ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಆನ್‌ಲೈನ್‌ ಬೈಬಲ್ | ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರ

ಲೂಕ 7:1-50

7  ಅವನು ಜನರು ಕೇಳಿಸಿಕೊಳ್ಳುವಂತೆ ತನ್ನ ಎಲ್ಲ ಮಾತುಗಳನ್ನು ಹೇಳಿ ಮುಗಿಸಿದ ಬಳಿಕ ಕಪೆರ್ನೌಮಿಗೆ ಬಂದನು.  ಆಗ ಒಬ್ಬ ಶತಾಧಿಪತಿಗೆ ತುಂಬ ಪ್ರಿಯನಾಗಿದ್ದ ಒಬ್ಬ ಆಳು ಅಸ್ವಸ್ಥನಾಗಿ ಸಾಯುವ ಸ್ಥಿತಿಯಲ್ಲಿದ್ದನು.  ಶತಾಧಿಪತಿಯು ಯೇಸುವಿನ ಕುರಿತು ಕೇಳಿಸಿಕೊಂಡಾಗ, ಬಂದು ತನ್ನ ಆಳನ್ನು ಗುಣಪಡಿಸುವಂತೆ ಬೇಡಿಕೊಳ್ಳಲಿಕ್ಕಾಗಿ ಯೆಹೂದ್ಯರ ಹಿರೀಪುರುಷರನ್ನು ಅವನ ಬಳಿಗೆ ಕಳುಹಿಸಿದನು.  ಯೇಸುವಿನ ಬಳಿ ಬಂದವರು ಅವನಿಗೆ, “ನಿನ್ನಿಂದ ಈ ಸಹಾಯವನ್ನು ಹೊಂದಲು ಅವನು ಯೋಗ್ಯನಾಗಿದ್ದಾನೆ.  ಏಕೆಂದರೆ ಅವನು ನಮ್ಮ ಜನಾಂಗವನ್ನು ಪ್ರೀತಿಸುತ್ತಾನೆ ಮತ್ತು ತಾನೇ ನಮಗಾಗಿ ಸಭಾಮಂದಿರವನ್ನು ಕಟ್ಟಿಸಿದ್ದಾನೆ” ಎಂದು ಹೇಳಿ ಅವನನ್ನು ಬಹಳವಾಗಿ ಬೇಡಿಕೊಂಡರು.  ಆಗ ಯೇಸು ಅವರೊಂದಿಗೆ ಹೊರಟನು. ಆದರೆ ಅವನು ಮನೆಯಿಂದ ಸ್ವಲ್ಪ ದೂರದಲ್ಲಿದ್ದಾಗ, ಶತಾಧಿಪತಿಯು ಸ್ನೇಹಿತರನ್ನು ಕಳುಹಿಸಿ “ಸ್ವಾಮಿ, ತೊಂದರೆ ತೆಗೆದುಕೊಳ್ಳಬೇಡ. ನೀನು ನನ್ನ ಮನೆಗೆ ಬರುವಷ್ಟು ಯೋಗ್ಯನು ನಾನಲ್ಲ.  ಈ ಕಾರಣದಿಂದಲೇ ನಾನು ನನ್ನನ್ನು ನಿನ್ನ ಬಳಿಗೆ ಬರಲು ಯೋಗ್ಯನೆಂದು ಪರಿಗಣಿಸಿಕೊಳ್ಳಲಿಲ್ಲ. ನೀನು ಒಂದು ಮಾತು ಹೇಳಿದರೆ ನನ್ನ ಆಳು ವಾಸಿಯಾಗುವನು.  