ಮಾಹಿತಿ ಇರುವಲ್ಲಿ ಹೋಗಲು

ಸುಖೀ ಸಂಸಾರಕ್ಕೆ ಸಲಹೆಗಳು | ಮದುವೆ

ತಾಳ್ಮೆಯನ್ನ ಹೇಗೆ ತೋರಿಸೋದು?

ತಾಳ್ಮೆಯನ್ನ ಹೇಗೆ ತೋರಿಸೋದು?

“ಪ್ರತಿದಿನ ಗಂಡ-ಹೆಂಡತಿಗೆ ತಾಳ್ಮೆಯ ಪರೀಕ್ಷೆ ಬರುತ್ತೆ. ಮದುವೆ ಮುಂಚೆ ಈ ಗುಣ ತೋರಿಸೋದು ಅಷ್ಟು ದೊಡ್ಡ ವಿಷ್ಯ ಅಲ್ಲ ಅಂತ ನಮಗೆ ಅನಿಸುತ್ತೆ. ಆದ್ರೆ ಸುಖೀ ಸಂಸಾರಕ್ಕೆ ಈ ಗುಣ ತುಂಬಾನೇ ಮುಖ್ಯ.”—ಜಾನ್‌

 ನಮಗೆ ಯಾಕೆ ತಾಳ್ಮೆ ಬೇಕು?

 • ಮದುವೆ ನಂತ್ರ ನಿಮಗೆ ಸಂಗಾತಿಯ ತಪ್ಪುಗಳೇ ಹೆಚ್ಚು ಕಣ್ಣಿಗೆ ಬೀಳುತ್ತೆ.

  “ಮದುವೆಯ ಹೊಸದರಲ್ಲಿ ಎಲ್ಲಾ ಚೆನ್ನಾಗಿರುತ್ತೆ. ಆದ್ರೆ ಹೋಗ್ತಾ-ಹೋಗ್ತಾ ನಿಧಾನವಾಗಿ ನಿಮ್ಮ ಸಂಗಾತಿಯ ಲೋಪದೋಷಗಳು ಕಣ್ಣಿಗೆ ಬೀಳ್ತಾ ಇರುತ್ತೆ. ಅವರ ತಪ್ಪುಗಳನ್ನೇ ಕಂಡುಹಿಡಿಯೋದು ನಿಮಗೆ ರೂಢಿ ಆಗಿ ಬಿಟ್ರೆ ಆಮೇಲೆ ನೀವು ತಾಳ್ಮೆ ಕಳ್ಕೊಳ್ತೀರ.”—ಜೆಸಿನಾ.

 • ನಿಮಗೆ ತಾಳ್ಮೆ ಇಲ್ಲಾಂದ್ರೆ ಯೋಚನೆ ಮಾಡ್ದೆ ಮಾತಾಡ್ತೀರ.

  “ನನಗೆ ಅನಿಸಿದನ್ನೆಲ್ಲ ಪಟ್‌ ಅಂತ ಹೇಳಬಿಡ್ತೀನಿ. ನಾನು ಏನ್‌ ಹೇಳಬಾರದೋ ಅದನ್ನ ಕೂಡ ಹೇಳಬಿಡ್ತೀನಿ. ಆಮೇಲೆ ಒಂದು ಸಲ ತಾಳ್ಮೆಯಿಂದ ಯೋಚನೆ ಮಾಡಿ ನೋಡಿದ್ರೆ ಅದನ್ನೆಲ್ಲ ಹೇಳ್ತಿರಲಿಲ್ಲ ಅಲ್ವಾ ಅಂತ ಅನಿಸುತ್ತೆ.”—ಕಾರ್ಮೆನ್‌

  “ಪ್ರೀತಿಯು ದೀರ್ಘ ಸಹನೆಯುಳ್ಳದ್ದೂ ದಯೆಯುಳ್ಳದ್ದೂ ಆಗಿದೆ” ಅಂತ ಬೈಬಲ್‌ ಹೇಳುತ್ತೆ. (1 ಕೊರಿಂಥ 13:4) ಒಬ್ಬರಿಗೆ ಇನ್ನೊಬ್ಬರ ಮೇಲೆ ಪ್ರೀತಿ ಇದ್ರೆ ಮಾತ್ರ ತಾಳ್ಮೆ ತೋರಿಸೋಕೆ ಆಗುತ್ತೆ ಅಂತ ಈ ವಚನದಿಂದ ಗೊತ್ತಾಗುತ್ತೆ. ಆದ್ರೆ ಪ್ರತಿಸಲ ಈ ತರ ಆಗಲ್ಲ. ಮೇಲೆ ಹೇಳಿದ ಜಾನ್‌ ಹೀಗೆ ಹೇಳ್ತಾನೆ: “ಬೇರೆ ಗುಣಗಳ ತರ ತಾಳ್ಮೆ ತೋರಿಸೋದು ಕಷ್ಟನೇ. ಅದನ್ನ ತೋರಿಸೋಕೆ ಹೆಚ್ಚು ಪ್ರಯತ್ನ ಮಾಡಬೇಕು.”

