ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

2 ಕೊರಿಂಥ 10:1-18

10  ನಿಮ್ಮ ಮಧ್ಯದಲ್ಲಿರುವಾಗ ದೀನನೂ ನಿಮ್ಮಿಂದ ದೂರವಾಗಿದ್ದಾಗ ನಿಮ್ಮ ವಿಷಯದಲ್ಲಿ ಧೈರ್ಯಶಾಲಿಯೂ ಆಗಿರುವ ಪೌಲನೆಂಬ ನಾನು ಕ್ರಿಸ್ತನ ಸೌಮ್ಯಭಾವದಿಂದಲೂ ದಯೆಯಿಂದಲೂ ನಿಮ್ಮನ್ನು ಬೇಡಿಕೊಳ್ಳುತ್ತೇನೆ.  ನಾನು ನಿಮ್ಮ ಬಳಿಗೆ ಬಂದಾಗ ನಿಮ್ಮ ವಿಷಯದಲ್ಲಿ ಧೈರ್ಯದಿಂದ ವರ್ತಿಸುವ ಅಗತ್ಯವಾಗಲಿ ನಾವು ಶಾರೀರಿಕ ಪ್ರವೃತ್ತಿಗನುಸಾರ ನಡೆದುಕೊಳ್ಳುತ್ತೇವೋ ಎಂದು ಎಣಿಸುವಂಥ ಕೆಲವರ ವಿರುದ್ಧ ಧೈರ್ಯದ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಾಗಲಿ ಉಂಟಾಗದಿರಲೆಂದು ಬೇಡಿಕೊಳ್ಳುತ್ತೇನೆ.  ನಾವು ಶಾರೀರಿಕವಾಗಿ ನಡೆಯುವುದಾದರೂ ಶಾರೀರಿಕ ಪ್ರವೃತ್ತಿಗನುಸಾರ ಯುದ್ಧಮಾಡುವುದಿಲ್ಲ.  ಯುದ್ಧಕ್ಕಾಗಿ ನಾವು ಉಪಯೋಗಿಸುವ ಆಯುಧಗಳು ಶಾರೀರಿಕವಾದವುಗಳಾಗಿರದೆ ಬಲವಾಗಿ ಬೇರೂರಿರುವ ವಿಷಯಗಳನ್ನು ಕೆಡವಿಹಾಕಲು ದೇವರಿಂದ ಶಕ್ತಿಯನ್ನು ಹೊಂದಿದವುಗಳಾಗಿವೆ.  ದೇವರ ಜ್ಞಾನಕ್ಕೆ ವಿರುದ್ಧವಾಗಿ ಎಬ್ಬಿಸಲ್ಪಡುವ ಕುತರ್ಕಗಳನ್ನೂ ಪ್ರತಿಯೊಂದು ಉನ್ನತವಾದ ವಿಷಯವನ್ನೂ ನಾವು ಕೆಡವಿಹಾಕುವವರಾಗಿದ್ದೇವೆ; ನಾವು ಪ್ರತಿಯೊಂದು ಯೋಚನೆಯನ್ನು ಸೆರೆಹಿಡಿದು ಅದನ್ನು ಕ್ರಿಸ್ತನಿಗೆ ವಿಧೇಯವಾಗುವಂತೆ ಮಾಡುತ್ತೇವೆ.  ನಿಮ್ಮ ಸ್ವಂತ ವಿಧೇಯತೆಯು ಪೂರ್ಣವಾಗಿ ತೋರಿಸಲ್ಪಟ್ಟ ಕೂಡಲೇ ಪ್ರತಿಯೊಂದು ಅವಿಧೇಯತೆಗೆ ಶಿಕ್ಷೆಯನ್ನು ನೀಡಲು ನಾವು ನಮ್ಮನ್ನು ಸಿದ್ಧರನ್ನಾಗಿ ಇಟ್ಟುಕೊಳ್ಳುತ್ತೇವೆ.  