ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

1 ಪೇತ್ರ 1:1-25

1  ಯೇಸು ಕ್ರಿಸ್ತನ ಅಪೊಸ್ತಲನಾಗಿರುವ ಪೇತ್ರನು ಪೊಂತ, ಗಲಾತ್ಯ, ಕಪ್ಪದೋಕ್ಯ, ಏಷ್ಯಾ, ಬಿಥೂನ್ಯ ಎಂಬ ಸ್ಥಳಗಳಲ್ಲಿ ಚದರಿರುವ ತಾತ್ಕಾಲಿಕ ನಿವಾಸಿಗಳಿಗೆ,  ಅಂದರೆ ಪವಿತ್ರಾತ್ಮದ * ಮೂಲಕ ಪವಿತ್ರೀಕರಿಸಲ್ಪಟ್ಟವರಾಗಿ ವಿಧೇಯರೂ ಯೇಸು ಕ್ರಿಸ್ತನ ರಕ್ತದಿಂದ ಪ್ರೋಕ್ಷಿತರೂ ಆಗುವ ಉದ್ದೇಶಕ್ಕಾಗಿ ತಂದೆಯಾದ ದೇವರ ಮುನ್ನರಿವಿಗನುಸಾರ ಆರಿಸಿಕೊಳ್ಳಲ್ಪಟ್ಟವರಿಗೆ ಬರೆಯುವುದೇನೆಂದರೆ, ನಿಮಗೆ ಅಪಾತ್ರ ದಯೆಯೂ * ಶಾಂತಿಯೂ ಹೆಚ್ಚಾಗುತ್ತಿರಲಿ.  ನಮ್ಮ ಕರ್ತನಾದ ಯೇಸು ಕ್ರಿಸ್ತನ ದೇವರೂ ತಂದೆಯೂ ಆಗಿರುವಾತನಿಗೆ ಸ್ತೋತ್ರ; ಆತನು ಯೇಸು ಕ್ರಿಸ್ತನನ್ನು ಸತ್ತವರೊಳಗಿಂದ ಪುನರುತ್ಥಾನಗೊಳಿಸುವ ಮೂಲಕ ತನ್ನ ಮಹಾ ಕರುಣೆ​ಯಿಂದ ನಮಗೆ ಜೀವಕರವಾದ ನಿರೀಕ್ಷೆಗಾಗಿ ಒಂದು ಹೊಸ ಜನನವನ್ನು ಕೊಟ್ಟನು.  ಆ ಹೊಸ ಜನನವು ನಿರ್ಲಯವಾದ, ಕಳಂಕರಹಿತವಾದ ಮತ್ತು ಬಾಡಿಹೋಗದ ಬಾಧ್ಯತೆಯೇ ಆಗಿದೆ. ಆ ಬಾಧ್ಯತೆಯು ಸ್ವರ್ಗದಲ್ಲಿ ನಿಮಗೋಸ್ಕರ ಕಾದಿರಿಸಲ್ಪಟ್ಟಿದೆ.  ಕೊನೆಯ ಕಾಲಾವಧಿಯಲ್ಲಿ ಪ್ರಕಟಿಸಲ್ಪಡಲು ಸಿದ್ಧವಾಗಿರುವ ರಕ್ಷಣೆಗಾಗಿ ದೇವರು ನಿಮ್ಮನ್ನು ನಂಬಿಕೆಯ ಮೂಲಕ ತನ್ನ ಶಕ್ತಿಯಿಂದ ಕಾಪಾಡುತ್ತಿದ್ದಾನೆ.  ನೀವು ಸದ್ಯಕ್ಕೆ ಸ್ವಲ್ಪಕಾಲ ಅವಶ್ಯವಿರುವಲ್ಲಿ ನಾನಾ ವಿಧವಾದ ಪರೀಕ್ಷೆಗಳಿಂದ ದುಃಖಿಸುವವರಾಗಿದ್ದರೂ ಈ ಸಂಗತಿಯಲ್ಲಿ ಬಹಳವಾಗಿ ಹರ್ಷಿಸುವವರಾಗಿದ್ದೀರಿ.  