ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಆನ್‌ಲೈನ್‌ ಬೈಬಲ್ | ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರ

2 ಕೊರಿಂಥ 11:1-33

11  ನಾನು ಸ್ವಲ್ಪಮಟ್ಟಿಗೆ ವಿಚಾರಹೀನನಂತೆ ಮಾತಾಡಿದರೆ ನೀವು ಸಹಿಸಿಕೊಳ್ಳುವಿರಿ ಎಂದು ನೆನಸುತ್ತೇನೆ. ವಾಸ್ತವದಲ್ಲಿ ನೀವು ನನ್ನನ್ನು ಸಹಿಸಿಕೊಳ್ಳುತ್ತಾ ಇದ್ದೀರಿ.  ದೇವರು ನಿಮ್ಮ ವಿಷಯದಲ್ಲಿ ತೀವ್ರಾಸಕ್ತಿಯುಳ್ಳವನಾಗಿರುವಂತೆಯೇ ನಾನೂ ತೀವ್ರಾಸಕ್ತಿಯುಳ್ಳವನಾಗಿದ್ದೇನೆ, ಏಕೆಂದರೆ ನಾನು ಖುದ್ದಾಗಿ ನಿಮ್ಮನ್ನು ಒಬ್ಬ ಗಂಡನಿಗೆ, ಕ್ರಿಸ್ತನಿಗೆ ಶುದ್ಧ ಕನ್ಯೆಯನ್ನಾಗಿ ಒಪ್ಪಿಸಿಕೊಡಲು ವಿವಾಹ ವಾಗ್ದಾನ ಮಾಡಿದೆನು.  ಸರ್ಪವು ತನ್ನ ಕುಯುಕ್ತಿಯಿಂದ ಹವ್ವಳನ್ನು ವಂಚಿಸಿದಂತೆ ನಿಮ್ಮ ಮನಸ್ಸುಗಳು ಸಹ ಕ್ರಿಸ್ತನ ಕಡೆಗಿರಬೇಕಾದ ಯಥಾರ್ಥತೆಯಿಂದಲೂ ಪವಿತ್ರತೆಯಿಂದಲೂ ದೂರ ಸರಿದು ಭ್ರಷ್ಟವಾಗಬಹುದೆಂಬ ಭಯ ನನಗಿದೆ.  ಯಾವನಾದರೂ ನಿಮ್ಮ ಬಳಿಗೆ ಬಂದು ನಾವು ಸಾರಿದಂಥ ಯೇಸುವನ್ನು ಬಿಟ್ಟು ಮತ್ತೊಬ್ಬ ಯೇಸುವಿನ ಕುರಿತು ಸಾರುವುದಾದರೆ ಅಥವಾ ನೀವು ಪಡೆದುಕೊಂಡಿರುವ ಮನೋವೃತ್ತಿಯನ್ನಲ್ಲದೆ ಬೇರೊಂದು ಮನೋವೃತ್ತಿಯನ್ನು ಪಡೆಯುವುದಾದರೆ ಇಲ್ಲವೆ ನೀವು ಸ್ವೀಕರಿಸಿರುವ ಸುವಾರ್ತೆಯನ್ನಲ್ಲದೆ ಬೇರೊಂದು ಸುವಾರ್ತೆಯನ್ನು ಪಡೆಯುವುದಾದರೆ, ಅಂಥವನನ್ನು ನೀವು ಸುಲಭವಾಗಿಯೇ ಸಹಿಸಿಕೊಳ್ಳುತ್ತೀರಿ.  ನಿಮ್ಮ ಮಧ್ಯದಲ್ಲಿರುವ ಅತ್ಯುತ್ಕೃಷ್ಟರೆಂದು ತೋರಿಸಿಕೊಳ್ಳುವ ಅಪೊಸ್ತಲರಿಗಿಂತ ನಾನು ಒಂದು ವಿಷಯದಲ್ಲಿಯೂ ಕಡಮೆಯಾದವನಾಗಿ ಕಂಡುಬಂದಿಲ್ಲ ಎಂದು ಎಣಿಸುತ್ತೇನೆ.  