ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಲೂಕ 12:1-59

12  ಅಷ್ಟರಲ್ಲಿ ಸಾವಿರಾರು ಮಂದಿ ಒಬ್ಬರನ್ನೊಬ್ಬರು ತುಳಿದಾಡುವಷ್ಟು ಒತ್ತಾಗಿ ಕೂಡಿಬಂದಿದ್ದಾಗ ಅವನು ಮೊದಲು ತನ್ನ ಶಿಷ್ಯರಿಗೆ, “ಫರಿಸಾಯರ ಕಪಟಾಚಾರವೆಂಬ ಹುಳಿಹಿಟ್ಟಿನ ವಿಷಯದಲ್ಲಿ ಜಾಗ್ರತೆಯಿಂದಿರಿ.  ಜಾಗರೂಕತೆಯಿಂದ ಗೋಪ್ಯವಾಗಿಡಲ್ಪಟ್ಟಿರುವ ಯಾವುದೂ ಪ್ರಕಟವಾಗದಿರುವುದಿಲ್ಲ ಮತ್ತು ರಹಸ್ಯವಾಗಿರುವುದು ಗೊತ್ತಾಗದೆ ಹೋಗುವುದಿಲ್ಲ.  ಆದುದರಿಂದ ನೀವು ಕತ್ತಲೆಯಲ್ಲಿ ಏನು ಹೇಳುತ್ತೀರೊ ಅದು ಬೆಳಕಿನಲ್ಲಿ ಕೇಳಿಸಿಕೊಳ್ಳಲ್ಪಡುವುದು; ನೀವು ಖಾಸಗಿ ಕೋಣೆಗಳಲ್ಲಿ ಆಡುವ ಪಿಸುಮಾತು ಮನೆಯ ಮಾಳಿಗೆಗಳಿಂದ ಸಾರಲ್ಪಡುವುದು.  ಇದಲ್ಲದೆ ನನ್ನ ಸ್ನೇಹಿತರೇ, ನಾನು ನಿಮಗೆ ಹೇಳುವುದೇನೆಂದರೆ ದೇಹವನ್ನು ಕೊಂದ ಬಳಿಕ ಹೆಚ್ಚೇನನ್ನೂ ಮಾಡದವರಿಗೆ ಭಯಪಡಬೇಡಿರಿ.  ಆದರೆ ಯಾರಿಗೆ ಭಯಪಡಬೇಕೆಂಬುದನ್ನು ನಾನು ನಿಮಗೆ ತಿಳಿಸುತ್ತೇನೆ: ಕೊಂದ ಬಳಿಕ ಗೆಹೆನ್ನದೊಳಗೆ* ಎಸೆಯುವ ಅಧಿಕಾರವುಳ್ಳಾತನಿಗೆ ಭಯ​ಪಡಿರಿ. ಹೌದು, ಆತನಿಗೆ ಭಯಪಡಿರಿ ಎಂದು ನಿಮಗೆ ಹೇಳುತ್ತೇನೆ.  ಚಿಕ್ಕ ಬೆಲೆಯ ಎರಡು ಕಾಸಿಗೆ ಐದು ಗುಬ್ಬಿಗಳು ಮಾರಲ್ಪಡುತ್ತವೆ, ಅಲ್ಲವೆ? ಹಾಗಿದ್ದರೂ ಅವುಗಳಲ್ಲಿ ಒಂದನ್ನೂ ದೇವರು ಮರೆಯುವುದಿಲ್ಲ.  ನಿಮ್ಮ ತಲೆಗಳ ಕೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ. ಆದುದರಿಂದ ಭಯಪಡಬೇಡಿರಿ; ನೀವು ಅನೇಕ ಗುಬ್ಬಿಗಳಿಗಿಂತ ಹೆಚ್ಚು ಬೆಲೆಯುಳ್ಳವರು.  “ನಾನು ನಿಮಗೆ ಹೇಳುವುದೇನೆಂದರೆ, ಜನರ ಮುಂದೆ ನನ್ನೊಂದಿಗೆ ಐಕ್ಯದಲ್ಲಿ ಇದ್ದಾನೆಂದು ಒಪ್ಪಿಕೊಳ್ಳುವ ಪ್ರತಿಯೊಬ್ಬನನ್ನು ಮನುಷ್ಯಕುಮಾರನು ಸಹ ಅವನೊಂದಿಗೆ ಐಕ್ಯದಲ್ಲಿ ಇದ್ದಾನೆಂದು ದೇವದೂತರ ಮುಂದೆ ಒಪ್ಪಿಕೊಳ್ಳುವನು.  ಆದರೆ ಯಾವನು ಜನರ ಮುಂದೆ ನನ್ನನ್ನು ಅಲ್ಲಗಳೆಯುತ್ತಾನೋ ಅವನು ದೇವದೂತರ ಮುಂದೆ ಅಲ್ಲಗಳೆಯಲ್ಪಡುವನು. 10  ಮನುಷ್ಯಕುಮಾರನ ವಿರುದ್ಧ ಏನಾದರೂ ಮಾತಾಡುವ ಪ್ರತಿಯೊಬ್ಬನು ಕ್ಷಮಿಸಲ್ಪಡುವನು; ಆದರೆ ಪವಿತ್ರಾತ್ಮದ ವಿರುದ್ಧ ದೂಷಣೆಮಾಡುವವನಿಗೆ ಕ್ಷಮಿಸಲ್ಪಡುವುದಿಲ್ಲ. 11  ಅವರು ನಿಮ್ಮನ್ನು ಸಾರ್ವಜನಿಕ ಸಭೆಗಳ ಮುಂದೆಯೂ ಸರಕಾರೀ ಅಧಿಕಾರಿಗಳ ಮತ್ತು ಅಧಿಪತಿಗಳ ಮುಂದೆಯೂ ತರುವಾಗ ನಿಮ್ಮನ್ನು ಸಮರ್ಥಿಸಿಕೊಳ್ಳಲಿಕ್ಕಾಗಿ ಹೇಗೆ ಅಥವಾ ಏನು ಮಾತಾಡಬೇಕು ಇಲ್ಲವೆ ಏನು ಹೇಳಬೇಕು ಎಂದು ಚಿಂತಿಸಬೇಡಿರಿ. 12  ಏಕೆಂದರೆ ನೀವು ಏನು ಹೇಳಬೇಕೆಂಬುದನ್ನು ಪವಿತ್ರಾತ್ಮವು ನಿಮಗೆ ಆ ಗಳಿಗೆಯಲ್ಲೇ ಕಲಿಸುವುದು” ಎಂದನು. 13  ಆಗ ಗುಂಪಿನಲ್ಲಿದ್ದ ಒಬ್ಬನು ಅವನಿಗೆ “ಬೋಧಕನೇ, ಪಿತ್ರಾರ್ಜಿತ ಆಸ್ತಿಯನ್ನು ನನಗೆ ಪಾಲುಮಾಡಿಕೊಡುವಂತೆ ನನ್ನ ಸಹೋದರನಿಗೆ ಹೇಳು” ಎಂದನು. 14  ಅದಕ್ಕೆ ಅವನು “ಮನುಷ್ಯನೇ, ನಿಮ್ಮ ಮೇಲೆ ನನ್ನನ್ನು ನ್ಯಾಯಾಧಿಪತಿಯನ್ನಾಗಿ ಅಥವಾ ಪಾಲುಮಾಡುವವನನ್ನಾಗಿ ನೇಮಿಸಿದವರು ಯಾರು?” ಎಂದು ಅವನನ್ನು ಕೇಳಿದನು. 