ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಆನ್‌ಲೈನ್‌ ಬೈಬಲ್ | ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರ

1 ಪೇತ್ರ 2:1-25

2  ಆದಕಾರಣ, ಎಲ್ಲ ಕೆಟ್ಟತನವನ್ನೂ ಎಲ್ಲ ವಂಚನೆಯನ್ನೂ ಕಪಟವನ್ನೂ ಹೊಟ್ಟೆಕಿಚ್ಚನ್ನೂ ಬೆನ್ನಹಿಂದಿನ ಎಲ್ಲ ರೀತಿಯ ನಿಂದನೆಯನ್ನೂ ವಿಸರ್ಜಿಸಿ  ನವಜಾತ ಶಿಶುಗಳಂತೆ ವಾಕ್ಯಕ್ಕೆ ಸಂಬಂಧಿಸಿದ ಕಲಬೆರಕೆಯಿಲ್ಲದ ಹಾಲಿಗಾಗಿ ಹಂಬಲವನ್ನು ಬೆಳೆಸಿಕೊಳ್ಳಿರಿ; ಅದರಿಂದ ನೀವು ಬೆಳೆದು ರಕ್ಷಣೆಯನ್ನು ಹೊಂದುವಂತಾಗುವುದು.  ಆದರೆ ಕರ್ತನು ದಯಾಳುವೆಂದು ನೀವು ಸವಿದುನೋಡಬೇಕು.  ಮನುಷ್ಯರಿಂದ ತಿರಸ್ಕರಿಸಲ್ಪಟ್ಟದ್ದು ನಿಜವಾದರೂ ದೇವರಿಂದ ಆರಿಸಲ್ಪಟ್ಟು ಅಮೂಲ್ಯವಾಗಿ ಎಣಿಸಲ್ಪಟ್ಟಿರುವ ಜೀವವುಳ್ಳ ಕಲ್ಲಿನ ಬಳಿಗೆ ಬರುವಂತೆ ನೀವು ಅವನ ಬಳಿಗೆ ಬರುವಾಗ  ನೀವು ಸಹ ಜೀವವುಳ್ಳ ಕಲ್ಲುಗಳಾಗಿದ್ದು ಆಧ್ಯಾತ್ಮಿಕ ಆಲಯವಾಗಿ ಕಟ್ಟಲ್ಪಡುತ್ತಾ ಇದ್ದೀರಿ ಮತ್ತು ಯೇಸು ಕ್ರಿಸ್ತನ ಮೂಲಕ ದೇವರಿಗೆ ಸ್ವೀಕೃತವಾದ ಆಧ್ಯಾತ್ಮಿಕ ಯಜ್ಞಗಳನ್ನು ಅರ್ಪಿಸುವ ಉದ್ದೇಶಕ್ಕಾಗಿ ಪವಿತ್ರ ಯಾಜಕವರ್ಗವಾಗಿದ್ದೀರಿ.  ಏಕೆಂದರೆ, “ಇಗೋ, ನಾನು ಚೀಯೋನಿನಲ್ಲಿ ಒಂದು ಕಲ್ಲನ್ನು, ಅಸ್ತಿವಾರದ ಮೂಲೆಗಲ್ಲನ್ನು ಇಡುತ್ತೇನೆ; ಅದು ಆರಿಸಿಕೊಳ್ಳಲ್ಪಟ್ಟದ್ದೂ ಅಮೂಲ್ಯವಾದದ್ದೂ ಆಗಿದೆ; ಅದರಲ್ಲಿ ನಂಬಿಕೆಯನ್ನಿಡುವ ಯಾವನೂ ಆಶಾಭಂಗಪಡುವುದೇ ಇಲ್ಲ” ಎಂದು ಶಾಸ್ತ್ರಗ್ರಂಥದಲ್ಲಿ ಬರೆದಿದೆ.  