ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಆನ್‌ಲೈನ್‌ ಬೈಬಲ್ | ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರ

ಲೂಕ 19:1-48

19  ಅವನು ಯೆರಿಕೋವನ್ನು ಪ್ರವೇಶಿಸಿ ಅದನ್ನು ದಾಟಿಹೋಗುತ್ತಾ ಇದ್ದನು.  ಅಲ್ಲಿ ಜಕ್ಕಾಯನೆಂಬ ಒಬ್ಬ ಮನುಷ್ಯನಿದ್ದನು; ಅವನು ತೆರಿಗೆ ವಸೂಲಿಗಾರರಲ್ಲಿ ಮುಖ್ಯಸ್ಥನೂ ಐಶ್ವರ್ಯವಂತನೂ ಆಗಿದ್ದನು.  ಈ ಯೇಸು ಯಾರೆಂದು ನೋಡಲು ಅವನು ಬಯಸಿದನು; ಆದರೆ ಅವನು ಗಿಡ್ಡನಾಗಿದ್ದುದರಿಂದ ಜನರ ಗುಂಪಿನ ನಿಮಿತ್ತ ಅವನನ್ನು ನೋಡಲಾರದೆ ಹೋದನು.  ಆದುದರಿಂದ ಅವನು ಯೇಸುವನ್ನು ನೋಡುವುದಕ್ಕಾಗಿ ಮುಂದೆ ಓಡಿಹೋಗಿ ಒಂದು ಆಲದ ಮರವನ್ನು ಹತ್ತಿದನು; ಏಕೆಂದರೆ ಅವನು ಆ ಮಾರ್ಗವಾಗಿ ಹಾದುಹೋಗಲಿದ್ದನು.  ಯೇಸು ಆ ಸ್ಥಳಕ್ಕೆ ಬಂದಾಗ ಮೇಲಕ್ಕೆ ನೋಡಿ ಅವನಿಗೆ “ಜಕ್ಕಾಯನೇ, ಬೇಗನೆ ಕೆಳಗಿಳಿದು ಬಾ; ಇಂದು ನಾನು ನಿನ್ನ ಮನೆಯಲ್ಲೇ ತಂಗಬೇಕು” ಎಂದನು.  ಇದನ್ನು ಕೇಳಿ ಅವನು ಬೇಗನೆ ಇಳಿದುಬಂದು ಸಂತೋಷದಿಂದ ಅವನನ್ನು ತನ್ನ ಅತಿಥಿಯಾಗಿ ಬರಮಾಡಿಕೊಂಡನು.  ಆದರೆ ಅವರು ಇದನ್ನು ನೋಡಿದಾಗ, “ಇವನು ಪಾಪಿಯಾದ ಮನುಷ್ಯನ ಮನೆಯಲ್ಲಿ ತಂಗಲು ಹೋದನು” ಎಂದು ಗುಣುಗುಟ್ಟತೊಡಗಿದರು.  ಜಕ್ಕಾಯನು ನಿಂತುಕೊಂಡು ಕರ್ತನಿಗೆ, “ಸ್ವಾಮಿ, ನನ್ನ ಆಸ್ತಿಯಲ್ಲಿ ಅರ್ಧವನ್ನು ನಾನು ಬಡವರಿಗೆ ಕೊಡುತ್ತೇನೆ; ಸುಳ್ಳು ಅಪವಾದವನ್ನು ಹೊರಿಸಿ ನಾನು ಯಾರಿಂದ ಏನನ್ನು ಸುಲಿಗೆಮಾಡಿದ್ದೆನೋ ಅದನ್ನು ನಾಲ್ಕರಷ್ಟು ಹಿಂದಕ್ಕೆ ಕೊಡುತ್ತೇನೆ” ಎಂದನು.  