ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಲೂಕ 13:1-35

13  ಆ ಸಮಯದಲ್ಲಿ ಅಲ್ಲಿ ಹಾಜರಿದ್ದ ಕೆಲವರು, ಪಿಲಾತನು ಗಲಿಲಾಯದವರ ರಕ್ತವನ್ನು ಅವರು ಕೊಟ್ಟ ಯಜ್ಞದೊಂದಿಗೆ ಬೆರಸಿದ್ದರ ಕುರಿತು ಅವನಿಗೆ ತಿಳಿಸಿದರು.  ಅದಕ್ಕೆ ಉತ್ತರವಾಗಿ ಅವನು, “ಈ ಗಲಿಲಾಯದವರು ಈ ವಿಷಯಗಳನ್ನು ಅನುಭವಿಸಿದ್ದರಿಂದ ಇತರ ಎಲ್ಲ ಗಲಿಲಾಯದವರಿಗಿಂತ ಹೆಚ್ಚು ಪಾಪಿಗಳಾಗಿ ಕಂಡುಬಂದರೆಂದು ನೀವು ನೆನಸುತ್ತೀರೊ?  ಇಲ್ಲ ಎಂದು ನಿಮಗೆ ಹೇಳುತ್ತೇನೆ; ಪಶ್ಚಾತ್ತಾಪಪಡದಿದ್ದರೆ ನೀವೆಲ್ಲರೂ ತದ್ರೀತಿಯಲ್ಲಿ ನಾಶವಾಗುವಿರಿ.  ಅಥವಾ ಸಿಲೊವಾಮಿನಲ್ಲಿ ಬುರುಜುಬಿದ್ದು ಸತ್ತ ಆ ಹದಿನೆಂಟು ಮಂದಿ, ಯೆರೂಸಲೇಮಿನಲ್ಲಿ ವಾಸಿಸುತ್ತಿರುವ ಇತರ ಎಲ್ಲರಿಗಿಂತ ಹೆಚ್ಚು ಪಾಪಿಗಳಾಗಿ* ಕಂಡುಬಂದರೆಂದು ನೀವು ಭಾವಿಸುತ್ತೀರೊ?  ಇಲ್ಲ ಎಂದು ನಿಮಗೆ ಹೇಳುತ್ತೇನೆ; ಪಶ್ಚಾತ್ತಾಪಪಡದಿದ್ದರೆ ನೀವೆಲ್ಲರೂ ಅದೇ ರೀತಿಯಲ್ಲಿ ನಾಶವಾಗುವಿರಿ” ಎಂದು ಹೇಳಿದನು.  ಬಳಿಕ ಅವನು ಈ ದೃಷ್ಟಾಂತವನ್ನು ಹೇಳಿದನು: “ಒಬ್ಬಾನೊಬ್ಬ ಮನುಷ್ಯನು ತನ್ನ ದ್ರಾಕ್ಷಿಯ ತೋಟದಲ್ಲಿ ಒಂದು ಅಂಜೂರದ ಮರವನ್ನು ನೆಡಿಸಿದ್ದನು; ಅವನು ಅದರಲ್ಲಿ ಹಣ್ಣಿದೆಯೋ ಎಂದು ನೋಡುತ್ತಾ ಬಂದನು, ಆದರೆ ಒಂದೂ ಸಿಗಲಿಲ್ಲ.  ಆಗ ಅವನು ತೋಟಗಾರನಿಗೆ, ‘ಮೂರು ವರ್ಷಗಳಿಂದ ಈ ಅಂಜೂರದ ಮರದಲ್ಲಿ ಹಣ್ಣನ್ನು ಹುಡುಕುತ್ತಾ ಬಂದಿದ್ದೇನೆ, ಆದರೆ ಒಂದೂ ಸಿಗಲಿಲ್ಲ. ಇದನ್ನು ಕಡಿದುಹಾಕು! ಇದರಿಂದಾಗಿ ಭೂಮಿಯೂ ಏಕೆ ನಿಷ್ಪ್ರಯೋಜಕವಾಗಿರಬೇಕು?’ ಎಂದನು.  ಅದಕ್ಕೆ ಉತ್ತರವಾಗಿ ಆ ತೋಟಗಾರನು ‘ಯಜಮಾನನೇ, ಈ ವರ್ಷವೂ ಇದನ್ನು ಬಿಡು; ನಾನು ಇದರ ಸುತ್ತ ಅಗೆದು ಗೊಬ್ಬರಹಾಕುತ್ತೇನೆ.  ಆಗ ಭವಿಷ್ಯತ್ತಿನಲ್ಲಿ ಅದು ಹಣ್ಣುಕೊಟ್ಟರೆ ಒಳ್ಳೇದು, ಇಲ್ಲವಾದರೆ ನೀನು ಅದನ್ನು ಕಡಿದು​ಹಾಕು’ ಅಂದನು.” 10  ತರುವಾಯ ಸಬ್ಬತ್‌ ದಿನದಲ್ಲಿ ಅವನು ಒಂದು ಸಭಾಮಂದಿರದಲ್ಲಿ ಬೋಧಿಸುತ್ತಿದ್ದನು. 11  ಅಲ್ಲಿ ಹದಿನೆಂಟು ವರ್ಷಗಳಿಂದ ದೆವ್ವದ ಪ್ರಭಾವದಿಂದ ಅಸ್ವಸ್ಥಳಾಗಿದ್ದ ಮತ್ತು ನಡು ಸಂಪೂರ್ಣವಾಗಿ ಬಗ್ಗಿಹೋಗಿ ತನ್ನನ್ನು ನೆಟ್ಟಗೆ ಮಾಡಿಕೊಳ್ಳಲು ಅಶಕ್ತಳಾಗಿದ್ದ ಒಬ್ಬ ಸ್ತ್ರೀ ಇದ್ದಳು. 12  ಯೇಸು ಅವಳನ್ನು ನೋಡಿದಾಗ ಅವಳಿಗೆ, “ಸ್ತ್ರೀಯೇ, ನೀನು ನಿನ್ನ ಅಸ್ವಸ್ಥತೆಯಿಂದ ಮುಕ್ತಳಾಗಿದ್ದೀ” ಎಂದು ಹೇಳಿ 13  ಅವಳ ಮೇಲೆ ತನ್ನ ಕೈಗಳನ್ನಿಟ್ಟನು. ಕೂಡಲೆ ಅವಳು ನೆಟ್ಟಗಾದಳು ಮತ್ತು ದೇವರನ್ನು ಮಹಿಮೆಪಡಿಸಲಾರಂಭಿಸಿದಳು. 14  ಯೇಸು ಸಬ್ಬತ್‌ ದಿನದಲ್ಲಿ ವಾಸಿಮಾಡಿದ್ದನ್ನು ನೋಡಿದ ಸಭಾಮಂದಿರದ ಸಭಾಪತಿಯು ಕೋಪಗೊಂಡು ಜನರ ಗುಂಪಿಗೆ, “ಕೆಲಸಮಾಡಲಿಕ್ಕಾಗಿ ಆರು ದಿನಗಳಿವೆ; ಆ ದಿನಗಳಲ್ಲಿ ಬಂದು ಗುಣಪಡಿಸಿಕೊಳ್ಳಿ, ಸಬ್ಬತ್‌ ದಿನದಲ್ಲಿ ಅಲ್ಲ” ಎಂದು ಹೇಳಿದನು. 15  ಅದಕ್ಕೆ ಉತ್ತರವಾಗಿ ಕರ್ತನು ಅವನಿಗೆ, “ಕಪಟಿಗಳೇ, ನಿಮ್ಮಲ್ಲಿ ಪ್ರತಿಯೊಬ್ಬನು ಸಬ್ಬತ್‌ ದಿನದಂದು ತನ್ನ ಎತ್ತನ್ನು ಅಥವಾ ಕತ್ತೆಯನ್ನು ಕೊಟ್ಟಿಗೆಯಿಂದ ಬಿಚ್ಚಿ ನೀರು ಕುಡಿಸಲು ಕರೆದುಕೊಂಡು ಹೋಗುವುದಿಲ್ಲವೆ? 