ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

2 ಕೊರಿಂಥ 13:1-14

13  ನಾನು ನಿಮ್ಮ ಬಳಿಗೆ ಬರುತ್ತಿರುವುದು ಇದು ಮೂರನೆಯ ಸಾರಿ. “ಇಬ್ಬರು ಅಥವಾ ಮೂವರು ಸಾಕ್ಷಿಗಳ ಬಾಯಿಂದ ಪ್ರತಿಯೊಂದು ​ವಿಷಯವು ಸ್ಥಾಪಿಸಲ್ಪಡಬೇಕು.”  ನಾನು ಮುಂಚೆಯೇ ಹೇಳಿದ್ದೇನೆ ಮತ್ತು ಎರಡನೆಯ ಸಾರಿ ನಿಮ್ಮೊಂದಿಗಿದ್ದೇನೋ ಎಂಬಂತೆ, ಈಗ ನಿಮ್ಮಿಂದ ದೂರವಿರುವುದಾದರೂ ನಾನು ಪುನಃ ಅಲ್ಲಿಗೆ ಬಂದರೆ ನಿಮ್ಮನ್ನು ಶಿಕ್ಷಿಸದೇ ಬಿಡುವುದಿಲ್ಲ ಎಂದು ಈ ಮುಂಚೆ ಪಾಪಮಾಡಿರುವವರಿಗೂ ಉಳಿದವರೆಲ್ಲರಿಗೂ ಮುಂದಾಗಿಯೇ ಹೇಳುತ್ತೇನೆ.  ಏಕೆಂದರೆ ಕ್ರಿಸ್ತನು ನನ್ನಲ್ಲಿ ಮಾತಾಡುತ್ತಿರುವುದಕ್ಕೆ ನೀವು ರುಜುವಾತನ್ನು ಕೇಳುತ್ತಿದ್ದೀರಿ; ಕ್ರಿಸ್ತನು ನಿಮ್ಮ ವಿಷಯ​ದಲ್ಲಿ ನಿರ್ಬಲನಾಗಿರದೆ ನಿಮ್ಮಲ್ಲಿ ಬಲವಾದ ಕೆಲಸಗಳನ್ನು ನಡಿಸುವವನಾಗಿದ್ದಾನೆ.  ವಾಸ್ತವದಲ್ಲಿ ನಿರ್ಬಲ ಸ್ಥಿತಿಯಲ್ಲಿ ಅವನು ಶೂಲಕ್ಕೇರಿಸಲ್ಪಟ್ಟನು ಎಂಬುದು ನಿಜ, ಆದರೆ ದೇವರ ಶಕ್ತಿಯಿಂದ ಅವನು ಜೀವಂತವಾಗಿದ್ದಾನೆ. ನಾವು ಸಹ ಅವನೊಂದಿಗೆ ನಿರ್ಬಲರಾಗಿದ್ದೇವೆ ಎಂಬುದು ನಿಜ, ಆದರೆ ನಿಮ್ಮ ಸಂಬಂಧದಲ್ಲಿ ಕೆಲಸಮಾಡುವ ದೇವರ ಶಕ್ತಿಯಿಂದ ನಾವು ಅವನೊಂದಿಗೆ ಜೀವಿಸುವೆವು.  ನೀವು ನಂಬಿಕೆಯಲ್ಲಿ ಇದ್ದೀರೋ ಎಂಬುದನ್ನು ಪರೀಕ್ಷಿಸಿಕೊಳ್ಳುತ್ತಾ ಇರಿ, ನೀವು ಏನಾಗಿದ್ದೀರಿ ಎಂಬುದನ್ನು ಪ್ರಮಾಣೀಕರಿಸುತ್ತಾ ಇರಿ. ಅಥವಾ ಯೇಸು ಕ್ರಿಸ್ತನು ನಿಮ್ಮೊಂದಿಗೆ ಐಕ್ಯದಲ್ಲಿದ್ದಾನೆ ಎಂಬುದನ್ನು ನೀವು ಗ್ರಹಿಸುವುದಿಲ್ಲವೊ? ನೀವು ಅನಂಗೀಕೃತರಾಗಿದ್ದರೆ ಅವನು ನಿಮ್ಮೊಂದಿಗೆ ಐಕ್ಯದಲ್ಲಿರುವುದಿಲ್ಲ.  