ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

1 ಪೇತ್ರ 3:1-22

3  ಅದೇ ರೀತಿಯಲ್ಲಿ ಹೆಂಡತಿಯರೇ, ನೀವು ನಿಮ್ಮನಿಮ್ಮ ಗಂಡಂದಿರಿಗೆ ಅಧೀನರಾಗಿರಿ; ಹೀಗೆ ಮಾಡುವಲ್ಲಿ, ಅವರಲ್ಲಿ ಯಾರಾದರೂ ವಾಕ್ಯಕ್ಕೆ ವಿಧೇಯರಾಗದಿರುವಲ್ಲಿ  ಅವರು ತಮ್ಮ ಹೆಂಡತಿಯರ ನಡತೆ ಮತ್ತು ಆಳವಾದ ಗೌರವದ ಮೂಲಕ ವಾಕ್ಯೋಪದೇಶವಿಲ್ಲದೆ ಜಯಿಸಲ್ಪಟ್ಟಾರು.  ಜಡೆಹೆಣೆದುಕೊಳ್ಳುವುದು, ಚಿನ್ನದ ಆಭರಣಗಳನ್ನು ಹಾಕಿಕೊಳ್ಳುವುದು ಅಥವಾ ಉತ್ತಮ ವಸ್ತ್ರಗಳನ್ನು ಧರಿಸಿಕೊಳ್ಳುವುದು ಈ ಮುಂತಾದ ಹೊರಗಣ ಶೃಂಗಾರವೇ ನಿಮ್ಮ ಅಲಂಕಾರವಾಗಿರದೆ,  ದೇವರ ದೃಷ್ಟಿಯಲ್ಲಿ ಅತಿ ಬೆಲೆಯುಳ್ಳ ಶಾಂತ ಮತ್ತು ಸೌಮ್ಯಭಾವವೆಂಬ ನಶಿಸಿಹೋಗದ ಉಡುಗೆಯಿಂದ ಅಲಂಕೃತವಾದ ಹೃದಯದ ಗುಪ್ತ ವ್ಯಕ್ತಿಯು * ನಿಮ್ಮ ಅಲಂಕಾರವಾಗಿರಲಿ.  ಪೂರ್ವಕಾಲದಲ್ಲಿ ದೇವರಲ್ಲಿ ನಿರೀಕ್ಷೆಯಿಟ್ಟಿದ್ದ ಪವಿತ್ರ ಸ್ತ್ರೀಯರು ಸಹ ಇದೇ ರೀತಿಯಲ್ಲಿ ತಮ್ಮನ್ನು ಅಲಂಕರಿಸಿಕೊಂಡು ತಮ್ಮತಮ್ಮ ಗಂಡಂದಿರಿಗೆ ಅಧೀನರಾಗಿದ್ದರು.  ಸಾರಳು ಅಬ್ರಹಾಮನಿಗೆ ವಿಧೇಯಳಾಗಿದ್ದು ಅವನನ್ನು “ಯಜಮಾನ” ಎಂದು ಕರೆದಳು. ನೀವು ಒಳ್ಳೇದನ್ನು ಮಾಡುತ್ತಾ ಮುಂದುವರಿಯುವುದಾದರೆ ಮತ್ತು ಯಾವುದೇ ಭೀತಿಯ ಕಾರಣಕ್ಕೂ ಹೆದರದೆ ಇರುವುದಾದರೆ ಅವಳ ಮಕ್ಕಳಾಗಿದ್ದೀರಿ.  ಗಂಡಂದಿರೇ, ನೀವು ಅದೇ ರೀತಿಯಲ್ಲಿ ಅವರೊಂದಿಗೆ ಜ್ಞಾನಾನುಸಾರವಾಗಿ ಬಾಳುವೆ ಮಾಡಿರಿ; ದುರ್ಬಲ ಪಾತ್ರೆಗೋ ಎಂಬಂತೆ ಸ್ತ್ರೀಯರಿಗೆ ಗೌರವವನ್ನು ಸಲ್ಲಿಸಿರಿ, ಏಕೆಂದರೆ ಅವರೊಂದಿಗೆ ನೀವು ಸಹ ಜೀವದ ಅಪಾರ ಅನುಗ್ರಹಕ್ಕೆ ಬಾಧ್ಯರಾಗಿದ್ದೀರಿ. ಹೀಗೆ ಮಾಡುವುದಾದರೆ ನಿಮ್ಮ ಪ್ರಾರ್ಥನೆಗಳಿಗೆ ಅಡ್ಡಿಯಾಗುವುದಿಲ್ಲ.  