ನಾನು ಸಹ ಅಧಿಕಾರದ ಕೆಳಗಿರುವವನು; ನನ್ನ ಕೈಕೆಳಗೆ ಸೈನಿಕರಿದ್ದಾರೆ. ನಾನು ಅವರಲ್ಲಿ ಒಬ್ಬನಿಗೆ ‘ಹೋಗು’ ಎಂದು ಹೇಳಿದರೆ ಹೋಗುತ್ತಾನೆ; ಇನ್ನೊಬ್ಬನಿಗೆ ‘ಬಾ’ ಎಂದು ಹೇಳಿದರೆ ಬರುತ್ತಾನೆ ಮತ್ತು ನನ್ನ ಸೇವಕನಿಗೆ ‘ಇದನ್ನು ಮಾಡು’ ಎಂದು ಹೇಳಿದರೆ ಅವನು ಮಾಡುತ್ತಾನೆ” ಎಂದು ಹೇಳಿಸಿದನು.  ಯೇಸು ಇದನ್ನು ಕೇಳಿಸಿಕೊಂಡಾಗ ಅವನ ವಿಷಯದಲ್ಲಿ ಅತ್ಯಾಶ್ಚರ್ಯಪಟ್ಟು ತನ್ನನ್ನು ಹಿಂಬಾಲಿಸುತ್ತಿದ್ದ ಜನರ ಕಡೆಗೆ ತಿರುಗಿ, “ಇಂಥ ಮಹಾ ನಂಬಿಕೆಯನ್ನು ನಾನು ಇಸ್ರಾಯೇಲಿನಲ್ಲಿಯೂ ಕಂಡಿಲ್ಲ ಎಂದು ನಿಮಗೆ ಹೇಳುತ್ತೇನೆ” ಅಂದನು. 10  ಶತಾಧಿಪತಿಯಿಂದ ಕಳುಹಿಸಲ್ಪಟ್ಟವರು ಮನೆಗೆ ಹಿಂದಿರುಗಿದಾಗ ಆ ಆಳು ಆರೋಗ್ಯದಿಂದಿರುವುದನ್ನು ಕಂಡರು. 11  ಇದನ್ನು ಹಿಂಬಾಲಿಸಿ ಅವನು ನಾಯಿನೆಂಬ ಊರಿಗೆ ಪ್ರಯಾಣಿಸಿದನು; ಅವನೊಂದಿಗೆ ಅವನ ಶಿಷ್ಯರೂ ಜನರ ಒಂದು ದೊಡ್ಡ ಗುಂಪೂ ಪ್ರಯಾಣಿಸುತ್ತಿತ್ತು. 12  ಅವನು ಊರಿನ ದ್ವಾರದ ಸಮೀಪಕ್ಕೆ ಬಂದಾಗ ಸತ್ತುಹೋಗಿದ್ದ ಒಬ್ಬ ಮನುಷ್ಯನನ್ನು ಹೊತ್ತುಕೊಂಡು ಹೊರಗೆ ತರಲಾಗುತ್ತಿತ್ತು. ಅವನು ತನ್ನ ತಾಯಿಗೆ ಒಬ್ಬನೇ ಮಗನಾಗಿದ್ದನು. ಇದಲ್ಲದೆ ಅವಳು ವಿಧವೆಯಾಗಿದ್ದಳು. ಅವಳೊಂದಿಗೆ ಊರಿನ ಜನರ ಸಾಕಷ್ಟು ದೊಡ್ಡ ಗುಂಪೂ ಇತ್ತು. 13  ಕರ್ತನು ಅವಳನ್ನು ಕಂಡಾಗ ಅವಳ ಮೇಲೆ ಕನಿಕರಪಟ್ಟು ಅವಳಿಗೆ, “ಅಳಬೇಡ” ಎಂದು ಹೇಳಿ 14  ಚಟ್ಟದ ಹತ್ತಿರ ಹೋಗಿ ಅದನ್ನು ಮುಟ್ಟಿದಾಗ ಹೊತ್ತುಕೊಂಡು ಹೋಗುತ್ತಿದ್ದವರು ನಿಂತರು. ಆಗ ಅವನು, “ಯೌವನಸ್ಥನೇ, ಏಳು ಎಂದು ನಿನಗೆ ಹೇಳುತ್ತೇನೆ!” ಅಂದನು. 