ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

2 ಕೊರಿಂಥ 8:1-24

8  ಈಗ ಸಹೋದರರೇ, ಮಕೆದೋನ್ಯದ ಸಭೆಗಳಿಗೆ ದೇವರು ಒದಗಿಸಿರುವ ಅಪಾತ್ರ ದಯೆಯ ಕುರಿತು ನಾವು ನಿಮಗೆ ತಿಳಿಸುತ್ತೇವೆ;  ಬಾಧೆಯ ಮಹಾ ಪರೀಕ್ಷೆಯ ಸಮಯದಲ್ಲಿ ಅವರಿಗಾದ ಹೇರಳ ಆನಂದವೂ ಕಡುಬಡತನವೂ ಅವರಲ್ಲಿದ್ದ ಔದಾರ್ಯದ ಸಿರಿತನವನ್ನು ಯಥೇಚ್ಛವಾಗಿಸಿತು.  ಅವರು ತಮ್ಮ ಯಥಾರ್ಥ ಸಾಮರ್ಥ್ಯಕ್ಕನುಸಾರ, ಹೌದು, ಅವರ ಸಾಮರ್ಥ್ಯಕ್ಕೂ ಮೀರಿ ಕೊಟ್ಟಿದ್ದಾರೆಂಬುದಕ್ಕೆ ನಾನೇ ಸಾಕ್ಷಿ​ಯಾಗಿದ್ದೇನೆ.  ದಯೆಯಿಂದ ಕೊಡುವ ಸುಯೋಗಕ್ಕಾಗಿ ಮತ್ತು ಪವಿತ್ರ ಜನರಿಗೋಸ್ಕರ ಮೀಸಲಾಗಿಡಲ್ಪಟ್ಟಿರುವ ಶುಶ್ರೂಷೆಯಲ್ಲಿ ಪಾಲ್ಗೊಳ್ಳಲಿಕ್ಕಾಗಿ ಅವರು ಸ್ವಂತ ಇಚ್ಛೆಯಿಂದ ನಮ್ಮನ್ನು ಬಹಳವಾಗಿ ಬೇಡಿಕೊಳ್ಳುತ್ತಾ ಇದ್ದರು.  ನಾವು ನಿರೀಕ್ಷಿಸಿದ ಪ್ರಕಾರ ಅವರು ಕೊಡದೆ ಮೊದಲಾಗಿ ತಮ್ಮನ್ನೇ ಕರ್ತನಿಗೆ ಒಪ್ಪಿಸಿಕೊಟ್ಟರು, ಅನಂತರ ದೇವರ ಚಿತ್ತಾನುಸಾರ ನಮಗೂ ತಮ್ಮನ್ನು ಒಪ್ಪಿಸಿದರು.  ಇದರಿಂದಾಗಿ, ದಯೆಯಿಂದ ಕೊಡುವುದನ್ನು ನಿಮ್ಮಲ್ಲಿ ಪ್ರಾರಂಭಿಸಿದವನು ತೀತನೇ ಆಗಿದ್ದುದರಿಂದ ಅವನೇ ನಿಮ್ಮ ಬಳಿಗೆ ಬಂದು ಅದನ್ನು ಪೂರ್ಣಗೊಳಿಸುವಂತೆ ನಾವು ಅವನನ್ನು ಪ್ರೋತ್ಸಾಹಿಸಿದೆವು.  ಆದರೂ ನೀವು ನಂಬಿಕೆಯಲ್ಲಿ, ಮಾತಿನಲ್ಲಿ, ಜ್ಞಾನದಲ್ಲಿ, ಸಕಲವಿಧವಾದ ಶ್ರದ್ಧೆಯಲ್ಲಿ ಮತ್ತು ನಿಮ್ಮ ಕಡೆಗಿರುವ ನಮ್ಮ ಪ್ರೀತಿಯ ವಿಷಯದಲ್ಲಿ ಸಮೃದ್ಧರಾಗಿರುವಂತೆಯೇ ದಯೆಯಿಂದ ಕೊಡುವ ವಿಷಯ​ದಲ್ಲಿಯೂ ಸಮೃದ್ಧರಾಗಿರಿ.  ಇದನ್ನು ನಿಮಗೆ ಆಜ್ಞಾಪಿಸುವ ರೀತಿಯಲ್ಲಿ ನಾನು ಹೇಳುತ್ತಿಲ್ಲ, ಇತರರ ಶ್ರದ್ಧೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡವನಾಗಿ ಮತ್ತು ನಿಮ್ಮ ಪ್ರೀತಿಯ ಯಥಾರ್ಥತೆಯನ್ನು ಪರೀಕ್ಷಿಸಲಿಕ್ಕಾಗಿ ಹೇಳುತ್ತಿದ್ದೇನೆ.  