ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಆನ್‌ಲೈನ್‌ ಬೈಬಲ್ | ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರ

ಲೂಕ 21:1-38

21  ಅವನು ಕಣ್ಣೆತ್ತಿ ನೋಡಿದಾಗ ಐಶ್ವರ್ಯವಂತರು ಕಾಣಿಕೆ ಪೆಟ್ಟಿಗೆಗಳಲ್ಲಿ ತಮ್ಮ ಕಾಣಿಕೆಗಳನ್ನು ಹಾಕುತ್ತಿರುವುದನ್ನು ಕಂಡನು.  ಆಗ ಒಬ್ಬ ಬಡ ವಿಧವೆಯು ತೀರ ಕಡಮೆ ಬೆಲೆಯ ಎರಡು ಚಿಕ್ಕ ನಾಣ್ಯಗಳನ್ನು ಹಾಕುವುದನ್ನು ಅವನು ಕಂಡು,  “ಈ ವಿಧವೆಯು ಬಡವಳಾಗಿರುವುದಾದರೂ ಅವರೆಲ್ಲರು ಹಾಕಿದ್ದಕ್ಕಿಂತ ಹೆಚ್ಚನ್ನು ಹಾಕಿದ್ದಾಳೆ ಎಂದು ನಿಮಗೆ ನಿಜವಾಗಿ ಹೇಳುತ್ತೇನೆ.  ಏಕೆಂದರೆ ಅವರೆಲ್ಲರೂ ತಮಗೆ ಸಾಕಾಗಿ ಮಿಕ್ಕದ್ದನ್ನು ಕಾಣಿಕೆಯಾಗಿ ಕೊಟ್ಟರು, ಆದರೆ ಈ ಸ್ತ್ರೀಯು ತನ್ನ ಬಡತನದಲ್ಲಿಯೂ ತನ್ನಲ್ಲಿದ್ದ ಜೀವನಾಧಾರವನ್ನೆಲ್ಲ ಹಾಕಿದಳು” ಎಂದು ಹೇಳಿದನು.  ತದನಂತರ ಕೆಲವರು ದೇವಾಲಯದ ವಿಷಯದಲ್ಲಿ ಅದು ಎಂಥ ಉತ್ತಮವಾದ ಕಲ್ಲುಗಳಿಂದಲೂ ಸಮರ್ಪಿಸಲ್ಪಟ್ಟ ವಸ್ತುಗಳಿಂದಲೂ ಅಲಂಕರಿಸಲ್ಪಟ್ಟಿದೆ ಎಂದು ಮಾತಾಡುತ್ತಿದ್ದಾಗ  ಅವನು, “ನೀವು ನೋಡುತ್ತಿರುವ ಇವೆಲ್ಲವೂ ಕೆಡವಲ್ಪಟ್ಟು ಕಲ್ಲಿನ ಮೇಲೆ ಕಲ್ಲು ಉಳಿಯದ ದಿನಗಳು ಬರುವವು” ಅಂದನು.  ಅದಕ್ಕೆ ಅವರು, “ಬೋಧಕನೇ, ಈ ಸಂಗತಿಗಳು ನಿಜವಾಗಿಯೂ ಯಾವಾಗ ಸಂಭವಿಸುವವು? ಮತ್ತು ಇವು ಸಂಭವಿಸಲಿಕ್ಕಿರುವಾಗ ಯಾವ ಸೂಚನೆ ಇರುವುದು?” ಎಂದು ಅವನನ್ನು ಕೇಳಿದರು.  ಅದಕ್ಕೆ ಅವನು, “ನೀವು ತಪ್ಪುದಾರಿಗೆ ಎಳೆಯಲ್ಪಡದಂತೆ ಎಚ್ಚರವಾಗಿರಿ; ಅನೇಕರು ನನ್ನ ಹೆಸರಿನಲ್ಲಿ ಬಂದು ‘ನಾನೇ ಅವನು’ ಎಂದೂ ‘ನೇಮಿತ ಕಾಲವು ಸಮೀಪಿಸಿದೆ’ ಎಂದೂ ಹೇಳುವರು. ಅವರ ಹಿಂದೆ ಹೋಗಬೇಡಿ.  