ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಆನ್‌ಲೈನ್‌ ಬೈಬಲ್ | ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರ

ಲೂಕ 2:1-52

2  ಆ ದಿನಗಳಲ್ಲಿ ಇಡೀ ನಿವಾಸಿತ ಭೂಮಿಯು ಹೆಸರನ್ನು ನೋಂದಾಯಿಸಿಕೊಳ್ಳಬೇಕೆಂದು ಕೈಸರನಾದ ಅಗಸ್ಟಸನಿಂದ ಆಜ್ಞೆಯು ಹೊರಡಿಸಲ್ಪಟ್ಟಿತು;  (ಕುರೇನ್ಯನು ಸಿರಿಯದ ರಾಜ್ಯಪಾಲನಾಗಿದ್ದಾಗ ಈ ಮೊದಲ ನೋಂದಣಿಯು ಮಾಡಲ್ಪಟ್ಟಿತು;)  ಮತ್ತು ಎಲ್ಲ ಜನರು ಹೆಸರನ್ನು ನೋಂದಾಯಿಸಿಕೊಳ್ಳಲಿಕ್ಕಾಗಿ ತಮ್ಮ ತಮ್ಮ ಸ್ವಂತ ಊರುಗಳಿಗೆ ಪ್ರಯಾಣಿಸಿದರು.  ಯೋಸೇಫನು ದಾವೀದನ ಮನೆತನದವನೂ ವಂಶದವನೂ ಆಗಿದ್ದರಿಂದ ಅವನು ಸಹ ಗಲಿಲಾಯ ಸೀಮೆಯ ನಜರೇತ್‌ ಎಂಬ ಊರಿನಿಂದ ಹೊರಟು ಯೂದಾಯದಲ್ಲಿ ಬೇತ್ಲೆಹೇಮ್‌ ಎಂದು ಕರೆಯಲ್ಪಡುತ್ತಿದ್ದ ದಾವೀದನ ಊರಿಗೆ,  ತನ್ನ ಪತ್ನಿಯಾಗಿದ್ದ ಮರಿಯಳೊಂದಿಗೆ ಹೆಸರನ್ನು ನೋಂದಾಯಿಸಿಕೊಳ್ಳಲಿಕ್ಕಾಗಿ ಹೋದನು; ಇಷ್ಟರಲ್ಲಿ ಅವಳು ದಿನತುಂಬಿದ ಗರ್ಭಿಣಿಯಾಗಿದ್ದಳು.  ಅವರು ಅಲ್ಲಿದ್ದಾಗ ಅವಳಿಗೆ ಹೆರಿಗೆಯ ಕಾಲ ಬಂತು.  ಅವಳು ತನ್ನ ಚೊಚ್ಚಲು ಮಗನನ್ನು ಹೆತ್ತು ಬಟ್ಟೆಯಲ್ಲಿ ಸುತ್ತಿ ವಸತಿಗೃಹದಲ್ಲಿ ಅವರಿಗೆ ಸ್ಥಳವು ಸಿಗದಿದ್ದ ಕಾರಣ ಅವನನ್ನು ಒಂದು ಗೋದಲಿಯಲ್ಲಿ ಮಲಗಿಸಿದಳು.  ಅದೇ ಸೀಮೆಯಲ್ಲಿ ಕುರುಬರು ಮನೆಗಳಿಂದ ಹೊರಗೆ ವಾಸಿಸುತ್ತಿದ್ದು ರಾತ್ರಿಯಲ್ಲಿ ತಮ್ಮ ಮಂದೆಯನ್ನು ಕಾಯುತ್ತಿದ್ದರು.  ಇದ್ದಕ್ಕಿದ್ದಂತೆ ಯೆಹೋವನ ದೂತನು ಅವರ ಬಳಿಯಲ್ಲಿ ನಿಂತನು ಮತ್ತು ಯೆಹೋವನ ಮಹಿಮೆಯು ಅವರ ಸುತ್ತಲೂ ಪ್ರಕಾಶಿಸಿದಾಗ ಅವರು ತುಂಬ ಭಯಗೊಂಡರು. 