ನಮ್ಮ ಕರ್ತನಾದ ಯೇಸು ಕ್ರಿಸ್ತನ ಅಪಾತ್ರ ದಯೆಯನ್ನು ನೀವು ತಿಳಿದಿದ್ದೀರಿ; ಅವನು ಐಶ್ವರ್ಯವಂತನಾಗಿದ್ದರೂ ತನ್ನ ಬಡತನದ ಮೂಲಕ ನೀವು ಐಶ್ವರ್ಯವಂತರಾಗುವಂತೆ ನಿಮಗೋಸ್ಕರ ಬಡವನಾದನು. 10  ಈ ವಿಷಯದಲ್ಲಿ ನಾನು ನನ್ನ ಅಭಿಪ್ರಾಯವನ್ನು ತಿಳಿಸುತ್ತೇನೆ: ಸುಮಾರು ಒಂದು ವರ್ಷಕ್ಕೆ ಮುಂಚೆ ನೀವು ಈ ಕಾರ್ಯವನ್ನು ಆರಂಭಿಸಿದಿರಿ ಮಾತ್ರವಲ್ಲ ಇದನ್ನು ಮಾಡುವ ಅಪೇಕ್ಷೆಯನ್ನು ಸಹ ತೋರಿಸಿದಿರಿ ಎಂಬುದನ್ನು ನೋಡುವಾಗ ಇದು ನಿಮಗೆ ಪ್ರಯೋಜನಕರವಾದದ್ದಾಗಿದೆ. 11  ಹಾಗಾದರೆ ಈಗ ಅದನ್ನು ಮಾಡಿ ಮುಗಿಸಿರಿ; ಇದನ್ನು ಮಾಡಲು ನಿಮ್ಮಲ್ಲಿ ಹೇಗೆ ಸಿದ್ಧಮನಸ್ಸಿತ್ತೋ ಹಾಗೆಯೇ ನಿಮ್ಮ ಶಕ್ತ್ಯಾನುಸಾರ ಅದನ್ನು ಪೂರ್ಣಗೊಳಿಸಲು ಸಹ ಸಿದ್ಧಮನಸ್ಸು ಇರಬೇಕು. 12  ಮೊದಲು ಸಿದ್ಧಮನಸ್ಸು ಇರುವುದಾದರೆ ಒಬ್ಬನು ತನ್ನಲ್ಲಿರುವುದಕ್ಕೆ ತಕ್ಕಂತೆ ಕೊಡುವುದು​—⁠ತನ್ನಲ್ಲಿ ಇಲ್ಲದ್ದನ್ನು ಅಲ್ಲ​—⁠ವಿಶೇಷವಾಗಿ ಸ್ವೀಕಾರಾರ್ಹವಾಗಿದೆ. 13  ಇತರರಿಗೆ ಸುಲಭವಾಗಬೇಕು ಆದರೆ ನೀವು ಕಷ್ಟಪಡಬೇಕೆಂದು ನಾನು ಇದನ್ನು ಹೇಳುತ್ತಿಲ್ಲ. 14  ಆದರೆ ಸಮಾನತೆಯ ಮೂಲಕ ಸದ್ಯಕ್ಕೆ ನಿಮ್ಮ ಸಮೃದ್ಧಿಯು ಅವರ ಕೊರತೆಯನ್ನು ನೀಗಿಸಬಹುದು, ಮುಂದೆ ಅವರ ಸಮೃದ್ಧಿಯು ನಿಮ್ಮ ಕೊರತೆಯನ್ನು ನೀಗಿಸಲು ಸಹಾಯವಾಗ​ಬಹುದು; ಆಗ ಸಮಾನತೆಯು ಉಂಟಾಗುವುದು. 15  “ಅಧಿಕವಾಗಿ ಇದ್ದವನಿಗೆ ಅತ್ಯಧಿಕವಾಗಲಿಲ್ಲ, ಸ್ವಲ್ಪವಾಗಿ ಇದ್ದವನಿಗೆ ಅತಿ ಕಡಮೆಯಾಗಲಿಲ್ಲ” ಎಂದು ಬರೆಯಲ್ಪಟ್ಟಿದೆ. 16  ನಿಮ್ಮ ಕಡೆಗೆ ನಮಗಿರುವ ಅದೇ ಶ್ರದ್ಧೆಯನ್ನು ತೀತನ ಹೃದಯದಲ್ಲಿಯೂ ಹುಟ್ಟಿಸಿದ್ದಕ್ಕಾಗಿ ದೇವರಿಗೆ ಕೃತಜ್ಞತೆ ಸಲ್ಲಿಸಲ್ಪಡಲಿ. 17  ಏಕೆಂದರೆ ಅವನು ನಮ್ಮ ಉತ್ತೇಜನಕ್ಕೆ ಪ್ರತಿಕ್ರಿಯೆ ತೋರಿಸಿದ್ದಾನೆ ಮಾತ್ರವಲ್ಲ ಅತಿಶ್ರದ್ಧೆಯಿಂದ ನಿಮ್ಮ ಬಳಿಗೆ ಬರಲು ಸ್ವಇಷ್ಟದಿಂದ ಹೊರಟಿದ್ದಾನೆ. 