ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಆನ್‌ಲೈನ್‌ ಬೈಬಲ್ | ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರ

1 ಕೊರಿಂಥ 7:1-40

7  ನೀವು ಬರೆದ ವಿಷಯಗಳ ಕುರಿತು ನಾನು ಹೇಳುವುದೇನೆಂದರೆ, ಸ್ತ್ರೀಸಂಪರ್ಕವಿಲ್ಲದೆ ಇರುವುದು ಪುರುಷನಿಗೆ ಒಳ್ಳೇದು.  ಹಾಗಿದ್ದರೂ ಜಾರತ್ವವು ಪ್ರಬಲವಾಗಿರುವುದರಿಂದ ಪ್ರತಿಯೊಬ್ಬ ಪುರುಷನಿಗೆ ತನ್ನ ಸ್ವಂತ ಹೆಂಡತಿಯು ಇರಲಿ ಮತ್ತು ಪ್ರತಿಯೊಬ್ಬ ಸ್ತ್ರೀಗೆ ತನ್ನ ಸ್ವಂತ ಗಂಡನು ಇರಲಿ.  ಗಂಡನು ತನ್ನ ಹೆಂಡತಿಗೆ ಸಲ್ಲತಕ್ಕದ್ದನ್ನು ಸಲ್ಲಿಸಲಿ; ಅದೇ ರೀತಿಯಲ್ಲಿ ಹೆಂಡತಿಯು ಸಹ ತನ್ನ ಗಂಡನಿಗೆ ಸಲ್ಲತಕ್ಕದ್ದನ್ನು ಸಲ್ಲಿಸಲಿ.  ಹೆಂಡತಿಗೆ ತನ್ನ ಸ್ವಂತ ದೇಹದ ಮೇಲೆ ಅಧಿಕಾರವಿಲ್ಲ, ಆದರೆ ಅವಳ ಗಂಡನಿಗಿದೆ; ಅದೇ ರೀತಿಯಲ್ಲಿ ಗಂಡನಿಗೆ ತನ್ನ ಸ್ವಂತ ದೇಹದ ಮೇಲೆ ಅಧಿಕಾರವಿಲ್ಲ, ಆದರೆ ಅವನ ಹೆಂಡತಿಗಿದೆ.  ಅದನ್ನು ಒಬ್ಬರಿಗೊಬ್ಬರು ಸಲ್ಲಿಸುವುದನ್ನು ತಪ್ಪಿಸಬೇಡಿರಿ; ಆದರೆ ಪ್ರಾರ್ಥನೆಗೆ ಸಮಯವನ್ನು ಕೊಡಲಿಕ್ಕಾಗಿ ಮಾತ್ರ ನೀವು ಸ್ವಲ್ಪಕಾಲ ಪರಸ್ಪರ ಸಮ್ಮತಿಯಿಂದ ಅದರಿಂದ ದೂರವಿರಬಹುದು; ಇಲ್ಲದಿದ್ದರೆ ನಿಮ್ಮ ಸ್ವನಿಯಂತ್ರಣದ ಕೊರತೆಯನ್ನು ನೋಡಿ ಸೈತಾನನು ನಿಮ್ಮನ್ನು ಪ್ರಲೋಭಿಸುತ್ತಾ ಇರುವನು.  ಒಂದು ವಿನಾಯಿತಿಯಾಗಿ ಇದನ್ನು ನಾನು ಹೇಳುತ್ತಿದ್ದೇನೇ ಹೊರತು ಒಂದು ಆಜ್ಞೆಯಾಗಿ ಅಲ್ಲ.  ಆದರೆ ಎಲ್ಲರೂ ನಾನಿರುವಂತೆಯೇ ಇರಬೇಕೆಂಬುದು ನನ್ನ ಅಪೇಕ್ಷೆ. ಹಾಗಿದ್ದರೂ ಒಬ್ಬನು ಈ ರೀತಿಯಲ್ಲಿ ಮತ್ತೊಬ್ಬನು ಇನ್ನೊಂದು ರೀತಿಯಲ್ಲಿ ಹೀಗೆ ಪ್ರತಿಯೊಬ್ಬನು ದೇವರಿಂದ ತನ್ನ ಸ್ವಂತ ವರವನ್ನು ಹೊಂದಿದ್ದಾನೆ.  