ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಲೂಕ 16:1-31

16  ತರುವಾಯ ಅವನು ಶಿಷ್ಯರಿಗೂ ಹೀಗೆ ಹೇಳಿದನು: “ಒಬ್ಬ ಮನುಷ್ಯನು ಐಶ್ವರ್ಯವಂತನಾಗಿದ್ದು ಅವನಿಗೆ ಒಬ್ಬ ಮನೆವಾರ್ತೆಯವನಿದ್ದನು. ಇವನು ಯಜಮಾನನ ವಸ್ತುಗಳನ್ನು ಹಾಳುಮಾಡುತ್ತಿದ್ದಾನೆ ಎಂಬ ದೂರು ಯಜಮಾನನಿಗೆ ಹೋಯಿತು.  ಆದುದರಿಂದ ಯಜಮಾನನು ಆ ಮನೆವಾರ್ತೆಯವನನ್ನು ಕರೆದು, ‘ಇದೇನು ನಾನು ನಿನ್ನ ವಿಷಯ​ದಲ್ಲಿ ಕೇಳುತ್ತಿರುವುದು? ನೀನು ಮನೆವಾರ್ತೆಯ ಲೆಕ್ಕವನ್ನು ಒಪ್ಪಿಸು; ಇನ್ನು ಮುಂದೆ ನೀನು ಮನೆಯನ್ನು ನೋಡಿಕೊಳ್ಳಲಾಗುವುದಿಲ್ಲ’ ಎಂದನು.  ಆಗ ಆ ಮನೆವಾರ್ತೆಯವನು, ‘ನನ್ನ ಯಜಮಾನನು ನನ್ನನ್ನು ಮನೆವಾರ್ತೆಯ ಕೆಲಸದಿಂದ ತೆಗೆದುಬಿಡುತ್ತಾನೆ, ನಾನೇನು ಮಾಡಲಿ? ಅಗೆಯಲು ನನ್ನಲ್ಲಿ ಸಾಕಷ್ಟು ಬಲವಿಲ್ಲ; ಭಿಕ್ಷೆಬೇಡಲು ನನಗೆ ನಾಚಿಕೆಯಾಗುತ್ತದೆ.  ಹಾ! ನನ್ನನ್ನು ಮನೆವಾರ್ತೆಯ ಕೆಲಸದಿಂದ ತೆಗೆದುಹಾಕಿದಾಗ, ಜನರು ನನ್ನನ್ನು ತಮ್ಮ ಮನೆಯೊಳಗೆ ಸೇರಿಸಿಕೊಳ್ಳುವಂತೆ ನಾನೇನು ಮಾಡಬೇಕು ಎಂಬುದು ನನಗೆ ಗೊತ್ತು’ ಎಂದು ತನ್ನೊಳಗೆ ಅಂದುಕೊಂಡನು.  ಅವನು ತನ್ನ ಯಜಮಾನನ ಸಾಲಗಾರರಲ್ಲಿ ಪ್ರತಿಯೊಬ್ಬರನ್ನು ತನ್ನ ಬಳಿಗೆ ಕರೆದು, ಮೊದಲನೆಯವನಿಗೆ ‘ನೀನು ನನ್ನ ಯಜಮಾನನಿಗೆ ಎಷ್ಟು ಸಾಲವನ್ನು ತೀರಿಸಬೇಕು?’ ಎಂದು ಕೇಳಿದನು.  ಅದಕ್ಕೆ ಅವನು, ‘ನೂರು ಬಾತ್‌* ಆಲೀವ್‌ ಎಣ್ಣೆ’ ಎಂದನು. ಆಗ ಅವನು, ‘ನಿನ್ನ ಕರಾರು ಪತ್ರವನ್ನು ಹಿಂದೆ ತೆಗೆದುಕೊಂಡು ಕುಳಿತುಕೊಂಡು ಬೇಗನೆ ಐವತ್ತು ಎಂದು ಬರೆ’ ಅಂದನು.  