ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಲೂಕ 15:1-32

15  ಆಗ ಎಲ್ಲ ತೆರಿಗೆ ವಸೂಲಿ​ಗಾರರೂ ಪಾಪಿಗಳೂ ಅವನ ಮಾತುಗಳನ್ನು ಕೇಳಿಸಿಕೊಳ್ಳಲಿಕ್ಕಾಗಿ ಅವನ ಬಳಿಗೆ ಬರತೊಡಗಿದರು.  ಇದರಿಂದಾಗಿ ಫರಿಸಾಯರೂ ಶಾಸ್ತ್ರಿಗಳೂ, “ಈ ಮನುಷ್ಯನು ಪಾಪಿಗಳನ್ನು ಸೇರಿಸಿಕೊಂಡು ಅವರೊಂದಿಗೆ ಊಟಮಾಡುತ್ತಾನೆ” ಎಂದು ಗುಣುಗುಟ್ಟುತ್ತಾ ಇದ್ದರು.  ಆಗ ಅವನು ಅವರಿಗೆ ಈ ದೃಷ್ಟಾಂತವನ್ನು ಹೇಳಿದನು:  “ನಿಮ್ಮಲ್ಲಿ ನೂರು ಕುರಿಗಳನ್ನು ಹೊಂದಿರುವ ಯಾವ ಮನುಷ್ಯನು ಅವುಗಳಲ್ಲಿ ಒಂದನ್ನು ಕಳೆದುಕೊಂಡಾಗ ತೊಂಬತ್ತೊಂಬತ್ತು ಕುರಿಗಳನ್ನು ಅರಣ್ಯದಲ್ಲೇ ಬಿಟ್ಟು ಕಳೆದು​ಹೋದ ಕುರಿಯನ್ನು ಕಂಡುಕೊಳ್ಳುವ ವರೆಗೆ ಅದಕ್ಕಾಗಿ ಹುಡುಕುತ್ತಾ ಹೋಗದೆ ಇರುವನು?  ಅವನು ಅದನ್ನು ಕಂಡುಕೊಂಡಾಗ, ಅದನ್ನು ತನ್ನ ಹೆಗಲ ಮೇಲೆ ಎತ್ತಿಕೊಂಡು ಸಂತೋಷಪಡುತ್ತಾನೆ.  ಮನೆಗೆ ಬಂದ ಬಳಿಕ ಅವನು ತನ್ನ ಸ್ನೇಹಿತರನ್ನೂ ನೆರೆಯವರನ್ನೂ ಕರೆದು ಅವರಿಗೆ, ‘ನನ್ನೊಂದಿಗೆ ಸಂತೋಷಿಸಿರಿ, ಏಕೆಂದರೆ ಕಳೆದುಹೋಗಿದ್ದ ನನ್ನ ಕುರಿಯು ನನಗೆ ಸಿಕ್ಕಿದೆ’ ಎಂದು ಹೇಳುವನು.  ಆದುದರಿಂದ ಪಶ್ಚಾತ್ತಾಪದ ಅಗತ್ಯವಿಲ್ಲದ ತೊಂಬತ್ತೊಂಬತ್ತು ಮಂದಿ ನೀತಿ​ವಂತರಿಗಿಂತ ಪಶ್ಚಾತ್ತಾಪಪಡುವ ಒಬ್ಬ ಪಾಪಿಯ ವಿಷಯ​ದಲ್ಲಿ ಸ್ವರ್ಗದಲ್ಲಿ ಹೆಚ್ಚು ಸಂತೋಷ ಉಂಟಾಗುವುದೆಂದು ನಿಮಗೆ ಹೇಳುತ್ತೇನೆ.  “ಅಥವಾ ಹತ್ತು ದ್ರಾಕ್ಮಾ* ನಾಣ್ಯಗಳನ್ನು ಹೊಂದಿರುವ ಯಾವ ಸ್ತ್ರೀಯು ಅವುಗಳಲ್ಲಿ ಒಂದು ದ್ರಾಕ್ಮಾ ನಾಣ್ಯವನ್ನು ಕಳೆದುಕೊಳ್ಳುವುದಾದರೆ ದೀಪವನ್ನು ಹಚ್ಚಿ ಮನೆಯನ್ನು ಗುಡಿಸಿ ಅದು ಸಿಗುವ ವರೆಗೆ ಜಾಗರೂಕತೆಯಿಂದ ಹುಡುಕದೆ ಇರುವಳು?  