ಅವಿವಾಹಿತರಿಗೂ ವಿಧವೆಯರಿಗೂ ನಾನು ಹೇಳುವುದೇನೆಂದರೆ, ನಾನಿರುವಂತೆಯೇ ಇರುವುದು ಅವರಿಗೆ ಒಳ್ಳೇದು.  ಅವರಿಗೆ ಸ್ವನಿಯಂತ್ರಣವಿಲ್ಲದಿದ್ದರೆ ಅವರು ಮದುವೆಮಾಡಿಕೊಳ್ಳಲಿ; ಕಾಮತಾಪಪಡುವುದಕ್ಕಿಂತ ಮದುವೆಮಾಡಿಕೊಳ್ಳುವುದೇ ಮೇಲು. 10  ವಿವಾಹಿತರಿಗೆ ನಾನು, ವಾಸ್ತವದಲ್ಲಿ ನಾನಲ್ಲ, ಕರ್ತನು ಸಲಹೆ ನೀಡುವುದೇನೆಂದರೆ ಹೆಂಡತಿಯು ತನ್ನ ಗಂಡನನ್ನು ಬಿಟ್ಟು ಅಗಲಬಾರದು. 11  ಒಂದುವೇಳೆ ಅಗಲಬೇಕಾದರೂ ಅವಳು ಮದುವೆಯಾಗದೇ ಉಳಿಯಲಿ ಅಥವಾ ತನ್ನ ಗಂಡನೊಂದಿಗೆ ಪುನಃ ಸಮಾಧಾನಮಾಡಿಕೊಳ್ಳಲಿ; ಮತ್ತು ಗಂಡನು ತನ್ನ ಹೆಂಡತಿಯನ್ನು ಬಿಡಬಾರದು. 12  ಆದರೆ ಇತರರಿಗೆ ನಾನು, ಹೌದು ಕರ್ತನಲ್ಲ, ನಾನು ಹೇಳುವುದೇನೆಂದರೆ, ಒಬ್ಬ ಸಹೋದರನಿಗೆ ಅವಿಶ್ವಾಸಿಯಾದ ಹೆಂಡತಿಯಿದ್ದು ಅವಳು ಅವನೊಂದಿಗೆ ಬಾಳಲು ಸಮ್ಮತಿಸುವುದಾದರೆ ಅವನು ಅವಳನ್ನು ಬಿಡದಿರಲಿ. 13  ಅದೇ ರೀತಿಯಲ್ಲಿ ಒಬ್ಬ ಸ್ತ್ರೀಗೆ ಅವಿಶ್ವಾಸಿಯಾದ ಗಂಡನಿದ್ದು ಅವನು ಅವಳೊಂದಿಗೆ ಬಾಳಲು ಸಮ್ಮತಿಸುವುದಾದರೆ ಅವಳು ತನ್ನ ಗಂಡನನ್ನು ಬಿಡದಿರಲಿ. 14  ಏಕೆಂದರೆ ಅವಿಶ್ವಾಸಿಯಾದ ಗಂಡನು ವಿಶ್ವಾಸಿಯಾದ ತನ್ನ ಹೆಂಡತಿಯ ದೆಸೆಯಿಂದ ಪವಿತ್ರೀಕರಿಸಲ್ಪಟ್ಟವನಾಗಿದ್ದಾನೆ ಮತ್ತು ಅವಿಶ್ವಾಸಿಯಾದ ಹೆಂಡತಿಯು ವಿಶ್ವಾಸಿಯಾದ ತನ್ನ ಗಂಡನ ದೆಸೆಯಿಂದ ಪವಿತ್ರೀಕರಿಸಲ್ಪಟ್ಟವಳಾಗಿದ್ದಾಳೆ; ಇಲ್ಲವಾದರೆ ನಿಮ್ಮ ಮಕ್ಕಳು ನಿಜವಾಗಿಯೂ ಅಶುದ್ಧರಾಗಿರುತ್ತಿದ್ದರು, ಆದರೆ ಈಗ ಅವರು ಪವಿತ್ರರಾಗಿದ್ದಾರೆ. 