ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

1 ಕೊರಿಂಥ 10:1-33

10  ಸಹೋದರರೇ, ನೀವು ಅಜ್ಞಾನಿ​ಗಳಾಗಿರಬೇಕೆಂದು ನಾನು ಬಯಸುವುದಿಲ್ಲ; ನಮ್ಮ ಪೂರ್ವಜರೆಲ್ಲರು ಮೋಡದ ನೆರಳಿನಲ್ಲಿದ್ದರು ಮತ್ತು ಎಲ್ಲರು ಸಮುದ್ರವನ್ನು ದಾಟಿಹೋದರು.  ಅವರೆಲ್ಲರು ಮೋಡದ ಮತ್ತು ಸಮುದ್ರದ ಮೂಲಕ ಮೋಶೆಯೊಂದಿಗೆ ಐಕ್ಯದಲ್ಲಿ ದೀಕ್ಷಾಸ್ನಾನ ಹೊಂದಿದರು.  ಅವರೆಲ್ಲರು ಒಂದೇ ಆಧ್ಯಾತ್ಮಿಕ ಆಹಾರವನ್ನು ಸೇವಿಸಿದರು  ಮತ್ತು ಎಲ್ಲರೂ ಒಂದೇ ಆಧ್ಯಾತ್ಮಿಕ ಪಾನೀಯವನ್ನು ಕುಡಿದರು. ಅವರು ತಮ್ಮನ್ನು ಹಿಂಬಾಲಿಸಿದ ಆಧ್ಯಾತ್ಮಿಕ ಬಂಡೆಯೊಳಗಿಂದ ಬಂದ ನೀರನ್ನು ಕುಡಿಯುತ್ತಿದ್ದರು; ಆ ಬಂಡೆಯು ಕ್ರಿಸ್ತನನ್ನು ಸೂಚಿಸಿತು.  ಆದರೂ ಅವರಲ್ಲಿ ಹೆಚ್ಚಿನವರ ಮೇಲೆ ದೇವರು ತನ್ನ ಅಂಗೀಕಾರವನ್ನು ವ್ಯಕ್ತಪಡಿಸಲಿಲ್ಲ, ಆದುದರಿಂದ ಅವರು ಅರಣ್ಯದಲ್ಲೇ ವಿನಾಶಹೊಂದಿದರು.  ಅವರು ಬಯಸಿದಂತೆ ನಾವು ಹಾನಿಕಾರಕ ವಿಷಯಗಳನ್ನು ಬಯಸುವ ವ್ಯಕ್ತಿಗಳಾಗಿರದಂತೆ ಈ ವಿಷಯಗಳು ನಮಗೆ ಉದಾಹರಣೆಗಳಾದವು.  “ಜನರು ತಿನ್ನುವುದಕ್ಕೂ ಕುಡಿಯುವುದಕ್ಕೂ ಕುಳಿತುಕೊಂಡರು ಮತ್ತು ಮೋಜುಮಾಡು​ವುದಕ್ಕಾಗಿ ಎದ್ದರು” ಎಂದು ಬರೆದಿರುವಂತೆಯೇ ಅವರಲ್ಲಿ ಕೆಲವರು ವಿಗ್ರಹಾರಾಧಕರಾದರು; ನೀವು ವಿಗ್ರಹಾರಾಧಕರಾಗಬೇಡಿ.  ಅವರಲ್ಲಿ ಕೆಲವರು ಜಾರತ್ವಮಾಡಿ ಒಂದೇ ದಿನದಲ್ಲಿ ಇಪ್ಪತ್ತಮೂರು ಸಾವಿರ ಮಂದಿ ಸತ್ತರು; ನಾವು ಜಾರತ್ವದ ರೂಢಿಯನ್ನು ಮಾಡದಿರೋಣ.  