ಅವಳಿಗೆ ಅದು ಸಿಕ್ಕಿದಾಗ ಅವಳು ತನ್ನ ಗೆಳತಿಯರನ್ನೂ ನೆರೆಯವರನ್ನೂ ಕರೆದು, ‘ನನ್ನ ಸಂಗಡ ಸಂತೋಷಿಸಿರಿ; ನಾನು ಕಳೆದುಕೊಂಡಿದ್ದ ದ್ರಾಕ್ಮಾ ನಾಣ್ಯವು ನನಗೆ ಸಿಕ್ಕಿದೆ’ ಎಂದು ಹೇಳುವಳು. 10  ಹೀಗೆ ಪಶ್ಚಾತ್ತಾಪಪಡುವ ಒಬ್ಬ ಪಾಪಿಯ ವಿಷಯ​ದಲ್ಲಿ ದೇವದೂತರ ನಡುವೆ ಸಂತೋಷ ಉಂಟಾಗುತ್ತದೆ ಎಂದು ನಿಮಗೆ ಹೇಳುತ್ತೇನೆ.” 11  ಬಳಿಕ ಅವನು ಹೇಳಿದ್ದು: “ಒಬ್ಬ ಮನುಷ್ಯನಿಗೆ ಇಬ್ಬರು ಪುತ್ರರಿದ್ದರು. 12  ಅವರಲ್ಲಿ ಕಿರಿಯವನು ತನ್ನ ತಂದೆಗೆ ‘ಅಪ್ಪಾ, ಆಸ್ತಿಯಲ್ಲಿ ನನಗೆ ಸೇರುವ ಪಾಲನ್ನು ಕೊಡು’ ಎಂದು ಕೇಳಿದನು. ಆಗ ಅವನು ತನ್ನ ಆಸ್ತಿಯನ್ನು ಅವರಿಗೆ ಪಾಲುಮಾಡಿಕೊಟ್ಟನು. 13  ಕೆಲವು ದಿನಗಳಾದ ಮೇಲೆ ಆ ಕಿರಿಯ ಮಗನು ಎಲ್ಲವನ್ನು ಒಟ್ಟುಗೂಡಿಸಿಕೊಂಡು ದೂರದೇಶಕ್ಕೆ ಪ್ರಯಾಣಿಸಿ ಅಲ್ಲಿ ಪಟಿಂಗತನದ ಬದುಕನ್ನು ನಡೆಸಿ ತನ್ನ ಆಸ್ತಿಯನ್ನು ಹಾಳುಮಾಡಿದನು. 14  ಹೀಗೆ ಅವನು ಎಲ್ಲವನ್ನೂ ಹಾಳುಮಾಡಿದ ಬಳಿಕ ಆ ದೇಶದಾದ್ಯಂತ ಘೋರವಾದ ಕ್ಷಾಮ ಉಂಟಾಯಿತು ಮತ್ತು ಅವನಿಗೆ ನೆರವಿನ ಆವಶ್ಯಕತೆ ಉಂಟಾಗ​ತೊಡಗಿತು. 15  ಆಗ ಅವನು ಹೋಗಿ ಆ ದೇಶದ ನಿವಾಸಿಗಳಲ್ಲಿ ಒಬ್ಬನೊಂದಿಗೆ ಸೇರಿಕೊಂಡನು. ಆ ಮನುಷ್ಯನು ಹಂದಿಗಳ ಹಿಂಡನ್ನು ಕಾಯಲಿಕ್ಕಾಗಿ ಅವನನ್ನು ತನ್ನ ಹೊಲಗಳಿಗೆ ಕಳುಹಿಸಿದನು. 16  ಆಗ ಅವನು ಹಂದಿಗಳು ತಿನ್ನುತ್ತಿದ್ದ ಕ್ಯಾರಬ್‌ ಕಾಯಿಗಳನ್ನಾದರೂ ತಿಂದು ಹೊಟ್ಟೆತುಂಬಿಸಿ​ಕೊಳ್ಳಲು ಬಯಸಿದನು. ಮತ್ತು ಅವನಿಗೆ ಯಾರೂ ಏನನ್ನೂ ಕೊಡುತ್ತಿರಲಿಲ್ಲ. 17  “ಅವನಿಗೆ ಬುದ್ಧಿಬಂದಾಗ ಅವನು, ‘ನನ್ನ ತಂದೆಯ ಎಷ್ಟೋ ಮಂದಿ ಕೂಲಿಯಾಳುಗಳಿಗೆ ಬೇಕಾದಷ್ಟು ಆಹಾರವಿದೆ; ನಾನಾದರೊ ಇಲ್ಲಿ ಬರದಿಂದಾಗಿ ಆಹಾರವಿಲ್ಲದೆ ಸಾಯುತ್ತಿದ್ದೇನೆ! 