ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

1 ಕೊರಿಂಥ 4:1-21

4  ಮನುಷ್ಯನು ನಮ್ಮನ್ನು ಕ್ರಿಸ್ತನ ಕೈಕೆಳಗಿನವರೆಂದೂ ದೇವರ ಪವಿತ್ರ ರಹಸ್ಯಗಳ ಮನೆವಾರ್ತೆಗಾರರೆಂದೂ ಎಣಿಸಲಿ.  ಮಾತ್ರವಲ್ಲದೆ, ಮನೆವಾರ್ತೆಗಾರರಲ್ಲಿ ಅವರು ನಂಬಿಗಸ್ತರಾಗಿ ಕಂಡುಬರುವುದನ್ನೇ ಅಪೇಕ್ಷಿಸಲಾಗುತ್ತದೆ.  ನಿಮ್ಮಿಂದಾಗಲಿ ಮಾನವ ನ್ಯಾಯಸಭೆಯಿಂದಾಗಲಿ ನಾನು ಪರೀಕ್ಷಿಸಲ್ಪಡಬೇಕಾಗಿರುವುದು ನನಗೆ ತೀರ ಕ್ಷುಲ್ಲಕವಾದ ಸಂಗತಿಯಾಗಿದೆ. ನಾನು ನನ್ನನ್ನು ಪರೀಕ್ಷಿಸಿಕೊಳ್ಳುವುದೂ ಇಲ್ಲ.  ನನಗೇ ವಿರುದ್ಧವಾಗಿರುವ ಯಾವುದರ ಪ್ರಜ್ಞೆಯೂ ನನಗಿಲ್ಲ. ಆದರೂ ಇದರಿಂದ ನಾನು ನೀತಿವಂತನೆಂದು ರುಜುವಾಗುವುದಿಲ್ಲ; ನನ್ನನ್ನು ಪರೀಕ್ಷಿಸುವವನು ಯೆಹೋವನೇ ಆಗಿದ್ದಾನೆ.  ಆದುದರಿಂದ ನೇಮಿತ ಕಾಲಕ್ಕೆ ಮುಂಚೆ ಅಂದರೆ ಕತ್ತಲೆಯಲ್ಲಿ ನಡೆಯುವ ಗುಪ್ತ ವಿಷಯಗಳನ್ನು ಬೆಳಕಿಗೆ ತರುವವನೂ ಹೃದಯದ ಆಲೋಚನೆಗಳನ್ನು ಬಯಲುಪಡಿಸುವವನೂ ಆಗಿರುವ ಕರ್ತನು ಬರುವ ತನಕ ಯಾವುದರ ಕುರಿತೂ ತೀರ್ಪುಮಾಡಬೇಡಿರಿ. ಆ ಸಮಯದಲ್ಲಿ ಪ್ರತಿಯೊಬ್ಬನಿಗೆ ಬರತಕ್ಕ ಹೊಗಳಿಕೆಯು ದೇವರಿಂದ ​ಬರುವುದು.  ಸಹೋದರರೇ, ನಿಮ್ಮ ಒಳಿತಿಗಾಗಿಯೇ ನಾನು ಈ ವಿಷಯಗಳನ್ನು ನನಗೂ ಅಪೊಲ್ಲೋಸನಿಗೂ ಅನ್ವಯಿಸಿಕೊಂಡಿದ್ದೇನೆ; ಹೀಗೆ ನಮ್ಮ ದೃಷ್ಟಾಂತದಿಂದ ನೀವು, “ಬರೆದಿರುವ ಸಂಗತಿಗಳನ್ನು ಮೀರಿಹೋಗಬೇಡಿ” ಎಂಬ ನಿಯಮವನ್ನು ಕಲಿತುಕೊಳ್ಳಬಹುದು. ಹೀಗೆ ನೀವು ಒಬ್ಬನಿಗೆ ವಿರುದ್ಧವಾಗಿ ಇನ್ನೊಬ್ಬನ ಪಕ್ಷ​ವಹಿಸಿ ವೈಯಕ್ತಿಕವಾಗಿ ಉಬ್ಬಿಕೊಳ್ಳಲು ಆಸ್ಪದವಾಗದು.  