ಅದಕ್ಕೆ ಯೇಸು ಅವನಿಗೆ, “ಇಂದು ಈ ಮನೆಗೆ ರಕ್ಷಣೆಯು ಬಂದಿದೆ; ಏಕೆಂದರೆ ಇವನು ಸಹ ಅಬ್ರಹಾಮನ ವಂಶದವನು. 10  ಮನುಷ್ಯಕುಮಾರನು ಕಳೆದುಹೋದದ್ದನ್ನು ಹುಡುಕಿ ರಕ್ಷಿಸಲು ಬಂದನು” ಎಂದು ಹೇಳಿದನು. 11  ಅವರು ಈ ವಿಷಯಗಳಿಗೆ ಕಿವಿಗೊಡುತ್ತಿದ್ದಾಗ ಅವನು ಯೆರೂಸಲೇಮಿಗೆ ಹತ್ತಿರವಿದ್ದುದರಿಂದಲೂ ದೇವರ ರಾಜ್ಯವು ಕೂಡಲೆ ಪ್ರತ್ಯಕ್ಷವಾಗಲಿಕ್ಕಿದೆ ಎಂದು ಅವರು ಭಾವಿಸಿದ್ದರಿಂದಲೂ ಅವನು ಇನ್ನೊಂದು ದೃಷ್ಟಾಂತವನ್ನು ಹೇಳಿದನು. 12  ಅದೇನೆಂದರೆ, “ರಾಜಮನೆತನದ ಒಬ್ಬ ಮನುಷ್ಯನು ತನಗೋಸ್ಕರ ರಾಜ್ಯಾಧಿಕಾರವನ್ನು ಪಡೆದುಕೊಂಡು ಹಿಂದಿರುಗಲಿಕ್ಕಾಗಿ ದೂರದೇಶಕ್ಕೆ ಪ್ರಯಾಣಿಸಿದನು. 13  ಹೋಗುವ ಮುಂಚೆ ಅವನು ತನ್ನ ಹತ್ತು ಮಂದಿ ಆಳುಗಳನ್ನು ಕರೆದು ಅವರಿಗೆ ಹತ್ತು ಮೈನಾ ಹಣವನ್ನು ಕೊಟ್ಟು ‘ನಾನು ಬರುವ ತನಕ ವ್ಯಾಪಾರಮಾಡಿರಿ’ ಎಂದು ಹೇಳಿದನು. 14  ಆದರೆ ಅವನ ಊರಿನವರು ಅವನನ್ನು ದ್ವೇಷಿಸುತ್ತಿದ್ದುದರಿಂದ ಅವನ ಹಿಂದೆ ರಾಯಭಾರಿಗಳ ತಂಡವನ್ನು ಕಳುಹಿಸಿ, ‘ಈ ಮನುಷ್ಯನು ನಮ್ಮ ಮೇಲೆ ಅರಸನಾಗುವುದು ನಮಗೆ ಇಷ್ಟವಿಲ್ಲ’ ಎಂದು ಹೇಳಿಸಿದರು. 15  “ಸಮಯಾನಂತರ ಅವನು ರಾಜ್ಯಾಧಿಕಾರವನ್ನು ಪಡೆದುಕೊಂಡು ಹಿಂದಿರುಗಿ ಬಂದಾಗ ತಾನು ಬೆಳ್ಳಿ ಹಣವನ್ನು ಕೊಟ್ಟಿದ್ದ ಆ ಆಳುಗಳು ವ್ಯಾಪಾರದ ಚಟುವಟಿಕೆಯಿಂದ ಏನನ್ನು ಸಂಪಾದಿಸಿದ್ದಾರೆ ಎಂಬುದನ್ನು ತಿಳಿದುಕೊಳ್ಳಲಿಕ್ಕಾಗಿ ಅವರನ್ನು ತನ್ನ ಬಳಿಗೆ ಕರೆದುಕೊಂಡು ಬರುವಂತೆ ಆಜ್ಞಾಪಿಸಿದನು. 