15  ಸತ್ತಿದ್ದ ಮನುಷ್ಯನು ಎದ್ದು ಕುಳಿತುಕೊಂಡು ಮಾತಾಡಲಾರಂಭಿಸಿದನು. ಯೇಸು ಅವನನ್ನು ಅವನ ತಾಯಿಗೆ ಒಪ್ಪಿಸಿದನು. 16  ಎಲ್ಲರು ಭಯಹಿಡಿದವರಾಗಿ, “ಒಬ್ಬ ಮಹಾಪ್ರವಾದಿಯು ನಮ್ಮ ಮಧ್ಯದಲ್ಲಿ ಎಬ್ಬಿಸಲ್ಪಟ್ಟಿದ್ದಾನೆ” ಮತ್ತು “ದೇವರು ತನ್ನ ಜನರ ಕಡೆಗೆ ಗಮನಹರಿಸಿದ್ದಾನೆ” ಎಂದು ಹೇಳುತ್ತಾ ದೇವರನ್ನು ಮಹಿಮೆಪಡಿಸಿದರು. 17  ಅವನ ಕುರಿತಾದ ಈ ಸುದ್ದಿಯು ಯೂದಾಯದಾದ್ಯಂತವೂ ಸುತ್ತಲಿರುವ ಎಲ್ಲ ಪ್ರಾಂತದಲ್ಲಿಯೂ ಹಬ್ಬಿತು. 18  ಯೋಹಾನನ ಶಿಷ್ಯರು ಈ ಎಲ್ಲ ವಿಷಯಗಳನ್ನು ಅವನಿಗೆ ವರದಿಮಾಡಿದರು. 19  ಯೋಹಾನನು ತನ್ನ ಶಿಷ್ಯರಲ್ಲಿ ಇಬ್ಬರನ್ನು ಕರೆದು, “ಬರತಕ್ಕವನು ನೀನೋ ಅಥವಾ ಬೇರೊಬ್ಬನನ್ನು ನಾವು ಎದುರುನೋಡಬೇಕೊ?” ಎಂದು ಕೇಳಲಿಕ್ಕಾಗಿ ಅವರನ್ನು ಕರ್ತನ ಬಳಿಗೆ ಕಳುಹಿಸಿದನು. 20  ಅವರು ಅವನ ಬಳಿಗೆ ಬಂದು, “‘ಬರತಕ್ಕವನು ನೀನೋ ಅಥವಾ ಇನ್ನೊಬ್ಬನನ್ನು ನಾವು ಎದುರುನೋಡಬೇಕೊ?’ ಎಂದು ಕೇಳಲಿಕ್ಕಾಗಿ ಸ್ನಾನಿಕನಾದ ಯೋಹಾನನು ನಮ್ಮನ್ನು ನಿನ್ನ ಬಳಿಗೆ ಕಳುಹಿಸಿದ್ದಾನೆ” ಎಂದರು. 21  ಆ ಗಳಿಗೆಯಲ್ಲಿ ಅವನು ರೋಗಗಳಿಂದಲೂ ಗುರುತರವಾದ ವ್ಯಾಧಿಗಳಿಂದಲೂ ದೆವ್ವಗಳಿಂದಲೂ ಪೀಡಿತರಾದ ಅನೇಕರನ್ನು ಗುಣಪಡಿಸಿದನು ಮತ್ತು ಅನೇಕ ಮಂದಿ ಕುರುಡರಿಗೆ ದೃಷ್ಟಿಯನ್ನು ಅನುಗ್ರಹಿಸಿದನು. 22  ಅನಂತರ ಅವನು ಆ ಇಬ್ಬರಿಗೆ, “ನೀವು ನೋಡಿದ್ದನ್ನೂ ಕೇಳಿದ್ದನ್ನೂ ಹೋಗಿ ಯೋಹಾನನಿಗೆ ವರದಿಮಾಡಿರಿ: ಕುರುಡರು ದೃಷ್ಟಿಯನ್ನು ಪಡೆದುಕೊಳ್ಳುತ್ತಿದ್ದಾರೆ, ಕುಂಟರು ನಡೆಯುತ್ತಿದ್ದಾರೆ, ಕುಷ್ಠರೋಗಿಗಳು ಶುದ್ಧರಾಗುತ್ತಿದ್ದಾರೆ, ಕಿವುಡರಿಗೆ ಕಿವಿ ಕೇಳಿಸುತ್ತಿದೆ, ಸತ್ತವರು ಎಬ್ಬಿಸಲ್ಪಡುತ್ತಿದ್ದಾರೆ ಮತ್ತು ಬಡವರಿಗೆ ಸುವಾರ್ತೆಯು ತಿಳಿಸಲ್ಪಡುತ್ತಿದೆ. 