ನೀವು ವಿಷಯಗಳನ್ನು ಮುಖಬೆಲೆಗನುಸಾರ ನೋಡುತ್ತೀರಿ. ಯಾವನಾದರೂ ತಾನು ಕ್ರಿಸ್ತನಿಗೆ ಸೇರಿದವನೆಂದು ತನ್ನಲ್ಲೇ ಭರವಸೆಯಿಂದಿರುವುದಾದರೆ ಅವನು ಹೇಗೆ ಕ್ರಿಸ್ತನಿಗೆ ಸೇರಿದವನಾಗಿದ್ದಾನೋ ಹಾಗೆಯೇ ನಾವು ಸಹ ಕ್ರಿಸ್ತನಿಗೆ ಸೇರಿದವರೆಂಬ ವಾಸ್ತವಾಂಶವನ್ನು ಅವನು ತಿಳಿದುಕೊಳ್ಳಲಿ.  ನಿಮ್ಮನ್ನು ಕೆಡವಿಹಾಕಲಿಕ್ಕಾಗಿ ಅಲ್ಲ, ನಿಮ್ಮನ್ನು ಕಟ್ಟಲಿಕ್ಕಾಗಿ ಕರ್ತನು ನಮಗೆ ಕೊಟ್ಟ ಅಧಿಕಾರದ ವಿಷಯದಲ್ಲಿ ನಾನು ಸ್ವಲ್ಪ ಹೆಚ್ಚಾಗಿ ಹೊಗಳಿಕೊಳ್ಳುವುದಾದರೂ ಅದಕ್ಕಾಗಿ ನಾಚಿಕೆಪಡುವುದಿಲ್ಲ;  ನನ್ನ ಪತ್ರಗಳಿಂದ ನಿಮ್ಮನ್ನು ಹೆದರಿಸುವವನಾಗಿ ಕಾಣಿಸಿಕೊಳ್ಳಲು ಬಯಸದ ಕಾರಣ ಇದನ್ನು ಹೇಳುತ್ತಿದ್ದೇನೆ. 10  ಏಕೆಂದರೆ, “ಅವನ ಪತ್ರಗಳು ಬಲವತ್ತಾದವುಗಳೂ ಶಕ್ತಿಯುತವಾದವುಗಳೂ ಆಗಿವೆ, ಆದರೆ ಅವನು ಸಾಕ್ಷಾತ್ತಾಗಿ ಬಂದರೆ ಅವನು ನಿರ್ಬಲನೂ ಅವನ ಮಾತುಗಳು ಗಣನೆಗೆ ಬಾರದವುಗಳೂ ಆಗಿವೆ” ಎಂದು ಕೆಲವರು ಹೇಳುತ್ತಾರೆ. 11  ಆದರೆ ಅಂಥವನು, ನಾವು ದೂರದಲ್ಲಿರುವಾಗ ಪತ್ರಗಳ ಮೂಲಕ ನಮ್ಮ ಮಾತಿನಲ್ಲಿ ಎಂಥವರಾಗಿದ್ದೇವೋ ಹತ್ತಿರದಲ್ಲಿರುವಾಗ ಕ್ರಿಯೆಯಲ್ಲಿಯೂ ಅಂಥವರಾಗಿಯೇ ಇರುವೆವು ಎಂಬುದನ್ನು ತಿಳಿದುಕೊಳ್ಳಲಿ. 12  ತಮ್ಮನ್ನು ತಾವೇ ಶಿಫಾರಸ್ಸುಮಾಡಿಕೊಳ್ಳುವ ಕೆಲವರೊಂದಿಗೆ ನಮ್ಮನ್ನು ಸೇರಿಸಿಕೊಳ್ಳಲು ಅಥವಾ ಅವರೊಂದಿಗೆ ನಮ್ಮನ್ನು ಹೋಲಿಸಿಕೊಳ್ಳಲು ನಾವು ಧೈರ್ಯಮಾಡುವುದಿಲ್ಲ. ನಿಶ್ಚಯವಾಗಿಯೂ ಅವರು ತಮ್ಮತಮ್ಮೊಳಗೆ ತಮ್ಮನ್ನು ಅಳೆಯುತ್ತಾ ತಮ್ಮೊಂದಿಗೆ ತಮ್ಮನ್ನೇ ಹೋಲಿಸಿಕೊಳ್ಳುತ್ತಾ ಇರುವುದರಿಂದ ಯಾವುದೇ ತಿಳಿವಳಿಕೆ ಇಲ್ಲದವರಾಗಿದ್ದಾರೆ. 