ಬೆಂಕಿಯಿಂದ ಶೋಧಿಸಲ್ಪಟ್ಟಿದ್ದರೂ ನಾಶವಾಗುವಂಥ ಚಿನ್ನಕ್ಕಿಂತಲೂ ಹೆಚ್ಚು ಮೌಲ್ಯವುಳ್ಳ ನಿಮ್ಮ ನಂಬಿಕೆಯ ಪರೀಕ್ಷಿತ ಗುಣಮಟ್ಟವು ಯೇಸು ಕ್ರಿಸ್ತನ ಪ್ರಕಟನೆಯ ಸಮಯದಲ್ಲಿ ನಿಮಗೆ ಸ್ತುತಿ, ಮಹಿಮೆ ಮತ್ತು ಮಾನಗಳನ್ನು ಉಂಟುಮಾಡುವುದು.  ನೀವು ಎಂದೂ ಅವನನ್ನು ನೋಡಲಿಲ್ಲವಾದರೂ ಅವನನ್ನು ಪ್ರೀತಿಸುತ್ತೀರಿ; ಈಗ ನೀವು ಅವನನ್ನು ಕಾಣದಿರುವುದಾದರೂ ಅವನಲ್ಲಿ ನಂಬಿಕೆಯನ್ನು ಇಟ್ಟಿದ್ದೀರಿ ಮತ್ತು ಅವರ್ಣನೀಯವಾದ ಮಹಿಮಾಭರಿತ ಆನಂದದಲ್ಲಿ ಬಹಳವಾಗಿ ಹರ್ಷಿಸುತ್ತಿದ್ದೀರಿ.  ಏಕೆಂದರೆ ನಿಮ್ಮ ನಂಬಿಕೆಯ ಅಂತ್ಯಫಲವಾಗಿ ನೀವು ಪ್ರಾಣರಕ್ಷಣೆಯನ್ನು ಹೊಂದಲಿದ್ದೀರಿ. 10  ನಿಮಗೆ ದೊರಕಲಿದ್ದ ಅಪಾತ್ರ ದಯೆಯ ಕುರಿತು ಪ್ರವಾದಿಸಿದ ಪ್ರವಾದಿಗಳು ಈ ರಕ್ಷಣೆಯ ಕುರಿತಾಗಿಯೇ ಶ್ರದ್ಧಾಪೂರ್ವಕವಾಗಿ ವಿಚಾರಿಸಿ ಜಾಗರೂಕತೆಯಿಂದ ಪರಿಶೋಧನೆಮಾಡಿದರು. 11  ತಮ್ಮಲ್ಲಿದ್ದ ಪವಿತ್ರಾತ್ಮವು ಕ್ರಿಸ್ತನು ಅನುಭವಿಸಬೇಕಾಗಿದ್ದ ಕಷ್ಟಗಳ ಕುರಿತು ಮತ್ತು ತದನಂತರ ಸಿಗಲಿರುವ ಮಹಿಮೆಯ ಕುರಿತು ಮುಂದಾಗಿಯೇ ಸಾಕ್ಷಿನೀಡಿದಾಗ ಯಾವ ನಿರ್ದಿಷ್ಟ ಕಾಲವನ್ನು ಅಥವಾ ಎಂಥ ಕಾಲವನ್ನು ಅದು ಸೂಚಿಸುತ್ತಿತ್ತು ಎಂಬುದನ್ನು ಅವರು ಪರಿಶೋಧಿಸುತ್ತಾ ಇದ್ದರು. 12  ಇದಲ್ಲದೆ, ಸ್ವರ್ಗದಿಂದ ಕಳುಹಿಸಲ್ಪಟ್ಟ ಪವಿತ್ರಾತ್ಮದಿಂದ ನಿಮಗೆ ಸುವಾರ್ತೆಯನ್ನು ಸಾರಿದವರ ಮೂಲಕ ಈಗ ನಿಮಗೆ ಪ್ರಕಟಿಸಲ್ಪಟ್ಟಿರುವ ವಿಷಯಗಳನ್ನು ಮುಂತಿಳಿಸುವುದರಲ್ಲಿ ಅವರು ತಮಗೋಸ್ಕರವಲ್ಲ, ನಿಮಗೋಸ್ಕರವೇ ಸೇವೆಮಾಡುತ್ತಿದ್ದರು ಎಂಬುದು ಅವರಿಗೆ ಪ್ರಕಟವಾಯಿತು. ದೇವದೂತರು ಸಹ ಇವೇ ಸಂಗತಿಗಳನ್ನು ಕುತೂಹಲಪೂರ್ವಕವಾಗಿ ನೋಡಲು ಬಯಸುತ್ತಿದ್ದಾರೆ. 