ನಿನ್ನನ್ನು ಇನ್ನೊಬ್ಬನಿಗಿಂತ ಭಿನ್ನವಾಗಿ ಮಾಡುವಾತನು ಯಾರು? ಹೊಂದದೇ ಇರುವಂಥದ್ದು ನಿನ್ನಲ್ಲಿ ಯಾವುದಿದೆ? ನೀನು ಅದನ್ನು ಹೊಂದಿದ್ದೇ ಆದ ಮೇಲೆ ಹೊಂದದೇ ಇರುವವನಂತೆ ಏಕೆ ಹೆಮ್ಮೆಪಡುತ್ತೀ?  ನೀವು ಈಗಾಗಲೇ ತೃಪ್ತರಾಗಿದ್ದೀರೊ? ಈಗಾಗಲೇ ನೀವು ಐಶ್ವರ್ಯವಂತರಾಗಿದ್ದೀರೊ? ನಾವಿಲ್ಲದೆಯೇ ನೀವು ಅರಸರಂತೆ ಆಳಲು ಆರಂಭಿಸಿದ್ದೀರೊ? ನೀವು ನಿಜವಾಗಿಯೂ ಅರಸರಾಗಿ ಆಳಲು ಆರಂಭಿಸಿದ್ದರೆ ಎಷ್ಟೋ ಒಳ್ಳೇದಿತ್ತು, ಆಗ ನಾವೂ ನಿಮ್ಮೊಂದಿಗೆ ಅರಸರಾಗಿ ಆಳುತ್ತಿದ್ದೆವು.  ದೇವರು ಅಪೊಸ್ತಲರಾದ ನಮ್ಮನ್ನು ಮರಣಕ್ಕೆ ನೇಮಿಸಿದ ವ್ಯಕ್ತಿಗಳೋಪಾದಿ ಪ್ರದರ್ಶನದಲ್ಲಿ ಕಡೆಯವರಾಗಿ ಇಟ್ಟಿದ್ದಾನೆಂದು ನನಗೆ ಅನಿಸುತ್ತದೆ; ಏಕೆಂದರೆ ನಾವು ಲೋಕಕ್ಕೂ ದೇವದೂತರಿಗೂ ಜನರಿಗೂ ರಂಗಸ್ಥಳದ ಪ್ರೇಕ್ಷಣೀಯ ನೋಟವಾಗಿದ್ದೇವೆ. 10  ನಾವು ಕ್ರಿಸ್ತನ ನಿಮಿತ್ತ ಮೂರ್ಖರಾಗಿದ್ದೇವೆ, ನೀವಾದರೋ ಕ್ರಿಸ್ತನಲ್ಲಿ ವಿವೇಕಿಗಳಾಗಿದ್ದೀರಿ; ನಾವು ಬಲಹೀನರಾಗಿದ್ದೇವೆ, ನೀವು ಬಲಿಷ್ಠರಾಗಿದ್ದೀರಿ; ನೀವು ಸತ್ಕೀರ್ತಿಯನ್ನು ಹೊಂದಿದ್ದೀರಿ, ಆದರೆ ನಾವು ಅಪಕೀರ್ತಿ ಪಡೆದವರಾಗಿದ್ದೇವೆ. 11  ಈ ಗಳಿಗೆಯ ವರೆಗೂ ನಾವು ಹಸಿದವರೂ ಬಾಯಾರಿದವರೂ ಸಾಕಷ್ಟು ಬಟ್ಟೆಯಿಲ್ಲದವರೂ ಗುದ್ದುತಿನ್ನುವವರೂ ಮನೆಯಿಲ್ಲದವರೂ 12  ಸ್ವಂತ ಕೈಗಳಿಂದ ಕೆಲಸಮಾಡಿ ದುಡಿಯುವವರೂ ಆಗಿದ್ದೇವೆ. ಬೈಸಿಕೊಳ್ಳುತ್ತಿರುವಾಗಲೂ ಆಶೀರ್ವದಿಸುತ್ತೇವೆ; ಹಿಂಸಿಸಲ್ಪಡುವಾಗಲೂ ಸಹಿಸಿಕೊಳ್ಳುತ್ತೇವೆ; 13  ನಾವು ಅಪಕೀರ್ತಿ ಹೊಂದುತ್ತಿರುವಾಗಲೂ ಬೇಡಿಕೊಳ್ಳುತ್ತೇವೆ; ನಾವು ಇಂದಿನ ವರೆಗೂ ಲೋಕದ ಕಸವೋ ಎಲ್ಲ ಸಂಗತಿಗಳ ಹೊಲಸೋ ಎಂಬಂತಾಗಿದ್ದೇವೆ. 