10  ಆದರೆ ದೇವದೂತನು ಅವರಿಗೆ, “ಭಯಪಡಬೇಡಿ, ಎಲ್ಲ ಜನರಿಗೆ ಮಹಾ ಆನಂದವನ್ನು ಉಂಟುಮಾಡುವಂಥ ಶುಭವರ್ತಮಾನವನ್ನು ನಾನು ನಿಮಗೆ ಪ್ರಕಟಪಡಿಸುತ್ತಿದ್ದೇನೆ. 11  ಏಕೆಂದರೆ ದಾವೀದನ ಊರಿನಲ್ಲಿ ಇಂದು ನಿಮಗಾಗಿ ಒಬ್ಬ ರಕ್ಷಕನು ಹುಟ್ಟಿದ್ದಾನೆ; ಅವನು ಕರ್ತನಾಗಿರುವ ಕ್ರಿಸ್ತನೇ. 12  ಇದು ನಿಮಗೆ ಒಂದು ಗುರುತಾಗಿರುವುದು: ಬಟ್ಟೆಯಿಂದ ಸುತ್ತಲ್ಪಟ್ಟಿದ್ದು ಗೋದಲಿಯಲ್ಲಿ ಮಲಗಿರುವ ಒಂದು ಶಿಶುವನ್ನು ನೀವು ಕಾಣುವಿರಿ” ಎಂದು ಹೇಳಿದನು. 13  ಆಗ ಇದ್ದಕ್ಕಿದ್ದಂತೆ ಆ ದೇವದೂತನೊಂದಿಗೆ ಸ್ವರ್ಗೀಯ ಸೈನ್ಯದವರ ಒಂದು ಸಮೂಹವು ಕಾಣಿಸಿಕೊಂಡು ದೇವರನ್ನು ಸ್ತುತಿಸುತ್ತಾ, 14  “ಅತ್ಯುನ್ನತ ಸ್ಥಳಗಳಲ್ಲಿ ದೇವರಿಗೆ ಮಹಿಮೆ ಮತ್ತು ಭೂಮಿಯಲ್ಲಿ [ದೇವರ] ಪ್ರಸನ್ನತೆಯಿರುವ ಜನರ ಮಧ್ಯೆ ಶಾಂತಿ” ಎಂದು ಹೇಳಿತು. 15  ದೇವದೂತರು ಅವರನ್ನು ಬಿಟ್ಟು ಸ್ವರ್ಗಕ್ಕೆ ಹೋದ ಮೇಲೆ ಆ ಕುರುಬರು, “ನಾವು ಈಗಲೇ ಬೇತ್ಲೆಹೇಮಿಗೆ ಹೋಗಿ ಯೆಹೋವನು ನಮಗೆ ತಿಳಿಯಪಡಿಸಿರುವ ಈ ಸಂಗತಿಯು ನಡೆದಿರುವುದನ್ನು ನೋಡೋಣ” ಎಂದು ಒಬ್ಬರಿಗೊಬ್ಬರು ಮಾತಾಡಿಕೊಂಡರು. 16  ಅವರು ಅವಸರದಿಂದ ಹೋಗಿ ಮರಿಯಳನ್ನೂ ಯೋಸೇಫನನ್ನೂ ಗೋದಲಿಯಲ್ಲಿ ಮಲಗಿದ್ದ ಶಿಶುವನ್ನೂ ಕಂಡರು. 17  ಅವರು ಆ ಚಿಕ್ಕ ಮಗುವನ್ನು ನೋಡಿದಾಗ ಅದರ ಕುರಿತು ದೇವದೂತರು ತಮಗೆ ಹೇಳಿದ್ದನ್ನು ತಿಳಿಯಪಡಿಸಿದರು. 18  ಕುರುಬರು ಹೇಳಿದ ವಿಷಯಗಳನ್ನು ಕೇಳಿಸಿಕೊಂಡವರೆಲ್ಲರೂ ಅತ್ಯಾಶ್ಚರ್ಯಪಟ್ಟರು, 19  ಆದರೆ ಮರಿಯಳು ಈ ಎಲ್ಲ ಮಾತುಗಳನ್ನು ಮನಸ್ಸಿನಲ್ಲಿ ಜೋಪಾನವಾಗಿಟ್ಟುಕೊಳ್ಳತೊಡಗಿದಳು ಮತ್ತು ತನ್ನ ಹೃದಯದಲ್ಲಿ ತೀರ್ಮಾನಗಳನ್ನು ಮಾಡಿಕೊಂಡಳು. 