ನಾನು ಮಾತಿನಲ್ಲಿ ನಿಪುಣನಲ್ಲದಿದ್ದರೂ ಜ್ಞಾನದಲ್ಲಿ ನಿಪುಣನಾಗಿದ್ದೇನೆ ಎಂಬುದಂತೂ ನಿಶ್ಚಯ; ಇದನ್ನು ನಾವು ಎಲ್ಲ ವಿಷಯಗಳಲ್ಲಿಯೂ ಪ್ರತಿಯೊಂದು ವಿಧದಲ್ಲಿಯೂ ತೋರಿಸಿಕೊಟ್ಟಿದ್ದೇವೆ.  ನೀವು ಹೆಚ್ಚಿಸಲ್ಪಡಬೇಕು ಎಂಬ ಕಾರಣಕ್ಕಾಗಿ ನನ್ನನ್ನು ನಾನೇ ತಗ್ಗಿಸಿಕೊಂಡು ದೇವರ ಸುವಾರ್ತೆಯನ್ನು ನಿಮಗೆ ಸಂತೋಷದಿಂದ ಉಚಿತವಾಗಿ ಪ್ರಕಟಿಸುವ ಮೂಲಕ ನಾನು ಪಾಪಗೈದೆನೊ?  ನಿಮಗೆ ಶುಶ್ರೂಷೆ ಮಾಡುವುದಕ್ಕೋಸ್ಕರ ನಾನು ಬೇರೆ ಸಭೆಗಳ ಒದಗಿಸುವಿಕೆಗಳನ್ನು ಸ್ವೀಕರಿಸಿ ಅವುಗಳನ್ನು ಸುಲಿಗೆಮಾಡಿದೆನು;  ಹಾಗಿದ್ದರೂ ನಾನು ನಿಮ್ಮೊಂದಿಗಿದ್ದ ಸಮಯದಲ್ಲಿ ನನಗೆ ಆವಶ್ಯವಾದದ್ದು ನನ್ನ ಬಳಿ ಇಲ್ಲದಿದ್ದಾಗ ನಾನು ನಿಮ್ಮಲ್ಲಿ ಒಬ್ಬನಿಗೂ ಹೊರೆಯಾಗಲಿಲ್ಲ; ಏಕೆಂದರೆ ಮಕೆದೋನ್ಯದಿಂದ ಬಂದ ಸಹೋದರರು ನನ್ನ ಕೊರತೆಯನ್ನು ನೀಗಿಸಲು ಯಥೇಷ್ಟವಾಗಿ ಒದಗಿಸಿದರು. ಪ್ರತಿಯೊಂದು ವಿಧದಲ್ಲಿಯೂ ನಾನು ನಿಮಗೆ ಹೊರೆಯಾಗಿರದಂತೆ ನೋಡಿಕೊಂಡೆನು ಮತ್ತು ಮುಂದೆಯೂ ಹಾಗೆಯೇ ನೋಡಿಕೊಳ್ಳುವೆನು. 10  ಕ್ರಿಸ್ತನ ಕುರಿತಾದ ಸತ್ಯವು ನನ್ನಲ್ಲಿ ಇರುವಷ್ಟು ಸಮಯ ಅಖಾಯ ಪ್ರಾಂತಗಳಲ್ಲಿ ನನ್ನ ಈ ಹೊಗಳಿಕೆಯನ್ನು ನಿಲ್ಲಿಸಲಾಗದು. 11  ಯಾವ ಕಾರಣಕ್ಕಾಗಿ? ನನಗೆ ನಿಮ್ಮ ಮೇಲೆ ಪ್ರೀತಿಯಿಲ್ಲದಿರುವ ಕಾರಣವೊ? ನನಗೆ ನಿಮ್ಮ ಮೇಲೆ ಪ್ರೀತಿಯಿದೆ ಎಂಬುದು ದೇವರಿಗೆ ತಿಳಿದಿದೆ. 