ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಲೂಕ 8:1-56

8  ಸ್ವಲ್ಪ ಸಮಯದ ನಂತರ ಅವನು ದೇವರ ರಾಜ್ಯದ ಸುವಾರ್ತೆಯನ್ನು ಸಾರುತ್ತಾ ಊರಿಂದ ಊರಿಗೂ ಹಳ್ಳಿಯಿಂದ ಹಳ್ಳಿಗೂ ಪ್ರಯಾಣಿಸಿದನು ಮತ್ತು ಆ ಹನ್ನೆರಡು ಮಂದಿ ಶಿಷ್ಯರೂ ಅವನೊಂದಿಗಿದ್ದರು.  ದೆವ್ವಗಳ ಕಾಟದಿಂದಲೂ ರೋಗಗಳಿಂದಲೂ ಗುಣಹೊಂದಿದ್ದ ಕೆಲವು ಸ್ತ್ರೀಯರು ಅವನೊಂದಿಗಿದ್ದರು. ಅವರು ಯಾರೆಂದರೆ, ಏಳು ದೆವ್ವಗಳು ಬಿಟ್ಟುಹೋಗಿದ್ದ ಮಗ್ದಲದವಳೆಂಬ ಮರಿಯಳು,  ಹೆರೋದನ ಮನೆವಾರ್ತೆಯ ಮೇಲ್ವಿಚಾರಕನಾದ ಕೂಜನ ಹೆಂಡತಿಯಾದ ಯೊಹನ್ನ, ಸುಸನ್ನ ಮತ್ತು ಇನ್ನೂ ಅನೇಕರು. ಇವರು ತಮ್ಮ ಸ್ವತ್ತುಗಳಿಂದ ಅವರಿಗೆ ಉಪಚಾರಮಾಡುತ್ತಿದ್ದರು.  ಬೇರೆ ಬೇರೆ ಊರುಗಳಿಂದ ಅವನ ಬಳಿಗೆ ಬಂದಿದ್ದ ಜನರೊಂದಿಗೆ ಒಂದು ದೊಡ್ಡ ಜನಸಮೂಹವು ಒಟ್ಟುಗೂಡಿದಾಗ ಅವನು ದೃಷ್ಟಾಂತದ ಮೂಲಕ ಮಾತಾಡಿದನು:  “ಬಿತ್ತುವವನು ಬೀಜವನ್ನು ಬಿತ್ತುವುದಕ್ಕೆ ಹೊರಟನು. ಅವನು ಬಿತ್ತುತ್ತಿದ್ದಾಗ ಕೆಲವು ಬೀಜಗಳು ದಾರಿಯ ಮಗ್ಗುಲಲ್ಲಿ ಬಿದ್ದು ತುಳಿಯಲ್ಪಟ್ಟವು ಮತ್ತು ಆಕಾಶದ ಹಕ್ಕಿಗಳು ಬಂದು ಅವುಗಳನ್ನು ತಿಂದುಬಿಟ್ಟವು.  ಬೇರೆ ಕೆಲವು ಬಂಡೆಯ ಮೇಲೆ ಬಿದ್ದವು; ಅವು ಮೊಳೆತ ನಂತರ ತೇವಾಂಶವಿಲ್ಲದ ಕಾರಣ ಒಣಗಿಹೋದವು.  ಮತ್ತೆ ಕೆಲವು ಮುಳ್ಳುಗಿಡಗಳಿರುವ ನೆಲದಲ್ಲಿ ಬಿದ್ದವು; ಅವುಗಳೊಂದಿಗೆ ಬೆಳೆದ ಮುಳ್ಳುಗಿಡಗಳು ಅವುಗಳನ್ನು ಅದುಮಿ​ಬಿಟ್ಟವು.  