ಬಳಿಕ ಇನ್ನೊಬ್ಬನಿಗೆ ಅವನು, ‘ಈಗ ನೀನು ಎಷ್ಟು ಸಾಲವನ್ನು ತೀರಿಸಬೇಕು?’ ಎಂದು ಕೇಳಿದಾಗ ಅವನು ‘ನೂರು ಕೋರ್‌* ಗೋದಿ’ ಎಂದನು. ಅದಕ್ಕೆ ಅವನು, ‘ನಿನ್ನ ಕರಾರು ಪತ್ರವನ್ನು ಹಿಂದೆ ತೆಗೆದುಕೊಂಡು ಎಂಬತ್ತು ಎಂದು ಬರೆ’ ಅಂದನು.  ಈ ಮನೆವಾರ್ತೆಯವನು ಅನೀತಿವಂತನಾಗಿದ್ದರೂ ಪ್ರಾಯೋಗಿಕ ವಿವೇಕದಿಂದ ವರ್ತಿಸಿದ್ದಕ್ಕಾಗಿ ಅವನ ಯಜಮಾನನು ಅವನನ್ನು ಹೊಗಳಿದನು; ಏಕೆಂದರೆ ಈ ವಿಷಯಗಳ ವ್ಯವಸ್ಥೆಯ ಪುತ್ರರು ತಮ್ಮ ಸ್ವಂತ ಸಂತತಿಯವರ ವಿಷಯದಲ್ಲಿ ಬೆಳಕಿನ ಪುತ್ರರಿಗಿಂತ ಪ್ರಾಯೋಗಿಕ ರೀತಿಯಲ್ಲಿ ಹೆಚ್ಚು ವಿವೇಕಿಗಳಾಗಿದ್ದಾರೆ.  “ಇದಲ್ಲದೆ ನಾನು ನಿಮಗೆ ಹೇಳುವುದೇನೆಂದರೆ, ಅನೀತಿಯ ಐಶ್ವರ್ಯದ ಮೂಲಕ ನಿಮಗೋಸ್ಕರ ಸ್ನೇಹಿತರನ್ನು ಮಾಡಿಕೊಳ್ಳಿ; ಹಾಗೆ ಮಾಡಿದರೆ ಅದು ವಿಫಲಗೊಳ್ಳುವಾಗ ಅವರು ನಿಮ್ಮನ್ನು ನಿತ್ಯವಾದ ವಾಸಸ್ಥಾನಗಳಲ್ಲಿ ಸೇರಿಸಿಕೊಳ್ಳಬಹುದು. 10  ಅತ್ಯಲ್ಪವಾಗಿರುವುದರಲ್ಲಿ ನಂಬಿಗಸ್ತನಾಗಿರುವ ವ್ಯಕ್ತಿಯು ಬಹಳವಾದುದರಲ್ಲಿಯೂ ನಂಬಿಗಸ್ತನಾಗಿರುವನು. ಅತ್ಯಲ್ಪವಾಗಿರುವುದರಲ್ಲಿ ಅನೀತಿವಂತನಾಗಿರುವ ವ್ಯಕ್ತಿಯು ಬಹಳವಾದುದರಲ್ಲಿಯೂ ಅನೀತಿವಂತ​ನಾಗಿರುವನು. 11  ಆದುದರಿಂದ, ​ಅನೀತಿಯ ಐಶ್ವರ್ಯದ ವಿಷಯದಲ್ಲಿ ನೀವು ನಂಬಿಗಸ್ತರಾಗಿ ಕಂಡುಬಂದಿಲ್ಲವಾದರೆ ನಿಜವಾದುದನ್ನು ನಿಮ್ಮ ವಶಕ್ಕೆ ಯಾರು ಒಪ್ಪಿಸುವರು? 12  ಇನ್ನೊಬ್ಬನಿಗೆ ಸೇರಿದುದರ ವಿಷಯದಲ್ಲಿ ನೀವು ನಂಬಿಗಸ್ತರಾಗಿ ಕಂಡುಬಂದಿಲ್ಲವಾದರೆ, ನಿಮಗಾಗಿಯೇ ಇಟ್ಟಿರುವುದನ್ನು ನಿಮಗೆ ಯಾರು ಕೊಡುವರು? 