ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

1 ಕೊರಿಂಥ 5:1-13

5  ನಿಮ್ಮ ಮಧ್ಯೆ ಜಾರತ್ವ ಉಂಟೆಂದು, ಅನ್ಯಜನರ ಮಧ್ಯೆಯೂ ಕಂಡುಬರದಂಥ ಜಾರತ್ವ ಉಂಟೆಂದು ವರದಿಯಾಗಿದೆ. ಒಬ್ಬ ಮನುಷ್ಯನು ತನ್ನ ತಂದೆಯ ಹೆಂಡತಿಯನ್ನೇ ಇಟ್ಟುಕೊಂಡಿದ್ದಾನಂತೆ.  ಹೀಗಿದ್ದರೂ ನೀವು ದುಃಖಪಟ್ಟು ಅಂಥ ಕೃತ್ಯವನ್ನು ಮಾಡಿದ ಮನುಷ್ಯನನ್ನು ನಿಮ್ಮೊಳ​ಗಿಂದ ಹೊರಗೆಹಾಕುವ ಬದಲು ಉಬ್ಬಿಕೊಂಡಿದ್ದೀರೊ?  ನಾನು ಶಾರೀರಿಕವಾಗಿ ದೂರವಾಗಿದ್ದರೂ ಮಾನಸಿಕವಾಗಿ ಹತ್ತಿರವಿದ್ದುಕೊಂಡು ಇಂಥ ಕೆಲಸಮಾಡಿರುವ ಆ ಮನುಷ್ಯನಿಗೆ ಶಾರೀರಿಕವಾಗಿ ಹತ್ತಿರವಿದ್ದವನಂತೆ ಈಗಾಗಲೇ ತೀರ್ಪುಮಾಡಿದ್ದೇನೆ.  ನೀವು ಒಟ್ಟುಗೂಡಿಬರುವಾಗ ಮತ್ತು ನಮ್ಮ ಕರ್ತನಾದ ಯೇಸುವಿನ ಶಕ್ತಿಯೊಂದಿಗೆ ನನ್ನ ಮನಸ್ಸು ಅಲ್ಲಿರುವಾಗ ನಮ್ಮ ಕರ್ತನಾದ ಯೇಸುವಿನ ಹೆಸರಿನಲ್ಲಿ  ನೀವು ಅಂಥ ಮನುಷ್ಯನನ್ನು ​ಶರೀರದ ನಾಶಕ್ಕಾಗಿ ಸೈತಾನನ ವಶಕ್ಕೆ ಒಪ್ಪಿಸಿಕೊಡಿರಿ. ಇದರಿಂದಾಗಿ ಕರ್ತನ ದಿನದಲ್ಲಿ ಸಭೆಯ ಆಧ್ಯಾತ್ಮಿಕತೆಯು ಉಳಿಯುವಂತಾಗುವುದು.  ನೀವು ಯಾವ ಕಾರಣಕ್ಕಾಗಿ ಹೆಮ್ಮೆಪಡುತ್ತಿದ್ದೀರೋ ಅದು ಒಳ್ಳೇದಲ್ಲ. ಸ್ವಲ್ಪ ಕಿಣ್ವವು ಕಣಕವನ್ನೆಲ್ಲ ಹುಳಿ​ಮಾಡುತ್ತದೆ ಎಂಬುದು ನಿಮಗೆ ತಿಳಿಯದೊ?  ನೀವು ಹುಳಿಯಿಂದ ಮುಕ್ತರಾಗಿರುವುದರಿಂದ ಹೊಸ ಕಣಕವಾಗುವಂತೆ ಹಳೆಯ ಕಿಣ್ವವನ್ನು ತೆಗೆದುಹಾಕಿರಿ. ಏಕೆಂದರೆ ನಮ್ಮ ಪಸ್ಕದ ಕುರಿಯಾಗಿರುವ ಕ್ರಿಸ್ತನು ಯಜ್ಞವಾಗಿ ಅರ್ಪಿಸಲ್ಪಟ್ಟಿದ್ದಾನೆ.  ಆದುದರಿಂದ ನಾವು ಹಳೆಯ ಕಿಣ್ವದಿಂದಲ್ಲ ಅಥವಾ ಕೆಟ್ಟತನ ಮತ್ತು ದುಷ್ಟತನ ಎಂಬ ಕಿಣ್ವ​ದಿಂದಲ್ಲ, ಬದಲಾಗಿ ಯಥಾರ್ಥತೆ ಮತ್ತು ಸತ್ಯವೆಂಬ ಹುಳಿಯಿಲ್ಲದ ರೊಟ್ಟಿಗಳಿಂದ ಹಬ್ಬವನ್ನು ಆಚರಿಸೋಣ.  ಜಾರತ್ವ ಮಾಡುವವರೊಂದಿಗೆ ಸಹವಾಸಮಾಡುವುದನ್ನು ಬಿಟ್ಟುಬಿಡಿರಿ ಎಂದು ನನ್ನ ಪತ್ರದಲ್ಲಿ ನಿಮಗೆ ಬರೆದಿದ್ದೆ. 10  ಈ ಲೋಕದಲ್ಲಿರುವ ಜಾರರು, ಲೋಭಿಗಳು, ಸುಲುಕೊಳ್ಳುವವರು ಅಥವಾ ವಿಗ್ರಹಾರಾಧಕ​ರೊಂದಿಗೆ ಸಹವಾಸವನ್ನು ಸಂಪೂರ್ಣವಾಗಿ ಬಿಟ್ಟುಬಿಡಬೇಕೆಂಬುದು ನನ್ನ ಮಾತಿನ ಅರ್ಥವಲ್ಲ. ಹಾಗೆ ಮಾಡಬೇಕಾದರೆ ನೀವು ಈ ಲೋಕವನ್ನೇ ಬಿಟ್ಟುಹೋಗಬೇಕಾಗುವುದು. 11  ಆದರೆ ಸಹೋದರನೆನಿಸಿಕೊಂಡವನು ​ಜಾರನಾಗಲಿ ಲೋಭಿಯಾಗಲಿ ವಿಗ್ರಹಾರಾಧಕ​ನಾಗಲಿ ದೂಷಕನಾಗಲಿ ಕುಡುಕನಾಗಲಿ ಸುಲುಕೊಳ್ಳುವವನಾಗಲಿ ಆಗಿರುವಲ್ಲಿ ಅವನ ಸಹವಾಸವನ್ನು ಬಿಟ್ಟುಬಿಡಿರಿ, ಅಂಥವ​ನೊಂದಿಗೆ ಊಟವನ್ನೂ ಮಾಡಬೇಡಿ ಎಂದು ಈಗ ನಾನು ನಿಮಗೆ ಬರೆಯುತ್ತಿದ್ದೇನೆ. 12  ಹೊರಗಿನವರ ವಿಷಯದಲ್ಲಿ ತೀರ್ಪುಮಾಡಲು ನಾನು ಯಾರು? ಒಳಗಿನವರನ್ನು ತೀರ್ಪುಮಾಡುವವರು ನೀವಲ್ಲವೊ? 13  ಹೊರಗಿನವರನ್ನು ದೇವರು ತೀರ್ಪುಮಾಡುತ್ತಾನೆ. “ಆ ದುಷ್ಟನನ್ನು ನಿಮ್ಮ ಮಧ್ಯದಿಂದ ತೆಗೆದುಹಾಕಿರಿ.”

ಪಾದಟಿಪ್ಪಣಿ