ಆದುದರಿಂದ, ನೀವು ವಿಶ್ವಾಸಿಗಳಾಗಿರುವ ಕಾರಣ ಅವನು ನಿಮಗೆ ಅಮೂಲ್ಯನಾಗಿದ್ದಾನೆ. ಆದರೆ ವಿಶ್ವಾಸವಿಡದವರ ಸಂಬಂಧದಲ್ಲಿ, “ಕಟ್ಟುವವರು ತಿರಸ್ಕರಿಸಿದ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು”  ಮತ್ತು “ಎಡವುವ ಕಲ್ಲೂ ಮುಗ್ಗರಿಸುವ ಬಂಡೆಯೂ ಆಯಿತು” ಎಂದು ಬರೆಯಲ್ಪಟ್ಟಿದೆ. ಅವರು ವಾಕ್ಯಕ್ಕೆ ಅವಿಧೇಯರಾಗಿರುವುದರಿಂದ ಎಡವಿಬೀಳುತ್ತಾರೆ. ಇದಕ್ಕಾಗಿಯೇ ಅವರಿಗೆ ನೇಮಕವೂ ಆಯಿತು.  ನೀವಾದರೋ ನಿಮ್ಮನ್ನು ಕತ್ತಲೆಯೊಳಗಿಂದ ತನ್ನ ಆಶ್ಚರ್ಯಕರವಾದ ಬೆಳಕಿಗೆ ಕರೆದಾತನ “ಗುಣಲಕ್ಷಣಗಳನ್ನು ಎಲ್ಲ ಕಡೆಗಳಲ್ಲೂ ಪ್ರಕಟಿಸುವುದಕ್ಕಾಗಿ ಆರಿಸಿಕೊಳ್ಳಲ್ಪಟ್ಟಿರುವ ಕುಲವೂ ರಾಜವಂಶಸ್ಥರಾದ ಯಾಜಕರೂ ಪವಿತ್ರ ಜನಾಂಗವೂ ವಿಶೇಷ ಒಡೆತನಕ್ಕಾಗಿರುವ ಜನರೂ” ಆಗಿದ್ದೀರಿ. 10  ಮೊದಲು ನೀವು ಜನರಾಗಿರಲಿಲ್ಲ, ಆದರೆ ಈಗ ದೇವರ ಜನರಾಗಿದ್ದೀರಿ; ಮೊದಲು ಕರುಣೆ ತೋರಿಸಲ್ಪಡದ ಜನರಾಗಿದ್ದಿರಿ, ಆದರೆ ಈಗ ಕರುಣೆಹೊಂದಿದವರಾಗಿದ್ದೀರಿ. 11  ಪ್ರಿಯರೇ, ಪರದೇಶೀಯರೂ ತಾತ್ಕಾಲಿಕ ನಿವಾಸಿಗಳೂ ಆಗಿರುವ ನೀವು ನಿಮ್ಮ ಜೀವಕ್ಕೆ ವಿರುದ್ಧವಾಗಿ ಹೋರಾಡುತ್ತಿರುವ ಶಾರೀರಿಕ ಬಯಕೆಗಳಿಂದ ದೂರವಾಗಿರಬೇಕೆಂದು ನಿಮಗೆ ಬುದ್ಧಿಹೇಳುತ್ತೇನೆ. 