ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

3 ಯೋಹಾನ 1:1-14

1  ನಾನು ನಿಜವಾಗಿಯೂ ಪ್ರೀತಿಸುವ ಪ್ರಿಯ ಗಾಯನಿಗೆ ಹಿರೀಪುರುಷನು ಬರೆಯುವುದೇನೆಂದರೆ,  ಪ್ರಿಯನೇ, ನಿನ್ನ ಪ್ರಾಣವು ಏಳಿಗೆ ಹೊಂದುತ್ತಿರುವಂತೆಯೇ ನೀನು ಎಲ್ಲ ವಿಷಯಗಳಲ್ಲಿ ಏಳಿಗೆ ಹೊಂದಿ ಒಳ್ಳೆಯ ಆರೋಗ್ಯವನ್ನು ಪಡೆಯುವಂತೆ ನಾನು ಪ್ರಾರ್ಥಿಸುತ್ತೇನೆ.  ನೀನು ಸತ್ಯದಲ್ಲಿ ನಡೆಯುತ್ತಾ ಇರುವುದು ನನಗೆ ಈಗಾಗಲೇ ತಿಳಿದಿದೆ; ಮತ್ತು ಸಹೋದರರು ಬಂದು ನೀನು ಹೊಂದಿರುವ ಸತ್ಯದ ಕುರಿತು ಹೇಳಿದಾಗ ನಾನು ಬಹಳವಾಗಿ ಹರ್ಷಿಸಿದೆನು.  ನನ್ನ ಮಕ್ಕಳು ಸತ್ಯದಲ್ಲಿ ನಡೆಯುತ್ತಾ ಇದ್ದಾರೆಂಬುದನ್ನು ಕೇಳಿಸಿಕೊಳ್ಳುವುದಕ್ಕಿಂತ ಕೃತಜ್ಞತೆಯನ್ನು ಸಲ್ಲಿಸಲು ಹೆಚ್ಚಿನ ಕಾರಣ ನನಗಿಲ್ಲ.  ಪ್ರಿಯನೇ, ನೀನು ಸಹೋದರರಿಗೆ, ಅದರಲ್ಲೂ ಅಪರಿಚಿತರಿಗೆ ಏನು ಮಾಡುತ್ತೀಯೋ ಅದರಲ್ಲಿ ನಂಬಿಗಸ್ತಿಕೆಯ ಕೆಲಸವನ್ನು ಮಾಡುತ್ತೀ.  ಅವರು ಸಭೆಯ ಮುಂದೆ ನಿನ್ನ ಪ್ರೀತಿಗೆ ಸಾಕ್ಷಿನೀಡಿದ್ದಾರೆ. ದಯಮಾಡಿ ಅವರನ್ನು ದೇವರಿಗೆ ಯೋಗ್ಯವಾದ ರೀತಿಯಲ್ಲಿ ನೀನು ಸಾಗಕಳುಹಿಸು.  ಏಕೆಂದರೆ ಅವರು ದೇವರ ಹೆಸರಿನ ನಿಮಿತ್ತ ಹೊರಟುಹೋದರು ಮತ್ತು ಅನ್ಯಜನಾಂಗಗಳ ಜನರಿಂದ ಏನನ್ನೂ ತೆಗೆದುಕೊಳ್ಳಲಿಲ್ಲ.  ಆದುದರಿಂದ ನಾವು ಸತ್ಯದಲ್ಲಿ ಜೊತೆ ಕೆಲಸಗಾರರಾಗುವಂತೆ ಅಂಥವರನ್ನು ಸತ್ಕಾರಭಾವದಿಂದ ಸೇರಿಸಿಕೊಳ್ಳುವ ಹಂಗಿನಲ್ಲಿದ್ದೇವೆ.  