14  ನಿಮ್ಮನ್ನು ನಾಚಿಕೆಪಡಿಸುವುದಕ್ಕಾಗಿ ನಾನು ಈ ವಿಷಯಗಳನ್ನು ಬರೆಯುತ್ತಿಲ್ಲ; ಬದಲಾಗಿ ನನ್ನ ಪ್ರಿಯ ಮಕ್ಕಳೆಂದು ಭಾವಿಸಿ ನಿಮಗೆ ಬುದ್ಧಿಹೇಳಲಿಕ್ಕಾಗಿಯೇ ಬರೆಯುತ್ತಿದ್ದೇನೆ. 15  ನಿಮಗೆ ಕ್ರಿಸ್ತನಲ್ಲಿ ಹತ್ತು ಸಾವಿರ ಮಂದಿ ಶಿಕ್ಷಕರಿರುವುದಾದರೂ ತಂದೆಗಳು ಬಹುಮಂದಿ ಇಲ್ಲ ಎಂಬುದಂತೂ ನಿಶ್ಚಯ; ಸುವಾರ್ತೆಯ ಮೂಲಕ ನಾನು ನಿಮಗೆ ಕ್ರಿಸ್ತ ಯೇಸುವಿನಲ್ಲಿ ತಂದೆಯಾಗಿದ್ದೇನೆ. 16  ಆದುದರಿಂದ ನನ್ನನ್ನು ಅನುಕರಿಸುವವರಾಗಿರಿ ಎಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ. 17  ಈ ಕಾರಣ​ಕ್ಕಾಗಿಯೇ ನಾನು ನಿಮ್ಮ ಬಳಿಗೆ ತಿಮೊಥೆಯನನ್ನು ಕಳುಹಿಸುತ್ತಿದ್ದೇನೆ; ಅವನು ಕರ್ತನಲ್ಲಿ ನನಗೆ ಪ್ರಿಯನೂ ನಂಬಿಗಸ್ತನೂ ಆದ ಮಗನಾಗಿದ್ದಾನೆ; ನಾನು ಎಲ್ಲ ಕಡೆಯಲ್ಲಿರುವ ಪ್ರತಿಯೊಂದು ಸಭೆಯಲ್ಲಿ ಬೋಧಿಸುತ್ತಿರುವ ಪ್ರಕಾರವೇ ಕ್ರಿಸ್ತ ಯೇಸುವಿನ ಸಂಬಂಧದಲ್ಲಿ ನನ್ನ ಕಾರ್ಯವಿಧಾನಗಳನ್ನು ಅವನು ನಿಮ್ಮ ಮನಸ್ಸಿಗೆ ತರುವನು. 18  ನಾನು ನಿಮ್ಮ ಬಳಿಗೆ ಬರುವುದಿಲ್ಲವೊ ಎಂಬಂತೆ ಕೆಲವರು ಉಬ್ಬಿ​ಕೊಂಡಿದ್ದಾರೆ. 19  ಯೆಹೋವನ ಚಿತ್ತವಿರುವುದಾದರೆ ನಾನು ಬೇಗನೆ ನಿಮ್ಮ ಬಳಿಗೆ ಬರುವೆನು ಮತ್ತು ಉಬ್ಬಿಕೊಂಡವರ ಮಾತುಗಳನ್ನಲ್ಲ ಅವರ ಶಕ್ತಿಯನ್ನು ತಿಳಿದುಕೊಳ್ಳುವೆನು. 20  ಏಕೆಂದರೆ ದೇವರ ರಾಜ್ಯವು ಮಾತಿನಲ್ಲಿ ಅಲ್ಲ, ಶಕ್ತಿಯಲ್ಲಿ ಅಡಗಿದೆ. 21  ನಿಮಗೆ ಯಾವುದು ಇಷ್ಟ? ನಾನು ನಿಮ್ಮ ಬಳಿಗೆ ಬೆತ್ತದೊಂದಿಗೆ ಬರಲೋ ಅಥವಾ ಪ್ರೀತಿಯಿಂದಲೂ ಸೌಮ್ಯಭಾವದಿಂದಲೂ ಬರಲೊ?

ಪಾದಟಿಪ್ಪಣಿ