15  ಒಂದುವೇಳೆ ಅವಿಶ್ವಾಸಿಯು ಅಗಲಿಹೋಗಬೇಕೆಂದಿದ್ದರೆ ಅಗಲಿಹೋಗಲಿ. ಅಂಥ ಸನ್ನಿವೇಶದಲ್ಲಿ ಒಬ್ಬ ಸಹೋದರನಾಗಲಿ ಸಹೋದರಿಯಾಗಲಿ ಅಧೀನತೆಗೆ ಬದ್ಧರಲ್ಲ. ದೇವರು ನಿಮ್ಮನ್ನು ಶಾಂತಿಗೆ ಕರೆದಿದ್ದಾನೆ. 16  ಹೆಂಡತಿಯೇ, ನಿನ್ನ ಗಂಡನನ್ನು ರಕ್ಷಿಸುವಿಯೋ ಎಂಬುದು ನಿನಗೆ ಹೇಗೆ ಗೊತ್ತು? ಗಂಡನೇ, ನಿನ್ನ ಹೆಂಡತಿಯನ್ನು ರಕ್ಷಿಸುವಿಯೋ ಎಂಬುದು ನಿನಗೆ ಹೇಗೆ ಗೊತ್ತು? 17  ಯೆಹೋವನು ಪ್ರತಿಯೊಬ್ಬನಿಗೆ ಒಂದು ಪಾಲನ್ನು ಕೊಟ್ಟಿರುವುದರಿಂದ ದೇವರು ಅವನನ್ನು ಕರೆದಿರುವ ಪ್ರಕಾರವೇ ಪ್ರತಿಯೊಬ್ಬನು ನಡೆದುಕೊಳ್ಳಲಿ. ಹೀಗೆ ನಾನು ಎಲ್ಲ ಸಭೆಗಳಿಗೆ ಆಜ್ಞಾಪಿಸುತ್ತೇನೆ. 18  ಕರೆಯಲ್ಪಟ್ಟ ಸಮಯದಲ್ಲಿ ಯಾವನಾದರೂ ಸುನ್ನತಿಯುಳ್ಳವನಾಗಿದ್ದನೊ? ಅವನು ಸುನ್ನತಿಯಿಲ್ಲದವನಂತೆ ಆಗದಿರಲಿ. ಕರೆಯಲ್ಪಟ್ಟ ಸಮಯದಲ್ಲಿ ಯಾವನಾದರೂ ಸುನ್ನತಿಯಿಲ್ಲದವನಾಗಿದ್ದನೊ? ಅವನು ಸುನ್ನತಿಯನ್ನು ಮಾಡಿಸಿಕೊಳ್ಳದಿರಲಿ. 19  ಸುನ್ನತಿಯಿದ್ದರೂ ಸುನ್ನತಿಯಿಲ್ಲದಿದ್ದರೂ ಯಾವುದೇ ಪ್ರಯೋಜನವಿಲ್ಲ, ಆದರೆ ದೇವರ ಆಜ್ಞೆಗಳನ್ನು ಕೈಕೊಂಡು ನಡೆಯುವುದರಿಂದ ಪ್ರಯೋಜನವಿದೆ. 20  ಪ್ರತಿಯೊಬ್ಬನು ಯಾವ ಸ್ಥಿತಿಯಲ್ಲಿ ಕರೆಯಲ್ಪಟ್ಟನೋ ಅದೇ ಸ್ಥಿತಿಯಲ್ಲಿ ಉಳಿಯಲಿ. 21  ದಾಸನಾಗಿದ್ದಾಗ ನೀನು ಕರೆಯಲ್ಪಟ್ಟಿಯೊ? ಅದಕ್ಕಾಗಿ ಚಿಂತೆಮಾಡಬೇಡ. ಒಂದುವೇಳೆ ನಿನಗೆ ಸ್ವತಂತ್ರನಾಗಲು ಸಾಧ್ಯವಿರುವುದಾದರೆ ಆ ಅವಕಾಶವನ್ನು ಸದುಪಯೋಗಿಸಿಕೊ. 22  ಕರ್ತನಲ್ಲಿರುವ ಯಾವನಾದರೂ ಕರೆಯಲ್ಪಟ್ಟಾಗ ದಾಸನಾಗಿದ್ದರೆ ಈಗ ಕರ್ತನಲ್ಲಿ ಸ್ವತಂತ್ರನಾಗಿದ್ದಾನೆ; ಅದೇ ರೀತಿಯಲ್ಲಿ ಕರೆಯಲ್ಪಟ್ಟಾಗ ಸ್ವತಂತ್ರನಾಗಿದ್ದವನು ಈಗ ಕ್ರಿಸ್ತನಿಗೆ ದಾಸನಾಗಿದ್ದಾನೆ. 