ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

2 ಥೆಸಲೊನೀಕ 2:1-17

2  ಆದರೆ ಸಹೋದರರೇ, ನಮ್ಮ ಕರ್ತನಾದ ಯೇಸು ಕ್ರಿಸ್ತನ ಸಾನ್ನಿಧ್ಯದ ವಿಷಯ​ದಲ್ಲಿ ಮತ್ತು ಅವನೊಂದಿಗೆ ಇರಲಿಕ್ಕಾಗಿ ಜೊತೆಗೂಡಿಸಲ್ಪಡುವ ವಿಷಯ​ದಲ್ಲಿ ನಾವು ನಿಮ್ಮನ್ನು ಬೇಡಿಕೊಳ್ಳುವುದೇನೆಂದರೆ,  ಯೆಹೋವನ ದಿನವು ಈಗಲೇ ಹತ್ತಿರವಾಗಿದೆ ಎಂಬ ಪ್ರೇರಿತ ಅಭಿವ್ಯಕ್ತಿಯಿಂದಾಗಲಿ ಮೌಖಿಕ ಸಂದೇಶದಿಂದಾಗಲಿ ನಮ್ಮಿಂದ ಬಂದಿದೆಯೋ ಎಂಬಂತಿರುವ ಪತ್ರದಿಂದಾಗಲಿ ನೀವು ನಿಮ್ಮ ತರ್ಕಶಕ್ತಿಯನ್ನು ಬೇಗನೆ ಕಳೆದುಕೊಂಡು ಚಂಚಲ​ರಾಗಬೇಡಿ ಅಥವಾ ಭಾವೋದ್ರೇಕಗೊಳ್ಳಬೇಡಿರಿ.  ಯಾರೂ ಯಾವ ವಿಧದಲ್ಲಿಯೂ ನಿಮ್ಮನ್ನು ವಂಚಿಸದಿರಲಿ; ಏಕೆಂದರೆ ಧರ್ಮಭ್ರಷ್ಟತೆಯು ಮೊದಲು ಉಂಟಾಗಿ ನಾಶನದ ಪುತ್ರನಾಗಿರುವ ನಿಯಮ​ರಾಹಿತ್ಯದ ಪುರುಷನು ಬಯಲುಪಡಿಸಲ್ಪಟ್ಟ ಹೊರತು ಆ ದಿನವು ಬರುವುದಿಲ್ಲ.  ಅವನು ವಿರೋಧ ಸ್ಥಾನದಲ್ಲಿ ಇರಿಸಲ್ಪಟ್ಟಿದ್ದು, “ದೇವನು” ಎಂದು ಕರೆಯಲ್ಪಡುವ ಪ್ರತಿಯೊಬ್ಬನಿಗಿಂತ ಅಥವಾ ಪೂಜೆಯನ್ನು ಹೊಂದುವ ಪ್ರತಿಯೊಂದು ವಸ್ತುವಿಗಿಂತ ತನ್ನನ್ನು ತಾನೇ ಮೇಲೇರಿಸಿಕೊಳ್ಳುತ್ತಾನೆ; ಹೀಗೆ ಅವನು ತನ್ನನ್ನು ಒಬ್ಬ ದೇವನು ಎಂದು ಬಹಿರಂಗವಾಗಿ ತೋರಿಸಿಕೊಳ್ಳುತ್ತಾ ದೇವರ ಆಲಯದಲ್ಲಿ ಕುಳಿತುಕೊಳ್ಳುತ್ತಾನೆ.  ನಾನು ನಿಮ್ಮೊಂದಿಗಿದ್ದಾಗಲೇ ಈ ಸಂಗತಿಗಳನ್ನು ಹೇಳುತ್ತಿದ್ದದ್ದು ನಿಮಗೆ ಜ್ಞಾಪಕವಿಲ್ಲವೊ?  ಅವನು ತನ್ನ ಕ್ಲುಪ್ತ ಕಾಲದಲ್ಲಿ ಬಯಲುಪಡಿಸಲ್ಪಡಲು ಯಾವುದು ಪ್ರತಿಬಂಧಕವಾಗಿ ಕಾರ್ಯನಡಿಸುತ್ತದೆ ಎಂಬುದು ಈಗ ನಿಮಗೆ ತಿಳಿದಿದೆ.  ಈ ನಿಯಮ​ರಾಹಿತ್ಯದ ರಹಸ್ಯವು ಈಗಾಗಲೇ ಕಾರ್ಯನಡಿಸುತ್ತಿದೆ ಎಂಬುದು ನಿಜ; ಆದರೆ ಸದ್ಯಕ್ಕೆ ಪ್ರತಿಬಂಧಕವಾಗಿ ಕಾರ್ಯನಡಿಸುತ್ತಿರುವವನು ದಾರಿಯಿಂದ ತೆಗೆದುಹಾಕಲ್ಪಡುವ ವರೆಗೆ ಇದು ರಹಸ್ಯವಾಗಿಯೇ ಇರುವುದು.  ಅನಂತರ ನಿಯಮರಾಹಿತ್ಯನು ಖಂಡಿತವಾಗಿಯೂ ಬಯಲುಮಾಡಲ್ಪಡುವನು ಮತ್ತು ಕರ್ತನಾದ ಯೇಸು ಅವನನ್ನು ತನ್ನ ಬಾಯಿಯ ಉಸಿರಿನಿಂದ ನಾಶಮಾಡುವನು ಹಾಗೂ ತನ್ನ ಸಾನ್ನಿಧ್ಯವು ಸುವ್ಯಕ್ತವಾಗುವ ಸಮಯದಲ್ಲಿ ನಿರ್ನಾಮಮಾಡುವನು.  