ನಾನು ಸಭೆಗೆ ಕೆಲವು ಮಾತುಗಳನ್ನು ಬರೆದೆನು, ಆದರೆ ಸಭೆಯವರಲ್ಲಿ ಪ್ರಥಮ ಸ್ಥಾನವನ್ನು ಹೊಂದಿರಲು ಬಯಸುವ ದಿಯೊತ್ರೇಫನು ನಮ್ಮಿಂದ ಏನನ್ನೂ ಗೌರವಭಾವದಿಂದ ಅಂಗೀಕರಿಸುವುದಿಲ್ಲ. 10  ಆದುದರಿಂದಲೇ, ನಾನು ಬಂದರೆ ಅವನು ಮಾಡುತ್ತಾ ಇರುವ ಕೃತ್ಯಗಳ ಕುರಿತು ಅಂದರೆ ನಮ್ಮ ವಿಷಯವಾಗಿ ಕೆಟ್ಟ ಮಾತುಗಳನ್ನು ಆಡುವುದರ ಕುರಿತು ನೆನಪು ಹುಟ್ಟಿಸುವೆನು. ಅವನು ಇಷ್ಟಕ್ಕೇ ತೃಪ್ತನಾಗದೆ, ತಾನು ಸಹೋದರರನ್ನು ಗೌರವದಿಂದ ಸೇರಿಸಿಕೊಳ್ಳುವುದಿಲ್ಲ ಮತ್ತು ಸೇರಿಸಿಕೊಳ್ಳಬೇಕೆಂದಿರುವವರನ್ನೂ ತಡೆಯಲು ಹಾಗೂ ಸಭೆಯಿಂದ ಹೊರಗೆ ಹಾಕಲು ಪ್ರಯತ್ನಿಸುತ್ತಾನೆ. 11  ಪ್ರಿಯನೇ, ಕೆಟ್ಟದ್ದನ್ನು ಅನುಕರಿಸದೆ ಒಳ್ಳೇದನ್ನು ಅನುಕರಿಸುವವನಾಗಿರು. ಒಳ್ಳೇದನ್ನು ಮಾಡುವವನು ದೇವರಿಂದ ಹುಟ್ಟಿದವನಾಗಿದ್ದಾನೆ. ಕೆಟ್ಟದ್ದನ್ನು ಮಾಡುವವನು ದೇವರನ್ನು ನೋಡಿರುವುದಿಲ್ಲ. 12  ದೇಮೇತ್ರಿಯನ ಕುರಿತು ಎಲ್ಲರೂ ಸಾಕ್ಷಿನೀಡಿದ್ದಾರೆ ಮತ್ತು ಸತ್ಯವು ತಾನೇ ಅವನ ಕುರಿತು ಸಾಕ್ಷಿನೀಡಿದೆ. ವಾಸ್ತವದಲ್ಲಿ, ನಾವು ಸಹ ಸಾಕ್ಷಿನೀಡುತ್ತಿದ್ದೇವೆ ಮತ್ತು ನಾವು ಕೊಡುವ ಸಾಕ್ಷಿ ಸತ್ಯವಾದದ್ದೆಂದು ನಿನಗೆ ತಿಳಿದಿದೆ. 13  ನಿನಗೆ ಬರೆಯಲು ಅನೇಕ ವಿಷಯ​ಗಳಿದ್ದವು, ಆದರೆ ಮಸಿಯಿಂದಲೂ ಲೇಖನಿಯಿಂದಲೂ ಬರೆಯುತ್ತಾ ಇರಲು ನಾನು ಬಯಸುವುದಿಲ್ಲ. 14  ನಿನ್ನನ್ನು ನೇರವಾಗಿ ನೋಡಲು ನಿರೀಕ್ಷಿಸುತ್ತಿದ್ದೇನೆ; ಆಗ ನಾವು ಮುಖಾಮುಖಿಯಾಗಿ ಮಾತಾಡೋಣ. ನಿನಗೆ ಶಾಂತಿಯಿರಲಿ. ಸ್ನೇಹಿತರು ನಿನಗೆ ತಮ್ಮ ವಂದನೆಗಳನ್ನು ಕಳುಹಿಸಿದ್ದಾರೆ. ಸ್ನೇಹಿತರಲ್ಲಿ ಪ್ರತಿಯೊಬ್ಬರಿಗೂ ಹೆಸರುಹೆಸರಾಗಿ ನನ್ನ ವಂದನೆಗಳನ್ನು ತಿಳಿಸು.

ಪಾದಟಿಪ್ಪಣಿ