ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

1 ಯೋಹಾನ 3:1-24

3  ನಾವು ದೇವರ ಮಕ್ಕಳೆಂದು ಕರೆಯಲ್ಪಡುವಂತೆ ತಂದೆಯು ನಮಗೆ ಎಂಥ ಪ್ರೀತಿಯನ್ನು ಕೊಟ್ಟಿದ್ದಾನೆ ಎಂಬುದನ್ನು ನೋಡಿರಿ; ನಾವು ಆತನ ಮಕ್ಕಳಾಗಿದ್ದೇವೆ. ಲೋಕವು ಆತನನ್ನು ತಿಳಿಯದೇ ಇರುವುದರಿಂದಲೇ ಅದು ನಮ್ಮನ್ನೂ ತಿಳಿದಿಲ್ಲ.  ಪ್ರಿಯರೇ, ಈಗ ನಾವು ದೇವರ ಮಕ್ಕಳಾಗಿದ್ದೇವೆ, ಆದರೆ ಮುಂದೆ ಏನಾಗುವೆವೆಂಬುದು ಇನ್ನೂ ಪ್ರಕಟಗೊಂಡಿಲ್ಲ. ಆದರೆ ಆತನು ಪ್ರಕಟಪಡಿಸಲ್ಪಡುವಾಗ ನಾವು ಆತನಂತೆಯೇ ಇರುವೆವು ಎಂಬುದು ನಮಗೆ ತಿಳಿದಿದೆ, ಏಕೆಂದರೆ ಆತನಿರುವ ಪ್ರಕಾರವೇ ನಾವು ಆತನನ್ನು ನೋಡುವೆವು.  ಈ ನಿರೀಕ್ಷೆ ಇರುವ ಪ್ರತಿಯೊಬ್ಬನು, ಆತನು ಶುದ್ಧನಾಗಿರುವಂತೆ ತನ್ನನ್ನೂ ಶುದ್ಧೀಕರಿಸಿಕೊಳ್ಳುತ್ತಾನೆ.  ಪಾಪವನ್ನು ಮಾಡುತ್ತಾ ಇರುವ ಪ್ರತಿಯೊಬ್ಬನು ಅಧರ್ಮವನ್ನು ಮಾಡುತ್ತಾ ಇರುವವನಾಗಿದ್ದಾನೆ; ಹಾಗಾದರೆ ಪಾಪವು ಅಧರ್ಮವಾಗಿದೆ.  ನಮ್ಮ ಪಾಪಗಳನ್ನು ತೆಗೆದುಹಾಕುವುದಕ್ಕಾಗಿ ಅವನು ಪ್ರಕಟಗೊಳಿಸಲ್ಪಟ್ಟನು ಎಂಬುದನ್ನೂ ನೀವು ತಿಳಿದಿದ್ದೀರಿ ಮತ್ತು ಅವನಲ್ಲಿ ಯಾವುದೇ ಪಾಪವಿಲ್ಲ.  ಅವನೊಂದಿಗೆ ಐಕ್ಯದಲ್ಲಿ ಉಳಿಯುವ ಪ್ರತಿಯೊಬ್ಬನು ಪಾಪವನ್ನು ಮಾಡುತ್ತಾ ಇರುವುದಿಲ್ಲ; ಪಾಪವನ್ನು ಮಾಡುತ್ತಾ ಇರುವವನು ಅವನನ್ನು ಕಂಡಿರುವುದೂ ಇಲ್ಲ, ತಿಳಿದಿರುವುದೂ ಇಲ್ಲ.  ಚಿಕ್ಕ ಮಕ್ಕಳೇ, ಯಾವನೂ ನಿಮ್ಮನ್ನು ದಾರಿತಪ್ಪಿಸಲು ಅವಕಾಶಕೊಡಬೇಡಿರಿ; ಅವನು ನೀತಿವಂತನಾಗಿರುವಂತೆಯೇ ನೀತಿಯನ್ನು ನಡಿಸುತ್ತಾ ಇರುವವನು ನೀತಿವಂತನಾಗಿದ್ದಾನೆ.  ಪಾಪವನ್ನು ಮಾಡುತ್ತಾ ಮುಂದುವರಿಯುವವನು ಪಿಶಾಚನಿಂದ ಹುಟ್ಟಿದವನಾಗಿದ್ದಾನೆ, ಏಕೆಂದರೆ ಆರಂಭದಿಂದಲೂ ಪಿಶಾಚನು ಪಾಪಮಾಡುತ್ತಲೇ ಇದ್ದನು. ಈ ಉದ್ದೇಶಕ್ಕಾಗಿ, ಅಂದರೆ ಪಿಶಾಚನ ಕೆಲಸಗಳನ್ನು ಭಂಗಗೊಳಿಸಲಿಕ್ಕಾಗಿಯೇ ದೇವರ ಮಗನು ಪ್ರಕಟಗೊಳಿಸಲ್ಪಟ್ಟನು.  