಚೂಪಾದ ಕತ್ತಿ ಇದ್ದ ಹಾಗೆ. ಅದ್ರಿಂದ ಪ್ರಯೋಜ್ನಾನೂ ಇದೆ ಅಪಾಯಾನೂ ಇದೆ. ಎಲ್ಲ ನಾವು ಅದನ್ನ ಹೇಗೆ ಉಪಯೋಗಿಸ್ತೀವೋ ಅದ್ರ ಮೇಲೆ ಹೊಂದಿಕೊಂಡಿದೆ. ಹಾಗಾದ್ರೆ ಈ ಸ್ಮಾರ್ಟ್‌ಫೋನ್‌ನ ನಿಮ್ಮ ಮಕ್ಕಳಿಗೆ ಹೇಗೆ ಬಳಸ್ಬೇಕು ಅಂತ ಹೇಳಿಕೊಟ್ಟಿದ್ದೀರಾ? ಉದಾಹರಣೆಗೆ, ಎಷ್ಟು ಹೊತ್ತು ನಿಮ್ಮ ಮಕ್ಕಳು ಸ್ಮಾರ್ಟ್‌ಫೋನ್‌ ಉಪಯೋಗಿಸ್ಬೇಕು ಅನ್ನೋದ್ರ ಬಗ್ಗೆ ರೂಲ್ಸ್‌ ಇಟ್ಟಿದ್ದೀರಾ? *

 ನಿಮ್ಗೆ ಗೊತ್ತಿರಬೇಕಾದ ವಿಷ್ಯಗಳು

 • ಸ್ಮಾರ್ಟ್‌ಫೋನ್‌ ಕೈಯಲ್ಲಿರೋದು ಮಡಿಲಲ್ಲಿ ಬೆಂಕಿ ಇದ್ದಂಗೆ. “ಸ್ಮಾರ್ಟ್‌ಫೋನ್‌ ಲೋಕದಲ್ಲಿ ಮಕ್ಕಳು—ಭಾಗ 1: ಮಕ್ಕಳಿಗೆ ಸ್ಮಾರ್ಟ್‌ಫೋನ್‌ ಬೇಕಾ? ಬೇಡ್ವಾ?” ಅನ್ನೋ ಲೇಖನದಲ್ಲಿ ನೋಡಿದ ಹಾಗೆ ಸ್ಮಾರ್ಟ್‌ಫೋನಲ್ಲಿ ಮಕ್ಕಳು ಏನು ಬೇಕಾದ್ರೂ ನೋಡಬಹುದು. ಇಂಟರ್‌ನೆಟ್‌ನಲ್ಲಿ ಒಳ್ಳೇದು ಕೆಟ್ಟದು ಎಲ್ಲಾ ನೋಡಬಹುದು.

  “ಹೆತ್ತವರು ಮಕ್ಕಳಿಗೆ ಸ್ಮಾರ್ಟ್‌ಫೋನ್‌ ಕೊಡಿಸ್ಬಿಡ್ತಾರೆ. ಆದ್ರೆ ಅದ್ರಿಂದ ಅವ್ರು ಸುಲಭವಾಗಿ ಕೆಟ್ಟ ಸಹವಾಸ ಮಾಡ್ತಾರೆ ಮತ್ತು ಕೆಟ್ಟ ಯೋಚ್ನೆಗಳಿಗೆ ಬಲಿಬೀಳ್ತಾರೆ ಅನ್ನೋ ನಿಜನಾ ಮರೆತುಬಿಡ್ತಾರೆ.—ಬ್ರೆಂಡಾ.

 • ಮಕ್ಕಳಿಗೆ ಮಾರ್ಗದರ್ಶನ ಬೇಕು. ಈಗಿನ ಕಾಲದ ಮಕ್ಕಳಿಗೆ ತಂತ್ರಜ್ಞಾನನಾ ಬಳಸೋದು ನೀರು ಕುಡಿದಷ್ಟು ಸುಲಭ. ಆದ್ರೆ ದೊಡ್ಡವ್ರಿಗೆ ಇದು ಹೊಸ ವಿಷ್ಯ. ಇದರರ್ಥ ಮಕ್ಕಳಿಗೆ ಸ್ಮಾರ್ಟ್‌ಫೋನ್‌ನ ಹೇಗೆ, ಯಾವಾಗ ಉಪಯೋಗಿಸ್ಬೇಕಂತ ಚೆನ್ನಾಗಿ ಗೊತ್ತು, ಹೆತ್ತವರಿಗೆ ಏನೂ ಗೊತ್ತಿಲ್ಲ ಅಂತಲ್ಲ.

