ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಲೂಕ 24:1-53

24  ವಾರದ ಮೊದಲನೆಯ ದಿನ ಅವರು ತಾವು ಸಿದ್ಧಪಡಿಸಿದ್ದ ಪರಿಮಳದ್ರವ್ಯವನ್ನು ತೆಗೆದುಕೊಂಡು ಬೆಳಗಿನ ಜಾವದಲ್ಲೇ ಸಮಾಧಿಯ ಬಳಿಗೆ ಬಂದರು.  ಆದರೆ ಸ್ಮರಣೆಯ ಸಮಾಧಿಯಿಂದ ಕಲ್ಲು ಉರುಳಿಸಲ್ಪಟ್ಟಿರುವುದನ್ನು ಕಂಡು  ಒಳಗೆ ಹೋದಾಗ ಅವರು ಕರ್ತನಾದ ಯೇಸುವಿನ ದೇಹವನ್ನು ಅಲ್ಲಿ ಕಾಣಲಿಲ್ಲ.  ಅವರು ಇದರ ಕುರಿತು ಕಳವಳಗೊಂಡಿದ್ದಾಗ ಹೊಳೆಯುವ ವಸ್ತ್ರಗಳನ್ನು ಧರಿಸಿಕೊಂಡಿದ್ದ ಇಬ್ಬರು ಪುರುಷರು ಅವರ ಬಳಿ ನಿಂತುಕೊಂಡರು.  ಆ ಸ್ತ್ರೀಯರು ಭಯಗೊಂಡು ತಮ್ಮ ಮುಖಗಳನ್ನು ನೆಲದ ಕಡೆಗೆ ಬಗ್ಗಿಸಿಕೊಂಡಿದ್ದಾಗ ಆ ಪುರುಷರು ಅವರಿಗೆ, “ನೀವು ಜೀವಿತನನ್ನು ಸತ್ತವರ ಮಧ್ಯೆ ಏಕೆ ಹುಡುಕುತ್ತಿದ್ದೀರಿ?  ಅವನು ಇಲ್ಲಿ ಇಲ್ಲ, ಎಬ್ಬಿಸಲ್ಪಟ್ಟಿದ್ದಾನೆ. ಅವನು ಇನ್ನೂ ಗಲಿಲಾಯದಲ್ಲಿದ್ದಾಗಲೇ ನಿಮಗೆ ಹೇಗೆ ಮಾತಾಡಿದನೆಂಬುದನ್ನು ನೆನಪಿಸಿಕೊಳ್ಳಿ.  ಮನುಷ್ಯಕುಮಾರನು ಪಾಪಿಗಳ ಕೈಗೆ ಒಪ್ಪಿಸಲ್ಪಟ್ಟು ಶೂಲಕ್ಕೇರಿಸಲ್ಪಡಬೇಕು, ಆದರೆ ಮೂರನೆಯ ದಿನದಲ್ಲಿ ಎಬ್ಬಿಸಲ್ಪಡುವನು ಎಂದು ಹೇಳಿದ್ದನು” ಎಂದರು.  ಆಗ ಆ ಸ್ತ್ರೀಯರು ಅವನ ಮಾತುಗಳನ್ನು ತಮ್ಮ ಮನಸ್ಸಿಗೆ ತಂದುಕೊಂಡು  ಸ್ಮರಣೆಯ ಸಮಾಧಿಯ ಬಳಿಯಿಂದ ಹಿಂದಿರುಗಿ ಹೋಗಿ ಈ ಎಲ್ಲ ಸಂಗತಿಗಳನ್ನು ಹನ್ನೊಂದು ಮಂದಿಗೂ ಉಳಿದವರೆಲ್ಲರಿಗೂ ತಿಳಿಸಿದರು. 