ದೇವರಿಂದ ಹುಟ್ಟಿರುವವನು ಪಾಪವನ್ನು ಮಾಡುತ್ತಾ ಮುಂದುವರಿಯುವುದಿಲ್ಲ, ಏಕೆಂದರೆ ಆತನ ಪುನರುತ್ಪಾದಕ ಬೀಜವು ಅಂಥವನಲ್ಲಿ ನೆಲೆಗೊಂಡಿದೆ ಮತ್ತು ಅವನು ದೇವರಿಂದ ಹುಟ್ಟಿದವನಾಗಿರುವ ಕಾರಣ ಪಾಪದ ಪರಿಪಾಠವನ್ನು ಮಾಡಲಾರನು. 10  ಯಾರು ದೇವರ ಮಕ್ಕಳು ಮತ್ತು ಯಾರು ಪಿಶಾಚನ ಮಕ್ಕಳು ಎಂಬುದು ಈ ವಾಸ್ತವಾಂಶದಿಂದ ವ್ಯಕ್ತವಾಗುತ್ತದೆ: ನೀತಿಯನ್ನು ನಡಿಸುತ್ತಾ ಮುಂದುವರಿಯದವನಾಗಲಿ ತನ್ನ ಸಹೋದರನನ್ನು ಪ್ರೀತಿಸದವನಾಗಲಿ ದೇವರಿಂದ ಹುಟ್ಟಿದವನಲ್ಲ. 11  ನಮ್ಮಲ್ಲಿ ಒಬ್ಬರಮೇಲೊಬ್ಬರಿಗೆ ಪ್ರೀತಿ ಇರಬೇಕೆಂಬ ಸಂದೇಶವನ್ನು ನೀವು ಆರಂಭದಿಂದಲೂ ಕೇಳಿಸಿಕೊಂಡಿದ್ದೀರಿ. 12  ಕೆಡುಕನಿಂದ ಹುಟ್ಟಿದವನಾಗಿದ್ದು ತನ್ನ ತಮ್ಮನನ್ನು ಕೊಂದುಹಾಕಿದ ಕಾಯಿನನಂತೆ ನಾವು ಇರಬಾರದು. ಅವನು ಯಾವ ಕಾರಣಕ್ಕಾಗಿ ಅವನನ್ನು ಕೊಂದುಹಾಕಿದನು? ತನ್ನ ಕೃತ್ಯಗಳು ಕೆಟ್ಟವುಗಳೂ ತನ್ನ ತಮ್ಮನ ಕೃತ್ಯಗಳು ನೀತಿಯುತವಾದವುಗಳೂ ಆಗಿದ್ದುದರಿಂದಲೇ. 13  ಸಹೋದರರೇ, ಲೋಕವು ನಿಮ್ಮನ್ನು ದ್ವೇಷಿಸುವುದಾದರೆ ಆಶ್ಚರ್ಯಪಡಬೇಡಿ. 14  ನಾವು ಸಹೋದರರನ್ನು ಪ್ರೀತಿಸುವುದರಿಂದ ಮರಣವನ್ನು ಪಾರಾಗಿ ಜೀವಕ್ಕೆ ಸೇರಿದ್ದೇವೆ ಎಂಬುದನ್ನು ತಿಳಿದಿದ್ದೇವೆ. ಪ್ರೀತಿಸದವನು ಮರಣದಲ್ಲೇ ಉಳಿಯುತ್ತಾನೆ. 15  ತನ್ನ ಸಹೋದರನನ್ನು ದ್ವೇಷಿಸುವ ಪ್ರತಿಯೊಬ್ಬನು ನರಹಂತಕನಾಗಿದ್ದಾನೆ ಮತ್ತು ಯಾವ ನರಹಂತಕನಲ್ಲಿಯೂ ನಿತ್ಯಜೀವವು ಇರುವುದಿಲ್ಲ ಎಂಬುದು ನಿಮಗೆ ತಿಳಿದಿದೆ. 16  ಅವನು ನಮಗೋಸ್ಕರ ತನ್ನ ಪ್ರಾಣವನ್ನು ಒಪ್ಪಿಸಿಕೊಟ್ಟದ್ದರಿಂದಲೇ ಪ್ರೀತಿ ಏನೆಂಬುದನ್ನು ನಾವು ತಿಳಿದುಕೊಂಡಿದ್ದೇವೆ ಮತ್ತು ನಮ್ಮ ಸಹೋದರರಿಗೋಸ್ಕರ ನಮ್ಮ ಪ್ರಾಣಗಳನ್ನು ಒಪ್ಪಿಸಿಕೊಡುವ ಹಂಗಿನಲ್ಲಿದ್ದೇವೆ. 