12  ಅನ್ಯಜನಾಂಗಗಳ ಮಧ್ಯೆ ನಿಮ್ಮ ನಡತೆಯನ್ನು ಉತ್ತಮವಾಗಿ ಕಾಪಾಡಿಕೊಳ್ಳಿರಿ; ಆಗ ಯಾವ ವಿಷಯದಲ್ಲಿ ಅವರು ನಿಮ್ಮನ್ನು ಕೆಡುಕರೆಂದು ನಿಂದಿಸುತ್ತಾರೊ ಆ ವಿಷಯದಲ್ಲಿಯೇ ನಿಮ್ಮ ಸತ್ಕ್ರಿಯೆಗಳನ್ನು ಕಣ್ಣಾರೆ ಕಾಣುವ ಪರಿಣಾಮವಾಗಿ ದೇವರ ವಿಚಾರಣೆಯ ದಿನದಲ್ಲಿ ಆತನನ್ನು ಮಹಿಮೆಪಡಿಸುವರು. 13  ಕರ್ತನ ನಿಮಿತ್ತವಾಗಿ ಪ್ರತಿಯೊಂದು ಮಾನವ ಸೃಷ್ಟಿಗೆ ನಿಮ್ಮನ್ನು ಅಧೀನಪಡಿಸಿಕೊಳ್ಳಿರಿ: ಅರಸನನ್ನು ಮೇಲಧಿಕಾರಿಯೆಂದು 14  ಅಥವಾ ಅಧಿಪತಿಗಳು ಕೆಡುಕರಿಗೆ ದಂಡನೆ ವಿಧಿಸುವುದಕ್ಕೂ ಒಳ್ಳೇದನ್ನು ಮಾಡುವವರನ್ನು ಹೊಗಳುವುದಕ್ಕೂ ಅರಸನಿಂದ ಕಳುಹಿಸಲ್ಪಟ್ಟವರೆಂದು ತಿಳಿದು ಅವರಿಗೆ ಅಧೀನರಾಗಿರಿ. 15  ನೀವು ಒಳ್ಳೇದನ್ನು ಮಾಡುವ ಮೂಲಕ ವಿಚಾರಹೀನರಾದ ಜನರು ಅಜ್ಞಾನದಿಂದ ಆಡುವ ಮಾತನ್ನು ನಿರ್ಬಂಧಿಸಬಹುದೆಂಬುದೇ ದೇವರ ಚಿತ್ತವಾಗಿದೆ. 16  ಸ್ವತಂತ್ರ ಜನರಂತಿರಿ, ಆದರೆ ಕೆಟ್ಟತನವನ್ನು ಮರೆಮಾಚುವುದಕ್ಕೆ ನಿಮ್ಮ ಸ್ವಾತಂತ್ರ್ಯವನ್ನು ಹಿಡಿದುಕೊಂಡಿರದೆ ದೇವರ ದಾಸರಂತಿರಿ. 17  ಎಲ್ಲ ರೀತಿಯ ಜನರನ್ನು ಗೌರವಿಸಿರಿ, ಸಹೋದರರ ಇಡೀ ಬಳಗವನ್ನು ಪ್ರೀತಿಸಿರಿ, ದೇವರಿಗೆ ಭಯಪಡಿರಿ, ಅರಸನನ್ನು ಸನ್ಮಾನಿಸಿರಿ. 18  ಮನೆಯಾಳುಗಳು ತಮ್ಮ ಯಜಮಾನರಿಗೆ ತಕ್ಕದಾದ ಎಲ್ಲ ಭಯದಿಂದ ಅಧೀನರಾಗಿರಲಿ; ಒಳ್ಳೆಯವರೂ ನ್ಯಾಯಸಮ್ಮತರೂ ಆಗಿರುವವರಿಗೆ ಮಾತ್ರವಲ್ಲ ಮೆಚ್ಚಿಸಲು ಕಷ್ಟಕರವಾಗಿರುವವರಿಗೂ ಅಧೀನರಾಗಿರಲಿ. 19  ಒಬ್ಬನು ದೇವರ ಕಡೆಗಿನ ಮನಸ್ಸಾಕ್ಷಿಯ ನಿಮಿತ್ತ ದುಃಖಕರವಾದ ವಿಷಯಗಳನ್ನು ಸಹಿಸಿಕೊಳ್ಳುವುದಾದರೆ ಮತ್ತು ಅನ್ಯಾಯವಾಗಿ ಬಾಧೆಪಡುವುದಾದರೆ ಅದು ಸ್ವೀಕಾರಾರ್ಹವಾಗಿದೆ. 