 ತಾಳ್ಮೆಯನ್ನ ನಾವು ಹೇಗೆ ತೋರಿಸೋದು?

 • ಅಚಾನಕ್ಕಾಗಿ ಕೆಲವೊಂದು ವಿಷ್ಯಗಳು ನಡೆದಾಗ ತಾಳ್ಮೆ ತೋರಿಸೋಕೆ ಕಷ್ಟ ಆಗುತ್ತೆ.

  ಉದಾಹರಣೆಗೆ: ನಿಮ್ಮ ಸಂಗಾತಿ ನಿಮಗೆ ನೋವು ಮಾಡೋ ವಿಷ್ಯ ಹೇಳಿದ್ರೆ ನೀವು ಉಲ್ಟಾ ಅವ್ರಿಗೆ ನೋವು ಮಾಡೋಕೆ ಏನಾದ್ರೂ ಹೇಳಬೇಕು ಅಂತ ಅನಿಸುತ್ತೆ.

  ಬೈಬಲ್‌ ತತ್ವ: “ನಿನ್ನ ಮನಸ್ಸು ಕೋಪಕ್ಕೆ ಆತುರಪಡದಿರಲಿ; ಕೋಪಕ್ಕೆ ಮೂಢರ ಎದೆಯೇ ನೆಲೆ.”—ಪ್ರಸಂಗಿ 7:9.

  ತಾಳ್ಮೆಯನ್ನ ಹೇಗೆ ತೋರಿಸೋದು: ಸ್ವಲ್ಪ ನಿಲ್ಲಿ. ನೀವು ಏನಾದ್ರೂ ಉಲ್ಟಾ ಹೇಳೋ ಮುಂಚೆ ನಿಮ್ಮ ಸಂಗಾತಿ ನಿಮಗೆ ನೋವು ಮಾಡೋಕೆ, ಬೇಜಾರ್‌ ಮಾಡೋಕೆ ಹಾಗೆ ಹೇಳಿಲ್ಲ ಅಂತ ಅರ್ಥ ಮಾಡ್ಕೊಳ್ಳಿ. ಫೈಟಿಂಗ್‌ ಫಾರ್‌ ಯುವರ್‌ ಮ್ಯಾರೇಜ್‌ ಅನ್ನೋ ಪುಸ್ತಕ ಹೀಗೆ ಹೇಳುತ್ತೆ: “ನಮ್ಮಲ್ಲಿ ಹೆಚ್ಚಿನ ಜನ ಸಂಗಾತಿ ಯಾಕೆ ಹೀಗೆ ಹೇಳಿದ್ರು, ಏನ್‌ ಹೇಳೋಕೆ ಇಷ್ಟಪಡ್ತಿದ್ದಾರೆ ಅಂತ ಅರ್ಥ ಮಾಡ್ಕೊಳ್ಳದೆ ನಾವೇ ಏನೋ ಒಂದು ಊಹಿಸ್ಕೊಂಡು ಅದ್ರ ಪ್ರಕಾರ ನಡ್ಕೊಳ್ತೀವಿ.”

  ನಿಮ್ಮ ಸಂಗಾತಿ ಬೇಜಾರ್‌ ಆಗೋ ರೀತಿಯಲ್ಲಿ ನಿಮ್ಮ ಹತ್ರ ಮಾತಾಡಿದ್ರೂ ಎದುರುತ್ತರ ಕೊಡಬೇಡಿ. ತಾಳ್ಮೆ ತೋರಿಸಿ. “ಕಟ್ಟಿಗೆಯಿಲ್ಲದಿದ್ದರೆ ಬೆಂಕಿ ಆರುವದು” ಅಂತ ಬೈಬಲ್‌ ಹೇಳುತ್ತೆ.—ಜ್ಞಾನೋಕ್ತಿ 26:20.

  “ನಿಮ್ಮ ಹೆಂಡತಿ ನಿಮಗೆ ಶತ್ರು ತರ ಇದ್ದಾಳೆ ಅಂತ ಅನಿಸಿದ್ರೆ. ನೀವು ಯಾಕೆ ಅವಳನ್ನ ಪ್ರೀತಿಸ್ತೀರಿ ಅಂತ ಯೋಚಿಸಿ. ತಕ್ಷಣ ಅವಳಿಗೆ ಇಷ್ಟ ಆಗೋದೇನಾದ್ರೂ ಮಾಡಿ.”—ಈತನ್‌

  ಸ್ವಲ್ಪ ಯೋಚಿಸಿ:

  • ನಿಮ್ಮ ಸಂಗಾತಿ ನಿಮಗೆ ನೋವು ಆಗೋ ತರ ಏನಾದ್ರೂ ಮಾತಾಡಿದ್ರೆ ಅಥವಾ ನಡ್ಕೊಂಡ್ರೆ ನೀವು ಹೇಗೆ ನಡ್ಕೊಳ್ತೀರಾ?

