ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

1 ಕೊರಿಂಥ 11:1-34

11  ನಾನು ಕ್ರಿಸ್ತನನ್ನು ಅನುಕರಿಸುವವನಾಗಿರುವಂತೆಯೇ ನೀವೂ ನನ್ನನ್ನು ಅನುಕರಿಸುವವರಾಗಿರಿ.  ನಾನು ನಿಮ್ಮನ್ನು ಶ್ಲಾಘಿಸುತ್ತೇನೆ, ಏಕೆಂದರೆ ನೀವು ಎಲ್ಲ ವಿಷಯಗಳಲ್ಲಿ ನನ್ನನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದೀರಿ ಮತ್ತು ನಾನು ನಿಮಗೆ ತಿಳಿಸಿದಂಥ ಕಟ್ಟಳೆಗಳನ್ನು ತಿಳಿಸಿಕೊಟ್ಟ ರೀತಿಯಲ್ಲಿಯೇ ಬಿಗಿಯಾಗಿ ಹಿಡಿದುಕೊಂಡಿದ್ದೀರಿ.  ಆದರೆ ಈ ವಿಷಯವನ್ನು ನೀವು ತಿಳಿದಿರಬೇಕೆಂಬುದು ನನ್ನ ಬಯಕೆ, ಅದೇನೆಂದರೆ ಪ್ರತಿ ಪುರುಷನಿಗೆ ಕ್ರಿಸ್ತನು ತಲೆ; ಸ್ತ್ರೀಗೆ ಪುರುಷನು ತಲೆ; ಕ್ರಿಸ್ತನಿಗೆ ದೇವರು ತಲೆ.  ತನ್ನ ತಲೆಯನ್ನು ಮುಚ್ಚಿಕೊಂಡು ಪ್ರಾರ್ಥನೆ​ಮಾಡುವ ಅಥವಾ ಪ್ರವಾದಿಸುವ ಪ್ರತಿ ಪುರುಷನು ತನ್ನ ತಲೆಯನ್ನು ಅವಮಾನಪಡಿಸುತ್ತಾನೆ;  ಆದರೆ ತನ್ನ ತಲೆಯ ಮೇಲೆ ಮುಸುಕನ್ನು ಹಾಕಿಕೊಳ್ಳದೆ ಪ್ರಾರ್ಥನೆ​ಮಾಡುವ ಅಥವಾ ಪ್ರವಾದಿಸುವ ಪ್ರತಿ ಸ್ತ್ರೀಯು ತನ್ನ ತಲೆಯನ್ನು ಅವಮಾನಪಡಿಸುತ್ತಾಳೆ; ಏಕೆಂದರೆ ಸ್ತ್ರೀಯು ಮುಸುಕುಹಾಕಿಕೊಳ್ಳದಿರುವುದೂ ತಲೆಬೋಳಿಸಿಕೊಂಡಿರುವುದೂ ಒಂದೇ.  ಒಬ್ಬ ಸ್ತ್ರೀಯು ತಲೆಗೆ ಮುಸುಕು​ಹಾಕಿಕೊಳ್ಳದಿದ್ದರೆ ತನ್ನ ಕೂದಲನ್ನು ತೆಗೆಸಿಕೊಳ್ಳಲಿ; ಆದರೆ ಕೂದಲನ್ನು ತೆಗೆಯುವುದು ಅಥವಾ ತಲೆಬೋಳಿಸಿಕೊಳ್ಳುವುದು ಅವಳಿಗೆ ಅವಮಾನಕರವಾಗಿದ್ದರೆ ಅವಳು ತಲೆಗೆ ಮುಸುಕನ್ನು ಹಾಕಿಕೊಳ್ಳಲಿ.  ಪುರುಷನು ದೇವರ ಸ್ವರೂಪವೂ ಮಹಿಮೆಯೂ ಆಗಿರುವುದರಿಂದ ತನ್ನ ತಲೆಯನ್ನು ಮುಚ್ಚಿಕೊಳ್ಳಬಾರದು; ಆದರೆ ಸ್ತ್ರೀಯು ಪುರುಷನ ಮಹಿಮೆಯಾಗಿದ್ದಾಳೆ.  