23  ನೀವು ಕ್ರಯಕ್ಕೆ ಕೊಂಡುಕೊಳ್ಳಲ್ಪಟ್ಟವರಾಗಿದ್ದೀರಿ; ಮನುಷ್ಯರಿಗೆ ದಾಸರಾಗುವುದನ್ನು ನಿಲ್ಲಿಸಿಬಿಡಿರಿ. 24  ಸಹೋದರರೇ, ಪ್ರತಿಯೊಬ್ಬನು ಯಾವ ಸ್ಥಿತಿಯಲ್ಲಿ ಕರೆಯಲ್ಪಟ್ಟನೋ ಅದೇ ಸ್ಥಿತಿಯಲ್ಲಿ ದೇವರೊಂದಿಗೆ ಉಳಿಯಲಿ. 25  ಅವಿವಾಹಿತ ವ್ಯಕ್ತಿಗಳ * ವಿಷಯದಲ್ಲಿ ನನಗೆ ಕರ್ತನಿಂದ ಯಾವುದೇ ಆಜ್ಞೆಯು ಕೊಡಲ್ಪಟ್ಟಿಲ್ಲ. ಆದರೆ ನಂಬಿಗಸ್ತನಾಗಿರುವಂತೆ ಕರ್ತನಿಂದ ಕರುಣೆಯನ್ನು ಹೊಂದಿರುವ ನಾನು ನನ್ನ ಅಭಿಪ್ರಾಯವನ್ನು ಹೇಳುತ್ತೇನೆ. 26  ಇಂದು ನಮಗಿರುವ ಕಷ್ಟದ ಪರಿಸ್ಥಿತಿಯನ್ನು ನೋಡುವಾಗ ಪುರುಷನು ಇದ್ದಹಾಗೆಯೇ ಇರುವುದು ಒಳ್ಳೇದೆಂದು ನನಗನಿಸುತ್ತದೆ. 27  ನೀನು ಹೆಂಡತಿಯ ಕಟ್ಟಿನೊಳಗಿದ್ದೀಯೊ? ಬಿಡುಗಡೆಯಾಗಲು ಪ್ರಯತ್ನಿಸುವುದನ್ನು ನಿಲ್ಲಿಸು. ನೀನು ಹೆಂಡತಿಯ ಕಟ್ಟಿಲ್ಲದವನಾಗಿದ್ದೀಯೊ? ಹೆಂಡತಿಯನ್ನು ಪಡೆಯಲು ಪ್ರಯತ್ನಿಸುವುದನ್ನು ನಿಲ್ಲಿಸು. 28  ಆದರೆ ನೀನು ಮದುವೆಮಾಡಿಕೊಂಡರೂ ಪಾಪವನ್ನು ಮಾಡುವುದಿಲ್ಲ. ಒಬ್ಬ ಅವಿವಾಹಿತ ವ್ಯಕ್ತಿಯು * ಮದುವೆಮಾಡಿಕೊಂಡರೆ ಅಂಥವನು ಯಾವುದೇ ಪಾಪವನ್ನು ಮಾಡುವುದಿಲ್ಲ. ಆದರೆ ಮದುವೆಮಾಡಿಕೊಳ್ಳುವವರಿಗೆ ತಮ್ಮ ಶರೀರದಲ್ಲಿ ಸಂಕಟವಿರುವುದು. ಇದರಿಂದ ನಿಮ್ಮನ್ನು ತಪ್ಪಿಸುತ್ತಿದ್ದೇನೆ. 29  ಇದಲ್ಲದೆ ಸಹೋದರರೇ, ಉಳಿದಿರುವ ಸಮಯವು ಕೊಂಚವೇ ಆಗಿದೆ ಎಂದು ನಾನು ಹೇಳುತ್ತೇನೆ. ಆದುದರಿಂದ ಇನ್ನು ಮೇಲೆ ಹೆಂಡತಿಯಿರುವವರು ಹೆಂಡತಿಯಿಲ್ಲದವರಂತೆಯೂ 30  ಅಳುವವರು ಅಳದವರಂತೆಯೂ ಹರ್ಷಿಸುವವರು ಹರ್ಷಿಸದವರಂತೆಯೂ ಕೊಂಡುಕೊಳ್ಳುವವರು ಒಡೆತನವಿಲ್ಲದವರಂತೆಯೂ 31  ಲೋಕವನ್ನು ಅನುಭೋಗಿಸುವವರು ಅದನ್ನು ಪೂರ್ಣವಾಗಿ ಅನುಭೋಗಿಸದವರಂತೆಯೂ ಇರಲಿ; ಏಕೆಂದರೆ ಈ ಲೋಕದ ದೃಶ್ಯವು ಮಾರ್ಪಡುತ್ತಾ ಇದೆ. 