ಆದರೆ ನಿಯಮರಾಹಿತ್ಯನ ಸಾನ್ನಿಧ್ಯವು ಸೈತಾನನ ಕಾರ್ಯಾಚರಣೆಗೆ ಅನುಸಾರವಾಗಿದ್ದು, ಪ್ರತಿಯೊಂದು ಮಹತ್ಕಾರ್ಯದಿಂದಲೂ ಸುಳ್ಳಾದ ಸೂಚಕಕಾರ್ಯಗಳಿಂದಲೂ ಆಶ್ಚರ್ಯಕಾರ್ಯಗಳಿಂದಲೂ 10  ಅನೀತಿಯ ಪ್ರತಿಯೊಂದು ವಂಚನೆಯಿಂದಲೂ ಕೂಡಿದ್ದು ನಾಶನಮಾರ್ಗದಲ್ಲಿರುವವರಿಗೆ ದಂಡನೆಯಾಗಿ ಬರುವುದು; ಏಕೆಂದರೆ ತಾವು ರಕ್ಷಿಸಲ್ಪಡುವಂತೆ ಅವರು ಸತ್ಯದ ಪ್ರೀತಿಯನ್ನು ಸ್ವೀಕರಿಸಲಿಲ್ಲ. 11  ಆದುದರಿಂದ ಅವರು ಸುಳ್ಳನ್ನು ನಂಬುವಂತೆ ದೋಷದ ಕಾರ್ಯಾಚರಣೆಯು ಅವರ ಬಳಿಗೆ ಹೋಗುವಂತೆ ದೇವರು ಬಿಡುತ್ತಾನೆ. 12  ಹೀಗೆ ಅವರು ಸತ್ಯವನ್ನು ನಂಬದೆ ಅನೀತಿಯಲ್ಲಿ ಆನಂದವನ್ನು ಕಂಡುಕೊಂಡದ್ದರಿಂದ ಅವರೆಲ್ಲರೂ ನ್ಯಾಯತೀರ್ಪಿಗೆ ಒಳಗಾಗುವರು. 13  ಆದರೂ ಯೆಹೋವನಿಂದ ಪ್ರೀತಿಸಲ್ಪಡುವ ಸಹೋದರರೇ, ನಿಮ್ಮ ಪರವಾಗಿ ನಾವು ದೇವರಿಗೆ ಯಾವಾಗಲೂ ಕೃತಜ್ಞತೆಯನ್ನು ಸಲ್ಲಿಸುವ ಹಂಗಿನಲ್ಲಿದ್ದೇವೆ; ಏಕೆಂದರೆ ದೇವರು ನಿಮ್ಮನ್ನು ತನ್ನ ಪವಿತ್ರಾತ್ಮದಿಂದ * ಪವಿತ್ರೀಕರಿಸುವ ಮೂಲಕ ಮತ್ತು ಸತ್ಯದಲ್ಲಿನ ನಿಮ್ಮ ನಂಬಿಕೆಯ ಮೂಲಕ ಆದಿಯಿಂದಲೇ ನಿಮ್ಮನ್ನು ರಕ್ಷಣೆಗಾಗಿ ಆರಿಸಿಕೊಂಡನು. 14  ನಮ್ಮ ಕರ್ತನಾದ ಯೇಸು ಕ್ರಿಸ್ತನ ಮಹಿಮೆಯನ್ನು ನೀವು ಹೊಂದಬೇಕೆಂಬ ಉದ್ದೇಶದಿಂದಲೇ ನಾವು ಪ್ರಕಟಪಡಿಸುವ ಸುವಾರ್ತೆಯ ಮೂಲಕ ಆತನು ನಿಮ್ಮನ್ನು ಕರೆದನು. 15  ಆದುದರಿಂದ ಸಹೋದರರೇ, ದೃಢವಾಗಿ ನಿಲ್ಲಿರಿ ಮತ್ತು ಮೌಖಿಕ ಸಂದೇಶದ ಮೂಲಕವಾಗಲಿ ನಾವು ಕಳುಹಿಸಿದ ಪತ್ರದ ಮೂಲಕವಾಗಲಿ ನಿಮಗೆ ಕಲಿಸಲ್ಪಟ್ಟ ಬೋಧನೆಗಳ ಮೇಲೆ ನಿಮಗಿರುವ ಹಿಡಿತವನ್ನು ಕಾಪಾಡಿಕೊಳ್ಳಿರಿ. 16  ಮಾತ್ರವಲ್ಲದೆ, ನಮ್ಮ ಕರ್ತನಾದ ಯೇಸು ಕ್ರಿಸ್ತನೂ ನಮ್ಮನ್ನು ಪ್ರೀತಿಸಿ ನಮಗೆ ನಿತ್ಯವಾದ ಸಾಂತ್ವನವನ್ನೂ ಒಳ್ಳೇ ನಿರೀಕ್ಷೆಯನ್ನೂ ಅಪಾತ್ರ ದಯೆಯಿಂದ ನೀಡಿದಂಥ ತಂದೆಯಾದ ದೇವರೂ 17  ನಿಮ್ಮ ಹೃದಯಗಳನ್ನು ಸಾಂತ್ವನಗೊಳಿಸಿ, ಪ್ರತಿಯೊಂದು ಸತ್ಕಾರ್ಯದಲ್ಲಿಯೂ ಮಾತಿನಲ್ಲಿಯೂ ನಿಮ್ಮನ್ನು ದೃಢಪಡಿಸಲಿ.

ಪಾದಟಿಪ್ಪಣಿ

2ಥೆಸ 2:13  ಅಥವಾ, “ದೇವರ ಕಾರ್ಯಕಾರಿ ಶಕ್ತಿ.” ಪರಿಶಿಷ್ಟ 7 ನ್ನು ನೋಡಿ.