ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಆನ್‌ಲೈನ್‌ ಬೈಬಲ್ | ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರ

1 ಥೆಸಲೊನೀಕ 5:1-28

5  ಸಹೋದರರೇ, ಕಾಲಗಳ ಮತ್ತು ಋತುಗಳ ವಿಷಯದಲ್ಲಿ ನಿಮಗೆ ಏನನ್ನೂ ಬರೆಯುವ ಅಗತ್ಯವಿಲ್ಲ.  ರಾತ್ರಿಯಲ್ಲಿ ಕಳ್ಳನು ಹೇಗೆ ಬರುತ್ತಾನೋ ಹಾಗೆಯೇ ಯೆಹೋವನ ದಿನವು ಬರುತ್ತದೆ ಎಂಬುದು ನಿಮಗೆ ಚೆನ್ನಾಗಿ ತಿಳಿದಿದೆ.  ಅವರು “ಶಾಂತಿ ಮತ್ತು ಭದ್ರತೆ” ಎಂದು ಹೇಳುತ್ತಿರುವಾಗಲೇ ಅವರ ಮೇಲೆ ನಾಶನವು ಗರ್ಭಿಣಿಗೆ ಪ್ರಸವವೇದನೆ ಬರುವ ಪ್ರಕಾರವೇ ಫಕ್ಕನೆ ಬರುವುದು ಮತ್ತು ಅವರು ಹೇಗೂ ತಪ್ಪಿಸಿಕೊಳ್ಳಲಾರರು.  ಆದರೆ ಸಹೋದರರೇ, ಆ ದಿನವು ಕಳ್ಳರ ಮೇಲೆ ಬರುವಂತೆ ನಿಮ್ಮ ಮೇಲೆ ಫಕ್ಕನೆ ಬರಬಾರದು, ಏಕೆಂದರೆ ನೀವು ಕತ್ತಲೆಯಲ್ಲಿಲ್ಲ.  ನೀವೆಲ್ಲರೂ ಬೆಳಕಿನ ಪುತ್ರರೂ ಹಗಲಿನ ಪುತ್ರರೂ ಆಗಿದ್ದೀರಿ. ನಾವು ರಾತ್ರಿಗಾಗಲಿ ಕತ್ತಲೆಗಾಗಲಿ ಸೇರಿದವರಲ್ಲ.  ಆದುದರಿಂದ ಉಳಿದವರಂತೆ ನಾವು ನಿದ್ರೆಮಾಡದೆ ಎಚ್ಚರವಾಗಿಯೂ ಸ್ವಸ್ಥಚಿತ್ತರಾಗಿಯೂ ಇರೋಣ.  ನಿದ್ರೆಮಾಡುವವರು ರಾತ್ರಿಯಲ್ಲಿ ನಿದ್ರೆಮಾಡಲು ರೂಢಿಮಾಡಿಕೊಂಡಿರುತ್ತಾರೆ ಮತ್ತು ಕುಡಿದು ಮತ್ತರಾಗುವವರು ಸಾಮಾನ್ಯವಾಗಿ ರಾತ್ರಿಯಲ್ಲಿ ಕುಡಿದು ಮತ್ತರಾಗುತ್ತಾರೆ.  ಆದರೆ ಹಗಲಿಗೆ ಸೇರಿದವರಾದ ನಾವು ಸ್ವಸ್ಥಚಿತ್ತರಾಗಿದ್ದು ನಂಬಿಕೆ ಮತ್ತು ಪ್ರೀತಿಯ ಎದೆಕವಚವನ್ನು ಧರಿಸಿಕೊಂಡಿರೋಣ ಹಾಗೂ ರಕ್ಷಣೆಯ ನಿರೀಕ್ಷೆಯನ್ನು ಶಿರಸ್ತ್ರಾಣವಾಗಿ ಹಾಕಿಕೊಂಡಿರೋಣ.  