ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಆನ್‌ಲೈನ್‌ ಬೈಬಲ್ | ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರ

ಲೂಕ 5:1-39

5  ಒಂದು ಸಂದರ್ಭದಲ್ಲಿ ಅವನು ಗೆನೆಜರೇತ್‌ ಸರೋವರದ ಬಳಿ ನಿಂತುಕೊಂಡಿದ್ದಾಗ ಜನರು ಒತ್ತಾಗಿ ಅವನ ಹತ್ತಿರ ಕೂಡಿಬಂದು ದೇವರ ವಾಕ್ಯಕ್ಕೆ ಕಿವಿಗೊಡುತ್ತಿದ್ದರು.  ಅವನು ಸರೋವರದ ಅಂಚಿನಲ್ಲಿದ್ದ ಎರಡು ದೋಣಿಗಳನ್ನು ನೋಡಿದನು; ಆದರೆ ಬೆಸ್ತರು ಅವುಗಳಿಂದ ಇಳಿದು ತಮ್ಮ ಬಲೆಗಳನ್ನು ತೊಳೆಯುತ್ತಾ ಇದ್ದರು.  ಅವನು ಆ ದೋಣಿಗಳಲ್ಲಿ ಒಂದಾಗಿದ್ದ ಸೀಮೋನನ ದೋಣಿಯನ್ನು ಹತ್ತಿ ಅದನ್ನು ದಡದಿಂದ ಸ್ವಲ್ಪ ದೂರಕ್ಕೆ ನೂಕುವಂತೆ ಅವನನ್ನು ಕೇಳಿಕೊಂಡನು. ಬಳಿಕ ಅವನು ಆ ದೋಣಿಯಲ್ಲಿ ಕುಳಿತುಕೊಂಡು ಅಲ್ಲಿಂದಲೇ ಜನರ ಗುಂಪುಗಳಿಗೆ ಬೋಧಿಸಲಾರಂಭಿಸಿದನು.  ಅವನು ಮಾತಾಡುವುದನ್ನು ನಿಲ್ಲಿಸಿದ ಬಳಿಕ ಸೀಮೋನನಿಗೆ, “ಆಳವಾದ ಸ್ಥಳಕ್ಕೆ ದೋಣಿಯನ್ನು ನಡಿಸಿ ಮೀನು ಹಿಡಿಯಲಿಕ್ಕಾಗಿ ನಿಮ್ಮ ಬಲೆಗಳನ್ನು ಇಳಿಸಿರಿ” ಎಂದನು.  ಅದಕ್ಕೆ ಸೀಮೋನನು, “ಉಪದೇಶಕನೇ, ನಾವು ರಾತ್ರಿಯೆಲ್ಲ ಪ್ರಯಾಸಪಟ್ಟರೂ ಏನೂ ಸಿಗಲಿಲ್ಲ. ಆದರೆ ಈಗ ನಿನ್ನ ಮಾತಿನಂತೆ ನಾನು ಬಲೆಗಳನ್ನು ಕೆಳಗಿಳಿಸುತ್ತೇನೆ” ಎಂದು ಉತ್ತರಿಸಿದನು.  ಅವರು ಹಾಗೆಮಾಡಿದಾಗ ಅದರಲ್ಲಿ ರಾಶಿರಾಶಿ ಮೀನುಗಳು ಸಿಕ್ಕಿಕೊಂಡವು. ವಾಸ್ತವದಲ್ಲಿ, ಅವರ ಬಲೆಗಳು ಹರಿದುಹೋಗತೊಡಗಿದವು.  ಆದುದರಿಂದ ಅವರು ಇನ್ನೊಂದು ದೋಣಿಯಲ್ಲಿದ್ದ ತಮ್ಮ ಪಾಲುಗಾರರು ಬಂದು ತಮಗೆ ಸಹಾಯಮಾಡುವಂತೆ ಅವರಿಗೆ ಸನ್ನೆಮಾಡಿದರು. ಅವರು ಬಂದು ಆ ಎರಡು ದೋಣಿಗಳನ್ನು ತುಂಬಿಸಲಾಗಿ ಅವು ಮುಳುಗಲಾರಂಭಿಸಿದವು.  