ನಾವು ಅನಂಗೀಕೃತರಲ್ಲ ಎಂಬುದನ್ನು ನೀವು ತಿಳಿದುಕೊಳ್ಳುವಿರಿ ಎಂದು ನಾನು ನಿಜವಾಗಿಯೂ ನಿರೀಕ್ಷಿಸುತ್ತೇನೆ.  ನೀವು ಯಾವುದೇ ತಪ್ಪನ್ನು ಮಾಡದಿರುವಂತೆ ನಾವು ದೇವರಿಗೆ ಪ್ರಾರ್ಥಿಸುತ್ತೇವೆ; ನಾವು ಅಂಗೀಕೃತರಾಗಿ ಕಂಡುಬರಬೇಕೆಂಬ ಉದ್ದೇಶದಿಂದಲ್ಲ, ನಾವು ಅನಂಗೀಕೃತರಾಗಿ ಕಂಡುಬರಬಹುದಾದರೂ ನೀವು ಒಳ್ಳೇದನ್ನು ಮಾಡುವವರಾಗಿರಬೇಕು ಎಂಬ ಉದ್ದೇಶದಿಂದಲೇ ಪ್ರಾರ್ಥಿಸುತ್ತೇವೆ.  ಏಕೆಂದರೆ ನಾವು ಸತ್ಯಕ್ಕೋಸ್ಕರ ಮಾತ್ರವೇ ಹೊರತು ಸತ್ಯಕ್ಕೆ ವಿರುದ್ಧವಾಗಿ ಏನನ್ನೂ ಮಾಡಲಾರೆವು.  ನಾವು ಬಲಹೀನರಾಗಿರುವಾಗ ನೀವು ಬಲಿಷ್ಠರಾಗಿರುವುದಾದರೆ ನಾವು ಖಂಡಿತವಾಗಿಯೂ ಸಂತೋಷಪಡುತ್ತೇವೆ; ಮತ್ತು ನೀವು ಪುನಃ ಸರಿಹೊಂದಿಸಿಕೊಳ್ಳಬೇಕೆಂದು ನಾವು ಪ್ರಾರ್ಥಿಸುತ್ತಿದ್ದೇವೆ. 10  ಆದುದರಿಂದಲೇ ನಾನು ನಿಮ್ಮಿಂದ ದೂರವಿರುವಾಗ ಈ ವಿಷಯಗಳನ್ನು ಬರೆಯುತ್ತಿದ್ದೇನೆ; ಕೆಡವಿಹಾಕುವುದಕ್ಕಾಗಿ ಅಲ್ಲ, ಕಟ್ಟಲಿಕ್ಕಾಗಿ ಕರ್ತನು ನನಗೆ ಕೊಟ್ಟಿರುವ ಅಧಿಕಾರಕ್ಕನುಸಾರ ನಾನು ನಿಮ್ಮ ಬಳಿಗೆ ಬಂದಾಗ ಕಠಿನವಾಗಿ ವರ್ತಿಸಲು ಅವಕಾಶವಿರಬಾರದೆಂದು ನೆನಸುತ್ತೇನೆ. 11  ಕೊನೆಯದಾಗಿ ಸಹೋದರರೇ, ಸಂತೋಷಪಡುತ್ತಾ, ಪುನಃ ಸರಿಹೊಂದಿಸಲ್ಪಡುತ್ತಾ, ಸಾಂತ್ವನಗೊಳಿಸಲ್ಪಡುತ್ತಾ, ಒಮ್ಮತದಿಂದ ಆಲೋಚಿಸುತ್ತಾ, ಶಾಂತಿ​ಶೀಲರಾಗಿ ಜೀವಿಸುತ್ತಾ ಇರಿ; ಆಗ ಪ್ರೀತಿ ಮತ್ತು ಶಾಂತಿಯ ದೇವರು ನಿಮ್ಮೊಂದಿಗಿರುವನು. 12  ಪವಿತ್ರವಾದ ಮುದ್ದಿನಿಂದ ಒಬ್ಬರನ್ನೊಬ್ಬರು ವಂದಿಸಿರಿ. 13  ಪವಿತ್ರ ಜನರೆಲ್ಲರೂ ನಿಮಗೆ ತಮ್ಮ ವಂದನೆಗಳನ್ನು ಕಳುಹಿಸುತ್ತಾರೆ. 14  ಕರ್ತನಾದ ಯೇಸು ಕ್ರಿಸ್ತನ ಅಪಾತ್ರ ದಯೆಯೂ ದೇವರ ಪ್ರೀತಿಯೂ ಪವಿತ್ರಾತ್ಮದಲ್ಲಿ ಪಾಲುಗಾರಿಕೆಯೂ ನಿಮ್ಮೆಲ್ಲರೊಂದಿಗಿರಲಿ.

ಪಾದಟಿಪ್ಪಣಿ