ಏಕೆಂದರೆ ದೇವರು ನಮ್ಮನ್ನು ಕ್ರೋಧಕ್ಕೆ ನೇಮಿಸದೆ ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ರಕ್ಷಣೆಯನ್ನು ಹೊಂದುವುದಕ್ಕಾಗಿಯೇ ನೇಮಿಸಿದನು. 10  ನಾವು ಎಚ್ಚರವಾಗಿದ್ದರೂ ನಿದ್ರೆಮಾಡುತ್ತಿದ್ದರೂ ನಾವು ಅವನೊಂದಿಗೆ ಜೀವಿಸಬೇಕೆಂದು ಅವನು ನಮಗೋಸ್ಕರ ಸತ್ತನು. 11  ಆದುದರಿಂದ ನೀವು ಈಗಾಗಲೇ ಮಾಡುತ್ತಿರುವಂತೆ ಒಬ್ಬರನ್ನೊಬ್ಬರು ಸಾಂತ್ವನಗೊಳಿಸುತ್ತಾ ಪರಸ್ಪರ ಭಕ್ತಿವೃದ್ಧಿಮಾಡುತ್ತಾ ಇರಿ. 12  ಸಹೋದರರೇ, ನಾವು ನಿಮ್ಮನ್ನು ಕೇಳಿಕೊಳ್ಳುವುದೇನೆಂದರೆ, ನಿಮ್ಮ ಮಧ್ಯೆ ಪ್ರಯಾಸಪಟ್ಟು ಕೆಲಸಮಾಡುತ್ತಾ ಕರ್ತನಲ್ಲಿ ನಿಮ್ಮ ಮೇಲ್ವಿಚಾರಣೆ ಮಾಡುತ್ತಾ ನಿಮಗೆ ಬುದ್ಧಿಹೇಳುವವರನ್ನು ಮಾನ್ಯಮಾಡಿರಿ 13  ಮತ್ತು ಅವರ ಕೆಲಸದ ನಿಮಿತ್ತ ಅವರಿಗೆ ಪ್ರೀತಿಯಿಂದ ಅತ್ಯಧಿಕವಾಗಿರುವುದಕ್ಕಿಂತ ಹೆಚ್ಚಿನ ಪರಿಗಣನೆಯನ್ನು ತೋರಿಸಿರಿ. ಒಬ್ಬರೊಂದಿಗೊಬ್ಬರು ಶಾಂತಿಶೀಲರಾಗಿರಿ. 14  ಇದಲ್ಲದೆ ಸಹೋದರರೇ, ಕ್ರಮತಪ್ಪಿದವರಿಗೆ ಬುದ್ಧಿಹೇಳಿರಿ, ಮನಗುಂದಿದವರಿಗೆ ಸಾಂತ್ವನಗೊಳಿಸುವಂಥ ರೀತಿಯಲ್ಲಿ ಮಾತಾಡಿರಿ, ಬಲಹೀನರಿಗೆ ಆಧಾರವಾಗಿರಿ, ಎಲ್ಲರ ಕಡೆಗೆ ದೀರ್ಘ ಸಹನೆಯನ್ನು ತೋರಿಸಿರಿ ಎಂದು ನಿಮ್ಮನ್ನು ಪ್ರಬೋಧಿಸುತ್ತೇವೆ. 15  ಯಾರೂ ಬೇರೆ ಯಾರಿಗೂ ಹಾನಿಗೆ ಪ್ರತಿಯಾಗಿ ಹಾನಿಯನ್ನು ಮಾಡದಂತೆ ನೋಡಿಕೊಳ್ಳಿರಿ; ಯಾವಾಗಲೂ ಒಬ್ಬರು ಇನ್ನೊಬ್ಬರಿಗೆ ಮಾತ್ರವಲ್ಲದೆ ಇತರ ಎಲ್ಲರಿಗೆ ಒಳ್ಳೇದನ್ನೇ ಮಾಡುವವರಾಗಿರಿ. 