ಅವರಲ್ಲಿ ಕೆಲವರು ಕೇವಲ ಸರ್ಪಗಳಿಂದ ನಾಶವಾಗುವುದಕ್ಕಾಗಿ ಯೆಹೋವನನ್ನು ಪರೀಕ್ಷಿಸಿದಂತೆ ನಾವು ಪರೀಕ್ಷಿಸದಿರೋಣ. 10  ಅವರಲ್ಲಿ ಕೆಲವರು ಸಂಹಾರಕನ ಕೈಯಿಂದ ನಾಶವಾಗುವುದಕ್ಕಾಗಿ ಗುಣುಗುಟ್ಟಿದಂತೆ ನೀವು ಗುಣುಗುಟ್ಟಬೇಡಿರಿ. 11  ಈ ವಿಷಯಗಳು ಅವರಿಗೆ ಉದಾಹರಣೆಗಳಾಗಿ ಸಂಭವಿಸುತ್ತಾ ಹೋದವು ಮತ್ತು ವಿಷಯಗಳ ವ್ಯವಸ್ಥೆಗಳ ಅಂತ್ಯವನ್ನು ಸಮೀಪಿಸಿರುವ ನಮಗೆ ಇವು ಎಚ್ಚರಿಕೆ ನೀಡಲಿಕ್ಕಾಗಿ ಬರೆಯಲ್ಪಟ್ಟವು. 12  ಆದುದರಿಂದ ನಿಂತಿದ್ದೇನೆಂದು ನೆನಸುವವನು ಬೀಳದಂತೆ ಎಚ್ಚರವಾಗಿರಲಿ. 13  ಮನುಷ್ಯರಿಗೆ ಸಹಜವಾಗಿರುವ ಪ್ರಲೋಭನೆಯೇ ಹೊರತು ಬೇರಾವುದೂ ನಿಮಗೆ ಸಂಭವಿಸಲಿಲ್ಲ. ಆದರೆ ದೇವರು ನಂಬಿಗಸ್ತನು; ನೀವು ಸಹಿಸಿಕೊಳ್ಳಲು ಅಸಾಧ್ಯವಾಗುವಷ್ಟರ ಮಟ್ಟಿಗೆ ನೀವು ಪ್ರಲೋಭಿಸಲ್ಪಡುವಂತೆ ಆತನು ಅನುಮತಿಸುವುದಿಲ್ಲ; ನೀವು ತಾಳಿಕೊಳ್ಳಲು ಶಕ್ತರಾಗು​ವಂತೆ ಪ್ರಲೋಭನೆಯಾಗುತ್ತಲೇ ತಪ್ಪಿಸಿಕೊಳ್ಳುವ ಮಾರ್ಗವನ್ನೂ ಆತನು ಸಿದ್ಧಪಡಿಸುವನು. 14  ಆದುದರಿಂದ ನನ್ನ ಪ್ರಿಯರೇ ವಿಗ್ರಹಾರಾಧನೆಯನ್ನು ಬಿಟ್ಟು ಓಡಿ​ಹೋಗಿರಿ. 15  ನಾನು ವಿವೇಚನೆಯುಳ್ಳ ಮನುಷ್ಯರೊಂದಿಗೆ ಮಾತಾಡುವಂತೆ ಮಾತಾಡುತ್ತಿದ್ದೇನೆ; ನಾನು ಹೇಳುವುದನ್ನು ನೀವಾಗಿಯೇ ತೀರ್ಮಾನಿಸಿಕೊಳ್ಳಿರಿ. 16  ನಾವು ಸ್ತೋತ್ರಮಾಡಿ ಕುಡಿಯುವ ಸ್ತೋತ್ರದ ಪಾತ್ರೆಯು ಕ್ರಿಸ್ತನ ರಕ್ತದಲ್ಲಿ ಪಾಲುಗಾರರಾಗಿದ್ದೇವೆ ಎಂಬುದನ್ನು ಸೂಚಿಸುತ್ತದಲ್ಲವೆ? ನಾವು ಮುರಿಯುವ ರೊಟ್ಟಿಯು ಕ್ರಿಸ್ತನ ದೇಹದಲ್ಲಿ ಪಾಲುಗಾರರಾಗಿದ್ದೇವೆ ಎಂಬುದನ್ನು ಸೂಚಿಸುತ್ತದಲ್ಲವೆ? 