ಇದನ್ನು ನೋಡಿ ಸೀಮೋನ ಪೇತ್ರನು ಯೇಸುವಿನ ಮೊಣಕಾಲಿಗೆ ಬಿದ್ದು, “ಸ್ವಾಮಿ, ನನ್ನನ್ನು ಬಿಟ್ಟುಹೋಗು. ನಾನು ಪಾಪಿಷ್ಠನು” ಎಂದು ಹೇಳಿದನು.  ಏಕೆಂದರೆ ತಾವು ಹಿಡಿದಿದ್ದ ಮೀನಿನ ರಾಶಿಯನ್ನು ನೋಡಿ ಅವನೂ ಅವನ ಸಂಗಡ ಇದ್ದವರೆಲ್ಲರೂ ವಿಸ್ಮಯಗೊಂಡಿದ್ದರು. 10  ಅದೇ ರೀತಿಯಲ್ಲಿ ಸೀಮೋನನೊಂದಿಗೆ ಪಾಲುಗಾರರಾಗಿದ್ದ ಜೆಬೆದಾಯನ ಮಕ್ಕಳಾದ ಯಾಕೋಬ ಯೋಹಾನರೂ ವಿಸ್ಮಯಗೊಂಡಿದ್ದರು. ಆದರೆ ಯೇಸು ಸೀಮೋನನಿಗೆ, “ಹೆದರಬೇಡ. ಇಂದಿನಿಂದ ನೀನು ಮನುಷ್ಯರನ್ನು ಸಜೀವವಾಗಿ ಹಿಡಿಯುವವನಾಗುವಿ” ಎಂದನು. 11  ಆಗ ಅವರು ದೋಣಿಗಳನ್ನು ದಡಕ್ಕೆ ತಂದು ಎಲ್ಲವನ್ನೂ ಬಿಟ್ಟು ಅವನನ್ನು ಹಿಂಬಾಲಿಸಿದರು. 12  ಇನ್ನೊಂದು ಸಂದರ್ಭದಲ್ಲಿ ಅವನು ಒಂದು ಊರಿನಲ್ಲಿದ್ದಾಗ ಕುಷ್ಠರೋಗದಿಂದ ತುಂಬಿದ್ದ ಒಬ್ಬ ಮನುಷ್ಯನು ಯೇಸುವನ್ನು ಕಂಡು ಅಧೋಮುಖವಾಗಿಬಿದ್ದು, “ಕರ್ತನೇ, ನಿನಗೆ ಮನಸ್ಸಿದ್ದರೆ ನನ್ನನ್ನು ಶುದ್ಧಮಾಡಬಲ್ಲೆ” ಎಂದು ಬೇಡಿಕೊಂಡನು. 13  ಆಗ ಅವನು ತನ್ನ ಕೈಚಾಚಿ ಅವನನ್ನು ಮುಟ್ಟಿ, “ನನಗೆ ಮನಸ್ಸುಂಟು. ಶುದ್ಧನಾಗು” ಎಂದು ಹೇಳಿದನು. ಕೂಡಲೆ ಅವನ ಕುಷ್ಠವು ವಾಸಿಯಾಯಿತು. 14  ಯೇಸು ಅವನಿಗೆ ಯಾರಿಗೂ ಹೇಳಬೇಡ ಎಂದು ಆಜ್ಞಾಪಿಸಿ, “ಹೋಗಿ ಯಾಜಕನಿಗೆ ನಿನ್ನನ್ನು ತೋರಿಸಿ ಮೋಶೆಯು ಆಜ್ಞಾಪಿಸಿದಂತೆ ನಿನ್ನ ಶುದ್ಧತೆಗಾಗಿ ಅರ್ಪಣೆಯನ್ನು ಮಾಡು. ಇದು ಅವರಿಗೆ ಸಾಕ್ಷಿಯಾಗಿರಲಿ” ಎಂದು ಹೇಳಿದನು. 15  ಆದರೂ ಅವನ ಕುರಿತಾದ ಸುದ್ದಿಯು ಇನ್ನಷ್ಟು ಹೆಚ್ಚು ಹಬ್ಬುತ್ತಾ ಇತ್ತು. ಜನರು ಅವನ ಮಾತುಗಳನ್ನು ಕೇಳಿಸಿಕೊಳ್ಳುವುದಕ್ಕೂ ತಮ್ಮ ರೋಗಗಳನ್ನು ಗುಣಪಡಿಸಿಕೊಳ್ಳುವುದಕ್ಕೂ ಗುಂಪುಗುಂಪಾಗಿ ಬರುತ್ತಿದ್ದರು. 