ಇನ್ನು ಕೆಲವು ಒಳ್ಳೆಯ ನೆಲದಲ್ಲಿ ಬಿದ್ದು ಮೊಳೆತ ಬಳಿಕ ನೂರರಷ್ಟು ಫಲಕೊಟ್ಟವು.” ಅವನು ಈ ವಿಷಯಗಳನ್ನು ಹೇಳಿದ ಬಳಿಕ, “ಆಲಿಸಲು ಕಿವಿಗಳಿರುವವನು ಆಲಿಸಲಿ” ಎಂದು ಸ್ವರವೆತ್ತಿ ಹೇಳಿದನು.  ಆದರೆ ಅವನ ಶಿಷ್ಯರು ಈ ದೃಷ್ಟಾಂತದ ಅರ್ಥವೇನಾಗಿರಬಹುದು ಎಂದು ಅವನನ್ನು ಕೇಳಿದರು. 10  ಆಗ ಅವನು, “ದೇವರ ರಾಜ್ಯದ ಪವಿತ್ರ ರಹಸ್ಯಗಳನ್ನು ಅರ್ಥಮಾಡಿಕೊಳ್ಳುವ ಅವಕಾಶವು ನಿಮಗೆ ಕೊಡಲ್ಪಟ್ಟಿದೆ, ಆದರೆ ಉಳಿದವರಿಗೆ ಅದು, ನೋಡುತ್ತಿರುವುದಾದರೂ ಅವರು ವ್ಯರ್ಥವಾಗಿ ನೋಡುವ ಮತ್ತು ಕೇಳಿಸಿಕೊಳ್ಳುತ್ತಿರುವುದಾದರೂ ಅವರಿಗೆ ಅದರ ಅರ್ಥ ತಿಳಿಯದಿರುವ ಉದ್ದೇಶದಿಂದ ದೃಷ್ಟಾಂತಗಳಾಗಿಯೇ ಉಳಿಯುತ್ತದೆ. 11  ಆ ದೃಷ್ಟಾಂತದ ಅರ್ಥವು ಹೀಗಿದೆ: ಬೀಜವು ದೇವರ ವಾಕ್ಯವಾಗಿದೆ. 12  ಕೆಲವರು ವಾಕ್ಯವನ್ನು ಕೇಳುತ್ತಾರಾದರೂ ಬಳಿಕ ಪಿಶಾಚನು ಬಂದು ಅವರು ನಂಬಿ ರಕ್ಷಣೆ​ಯನ್ನು ಹೊಂದದಂತೆ ಅವರ ಹೃದಯದಿಂದ ಆ ವಾಕ್ಯವನ್ನು ತೆಗೆದು​ಹಾಕುತ್ತಾನೆ. ಇವರೇ ದಾರಿಯ ಮಗ್ಗುಲಲ್ಲಿ ಬಿದ್ದ ಬೀಜವಾಗಿದ್ದಾರೆ. 13  ಕೆಲವರು ವಾಕ್ಯವನ್ನು ಕೇಳಿಸಿಕೊಂಡಾಗ ಆನಂದದಿಂದ ಅದನ್ನು ಸ್ವೀಕರಿಸುತ್ತಾರೆ; ಆದರೆ ಬೇರಿಲ್ಲದ ಕಾರಣ ಅವರು ಸ್ವಲ್ಪ ಕಾಲದ ವರೆಗೆ ಮಾತ್ರ ನಂಬಿದ್ದು ಪರೀಕ್ಷೆಯ ಕಾಲ ಬಂದಾಗ ಬಿದ್ದುಹೋಗುತ್ತಾರೆ. ಇವರೇ ಬಂಡೆಯ ಮೇಲೆ ಬಿದ್ದ ಬೀಜವಾಗಿದ್ದಾರೆ. 14  ಇನ್ನು ಕೆಲವರು ವಾಕ್ಯವನ್ನು ಕೇಳುತ್ತಾರೆ, ಆದರೆ ಈ ಜೀವನದ ಚಿಂತೆಗಳು, ಐಶ್ವರ್ಯ ಮತ್ತು ಸುಖಭೋಗಗಳಿಂದ ದಾರಿತಪ್ಪಿದವರಾಗಿ ಸಂಪೂರ್ಣವಾಗಿ ಅದುಮಲ್ಪಟ್ಟು ಯಾವುದನ್ನೂ ಪರಿಪಕ್ವತೆಗೆ ತರುವುದಿಲ್ಲ; ಇವರೇ ಮುಳ್ಳುಗಿಡಗಳಿರುವ ನೆಲದಲ್ಲಿ ಬಿದ್ದ ಬೀಜವಾಗಿದ್ದಾರೆ. 