20  ಬಳಿಕ ಕುರುಬರು ತಮಗೆ ತಿಳಿಸಲ್ಪಟ್ಟಂತೆಯೇ ತಾವು ಕೇಳಿದ ಮತ್ತು ನೋಡಿದ ಎಲ್ಲ ವಿಷಯಗಳಿಗಾಗಿ ದೇವರನ್ನು ಮಹಿಮೆಪಡಿಸುತ್ತಾ ಸ್ತುತಿಸುತ್ತಾ ಹಿಂದಿರುಗಿಹೋದರು. 21  ಶಿಶುವಿಗೆ ಸುನ್ನತಿಮಾಡಿಸಲಿಕ್ಕಾಗಿ ಎಂಟು ದಿನಗಳು ತುಂಬಿದ ಬಳಿಕ ಅವನನ್ನು ಯೇಸು ಎಂಬ ಹೆಸರಿನಿಂದ ಕರೆಯಲಾಯಿತು; ಅವನು ಗರ್ಭದಲ್ಲಿ ಉಂಟಾಗುವುದಕ್ಕೆ ಮುಂಚೆಯೇ ದೇವದೂತನು ಈ ಹೆಸರನ್ನು ಸೂಚಿಸಿದ್ದನು. 22  ಮಾತ್ರವಲ್ಲದೆ, ಮೋಶೆಯ ಧರ್ಮಶಾಸ್ತ್ರಕ್ಕನುಸಾರ ತಮ್ಮನ್ನು ಶುದ್ಧೀಕರಿಸಿಕೊಳ್ಳುವ ದಿನಗಳು ತುಂಬಿದಾಗ ಅವರು ಆ ಮಗುವನ್ನು ಯೆಹೋವನಿಗೆ ಸಮರ್ಪಿಸಲಿಕ್ಕಾಗಿ ಯೆರೂಸಲೇಮಿಗೆ ತಂದರು; 23  “ಪ್ರತಿಯೊಂದು ಚೊಚ್ಚಲು ಗಂಡುಮಗು ಯೆಹೋವನಿಗೆ ಪವಿತ್ರವೆನಿಸಿಕೊಳ್ಳುವುದು” ಎಂದು ಯೆಹೋವನ ಧರ್ಮಶಾಸ್ತ್ರದಲ್ಲಿ ಬರೆದಿರುವಂತೆ ಅವರು ಇದನ್ನು ಮಾಡಬೇಕಾಗಿತ್ತು 24  ಮತ್ತು ಯೆಹೋವನ ಧರ್ಮಶಾಸ್ತ್ರದಲ್ಲಿ ತಿಳಿಸಲ್ಪಟ್ಟಂತೆ, “ಒಂದು ಜೊತೆ ಬೆಳವಕ್ಕಿಯನ್ನು ಅಥವಾ ಪಾರಿವಾಳದ ಎರಡು ಮರಿಗಳನ್ನು” ಯಜ್ಞವಾಗಿ ಅರ್ಪಿಸಬೇಕಾಗಿತ್ತು. 25  ಇಗೋ, ಯೆರೂಸಲೇಮಿನಲ್ಲಿ ಸಿಮೆಯೋನನೆಂಬ ಒಬ್ಬ ಮನುಷ್ಯನಿದ್ದನು. ಅವನು ನೀತಿವಂತನೂ ದೇವಭಯವುಳ್ಳವನೂ ಆಗಿದ್ದು ಇಸ್ರಾಯೇಲ್‍ನ ಸಂತೈಸುವಿಕೆಗಾಗಿ ಕಾಯುತ್ತಾ ಇದ್ದನು ಮತ್ತು ಪವಿತ್ರಾತ್ಮವು ಅವನ ಮೇಲಿತ್ತು. 