17  ಒಂದೇ ರೊಟ್ಟಿಯಿರುವುದರಿಂದ ನಾವು ಅನೇಕರಿರುವುದಾದರೂ ಒಂದೇ ದೇಹವಾಗಿದ್ದೇವೆ; ಏಕೆಂದರೆ ನಾವೆಲ್ಲರು ಆ ಒಂದೇ ರೊಟ್ಟಿಯಲ್ಲಿ ಪಾಲುತೆಗೆದುಕೊಳ್ಳುತ್ತೇವೆ. 18  ಶಾರೀರಿಕ ರೀತಿಯಲ್ಲಿ ಇಸ್ರಾ​ಯೇಲ್ಯ​ರಾಗಿರುವವರನ್ನು ನೋಡಿರಿ; ಯಜ್ಞಾರ್ಪಿತವಾದುದನ್ನು ತಿನ್ನುವವರು ಯಜ್ಞವೇದಿಯಲ್ಲಿ ಪಾಲುಗಾರರಾಗಿದ್ದಾರೆ, ಅಲ್ಲವೆ? 19  ಹಾಗಾದರೆ ನಾನು ಏನು ಹೇಳಲಿ? ವಿಗ್ರಹಕ್ಕೆ ಅರ್ಪಿಸಿದ ಪದಾರ್ಥವು ವಿಶೇಷವಾದದ್ದಾಗಿದೆಯೊ? ಅಥವಾ ವಿಗ್ರಹವು ವಿಶೇಷವಾದದ್ದಾಗಿದೆಯೊ? 20  ಇಲ್ಲ; ಅನ್ಯಜನಾಂಗಗಳವರು ತಾವು ಅರ್ಪಿಸುವ ಯಜ್ಞಗಳನ್ನು ದೆವ್ವಗಳಿಗೆ ಅರ್ಪಿಸುತ್ತಾರೆಯೇ ಹೊರತು ದೇವರಿಗಲ್ಲ ಎಂದು ನಾನು ಹೇಳುತ್ತೇನೆ; ನೀವು ದೆವ್ವಗಳೊಂದಿಗೆ ಪಾಲುಗಾರರಾಗಬೇಕೆಂದು ನಾನು ಬಯಸುವುದಿಲ್ಲ. 21  ನೀವು ಯೆಹೋವನ ಪಾತ್ರೆಯಲ್ಲಿಯೂ ದೆವ್ವಗಳ ಪಾತ್ರೆಯಲ್ಲಿಯೂ ಕುಡಿಯಲಾರಿರಿ; ನೀವು “ಯೆಹೋವನ ಮೇಜು” ಮತ್ತು ದೆವ್ವಗಳ ಮೇಜು ​ಇವೆರಡರಲ್ಲಿಯೂ ಪಾಲುಗಾರರಾಗಲು ಸಾಧ್ಯವಿಲ್ಲ. 22  ಅಥವಾ, “ನಾವು ಯೆಹೋವನನ್ನು ರೇಗಿಸಬೇಕೆಂದಿದ್ದೇವೊ”? ನಾವು ಆತನಿಗಿಂತ ಬಲಿಷ್ಠರಲ್ಲ, ಅಲ್ಲವೆ? 23  ಎಲ್ಲ ವಿಷಯಗಳನ್ನು ಮಾಡಲು ನನಗೆ ಅನುಮತಿ ಇದೆ, ಆದರೆ ಎಲ್ಲವೂ ಪ್ರಯೋಜನಕರವಾಗಿರುವುದಿಲ್ಲ. ಎಲ್ಲ ವಿಷಯಗಳನ್ನು ಮಾಡಲು ನನಗೆ ಅನುಮತಿ ಇದೆ, ಆದರೆ ಎಲ್ಲವೂ ಭಕ್ತಿವೃದ್ಧಿಮಾಡುವುದಿಲ್ಲ. 24  ಪ್ರತಿಯೊಬ್ಬನು ತನ್ನ ಸ್ವಹಿತವನ್ನು ಚಿಂತಿಸದೆ ಪರಹಿತವನ್ನು ಚಿಂತಿಸುತ್ತಿರಲಿ. 