15  ಕೆಲವರು ಉತ್ತಮವಾದ ಒಳ್ಳೆಯ ಹೃದಯದಿಂದ ವಾಕ್ಯವನ್ನು ಕೇಳಿ, ಅದನ್ನು ಹೃದಯದಲ್ಲಿ ಇಟ್ಟುಕೊಂಡು ತಾಳ್ಮೆಯಿಂದ ಫಲವನ್ನು ಕೊಡುತ್ತಾರೆ; ಇವರೇ ಒಳ್ಳೆಯ ನೆಲದಲ್ಲಿ ಬಿದ್ದ ಬೀಜ​ವಾಗಿದ್ದಾರೆ. 16  “ಯಾವನೂ ದೀಪವನ್ನು ಹಚ್ಚಿ ಅದನ್ನು ಪಾತ್ರೆಯಿಂದ ಮುಚ್ಚುವುದಿಲ್ಲ ಅಥವಾ ಮಂಚದ ಕೆಳಗೆ ಇಡುವುದಿಲ್ಲ; ಆದರೆ ಮನೆಯೊಳಗೆ ಬರುವವರಿಗೆ ಬೆಳಕು ಕಾಣುವಂತೆ ಅದನ್ನು ದೀಪಸ್ತಂಭದ ಮೇಲೆ ಇಡುತ್ತಾನೆ. 17  ಪ್ರಕಟವಾಗದೆ ಇರುವಂಥ ಯಾವ ರಹಸ್ಯವೂ ಇಲ್ಲ; ಬೈಲಿಗೆ ತರಲ್ಪಡದ ಮತ್ತು ಬೆಳಕಿಗೆ ಬಾರದ ಯಾವ ಗುಟ್ಟೂ ಇಲ್ಲ. 18  ಆದುದರಿಂದ ನೀವು ಹೇಗೆ ಕಿವಿಗೊಡುತ್ತೀರಿ ಎಂಬುದಕ್ಕೆ ಗಮನಕೊಡಿರಿ; ಏಕೆಂದರೆ ಇದ್ದವನಿಗೆ ಹೆಚ್ಚು ಕೊಡಲ್ಪಡುವುದು, ಆದರೆ ಇಲ್ಲದವನಿಂದ ಅವನು ತನ್ನ ಬಳಿ ಇದೆಯೆಂದು ಭಾವಿಸುವಂಥದ್ದೂ ತೆಗೆದುಕೊಳ್ಳಲ್ಪಡುವುದು” ಎಂದು ಹೇಳಿದನು. 19  ಆಗ ಅವನ ತಾಯಿಯೂ ತಮ್ಮಂದಿರೂ ಅವನಿದ್ದಲ್ಲಿಗೆ ಬಂದು ಜನರ ಗುಂಪಿನ ಕಾರಣ ಅವನ ಹತ್ತಿರ ಬರಲಾರದೆ ಇದ್ದರು. 20  ಆದರೆ ಜನರು ಅವನಿಗೆ, “ನಿನ್ನ ತಾಯಿಯೂ ತಮ್ಮಂದಿರೂ ನಿನ್ನನ್ನು ನೋಡಲಿಕ್ಕಾಗಿ ಹೊರಗೆ ನಿಂತಿದ್ದಾರೆ” ಎಂದರು. 21  ಅದಕ್ಕೆ ಪ್ರತ್ಯುತ್ತರವಾಗಿ ಅವನು ಅವರಿಗೆ, “ದೇವರ ವಾಕ್ಯವನ್ನು ಕೇಳಿ ಅದರಂತೆ ಮಾಡುವವರೇ ನನ್ನ ತಾಯಿಯೂ ತಮ್ಮಂದಿರೂ ಆಗಿದ್ದಾರೆ” ಎಂದು ಹೇಳಿದನು. 