18  ನಾನು ಎದ್ದು ನನ್ನ ತಂದೆಯ ಬಳಿಗೆ ಹೋಗಿ “ಅಪ್ಪಾ, ನಾನು ಸ್ವರ್ಗಕ್ಕೆ ವಿರುದ್ಧವಾಗಿಯೂ ನಿನಗೆ ವಿರುದ್ಧವಾಗಿಯೂ ಪಾಪಮಾಡಿದ್ದೇನೆ. 19  ಇನ್ನು ಮುಂದೆ ನಿನ್ನ ಮಗನೆನಿಸಿಕೊಳ್ಳುವುದಕ್ಕೆ ನಾನು ಯೋಗ್ಯನಲ್ಲ. ನನ್ನನ್ನು ನಿನ್ನ ಕೂಲಿಯಾಳುಗಳಲ್ಲಿ ​ಒಬ್ಬನಾಗಿ ಇಟ್ಟುಕೊ” ಎಂದು ಹೇಳುತ್ತೇನೆ’ ಅಂದುಕೊಂಡು 20  ಎದ್ದು ತನ್ನ ತಂದೆಯ ಬಳಿಗೆ ಹೊರಟನು. ಅವನು ಇನ್ನೂ ತುಂಬ ದೂರದಲ್ಲಿರುವಾಗಲೇ ಅವನ ತಂದೆಯು ಅವನನ್ನು ಕಂಡು ಕನಿಕರಪಟ್ಟು ಓಡಿಹೋಗಿ ಅವನ ಕೊರಳನ್ನು ಅಪ್ಪಿಕೊಂಡು ಅವನಿಗೆ ಕೋಮಲವಾಗಿ ಮುದ್ದಿಟ್ಟನು. 21  ಆಗ ಮಗನು ಅವನಿಗೆ ‘ಅಪ್ಪಾ, ನಾನು ಸ್ವರ್ಗಕ್ಕೆ ವಿರುದ್ಧವಾಗಿಯೂ ನಿನಗೆ ವಿರುದ್ಧವಾಗಿಯೂ ಪಾಪಮಾಡಿದ್ದೇನೆ. ಇನ್ನು ಮುಂದೆ ನಿನ್ನ ಮಗನೆನಿಸಿಕೊಳ್ಳುವುದಕ್ಕೆ ನಾನು ಯೋಗ್ಯನಲ್ಲ. ನನ್ನನ್ನು ನಿನ್ನ ಕೂಲಿಯಾಳುಗಳಲ್ಲಿ ಒಬ್ಬನಾಗಿ ಇಟ್ಟುಕೊ’ ಅಂದನು. 22  ಆದರೆ ತಂದೆಯು ತನ್ನ ಆಳುಗಳಿಗೆ, ‘ಅತ್ಯುತ್ತಮವಾದ ನಿಲುವಂಗಿಯನ್ನು ತಕ್ಷಣವೇ ತಂದು ಇವನಿಗೆ ತೊಡಿಸಿರಿ; ಅವನ ​ಬೆರಳಿಗೆ ಉಂಗುರ ಹಾಕಿರಿ ಮತ್ತು ಪಾದಗಳಿಗೆ ಕೆರಗಳನ್ನು ತೊಡಿಸಿರಿ. 23  ಕೊಬ್ಬಿಸಿದ ಎಳೆಯ ಗೂಳಿಯನ್ನು ತಂದು ಕೊಯ್ಯಿರಿ; ನಾವು ಊಟಮಾಡಿ ಸಂತೋಷಪಡೋಣ. 24  ಏಕೆಂದರೆ ಈ ನನ್ನ ಮಗನು ಸತ್ತುಹೋಗಿದ್ದನು, ಆದರೆ ಪುನಃ ಬದುಕಿ ಬಂದಿದ್ದಾನೆ; ಕಳೆದುಹೋಗಿದ್ದನು, ಸಿಕ್ಕಿದ್ದಾನೆ’ ಎಂದು ಹೇಳಿದನು. ಮತ್ತು ಅವರೆಲ್ಲರೂ ಸಂತೋಷಪಡಲಾರಂಭಿಸಿದರು. 