13  ಯಾವ ಮನೆಯಾಳೂ ಇಬ್ಬರು ಯಜಮಾನರಿಗೆ ದಾಸನಾಗಲಾರನು; ಅವನು ಒಬ್ಬನನ್ನು ದ್ವೇಷಿಸಿ ಇನ್ನೊಬ್ಬನನ್ನು ಪ್ರೀತಿಸುವನು; ಅಥವಾ ಒಬ್ಬನಿಗೆ ಅಂಟಿಕೊಂಡು ಇನ್ನೊಬ್ಬನನ್ನು ಕಡೆಗಣಿಸುವನು. ನೀವು ದೇವರಿಗೂ ಐಶ್ವರ್ಯಕ್ಕೂ ದಾಸರಾಗಲಾರಿರಿ.” 14  ಈ ಎಲ್ಲ ವಿಷಯಗಳನ್ನು ಕೇಳಿಸಿಕೊಳ್ಳುತ್ತಿದ್ದ ಹಣದಾಸೆಯುಳ್ಳವರಾದ ಫರಿಸಾಯರು ಅವನನ್ನು ಅಪಹಾಸ್ಯ ಮಾಡಲಾರಂಭಿಸಿದರು. 15  ಇದರಿಂದಾಗಿ ಅವನು ಅವರಿಗೆ ಹೇಳಿದ್ದು: “ಮನುಷ್ಯರ ಮುಂದೆ ನೀತಿವಂತರೆಂದು ಹೇಳಿಕೊಳ್ಳುವವರು ನೀವು, ಆದರೆ ದೇವರು ನಿಮ್ಮ ಹೃದಯಗಳನ್ನು ಬಲ್ಲಾತನಾಗಿದ್ದಾನೆ; ಏಕೆಂದರೆ ಮನುಷ್ಯರ ಮಧ್ಯೆ ಯಾವುದು ಶ್ರೇಷ್ಠವೆಂದು ಎಣಿಸಲ್ಪಡುತ್ತದೋ ಅದು ದೇವರ ದೃಷ್ಟಿಯಲ್ಲಿ ಅಸಹ್ಯವಾಗಿದೆ. 16  “ಧರ್ಮಶಾಸ್ತ್ರವೂ ಪ್ರವಾದಿಗಳೂ ಯೋಹಾನನ ವರೆಗೆ ಇದ್ದರು. ಅಂದಿನಿಂದ ದೇವರ ರಾಜ್ಯವು ಸುವಾರ್ತೆಯಾಗಿ ಪ್ರಕಟಿಸಲ್ಪಡುತ್ತಿದೆ ಮತ್ತು ಎಲ್ಲ ರೀತಿಯ ವ್ಯಕ್ತಿಗಳು ಅದರ ಕಡೆಗೆ ಮುನ್ನುಗ್ಗುತ್ತಿದ್ದಾರೆ. 17  ಧರ್ಮಶಾಸ್ತ್ರದ ಒಂದು ಅಕ್ಷರದ ಚುಕ್ಕೆಯಾದರೂ ನೆರವೇರದೆ ಹೋಗುವುದಕ್ಕಿಂತ ಆಕಾಶವೂ ಭೂಮಿಯೂ ಗತಿಸಿಹೋಗುವುದು ಹೆಚ್ಚು ಸುಲಭ. 18  “ತನ್ನ ಪತ್ನಿಯನ್ನು ವಿಚ್ಛೇದಿಸಿ ಬೇರೊಬ್ಬಳನ್ನು ಮದುವೆಯಾಗುವ ಪ್ರತಿಯೊಬ್ಬನು ವ್ಯಭಿಚಾರ ಮಾಡುವವನಾಗಿದ್ದಾನೆ; ಒಬ್ಬ ಗಂಡನಿಂದ ವಿಚ್ಛೇದನೆ ಪಡೆದ ಸ್ತ್ರೀಯನ್ನು ಮದುವೆಯಾಗುವವನು ವ್ಯಭಿಚಾರ ಮಾಡುವವನಾಗಿದ್ದಾನೆ. 