16  ಯಾವಾಗಲೂ ಹರ್ಷಿಸುತ್ತಾ ಇರಿ. 17  ಎಡೆಬಿಡದೆ ಪ್ರಾರ್ಥನೆಮಾಡಿರಿ. 18  ಎಲ್ಲ ವಿಷಯಗಳಲ್ಲಿ ಕೃತಜ್ಞತೆಯನ್ನು ಸಲ್ಲಿಸಿರಿ. ನಿಮ್ಮ ವಿಷಯದಲ್ಲಿ ಕ್ರಿಸ್ತ ಯೇಸುವಿನೊಂದಿಗೆ ಐಕ್ಯದಲ್ಲಿ ದೇವರ ಚಿತ್ತವು ಇದೇ ಆಗಿದೆ. 19  ಪವಿತ್ರಾತ್ಮದ ಬೆಂಕಿಯನ್ನು ನಂದಿಸಬೇಡಿರಿ. 20  ಪ್ರವಾದಿಸುವಿಕೆಗಳನ್ನು ಅಲಕ್ಷ್ಯಭಾವದಿಂದ ಕಾಣಬೇಡಿರಿ. 21  ಎಲ್ಲ ವಿಷಯಗಳನ್ನು ಪರಿಶೋಧಿಸಿ ಖಚಿತಪಡಿಸಿಕೊಂಡು ಒಳ್ಳೇದನ್ನು ಭದ್ರವಾಗಿ ಹಿಡಿದುಕೊಳ್ಳಿರಿ. 22  ಎಲ್ಲ ರೀತಿಯ ಕೆಟ್ಟತನದಿಂದ ದೂರವಿರಿ. 23  ಶಾಂತಿಯ ದೇವರು ತಾನೇ ನಿಮ್ಮನ್ನು ಸಂಪೂರ್ಣವಾಗಿ ಪವಿತ್ರೀಕರಿಸಲಿ. ಸಹೋದರರೇ, ನಿಮ್ಮ ಮನೋಪ್ರವೃತ್ತಿಯೂ ಪ್ರಾಣವೂ ದೇಹವೂ ಎಲ್ಲ ವಿಧಗಳಲ್ಲಿ ಸ್ವಸ್ಥವಾಗಿದ್ದು ನಮ್ಮ ಕರ್ತನಾದ ಯೇಸು ಕ್ರಿಸ್ತನ ಸಾನ್ನಿಧ್ಯದ ಸಮಯದಲ್ಲಿ ದೋಷರಹಿತವಾದ ರೀತಿಯಲ್ಲಿ ಕಾಪಾಡಲ್ಪಡಲಿ. 24  ನಿಮ್ಮನ್ನು ಕರೆಯುವಾತನು ನಂಬಿಗಸ್ತನು ಮತ್ತು ಅವನು ಇದನ್ನು ಮಾಡುವನು ಸಹ. 25  ಸಹೋದರರೇ, ನಮಗೋಸ್ಕರ ಪ್ರಾರ್ಥನೆಮಾಡುವುದನ್ನು ಮುಂದುವರಿಸಿರಿ. 26  ಪವಿತ್ರವಾದ ಮುದ್ದಿನಿಂದ ಸಹೋದರರೆಲ್ಲರನ್ನು ವಂದಿಸಿರಿ. 27  ಈ ಪತ್ರವನ್ನು ಸಹೋದರರೆಲ್ಲರಿಗೂ ಓದಿ ಹೇಳಬೇಕೆಂದು ನಾನು ನಿಮಗೆ ಕರ್ತನ ಹೆಸರಿನಲ್ಲಿ ಆಜ್ಞಾಪಿಸುತ್ತೇನೆ. 28  ನಮ್ಮ ಕರ್ತನಾದ ಯೇಸು ಕ್ರಿಸ್ತನ ಅಪಾತ್ರ ದಯೆಯು ನಿಮ್ಮೊಂದಿಗಿರಲಿ.

ಪಾದಟಿಪ್ಪಣಿ