16  ಹಾಗಾದರೆ ಅಬ್ರಹಾಮನ ವಂಶದವಳಾಗಿದ್ದು ಹದಿನೆಂಟು ವರ್ಷಗಳಿಂದ ಸೈತಾನನ ಬಂಧನದಲ್ಲಿದ್ದ ಈ ಸ್ತ್ರೀಯನ್ನು ಸಬ್ಬತ್‌ ದಿನದಂದು ಈ ಕಟ್ಟಿನೊಳಗಿಂದ ಬಿಡಿಸಬಾರದೆ?” ಎಂದು ಕೇಳಿದನು. 17  ಅವನು ಈ ಮಾತುಗಳನ್ನು ಹೇಳಿದಾಗ ಅವನ ಎಲ್ಲ ವಿರೋಧಿಗಳು ನಾಚಿಕೊಂಡರು; ಗುಂಪುಗೂಡಿದ್ದ ಜನರು ಅವನು ಮಾಡಿದ ಎಲ್ಲ ಮಹಿಮಾನ್ವಿತ ವಿಷಯಗಳಿಗಾಗಿ ಆನಂದಿಸಿದರು. 18  ಆದಕಾರಣ ಅವನು ಮುಂದುವರಿಸಿದ್ದು: “ದೇವರ ರಾಜ್ಯವು ಯಾವುದ​ರಂತಿದೆ, ನಾನು ಅದನ್ನು ಯಾವುದಕ್ಕೆ ಹೋಲಿಸಲಿ? 19  ಅದು ಒಂದು ಸಾಸಿವೆ ಕಾಳಿಗೆ ಹೋಲಿಕೆಯಾಗಿದೆ; ಒಬ್ಬ ಮನುಷ್ಯನು ಅದನ್ನು ತೆಗೆದುಕೊಂಡು ಹೋಗಿ ತನ್ನ ತೋಟದಲ್ಲಿ ಹಾಕಿದನು; ಅದು ಬೆಳೆದು ಮರವಾಯಿತು ಮತ್ತು ಆಕಾಶದ ಪಕ್ಷಿಗಳು ಬಂದು ಅದರ ಕೊಂಬೆಗಳಲ್ಲಿ ವಾಸಿಸಿದವು.” 20  ಇದಲ್ಲದೆ ಪುನಃ ಅವನು, “ದೇವರ ರಾಜ್ಯವನ್ನು ನಾನು ಯಾವುದರೊಂದಿಗೆ ಹೋಲಿಸಲಿ? 21  ಅದು ಹುಳಿಹಿಟ್ಟಿಗೆ ಹೋಲಿಕೆಯಾಗಿದೆ. ಒಬ್ಬ ಸ್ತ್ರೀಯು ಅದನ್ನು ತೆಗೆದುಕೊಂಡು ಮೂರು ದೊಡ್ಡಳತೆಗಳ ಹಿಟ್ಟಿನಲ್ಲಿ ಕಲಸಿ* ಆ ಹಿಟ್ಟೆಲ್ಲ ಹುಳಿಯಾಗುವ ತನಕ ಇಟ್ಟಳು” ಎಂದು ಹೇಳಿದನು. 22  ಬಳಿಕ ಅವನು ಊರಿನಿಂದ ಊರಿಗೂ ಹಳ್ಳಿಯಿಂದ ಹಳ್ಳಿಗೂ ಹೋಗಿ ಬೋಧಿಸುತ್ತಾ ಯೆರೂಸಲೇಮಿಗೆ ಪ್ರಯಾಣವನ್ನು ಮುಂದುವರಿಸಿದನು. 