  ಮಕ್ಕಳು ಸ್ಮಾರ್ಟ್‌ಫೋನ್‌ನ ಹೆತ್ತವರಿಗಿಂತ ಚೆನ್ನಾಗಿ ಬಳಸ್ತಿರಬಹುದು ನಿಜ, ಆದ್ರೆ ಅದನ್ನ ಸರಿಯಾದ ರೀತಿಯಲ್ಲಿ ಬಳಸ್ತಿದ್ದಾರೆ ಅಂತ ಹೇಳಕ್ಕಾಗಲ್ಲ. ತಂತ್ರಜ್ಞಾನನಾ ಅರೆದು ಕುಡಿದಿರೊ ಮಕ್ಕಳಿಗೂ ಸಹ ಸ್ಮಾರ್ಟ್‌ಫೋನ್‌ ಒಳ್ಳೇ ರೀತಿಯಲ್ಲಿ ಉಪಯೋಗಿಸಲು ಅವರ ಹೆತ್ತವರ ಮಾರ್ಗದರ್ಶನ ಬೇಕೇ ಬೇಕು.

  “ಸರಿಯಾದ ತರಬೇತಿ ಇಲ್ಲದೆ ನಿಮ್ಮ ಮಕ್ಕಳಿಗೆ ಸ್ಮಾರ್ಟ್‌ಫೋನ್‌ ಕೊಡೋದು ಹೇಗಿರುತ್ತೆ ಅಂದ್ರೆ ಡ್ರೈವಿಂಗ್‌ ಕಲಿಸ್ದೆ ಕಾರ್‌ ಕೀನ ಕೊಟ್ಟು, ಡ್ರೈವರ್‌ ಸೀಟಲ್ಲಿ ಕೂರಿಸಿ ‘ಜೋಪಾನ’ ಅಂತ ಹೇಳಿದ ಹಾಗೆ ಇರುತ್ತೆ.”—ಸೇತ್‌.

 ನೀವೇನು ಮಾಡಬೇಕು

 • ಸ್ಮಾರ್ಟ್‌ಫೋನ್‌ ಬಗ್ಗೆ ತಿಳ್ಕೊಳ್ಳಿ. ನಿಮ್ಮ ಮಕ್ಕಳು ಉಪಯೋಗಿಸೊ ಸ್ಮಾರ್ಟ್‌ಫೋನ್‌ನಲ್ಲಿರೊ ಟೂಲ್ಸ್‌ ಬಗ್ಗೆ ಚೆನ್ನಾಗಿ ತಿಳ್ಕೊಳ್ಳಿ. ಆಗ ಅವ್ರು ಫೋನ್‌ನ ಸರಿಯಾಗಿ ಉಪಯೋಗಿಸೋಕೆ ನೀವು ಅವ್ರಿಗೆ ಸಹಾಯ ಮಾಡಕ್ಕಾಗುತ್ತೆ. ಉದಾಹರಣೆಗೆ:

  ಮಕ್ಕಳು ಎಷ್ಟು ಸಮ್ಯ ಫೋನ್‌ ಉಪಯೋಗಿಸ್ತಾರೆ, ಯಾವೆಲ್ಲಾ ವೆಬ್‌ಸೈಟ್‌ ನೋಡ್ತಾರೆ ಅನ್ನೋದನ್ನ ಹೆತ್ತವರು ನಿಯಂತ್ರಿಸೋಕೆ ಸಹಾಯ ಮಾಡೊ ಸೆಟ್ಟಿಂಗ್ಸ್‌ ಸ್ಮಾರ್ಟ್‌ಫೋನ್‌ನಲ್ಲಿ ಇದೆ. ಅದ್ರ ಬಗ್ಗೆ ನಿಮ್ಗೆ ಗೊತ್ತಾ?

  ಮಕ್ಕಳು ನೋಡಬಾರದ ವಿಷ್ಯಗಳನ್ನ ಬ್ಲಾಕ್‌ ಮಾಡೋ ಸೆಟ್ಟಿಂಗ್ಸ್‌ ಫೋನಲ್ಲಿ ಇದೆ. ಅದ್ರ ಬಗ್ಗೆ ನಿಮ್ಗೆ ಗೊತ್ತಾ?