12  ಈಗ ನಾನು ಏನನ್ನು ಮಾಡುತ್ತಿದ್ದೇನೋ ಅದನ್ನು ಮಾಡುತ್ತಾ ಮುಂದುವರಿಯುವೆನು; ಹೀಗೆ ತಾವು ಹೊಗಳಿಕೊಳ್ಳುತ್ತಿರುವ ಕಾರ್ಯದಲ್ಲಿ ನಮಗೆ ಸಮಾನರಾಗಿ ಕಂಡುಬಂದಿದ್ದೇವೆಂದು ನೆಪವನ್ನು ಹುಡುಕುತ್ತಿರುವವರಿಗೆ ಯಾವ ನೆಪಕ್ಕೂ ಆಸ್ಪದಕೊಡದಿರುವಂತಾಗುವುದು. 13  ಅಂಥ ಮನುಷ್ಯರು ಸುಳ್ಳು ಅಪೊಸ್ತಲರು, ವಂಚನೆಯ ಕೆಲಸಗಾರರು ಮತ್ತು ತಮ್ಮನ್ನು ಕ್ರಿಸ್ತನ ಅಪೊಸ್ತಲರೆಂದು ತೋರಿಸಿಕೊಳ್ಳಲು ಮಾರ್ಪಾಡುಮಾಡಿಕೊಳ್ಳುವವರೂ ಆಗಿದ್ದಾರೆ. 14  ಇದೇನೂ ಆಶ್ಚರ್ಯವಲ್ಲ, ಏಕೆಂದರೆ ಸೈತಾನನು ಸಹ ಬೆಳಕಿನ ದೂತನೆಂದು ತೋರಿಸಿಕೊಳ್ಳಲು ವೇಷಹಾಕಿಕೊಳ್ಳುತ್ತಾ ಇರುತ್ತಾನೆ. 15  ಹಾಗಿರುವಾಗ ಅವನ ಸೇವಕರು ಸಹ ತಮ್ಮನ್ನು ನೀತಿಯ ಸೇವಕರಾಗಿ ತೋರಿಸಿಕೊಳ್ಳಲು ವೇಷಹಾಕಿಕೊಂಡರೆ ಅದೇನೂ ದೊಡ್ಡದಲ್ಲ. ಅವರ ಅಂತ್ಯವು ಅವರ ಕೃತ್ಯಗಳಿಗೆ ತಕ್ಕ ಹಾಗೆಯೇ ಇರುವುದು. 16  ನಾನು ಪುನಃ ಹೇಳುವುದೇನೆಂದರೆ, ನಾನು ವಿಚಾರಹೀನನೆಂದು ಯಾವನೂ ನೆನಸದಿರಲಿ. ನೀವು ಹಾಗೆ ನೆನಸುವುದಾದರೂ ವಿಚಾರಹೀನನಾಗಿಯಾದರೂ ನನ್ನನ್ನು ಸೇರಿಸಿಕೊಳ್ಳಿರಿ; ಆಗ ನನಗೆ ಸಹ ಸ್ವಲ್ಪಮಟ್ಟಿಗೆ ಹೊಗಳಿಕೊಳ್ಳಲು ಆಸ್ಪದ ಸಿಗುವುದು. 17  ನಾನು ಏನು ಮಾತಾಡುತ್ತಿದ್ದೇನೋ ಅದನ್ನು ಕರ್ತನ ಮಾದರಿಯನ್ನು ಅನುಸರಿಸಿ ಮಾತಾಡುತ್ತಿಲ್ಲ, ಆತ್ಮವಿಶ್ವಾಸದಿಂದ ಹೊಗಳಿಕೊಳ್ಳುವ ವಿಚಾರಹೀನನಂತೆ ಮಾತಾಡುತ್ತಿದ್ದೇನೆ. 18  ಅನೇಕರು ಶರೀರಸಂಬಂಧವಾದ ರೀತಿಯಲ್ಲಿ ಹೊಗಳಿಕೊಳ್ಳುವುದರಿಂದ ನಾನೂ ಹೊಗಳಿಕೊಳ್ಳುವೆನು. 19  ನೀವು ನಿಮ್ಮನ್ನು ನ್ಯಾಯಸಮ್ಮತರೆಂದು ನೆನಸಿ ವಿಚಾರಹೀನ ವ್ಯಕ್ತಿಗಳನ್ನು ಸಂತೋಷದಿಂದ ಸಹಿಸಿಕೊಳ್ಳುತ್ತೀರಿ. 