19  “ಐಶ್ವರ್ಯವಂತನಾಗಿದ್ದ ಒಬ್ಬ ಮನುಷ್ಯನು ಯಾವಾಗಲೂ ಕೆನ್ನೀಲಿ ಬಣ್ಣದ ವಸ್ತ್ರಗಳನ್ನೂ ನಾರುಮಡಿಯನ್ನೂ ಧರಿಸಿಕೊಂಡು ಪ್ರತಿದಿನವೂ ಸುಖಭೋಗದಲ್ಲಿ ಆನಂದಿಸುತ್ತಿದ್ದನು. 20  ಆದರೆ ಲಾಜರನೆಂಬ ಒಬ್ಬ ಭಿಕ್ಷುಕನನ್ನು ಅವನ ಮನೆಬಾಗಿಲಿನ ಬಳಿ ಬಿಡಲಾಗುತ್ತಿತ್ತು ಮತ್ತು ಅವನ ಮೈತುಂಬಾ ಹುಣ್ಣುಗಳಿದ್ದವು. 21  ಅವನು ಆ ಐಶ್ವರ್ಯವಂತನ ಮೇಜಿನಿಂದ ಬೀಳುವ ರೊಟ್ಟಿಯ ತುಣುಕು​ಗಳನ್ನು ತಿಂದು ಹೊಟ್ಟೆತುಂಬಿಸಿಕೊಳ್ಳಲು ಆಶೆಪಡುತ್ತಿದ್ದನು. ಇದಲ್ಲದೆ ನಾಯಿಗಳು ಬಂದು ಅವನ ಮೈಯ ಹುಣ್ಣುಗಳನ್ನು ನೆಕ್ಕುತ್ತಿದ್ದವು. 22  ಕಾಲಕಳೆದಂತೆ ಆ ಭಿಕ್ಷುಕನು ಸತ್ತುಹೋದನು ಮತ್ತು ದೇವದೂತರು ಅವನನ್ನು ತೆಗೆದುಕೊಂಡು ಹೋಗಿ ಅಬ್ರಹಾಮನ ಎದೆಗೆ ಒರಗಿಸಿದರು. “ತರುವಾಯ ಆ ಐಶ್ವರ್ಯವಂತನೂ ಸತ್ತನು ಮತ್ತು ಅವನನ್ನು ಹೂಣಿಡಲಾಯಿತು. 23  ಹೇಡೀಸ್‍ನಲ್ಲಿ ಅವನು ಯಾತನೆಪಡುತ್ತಾ ಇದ್ದಾಗ, ತನ್ನ ಕಣ್ಣೆತ್ತಿ ದೂರದಲ್ಲಿ ಅಬ್ರಹಾಮನನ್ನೂ ಅವನ ಎದೆಗೆ ಒರಗಿಕೊಂಡಿದ್ದ ಲಾಜರನನ್ನೂ ನೋಡಿದನು. 24  ಆಗ ಅವನು, ‘ತಂದೆಯಾದ ಅಬ್ರಹಾಮನೇ, ನನಗೆ ಕರುಣೆ ತೋರಿಸು; ಲಾಜರನು ತನ್ನ ಬೆರಳಿನ ತುದಿಯನ್ನು ನೀರಿನಲ್ಲಿ ಅದ್ದಿ ನನ್ನ ನಾಲಿಗೆಯನ್ನು ತಣ್ಣಗೆಮಾಡುವಂತೆ ಅವನನ್ನು ಕಳುಹಿಸು. ಏಕೆಂದರೆ ನಾನು ಉರಿಯುತ್ತಿರುವ ಈ ಬೆಂಕಿಯಲ್ಲಿ ಸಂಕಟಪಡುತ್ತಿದ್ದೇನೆ’ ಎಂದು ಕೂಗಿ ಹೇಳಿದನು. 