23  ನನ್ನ ವಿಷಯದಲ್ಲಿ ಎಡವದಿರುವವನು ಸಂತೋಷಿತನು” ಎಂದು ಹೇಳಿದನು. 24  ಯೋಹಾನನ ಸಂದೇಶವಾಹಕರು ಹೊರಟುಹೋದ ಬಳಿಕ ಅವನು ಜನರ ಗುಂಪುಗಳಿಗೆ ಯೋಹಾನನ ಕುರಿತು ಹೀಗೆ ಹೇಳತೊಡಗಿದನು: “ಏನನ್ನು ನೋಡುವುದಕ್ಕಾಗಿ ನೀವು ಅರಣ್ಯಕ್ಕೆ ಹೋದಿರಿ? ಗಾಳಿಗೆ ಅಲ್ಲಾಡುತ್ತಿರುವ ದಂಟನ್ನೊ? 25  ಇಲ್ಲವಾದರೆ ನೀವು ಏನನ್ನು ನೋಡಲಿಕ್ಕಾಗಿ ಹೋದಿರಿ? ನಯವಾದ ಮೇಲಂಗಿಗಳನ್ನು ಧರಿಸಿದ್ದ ಮನುಷ್ಯನನ್ನೊ? ಶೋಭಾಯಮಾನವಾದ ವಸ್ತ್ರಗಳನ್ನು ಧರಿಸಿಕೊಂಡು ಸುಖವಾಗಿ ಜೀವಿಸುವವರು ಅರಮನೆಗಳಲ್ಲಿ ಇರುತ್ತಾರೆ. 26  ಹಾಗಾದರೆ ನೀವು ಏನನ್ನು ನೋಡಲು ಹೋದಿರಿ? ಒಬ್ಬ ಪ್ರವಾದಿಯನ್ನು ನೋಡುವುದಕ್ಕೊ? ಹೌದು, ಪ್ರವಾದಿಗಿಂತಲೂ ಎಷ್ಟೋ ಹೆಚ್ಚಿನವನನ್ನು ನೋಡುವುದಕ್ಕೆ ಎಂದು ನಿಮಗೆ ಹೇಳುತ್ತೇನೆ. 27  ‘ಇಗೋ! ನನ್ನ ಸಂದೇಶವಾಹಕನನ್ನು ನಿನ್ನ ಮುಂದೆ ಕಳುಹಿಸುತ್ತೇನೆ; ಅವನು ನಿನ್ನ ಮುಂದೆ ಮಾರ್ಗವನ್ನು ಸಿದ್ಧಪಡಿಸುವನು’ ಎಂದು ಯಾರ ಕುರಿತಾಗಿ ಬರೆದಿದೆಯೋ ಅವನೇ ಇವನು. 28  ನಾನು ನಿಮಗೆ ಹೇಳುವುದೇನೆಂದರೆ, ಸ್ತ್ರೀಯರಲ್ಲಿ ಹುಟ್ಟಿದವರಲ್ಲಿ ಯೋಹಾನನಿಗಿಂತ ದೊಡ್ಡವನು ಯಾರೂ ಇಲ್ಲ; ಆದರೆ ದೇವರ ರಾಜ್ಯದಲ್ಲಿರುವ ಚಿಕ್ಕವನು ಇವನಿಗಿಂತಲೂ ದೊಡ್ಡವನಾಗಿದ್ದಾನೆ.” 29  (ಮತ್ತು ಯೋಹಾನನಿಂದ ದೀಕ್ಷಾಸ್ನಾನ ಪಡೆದುಕೊಂಡಿದ್ದ ಎಲ್ಲ ಜನರೂ ತೆರಿಗೆ ವಸೂಲಿಗಾರರೂ ಇದನ್ನು ಕೇಳಿಸಿಕೊಂಡಾಗ ದೇವರು ನೀತಿವಂತನೆಂದು ಘೋಷಿಸಿದರು. 