  ಸ್ಮಾರ್ಟ್‌ಫೋನ್‌ ಬಗ್ಗೆ ನೀವು ಎಷ್ಟು ಚೆನ್ನಾಗಿ ತಿಳುಕೊಳ್ತೀರೋ, ಅಷ್ಟೇ ಚೆನ್ನಾಗಿ ನಿಮ್ಮ ಮಕ್ಕಳಿಗೆ ಅದನ್ನ ಒಳ್ಳೇ ರೀತಿಯಲ್ಲಿ ಬಳಸೋದಿಕ್ಕೆ ಸಹಾಯ ಮಾಡಬಹುದು.

  ಬೈಬಲ್‌ ತತ್ವ: “ಬಲ್ಲವನಿಗೆ ಬಹು ಬಲ.”—ಜ್ಞಾನೋಕ್ತಿ 24:5.

 • ಮಿತಿ ಇಡಿ. ಏನು ಮಾಡಬೇಕು, ಏನು ಮಾಡಬಾರದು ಅನ್ನೋದಕ್ಕೆ ಮಿತಿ ಇಡಿ. ಉದಾಹರಣೆಗೆ:

  ಊಟ ಮಾಡ್ವಾಗ, ಕುಟುಂಬವಾಗಿ ಸ್ನೇಹಿತರ ಜೊತೆ ಒಟ್ಟಿಗೆ ಸಮ್ಯ ಕಳಿವಾಗ ನಿಮ್ಮ ಮಕ್ಕಳು ಫೋನ್‌ ಉಪಯೋಗಿಸೋದಿಕ್ಕೆ ಬಿಡ್ತೀರಾ?

  ಇಡೀ ರಾತ್ರಿ ನಿಮ್ಮ ಮಕ್ಕಳು ಫೋನ್‌ ಇಟ್ಕೊಳ್ಳೋಕೆ ಬಿಡ್ತೀರಾ?

  ವಾಟ್ಸ್‌ಆ್ಯಪ್‌ನ ಉಪಯೋಗಿಸೋಕೆ ಬಿಡ್ತೀರಾ?

  ಫೋನ್‌ನ ಎಷ್ಟು ಹೊತ್ತು ಬಳಸೋಕೆ ಬಿಡ್ತೀರಾ?

  ಒಂದಿನದಲ್ಲಿ ಎಷ್ಟು ಹೊತ್ತು ಫೋನ್‌ ಬಳಸಬೇಕು ಅಂತ ಲಿಮಿಟ್‌ ಇಟ್ಟಿದ್ದೀರಾ?

  ನೀವು ಮಾಡಿರೋ ರೂಲ್ಸ್‌ ಬಗ್ಗೆ ನಿಮ್ಮ ಮಕ್ಕಳಿಗೆ ಹೇಳಿ. ಅದನ್ನ ಮುರಿದ್ರೆ ಶಿಕ್ಷೆ ಕೊಡಿ.

  ಬೈಬಲ್‌ ತತ್ವ: “ಹುಡುಗನ ಶಿಕ್ಷೆಗೆ ಹಿಂತೆಗೆಯಬೇಡ.”—ಜ್ಞಾನೋಕ್ತಿ 23:13.

 • ಮಕ್ಕಳ ಮೊಬೈಲ್‌ ಚೆಕ್‌ ಮಾಡಿ. ಮಕ್ಕಳು ಏನ್‌ ಮೆಸೆಜ್‌ ಕಳಿಸ್ತಾರೆ, ಯಾವ ಆ್ಯಪ್‌ಗಳನ್ನ, ಪಿಕ್ಚರ್‌ಗಳನ್ನ, ವೆಬ್‌ಸೈಟ್‌ಗಳನ್ನ ನೋಡ್ತಾರೆ ಅಂತ ಚೆಕ್‌ ಮಾಡಿ. ಮುಖ್ಯವಾಗಿ ಅವ್ರ ಮೊಬೈಲ್‌ ಪಾಸ್‌ವರ್ಡ್‌ ತಿಳ್ಕೊಳ್ಳಿ.

  “ನಾವು ನಮ್ಮ ಮಗಳಿಗೆ ‘ನಿನ್ನ ಫೋನ್‌ನ ಯಾವಾಗ ಬೇಕಾದ್ರೂ ಚೆಕ್‌ ಮಾಡ್ತೀವಿ. ಒಂದುವೇಳೆ ಫೋನ್‌ನ ಸರಿಯಾಗಿ ಉಪಯೋಗಿಸ್ತಿಲ್ಲ ಅಂತ ಗೊತ್ತಾದ್ರೆ ಫೋನ್‌ ಕೊಡಲ್ಲ‘ ಅಂತ ಹೇಳಿದ್ವಿ.”—ಲಾರೆನ್‌.