22  ಒಂದು ದಿನ ಅವನೂ ಅವನ ಶಿಷ್ಯರೂ ದೋಣಿಯನ್ನು ಹತ್ತಿದರು ಮತ್ತು ಅವನು ಅವರಿಗೆ, “ನಾವು ಸರೋವರದ ಆಚೇದಡಕ್ಕೆ ಹೋಗೋಣ” ಎಂದಾಗ ಅವರು ಅಲ್ಲಿಂದ ಹೊರಟರು. 23  ಅವರು ದೋಣಿಯಲ್ಲಿ ಹೋಗುತ್ತಿರುವಾಗ ಅವನಿಗೆ ನಿದ್ರೆಹತ್ತಿತು. ಆಗ ಭೀಕರವಾದ ಬಿರುಗಾಳಿಯು ಸರೋವರದ ಮೇಲೆ ಬೀಸಲು ದೋಣಿಯು ನೀರಿನಿಂದ ತುಂಬತೊಡಗಿತು ಮತ್ತು ಅವರು ಅಪಾಯದಲ್ಲಿದ್ದರು. 24  ಕೊನೆಗೆ ಅವರು ಅವನ ಬಳಿಗೆ ಹೋಗಿ ಅವನನ್ನು ಎಬ್ಬಿಸಿ, “ಉಪದೇಶಕನೇ, ಉಪದೇಶಕನೇ, ನಾವು ಮುಳುಗಿ ಸಾಯಲಿಕ್ಕಿದ್ದೇವೆ” ಎಂದು ಹೇಳಿದರು. ಆಗ ಅವನು ಎದ್ದು ಗಾಳಿಯನ್ನೂ ರಭಸವಾಗಿ ಬರುತ್ತಿದ್ದ ನೀರನ್ನೂ ಗದರಿಸಿದಾಗ ಅವು ನಿಂತು ಎಲ್ಲವೂ ಶಾಂತವಾಯಿತು. 25  ಆಗ ಅವನು ಅವರಿಗೆ, “ನಿಮ್ಮ ನಂಬಿಕೆ ಎಲ್ಲಿ?” ಎಂದು ಕೇಳಿದನು. ಆದರೆ ಅವರು ಭಯಹಿಡಿದವರಾಗಿ ಆಶ್ಚರ್ಯದಿಂದ, “ಇವನು ನಿಜವಾಗಿಯೂ ಯಾರು? ಗಾಳಿಗೆ ಮತ್ತು ನೀರಿಗೆ ಸಹ ಇವನು ಅಪ್ಪಣೆಕೊಡುತ್ತಾನೆ ಮತ್ತು ಅವು ಅವನ ಮಾತುಗಳನ್ನು ಪಾಲಿಸುತ್ತವೆ” ಎಂದು ಒಬ್ಬರಿಗೊಬ್ಬರು ಮಾತಾಡಿ​ಕೊಂಡರು. 26  ಬಳಿಕ ಅವರು ಗಲಿಲಾಯಕ್ಕೆ ವಿರುದ್ಧ ದಿಕ್ಕಿನಲ್ಲಿದ್ದ ಗೆರಸೇನರ ಪ್ರಾಂತವನ್ನು ತಲಪಿದರು. 27  ಅವನು ದೋಣಿಯಿಂದ ದಡಕ್ಕೆ ಇಳಿದ ಕೂಡಲೆ ಅದೇ ಊರಿನವನಾಗಿದ್ದ ದೆವ್ವಹಿಡಿದಿದ್ದ ಒಬ್ಬ ಮನುಷ್ಯನು ಅವನನ್ನು ಎದುರುಗೊಂಡನು. ಬಹುಕಾಲದಿಂದ ಅವನು ಬಟ್ಟೆಯನ್ನು ಹಾಕಿಕೊಳ್ಳದೆ, ಮನೆಯಲ್ಲಿ ಅಲ್ಲ ಸಮಾಧಿಗಳ ಮಧ್ಯೆ ವಾಸಿಸುತ್ತಿದ್ದನು. 