16  ಆದರೆ ಅವನು ಅರಣ್ಯಕ್ಕೆ ಪ್ರತ್ಯೇಕವಾಗಿ ಹೋಗಿ ಪ್ರಾರ್ಥಿಸುವುದನ್ನು ಮುಂದುವರಿಸಿದನು. 17  ಒಂದು ದಿನ ಅವನು ಬೋಧಿಸುತ್ತಿದ್ದಾಗ ಗಲಿಲಾಯ, ಯೂದಾಯ ಮತ್ತು ಯೆರೂಸಲೇಮಿನ ಪ್ರತಿಯೊಂದು ಗ್ರಾಮದಿಂದ ಬಂದಿದ್ದ ಫರಿಸಾಯರೂ ಧರ್ಮಬೋಧಕರೂ ಅಲ್ಲಿ ಕುಳಿತುಕೊಂಡಿದ್ದರು; ಗುಣಪಡಿಸಲಿಕ್ಕಾಗಿ ಯೆಹೋವನ ಶಕ್ತಿಯು ಅವನಲ್ಲಿತ್ತು. 18  ಆಗ ಪಾರ್ಶ್ವವಾಯು ರೋಗವಿದ್ದ ಒಬ್ಬ ಮನುಷ್ಯನನ್ನು ಹಾಸಿಗೆಯಲ್ಲಿ ಹೊತ್ತುಕೊಂಡಿದ್ದ ಮನುಷ್ಯರು ಅವನನ್ನು ಒಳಗೆ ತೆಗೆದುಕೊಂಡು ಹೋಗಿ ಯೇಸುವಿನ ಎದುರು ಇಡಲು ಪ್ರಯತ್ನಿಸುತ್ತಾ ಇದ್ದರು. 19  ಆದರೆ ಅಲ್ಲಿ ಜನರು ಗುಂಪುಗೂಡಿದ್ದರಿಂದ ಅವನನ್ನು ಒಳಗೆ ತರುವ ಮಾರ್ಗವನ್ನು ಕಾಣದೆ, ಅವರು ಚಾವಣಿಯ ಮೇಲೆ ಹತ್ತಿ ಹೆಂಚುಗಳನ್ನು ತೆರೆದು ಚಿಕ್ಕ ಹಾಸಿಗೆಯ ಸಮೇತ ಅವನನ್ನು ಯೇಸುವಿನ ಮುಂದೆ ಇದ್ದ ಜನರ ಮಧ್ಯೆ ಇಳಿಸಿದರು. 20  ಅವನು ಅವರ ನಂಬಿಕೆಯನ್ನು ನೋಡಿದಾಗ, “ಮನುಷ್ಯನೇ, ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ” ಎಂದನು. 21  ಆಗ ಆ ಶಾಸ್ತ್ರಿಗಳೂ ಫರಿಸಾಯರೂ, “ದೇವದೂಷಣೆಯ ಮಾತುಗಳನ್ನಾಡುತ್ತಿರುವ ಇವನು ಯಾರು? ದೇವರೊಬ್ಬನೇ ಹೊರತು ಇನ್ನಾರು ಪಾಪಗಳನ್ನು ಕ್ಷಮಿಸಬಲ್ಲರು?” ಎಂದು ತಮ್ಮೊಳಗೆ ಮಾತಾಡಿಕೊಳ್ಳುತ್ತಿದ್ದರು. 22  ಯೇಸು ಅವರ ಆಲೋಚನೆಯನ್ನು ಗ್ರಹಿಸಿದವನಾಗಿ, “ನೀವು ನಿಮ್ಮ ಹೃದಯಗಳಲ್ಲಿ ಏನನ್ನು ಆಲೋಚಿಸುತ್ತಿದ್ದೀರಿ? 23  ಯಾವುದು ಸುಲಭ? ‘ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ’ ಎನ್ನುವುದೊ ಅಥವಾ ‘ಎದ್ದು ನಡೆ’ ಎಂದು ಹೇಳುವುದೊ? 