ಇದಲ್ಲದೆ ನೀವು ಯುದ್ಧಗಳ ಮತ್ತು ಅವ್ಯವಸ್ಥೆಗಳ ಕುರಿತು ಕೇಳಿಸಿಕೊಳ್ಳುವಾಗ ಭಯಪಡಬೇಡಿರಿ; ಈ ಸಂಗತಿಗಳು ಮೊದಲು ಸಂಭವಿಸಲೇಬೇಕು, ಆದರೂ ಕೂಡಲೆ ಅಂತ್ಯವು ಬರುವುದಿಲ್ಲ” ಎಂದನು. 10  ಬಳಿಕ ಅವನು ಅವರಿಗೆ ಮುಂದುವರಿಸಿ ಹೇಳಿದ್ದು: “ಜನಾಂಗಕ್ಕೆ ವಿರುದ್ಧವಾಗಿ ಜನಾಂಗವೂ ರಾಜ್ಯಕ್ಕೆ ವಿರುದ್ಧವಾಗಿ ರಾಜ್ಯವೂ ಏಳುವವು; 11  ಮಹಾ ಭೂಕಂಪಗಳಾಗುವವು; ಒಂದರ ನಂತರ ಇನ್ನೊಂದು ಸ್ಥಳದಲ್ಲಿ ಅಂಟುರೋಗಗಳೂ ಆಹಾರದ ಕೊರತೆಗಳೂ ಇರುವವು. ಭಯಾನಕ ದೃಶ್ಯಗಳೂ ಆಕಾಶದಿಂದ ಮಹಾ ಸೂಚನೆಗಳೂ ಉಂಟಾಗುವವು. 12  “ಆದರೆ ಇವೆಲ್ಲವುಗಳು ಸಂಭವಿಸುವುದಕ್ಕಿಂತ ಮುಂಚೆ ಜನರು ನಿಮ್ಮನ್ನು ಹಿಡಿದು ಸಭಾಮಂದಿರಗಳಿಗೂ ಸೆರೆಮನೆಗಳಿಗೂ ಒಪ್ಪಿಸಿ ನಿಮ್ಮನ್ನು ಹಿಂಸಿಸುವರು; ನನ್ನ ಹೆಸರಿನ ನಿಮಿತ್ತವಾಗಿ ನಿಮ್ಮನ್ನು ಅರಸರ ಮುಂದೆಯೂ ರಾಜ್ಯಪಾಲರ ಮುಂದೆಯೂ ಎಳೆದುಕೊಂಡುಹೋಗುವರು. 13  ಇದು ನಿಮಗೆ ಸಾಕ್ಷಿ ನೀಡುವ ಸಂದರ್ಭವಾಗಿರುವುದು. 14  ಆದುದರಿಂದ ನಿಮ್ಮನ್ನು ಸಮರ್ಥಿಸಿಕೊಳ್ಳಲಿಕ್ಕಾಗಿ ಹೇಗೆ ಮಾತಾಡಬೇಕು ಎಂಬುದನ್ನು ಪೂರ್ವಾಭ್ಯಾಸ ಮಾಡದಿರಲು ನಿಮ್ಮ ಹೃದಯಗಳಲ್ಲಿ ನಿಶ್ಚಯಿಸಿಕೊಳ್ಳಿರಿ; 15  ಏಕೆಂದರೆ ನಿಮ್ಮ ವಿರೋಧಿಗಳೆಲ್ಲರು ಸೇರಿದರೂ ನಿಮ್ಮನ್ನು ಎದುರಿಸಲು ಅಥವಾ ಪ್ರತಿಭಟಿಸಲು ಶಕ್ತರಾಗದಂಥ ಬಾಯನ್ನೂ ವಿವೇಕವನ್ನೂ ನಾನು ನಿಮಗೆ ಕೊಡುವೆನು. 16  ಮಾತ್ರವಲ್ಲದೆ ನಿಮ್ಮ ಹೆತ್ತವರು, ಸಹೋದರರು, ಸಂಬಂಧಿಕರು ಮತ್ತು ಸ್ನೇಹಿತರು ನಿಮ್ಮನ್ನು ಒಪ್ಪಿಸಿಕೊಡುವರು; ಅವರು ನಿಮ್ಮಲ್ಲಿ ಕೆಲವರನ್ನು ಕೊಲ್ಲಿಸುವರು; 17  ಮತ್ತು ನನ್ನ ಹೆಸರಿನ ನಿಮಿತ್ತ ನೀವು ಎಲ್ಲ ಜನರ ದ್ವೇಷಕ್ಕೆ ಗುರಿಯಾಗುವಿರಿ. 18  ಆದರೂ ನಿಮ್ಮ ತಲೆಗಳ ಒಂದು ಕೂದಲಾದರೂ ಎಂದಿಗೂ ಅಳಿದುಹೋಗದು. 19  ನೀವು ನಿಮ್ಮ ತಾಳ್ಮೆಯ ಮೂಲಕ ನಿಮ್ಮ ಪ್ರಾಣಗಳನ್ನು ಗಳಿಸಿಕೊಳ್ಳುವಿರಿ. 