28  ಯೇಸುವನ್ನು ಕಂಡ ಕೂಡಲೆ ಅವನು ಜೋರಾಗಿ ಕೂಗಿ ಅವನ ಮುಂದೆ ಬಿದ್ದು, “ಯೇಸುವೇ, ಮಹೋನ್ನತನಾದ ದೇವರ ಪುತ್ರನೇ, ನನ್ನ ಗೊಡವೆ ನಿನಗೇಕೆ? ನನ್ನನ್ನು ಕಾಡಬೇಡವೆಂದು ನಿನ್ನನ್ನು ಬೇಡಿಕೊಳ್ಳುತ್ತೇನೆ” ಎಂದು ಗಟ್ಟಿಯಾಗಿ ಹೇಳಿದನು. 29  (ಏಕೆಂದರೆ ಆ ಮನುಷ್ಯನನ್ನು ಬಿಟ್ಟುಹೋಗುವಂತೆ ಅವನು ಆ ದೆವ್ವಕ್ಕೆ ಅಪ್ಪಣೆಕೊಡುತ್ತಾ ಇದ್ದನು. ಅದು ಬಹಳ ಸಮಯದಿಂದ ಅವನನ್ನು ಹಿಡಿದಿತ್ತು; ಅವನನ್ನು ಕಾವಲಲ್ಲಿಟ್ಟು ಪದೇ ಪದೇ ಸರಪಣಿಗಳಿಂದ ಕಟ್ಟಲಾಗುತ್ತಿತ್ತಾದರೂ ಅವನು ಆ ಕಟ್ಟುಗಳನ್ನು ಮುರಿದುಹಾಕುತ್ತಿದ್ದನು ಮತ್ತು ಆ ದೆವ್ವವು ಅವನನ್ನು ಏಕಾಂತವಾದ ಸ್ಥಳಗಳಿಗೆ ಓಡಿಸಿಕೊಂಡು ಹೋಗುತ್ತಿತ್ತು.) 30  ಯೇಸು ಅವನಿಗೆ, “ನಿನ್ನ ಹೆಸರೇನು?” ಎಂದು ಕೇಳಿದಾಗ ಅವನು, “ದಂಡು” ಎಂದು ಹೇಳಿದನು; ಏಕೆಂದರೆ ಅನೇಕ ದೆವ್ವಗಳು ಅವನೊಳಗೆ ಹೊಕ್ಕಿದ್ದವು. 31  ಮತ್ತು ತಮಗೆ ಅಗಾಧ ಸ್ಥಳಕ್ಕೆ ಹೋಗುವಂತೆ ಅಪ್ಪಣೆಕೊಡಬಾರದೆಂದು ಅವು ಅವನನ್ನು ಬೇಡಿಕೊಳ್ಳುತ್ತಾ ಇದ್ದವು. 32  ಅಲ್ಲಿದ್ದ ಬೆಟ್ಟದ ಮೇಲೆ ಹಂದಿಗಳ ದೊಡ್ಡ ಹಿಂಡು ಮೇಯುತ್ತಾ ಇತ್ತು. ಅವುಗಳೊಳಗೆ ಸೇರಿಕೊಳ್ಳಲು ತಮಗೆ ಅನುಮತಿಕೊಡುವಂತೆ ಅವು ಅವನನ್ನು ಬೇಡಿಕೊಂಡಾಗ ಅವನು ಅವುಗಳಿಗೆ ಅನುಮತಿಕೊಟ್ಟನು. 33  ಆಗ ದೆವ್ವಗಳು ಆ ಮನುಷ್ಯನಿಂದ ಹೊರಬಂದು ಹಂದಿಗಳೊಳಗೆ ಸೇರಿಕೊಂಡವು; ಆ ಹಂದಿಗಳ ಹಿಂಡು ಬೆಟ್ಟದ ಕಡಿದಾದ ಸ್ಥಳದಿಂದ ಸರೋವರಕ್ಕೆ ಧುಮುಕಿ ಮುಳುಗಿ​ಹೋಯಿತು. 