20  ವಾಸ್ತವದಲ್ಲಿ ಒಬ್ಬನು ನಿಮ್ಮನ್ನು ತನ್ನ ದಾಸರನ್ನಾಗಿ ಮಾಡಿಕೊಳ್ಳುವುದಾದರೂ ನಿಮಗಿರುವುದನ್ನು ನುಂಗಿಹಾಕುವುದಾದರೂ ನಿಮಗಿರುವುದನ್ನು ದೋಚಿಕೊಳ್ಳುವುದಾದರೂ ನಿಮಗಿಂತ ತನ್ನನ್ನು ಹೆಚ್ಚಿಸಿಕೊಳ್ಳುವುದಾದರೂ ನಿಮ್ಮ ಮುಖಕ್ಕೆ ಹೊಡೆಯುವುದಾದರೂ ಅಂಥವನನ್ನು ನೀವು ಸಹಿಸಿಕೊಳ್ಳುತ್ತೀರಿ. 21  ನಮ್ಮ ಸ್ಥಾನವು ದುರ್ಬಲವಾಗಿತ್ತೋ ಎಂಬಂತೆ ನಾನು ಇದನ್ನು ನಮ್ಮ ಅವಮಾನಕ್ಕಾಗಿ ಹೇಳುತ್ತೇನೆ. ಆದರೆ ಬೇರೆ ಯಾವನಾದರೂ ಒಂದು ವಿಷಯದಲ್ಲಿ ಧೈರ್ಯವಂತನಾಗಿ ವರ್ತಿಸುವುದಾದರೆ—⁠ವಿಚಾರಹೀನನಂತೆ ಮಾತಾಡುತ್ತಿದ್ದೇನೆ—⁠ನಾನೂ ಆ ವಿಷಯದಲ್ಲಿ ಧೈರ್ಯವಂತನಾಗಿ ಕ್ರಿಯೆಗೈಯುತ್ತೇನೆ. 22  ಅವರು ಇಬ್ರಿಯರೊ? ನಾನೂ ಒಬ್ಬ ಇಬ್ರಿಯನು. ಅವರು ಇಸ್ರಾಯೇಲ್ಯರೊ? ನಾನೂ ಒಬ್ಬ ಇಸ್ರಾಯೇಲ್ಯನು. ಅವರು ಅಬ್ರಹಾಮನ ಸಂತತಿಯವರೊ? ನಾನೂ ಅವನ ಸಂತತಿಯವನೇ. 23  ಅವರು ಕ್ರಿಸ್ತನ ಶುಶ್ರೂಷಕರೊ? ನಾನು ಅವರಿಗಿಂತ ಹೆಚ್ಚು ಎದ್ದುಕಾಣುವ ಶುಶ್ರೂಷಕನಾಗಿದ್ದೇನೆ ಎಂದು ಹುಚ್ಚನಂತೆ ಉತ್ತರಿಸುತ್ತೇನೆ: ಹೆಚ್ಚು ಹೇರಳವಾಗಿ ಪ್ರಯಾಸದ ಕೆಲಸಗಳನ್ನು ಮಾಡಿದೆನು, ಎಷ್ಟೋ ಹೆಚ್ಚು ಸಾರಿ ಸೆರೆಮನೆಗಳಲ್ಲಿ ಬಿದ್ದೆನು, ವಿಪರೀತ ಹೊಡೆತಗಳನ್ನು ತಿಂದೆನು, ಅನೇಕವೇಳೆ ಸಾಯುವುದಕ್ಕೆ ಹತ್ತಿರವಾಗಿದ್ದೆನು, 24  ನಾನು ಐದು ಬಾರಿ ಯೆಹೂದ್ಯರಿಂದ ಒಂದು ಕಡಮೆ ನಲವತ್ತು ಏಟುಗಳನ್ನು ಪಡೆದೆನು, 25  ಮೂರು ಬಾರಿ ದೊಣ್ಣೆಗಳಿಂದ ನನ್ನನ್ನು ಹೊಡೆಯಲಾಯಿತು, ಒಮ್ಮೆ ನನ್ನ ಮೇಲೆ ಕಲ್ಲೆಸೆದು ಕೊಲ್ಲಲು ಪ್ರಯತ್ನಿಸಲಾಯಿತು, ಮೂರು ಬಾರಿ ಹಡಗೊಡೆತವನ್ನು ಅನುಭವಿಸಿದೆನು, ಒಂದು ರಾತ್ರಿ ಮತ್ತು ಒಂದು