  • ಮತ್ತೆ ನಿಮ್ಮ ಸಂಗಾತಿ ಆದೆ ತರ ನಡ್ಕೊಂಡ್ರೆ ನೀವು ತಾಳ್ಮೆಯನ್ನ ಹೇಗೆ ಹೆಚ್ಚು ತೋರಿಸ್ತೀರಾ?

 • ಸಿಟ್ಟು ಬರೋ ಹಾಗೆ ಮತ್ತೆ-ಮತ್ತೆ ನಡ್ಕೊಂಡ್ರೆ.

  ಉದಾಹರಣೆಗೆ: ನಿಮ್ಮ ಸಂಗಾತಿಗಾಗಿ ಯಾವಾಗಲೂ ಕಾದು-ಕಾದು ಸಾಕಾಗಿ ಕೋಪ ನೆತ್ತಿಗೇರುತ್ತೆ.

  ಬೈಬಲ್‌ ತತ್ವ: “ಒಬ್ಬರನ್ನೊಬ್ಬರು ಸಹಿಸಿಕೊಂಡು ಒಬ್ಬರನ್ನೊಬ್ಬರು ಉದಾರವಾಗಿ ಕ್ಷಮಿಸುವವರಾಗಿರಿ.”—ಕೊಲೊಸ್ಸೆ 3:13.

  ತಾಳ್ಮೆಯನ್ನ ಹೇಗೆ ತೋರಿಸೋದು: ನಿಮ್ಮ ಇಷ್ಟಾನಿಷ್ಟಾಗಳಿಗೆ ಪ್ರಾಮುಖ್ಯತೆ ಕೊಡೋ ಬದ್ಲು ನಿಮ್ಮ ಮದುವೆಯ ಬಾಂಧವ್ಯಕ್ಕೆ ಪ್ರಾಮುಖ್ಯತೆ ಕೊಡೋಕೆ ಪ್ರಯತ್ನ ಮಾಡಿ. ಹೀಗೆ ಯೋಚಿಸಿ: ‘ಇದನ್ನ ಒಂದು ಸಮಸ್ಯೆಯಾಗಿ ತಗೊಂಡ್ರೆ ಇದು ನಮ್ಮ ಬಾಂಧವ್ಯವನ್ನ ಗುಣಪಡಿಸುತ್ತಾ ಅಥವಾ ಹಾಳು ಮಾಡುತ್ತಾ?’ “ನಾವೆಲ್ಲರೂ ಅನೇಕ ಬಾರಿ ಎಡವುತ್ತೇವೆ” ಅನ್ನೋ ಮಾತನ್ನ ನೆನಪಲ್ಲಿ ಇಡಿ. (ಯಾಕೋಬ 3:2) ಇದ್ರ ಅರ್ಥ ನೀವು ಕೂಡ ಕೆಲವೊಂದು ವಿಷ್ಯಗಳಲ್ಲಿ ಪ್ರಗತಿ ಮಾಡಬೇಕು.

  “ಕೆಲವೊಂದು ಸಲ ನನಗೆ ಇಷ್ಟ ಇಲ್ಲದನ್ನ ನನ್ನ ಫ್ರೆಂಡ್‌ ಮಾಡಿದ್ರೆ ನಾನು ಅಷ್ಟು ಸಿಟ್ಟು ಮಾಡ್ಕೊಳ್ಳಲ್ಲ ಆದ್ರೆ ಅದೇ ನನ್ನ ಗಂಡ ಮಾಡಿದ್ರೆ ನನಗೆ ಸಿಟ್ಟು ಬರುತ್ತೆ. ಯಾಕಂದ್ರೆ ನಾನು ಜಾಸ್ತಿ ಸಮಯ ನನ್ನ ಗಂಡನ ಜೊತೆ ಇರ್ತೀನಿ. ಅವರ ಲೋಪದೋಷಗಳೇ ಹೆಚ್ಚು ಕಾಣಿಸುತ್ತೆ. ಆದ್ರೆ ನಾನು ತಾಳ್ಮೆ ತೋರಿಸಿದ್ರೆ ನಾನು ಅವರನ್ನ ಪ್ರೀತಿಸ್ತೀನಿ, ಗೌರವಿಸ್ತೀನಿ ಅಂತ ತೋರಿಸಿದ ಹಾಗೆ ಆಗುತ್ತೆ. ಹಾಗಾಗಿ ತಾಳ್ಮೆ ನನ್ನ ಮದುವೆ ಜೀವನದ ಭಾಗ ಆಗಿದೆ.”—ನಿಯಾ.

  ಸ್ವಲ್ಪ ಯೋಚಿಸಿ:

  • ನಿಮ್ಮ ಸಂಗಾತಿ ತಪ್ಪು ಮಾಡಿದ್ರೆ ನೀವು ತಾಳ್ಮೆ ತೋರಿಸ್ತೀರಾ?

  • ಮುಂದೆ ನೀವು ಇನ್ನು ಹೆಚ್ಚು ತಾಳ್ಮೆಯಿಂದ ಇರೋಕೆ ಏನ್‌ ಮಾಡಬಹುದು?