23  ಆಗ ಒಬ್ಬ ಮನುಷ್ಯನು ಅವನಿಗೆ, “ಕರ್ತನೇ, ರಕ್ಷಣೆ ಹೊಂದುವವರು ಕೊಂಚ ಮಂದಿ ಮಾತ್ರವೊ?” ಎಂದು ಕೇಳಿದನು. ಅದಕ್ಕೆ ಅವನು, 24  “ಇಕ್ಕಟ್ಟಾದ ಬಾಗಿಲಿನ ಮೂಲಕ ಒಳಗೆ ಹೋಗಲು ಶಕ್ತಿಯುತವಾಗಿ ಪ್ರಯಾಸಪಡಿರಿ; ಏಕೆಂದರೆ ಅನೇಕರು ಒಳಗೆ ಹೋಗಲು ಪ್ರಯತ್ನಿಸುವರು, ಆದರೆ ಸಾಧ್ಯವಾಗುವುದಿಲ್ಲ ಎಂದು ನಿಮಗೆ ಹೇಳುತ್ತೇನೆ. 25  ಒಮ್ಮೆ ಮನೆಯವನು ಎದ್ದು ಬಾಗಿಲಿಗೆ ಬೀಗ ಹಾಕಿದ ನಂತರ ನೀವು ಹೊರಗೆ ನಿಂತು ಬಾಗಿಲು ತಟ್ಟುತ್ತಾ, ‘ಸ್ವಾಮೀ, ನಮಗೆ ಬಾಗಿಲನ್ನು ತೆರೆ’ ಎಂದು ಹೇಳುವಿರಿ. ಆದರೆ ಅದಕ್ಕೆ ಉತ್ತರವಾಗಿ ಅವನು ನಿಮಗೆ, ‘ನೀವು ಎಲ್ಲಿಯವರೋ ನನಗೆ ಗೊತ್ತಿಲ್ಲ’ ಎನ್ನುವನು. 26  ಆಗ ನೀವು, ‘ನಾವು ನಿನ್ನ ಮುಂದೆ ಊಟಮಾಡಿ ಕುಡಿದೆವು ಮತ್ತು ನಮ್ಮ ಅಗಲವಾದ ಬೀದಿಗಳಲ್ಲಿ ನೀನು ಬೋಧಿಸಿದಿ’ ಎಂದು ಹೇಳುವಿರಿ. 27  ಆದರೆ ಅವನು ನಿಮಗೆ, ‘ನೀವು ಎಲ್ಲಿಯವರೋ ನನಗೆ ಗೊತ್ತಿಲ್ಲ. ಅನೀತಿಯನ್ನು ನಡಿಸುವವರೇ ನೀವೆಲ್ಲರೂ ನನ್ನಿಂದ ತೊಲಗಿಹೋಗಿರಿ’ ಎಂದು ಹೇಳುವನು. 28  ಅಬ್ರಹಾಮ, ಇಸಾಕ, ಯಾಕೋಬ ಮತ್ತು ಎಲ್ಲ ಪ್ರವಾದಿಗಳು ದೇವರ ರಾಜ್ಯದಲ್ಲಿರುವುದನ್ನೂ ಆದರೆ ನೀವು ಹೊರಗೆ ಹಾಕಲ್ಪಟ್ಟಿರುವುದನ್ನೂ ನೋಡುವಾಗ ಅಲ್ಲಿ ನಿಮ್ಮ ಗೋಳಾಟವೂ ಹಲ್ಲುಕಡಿಯೋಣವೂ ಇರುವುದು. 29  ಇದಲ್ಲದೆ ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣ ಭಾಗಗಳಿಂದ ಜನರು ಬಂದು ದೇವರ ರಾಜ್ಯದಲ್ಲಿ ಊಟಕ್ಕೆ ಕುಳಿತುಕೊಳ್ಳುವರು. 30  ಮತ್ತು ನೋಡಿ! ಆಗ ಕೊನೆಯವರು ಮೊದಲಿನವರಾಗುವರು, ಮೊದಲಿನವರು ಕೊನೆಯವರಾಗುವರು” ಎಂದು ಹೇಳಿದನು. 