18  ಆದರೆ ನಾವು ಅವನೊಂದಿಗೆ ಇನ್ನೊಬ್ಬ ಸಹೋದರನನ್ನು ಕಳುಹಿಸುತ್ತಿದ್ದೇವೆ; ಸುವಾರ್ತೆಯ ಸಂಬಂಧದಲ್ಲಿ ಇವನ ಕೀರ್ತಿಯು ಎಲ್ಲ ಸಭೆಗಳಲ್ಲೂ ಹಬ್ಬಿದೆ. 19  ಅಷ್ಟುಮಾತ್ರವಲ್ಲ, ಕರ್ತನ ಮಹಿಮೆಗಾಗಿ ಮತ್ತು ನಮ್ಮ ಸಿದ್ಧಮನಸ್ಸಿನ ರುಜುವಾತಾಗಿ ನಾವು ನಿರ್ವಹಿಸುತ್ತಿರುವ ಈ ದಯಾಭರಿತ ಕಾಣಿಕೆಯ ಸಂಬಂಧದಲ್ಲಿ ನಮ್ಮ ಸಂಚರಣ ಸಂಗಡಿಗನಾಗಲು ಸಹ ಇವನು ಸಭೆಗಳಿಂದ ನೇಮಿಸಲ್ಪಟ್ಟಿದ್ದಾನೆ. 20  ಹೀಗೆ ನಾವು ನಿರ್ವಹಿಸುತ್ತಿರುವ ಈ ಉದಾರ ಕಾಣಿಕೆಯ ಸಂಬಂಧದಲ್ಲಿ ಯಾವನೂ ನಮ್ಮಲ್ಲಿ ತಪ್ಪನ್ನು ಕಂಡುಹಿಡಿಯುವುದಕ್ಕೆ ಆಸ್ಪದವಿರಬಾರದು. 21  ಏಕೆಂದರೆ ನಾವು “ಯೆಹೋವನ ದೃಷ್ಟಿಯಲ್ಲಿ ಮಾತ್ರವಲ್ಲ ಮನುಷ್ಯರ ದೃಷ್ಟಿಯಲ್ಲಿಯೂ ಪ್ರಾಮಾಣಿಕ ರೀತಿಯಲ್ಲಿ ಒದಗಿಸುವಿಕೆಯನ್ನು ಮಾಡುತ್ತೇವೆ.” 22  ಇದಲ್ಲದೆ, ಇವರಿಬ್ಬರ ಸಂಗಡ ನಮ್ಮ ಇನ್ನೊಬ್ಬ ಸಹೋದರನನ್ನು ಕಳುಹಿಸುತ್ತಿದ್ದೇವೆ; ಇವನು ಅನೇಕ ವಿಷಯಗಳಲ್ಲಿ ಶ್ರದ್ಧೆಯುಳ್ಳವನೆಂದು ನಾವು ಅನೇಕಬಾರಿ ಕಂಡುಕೊಂಡಿದ್ದೇವೆ. ಈಗಲಾದರೋ ಅವನು ನಿಮ್ಮಲ್ಲಿಟ್ಟಿರುವ ಹೆಚ್ಚಿನ ಭರವಸೆಯ ಕಾರಣ ಇನ್ನೂ ಹೆಚ್ಚು ಶ್ರದ್ಧೆಯುಳ್ಳವನಾಗಿದ್ದಾನೆ. 23  ತೀತನ ವಿಷಯ​ದಲ್ಲಿ ಏನಾದರೂ ಪ್ರಶ್ನೆಯಿರುವುದಾದರೆ, ಅವನು ನನ್ನೊಂದಿಗೆ ಪಾಲುಗಾರನೂ ನಿಮ್ಮ ಹಿತಾಸಕ್ತಿಗಾಗಿರುವ ಜೊತೆ ಕೆಲಸಗಾರನೂ ಆಗಿದ್ದಾನೆ; ಅಥವಾ ನಮ್ಮ ಸಹೋದರರ ಕುರಿತು ಪ್ರಶ್ನೆಯಿರುವುದಾದರೆ, ಅವರು ಸಭೆಗಳ ಅಪೊಸ್ತಲರೂ ಕ್ರಿಸ್ತನಿಗೆ ಮಹಿಮೆಯೂ ಆಗಿದ್ದಾರೆ. 24  ಆದುದರಿಂದ, ನಿಮ್ಮ ಪ್ರೀತಿಯ ಮತ್ತು ನಿಮ್ಮ ಬಗ್ಗೆ ನಾವು ಹೊಗಳಿದ್ದರ ಕುರಿತಾದ ರುಜುವಾತನ್ನು ಇವರಿಗೆ ಸಭೆಗಳ ಮುಂದೆ ತೋರಿಸಿಕೊಡಿರಿ.

ಪಾದಟಿಪ್ಪಣಿ