10  ಆ ಸ್ತ್ರೀಯರು ಮಗ್ದಲದ ಮರಿಯಳೂ ಯೊಹನ್ನಳೂ ಯಾಕೋಬನ ತಾಯಿಯಾದ ಮರಿಯಳೂ ಆಗಿದ್ದರು. ಇದಲ್ಲದೆ ಇವರ ಜೊತೆಯಲ್ಲಿದ್ದ ಉಳಿದ ಸ್ತ್ರೀಯರೂ ಅಪೊಸ್ತಲರಿಗೆ ಈ ವಿಷಯಗಳನ್ನು ತಿಳಿಸಿದರು. 11  ಆದರೆ ಅವರಿಗೆ ಈ ಮಾತುಗಳು ಅಸಂಬದ್ಧವಾಗಿ ತೋರಿದವು; ಅವರು ಆ ಸ್ತ್ರೀಯರ ಮಾತುಗಳನ್ನು ನಂಬಲಿಲ್ಲ. 12  ಆದರೆ ಪೇತ್ರನು ಎದ್ದು ಸ್ಮರಣೆಯ ಸಮಾಧಿಯ ಬಳಿಗೆ ಓಡಿಹೋಗಿ ಮುಂದಕ್ಕೆ ಬಗ್ಗಿ ಇಣಿಕಿ ನೋಡಿದಾಗ ಅಲ್ಲಿ ನಾರುಪಟ್ಟಿಗಳನ್ನು ಮಾತ್ರ ಕಂಡನು. ಆಗ ಅವನು ಏನಾಗಿರಬಹುದೆಂದು ತನ್ನೊಳಗೇ ಯೋಚಿಸುತ್ತಾ ಅಲ್ಲಿಂದ ಹೊರಟುಹೋದನು. 13  ಅದೇ ದಿನದಲ್ಲಿ ಶಿಷ್ಯರಲ್ಲಿ ಇಬ್ಬರು ಯೆರೂಸಲೇಮಿನಿಂದ ಸುಮಾರು ಏಳು ಮೈಲುಗಳಷ್ಟು ದೂರದಲ್ಲಿದ್ದ ಎಮ್ಮಾಹು ಎಂಬ ಹಳ್ಳಿಗೆ ಪ್ರಯಾಣಿಸುತ್ತಾ 14  ನಡೆದ ಈ ಎಲ್ಲ ಸಂಗತಿಗಳ ಕುರಿತು ಒಬ್ಬರಿಗೊಬ್ಬರು ಮಾತಾಡಿಕೊಳ್ಳುತ್ತಾ ಇದ್ದರು. 15  ಅವರು ಸಂಭಾಷಿಸುತ್ತಾ ಚರ್ಚಿಸುತ್ತಾ ಇದ್ದಾಗ ಯೇಸು ಅವರ ಹತ್ತಿರಕ್ಕೆ ಬಂದು ಅವರೊಂದಿಗೆ ನಡೆಯತೊಡಗಿದನು; 16  ಆದರೆ ಅವರ ಕಣ್ಣುಗಳು ಅವನನ್ನು ಗುರುತಿಸದಿರುವಂತೆ ಮಾಡಲ್ಪಟ್ಟವು. 17  ಅವನು ಅವರಿಗೆ, “ನೀವು ನಡೆಯುತ್ತಾ ನಿಮ್ಮ ಮಧ್ಯೆ ಚರ್ಚಿಸಿಕೊಳ್ಳುತ್ತಿರುವ ಈ ವಿಷಯಗಳು ಯಾವುವು?” ಎಂದಾಗ ಅವರು ದುಃಖದ ಮುಖವುಳ್ಳವರಾಗಿ ಅಲ್ಲೇ ನಿಂತರು. 18  ಅವರಲ್ಲಿ ಕ್ಲೀಯಾಫನೆಂಬವನು ಯೇಸುವಿಗೆ ಉತ್ತರಿಸುತ್ತಾ, “ಯೆರೂಸಲೇಮಿನಲ್ಲಿ ನೀನು ಪರದೇಶೀಯನಂತೆ ಪ್ರತ್ಯೇಕವಾಗಿ ವಾಸಿಸುತ್ತಿದ್ದೀಯೊ? ಇಲ್ಲವಾದರೆ ಈ ದಿನಗಳಲ್ಲಿ ಇಲ್ಲಿ ನಡೆಯುತ್ತಿರುವ ವಿಷಯಗಳು ನಿನಗೆ ಏಕೆ ತಿಳಿದಿಲ್ಲ?” ಎಂದು ಕೇಳಿದನು. 