26  ಇದಲ್ಲದೆ ಯೆಹೋವ ದೇವರು ಕಳುಹಿಸಲಿರುವ ಕ್ರಿಸ್ತನನ್ನು ನೋಡುವುದಕ್ಕೆ ಮುಂಚೆ ಅವನು ಮರಣಹೊಂದುವುದಿಲ್ಲವೆಂದು ಪವಿತ್ರಾತ್ಮದ ಮೂಲಕ ಅವನಿಗೆ ದೈವಿಕವಾಗಿ ಪ್ರಕಟಪಡಿಸಲಾಗಿತ್ತು. 27  ಅವನು ದೇವರಾತ್ಮದ ಪ್ರೇರಣೆಯಿಂದ ದೇವಾಲಯಕ್ಕೆ ಬಂದನು; ಆಗ ಧರ್ಮಶಾಸ್ತ್ರದ ಪದ್ಧತಿಯನ್ನು ಪೂರೈಸಲು ತಂದೆತಾಯಿಗಳು ಮಗುವಾದ ಯೇಸುವನ್ನು ಅಲ್ಲಿಗೆ ತಂದರು. 28  ಅವನು ಆ ಮಗುವನ್ನು ತನ್ನ ಕೈಯಲ್ಲಿ ತೆಗೆದುಕೊಂಡು ದೇವರನ್ನು ಕೊಂಡಾಡುತ್ತಾ, 29  “ಪರಮಾಧಿಕಾರಿಯಾದ ಕರ್ತನೇ, ಈಗಲಾದರೂ ನೀನು ಪ್ರಕಟಪಡಿಸಿದಂತೆಯೇ ನಿನ್ನ ದಾಸನನ್ನು ಸಮಾಧಾನದಿಂದ ಹೋಗಲು ಅನುಮತಿಸುತ್ತಿದ್ದೀ; 30  ಏಕೆಂದರೆ ನನ್ನ ಕಣ್ಣುಗಳು ನಿನ್ನ ರಕ್ಷಣೆಯ ಮಾಧ್ಯಮವನ್ನು ನೋಡಿದವು; 31  ಅದನ್ನು ನೀನು ಎಲ್ಲ ಜನರ ಮುಂದೆ ಸಿದ್ಧಪಡಿಸಿದ್ದೀ. 32  ಇವನು ಜನಾಂಗಗಳ ಮುಸುಕನ್ನು ತೆಗೆಯುವುದಕ್ಕಾಗಿರುವ ಬೆಳಕೂ ನಿನ್ನ ಜನರಾದ ಇಸ್ರಾಯೇಲ್ಯರ ಮಹಿಮೆಯೂ ಆಗಿದ್ದಾನೆ” ಎಂದನು. 33  ಮಗುವಿನ ಕುರಿತು ತಿಳಿಸಲ್ಪಡುತ್ತಿದ್ದ ವಿಷಯಗಳಿಂದಾಗಿ ಅದರ ತಂದೆತಾಯಿಗಳು ಆಶ್ಚರ್ಯಪಡುತ್ತಾ ಇದ್ದರು. 34  ಇದಲ್ಲದೆ ಸಿಮೆಯೋನನು ಅವರನ್ನು ಆಶೀರ್ವದಿಸಿ ಅದರ ತಾಯಿಯಾದ ಮರಿಯಳಿಗೆ, “ಇಗೋ ಇವನು ಇಸ್ರಾಯೇಲಿನಲ್ಲಿರುವ ಅನೇಕರು ಬೀಳುವುದಕ್ಕೂ ಏಳುವುದಕ್ಕೂ ಕಾರಣನಾಗಿರುವನು ಮತ್ತು ಜನರು ವಿರುದ್ಧವಾಗಿ ಮಾತಾಡುವುದಕ್ಕೆ ಒಂದು ಗುರುತಾಗಿರುವನು; 35  ಹೀಗೆ ಅನೇಕರ ಹೃದಯಗಳ ಆಲೋಚನೆಗಳು ಬಯಲಾಗುವವು (ಹೌದು, ಒಂದು ಉದ್ದ ಕತ್ತಿಯು ನಿನ್ನ ಜೀವವನ್ನೇ ಭೇದಿಸುವುದು)” ಎಂದು ಹೇಳಿದನು. 