30  ಆದರೆ ಅವನಿಂದ ದೀಕ್ಷಾಸ್ನಾನ ಪಡೆದುಕೊಂಡಿರದ ಫರಿಸಾಯರೂ ಧರ್ಮಶಾಸ್ತ್ರದಲ್ಲಿ ಪ್ರವೀಣರಾಗಿದ್ದವರೂ ತಮಗಿದ್ದ ದೇವರ ಸಲಹೆಯನ್ನು ಅಲಕ್ಷಿಸಿದರು.) 31  “ಆದುದರಿಂದ ಈ ಸಂತತಿಯ ಜನರನ್ನು ನಾನು ಯಾರಿಗೆ ಹೋಲಿಸಲಿ? ಅವರು ಯಾರಂತಿದ್ದಾರೆ? 32  ಅವರು ಮಾರುಕಟ್ಟೆಯಲ್ಲಿ ಕುಳಿತುಕೊಂಡು, ‘ನಾವು ನಿಮಗೋಸ್ಕರ ಕೊಳಲೂದಿದೆವು, ನೀವು ಕುಣಿಯಲಿಲ್ಲ; ನಾವು ಗೋಳಾಡಿದೆವು, ನೀವು ಅಳಲಿಲ್ಲ’ ಎಂದು ಒಬ್ಬರಿಗೊಬ್ಬರು ಕೂಗಿಹೇಳುವ ಚಿಕ್ಕ ಮಕ್ಕಳಿಗೆ ಹೋಲಿಕೆಯಾಗಿದ್ದಾರೆ. 33  ಅದರಂತೆಯೇ ಸ್ನಾನಿಕನಾದ ಯೋಹಾನನು ಬಂದಿದ್ದಾನೆ; ಅವನು ರೊಟ್ಟಿಯನ್ನು ತಿನ್ನದವನೂ ದ್ರಾಕ್ಷಾಮದ್ಯವನ್ನು ಕುಡಿಯದವನೂ ಆಗಿದ್ದಾನೆ. ಆದರೆ ನೀವು, ‘ಅವನಿಗೆ ದೆವ್ವಹಿಡಿದಿದೆ’ ಎಂದು ಹೇಳುತ್ತೀರಿ. 34  ಮನುಷ್ಯಕುಮಾರನು ಉಣ್ಣುತ್ತಾ ಕುಡಿಯುತ್ತಾ ಬಂದಿದ್ದಾನೆ. ಆದರೆ ನೀವು ‘ಇವನು ಹೊಟ್ಟೆಬಾಕನು, ದ್ರಾಕ್ಷಾಮದ್ಯ ಕುಡಿತದ ಚಟಕ್ಕೆ ಬಿದ್ದಿರುವವನು, ತೆರಿಗೆ ವಸೂಲಿಮಾಡುವವರ ಮತ್ತು ಪಾಪಿಗಳ ಸ್ನೇಹಿತನು’ ಎಂದು ಹೇಳುತ್ತೀರಿ. 35  ಏನೇ ಆಗಲಿ, ವಿವೇಕವು ತನ್ನ ಎಲ್ಲ ಕ್ರಿಯೆಗಳ ಮೂಲಕ ನೀತಿಯುತವೆಂದು ಸಾಬೀತಾಗುತ್ತದೆ.” 36  ಆಗ ಫರಿಸಾಯರಲ್ಲಿ ಒಬ್ಬನು ತನ್ನೊಂದಿಗೆ ಊಟಮಾಡುವಂತೆ ಯೇಸುವನ್ನು ಕೇಳಿಕೊಳ್ಳುತ್ತಾ ಇದ್ದನು. ಆದುದರಿಂದ ಅವನು ಆ ಫರಿಸಾಯನ ಮನೆಗೆ ಹೋಗಿ ಊಟಕ್ಕೆ ಕುಳಿತುಕೊಂಡನು. 