  ಮಕ್ಕಳು ಸ್ಮಾರ್ಟ್‌ಫೋನ್‌ ಹೇಗೆ ಉಪಯೋಗಿಸ್ತಾರೆ ಅಂತ ತಿಳ್ಕೊಳ್ಳೋ ಹಕ್ಕು ಹೆತ್ತವರಾದ ನಿಮಗಿದೆ.

  ಬೈಬಲ್‌ ತತ್ವ: “ಒಬ್ಬ ಹುಡುಗನಾದರೂ ಶುದ್ಧವೂ ಸತ್ಯವೂ ಆದ ನಡತೆಯಿಂದಲೇ ತನ್ನ ಗುಣವನ್ನು ತೋರ್ಪಡಿಸಿಕೊಳ್ಳುವನು.”—ಜ್ಞಾನೋಕ್ತಿ 20:11.

 • ಯಾವ್ದು ಒಳ್ಳೇದು ಯಾವ್ದು ಕೆಟ್ಟದು ಅಂತ ಹೇಳಿಕೊಡಿ. ಯಾವುದು ಒಳ್ಳೇದೋ ಅದನ್ನ ಮಾಡೋಕೆ ಕಲಿಸಿ. ಇದು ಯಾಕೆ ಅಷ್ಟು ಪ್ರಾಮುಖ್ಯ ಅಂದ್ರೆ ಕೆಲ್ವು ಮಕ್ಕಳು ಎಷ್ಟು ಮೊಂಡರಾಗಿರ್ತಾರೆ ಅಂದ್ರೆ ಅಪ್ಪಅಮ್ಮ ಯಾವುದನ್ನ ಮಾಡಬೇಡ ಅಂತಾರೋ ಅದನ್ನೇ ಮಾಡ್ತಾರೆ. *

  ಆದ್ರಿಂದ ನಿಮ್ಮ ಮಕ್ಕಳಿಗೆ ಪ್ರಾಮಾಣಿಕತೆ, ಸ್ವನಿಯಂತ್ರಣ, ಜವಾಬ್ದಾರಿ ತಗೊಳ್ಳೋಂಥ ಒಳ್ಳೇ ಗುಣಗಳನ್ನ ಕಲಿಸಿ. ಯಾವ ಮಕ್ಕಳಲ್ಲಿ ಈ ಒಳ್ಳೇ ಗುಣಗಳಿರುತ್ತೋ ಅಂಥ ಮಕ್ಕಳು ತಮ್ಮ ಫೋನನ್ನ ವಿವೇಕದಿಂದ ತುಂಬಾ ಹುಷಾರಾಗಿ ಉಪಯೋಗಿಸ್ತಾರೆ.

  ಬೈಬಲ್‌ ತತ್ವ: ‘ಪ್ರೌಢರು ಸರಿ ಮತ್ತು ತಪ್ಪಿನ ಭೇದವನ್ನು ತಿಳಿಯಲಿಕ್ಕಾಗಿ ತಮ್ಮ ಗ್ರಹಣ ಶಕ್ತಿಗಳನ್ನು ತರಬೇತುಗೊಳಿಸಿ ಕೊಂಡವರಾಗಿರುತ್ತಾರೆ.’—ಇಬ್ರಿಯ 5:14.

^ ಪ್ಯಾರ. 1 ಈ ಲೇಖನದಲ್ಲಿ ಹೇಳಿರೋ “ಸ್ಮಾರ್ಟ್‌ಫೋನ್‌” ಅಂದ್ರೆ ಇಂಟರ್‌ನೆಟ್‌ ಕನೆಕ್ಷನ್‌ ಇರೊ ಸೆಲ್‌ಫೋನ್‌.

^ ಪ್ಯಾರ. 24 ಉದಾಹರಣೆಗೆ ಕೆಲವ್ರು “ಗೋಸ್ಟ್‌ ಆ್ಯಪ್‌” ಉಪಯೋಗಿಸ್ತಾರೆ. ಇದು ಕ್ಯಾಲ್‌ಕ್ಯುಲೇಟರ್‌ ತರ ಕಾಣಿಸುತ್ತೆ. ಆದ್ರೆ ಇದು ಮಾಡೋ ಕೆಲಸ ಏನಂದ್ರೆ ಮಕ್ಕಳು ಪೋನಲ್ಲಿ ನೋಡೋ ವಿಷ್ಯಗಳನ್ನ ಹೆತ್ತವರಿಂದ ಬಚ್ಚಿಡುತ್ತೆ.