36  ಅಲ್ಲಿ ಅಶೇರನ ಕುಲಕ್ಕೆ ಸೇರಿದ ಫನುವೇಲನ ಮಗಳಾದ ಅನ್ನಳೆಂಬ ಒಬ್ಬ ಪ್ರವಾದಿನಿ ಇದ್ದಳು (ಈ ಸ್ತ್ರೀಯು ಬಹಳ ಮುಪ್ಪಿನವಳಾಗಿದ್ದು ತನ್ನ ಕನ್ಯಾವಸ್ಥೆಯ ಬಳಿಕ ಏಳು ವರ್ಷ ಗಂಡನೊಂದಿಗೆ ಬಾಳಿದ್ದಳು 37  ಮತ್ತು ಈಗ ಅವಳು ಎಂಬತ್ತನಾಲ್ಕು ವರ್ಷ ಪ್ರಾಯದ ವಿಧವೆಯಾಗಿದ್ದಳು); ಅವಳು ದೇವಾಲಯವನ್ನು ಬಿಟ್ಟುಹೋಗದೆ ಹಗಲಿರುಳು ಉಪವಾಸ ಮತ್ತು ಯಾಚನೆಗಳಿಂದ ಪವಿತ್ರ ಸೇವೆಯನ್ನು ಸಲ್ಲಿಸುತ್ತಿದ್ದಳು. 38  ಅವಳು ಅದೇ ಗಳಿಗೆಯಲ್ಲಿ ಹತ್ತಿರ ಬಂದು ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಾ ಯೆರೂಸಲೇಮಿನ ಬಿಡುಗಡೆಗಾಗಿ ಕಾಯುತ್ತಿದ್ದವರೆಲ್ಲರೊಂದಿಗೆ ಆ ಮಗುವಿನ ಕುರಿತು ಮಾತಾಡತೊಡಗಿದಳು. 39  ಅವರು ಯೆಹೋವನ ಧರ್ಮಶಾಸ್ತ್ರಕ್ಕನುಸಾರ ಎಲ್ಲವನ್ನೂ ಪೂರೈಸಿದ ಬಳಿಕ ಗಲಿಲಾಯದ ನಜರೇತೆಂಬ ತಮ್ಮ ಸ್ವಂತ ಊರಿಗೆ ಹಿಂದಿರುಗಿದರು. 40  ಆ ಚಿಕ್ಕ ಮಗುವು ಬೆಳೆಯುತ್ತಾ ಬಲಗೊಳ್ಳುತ್ತಾ ವಿವೇಕದಿಂದ ತುಂಬಿದವನಾದನು ಮತ್ತು ದೇವರ ಅನುಗ್ರಹವು ಅವನ ಮೇಲಿರುತ್ತಾ ಮುಂದುವರಿಯಿತು. 41  ಅವನ ತಂದೆತಾಯಿಗಳಿಗೆ ಪ್ರತಿ ವರ್ಷ ಪಸ್ಕಹಬ್ಬಕ್ಕಾಗಿ ಯೆರೂಸಲೇಮಿಗೆ ಹೋಗುವ ಪದ್ಧತಿಯಿತ್ತು. 42  ಅವನು ಹನ್ನೆರಡು ವರ್ಷ ಪ್ರಾಯದವನಾದಾಗ ಹಬ್ಬದ ಪದ್ಧತಿಗನುಸಾರ ಅವರು ಅಲ್ಲಿಗೆ ಹೋಗಿ 43  ಹಬ್ಬವು ಮುಗಿಯುವ ತನಕ ಅಲ್ಲಿದ್ದರು. ಆದರೆ ಅವರು ಹಿಂದಿರುಗಿ ಬರುತ್ತಿದ್ದಾಗ ಬಾಲಕನಾದ ಯೇಸು ಯೆರೂಸಲೇಮಿನಲ್ಲೇ ಉಳಿದನು ಮತ್ತು ಅವನ ತಂದೆತಾಯಿಗಳು ಇದನ್ನು ಗಮನಿಸಲಿಲ್ಲ. 44  ಅವನು ಜೊತೆಯಲ್ಲಿ ಪ್ರಯಾಣಿಸುತ್ತಿರುವವರ ಗುಂಪಿನಲ್ಲಿ ಇರಬೇಕೆಂದು ಭಾವಿಸುತ್ತಾ ಅವರು ಒಂದು ದಿನದ ಪ್ರಯಾಣವನ್ನು ಮುಗಿಸಿದರು; ಬಳಿಕ ಅವರು ತಮ್ಮ ಸಂಬಂಧಿಕರ ಮತ್ತು ಪರಿಚಿತರ ನಡುವೆ ಅವನಿಗಾಗಿ ಹುಡುಕತೊಡಗಿದರು. 