25  “ಆಗ ಅವನ ಹಿರಿಯ ಮಗನು ಹೊಲದಲ್ಲಿದ್ದನು; ಅವನು ಮನೆಯ ಸಮೀಪಕ್ಕೆ ಬರುತ್ತಿರುವಾಗ ವಾದ್ಯನರ್ತನಗಳನ್ನು ಕೇಳಿಸಿಕೊಂಡು, 26  ಸೇವಕರಲ್ಲಿ ಒಬ್ಬನನ್ನು ಕರೆದು ‘ಇದೆಲ್ಲ ಏನು’ ಎಂದು ವಿಚಾರಿಸಿದನು. 27  ಆ ಸೇವಕನು ಅವನಿಗೆ, ‘ನಿನ್ನ ತಮ್ಮನು ಬಂದಿದ್ದಾನೆ; ಅವನು ಸುಕ್ಷೇಮವಾಗಿ ಹಿಂದೆ ಬಂದಿರುವುದರಿಂದ ನಿನ್ನ ತಂದೆಯು ಕೊಬ್ಬಿದ ಎಳೆಯ ಗೂಳಿಯನ್ನು ಕೊಯ್ಸಿದ್ದಾನೆ’ ಎಂದನು. 28  ಅದಕ್ಕೆ ಅವನು ಸಿಟ್ಟುಗೊಂಡು ಒಳಗೆ ಹೋಗಲು ಇಷ್ಟಪಡಲಿಲ್ಲ. ಆಗ ಅವನ ತಂದೆಯು ಹೊರಗೆ ಬಂದು ಅವನನ್ನು ಬೇಡಿಕೊಳ್ಳಲಾರಂಭಿಸಿದನು. 29  ಅದಕ್ಕೆ ಅವನು ತನ್ನ ತಂದೆಗೆ, ‘ನಾನು ಅನೇಕ ವರ್ಷಗಳಿಂದ ನಿನಗಾಗಿ ದುಡಿದಿದ್ದೇನೆ; ನಿನ್ನ ಅಪ್ಪಣೆಯನ್ನು ಎಂದೂ ಮೀರಿಲ್ಲ. ಆದರೂ ನಾನು ನನ್ನ ಸ್ನೇಹಿತರೊಂದಿಗೆ ಸಂತೋಷಿಸಲಿಕ್ಕಾಗಿ ನೀನು ಎಂದೂ ನನಗೆ ಒಂದು ಆಡಿನ ಮರಿಯನ್ನೂ ಕೊಡಲಿಲ್ಲ. 30  ಆದರೆ ವೇಶ್ಯೆಯರೊಂದಿಗೆ ಸೇರಿಕೊಂಡು ನಿನ್ನ ಜೀವನಾಧಾರವನ್ನು ನುಂಗಿಬಿಟ್ಟ ಈ ನಿನ್ನ ಮಗನು ಬಂದ ಕೂಡಲೆ ಅವನಿಗೋಸ್ಕರ ಕೊಬ್ಬಿದ ಎಳೆಯ ಗೂಳಿಯನ್ನು ಕೊಯ್ಸಿದ್ದೀ’ ಎಂದು ಹೇಳಿದನು. 31  ಆಗ ತಂದೆಯು ಅವನಿಗೆ, ‘ಕಂದಾ, ನೀನು ಯಾವಾಗಲೂ ನನ್ನ ಸಂಗಡ ಇದ್ದೀ ಮತ್ತು ನನ್ನದೆಲ್ಲ ನಿನಗೆ ಸೇರಿದ್ದೇ; 32  ಆದರೆ ಈ ನಿನ್ನ ತಮ್ಮನು ಸತ್ತುಹೋಗಿದ್ದನು, ಬದುಕಿ ಬಂದಿದ್ದಾನೆ; ಕಳೆದುಹೋಗಿದ್ದನು, ಸಿಕ್ಕಿದ್ದಾನೆ. ಆದುದರಿಂದ ನಾವು ಸಂತೋಷಪಡುವುದೂ ಆನಂದಿಸು​ವುದೂ ಅಗತ್ಯವಾಗಿತ್ತು’ ಎಂದನು.”

ಪಾದಟಿಪ್ಪಣಿ

ಲೂಕ 15:8 ದ್ರಾಕ್ಮಾವು ಗ್ರೀಕ್‌ ಬೆಳ್ಳಿ ನಾಣ್ಯವಾಗಿದ್ದು, 3.40 ಗ್ರಾಮ್‌ ತೂಕವುಳ್ಳದ್ದಾಗಿತ್ತು.