20  “ಇದಲ್ಲದೆ ಯೆರೂಸಲೇಮ್‌ ಪಟ್ಟಣವು ಶಿಬಿರ ಹೂಡಿರುವ ಸೈನ್ಯಗಳಿಂದ ಸುತ್ತುವರಿಯಲ್ಪಟ್ಟಿರುವುದನ್ನು ನೀವು ನೋಡುವಾಗ ಅದರ ಹಾಳುಗೆಡಹುವಿಕೆ ಸಮೀಪಿಸಿದೆ ಎಂದು ತಿಳಿದುಕೊಳ್ಳಿರಿ. 21  ಆಗ ಯೂದಾಯದಲ್ಲಿರುವವರು ಬೆಟ್ಟಗಳಿಗೆ ಓಡಿಹೋಗತೊಡಗಲಿ, ಯೆರೂಸಲೇಮ್‌ ಪಟ್ಟಣದೊಳಗಿರುವವರು ಅಲ್ಲಿಂದ ಹೊರಟುಹೋಗಲಿ ಮತ್ತು ಹಳ್ಳಿ ಪ್ರದೇಶಗಳಲ್ಲಿರುವವರು ಅದರೊಳಗೆ ಪ್ರವೇಶಿಸದಿರಲಿ; 22  ಏಕೆಂದರೆ ಬರೆದಿರುವುದೆಲ್ಲವೂ ನೆರವೇರುವಂತೆ ಇವು ನ್ಯಾಯತೀರ್ಪನ್ನು ವಿಧಿಸಿಕೊಡುವ ದಿನಗಳಾಗಿವೆ. 23  ಆ ದಿನಗಳಲ್ಲಿ ಗರ್ಭಿಣಿಯರಿಗೂ ಮೊಲೆಕೂಸಿರುವ ಸ್ತ್ರೀಯರಿಗೂ ಆಗುವ ಗತಿಯನ್ನು ಏನು ಹೇಳಲಿ! ಈ ದೇಶದ ಮೇಲೆ ಮಹಾ ಕಷ್ಟದೆಶೆಯೂ ಈ ಜನರ ಮೇಲೆ ಕಡುಕೋಪವೂ ಬರುವುದು. 24  ಅವರು ಕತ್ತಿಯ ಬಾಯಿಗೆ ಬೀಳುವರು ಮತ್ತು ಎಲ್ಲ ಜನಾಂಗಗಳಿಗೆ ಸೆರೆಯಾಳುಗಳಾಗಿ ಒಯ್ಯಲ್ಪಡುವರು; ಮತ್ತು ಅನ್ಯಜನಾಂಗಗಳ ನೇಮಿತ ಕಾಲಗಳು ತೀರುವ ತನಕ ಯೆರೂಸಲೇಮ್‌ ಪಟ್ಟಣವು ಅನ್ಯಜನಾಂಗಗಳಿಂದ ತುಳಿದಾಡಲ್ಪಡುವುದು. 25  “ಇದಲ್ಲದೆ ಸೂರ್ಯ, ಚಂದ್ರ ಮತ್ತು ನಕ್ಷತ್ರಗಳಲ್ಲಿ ಸೂಚನೆಗಳು ತೋರಿಬರುವವು; ಭೂಮಿಯ ಮೇಲೆ ಸಮುದ್ರದ ಭೋರ್ಗರೆತ ಮತ್ತು ಅದರ ತಳಮಳದಿಂದಾಗಿ ಜನಾಂಗಗಳು ದಿಕ್ಕುತೋಚದೆ ಸಂಕಟಪಡುವವು. 26  ಮತ್ತು ಆಕಾಶದ ಶಕ್ತಿಗಳು ಕುಲುಕಿಸಲ್ಪಡುವುದರಿಂದ ನಿವಾಸಿತ ಭೂಮಿಗೆ ಬರುತ್ತಿರುವ ಸಂಗತಿಗಳ ನಿಮಿತ್ತ ಜನರು ಭಯದಿಂದ ಮತ್ತು ನಿರೀಕ್ಷಣೆಯಿಂದ ಮೂರ್ಛೆಹೋದಂತಾಗುವರು. 27  ಆಗ ಅವರು ಮನುಷ್ಯಕುಮಾರನು ಶಕ್ತಿಯಿಂದಲೂ ಮಹಾ ಮಹಿಮೆಯಿಂದಲೂ ಮೇಘದಲ್ಲಿ ಬರುವುದನ್ನು ಕಾಣುವರು. 28  ಆದರೆ ಇವೆಲ್ಲವೂ ಸಂಭವಿಸಲು ತೊಡಗುವಾಗ ನಿಮ್ಮನ್ನು ನೆಟ್ಟಗಾಗಿಸಿಕೊಳ್ಳಿರಿ ಮತ್ತು ನಿಮ್ಮ ತಲೆಯನ್ನು ಮೇಲಕ್ಕೆತ್ತಿರಿ, ಏಕೆಂದರೆ ನಿಮ್ಮ ಬಿಡುಗಡೆಯು ಸಮೀಪವಾಗುತ್ತಿದೆ.” 