25  ಅದಕ್ಕೆ ಅಬ್ರಹಾಮನು, ‘ಕಂದಾ, ನಿನ್ನ ಜೀವಮಾನ ಕಾಲದಲ್ಲಿ ನೀನು ಬಯಸಿದ ಎಲ್ಲ ಒಳ್ಳೆಯ ವಿಷಯಗಳನ್ನು ಸಂಪೂರ್ಣವಾಗಿ ಪಡೆದುಕೊಂಡೆ, ಆದರೆ ಲಾಜರನು ಹಾನಿಕರ ವಿಷಯಗಳನ್ನೇ ಅನುಭವಿಸಿದ್ದನ್ನು ನೆನಪಿಗೆ ತಂದುಕೊ. ಈಗ ಇಲ್ಲಿ ಅವನಿಗೆ ನೆಮ್ಮದಿ ಇದೆ, ನೀನು ಸಂಕಟಪಡುತ್ತಿದ್ದೀ. 26  ಇದಲ್ಲದೆ, ನಮ್ಮ ಮತ್ತು ನಿಮ್ಮ ನಡುವೆ ಒಂದು ದೊಡ್ಡ ಕಂದರ ಸ್ಥಾಪಿಸಲ್ಪಟ್ಟಿದೆ; ಇದರಿಂದಾಗಿ, ಇಲ್ಲಿಂದ ನಿಮ್ಮ ಬಳಿಗೆ ಹೋಗಲು ಬಯಸುವವರು ಹೋಗಲಾರರು ಮತ್ತು ಅಲ್ಲಿಂದ ಜನರು ನಮ್ಮ ಕಡೆಗೆ ದಾಟಿಬರಲಾರರು’ ಎಂದನು. 27  ಆಗ ಅವನು, ‘ಹಾಗಾದರೆ ತಂದೆಯೇ, ಅವನನ್ನು ನನ್ನ ತಂದೆಯ ಮನೆಗೆ ಕಳುಹಿಸುವಂತೆ ನಿನ್ನನ್ನು ಕೇಳಿಕೊಳ್ಳುತ್ತೇನೆ. 28  ಏಕೆಂದರೆ ನನಗೆ ಐದು ಮಂದಿ ಸಹೋದರರಿದ್ದಾರೆ; ಅವರೂ ಈ ಯಾತನೆಯ ಸ್ಥಳಕ್ಕೆ ಸೇರದಂತೆ ಅವನು ಅವರಿಗೆ ಸಮಗ್ರವಾದ ಸಾಕ್ಷಿಯನ್ನು ಕೊಡಬಹುದು’ ಎಂದನು. 29  ಆದರೆ ಅಬ್ರಹಾಮನು, ‘ಅವರಿಗೆ ಮೋಶೆಯ ಮತ್ತು ಪ್ರವಾದಿಗಳ ಗ್ರಂಥಗಳಿವೆ; ಅವರು ಅವುಗಳಿಗೆ ಕಿವಿಗೊಡಲಿ’ ಎಂದು ಹೇಳಿದನು. 30  ಅದಕ್ಕೆ ಅವನು ‘ತಂದೆಯಾದ ಅಬ್ರಹಾಮನೇ, ಹಾಗಲ್ಲ. ಸತ್ತವರೊಳಗಿಂದ ಯಾರಾದರು ಅವರ ಬಳಿಗೆ ಹೋದರೆ ಅವರು ಪಶ್ಚಾತ್ತಾಪ​ಪಡುವರು’ ಎಂದು ಹೇಳಿದನು. 31  ಆದರೆ ಅಬ್ರಹಾಮನು ಅವನಿಗೆ, ‘ಅವರು ಮೋಶೆಯ ಮತ್ತು ಪ್ರವಾದಿಗಳ ಗ್ರಂಥಗಳಿಗೆ ಕಿವಿಗೊಡದಿದ್ದರೆ ಸತ್ತವರೊಳಗಿಂದ ಒಬ್ಬನು ಎದ್ದರೂ ಅವರನ್ನು ಒಡಂಬಡಿಸಲಾಗುವುದಿಲ್ಲ’ ಎಂದು ಹೇಳಿದನು.”

ಪಾದಟಿಪ್ಪಣಿ

ಲೂಕ 16:6 ಒಂದು ಬಾತ್‌ ಅಳತೆಯು 22 ಲೀಟರ್‌ ಆಗಿತ್ತು.
ಲೂಕ 16:7 ಒಂದು ಕೋರ್‌ ಅಳತೆಯು 170 ಕಿಲೋ ಆಗಿತ್ತು.