13  ಆದುದರಿಂದ ನೀವು ಚಟುವಟಿಕೆಗಾಗಿ ನಿಮ್ಮ ಮನಸ್ಸನ್ನು ದೃಢವಾಗಿಸಿಕೊಳ್ಳಿ, ಪೂರ್ಣವಾಗಿ ಸ್ವಸ್ಥಚಿತ್ತರಾಗಿರಿ; ಯೇಸು ಕ್ರಿಸ್ತನ ಪ್ರಕಟನೆಯ ಸಮಯದಲ್ಲಿ ನಿಮಗೆ ಸಿಗಲಿರುವ ಅಪಾತ್ರ ದಯೆಯ ಮೇಲೆ ನಿಮ್ಮ ನಿರೀಕ್ಷೆಯನ್ನು ಪೂರ್ಣವಾಗಿ ಇಡಿರಿ. 14  ನೀವು ಮುಂಚೆ ಅಜ್ಞಾನಿಗಳಾಗಿದ್ದಾಗ ನಿಮಗಿದ್ದ ಇಚ್ಛೆಗಳಿಗನುಸಾರ ನಡೆಯುತ್ತಿದ್ದಂತೆ ಈಗ ನಡೆಯುವುದನ್ನು ಬಿಟ್ಟುಬಿಡಿರಿ. 15  ನಿಮ್ಮನ್ನು ಕರೆದಾತನು ಪವಿತ್ರನಾಗಿರುವ ಪ್ರಕಾರ ವಿಧೇಯ ಮಕ್ಕಳಂತೆ ನಿಮ್ಮ ಎಲ್ಲ ನಡವಳಿಕೆಯಲ್ಲಿ ನೀವು ಸಹ ಪವಿತ್ರರಾಗಿರಿ. 16  ಏಕೆಂದರೆ, “ನಾನು ಪವಿತ್ರನಾಗಿರುವುದರಿಂದ ನೀವೂ ಪವಿತ್ರರಾಗಿರಬೇಕು” ಎಂದು ಬರೆಯಲ್ಪಟ್ಟಿದೆ. 17  ಇದಲ್ಲದೆ ಪ್ರತಿಯೊಬ್ಬನ ಕೆಲಸಕ್ಕನುಸಾರ ನಿಷ್ಪಕ್ಷಪಾತದಿಂದ ತೀರ್ಪುಮಾಡುವ ತಂದೆಯನ್ನು ನೀವು ಕರೆಯುವವರಾಗಿರುವಲ್ಲಿ ನೀವು ಪರದೇಶೀಯ ನಿವಾಸಿಗಳಾಗಿರುವ ಕಾಲದಲ್ಲೆಲ್ಲಾ ಭಯಭಕ್ತಿಯಿಂದ ನಡೆದುಕೊಳ್ಳಿರಿ. 18  ಏಕೆಂದರೆ ನಿಮ್ಮ ಪೂರ್ವಜರಿಂದ ಸಂಪ್ರದಾಯವಾಗಿ ಹೊಂದಿದ ವ್ಯರ್ಥವಾದ ನಡವಳಿಕೆಯಿಂದ ನೀವು ಬಿಡುಗಡೆಮಾಡಲ್ಪಟ್ಟದ್ದು ನಾಶವಾಗುವಂಥ ವಸ್ತುಗಳಿಂದ ಅಂದರೆ ಬೆಳ್ಳಿ ಅಥವಾ ​ಚಿನ್ನದಿಂದಲ್ಲ, 19  ದೋಷರಹಿತವೂ ನಿಷ್ಕಳಂಕವೂ ಆಗಿರುವ ಕುರಿಮರಿಯಾದ ಕ್ರಿಸ್ತನ ಅಮೂಲ್ಯವಾದ ರಕ್ತದಿಂದಲೇ ಎಂದು ನಿಮಗೆ ಗೊತ್ತಿದೆ. 