24  ಆದರೆ ಭೂಮಿಯ ಮೇಲೆ ಪಾಪಗಳನ್ನು ಕ್ಷಮಿಸಿಬಿಡುವುದಕ್ಕೆ ಮನುಷ್ಯಕುಮಾರನಿಗೆ ಅಧಿಕಾರವಿದೆ ಎಂದು ನೀವು ತಿಳಿದುಕೊಳ್ಳುವುದಕ್ಕೋಸ್ಕರವೇ” ಎಂದು ಉತ್ತರಿಸಿ—⁠ಅವನು ಪಾರ್ಶ್ವವಾಯು ರೋಗಿಗೆ, “ನೀನೆದ್ದು ನಿನ್ನ ಚಿಕ್ಕ ಹಾಸಿಗೆಯನ್ನು ಎತ್ತಿಕೊಂಡು ಮನೆಗೆ ಹೋಗು ಎಂದು ನಾನು ನಿನಗೆ ಹೇಳುತ್ತೇನೆ” ಅಂದನು. 25  ಕೂಡಲೆ ಅವನು ಅವರ ಮುಂದೆ ಎದ್ದು ತಾನು ಮಲಗಿಕೊಳ್ಳುತ್ತಿದ್ದ ಹಾಸಿಗೆಯನ್ನು ಎತ್ತಿಕೊಂಡು ದೇವರನ್ನು ಮಹಿಮೆಪಡಿಸುತ್ತಾ ತನ್ನ ಮನೆಗೆ ಹೊರಟುಹೋದನು. 26  ಆಗ ಅಲ್ಲಿದ್ದವರೆಲ್ಲರೂ ಆನಂದಪರವಶರಾಗಿ ದೇವರನ್ನು ಕೊಂಡಾಡಿದರು ಮತ್ತು ಅವರು ಭಯಭರಿತರಾಗಿ “ನಾವಿಂದು ಅಪೂರ್ವವಾದ ಸಂಗತಿಗಳನ್ನು ನೋಡಿದ್ದೇವೆ!” ಎಂದು ಹೇಳಿದರು. 27  ಇವುಗಳಾದ ಮೇಲೆ ಯೇಸು ಹೊರಟುಹೋಗಿ ತೆರಿಗೆ ಕಟ್ಟೆಯಲ್ಲಿ ಕುಳಿತುಕೊಂಡಿದ್ದ ಲೇವಿ ಎಂಬ ಹೆಸರಿನ ತೆರಿಗೆ ವಸೂಲಿಗಾರನನ್ನು ಕಂಡು ಅವನಿಗೆ, “ನನ್ನ ಹಿಂಬಾಲಕನಾಗು” ಎಂದು ಹೇಳಿದನು. 28  ಅವನು ಎಲ್ಲವನ್ನೂ ಬಿಟ್ಟು ಎದ್ದು ಅವನನ್ನು ಹಿಂಬಾಲಿಸಿದನು. 29  ಇದಲ್ಲದೆ ಲೇವಿಯು ತನ್ನ ಮನೆಯಲ್ಲಿ ಅವನಿಗಾಗಿ ಒಂದು ದೊಡ್ಡ ಔತಣವನ್ನು ಏರ್ಪಡಿಸಿದನು; ಬಹಳ ಮಂದಿ ತೆರಿಗೆ ವಸೂಲಿಗಾರರೂ ಇತರರೂ ಅವರ ಸಂಗಡ ಊಟಕ್ಕೆ ಕುಳಿತುಕೊಂಡಿದ್ದರು. 30  ಇದನ್ನು ಕಂಡು ಫರಿಸಾಯರೂ ಶಾಸ್ತ್ರಿಗಳೂ ಅವನ ಶಿಷ್ಯರಿಗೆ ಗುಣುಗುಟ್ಟುತ್ತಾ, “ನೀವೇಕೆ ತೆರಿಗೆ ವಸೂಲಿಗಾರರ ಮತ್ತು ಪಾಪಿಗಳ ಸಂಗಡ ತಿನ್ನುತ್ತೀರಿ ಮತ್ತು ಕುಡಿಯುತ್ತೀರಿ?” ಎಂದು ಕೇಳಿದರು. 31  ಅದಕ್ಕೆ ಉತ್ತರವಾಗಿ ಯೇಸು ಅವರಿಗೆ, “ಆರೋಗ್ಯವಂತರಿಗೆ ವೈದ್ಯನ ಆವಶ್ಯಕತೆ ಇಲ್ಲ, ಆದರೆ ರೋಗಿಗಳಿಗೆ ಇದೆ. 