32  ವಾಸ್ತವದಲ್ಲಿ ನೀವು ಚಿಂತೆಯಿಂದ ಮುಕ್ತರಾಗಿರಬೇಕೆಂಬುದು ನನ್ನ ಬಯಕೆ. ಅವಿವಾಹಿತ ಪುರುಷನು ಕರ್ತನ ಮೆಚ್ಚುಗೆಯನ್ನು ಹೇಗೆ ಪಡೆಯಬಹುದೆಂದು ಕರ್ತನ ವಿಷಯಗಳ ಕುರಿತು ಚಿಂತಿಸುತ್ತಾನೆ. 33  ಆದರೆ ವಿವಾಹಿತ ಪುರುಷನು ತನ್ನ ಹೆಂಡತಿಯ ಮೆಚ್ಚುಗೆಯನ್ನು ಹೇಗೆ ಪಡೆಯಬಹುದೆಂದು ಈ ಲೋಕದ ವಿಷಯಗಳ ಕುರಿತು ಚಿಂತಿಸುತ್ತಾನೆ 34  ಮತ್ತು ಅವನು ವಿಭಜಿತನಾಗಿದ್ದಾನೆ. ಅದೇ ರೀತಿಯಲ್ಲಿ ಅವಿವಾಹಿತ ಸ್ತ್ರೀ ಮತ್ತು ಕನ್ಯೆಯು ತಾನು ದೇಹದಲ್ಲಿಯೂ ಮನಸ್ಸಿನಲ್ಲಿಯೂ ಪವಿತ್ರಳಾಗಿರಬೇಕೆಂದು ಕರ್ತನ ವಿಷಯಗಳ ಕುರಿತು ಚಿಂತಿಸುತ್ತಾಳೆ. ಆದರೆ ವಿವಾಹಿತ ಸ್ತ್ರೀಯು ತನ್ನ ಗಂಡನ ಮೆಚ್ಚುಗೆಯನ್ನು ಹೇಗೆ ಪಡೆಯಬಹುದೆಂದು ಈ ಲೋಕದ ವಿಷಯಗಳ ಕುರಿತು ಚಿಂತಿಸುತ್ತಾಳೆ. 35  ನಾನು ಇದನ್ನು ನಿಮ್ಮ ಸ್ವಪ್ರಯೋಜನಕ್ಕಾಗಿ ಹೇಳುತ್ತಿದ್ದೇನೆಯೇ ಹೊರತು ನಿಮಗೆ ಉರುಲು ಹಾಕಲಿಕ್ಕಾಗಿ ಅಲ್ಲ. ಯೋಗ್ಯವಾದುದನ್ನು ಮಾಡುವಂತೆ ಮತ್ತು ಯಾವುದೇ ಅಪಕರ್ಷಣೆಯಿಲ್ಲದೆ ಸತತವಾಗಿ ಕರ್ತನ ಸೇವೆಮಾಡುವಂತೆ ನಿಮ್ಮನ್ನು ಪ್ರೇರೇಪಿಸುವ ಸಲುವಾಗಿ ಹೇಳುತ್ತಿದ್ದೇನೆ. 36  ಯಾವನಾದರೂ ತನ್ನ ಅವಿವಾಹಿತ ಸ್ಥಿತಿಯ * ವಿಷಯದಲ್ಲಿ ತಾನು ಅಯೋಗ್ಯವಾಗಿ ವರ್ತಿಸುತ್ತಿದ್ದೇನೆಂದು ಭಾವಿಸುವುದಾದರೆ ಮತ್ತು ಅವನು ತನ್ನ ಯೌವನದ ಪರಿಪಕ್ವ ಸ್ಥಿತಿಯನ್ನು ದಾಟಿರುವುದಾದರೆ, ಅವನು ಮದುವೆಮಾಡಿಕೊಳ್ಳುವುದು ಅಗತ್ಯವೆಂದು ಅವನಿಗೆ ಕಂಡುಬಂದರೆ ಅವನು ತನ್ನಿಷ್ಟದಂತೆಯೇ ಮಾಡಲಿ; ಹಾಗೆ ಮಾಡಿದರೆ ಅವನು ಪಾಪಮಾಡುವುದಿಲ್ಲ. ಅಂಥವರು ಮದುವೆಮಾಡಿಕೊಳ್ಳಲಿ. 