15  ಬಳಿಕ ಅವರಿಗೆ, “ನಿಮ್ಮ ಕಣ್ಣುಗಳನ್ನು ತೆರೆದಿಟ್ಟುಕೊಂಡು ಪ್ರತಿಯೊಂದು ರೀತಿಯ ದುರಾಶೆಯಿಂದ ನಿಮ್ಮನ್ನು ಕಾಪಾಡಿಕೊಳ್ಳಿ; ಏಕೆಂದರೆ ಒಬ್ಬನಿಗೆ ಹೇರಳವಾಗಿ ಆಸ್ತಿಯಿರುವುದಾದರೂ ಅವನು ಹೊಂದಿರುವ ಆಸ್ತಿಯಿಂದ ಅವನಿಗೆ ಜೀವವು ದೊರಕಲಾರದು” ಅಂದನು. 16  ಬಳಿಕ ಅವನು ಅವರಿಗೆ ಒಂದು ದೃಷ್ಟಾಂತವನ್ನು ಹೇಳಿದನು: “ಒಬ್ಬ ಐಶ್ವರ್ಯವಂತನ ಭೂಮಿಯು ಚೆನ್ನಾಗಿ ಫಲಕೊಟ್ಟಿತು. 17  ಆದುದರಿಂದ ಅವನು, ‘ನನ್ನ ಬೆಳೆಯನ್ನು ತುಂಬಿಡಲು ಸ್ಥಳವಿಲ್ಲವಲ್ಲಾ. ನಾನು ಏನು ಮಾಡಲಿ?’ ಎಂದು ತನ್ನೊಳಗೆ ಆಲೋಚಿಸುತ್ತಾ 18  ‘ನಾನು ಒಂದು ಕೆಲಸಮಾಡುತ್ತೇನೆ: ನನ್ನ ಕಣಜಗಳನ್ನು ಕೆಡವಿ ಅವುಗಳಿಗಿಂತ ದೊಡ್ಡ ಕಣಜಗಳನ್ನು ಕಟ್ಟಿಸುತ್ತೇನೆ. ಅಲ್ಲಿ ದವಸಧಾನ್ಯಗಳನ್ನೂ ಎಲ್ಲ ಒಳ್ಳೆಯ ವಸ್ತುಗಳನ್ನೂ ತುಂಬಿಸಿಡುತ್ತೇನೆ. 19  ಬಳಿಕ ನನ್ನ ಪ್ರಾಣಕ್ಕೆ, “ಪ್ರಾಣವೇ, ಅನೇಕ ವರ್ಷಗಳಿಗೆ ಸಾಕಾಗುವಷ್ಟು ಅನೇಕ ಒಳ್ಳೆಯ ವಸ್ತುಗಳು ನಿನಗಾಗಿ ಇಡಲ್ಪಟ್ಟಿವೆ; ಆರಾಮವಾಗಿರು, ತಿಂದು ಕುಡಿದು ಆನಂದಪಡುತ್ತಿರು” ಎಂದು ಹೇಳುವೆನು’ ಅಂದುಕೊಂಡನು. 20  ಆದರೆ ದೇವರು ಅವನಿಗೆ, ‘ವಿಚಾರಹೀನನೇ, ಇಂದೇ ರಾತ್ರಿ ಅವರು ನಿನ್ನ ಪ್ರಾಣವನ್ನು ಒತ್ತಾಯದಿಂದ ಕೇಳುವರು. ಆಗ ನೀನು ಸಂಗ್ರಹಿಸಿಟ್ಟಿರುವುದು ಯಾರಿಗೆ ಸೇರುವುದು?’ ಎಂದು ಕೇಳಿದನು. 21  ತನಗಾಗಿ ನಿಧಿಯನ್ನು ಕೂಡಿಸಿಟ್ಟು ದೇವರ ವಿಷಯದಲ್ಲಿ ಐಶ್ವರ್ಯವಂತನಾಗದೆ ಇರುವವನು ಆ ಮನುಷ್ಯನಂತಿದ್ದಾನೆ.” 