32  ನಾನು ನೀತಿವಂತರನ್ನಲ್ಲ, ಪಾಪಿಗಳನ್ನು ಪಶ್ಚಾತ್ತಾಪಕ್ಕಾಗಿ ಕರೆಯಲು ಬಂದಿದ್ದೇನೆ” ಎಂದನು. 33  ಬಳಿಕ ಅವರು ಅವನಿಗೆ, “ಯೋಹಾನನ ಶಿಷ್ಯರು ಆಗಾಗ ಉಪವಾಸಗಳನ್ನೂ ಯಾಚನೆಗಳನ್ನೂ ಮಾಡುತ್ತಾರೆ ಮತ್ತು ಫರಿಸಾಯರ ಶಿಷ್ಯರೂ ಮಾಡುತ್ತಾರೆ, ಆದರೆ ನಿನ್ನ ಶಿಷ್ಯರು ತಿನ್ನುತ್ತಾರೆ ಹಾಗೂ ಕುಡಿಯುತ್ತಾರೆ” ಎಂದರು. 34  ಅದಕ್ಕೆ ಯೇಸು ಅವರಿಗೆ, “ಮದುಮಗನಿರುವಾಗ ನೀವು ಅವನ ಸ್ನೇಹಿತರನ್ನು ಉಪವಾಸವಿರುವಂತೆ ಮಾಡಲಾರಿರಿ, ಅಲ್ಲವೆ? 35  ಆದರೆ ಮದುಮಗನನ್ನು ನಿಜವಾಗಿಯೂ ಅವರ ಬಳಿಯಿಂದ ತೆಗೆದುಕೊಂಡು ಹೋಗುವ ದಿವಸಗಳು ಬರುವವು ಆ ದಿವಸಗಳಲ್ಲಿ ಅವರು ಉಪವಾಸಮಾಡುವರು” ಎಂದು ಹೇಳಿದನು. 36  ಇದಲ್ಲದೆ ಅವನು ಅವರಿಗೆ ಒಂದು ದೃಷ್ಟಾಂತವನ್ನು ಹೇಳಿದನು: “ಯಾರೂ ಹೊಸ ಮೇಲಂಗಿಯಿಂದ ಒಂದು ತುಂಡನ್ನು ಕತ್ತರಿಸಿ ತೆಗೆದು ಹಳೆಯ ಮೇಲಂಗಿಗೆ ತೇಪೆಹಚ್ಚುವುದಿಲ್ಲ; ಹಚ್ಚಿದರೆ ಹೊಸ ತೇಪೆಯು ಹರಿದುಹೋಗುವುದಲ್ಲದೆ ಹೊಸ ಬಟ್ಟೆಯ ತೇಪೆಯು ಹಳೆಯದಕ್ಕೆ ಹೊಂದಿಕೆಯಾಗುವುದೂ ಇಲ್ಲ. 37  ಮಾತ್ರವಲ್ಲ, ಯಾರೂ ಹೊಸ ದ್ರಾಕ್ಷಾಮದ್ಯವನ್ನು ಹಳೆಯ ಚರ್ಮದ ಚೀಲಗಳಲ್ಲಿ ಹಾಕಿಡುವುದಿಲ್ಲ; ಹಾಕಿಟ್ಟರೆ ಹೊಸ ದ್ರಾಕ್ಷಾಮದ್ಯದಿಂದಾಗಿ ಚರ್ಮದ ಚೀಲಗಳು ಬಿರಿದು ದ್ರಾಕ್ಷಾಮದ್ಯವು ಹೊರಚೆಲ್ಲುತ್ತದೆ ಮತ್ತು ಚರ್ಮದ ಚೀಲಗಳು ಹಾಳಾಗಿಹೋಗುವವು. 38  ಆದರೆ ಹೊಸ ದ್ರಾಕ್ಷಾಮದ್ಯವನ್ನು ಹೊಸ ಚರ್ಮದ ಚೀಲಗಳಲ್ಲಿ ಹಾಕಿಡಬೇಕು. 39  ಹಳೆಯ ದ್ರಾಕ್ಷಾಮದ್ಯವನ್ನು ಕುಡಿದವನು ಹೊಸದನ್ನು ಬಯಸುವುದಿಲ್ಲ, ಏಕೆಂದರೆ ಅವನು ‘ಹಳೆಯದೇ ಚೆನ್ನಾಗಿದೆ’ ಅನ್ನುತ್ತಾನೆ.”

ಪಾದಟಿಪ್ಪಣಿ