37  ಆದರೆ ಯಾವನಾದರೂ ತನ್ನ ಅವಿವಾಹಿತ ಸ್ಥಿತಿಯನ್ನು * ಕಾಪಾಡಿಕೊಳ್ಳಲು ಹೃದಯದಲ್ಲಿ ನಿರ್ಧರಿಸಿರುವಲ್ಲಿ ಮತ್ತು ಅವನು ಮದುವೆಮಾಡಿಕೊಳ್ಳಬೇಕೆಂಬ ಅನಿಸಿಕೆ ಇಲ್ಲದವನೂ ತನ್ನನ್ನು ಹತೋಟಿಯಲ್ಲಿ ಇಟ್ಟುಕೊಳ್ಳಶಕ್ತನಾದವನೂ ಆಗಿದ್ದು ತನ್ನ ಹೃದಯದಲ್ಲಿ ಈ ನಿರ್ಧಾರವನ್ನು ಮಾಡಿಕೊಂಡಿರುವಲ್ಲಿ ಅವನು ಒಳ್ಳೇದನ್ನೇ ಮಾಡುವವನಾಗಿದ್ದಾನೆ. 38  ತನ್ನ ಅವಿವಾಹಿತ ಸ್ಥಿತಿಯನ್ನು * ಬಿಟ್ಟುಕೊಟ್ಟು ಮದುವೆಮಾಡಿಕೊಳ್ಳುವವನು ಸಹ ಒಳ್ಳೇದನ್ನು ಮಾಡುತ್ತಾನೆ, ಆದರೆ ಅದನ್ನು ಬಿಟ್ಟುಕೊಡದೆ ಮದುವೆಮಾಡಿಕೊಳ್ಳದವನು ಇನ್ನೂ ಹೆಚ್ಚು ಒಳ್ಳೇದನ್ನು ಮಾಡುವನು. 39  ತನ್ನ ಗಂಡನು ಜೀವದಿಂದಿರುವ ವರೆಗೆ ಹೆಂಡತಿಯು ಅವನಿಗೆ ಬದ್ಧಳಾಗಿದ್ದಾಳೆ. ಅವಳ ಗಂಡನು ಸಾಯುವುದಾದರೆ ಅವಳು ತನಗೆ ಬೇಕಾದವನನ್ನು ಮದುವೆಯಾಗಲು ಸ್ವತಂತ್ರಳಾಗಿದ್ದಾಳೆ; ಆದರೆ ಕರ್ತನಲ್ಲಿರುವವನನ್ನು ಮಾತ್ರ. 40  ಹಾಗಿದ್ದರೂ ಅವಳು ಇದ್ದಹಾಗೆಯೇ ಇರುವುದಾದರೆ ಹೆಚ್ಚು ಸಂತೋಷಿತಳು ಎಂಬುದು ನನ್ನ ಅಭಿಪ್ರಾಯ. ನನಗೂ ದೇವರ ಆತ್ಮವಿದೆ * ಎಂದು ನಾನು ನಿಶ್ಚಯವಾಗಿಯೂ ನೆನಸುತ್ತೇನೆ.

ಪಾದಟಿಪ್ಪಣಿ

1ಕೊರಿಂ 7:⁠25  ಅಕ್ಷರಾರ್ಥವಾಗಿ, “ಕನ್ಯೆಯರ.”
1ಕೊರಿಂ 7:⁠28  ಅಕ್ಷರಾರ್ಥವಾಗಿ, “ಕನ್ಯೆಯು.”
1ಕೊರಿಂ 7:⁠36  ಅಕ್ಷರಾರ್ಥವಾಗಿ, “ಕನ್ಯಾಸ್ಥಿತಿಯ.”
1ಕೊರಿಂ 7:⁠37  ಅಕ್ಷರಾರ್ಥವಾಗಿ, “ತನ್ನ ಸ್ವಂತ ಕನ್ಯಾಸ್ಥಿತಿಯನ್ನು.”
1ಕೊರಿಂ 7:⁠38  36 ನೇ ವಚನದ ಪಾದಟಿಪ್ಪಣಿಯನ್ನು ನೋಡಿ.
1ಕೊರಿಂ 7:⁠40  ಅಥವಾ, “ದೇವರ ಕಾರ್ಯಕಾರಿ ಶಕ್ತಿ.” ಪರಿಶಿಷ್ಟ 7 ನ್ನು ನೋಡಿ.