34  ಅವುಗಳನ್ನು ಮೇಯಿಸುತ್ತಿದ್ದವರು ನಡೆದ ಸಂಗತಿಯನ್ನು ನೋಡಿ ಓಡಿಹೋಗಿ ಆ ಊರಿನಲ್ಲಿಯೂ ಗ್ರಾಮ​ಪ್ರದೇಶದಲ್ಲಿಯೂ ಅದನ್ನು ತಿಳಿಸಿದರು. 35  ಜನರು ನಡೆದ ಸಂಗತಿಯನ್ನು ನೋಡಲಿಕ್ಕಾಗಿ ಹೊರಟು ಯೇಸುವಿನ ಬಳಿಗೆ ಬಂದಾಗ, ದೆವ್ವಗಳು ಬಿಟ್ಟುಹೋಗಿದ್ದ ಆ ಮನುಷ್ಯನು ಬಟ್ಟೆಯನ್ನು ಧರಿಸಿಕೊಂಡು ಸ್ವಸ್ಥಚಿತ್ತನಾಗಿ ಯೇಸುವಿನ ಪಾದಗಳ ಬಳಿಯಲ್ಲಿ ಕುಳಿತುಕೊಂಡಿರುವುದನ್ನು ನೋಡಿ ಅವರು ಭಯಭೀತರಾದರು. 36  ನಡೆದ ಸಂಗತಿಯನ್ನು ನೋಡಿದ್ದವರು ದೆವ್ವಹಿಡಿದಿದ್ದ ಆ ಮನುಷ್ಯನು ಹೇಗೆ ವಾಸಿಮಾಡಲ್ಪಟ್ಟನು ಎಂಬುದನ್ನು ಅವರಿಗೆ ವರದಿಮಾಡಿದರು. 37  ಗೆರಸೇನರ ಸುತ್ತಲಿದ್ದ ಸೀಮೆಯ ಜನರಿಗೆಲ್ಲ ಮಹಾ ಭಯಹಿಡಿದುದರಿಂದ ತಮ್ಮನ್ನು ಬಿಟ್ಟುಹೋಗುವಂತೆ ಅವನನ್ನು ಕೇಳಿಕೊಂಡರು. ಆಗ ಅವನು ದೋಣಿಯನ್ನು ಹತ್ತಿ ಹಿಂದಿರುಗಿದನು. 38  ಆದರೆ ದೆವ್ವಗಳು ಬಿಟ್ಟುಹೋಗಿದ್ದ ಆ ಮನುಷ್ಯನು ತನ್ನನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವಂತೆ ಅವನನ್ನು ಬೇಡಿಕೊಳ್ಳುತ್ತಾ ಇದ್ದನು; ಆದರೆ ಅವನು ಅದಕ್ಕೆ ಒಪ್ಪದೆ, 39  “ನೀನು ನಿನ್ನ ಮನೆಗೆ ಹಿಂದಿರುಗಿ ಹೋಗು ಮತ್ತು ದೇವರು ನಿನಗೆ ಮಾಡಿದ ವಿಷಯಗಳನ್ನು ತಿಳಿಸುತ್ತಾ ಇರು” ಎಂದು ಹೇಳಿ ಆ ಮನುಷ್ಯನನ್ನು ಕಳುಹಿಸಿಬಿಟ್ಟನು. ಅದರಂತೆಯೇ ಅವನು ಹೊರಟು ಯೇಸು ತನಗೆ ಮಾಡಿದ್ದನ್ನೆಲ್ಲ ಆ ಊರಿನಾದ್ಯಂತ ಘೋಷಿಸುತ್ತಾ ಹೋದನು. 40  ಯೇಸು ಹಿಂದಿರುಗಿ ಬಂದಾಗ ಜನರೆಲ್ಲರೂ ಅವನನ್ನು ನಿರೀಕ್ಷಿಸುತ್ತಿದ್ದ ಕಾರಣ ಅವನನ್ನು ಆದರದಿಂದ ಬರಮಾಡಿಕೊಂಡರು. 