45  ಆದರೆ ಅವನು ಸಿಗದಿದ್ದಾಗ ಅವನನ್ನು ಬಹಳವಾಗಿ ಹುಡುಕುತ್ತಾ ಯೆರೂಸಲೇಮಿಗೆ ಹಿಂದಿರುಗಿದರು. 46  ಮೂರು ದಿನಗಳಾದ ಮೇಲೆ ಅವನು ದೇವಾಲಯದಲ್ಲಿ ಬೋಧಕರ ಮಧ್ಯೆ ಕುಳಿತುಕೊಂಡು ಅವರಿಗೆ ಕಿವಿಗೊಡುತ್ತಾ ಪ್ರಶ್ನೆಯನ್ನು ಕೇಳುತ್ತಾ ಇರುವುದನ್ನು ಅವರು ಕಂಡರು. 47  ಅವನ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದವರೆಲ್ಲರೂ ಅವನ ತಿಳಿವಳಿಕೆಗೂ ಉತ್ತರಗಳಿಗೂ ಆಶ್ಚರ್ಯಪಡುತ್ತಾ ಇದ್ದರು. 48  ತಂದೆತಾಯಿಗಳು ಅವನನ್ನು ಕಂಡು ಬೆರಗಾದರು ಮತ್ತು ಅವನ ತಾಯಿಯು ಅವನಿಗೆ, “ಕಂದಾ, ನೀನು ಏಕೆ ಹೀಗೆ ಮಾಡಿದೆ? ನಿನ್ನ ತಂದೆಯೂ ನಾನೂ ಎಷ್ಟೋ ಮನೋವ್ಯಥೆಯಿಂದ ನಿನ್ನನ್ನು ಹುಡುಕುತ್ತಾ ಇದ್ದೆವು” ಎಂದು ಹೇಳಿದಳು. 49  ಅದಕ್ಕೆ ಅವನು ಅವರಿಗೆ, “ನೀವು ನನ್ನನ್ನು ಹುಡುಕುತ್ತಾ ಹೋದದ್ದೇಕೆ? ನಾನು ನನ್ನ ತಂದೆಯ ಮನೆಯಲ್ಲಿರಬೇಕು ಎಂಬುದು ನಿಮಗೆ ತಿಳಿದಿರಲಿಲ್ಲವೊ?” ಎಂದನು. 50  ಆದರೆ ಅವನು ತಮಗೆ ಹೇಳಿದ ಮಾತಿನ ಅರ್ಥವನ್ನು ಅವರು ಗ್ರಹಿಸಲಿಲ್ಲ. 51  ಬಳಿಕ ಅವನು ಅವರೊಂದಿಗೆ ನಜರೇತಿಗೆ ಬಂದು ಅವರಿಗೆ ಅಧೀನನಾಗಿ ಮುಂದುವರಿದನು. ಮತ್ತು ಅವನ ತಾಯಿಯು ಈ ಎಲ್ಲ ಮಾತುಗಳನ್ನು ಜೋಪಾನವಾಗಿ ಹೃದಯದಲ್ಲಿಟ್ಟುಕೊಂಡಳು. 52  ಯೇಸು ವಿವೇಕದಲ್ಲಿಯೂ ಶಾರೀರಿಕ ಬೆಳವಣಿಗೆಯಲ್ಲಿಯೂ ದೇವರ ಮತ್ತು ಮನುಷ್ಯರ ಅನುಗ್ರಹದಲ್ಲಿಯೂ ಪ್ರಗತಿಹೊಂದುತ್ತಾ ಹೋದನು.

ಪಾದಟಿಪ್ಪಣಿ