ಪುರುಷನು ಸ್ತ್ರೀಯಿಂದ ಉಂಟಾಗಲಿಲ್ಲ, ಸ್ತ್ರೀಯು ಪುರುಷನಿಂದ ಉಂಟಾದಳು.  ಇದಲ್ಲದೆ, ಪುರುಷನು ಸ್ತ್ರೀಗಾಗಿ ಸೃಷ್ಟಿಸಲ್ಪಡಲಿಲ್ಲ, ಸ್ತ್ರೀಯು ಪುರುಷನಿಗಾಗಿ ಸೃಷ್ಟಿಸಲ್ಪಟ್ಟಳು. 10  ಆದುದರಿಂದಲೇ ದೇವದೂತರ ನಿಮಿತ್ತವಾಗಿ ಸ್ತ್ರೀಯು ತನ್ನ ತಲೆಯ ಮೇಲೆ ಅಧಿಕಾರವನ್ನು ಸೂಚಿಸುವ ಮುಸುಕನ್ನು ಹಾಕಿಕೊಳ್ಳಬೇಕು. 11  ಕರ್ತನ ಸಂಬಂಧದಲ್ಲಿ ಪುರುಷನಿಲ್ಲದೆ ಸ್ತ್ರೀ ಇಲ್ಲ, ಸ್ತ್ರೀ ಇಲ್ಲದೆ ​ಪುರುಷನಿಲ್ಲ. 12  ಏಕೆಂದರೆ ಸ್ತ್ರೀಯು ಪುರುಷನಿಂದ ಉಂಟಾದಂತೆಯೇ ಪುರುಷನು ಸಹ ಸ್ತ್ರೀಯ ಮೂಲಕ ಉಂಟಾಗುತ್ತಾನೆ; ಆದರೆ ಸಮಸ್ತವು ದೇವರಿಂದ ಉಂಟಾಗುತ್ತದೆ. 13  ನೀವೇ ಆಲೋಚಿಸಿ ನೋಡಿ, ಒಬ್ಬ ಸ್ತ್ರೀಯು ತಲೆಗೆ ಮುಸುಕುಹಾಕಿಕೊಳ್ಳದೆ ದೇವರಿಗೆ ಪ್ರಾರ್ಥಿಸುವುದು ಯುಕ್ತವೊ? 14  ಪುರುಷನಿಗೆ ಉದ್ದವಾದ ಕೂದಲಿರುವುದು ಅವನಿಗೆ ಅಗೌರವವಾದುದಾಗಿದೆ ಎಂಬುದನ್ನೂ 15  ಸ್ತ್ರೀಗೆ ಉದ್ದವಾದ ಕೂದಲಿರುವುದು ಅವಳಿಗೆ ಮಹಿಮೆಯಾಗಿದೆ ಎಂಬುದನ್ನೂ ಪ್ರಕೃತಿಯು ತಾನೇ ನಿಮಗೆ ಕಲಿಸುವುದಿಲ್ಲವೆ? ಏಕೆಂದರೆ ಸ್ತ್ರೀಗೆ ಮುಸುಕಿಗೆ ಬದಲಾಗಿ ಕೂದಲು ಕೊಡಲ್ಪಟ್ಟಿದೆ. 16  ಯಾವನಾದರೂ ಇನ್ನಿತರ ಪದ್ಧತಿಗಾಗಿ ವಾದಿಸುವವನಾಗಿ ಕಂಡುಬಂದರೆ, ನಮ್ಮಲ್ಲಿಯಾಗಲಿ ದೇವರ ಸಭೆಗಳಲ್ಲಿಯಾಗಲಿ ಬೇರೆ ಯಾವುದೇ ಪದ್ಧತಿಯಿಲ್ಲ. 17  ಆದರೆ ಈ ಸಲಹೆಗಳನ್ನು ಕೊಡುವಾಗ ನಾನು ನಿಮ್ಮನ್ನು ಶ್ಲಾಘಿಸುವುದಿಲ್ಲ, ಏಕೆಂದರೆ ನೀವು ಕೂಡಿಬರುವುದು ಒಳ್ಳೇದನ್ನು ಹೆಚ್ಚಿಸಲಿಕ್ಕಾಗಿ ಅಲ್ಲ, ಕೆಟ್ಟದ್ದನ್ನು ಹೆಚ್ಚಿಸಲಿಕ್ಕಾಗಿಯೇ. 18  ಮೊದಲನೆಯದಾಗಿ, ನೀವು ಸಭೆಯಲ್ಲಿ ಕೂಡಿಬರುವಾಗ ನಿಮ್ಮ ಮಧ್ಯೆ ಭೇದಗಳು ಉಂಟೆಂದು ನಾನು ಕೇಳಿಸಿಕೊಂಡಿದ್ದೇನೆ; ಮತ್ತು ಸ್ವಲ್ಪಮಟ್ಟಿಗೆ ನಾನು ಅದನ್ನು ನಂಬುತ್ತೇನೆ. 