20  ಲೋಕಾದಿಗಿಂತ ಮುಂಚೆಯೇ ಅವನು ಗೊತ್ತುಮಾಡಲ್ಪಟ್ಟಿದ್ದನು, ನಿಜ; ಆದರೆ ಅಂತ್ಯಕಾಲಾವಧಿಯಲ್ಲಿ ಅವನು ನಿಮಗಾಗಿ ಪ್ರತ್ಯಕ್ಷ​ಗೊಳಿಸಲ್ಪಟ್ಟನು. 21  ಅವನನ್ನು ಸತ್ತವರೊಳಗಿಂದ ಎಬ್ಬಿಸಿ ಅವನಿಗೆ ಮಹಿಮೆಯನ್ನು ಕೊಟ್ಟಿರುವ ದೇವರಲ್ಲಿ ನೀವು ಅವನ ಮೂಲಕ ವಿಶ್ವಾಸಿಗಳಾದಿರಿ; ಹೀಗೆ ನಿಮ್ಮ ನಂಬಿಕೆಯೂ ನಿರೀಕ್ಷೆಯೂ ದೇವರಲ್ಲಿ ಇರುವಂತಾಯಿತು. 22  ನೀವು ಸತ್ಯಕ್ಕೆ ವಿಧೇಯರಾಗಿರುವ ಮೂಲಕ ನಿಮ್ಮ ಪ್ರಾಣಗಳನ್ನು ಶುದ್ಧೀಕರಿಸಿಕೊಂಡು ನಿಷ್ಕಪಟವಾದ ಸಹೋದರ ಮಮತೆಯನ್ನು ಹೊಂದಿರುವುದರಿಂದ ಹೃದಯದಾಳದಿಂದ ಒಬ್ಬರನ್ನೊಬ್ಬರು ಪ್ರೀತಿಸಿರಿ. 23  ನಿಮಗೆ ಹೊಸ ಜನನವು ಕೊಡಲ್ಪಟ್ಟಿದೆ; ಅದು ನಾಶವಾಗಲಿರುವ ಬೀಜದಿಂದಲ್ಲ, ನಾಶವಾಗದ ಪುನರುತ್ಪಾದಕ ಬೀಜದಿಂದ ಜೀವಸ್ವರೂಪನಾದ ಮತ್ತು ಸದಾಕಾಲ ಇರುವಾತನಾದ ದೇವರ ವಾಕ್ಯದ ಮೂಲಕ ಕೊಡಲ್ಪಟ್ಟಿದೆ. 24  ಏಕೆಂದರೆ, “ಎಲ್ಲ ಜನರು ಹುಲ್ಲಿನಂತಿ​ದ್ದಾರೆ, ಅವರ ಪ್ರಭಾವವೆಲ್ಲ ಹುಲ್ಲಿನ ಹೂವಿನಂತಿದೆ; ಹುಲ್ಲು ಬಾಡಿಹೋಗುತ್ತದೆ ಮತ್ತು ಹೂವು ಉದುರಿಹೋಗುತ್ತದೆ. 25  ಯೆಹೋವನ ಮಾತಾದರೋ ಸದಾಕಾಲ ಉಳಿಯುತ್ತದೆ.” ಆ ‘ಮಾತು’ ನಿಮಗೆ ಪ್ರಕಟಿಸಲ್ಪಟ್ಟಿರುವ ಸುವಾರ್ತೆಯಾಗಿದೆ.

ಪಾದಟಿಪ್ಪಣಿ

1ಪೇತ್ರ 1:2  ಅಥವಾ, “ದೇವರ ಕಾರ್ಯಕಾರಿ ಶಕ್ತಿ.” ಪರಿಶಿಷ್ಟ 7 ನ್ನು ನೋಡಿ.
1ಪೇತ್ರ 1:2  ಅಥವಾ, “ಅಪಾರ ದಯೆಯೂ.”