16  ಆಗ ಮೊದಲನೆಯವನು ಮುಂದೆ ಬಂದು, ‘ಸ್ವಾಮಿ, ನೀನು ಕೊಟ್ಟ ಒಂದು ಮೈನಾ ಹಣದಿಂದ ಹತ್ತು ಮೈನಾ ಹಣವನ್ನು ಸಂಪಾದಿಸಿದ್ದೇನೆ’ ಎಂದನು. 17  ಅದಕ್ಕೆ ಯಜಮಾನನು ಅವನಿಗೆ, ‘ಭೇಷ್‌, ಒಳ್ಳೇ ಆಳು ನೀನು! ಏಕೆಂದರೆ ನೀನು ಅತಿ ಚಿಕ್ಕ ವಿಷಯದಲ್ಲಿ ನಿನ್ನನ್ನು ನಂಬಿಗಸ್ತನಾಗಿ ತೋರಿಸಿಕೊಟ್ಟಿದ್ದೀ. ಆದುದರಿಂದ ಹತ್ತು ಪಟ್ಟಣಗಳ ಮೇಲೆ ನಿನ್ನನ್ನು ಅಧಿಕಾರಿಯಾಗಿ ನೇಮಿಸುತ್ತೇನೆ’ ಎಂದು ಹೇಳಿದನು. 18  ಬಳಿಕ ಎರಡನೆಯವನು ಬಂದು, ‘ಸ್ವಾಮಿ, ನೀನು ಕೊಟ್ಟ ಒಂದು ಮೈನಾ ಹಣದಿಂದ ಐದು ಮೈನಾ ಹಣವನ್ನು ಸಂಪಾದಿಸಿದ್ದೇನೆ’ ಎಂದನು. 19  ಇವನಿಗೂ ಆ ಯಜಮಾನನು, ‘ನೀನು ಸಹ ಐದು ಪಟ್ಟಣಗಳ ಮೇಲೆ ಅಧಿಕಾರಿಯಾಗಿರು’ ಎಂದು ಹೇಳಿದನು. 20  ಆದರೆ ಬೇರೊಬ್ಬನು ಬಂದು, ‘ಸ್ವಾಮಿ, ನೀನು ಕೊಟ್ಟ ಒಂದು ಮೈನಾ ಹಣ ಇಲ್ಲಿದೆ; ನಾನು ಅದನ್ನು ಬಟ್ಟೆಯಲ್ಲಿ ಕಟ್ಟಿ ಇಟ್ಟಿದ್ದೆ. 21  ನೀನು ಕಠಿಣ ಮನುಷ್ಯನಾಗಿರುವುದರಿಂದ ನಾನು ನಿನಗೆ ಭಯಪಟ್ಟೆ; ನೀನು ಠೇವಣಿ ಇಡದಿರುವುದನ್ನು ತೆಗೆಯುವವನೂ ಬಿತ್ತದಿರುವುದನ್ನು ಕೊಯ್ಯುವವನೂ ಆಗಿದ್ದೀ’ ಎಂದು ಹೇಳಿದನು. 22  ಅದಕ್ಕೆ ಯಜಮಾನನು ಅವನಿಗೆ, ‘ಕೆಟ್ಟ ಆಳೇ, ನಿನ್ನ ಮಾತಿನ ಆಧಾರದಿಂದಲೇ ನಾನು ನಿನಗೆ ತೀರ್ಪುಮಾಡುತ್ತೇನೆ. ನಾನು ಕಠಿಣ ಮನುಷ್ಯನೂ ಠೇವಣಿ ಇಡದಿರುವುದನ್ನು ತೆಗೆಯುವವನೂ ಬಿತ್ತದಿರುವುದನ್ನು ಕೊಯ್ಯುವವನೂ ಆಗಿದ್ದೇನೆ ಎಂದು ನಿನಗೆ ಗೊತ್ತಿತ್ತು ಅಲ್ಲವೆ? 