19  ಆಗ ಯೇಸು ಅವನಿಗೆ, “ಯಾವ ವಿಷಯಗಳು?” ಎಂದಾಗ ಅವರು, “ನಜರೇತಿನ ಯೇಸುವಿಗೆ ಸಂಬಂಧಿಸಿದ ವಿಷಯಗಳೇ; ಅವನು ದೇವರ ಮುಂದೆ ಮತ್ತು ಎಲ್ಲ ಜನರ ಮುಂದೆ ಕಾರ್ಯದಲ್ಲಿಯೂ ಮಾತಿನಲ್ಲಿಯೂ ಸಮರ್ಥನಾದ ಪ್ರವಾದಿಯಾಗಿದ್ದನು. 20  ಮತ್ತು ನಮ್ಮ ಮುಖ್ಯ ಯಾಜಕರೂ ಅಧಿಪತಿಗಳೂ ಅವನನ್ನು ಮರಣದಂಡನೆಗೆ ಒಪ್ಪಿಸಿ ಶೂಲಕ್ಕೇರಿಸಿದರು. 21  ಆದರೆ ಈ ಮನುಷ್ಯನು ಇಸ್ರಾಯೇಲ್ಯರನ್ನು ವಿಮೋಚಿಸಲಿಕ್ಕಿದ್ದವನು ಎಂದು ನಾವು ನಿರೀಕ್ಷಿಸಿದ್ದೆವು; ಇದಲ್ಲದೆ ಈ ಎಲ್ಲ ಸಂಗತಿಗಳು ಸಂಭವಿಸಿ ಇದೀಗ ಮೂರನೆಯ ದಿನ. 22  ಮಾತ್ರವಲ್ಲದೆ ನಮ್ಮ ಮಧ್ಯದಲ್ಲಿರುವ ಕೆಲವು ಸ್ತ್ರೀಯರು ಸಹ ನಮ್ಮನ್ನು ಆಶ್ಚರ್ಯಗೊಳಿಸಿದರು; ಏಕೆಂದರೆ ಅವರು ಇಂದು ಮುಂಜಾನೆ ಸ್ಮರಣೆಯ ಸಮಾಧಿಯ ಬಳಿಗೆ ಹೋಗಿದ್ದರಾದರೂ 23  ಅವನ ದೇಹವನ್ನು ಕಾಣದೆ ಹಿಂದೆ ಬಂದು, ಅವನು ಜೀವಿತನಾಗಿದ್ದಾನೆ ಎಂದು ಹೇಳಿದಂಥ ದೇವದೂತರ ದಿವ್ಯದರ್ಶನವನ್ನು ತಾವು ಕಂಡೆವು ಎಂದು ಹೇಳಿದರು. 24  ಮತ್ತು ನಮ್ಮೊಂದಿಗೆ ಇದ್ದವರಲ್ಲಿ ಕೆಲವರು ಸ್ಮರಣೆಯ ಸಮಾಧಿಯ ಬಳಿಗೆ ಹೋಗಿ ಆ ಸ್ತ್ರೀಯರು ಹೇಳಿದಂತೆಯೇ ಕಂಡರು; ಆದರೆ ಅವನನ್ನು ಮಾತ್ರ ಕಾಣಲಿಲ್ಲ” ಎಂದರು. 25  ಆಗ ಅವನು ಅವರಿಗೆ, “ಬುದ್ಧಿಹೀನರೇ, ಪ್ರವಾದಿಗಳು ಹೇಳಿದ ಎಲ್ಲ ವಿಷಯಗಳನ್ನು ನಂಬುವುದರಲ್ಲಿ ಮಂದ ಹೃದಯರೇ, 26  ಕ್ರಿಸ್ತನು ಈ ಎಲ್ಲ ಕಷ್ಟಗಳನ್ನು ಅನುಭವಿಸಿ ತನ್ನ ಮಹಿಮೆಯ ಸ್ಥಾನಕ್ಕೆ ಸೇರುವುದು ಅಗತ್ಯವಾಗಿತ್ತಲ್ಲವೆ?” ಎಂದು ಹೇಳಿದನು. 