19  ನಿಮ್ಮ ಮಧ್ಯೆ ಭಿನ್ನಪಂಥಗಳೂ ಇರಲೇಬೇಕು, ಆಗ ನಿಮ್ಮ ಮಧ್ಯೆ ದೇವರಿಂದ ಅಂಗೀ​ಕರಿಸಲ್ಪಟ್ಟ ವ್ಯಕ್ತಿಗಳು ಯಾರೆಂಬುದೂ ಸ್ಪಷ್ಟವಾಗಿ ಕಂಡುಬರುವುದು. 20  ಆದುದರಿಂದ ನೀವು ಒಂದು ಸ್ಥಳದಲ್ಲಿ ಕೂಡಿಬರುವಾಗ ಕರ್ತನ ಸಂಧ್ಯಾ ಭೋಜನವನ್ನು ತಿನ್ನಲು ಸಾಧ್ಯವಾಗು​ವುದಿಲ್ಲ. 21  ಏಕೆಂದರೆ ನೀವು ಅದನ್ನು ತಿನ್ನುವುದಕ್ಕೆ ಮುಂಚೆ ಪ್ರತಿಯೊಬ್ಬನು ತನ್ನ ಸಂಜೆಯ ಊಟವನ್ನು ಮಾಡಿರುತ್ತಾನೆ; ಹೀಗೆ ಒಬ್ಬನು ಹಸಿದಿರುತ್ತಾನೆ ಮತ್ತು ಇನ್ನೊಬ್ಬನು ಕುಡಿದು ಮತ್ತನಾಗಿರುತ್ತಾನೆ. 22  ಊಟಮಾಡುವುದಕ್ಕೂ ಕುಡಿಯುವುದಕ್ಕೂ ನಿಮಗೆ ಮನೆಗಳಿವೆ, ಅಲ್ಲವೆ? ಅಥವಾ ನೀವು ದೇವರ ಸಭೆಯನ್ನು ​ಕಡೆಗಣಿಸಿ ಏನೂ ಇಲ್ಲದವರನ್ನು ನಾಚಿಕೆಗೆ ಗುರಿಪಡಿಸುತ್ತೀರೊ? ನಾನು ನಿಮಗೇನು ಹೇಳಲಿ? ನಿಮ್ಮನ್ನು ಶ್ಲಾಘಿಸಲೊ? ಈ ವಿಷಯ​ದಲ್ಲಿ ನಾನು ನಿಮ್ಮನ್ನು ಶ್ಲಾಘಿಸುವುದಿಲ್ಲ. 23  ನಾನು ಕರ್ತನಿಂದ ಹೊಂದಿದ್ದನ್ನು ನಿಮ್ಮ ವಶಕ್ಕೂ ಒಪ್ಪಿಸಿದ್ದೇನೆ; ಕರ್ತನಾದ ಯೇಸು ತಾನು ಹಿಡಿದುಕೊಡಲ್ಪಡಲಿಕ್ಕಿದ್ದ ರಾತ್ರಿಯಂದು ರೊಟ್ಟಿಯನ್ನು ತೆಗೆದುಕೊಂಡು 24  ದೇವರಿಗೆ ಕೃತಜ್ಞತೆ ಸಲ್ಲಿಸಿ ಮುರಿದು, “ಇದು ನಿಮಗೋಸ್ಕರವಾಗಿರುವ ನನ್ನ ದೇಹವನ್ನು ಸೂಚಿಸುತ್ತದೆ. ನನ್ನನ್ನು ಜ್ಞಾಪಿಸಿಕೊಳ್ಳುವುದಕ್ಕೋಸ್ಕರ ಇದನ್ನು ಮಾಡುತ್ತಾ ಇರಿ” ಎಂದು ಹೇಳಿದನು. 25  ಸಂಜೆಯ ಊಟವನ್ನು ಮಾಡಿ ಮುಗಿಸಿದ ಬಳಿಕ ಅವನು ಅದೇ ರೀತಿಯಾಗಿ ಪಾತ್ರೆಯನ್ನು ತೆಗೆದುಕೊಂಡು, “ಈ ಪಾತ್ರೆಯು ನನ್ನ ರಕ್ತದ ಆಧಾರದ ಮೇಲೆ ಸ್ಥಾಪಿತವಾಗುವ ಹೊಸ ಒಡಂಬಡಿಕೆಯನ್ನು ಸೂಚಿಸುತ್ತದೆ. ನೀವು ಇದನ್ನು ಕುಡಿಯುವಷ್ಟು ಬಾರಿ ನನ್ನನ್ನು ಜ್ಞಾಪಿಸಿಕೊಳ್ಳುವುದಕ್ಕೋಸ್ಕರ ಇದನ್ನು ಮಾಡುತ್ತಾ ಇರಿ” ಎಂದು ಹೇಳಿದನು. 