29  ಬಳಿಕ ಅವನು ಅವರಿಗೆ ಒಂದು ದೃಷ್ಟಾಂತವನ್ನು ಹೇಳಿದನು: “ಅಂಜೂರ ಮರವನ್ನೂ ಇತರ ಎಲ್ಲ ಮರಗಳನ್ನೂ ಗಮನಿಸಿರಿ. 30  ಅವು ಚಿಗುರಿರುವುದನ್ನು ನೋಡುವಾಗ ಬೇಸಿಗೆಯು ಸಮೀಪಿಸಿದೆ ಎಂದು ನೀವಾಗಿಯೇ ತಿಳಿದುಕೊಳ್ಳುತ್ತೀರಿ. 31  ತದ್ರೀತಿಯಲ್ಲಿ ಈ ಸಂಗತಿಗಳು ಸಂಭವಿಸುತ್ತಿರುವುದನ್ನು ನೀವು ಸಹ ನೋಡುವಾಗ ದೇವರ ರಾಜ್ಯವು ಹತ್ತಿರದಲ್ಲಿದೆ ಎಂಬುದನ್ನು ತಿಳಿದುಕೊಳ್ಳಿರಿ. 32  ಎಲ್ಲ ಸಂಗತಿಗಳು ಸಂಭವಿಸುವ ತನಕ ಈ ಸಂತತಿಯು ಅಳಿದು ಹೋಗುವುದೇ ಇಲ್ಲ ಎಂದು ನಿಮಗೆ ನಿಜವಾಗಿ ಹೇಳುತ್ತೇನೆ. 33  ಆಕಾಶವೂ ಭೂಮಿಯೂ ಅಳಿದು ಹೋಗುವವು, ಆದರೆ ನನ್ನ ಮಾತುಗಳು ಎಂದಿಗೂ ಅಳಿದು ಹೋಗುವುದೇ ಇಲ್ಲ. 34  “ಆದರೆ ನಿಮ್ಮ ಹೃದಯಗಳು ಎಂದಿಗೂ ಅತಿಯಾದ ಭೋಜನ, ವಿಪರೀತವಾದ ಕುಡಿತ ಮತ್ತು ಜೀವನದ ಚಿಂತೆಗಳ ಭಾರದಿಂದ ಕುಗ್ಗಿಹೋಗದಂತೆ ಮತ್ತು ಆ ದಿನವು ಥಟ್ಟನೆ 35  ಉರ್ಲಿನಂತೆ ನಿಮ್ಮ ಮೇಲೆ ಎರಗಿ ಬರದಿರುವಂತೆ ನಿಮಗೆ ಗಮನಕೊಟ್ಟುಕೊಳ್ಳಿರಿ. ಏಕೆಂದರೆ ಅದು ಸರ್ವಭೂಮಿಯ ಮೇಲೆ ಜೀವಿಸುತ್ತಿರುವ ಎಲ್ಲರ ಮೇಲೆ ಬರುವುದು. 36  ಆದುದರಿಂದ, ಸಂಭವಿಸುವಂತೆ ವಿಧಿಸಲ್ಪಟ್ಟಿರುವ ಈ ಎಲ್ಲ ಸಂಗತಿಗಳಿಂದ ನೀವು ತಪ್ಪಿಸಿಕೊಳ್ಳಲು ಸಾಧ್ಯವಾಗುವಂತೆ ಮತ್ತು ಮನುಷ್ಯಕುಮಾರನ ಮುಂದೆ ನಿಲ್ಲಸಾಧ್ಯವಾಗುವಂತೆ ಎಲ್ಲ ಸಮಯದಲ್ಲಿ ಯಾಚನೆಗಳನ್ನು ಮಾಡುತ್ತಾ ಎಚ್ಚರದಿಂದಿರಿ.” 37  ಹೀಗೆ ಅವನು ಹಗಲಿನಲ್ಲಿ ದೇವಾಲಯದಲ್ಲಿ ಬೋಧಿಸುತ್ತಾ ರಾತ್ರಿಯಲ್ಲಿ ಹೊರಗೆ ಹೋಗಿ ಆಲೀವ್‌ ಗುಡ್ಡದ ಮೇಲೆ ಉಳಿದುಕೊಳ್ಳುತ್ತಾ ಇದ್ದನು. 38  ಜನರೆಲ್ಲರೂ ಬೆಳಗಾತ ಬೇಗನೆ ಎದ್ದು, ದೇವಾಲಯದಲ್ಲಿ ಅವನ ಮಾತುಗಳಿಗೆ ಕಿವಿಗೊಡುವುದಕ್ಕಾಗಿ ಅವನ ಬಳಿಗೆ ಬರುತ್ತಿದ್ದರು.

ಪಾದಟಿಪ್ಪಣಿ