31  ಅದೇ ಗಳಿಗೆಯಲ್ಲಿ ಕೆಲವು ಫರಿಸಾಯರು ಅವನ ಬಳಿಗೆ ಬಂದು, “ನೀನು ಇಲ್ಲಿಂದ ಹೊರಟುಹೋಗು, ಏಕೆಂದರೆ ಹೆರೋದನು ನಿನ್ನನ್ನು ಕೊಲ್ಲಬೇಕೆಂದಿದ್ದಾನೆ” ಎಂದು ಹೇಳಿದರು. 32  ಅದಕ್ಕೆ ಅವನು ಅವರಿಗೆ, “ನೀವು ಹೋಗಿ  ‘ಇಂದು ಮತ್ತು ನಾಳೆ ನಾನು ದೆವ್ವಗಳನ್ನು ಬಿಡಿಸುತ್ತಾ ವಾಸಿಮಾಡುತ್ತಾ ಇದ್ದು ಮೂರನೆಯ ದಿನದಲ್ಲಿ ನನ್ನ ಕೆಲಸವನ್ನು ಮುಗಿಸುತ್ತೇನೆ’ ಎಂದು ಆ ನರಿಗೆ ಹೇಳಿ. 33  ಆದರೆ ಇಂದು, ನಾಳೆ ಮತ್ತು ನಾಡಿದ್ದು ನಾನು ಪ್ರಯಾಣಿಸಲೇ ಬೇಕು; ಏಕೆಂದರೆ ಒಬ್ಬ ಪ್ರವಾದಿಯು ಯೆರೂಸಲೇಮಿನ ಹೊರಗೆ ಕೊಲ್ಲಲ್ಪಡುವುದು ಅಂಗೀಕಾರಾರ್ಹವಲ್ಲ. 34  ಯೆರೂಸಲೇಮೇ, ಯೆರೂಸಲೇಮೇ, ಪ್ರವಾದಿಗಳನ್ನು ಕೊಲ್ಲುವವಳೇ, ನಿನ್ನ ಬಳಿಗೆ ಕಳುಹಿಸಲ್ಪಟ್ಟವರ ಮೇಲೆ ಕಲ್ಲೆಸೆಯುವವಳೇ​—⁠ಕೋಳಿಯು ತನ್ನ ರೆಕ್ಕೆಗಳ ಕೆಳಗೆ ತನ್ನ ಮರಿಗಳ ಗುಂಪನ್ನು ಒಟ್ಟುಗೂಡಿಸುವಂತೆ ನಾನು ನಿನ್ನ ಮಕ್ಕಳನ್ನು ಎಷ್ಟು ಬಾರಿ ಒಟ್ಟುಗೂಡಿಸಲು ಬಯಸಿದೆ! ಆದರೆ ನಿಮಗೆ ಅದು ಬೇಕಾಗಿರಲಿಲ್ಲ. 35  ನೋಡಿರಿ, ನಿಮ್ಮ ಆಲಯವು ನಿಮಗೆ ಬರಿದಾಗಿ ಬಿಡುತ್ತದೆ. ‘ಯೆಹೋವನ ನಾಮದಲ್ಲಿ ಬರುವವನು ಆಶೀರ್ವದಿತನು!’ ಎಂದು ನೀವು ಹೇಳುವ ತನಕ ನೀವು ನನ್ನನ್ನು ನೋಡುವುದೇ ಇಲ್ಲ ಎಂದು ನಿಮಗೆ ಹೇಳುತ್ತೇನೆ” ಅಂದನು.

ಪಾದಟಿಪ್ಪಣಿ

ಲೂಕ 13:4 ಅಕ್ಷರಾರ್ಥವಾಗಿ, “ಸಾಲಗಾರರಾಗಿ.”
ಲೂಕ 13:21 ಮತ್ತಾ 13:33ರ ಪಾದಟಿಪ್ಪಣಿಯನ್ನು ನೋಡಿ.