ಕೊನೆಯದಾಗಿ ನೀವೆಲ್ಲರೂ ಏಕಮನಸ್ಸುಳ್ಳವರೂ ಅನುಕಂಪ ತೋರಿಸುವವರೂ ಸಹೋದರ ಮಮತೆಯುಳ್ಳವರೂ ಕೋಮಲವಾದ ಕನಿಕರವುಳ್ಳವರೂ ದೀನಮನಸ್ಸುಳ್ಳವರೂ ಆಗಿರಿ.  ಹಾನಿಗೆ ಪ್ರತಿಯಾಗಿ ಹಾನಿಯನ್ನು ಮಾಡದೆ ದೂಷಿಸುವವರನ್ನು ಪ್ರತಿಯಾಗಿ ದೂಷಿಸದೆ ಆಶೀರ್ವದಿಸುತ್ತಾ ಇರಿ, ಏಕೆಂದರೆ ನೀವು ಆಶೀರ್ವಾದವನ್ನು ಬಾಧ್ಯತೆಯಾಗಿ ಹೊಂದುವಂತಾಗಲು ಈ ಜೀವನಮಾರ್ಗಕ್ಕಾಗಿಯೇ ಕರೆಯಲ್ಪಟ್ಟಿದ್ದೀರಿ. 10  ಏಕೆಂದರೆ, “ಜೀವವನ್ನು ಪ್ರೀತಿಸಿ ಸುದಿನಗಳನ್ನು ನೋಡಲು ಬಯಸುವವನು ಕೆಟ್ಟದ್ದರಿಂದ ತನ್ನ ನಾಲಿಗೆಯನ್ನು ಮತ್ತು ವಂಚನೆಯ ಮಾತುಗಳಿಂದ ತನ್ನ ತುಟಿಗಳನ್ನು ಬಿಗಿಹಿಡಿಯಲಿ. 11  ಅವನು ಕೆಟ್ಟದ್ದರಿಂದ ತಿರುಗಿಕೊಂಡು ಒಳ್ಳೇದನ್ನು ಮಾಡಲಿ; ಅವನು ಶಾಂತಿಯನ್ನು ಹುಡುಕಿ ಅದನ್ನು ಬೆನ್ನಟ್ಟಲಿ. 12  ಏಕೆಂದರೆ ಯೆಹೋವನ ಕಣ್ಣುಗಳು ನೀತಿವಂತರ ಮೇಲಿವೆ ಮತ್ತು ಆತನ ಕಿವಿಗಳು ಅವರ ಯಾಚನೆಯ ಕಡೆಗಿವೆ; ಆದರೆ ಯೆಹೋವನ ಮುಖವು ಕೆಟ್ಟದ್ದನ್ನು ಮಾಡುವವರ ವಿರುದ್ಧವಾಗಿದೆ.” 13  ಒಳ್ಳೇದನ್ನು ಮಾಡುವುದರಲ್ಲಿ ನೀವು ಹುರುಪುಳ್ಳವರಾದರೆ ನಿಮಗೆ ಹಾನಿಮಾಡುವ ಮನುಷ್ಯನು ಯಾವನು? 14  ಒಂದುವೇಳೆ ನೀತಿಯ ನಿಮಿತ್ತ ಕಷ್ಟವನ್ನು ಅನುಭವಿಸಬೇಕಾದರೂ ನೀವು ಸಂತೋಷಿತರು. ಆದರೆ ಅವರು ಭಯಪಡುವ ವಿಷಯಕ್ಕಾಗಿ ನೀವು ಭಯಪಡಬೇಡಿ, ಕಳವಳಪಡಬೇಡಿ. 15  ಕ್ರಿಸ್ತನನ್ನು ಕರ್ತನೆಂದು ನಿಮ್ಮ ಹೃದಯಗಳಲ್ಲಿ ಪವಿತ್ರೀಕರಿಸಿರಿ. ನಿಮ್ಮಲ್ಲಿರುವ ನಿರೀಕ್ಷೆಗೆ ಕಾರಣ​ವನ್ನು ಕೇಳುವ ಪ್ರತಿಯೊಬ್ಬರ ಮುಂದೆ ಉತ್ತರ ಹೇಳುವುದಕ್ಕೆ ಯಾವಾಗಲೂ ಸಿದ್ಧರಾಗಿರಿ; ಆದರೆ ಇದನ್ನು ಸೌಮ್ಯಭಾವದಿಂದಲೂ ಆಳವಾದ ಗೌರವದಿಂದಲೂ ಮಾಡಿರಿ. 