26  ನೀವು ಈ ರೊಟ್ಟಿಯನ್ನು ತಿಂದು ಈ ಪಾತ್ರೆಯಿಂದ ಕುಡಿಯುವಷ್ಟು ಸಾರಿ ಕರ್ತನ ಮರಣವನ್ನು ಅವನು ಬರುವ ತನಕ ಪ್ರಕಟಪಡಿಸುತ್ತಾ ಇರುತ್ತೀರಿ. 27  ಹೀಗಿರುವುದರಿಂದ ಯಾವನಾದರೂ ಅಯೋಗ್ಯವಾಗಿ ಕರ್ತನ ರೊಟ್ಟಿಯನ್ನು ತಿನ್ನುವುದಾದರೆ ಅಥವಾ ಪಾತ್ರೆಯಿಂದ ಕುಡಿಯುವುದಾದರೆ ಅವನು ಕರ್ತನ ದೇಹದ ವಿಷಯದಲ್ಲಿಯೂ ರಕ್ತದ ವಿಷಯದಲ್ಲಿಯೂ ದೋಷಿಯಾಗುವನು. 28  ಆದುದರಿಂದ ಒಬ್ಬನು ತಾನು ಯೋಗ್ಯನೋ ಎಂಬುದನ್ನು ಪರೀಕ್ಷಿಸಿಕೊಂಡ ಅನಂತರವೇ ರೊಟ್ಟಿಯನ್ನು ತಿನ್ನಲಿ ಮತ್ತು ಪಾತ್ರೆಯಿಂದ ಕುಡಿಯಲಿ. 29  ಅದು ಕರ್ತನ ದೇಹವನ್ನು ಸೂಚಿಸುತ್ತದೆಂದು ವಿವೇಚಿಸದೆ ತಿಂದು ಕುಡಿಯುವವನು ತನ್ನ ವಿರುದ್ಧವಾಗಿಯೇ ತೀರ್ಪನ್ನು ತಂದುಕೊಳ್ಳುತ್ತಾನೆ. 30  ಆದುದರಿಂದಲೇ ನಿಮ್ಮಲ್ಲಿ ಅನೇಕರು ಬಲಹೀನರೂ ಅಸ್ವಸ್ಥರೂ ಆಗಿದ್ದೀರಿ ಮತ್ತು ಅನೇಕರು ಮರಣದಲ್ಲಿ ನಿದ್ರಿಸುತ್ತಿದ್ದಾರೆ. 31  ಆದರೆ ನಾವು ಏನಾಗಿದ್ದೇವೆಂದು ವಿವೇಚಿಸಿ ತಿಳಿದುಕೊಳ್ಳುವುದಾದರೆ ನಮಗೆ ತೀರ್ಪಾಗದು. 32  ಆದರೂ ತೀರ್ಪುಮಾಡಲ್ಪಟ್ಟಾಗ ನಾವು ಲೋಕದವರೊಂದಿಗೆ ಖಂಡಿಸಲ್ಪಡದಿರುವಂತೆ ಯೆಹೋವನು ನಮ್ಮನ್ನು ಶಿಸ್ತಿಗೊಳಪಡಿಸುತ್ತಾನೆ. 33  ಆದುದರಿಂದ ನನ್ನ ಸಹೋದರರೇ, ನೀವು ಈ ಭೋಜನವನ್ನು ತಿನ್ನಲು ಕೂಡಿಬರುವಾಗ ಒಬ್ಬರು ಇನ್ನೊಬ್ಬರಿಗಾಗಿ ಕಾಯಿರಿ. 34  ಯಾವನಾದರೂ ಹಸಿದಿರುವುದಾದರೆ ಅವನು ಮನೆಯಲ್ಲಿ ಊಟಮಾಡಲಿ; ಏಕೆಂದರೆ ನೀವು ಕೂಡಿಬಂದು ನ್ಯಾಯತೀರ್ಪಿಗೆ ಒಳಗಾಗುವಂತಾಗ​ಬಾರದು. ಆದರೆ ಉಳಿದಿರುವ ಸಂಗತಿಗಳನ್ನು ನಾನು ಅಲ್ಲಿಗೆ ಬಂದಾಗ ಕ್ರಮಪಡಿಸುವೆನು.

ಪಾದಟಿಪ್ಪಣಿ