23  ಹಾಗಾದರೆ ನೀನು ನನ್ನ ಬೆಳ್ಳಿಯ ಹಣವನ್ನು ಬಡ್ಡಿ ಅಂಗಡಿಯಲ್ಲಿ ಏಕೆ ಇಡಲಿಲ್ಲ? ನಾನು ಬಂದಾಗ ಅದನ್ನು ಬಡ್ಡಿಯೊಂದಿಗೆ ತೆಗೆದುಕೊಳ್ಳುತ್ತಿದ್ದೆನಲ್ಲಾ’ ಎಂದು ಹೇಳಿದನು. 24  “ಬಳಿಕ ಅವನು ಹತ್ತಿರ ನಿಂತಿದ್ದವರಿಗೆ, ‘ಇವನ ಬಳಿಯಿರುವ ಒಂದು ಮೈನಾ ಹಣವನ್ನು ತೆಗೆದುಕೊಂಡು ಹತ್ತು ಮೈನಾ ಹಣವಿರುವವನಿಗೆ ಕೊಡಿರಿ’ ಅಂದನು. 25  ಆದರೆ ಅವರು ಅವನಿಗೆ, ‘ಸ್ವಾಮಿ, ಅವನ ಬಳಿ ಹತ್ತು ಮೈನಾ ಹಣವಿದೆ’ ಎಂದರು.—⁠ 26  ‘ಇರುವ ಪ್ರತಿಯೊಬ್ಬನಿಗೆ ಹೆಚ್ಚು ಕೊಡಲ್ಪಡುವುದು; ಆದರೆ ಇಲ್ಲದವನಿಂದ ಇದ್ದದ್ದೂ ತೆಗೆದುಕೊಳ್ಳಲ್ಪಡುವುದು ಎಂದು ನಿಮಗೆ ಹೇಳುತ್ತೇನೆ. 27  ಇದಲ್ಲದೆ, ನಾನು ಅವರ ಮೇಲೆ ಅರಸನಾಗುವುದನ್ನು ಇಷ್ಟಪಡದಿದ್ದಂಥ ಈ ನನ್ನ ವೈರಿಗಳನ್ನು ಇಲ್ಲಿಗೆ ಕರೆದುಕೊಂಡು ಬಂದು ನನ್ನ ಮುಂದೆ ಸಂಹರಿಸಿರಿ’ ಅಂದನು.” 28  ಅವನು ಈ ವಿಷಯಗಳನ್ನು ಹೇಳಿದ ಮೇಲೆ ಮುಂದೆ ಮುಂದೆ ಹೋಗುತ್ತಾ ಯೆರೂಸಲೇಮಿನ ಕಡೆಗೆ ಪ್ರಯಾಣಮಾಡತೊಡಗಿದನು. 29  ಅವನು ಆಲೀವ್‌ ಗುಡ್ಡದ ಮೇಲಿದ್ದ ಬೇತ್ಫಗೆಗೂ ಬೇಥಾನ್ಯಕ್ಕೂ ಸಮೀಪಿಸಿದಾಗ ತನ್ನ ಶಿಷ್ಯರಲ್ಲಿ ಇಬ್ಬರನ್ನು ಕರೆದು, 30  “ನಿಮ್ಮ ಎದುರಿಗಿರುವ ಹಳ್ಳಿಗೆ ಹೋಗಿರಿ; ಮತ್ತು ಅಲ್ಲಿಗೆ ಹೋದ ಮೇಲೆ ಯಾವನೂ ಇದು ವರೆಗೆ ಸವಾರಿಮಾಡಿಲ್ಲದ ಒಂದು ಕತ್ತೇಮರಿಯು ಕಟ್ಟಲ್ಪಟ್ಟಿರುವುದನ್ನು ಕಾಣುವಿರಿ. ಅದನ್ನು ಬಿಚ್ಚಿ ತನ್ನಿರಿ. 31  ಯಾರಾದರೂ ನಿಮ್ಮನ್ನು, ‘ನೀವು ಇದನ್ನು ಏಕೆ ಬಿಚ್ಚುತ್ತಿದ್ದೀರಿ?’ ಎಂದು ಕೇಳಿದರೆ, ‘ಇದು ಕರ್ತನಿಗೆ ಬೇಕಾಗಿದೆ’ ಎನ್ನಿರಿ” ಎಂದು ಹೇಳಿಕಳುಹಿಸಿದನು. 32  ಆಗ ಕಳುಹಿಸಲ್ಪಟ್ಟವರು ಹೋಗಿ ಅವನು ತಮಗೆ ಹೇಳಿದಂತೆಯೇ ಅದನ್ನು ಕಂಡುಕೊಂಡರು. 33  ಆದರೆ ಅವರು ಆ ಕತ್ತೇಮರಿಯನ್ನು ಬಿಚ್ಚುತ್ತಿದ್ದಾಗ ಅದರ ಯಜಮಾನರು ಅವರಿಗೆ, “ನೀವೇಕೆ ಈ ಕತ್ತೇಮರಿಯನ್ನು ಬಿಚ್ಚುತ್ತಿದ್ದೀರಿ?” ಎಂದು ಕೇಳಿದರು. 34  ಅದಕ್ಕೆ ಅವರು, “ಇದು ಕರ್ತನಿಗೆ ಬೇಕಾಗಿದೆ” ಎಂದರು. 35  ಬಳಿಕ ಅವರು ಆ ಕತ್ತೇಮರಿಯನ್ನು ಯೇಸುವಿನ ಬಳಿಗೆ ತಂದು ತಮ್ಮ ಮೇಲಂಗಿಗಳನ್ನು ಅದರ ಮೇಲೆ ಹಾಕಿ ಯೇಸುವನ್ನು ಅದರ ಮೇಲೆ ಕೂರಿಸಿದರು. 36  ಅವನು ಮುಂದೆ ಸಾಗಿದಂತೆ ಅವರು ತಮ್ಮ ಮೇಲಂಗಿಗಳನ್ನು ದಾರಿಯಲ್ಲಿ ಹಾಸುತ್ತಾ ಇದ್ದರು. 37  ಅವನು ಆಲೀವ್‌ ಗುಡ್ಡದಿಂದ ಇಳಿಯುವ ದಾರಿಯ ಬಳಿಗೆ ಬಂದಾಗ ಶಿಷ್ಯರ ಗುಂಪಿನವರೆಲ್ಲ ತಾವು ನೋಡಿದ ಎಲ್ಲ ಮಹತ್ಕಾರ್ಯಗಳ ಕುರಿತು ಸಂತೋಷಪಡುತ್ತಾ ದೇವರನ್ನು ಸ್ತುತಿಸುತ್ತಾ, 38  “ಯೆಹೋವನ ನಾಮದಲ್ಲಿ ಅರಸನಾಗಿ ಬರುವವನಿಗೆ ಆಶೀರ್ವಾದ! ಸ್ವರ್ಗದಲ್ಲಿ ಶಾಂತಿ ಮತ್ತು ಅತ್ಯುನ್ನತ ಸ್ಥಳಗಳಲ್ಲಿ ಮಹಿಮೆ!” ಎಂದು ಗಟ್ಟಿಯಾದ ಸ್ವರದಿಂದ ಹೇಳಿದರು. 39  ಆದರೆ ಗುಂಪಿನಲ್ಲಿದ್ದ ಫರಿಸಾಯರಲ್ಲಿ ಕೆಲವರು ಅವನಿಗೆ, “ಬೋಧಕನೇ, ನಿನ್ನ ಶಿಷ್ಯರನ್ನು ಗದರಿಸು” ಎಂದು ಹೇಳಿದಾಗ 40  ಅವನು ಅವರಿಗೆ, “ಇವರು ಸುಮ್ಮನಿದ್ದರೆ ಕಲ್ಲುಗಳು ಕೂಗುವವು ಎಂದು ನಿಮಗೆ ಹೇಳುತ್ತೇನೆ” ಎಂದು ಉತ್ತರಿಸಿದನು. 