20  ನೀವು ಪಾಪಮಾಡುತ್ತಿದ್ದು ಏಟುತಿನ್ನುತ್ತಿರುವಾಗ ಸಹಿಸಿಕೊಂಡರೆ ಅದರಿಂದ ಕೀರ್ತಿ ಏನು? ಆದರೆ ನೀವು ಒಳ್ಳೇದನ್ನು ಮಾಡುತ್ತಿದ್ದು ಕಷ್ಟವನ್ನು ಅನುಭವಿಸುವುದರಲ್ಲಿ ಸಹನೆಯಿಂದಿದ್ದರೆ ಅದು ದೇವರ ದೃಷ್ಟಿಯಲ್ಲಿ ಸ್ವೀಕಾರಾರ್ಹವಾಗಿದೆ. 21  ವಾಸ್ತವದಲ್ಲಿ, ಇದಕ್ಕಾಗಿಯೇ ನೀವು ಕರೆಯಲ್ಪಟ್ಟಿದ್ದೀರಿ, ಏಕೆಂದರೆ ಕ್ರಿಸ್ತನು ಸಹ ನಿಮಗೋಸ್ಕರ ಕಷ್ಟವನ್ನು ಅನುಭವಿಸಿ ನೀವು ತನ್ನ ಹೆಜ್ಜೆಜಾಡನ್ನು ನಿಕಟವಾಗಿ ಅನುಸರಿಸುವಂತೆ ನಿಮಗೋಸ್ಕರ ಮಾದರಿಯನ್ನು ತೋರಿಸಿ ಹೋದನು. 22  ಅವನು ಯಾವ ಪಾಪವನ್ನೂ ಮಾಡಲಿಲ್ಲ, ಅವನ ಬಾಯಲ್ಲಿ ಯಾವ ವಂಚನೆಯೂ ಸಿಕ್ಕಲಿಲ್ಲ. 23  ಅವನನ್ನು ದೂಷಿಸುತ್ತಿದ್ದಾಗ ಅವನು ಪ್ರತಿಯಾಗಿ ದೂಷಿಸುತ್ತಿರಲಿಲ್ಲ. ಅವನು ಕಷ್ಟವನ್ನು ಅನುಭವಿಸುತ್ತಿದ್ದಾಗ ಯಾರನ್ನೂ ಬೆದರಿಸದೆ, ನೀತಿಯಿಂದ ತೀರ್ಪುಮಾಡುವಾತನಿಗೆ ತನ್ನನ್ನು ಒಪ್ಪಿಸಿಕೊಡುತ್ತಾ ಇದ್ದನು. 24  ನಾವು ಪಾಪಗಳನ್ನು ಸಂಪೂರ್ಣವಾಗಿ ತೊರೆದು ನೀತಿವಂತರಾಗಿ ಜೀವಿಸುವಂತೆ ಅವನು ನಮ್ಮ ಪಾಪಗಳನ್ನು ತನ್ನ ದೇಹದಲ್ಲಿ ಕಂಬದ ಮೇಲೆ ಹೊತ್ತುಕೊಂಡನು. “ಅವನ ಬಾಸುಂಡೆಗಳಿಂದ ನೀವು ವಾಸಿಮಾಡಲ್ಪಟ್ಟಿರಿ.” 25  ನೀವು ದಾರಿತಪ್ಪಿದ ಕುರಿಗಳಂತಿದ್ದಿರಿ, ಆದರೆ ಈಗ ನೀವು ನಿಮ್ಮ ಪ್ರಾಣಗಳನ್ನು ಕಾಯುವ ಕುರುಬನೂ ಮೇಲ್ವಿಚಾರಕನೂ ಆಗಿರುವಾತನ ಬಳಿಗೆ ಹಿಂದಿರುಗಿದ್ದೀರಿ.

ಪಾದಟಿಪ್ಪಣಿ