41  ಆಗ ಸಭಾಮಂದಿರದ ಸಭಾಪತಿಯಾಗಿದ್ದ ಯಾಯಿಾರನೆಂಬ ಒಬ್ಬ ಮನುಷ್ಯನು ಬಂದು ಯೇಸುವಿನ ಪಾದಗಳಿಗೆ ಬಿದ್ದು ತನ್ನ ಮನೆಗೆ ಬರುವಂತೆ ಅವನನ್ನು ಬೇಡಿಕೊಂಡನು; 42  ಏಕೆಂದರೆ ಸುಮಾರು ಹನ್ನೆರಡು ವರ್ಷದವಳಾದ ಅವನ ಒಬ್ಬಳೇ ಮಗಳು ಸಾಯುವ ಸ್ಥಿತಿಯಲ್ಲಿದ್ದಳು. ಅವನು ಹೋಗುತ್ತಿರುವಾಗ ಜನರ ಗುಂಪು ಅವನನ್ನು ಮುತ್ತಿಕೊಂಡಿತು. 43  ಆಗ ಹನ್ನೆರಡು ವರ್ಷಗಳಿಂದ ರಕ್ತ​ಸ್ರಾವರೋಗಕ್ಕೆ ತುತ್ತಾಗಿದ್ದು ಯಾರಿಂದಲೂ ವಾಸಿಯಾಗಲಾರದೆ ಇದ್ದ ಒಬ್ಬ ಸ್ತ್ರೀಯು, 44  ಹಿಂದಿನಿಂದ ಬಂದು ಅವನ ಮೇಲಂಗಿಯ ಅಂಚನ್ನು ಮುಟ್ಟಿದಳು; ಆ ಕೂಡಲೆ ಅವಳ ರಕ್ತಸ್ರಾವವು ನಿಂತುಹೋಯಿತು. 45  ಆಗ ಯೇಸು, “ನನ್ನನ್ನು ಮುಟ್ಟಿದವರು ಯಾರು?” ಎಂದು ಕೇಳಿದನು. ಎಲ್ಲರೂ ನಿರಾಕರಿಸುತ್ತಿದ್ದಾಗ ಪೇತ್ರನು, “ಉಪದೇಶಕನೇ, ಜನರು ನಿನ್ನನ್ನು ಸುತ್ತುವರಿದು ನಿನ್ನ ಮೈಮೇಲೆ ಬೀಳುತ್ತಿದ್ದಾರಲ್ಲಾ” ಎಂದನು. 46  ಆದರೂ ಯೇಸು, “ಯಾರೋ ನನ್ನನ್ನು ಮುಟ್ಟಿದರು, ಏಕೆಂದರೆ ನನ್ನಿಂದ ಶಕ್ತಿಯು ಹೊರಟದ್ದನ್ನು ನಾನು ಗ್ರಹಿಸಿದೆ” ಎಂದು ಹೇಳಿದನು. 47  ತಾನು ಅವನ ಗಮನದಿಂದ ತಪ್ಪಿಸಿಕೊಂಡಿಲ್ಲ ಎಂಬುದನ್ನು ಅರಿತವಳಾಗಿ ಆ ಸ್ತ್ರೀಯು ನಡುಗುತ್ತಾ ಬಂದು ಅವನ ಮುಂದೆ ಅಡ್ಡಬಿದ್ದು, ಯಾವ ಕಾರಣಕ್ಕಾಗಿ ತಾನು ಅವನನ್ನು ಮುಟ್ಟಿದೆನೆಂದೂ ತಾನು ಹೇಗೆ ಆ ಕೂಡಲೆ ವಾಸಿಯಾದೆನೆಂದೂ ಎಲ್ಲರ ಮುಂದೆ ಹೇಳಿದಳು. 