37  ಆಗ ಪಾಪಿಷ್ಠಳೆಂದು ಊರಿನಲ್ಲೆಲ್ಲ ಪ್ರಸಿದ್ಧಳಾಗಿದ್ದ ಒಬ್ಬ ಸ್ತ್ರೀಯು ಅವನು ಫರಿಸಾಯನ ಮನೆಯಲ್ಲಿ ಊಟಕ್ಕೆ ಕುಳಿತಿದ್ದಾನೆಂಬುದನ್ನು ತಿಳಿದುಕೊಂಡು ಸುಗಂಧ ತೈಲದ ಹಾಲುಗಲ್ಲಿನ ಭರಣಿಯನ್ನು ತೆಗೆದುಕೊಂಡು ಬಂದು, 38  ಹಿಂದೆ ಅವನ ಪಾದಗಳ ಬಳಿಯಲ್ಲಿ ಕುಳಿತುಕೊಂಡು ಅಳುತ್ತಾ ತನ್ನ ಕಣ್ಣೀರಿನಿಂದ ಅವನ ಪಾದಗಳನ್ನು ತೇವಮಾಡಿ ತನ್ನ ತಲೆಯ ಕೂದಲಿನಿಂದ ಅವುಗಳನ್ನು ಒರಸಿದಳು. ಅಲ್ಲದೆ ಅವನ ಪಾದಗಳಿಗೆ ಕೋಮಲವಾಗಿ ಮುದ್ದಿಟ್ಟು ಆ ಸುಗಂಧ ತೈಲವನ್ನು ಹಚ್ಚಿದಳು. 39  ಅವನನ್ನು ಆಮಂತ್ರಿಸಿದ ಫರಿಸಾಯನು ಇದನ್ನು ನೋಡಿ, “ಇವಳು ಪಾಪಿಷ್ಠಳು; ಈ ಮನುಷ್ಯನು ಪ್ರವಾದಿಯಾಗಿದ್ದರೆ ತನ್ನನ್ನು ಮುಟ್ಟುತ್ತಿರುವ ಈ ಸ್ತ್ರೀ ಯಾರು ಮತ್ತು ಎಂಥವಳು ಎಂದು ತಿಳಿದುಕೊಳ್ಳುತ್ತಿದ್ದನು” ಎಂದು ತನ್ನೊಳಗೆ ಅಂದುಕೊಂಡನು. 40  ಅದಕ್ಕೆ ಯೇಸು, “ಸೀಮೋನನೇ, ನಾನು ನಿನಗೆ ಏನೋ ಹೇಳಬೇಕೆಂದಿದ್ದೇನೆ” ಎಂದಾಗ ಅವನು “ಬೋಧಕನೇ, ಹೇಳು” ಅಂದನು. 41  ಆಗ ಯೇಸು, “ಸಾಲಕೊಡುತ್ತಿದ್ದ ಒಬ್ಬನಿಗೆ ಇಬ್ಬರು ಸಾಲಗಾರರಿದ್ದರು; ಒಬ್ಬನು ಐನೂರು ದಿನಾರುಗಳನ್ನೂ* ಇನ್ನೊಬ್ಬನು ಐವತ್ತು ದಿನಾರುಗಳನ್ನೂ ಕೊಡಬೇಕಾಗಿತ್ತು. 42  ಆ ಸಾಲವನ್ನು ತೀರಿಸಲು ಅವರ ಬಳಿ ಏನೂ ಇರಲಿಲ್ಲವಾದ್ದರಿಂದ ಅವನು ಅವರಿಬ್ಬರ ಸಾಲವನ್ನೂ ರದ್ದುಮಾಡಿದನು. ಹೀಗಿರುವಾಗ ಅವರಲ್ಲಿ ಯಾರು ಅವನನ್ನು ಹೆಚ್ಚಾಗಿ ಪ್ರೀತಿಸುವರು?” ಎಂದು ಕೇಳಿದನು. 