25  ಮಾಂಸದ ಮಾರುಕಟ್ಟೆಯಲ್ಲಿ ಮಾರುವಂಥದ್ದೆಲ್ಲವನ್ನೂ ನಿಮ್ಮ ಮನಸ್ಸಾಕ್ಷಿಯ ನಿಮಿತ್ತ ಯಾವುದೇ ವಿಚಾರಣೆಮಾಡದೆ ತಿನ್ನಿರಿ; 26  ಏಕೆಂದರೆ “ಭೂಮಿಯೂ ಅದರಲ್ಲಿರುವ ಸಮಸ್ತವೂ ಯೆಹೋವನಿಗೆ ಸೇರಿದ್ದಾಗಿದೆ.” 27  ಅವಿಶ್ವಾಸಿಗಳಲ್ಲಿ ಒಬ್ಬನು ನಿಮ್ಮನ್ನು ಊಟಕ್ಕೆ ಆಮಂತ್ರಿಸಿದಾಗ ನೀವು ಹೋಗಲು ಬಯಸುವಲ್ಲಿ, ನಿಮ್ಮ ಮುಂದೆ ಇಟ್ಟಿರುವುದನ್ನೆಲ್ಲ ನಿಮ್ಮ ಮನಸ್ಸಾಕ್ಷಿಯ ನಿಮಿತ್ತ ಯಾವುದೇ ವಿಚಾರಣೆಮಾಡದೆ ತಿನ್ನಿರಿ. 28  ಆದರೆ ಯಾರಾದರು ನಿಮಗೆ “ಇದು ಯಜ್ಞವಾಗಿ ಅರ್ಪಿಸಿದ್ದು” ಎಂದು ಹೇಳುವುದಾದರೆ, ಹಾಗೆ ಹೇಳಿದವನ ನಿಮಿತ್ತವಾಗಿಯೂ ಅವನ ಮನಸ್ಸಾಕ್ಷಿಯ ನಿಮಿತ್ತವಾಗಿಯೂ ಅದನ್ನು ತಿನ್ನಬೇಡಿರಿ. 29  “ಮನಸ್ಸಾಕ್ಷಿ” ಎಂದು ನಾನು ಹೇಳುವಾಗ ನಿಮ್ಮ ಮನಸ್ಸಾಕ್ಷಿಯನ್ನಲ್ಲ ಆ ಇನ್ನೊಬ್ಬ ವ್ಯಕ್ತಿಯ ಮನಸ್ಸಾಕ್ಷಿಯನ್ನು ಸೂಚಿಸುತ್ತಿದ್ದೇನೆ. ಇನ್ನೊಬ್ಬ ವ್ಯಕ್ತಿಯ ಮನಸ್ಸಾಕ್ಷಿಯಿಂದ ನನ್ನ ಸ್ವಾತಂತ್ರ್ಯಕ್ಕೆ ಏಕೆ ತೀರ್ಪಾಗಬೇಕು? 30  ನಾನು ದೇವರಿಗೆ ಕೃತಜ್ಞತೆ ಸಲ್ಲಿಸಿ ತಿನ್ನುವುದಾದರೆ, ನಾನು ಯಾವುದಕ್ಕಾಗಿ ಕೃತಜ್ಞತೆ ಸಲ್ಲಿಸಿದ್ದೇನೊ ಅದರ ನಿಮಿತ್ತ ನನಗೆ ಏಕೆ ದೂಷಣೆಯಾಗಬೇಕು? 31  ಆದುದರಿಂದ ನೀವು ತಿಂದರೂ ಕುಡಿದರೂ ಇನ್ನೇನು ಮಾಡಿದರೂ ಎಲ್ಲವನ್ನು ದೇವರ ಮಹಿಮೆಗಾಗಿ ಮಾಡಿರಿ. 32  ಯೆಹೂದ್ಯರಿಗಾಗಲಿ ಗ್ರೀಕರಿಗಾಗಲಿ ದೇವರ ಸಭೆಗಾಗಲಿ ಎಡವಲು ಕಾರಣ​ವಾಗಬೇಡಿರಿ. 33  ನಾನಂತೂ ಎಲ್ಲ ವಿಷಯಗಳಲ್ಲಿ ಎಲ್ಲ ಜನರನ್ನು ಮೆಚ್ಚಿಸುವವನಾಗಿದ್ದೇನೆ; ನಾನು ಸ್ವಪ್ರಯೋಜನವನ್ನು ಚಿಂತಿಸದೆ ಅನೇಕರಿಗೆ ರಕ್ಷಣೆಯಾಗ​ಬೇಕೆಂದು ಅವರ ಪ್ರಯೋಜನವನ್ನು ಚಿಂತಿಸುವವನಾಗಿದ್ದೇನೆ.

ಪಾದಟಿಪ್ಪಣಿ