16  ಒಳ್ಳೇ ಮನಸ್ಸಾಕ್ಷಿಯುಳ್ಳವರಾಗಿರಿ; ಆಗ ಕ್ರಿಸ್ತನ ಸಂಬಂಧದಲ್ಲಿ ನಿಮ್ಮ ಒಳ್ಳೇ ನಡತೆಯನ್ನು ನಿಂದಿಸಿ ಮಾತಾಡುವವರು ಯಾವ ನಿರ್ದಿಷ್ಟ ವಿಷಯದಲ್ಲಿ ನಿಮ್ಮ ವಿರುದ್ಧವಾಗಿ ಮಾತಾಡುತ್ತಾರೋ ಆ ​ವಿಷಯದಲ್ಲಿಯೇ ನಾಚಿಕೆಪಡುವರು. 17  ಕೆಟ್ಟದ್ದನ್ನು ಮಾಡುತ್ತಿರುವುದಕ್ಕಾಗಿ ಕಷ್ಟವನ್ನು ಅನುಭವಿಸುವುದಕ್ಕಿಂತ ದೇವರ ಚಿತ್ತವಿರುವುದಾದರೆ ಒಳ್ಳೇದನ್ನು ಮಾಡುತ್ತಿರುವುದಕ್ಕಾಗಿ ಕಷ್ಟವನ್ನು ಅನುಭವಿಸುವುದು ಉತ್ತಮ. 18  ನಿಮ್ಮನ್ನು ದೇವರ ಬಳಿಗೆ ನಡೆಸುವುದಕ್ಕಾಗಿ ಕ್ರಿಸ್ತನು ಸಹ ನೀತಿವಂತನಾಗಿದ್ದರೂ ಅನೀತಿವಂತರಿಗಾಗಿ ಎಲ್ಲ ಕಾಲಕ್ಕಾಗಿ ಒಂದೇ ಸಾರಿ ಪಾಪಗಳಿಗೋಸ್ಕರ ಸತ್ತನು. ಅವನು ಶರೀರದಲ್ಲಿ ಕೊಲ್ಲಲ್ಪಟ್ಟನು, ಆದರೆ ಆತ್ಮಜೀವಿಯಾಗಿ ಬದುಕುವಂತೆ ಮಾಡಲ್ಪಟ್ಟನು. 19  ಈ ಸ್ಥಿತಿಯಲ್ಲಿ ಅವನು ಸೆರೆಯಲ್ಲಿದ್ದ ಆತ್ಮ​ಜೀವಿಗಳಿಗೆ, 20  ಅಂದರೆ ನೋಹನ ದಿನಗಳಲ್ಲಿ ನಾವೆಯು ಕಟ್ಟಲ್ಪಡುತ್ತಿದ್ದಾಗ ದೇವರು ತಾಳ್ಮೆಯಿಂದ ಕಾದುಕೊಂಡಿದ್ದ ಸಮಯದಲ್ಲಿ ಅವಿಧೇಯರಾಗಿದ್ದವರಿಗೆ ಹೋಗಿ ಸಾರಿದನು. ಆ ನಾವೆಯಲ್ಲಿ ಕೆಲವೇ ಮಂದಿ, ಅಂದರೆ ಎಂಟು ಮಂದಿ ನೀರಿನ ಮಧ್ಯೆ ಸುರಕ್ಷಿತವಾಗಿ ಪಾರಾದರು. 21  ಇದಕ್ಕೆ ಅನುರೂಪವಾದದ್ದು, ಅಂದರೆ ದೀಕ್ಷಾಸ್ನಾನವು ಸಹ (ಅದು ಶರೀರದ ಕೊಳೆಯನ್ನು ಹೋಗಲಾಡಿಸುವಂಥದ್ದಲ್ಲ, ಆದರೆ ಒಳ್ಳೇ ಮನಸ್ಸಾಕ್ಷಿಗಾಗಿ ದೇವರಿಗೆ ಬೇಡಿಕೊಳ್ಳುವಂಥದ್ದು) ಯೇಸು ಕ್ರಿಸ್ತನ ಪುನರುತ್ಥಾನದ ಮೂಲಕ ಈಗ ನಿಮ್ಮನ್ನು ರಕ್ಷಿಸುತ್ತಿದೆ. 22  ಅವನು ಸ್ವರ್ಗಕ್ಕೆ ಹೋಗಿರುವುದರಿಂದ ದೇವರ ಬಲಗಡೆಯಲ್ಲಿ ಇದ್ದಾನೆ; ದೇವದೂತರೂ ಅಧಿಕಾರಗಳೂ ಶಕ್ತಿಗಳೂ ಅವನಿಗೆ ಅಧೀನ​ಮಾಡಲ್ಪಟ್ಟವು.

ಪಾದಟಿಪ್ಪಣಿ

1ಪೇತ್ರ 3:4  ಅಥವಾ, “ಒಳಗಣ ವ್ಯಕ್ತಿತ್ವವು.”