13  ನಾವಾದರೋ ನಮ್ಮ ನೇಮಿತ ಮೇರೆಗಳ ಹೊರಗೆ ನಮ್ಮನ್ನು ಹೊಗಳಿಕೊಳ್ಳದೆ, ದೇವರು ಅಳತೆಮಾಡಿ ನಮಗೆ ನೇಮಿಸಿರುವ ಕ್ಷೇತ್ರದ ಮೇರೆಗನುಸಾರ ಹೊಗಳಿಕೊಳ್ಳುತ್ತೇವೆ. ಆ ಮೇರೆಯೊಳಗಿದ್ದು ನಿಮ್ಮನ್ನು ತಲಪುವ ತನಕವೂ ಬಂದಿದ್ದೇವೆ. 14  ನಾವು ನಿಮ್ಮನ್ನು ತಲಪಲಿಲ್ಲವೋ ಎಂಬಂತೆ ಮೇರೆಯನ್ನು ಅತಿಕ್ರಮಿಸಿದವರಲ್ಲ, ಏಕೆಂದರೆ ಕ್ರಿಸ್ತನ ​ಕುರಿತಾದ ಸುವಾರ್ತೆಯನ್ನು ಪ್ರಕಟಿಸುತ್ತಾ ನಿಮ್ಮ ಬಳಿಗೆ ಬಂದವರಲ್ಲಿ ನಾವೇ ಮೊದಲಿಗರು. 15  ನಾವು ನಮ್ಮ ನೇಮಿತ ಮೇರೆಗಳ ಹೊರಗೆ ಬೇರೊಬ್ಬನ ಕೆಲಸಗಳಲ್ಲಿ ಹೊಗಳಿಕೊಳ್ಳುತ್ತಿಲ್ಲ; ಆದರೆ ನಿಮ್ಮ ನಂಬಿಕೆಯು ಹೆಚ್ಚಾದಂತೆಲ್ಲಾ ನಮ್ಮ ಕ್ಷೇತ್ರದ ಸಂಬಂಧದಲ್ಲಿ ನಿಮ್ಮ ಮಧ್ಯೆ ನಾವು ಹೆಚ್ಚನ್ನು ಸಾಧಿಸುವೆವು ಎಂಬ ನಿರೀಕ್ಷೆಯನ್ನು ಹೊಂದಿದ್ದೇವೆ. ಆಗ ನಾವು ಮತ್ತಷ್ಟು ಅಭಿವೃದ್ಧಿಹೊಂದಿ 16  ನಿಮಗಿಂತ ಆಚೆಯಿರುವ ದೇಶಗಳಿಗೂ ಸುವಾರ್ತೆಯನ್ನು ಪ್ರಕಟಪಡಿಸುವೆವು. ಹೀಗೆ ಈಗಾಗಲೇ ಸಿದ್ಧವಾಗಿರುವ ಇನ್ನೊಬ್ಬನ ಕ್ಷೇತ್ರದಲ್ಲಿ ನಾವು ಹೆಚ್ಚಳ​ಪಡುವುದಿಲ್ಲ. 17  “ಆದರೆ ಹೆಚ್ಚಳಪಡುವವನು ಯೆಹೋವನಲ್ಲಿ ಹೆಚ್ಚಳಪಡಲಿ.” 18  ತನ್ನನ್ನು ತಾನೇ ಶಿಫಾರಸ್ಸುಮಾಡಿಕೊಳ್ಳುವವನಲ್ಲ, ಯೆಹೋವನು ಯಾರನ್ನು ಶಿಫಾರಸ್ಸುಮಾಡುತ್ತಾನೋ ಆ ಮನುಷ್ಯನೇ ಮೆಚ್ಚಿಕೆಗೆ ಪಾತ್ರನು.

ಪಾದಟಿಪ್ಪಣಿ