ಹಗಲನ್ನು ಆಳವಾದ ನೀರಿನಲ್ಲಿ ಕಳೆದೆನು, 26  ಅನೇಕ ಪ್ರಯಾಣಗಳನ್ನು ಮಾಡಿದೆನು; ನದಿಗಳಿಂದ ಅಪಾಯಗಳು, ದಾರಿಗಳ್ಳರಿಂದ ಅಪಾಯಗಳು, ನನ್ನ ಸ್ವಂತ ಜನರಿಂದ ಅಪಾಯಗಳು, ಅನ್ಯಜನಾಂಗಗಳಿಂದ ಅಪಾಯಗಳು, ನಗರದಲ್ಲಿ ಅಪಾಯಗಳು, ಅರಣ್ಯದಲ್ಲಿ ಅಪಾಯಗಳು, ಸಮುದ್ರದಲ್ಲಿ ಅಪಾಯಗಳು, ಸುಳ್ಳು ಸಹೋದರರ ಮಧ್ಯೆ ಅಪಾಯಗಳು ಬಂದವು. 27  ಶ್ರಮ ಪರಿಶ್ರಮಗಳು, ಅನೇಕವೇಳೆ ನಿದ್ರಾರಹಿತ ರಾತ್ರಿಗಳು, ಹಸಿವೆಬಾಯಾರಿಕೆಗಳು, ಅನೇಕಬಾರಿ ಆಹಾರವಿಲ್ಲದಿರುವಿಕೆಯನ್ನು, ಚಳಿ ಮತ್ತು ಬೆತ್ತಲೆ ಸ್ಥಿತಿಯನ್ನು ಅನುಭವಿಸಿದೆನು. 28  ಬಾಹ್ಯ ರೀತಿಯ ಈ ವಿಷಯಗಳಲ್ಲದೆ, ಎಲ್ಲ ಸಭೆಗಳ ಕುರಿತಾದ ಚಿಂತೆಯು ದಿನನಿತ್ಯವೂ ನನ್ನನ್ನು ಕಾಡಿಸುತ್ತಿದೆ. 29  ಯಾವನಾದರೂ ಬಲಹೀನನಾದರೆ ನಾನೂ ಅವನೊಂದಿಗೆ ಬಲಹೀನನಾಗದೆ ಇರುವೆನೊ? ಯಾವನಾದರೂ ಎಡವಿದರೆ ನಾನು ಕೋಪಗೊಳ್ಳದೆ ಇರುವೆನೊ? 30  ಹೊಗಳಿಕೊಳ್ಳಲೇ ಬೇಕಾಗಿರುವಲ್ಲಿ ನನ್ನ ಬಲಹೀನತೆಗೆ ಸಂಬಂಧಪಟ್ಟ ವಿಷಯಗಳಲ್ಲಿ ನಾನು ಹೊಗಳಿಕೊಳ್ಳುವೆನು. 31  ನಾನು ಸುಳ್ಳು ಹೇಳುತ್ತಿಲ್ಲ ಎಂಬುದು ಕರ್ತನಾದ ಯೇಸುವಿನ ದೇವರೂ ತಂದೆಯೂ ಸದಾಕಾಲಕ್ಕೆ ಸ್ತುತಿಯನ್ನು ಹೊಂದತಕ್ಕವನೂ ಆಗಿರುವಾತನಿಗೆ ತಿಳಿದಿದೆ. 32  ದಮಸ್ಕದ ಅರಸನಾದ ಅರೇತನ ಕೆಳಗಿದ್ದ ರಾಜ್ಯಪಾಲನು ನನ್ನನ್ನು ಹಿಡಿಯಬೇಕೆಂದು ದಮಸ್ಕದವರ ಪಟ್ಟಣವನ್ನು ಕಾಯುತ್ತಿದ್ದನು. 33  ಆದರೆ ನಾನು ಒಂದು ಚಾಪೆಕಡ್ಡಿಯ ಬುಟ್ಟಿಯ ಮೂಲಕ ಗೋಡೆಯಲ್ಲಿದ್ದ ಕಿಟಕಿಯೊಳಗಿಂದ ಕೆಳಗಿಳಿಸಲ್ಪಟ್ಟು ಅವನ ಕೈಯಿಂದ ತಪ್ಪಿಸಿಕೊಂಡೆನು.

ಪಾದಟಿಪ್ಪಣಿ