41  ಅವನು ಪಟ್ಟಣದ ಸಮೀಪಕ್ಕೆ ಬಂದಾಗ ಅದನ್ನು ನೋಡಿ ಅದಕ್ಕಾಗಿ ಅತ್ತು, 42  “ನೀನಾದರೂ ಈ ದಿನದಲ್ಲಿ ಶಾಂತಿಗೆ ಸಂಬಂಧಿಸಿದ ಸಂಗತಿಗಳನ್ನು ಗ್ರಹಿಸಿರುತ್ತಿದ್ದರೆ ಒಳ್ಳೇದಿತ್ತು—⁠ಆದರೆ ಈಗ ಅವು ನಿನ್ನ ಕಣ್ಣಿಗೆ ಬೀಳದಂತೆ ಮರೆಯಾಗಿಡಲ್ಪಟ್ಟಿವೆ. 43  ಏಕೆಂದರೆ ನಿನ್ನ ವೈರಿಗಳು ನಿನ್ನ ಸುತ್ತಲೂ ಚೂಪಾದ ಕಂಬಗಳ ಕೋಟೆಯನ್ನು ಕಟ್ಟುವ ಮತ್ತು ನಿನಗೆ ಮುತ್ತಿಗೆಹಾಕಿ ಎಲ್ಲ ಕಡೆಗಳಿಂದ ನಿನ್ನನ್ನು ಪೀಡಿಸುವ ದಿನಗಳು ಬರುವವು. 44  ಅವರು ನಿನ್ನನ್ನೂ ನಿನ್ನಲ್ಲಿರುವ ನಿನ್ನ ಮಕ್ಕಳನ್ನೂ ನೆಲಕ್ಕೆ ಅಪ್ಪಳಿಸುವರು ಮತ್ತು ನಿನ್ನಲ್ಲಿ ಕಲ್ಲಿನ ಮೇಲೆ ಕಲ್ಲು ಉಳಿಯದಂತೆ ಮಾಡುವರು; ಏಕೆಂದರೆ ನಿನ್ನನ್ನು ಪರೀಕ್ಷಿಸಲಾಗುತ್ತಿದ್ದ ಸಮಯವನ್ನು ನೀನು ಗ್ರಹಿಸಲಿಲ್ಲ” ಎಂದು ಹೇಳಿದನು. 45  ಬಳಿಕ ಅವನು ದೇವಾಲಯವನ್ನು ಪ್ರವೇಶಿಸಿ ಅಲ್ಲಿ ಮಾರುತ್ತಿದ್ದವರನ್ನು ಹೊರಗಟ್ಟಲಾರಂಭಿಸಿ 46  ಅವರಿಗೆ, “ ‘ನನ್ನ ಆಲಯವು ಪ್ರಾರ್ಥನಾ ಮಂದಿರವೆನಿಸಿಕೊಳ್ಳುವುದು’ ಎಂದು ಬರೆದಿದೆ. ಆದರೆ ನೀವು ಅದನ್ನು ಕಳ್ಳರ ಗವಿಯನ್ನಾಗಿ ಮಾಡಿದ್ದೀರಿ” ಎಂದು ಹೇಳಿದನು. 47  ಇದಲ್ಲದೆ ಅವನು ಪ್ರತಿದಿನ ದೇವಾಲಯದಲ್ಲಿ ಬೋಧಿಸುತ್ತಿದ್ದನು. ಆದರೆ ಮುಖ್ಯ ಯಾಜಕರೂ ಶಾಸ್ತ್ರಿಗಳೂ ಜನರಲ್ಲಿ ಮುಖ್ಯಸ್ಥರೂ ಅವನನ್ನು ಕೊಲ್ಲುವುದಕ್ಕಾಗಿ ಸಂದರ್ಭ ಹುಡುಕುತ್ತಿದ್ದರು; 48  ಆದರೆ ಜನರೆಲ್ಲರೂ ಅವನ ಮಾತುಗಳನ್ನು ಕೇಳಿಸಿಕೊಳ್ಳಲಿಕ್ಕಾಗಿ ಅವನಿಗೆ ಅಂಟಿಕೊಂಡೇ ಇರುತ್ತಿದ್ದುದರಿಂದ ಕಾರ್ಯಸಾಧಕವಾಗಿ ಏನು ಮಾಡಬೇಕೆಂಬುದು ಅವರಿಗೆ ತೋಚಲಿಲ್ಲ.

ಪಾದಟಿಪ್ಪಣಿ