27  ಬಳಿಕ ಮೋಶೆಯ ಮತ್ತು ಎಲ್ಲ ಪ್ರವಾದಿಗಳ ಗ್ರಂಥದಿಂದ ಆರಂಭಿಸಿ, ಶಾಸ್ತ್ರಗ್ರಂಥದಾದ್ಯಂತ ತನ್ನ ಕುರಿತು ತಿಳಿಸಲ್ಪಟ್ಟಿರುವ ವಿಷಯಗಳನ್ನು ಅವರಿಗೆ ವಿವರಿಸಿದನು. 28  ಕೊನೆಗೆ ಅವರು ತಾವು ಪ್ರಯಾಣಿಸುತ್ತಿದ್ದ ಹಳ್ಳಿಯನ್ನು ಸಮೀಪಿಸಿದರು ಮತ್ತು ಅವನು ಇನ್ನೂ ಮುಂದಕ್ಕೆ ಪ್ರಯಾಣಿಸುವವನಂತೆ ಕಂಡಾಗ 29  ಅವರು ಅವನಿಗೆ, “ನಮ್ಮೊಂದಿಗೆ ಉಳಿದುಕೋ; ಏಕೆಂದರೆ ಈಗಾಗಲೇ ಸಂಜೆಯಾಗುತ್ತಿದೆ ಮತ್ತು ಹೊತ್ತು ಮುಳುಗಿದೆ” ಎಂದು ಬಲವಂತಮಾಡಿದರು. ಆಗ ಅವನು ಅವರೊಂದಿಗೆ ಉಳಿದುಕೊಳ್ಳಲು ಹೋದನು. 30  ಅವನು ಅವರೊಂದಿಗೆ ಊಟಕ್ಕೆ ಕುಳಿತುಕೊಂಡಿರುವಾಗ ಅವನು ರೊಟ್ಟಿಯನ್ನು ತೆಗೆದುಕೊಂಡು ಸ್ತೋತ್ರಮಾಡಿ ಮುರಿದು ಅವರಿಗೆ ಕೊಡಲಾರಂಭಿಸಿದನು. 31  ಆಗ ಅವರ ಕಣ್ಣುಗಳು ಪೂರ್ಣವಾಗಿ ತೆರೆಯಲ್ಪಟ್ಟವು ಮತ್ತು ಅವರು ಅವನ ಗುರುತು ಹಿಡಿದರು; ಬಳಿಕ ಅವನು ಅವರಿಂದ ಮರೆಯಾದನು. 32  ಆಗ ಅವರು ಒಬ್ಬರಿಗೊಬ್ಬರು, “ಅವನು ದಾರಿಯಲ್ಲಿ ನಮ್ಮೊಂದಿಗೆ ಮಾತಾಡುತ್ತಿದ್ದಾಗಲೂ ನಮಗೆ ಶಾಸ್ತ್ರಗ್ರಂಥವನ್ನು ಸಂಪೂರ್ಣವಾಗಿ ವಿವರಿಸಿ ಹೇಳುತ್ತಿದ್ದಾಗಲೂ ನಮ್ಮ ಹೃದಯವು ನಮ್ಮಲ್ಲಿ ಕುದಿಯಿತಲ್ಲವೇ?” ಎಂದು ಮಾತಾಡಿಕೊಂಡರು. 33  ಅದೇ ಗಳಿಗೆಯಲ್ಲಿ ಅವರು ಎದ್ದು ಯೆರೂಸಲೇಮಿಗೆ ಹಿಂದಿರುಗಿದರು; ಮತ್ತು ಅಲ್ಲಿ ಹನ್ನೊಂದು ಮಂದಿ ಶಿಷ್ಯರೂ ಅವರೊಂದಿಗಿದ್ದವರೂ ಒಟ್ಟಾಗಿ ಕೂಡಿಬಂದು, 34  “ಕರ್ತನು ಎಬ್ಬಿಸಲ್ಪಟ್ಟಿದ್ದಾನೆ ಎಂಬುದು ನಿಜ, ಅವನು ಸೀಮೋನನಿಗೆ ಕಾಣಿಸಿಕೊಂಡನು” ಎಂದು ಮಾತಾಡಿಕೊಳ್ಳುತ್ತಿರುವುದನ್ನು ಕಂಡರು. 