17  ಆದರೆ ಜೀವನಾಧಾರಕ್ಕಾಗಿ ಈ ಲೋಕದ ಸಂಪತ್ತನ್ನು ಹೊಂದಿರುವ ಯಾವನಾದರೂ ತನ್ನ ಸಹೋದರನು ಕೊರತೆಯಲ್ಲಿರುವುದನ್ನು ನೋಡಿದಾಗ್ಯೂ ಕೋಮಲ ಸಹಾನುಭೂತಿಯ ದ್ವಾರವನ್ನು ಅವನಿಗೆ ಮುಚ್ಚಿಬಿಡುವುದಾದರೆ ದೇವರ ಪ್ರೀತಿಯು ಅವನಲ್ಲಿ ನೆಲೆಗೊಂಡಿರುವುದು ಹೇಗೆ? 18  ಚಿಕ್ಕ ಮಕ್ಕಳೇ, ನಾವು ಬರೀ ಮಾತಿನಲ್ಲಾಗಲಿ ನಾಲಿಗೆಯಿಂದಾಗಲಿ ಪ್ರೀತಿಸುವವರಾಗಿರದೆ ಕಾರ್ಯದಲ್ಲಿಯೂ ಸತ್ಯದಲ್ಲಿಯೂ ಪ್ರೀತಿಸುವವರಾಗಿರೋಣ. 19  ನಾವು ಸತ್ಯದಿಂದ ಹುಟ್ಟಿದವರೆಂದು ಇದರಿಂದಲೇ ನಮಗೆ ತಿಳಿಯುವುದು ಮತ್ತು ನಾವು ಆತನ ಮುಂದೆ ನಮ್ಮ ಹೃದಯಗಳಿಗೆ ಭರವಸೆ ಕೊಡುವೆವು. 20  ನಮ್ಮ ಹೃದಯಗಳು ನಮ್ಮನ್ನು ಯಾವುದೇ ಸಂಬಂಧದಲ್ಲಿ ಖಂಡಿಸಬಹುದಾದರೂ ದೇವರು ನಮ್ಮ ಹೃದಯಗಳಿಗಿಂತ ಹೆಚ್ಚು ಶ್ರೇಷ್ಠನಾಗಿದ್ದಾನೆ ಮತ್ತು ಎಲ್ಲವನ್ನೂ ತಿಳಿದವನಾಗಿದ್ದಾನೆ. 21  ಪ್ರಿಯರೇ, ನಮ್ಮ ಹೃದಯಗಳು ನಮ್ಮನ್ನು ಖಂಡಿಸದಿರುವುದಾದರೆ ನಮಗೆ ದೇವರೊಂದಿಗೆ ವಾಕ್ಸರಳತೆ ಇರುತ್ತದೆ. 22  ನಾವು ಆತನ ಆಜ್ಞೆಗಳನ್ನು ಕೈಕೊಂಡು ನಡೆಯುತ್ತಾ ಆತನ ದೃಷ್ಟಿಯಲ್ಲಿ ಮೆಚ್ಚಿಗೆಯಾಗಿರುವ ವಿಷಯಗಳನ್ನೇ ಮಾಡುತ್ತಾ ಇರುವುದರಿಂದ ನಾವು ಏನು ಕೇಳಿಕೊಂಡರೂ ಆತನಿಂದ ಹೊಂದುವೆವು. 23  ವಾಸ್ತವದಲ್ಲಿ ಆತನ ಮಗನಾದ ಯೇಸು ಕ್ರಿಸ್ತನ ಹೆಸರಿನಲ್ಲಿ ನಂಬಿಕೆಯನ್ನಿಟ್ಟು ಅವನು ನಮಗೆ ಆಜ್ಞೆಕೊಟ್ಟ ಪ್ರಕಾರ ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬುದೇ ಆತನ ಆಜ್ಞೆಯಾಗಿದೆ. 24  ಮಾತ್ರವಲ್ಲದೆ, ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವವನು ಆತನೊಂದಿಗೆ ಐಕ್ಯದಲ್ಲಿ ಉಳಿಯುತ್ತಾನೆ ಮತ್ತು ಆತನು ಸಹ ಅಂಥವನೊಂದಿಗೆ ಐಕ್ಯದಲ್ಲಿದ್ದಾನೆ; ಆತನು ನಮ್ಮೊಂದಿಗೆ ಐಕ್ಯದಲ್ಲಿ ಉಳಿದಿದ್ದಾನೆ ಎಂಬುದನ್ನು ಆತನು ನಮಗೆ ಕೊಟ್ಟಿರುವ ಪವಿತ್ರಾತ್ಮದಿಂದಲೇ * ನಾವು ತಿಳಿದುಕೊಳ್ಳುತ್ತೇವೆ.

ಪಾದಟಿಪ್ಪಣಿ

1ಯೋಹಾ 3:24  ಅಥವಾ, “ದೇವರ ಕಾರ್ಯಕಾರಿ ಶಕ್ತಿ.” ಪರಿಶಿಷ್ಟ 7 ನ್ನು ನೋಡಿ.