43  ಅದಕ್ಕೆ ಸೀಮೋನನು, “ಯಾರಿಗೆ ಹೆಚ್ಚು ರದ್ದುಮಾಡಲ್ಪಟ್ಟಿತೋ ಅವನೇ ಎಂದು ನೆನಸುತ್ತೇನೆ” ಅಂದನು. ಯೇಸು ಅವನಿಗೆ, “ನೀನು ಸರಿಯಾಗಿ ತೀರ್ಪುಮಾಡಿದಿ” ಎಂದು ಹೇಳುತ್ತಾ 44  ಆ ಸ್ತ್ರೀಯ ಕಡೆಗೆ ತಿರುಗಿ ಸೀಮೋನನಿಗೆ, “ಈ ಸ್ತ್ರೀಯನ್ನು ನೋಡಿದೆಯಾ? ನಾನು ನಿನ್ನ ಮನೆಯೊಳಗೆ ಬಂದಾಗ ನೀನು ನನ್ನ ಕಾಲಿಗೆ ನೀರು ಕೊಡಲಿಲ್ಲ. ಆದರೆ ಈ ಸ್ತ್ರೀಯು ತನ್ನ ಕಣ್ಣೀರಿನಿಂದ ನನ್ನ ಪಾದಗಳನ್ನು ತೇವಮಾಡಿ ಅವುಗಳನ್ನು ತನ್ನ ಕೂದಲಿನಿಂದ ಒರಸಿದಳು. 45  ನೀನು ನನಗೆ ಮುದ್ದಿಡಲಿಲ್ಲ; ಆದರೆ ನಾನು ಒಳಗೆ ಬಂದ ಗಳಿಗೆಯಿಂದ ಈ ಸ್ತ್ರೀಯು ನನ್ನ ಪಾದಗಳಿಗೆ ಕೋಮಲವಾಗಿ ಮುದ್ದಿಡುವುದನ್ನು ನಿಲ್ಲಿಸಿಲ್ಲ. 46  ನೀನು ನನ್ನ ತಲೆಗೆ ತೈಲವನ್ನು ಹಚ್ಚಲಿಲ್ಲ; ಆದರೆ ಈ ಸ್ತ್ರೀಯು ನನ್ನ ಪಾದಗಳಿಗೆ ಸುಗಂಧ ತೈಲವನ್ನು ಹಚ್ಚಿದಳು. 47  ಇದರಿಂದಾಗಿ ನಾನು ನಿನಗೆ ಹೇಳುವುದೇನೆಂದರೆ, ಅವಳ ಪಾಪಗಳು ಬಹಳವಾಗಿರುವುದಾದರೂ ಅವು ಕ್ಷಮಿಸಲ್ಪಟ್ಟಿವೆ. ಆದುದರಿಂದ ಅವಳು ಹೆಚ್ಚಾಗಿ ಪ್ರೀತಿಯನ್ನು ತೋರಿಸಿದಳು. ಯಾವನಿಗೆ ಸ್ವಲ್ಪವೇ ಕ್ಷಮಿಸಲ್ಪಟ್ಟಿದೆಯೋ ಅವನು ತೋರಿಸುವ ಪ್ರೀತಿಯು ಸ್ವಲ್ಪವೇ” ಎಂದನು. 48  ಬಳಿಕ ಅವನು ಅವಳಿಗೆ, “ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ” ಎಂದು ಹೇಳಿದನು. 49  ಆಗ ಅವನೊಂದಿಗೆ ಊಟಕ್ಕೆ ಕುಳಿತುಕೊಂಡಿದ್ದವರು, “ಪಾಪಗಳನ್ನು ಸಹ ಕ್ಷಮಿಸುವವನಾದ ಈ ಮನುಷ್ಯನು ಯಾರು?” ಎಂದು ತಮ್ಮೊಳಗೆ ಅಂದುಕೊಂಡರು. 50  ಆದರೆ ಅವನು ಆ ಸ್ತ್ರೀಗೆ, “ನಿನ್ನ ನಂಬಿಕೆಯು ನಿನ್ನನ್ನು ರಕ್ಷಿಸಿದೆ; ಸಮಾಧಾನದಿಂದ ಹೋಗು” ಎಂದನು.

ಪಾದಟಿಪ್ಪಣಿ

ಲೂಕ 7:41 ಮತ್ತಾ 18:24ರ ಪಾದಟಿಪ್ಪಣಿಯನ್ನು ನೋಡಿ.