35  ಆಗ ಅವರು ದಾರಿಯಲ್ಲಿ ನಡೆದ ಘಟನೆಗಳನ್ನೂ ರೊಟ್ಟಿಯನ್ನು ಮುರಿಯುವುದರ ಮೂಲಕ ಅವರು ಹೇಗೆ ಅವನ ಗುರುತು ಹಿಡಿದರೆಂಬುದನ್ನೂ ವಿವರಿಸಿದರು. 36  ಅವರು ಈ ವಿಷಯಗಳನ್ನು ಮಾತಾಡುತ್ತಿದ್ದಾಗ ಅವನು ತಾನೇ ಅವರ ಮಧ್ಯೆ ನಿಂತುಕೊಂಡು ಅವರಿಗೆ, “ನಿಮಗೆ ಶಾಂತಿಯಿರಲಿ” ಎಂದು ಹೇಳಿದನು. 37  ಆದರೆ ಅವರು ದಿಗಿಲುಬಿದ್ದು ಭಯಹಿಡಿದವರಾಗಿದ್ದ ಕಾರಣ ತಾವು ಆತ್ಮಜೀವಿಯನ್ನು ನೋಡಿದೆವೆಂದು ಭಾವಿಸಿದರು. 38  ಆದುದರಿಂದ ಅವನು ಅವರಿಗೆ, “ಏಕೆ ಕಳವಳಗೊಂಡಿದ್ದೀರಿ? ನಿಮ್ಮ ಹೃದಯಗಳಲ್ಲಿ ಸಂಶಯಗಳು ಹುಟ್ಟುವುದೇಕೆ? 39  ನನ್ನ ಕೈಗಳನ್ನೂ ಪಾದಗಳನ್ನೂ ನೋಡಿರಿ, ಇದು ನಾನೇ; ನನ್ನನ್ನು ಮುಟ್ಟಿನೋಡಿರಿ, ನಿಮಗೆ ಕಾಣುವ ಪ್ರಕಾರವೇ ನನಗೆ ಮಾಂಸವೂ ಎಲುಬುಗಳೂ ಇವೆ, ಆದರೆ ಆತ್ಮಜೀವಿಗೆ ಅವು ಇರುವುದಿಲ್ಲ” ಎಂದು ಹೇಳಿದನು. 40  ಅವನು ಇದನ್ನು ಹೇಳುತ್ತಿರುವಾಗ ಅವರಿಗೆ ತನ್ನ ಕೈಗಳನ್ನೂ ಪಾದಗಳನ್ನೂ ತೋರಿಸಿದನು. 41  ಆದರೆ ಅವರು ಸಂತೋಷದಿಂದಾಗಿ ಇನ್ನೂ ನಂಬದೆ ಆಶ್ಚರ್ಯಚಕಿತರಾಗಿದ್ದಾಗ ಅವನು ಅವರಿಗೆ, “ನಿಮ್ಮ ಬಳಿ ತಿನ್ನಲು ಏನಾದರೂ ಇದೆಯೊ?” ಎಂದು ಕೇಳಿದನು. 42  ಅವರು ಅವನಿಗೆ ಸುಟ್ಟ ಮೀನಿನ ಒಂದು ತುಂಡನ್ನು ಕೊಟ್ಟರು; 43  ಅವನು ಅದನ್ನು ತೆಗೆದುಕೊಂಡು ಅವರ ಕಣ್ಣಮುಂದೆಯೇ ತಿಂದನು. 