48  ಅದಕ್ಕೆ ಅವನು ಅವಳಿಗೆ, “ಮಗಳೇ, ನಿನ್ನ ನಂಬಿಕೆಯು ನಿನ್ನನ್ನು ವಾಸಿಮಾಡಿದೆ. ಸಮಾಧಾನದಿಂದ ಹೋಗು” ಎಂದು ​ಹೇಳಿದನು. 49  ಅವನು ಇನ್ನೂ ಮಾತಾಡುತ್ತಿದ್ದಾಗಲೇ ಸಭಾಮಂದಿರದ ಸಭಾಪತಿಯ ಪ್ರತಿನಿಧಿ​ಯೊಬ್ಬನು ಬಂದು, “ನಿನ್ನ ಮಗಳು ತೀರಿಹೋದಳು; ಇನ್ನು ಬೋಧಕನಿಗೆ ತೊಂದರೆ ಕೊಡಬೇಡ” ಎಂದು ಹೇಳಿದನು. 50  ಇದನ್ನು ಕೇಳಿ ಯೇಸು ಅವನಿಗೆ, “ಭಯಪಡಬೇಡ, ನಂಬಿಕೆ ಮಾತ್ರ ಇರಲಿ; ಅವಳು ಬದುಕುವಳು” ಎಂದು ಹೇಳಿದನು. 51  ಅವನು ಆ ಮನೆಯನ್ನು ತಲಪಿದಾಗ ಪೇತ್ರ, ಯೋಹಾನ, ಯಾಕೋಬ ಮತ್ತು ಆ ಹುಡುಗಿಯ ತಂದೆತಾಯಿಗಳನ್ನು ಹೊರತು ಬೇರೆ ಯಾರನ್ನೂ ತನ್ನೊಂದಿಗೆ ಒಳಗೆ ಬರಗೊಡಿಸಲಿಲ್ಲ. 52  ಜನರೆಲ್ಲರೂ ಅಳುತ್ತಾ ಆ ಹುಡುಗಿಗೋಸ್ಕರ ದುಃಖದಿಂದ ಎದೆಬಡಿದುಕೊಳ್ಳುತ್ತಾ ಇದ್ದರು. ಆಗ ಅವನು, “ಅಳುವುದನ್ನು ನಿಲ್ಲಿಸಿ. ಅವಳು ಸತ್ತಿಲ್ಲ, ನಿದ್ರೆಮಾಡುತ್ತಿದ್ದಾಳೆ” ಅಂದನು. 53  ಇದನ್ನು ಕೇಳಿ ಅವರು ತಿರಸ್ಕಾರಭಾವದಿಂದ ನಗತೊಡಗಿದರು, ಏಕೆಂದರೆ ಅವಳು ಸತ್ತಿದ್ದಾಳೆಂಬುದು ಅವರಿಗೆ ಗೊತ್ತಿತ್ತು. 54  ಆದರೆ ಅವನು ಅವಳ ಕೈಹಿಡಿದು “ಹುಡುಗಿ, ಎದ್ದೇಳು!” ಎಂದು ಕೂಗಿ ಕರೆದನು. 55  ಆಗ ಅವಳು ಜೀವಿತಳಾಗಿ* ತಕ್ಷಣವೇ ಎದ್ದಳು; ಅವಳಿಗೆ ಏನನ್ನಾದರೂ ತಿನ್ನಲು ಕೊಡುವಂತೆ ಅವನು ಅಪ್ಪಣೆಕೊಟ್ಟನು. 56  ಅವಳ ತಂದೆತಾಯಿಗಳು ಬೆರಗಾದರು; ಆದರೆ ನಡೆದ ಸಂಗತಿಯನ್ನು ಯಾರಿಗೂ ತಿಳಿಸಬಾರದೆಂದು ಅವನು ಅವರಿಗೆ ಖಂಡಿತವಾಗಿ ಹೇಳಿದನು.

ಪಾದಟಿಪ್ಪಣಿ

ಲೂಕ 8:55 ಅಥವಾ “ಅವಳ ಉಸಿರು (ಜೀವಶಕ್ತಿ) ಹಿಂದಿರುಗಲಾಗಿ.”