44  ಬಳಿಕ ಅವನು ಅವರಿಗೆ, “ಮೋಶೆಯ ಧರ್ಮಶಾಸ್ತ್ರದಲ್ಲಿಯೂ ಪ್ರವಾದಿಗಳ ಗ್ರಂಥದಲ್ಲಿಯೂ ಕೀರ್ತನೆಗಳಲ್ಲಿಯೂ ನನ್ನ ಕುರಿತು ಬರೆಯಲ್ಪಟ್ಟಿರುವ ಎಲ್ಲ ವಿಷಯಗಳು ನೆರವೇರಲೇಬೇಕು ಎಂಬ ನನ್ನ ಈ ಮಾತುಗಳನ್ನು ನಾನು ನಿಮ್ಮ ಸಂಗಡ ಇದ್ದಾಗಲೇ ಹೇಳಿದ್ದೆನು” ಎಂದನು. 45  ಆಮೇಲೆ ಅವನು ಶಾಸ್ತ್ರಗ್ರಂಥದ ಅರ್ಥವನ್ನು ಗ್ರಹಿಸುವಂತೆ ಅವರ ಮನಸ್ಸುಗಳನ್ನು ಪೂರ್ಣವಾಗಿ ತೆರೆದು 46  ಅವರಿಗೆ, “ಕ್ರಿಸ್ತನು ಕಷ್ಟವನ್ನು ಅನುಭವಿಸಿ ಮೂರನೆಯ ದಿನದಲ್ಲಿ ಸತ್ತವರೊಳಗಿಂದ ಎಬ್ಬಿಸಲ್ಪಡುವನೆಂದೂ 47  ಅವನ ಹೆಸರಿನ ಆಧಾರದ ಮೇಲೆ ಪಾಪಗಳ ಕ್ಷಮಾಪಣೆಗಾಗಿ ಪಶ್ಚಾತ್ತಾಪಪಡುವಂತೆ ಎಲ್ಲ ಜನಾಂಗಗಳಿಗೆ ಸಾರಲಾಗುವುದೆಂದೂ ಬರೆಯಲ್ಪಟ್ಟಿದೆ—⁠ಯೆರೂಸಲೇಮಿನಿಂದ ಆರಂಭಿಸಿ 48  ನೀವು ಈ ಸಂಗತಿಗಳಿಗೆ ಸಾಕ್ಷಿಗಳಾಗಿರುವಿರಿ. 49  ನೋಡಿರಿ, ನನ್ನ ತಂದೆಯು ವಾಗ್ದಾನಮಾಡಿದ್ದನ್ನು ನಾನು ನಿಮ್ಮ ಮೇಲೆ ಕಳುಹಿಸುತ್ತೇನೆ. ಆದರೆ ನೀವು ಮೇಲಣಿಂದ ಬರುವ ಶಕ್ತಿಯಿಂದ ಹೊದಿಸಲ್ಪಡುವ ತನಕ ಪಟ್ಟಣದಲ್ಲೇ ಇರಿ” ಎಂದು ಹೇಳಿದನು. 50  ಅವನು ಅವರನ್ನು ಬೇಥಾನ್ಯದ ತನಕ ಕರೆದುಕೊಂಡು ಹೋಗಿ ತನ್ನ ಕೈಗಳನ್ನೆತ್ತಿ ಅವರನ್ನು ಆಶೀರ್ವದಿಸಿದನು. 51  ಅವನು ಅವರನ್ನು ಆಶೀರ್ವದಿಸುತ್ತಿರುವಾಗಲೇ ಅವರಿಂದ ಬೇರ್ಪಡಿಸಲ್ಪಟ್ಟು ಸ್ವರ್ಗಕ್ಕೆ ಒಯ್ಯಲ್ಪಡಲಾರಂಭಿಸಿದನು. 52  ಅವರು ಅವನಿಗೆ ಪ್ರಣಾಮಮಾಡಿ ಅಪಾರ ಆನಂದದಿಂದ ಯೆರೂಸಲೇಮಿಗೆ ಹಿಂದಿರುಗಿದರು. 53  ಮತ್ತು ಅವರು ದೇವರನ್ನು ಕೊಂಡಾಡುತ್ತಾ ಎಡೆಬಿಡದೆ ದೇವಾಲಯದಲ್ಲಿದ್ದರು.

ಪಾದಟಿಪ್ಪಣಿ