22  ಬಳಿಕ ಅವನು ತನ್ನ ಶಿಷ್ಯರಿಗೆ, “ಈ ಕಾರಣದಿಂದ ನಾನು ನಿಮಗೆ ಹೇಳುವುದೇನೆಂದರೆ, ನಿಮ್ಮ ಪ್ರಾಣಗಳ ಕುರಿತು ನೀವು ಏನು ಊಟಮಾಡುವಿರಿ ಅಥವಾ ನಿಮ್ಮ ದೇಹಗಳ ಕುರಿತು ಏನು ಧರಿಸಿಕೊಳ್ಳುವಿರಿ ಎಂದು ಚಿಂತೆಮಾಡುವುದನ್ನು ಬಿಟ್ಟುಬಿಡಿರಿ. 23  ಏಕೆಂದರೆ ಆಹಾರಕ್ಕಿಂತ ಪ್ರಾಣವೂ ಉಡುಪಿಗಿಂತ ದೇಹವೂ ಎಷ್ಟೋ ಮೇಲಾದದ್ದಾಗಿದೆ. 24  ಕಾಗೆ​ಗಳನ್ನು ಗಮನವಿಟ್ಟು ನೋಡಿ; ಅವು ಬೀಜವನ್ನು ಬಿತ್ತುವುದೂ ಇಲ್ಲ, ಕೊಯ್ಯುವುದೂ ಇಲ್ಲ. ಅವುಗಳಿಗೆ ಉಗ್ರಾಣವೂ ಇಲ್ಲ ಕಣಜವೂ ಇಲ್ಲ, ಆದರೂ ದೇವರು ಅವುಗಳನ್ನು ಪೋಷಿಸುತ್ತಾನೆ. ನೀವು ಪಕ್ಷಿಗಳಿಗಿಂತ ಎಷ್ಟೋ ಹೆಚ್ಚು ಬೆಲೆಬಾಳುವವರಲ್ಲವೆ? 25  ಚಿಂತೆಮಾಡುವ ಮೂಲಕ ನಿಮ್ಮಲ್ಲಿ ಯಾರು ತನ್ನ ಆಯುಷ್ಯವನ್ನು ​ಸ್ವಲ್ಪವಾದರೂ* ಹೆಚ್ಚಿಸಿಕೊಳ್ಳಬಲ್ಲನು? 26  ಆದುದರಿಂದ ಕೇವಲ ಅಲ್ಪವಾದದ್ದನ್ನು ನಿಮಗೆ ಮಾಡಲಾಗದಿರುವಾಗ ಉಳಿದ ವಿಷಯಗಳ ಕುರಿತು ಏಕೆ ಚಿಂತಿಸುತ್ತೀರಿ? 27  ಅಡವಿಯ ಲಿಲಿ ಹೂವುಗಳು ಹೇಗೆ ಬೆಳೆಯುತ್ತವೆ ಎಂಬುದರ ಕುರಿತು ಸರಿಯಾಗಿ ಲಕ್ಷ್ಯ ಕೊಡಿ; ಅವು ದುಡಿಯುವುದಿಲ್ಲ ನೂಲುವುದಿಲ್ಲ; ಆದರೆ ಅವುಗಳಲ್ಲಿ ಒಂದಕ್ಕಿರುವ ಅಲಂಕಾರವು ಸೊಲೊಮೋನನಿಗೆ ಅವನ ಸಕಲ ವೈಭವದಲ್ಲೂ ಇರಲಿಲ್ಲವೆಂದು ನಾನು ನಿಮಗೆ ಹೇಳುತ್ತೇನೆ. 28  ಅಲ್ಪವಿಶ್ವಾಸಿಗಳೇ, ಇಂದು ಇದ್ದು ನಾಳೆ ಒಲೆಗೆ ಹಾಕಲ್ಪಡುವ ಹೊಲದ ಸಸ್ಯಗಳಿಗೆ ದೇವರು ಈ ರೀತಿಯಲ್ಲಿ ಉಡಿಸುತ್ತಾನಾದರೆ ನಿಮಗೆ ಇನ್ನೆಷ್ಟು ಹೆಚ್ಚು ಉಡಿಸಿತೊಡಿಸುವನು! 29  ಆದುದರಿಂದ ಏನು ಊಟಮಾಡಬೇಕು? ಏನು ಕುಡಿಯಬೇಕು? ಎಂದು ಚಿಂತೆಮಾಡುವುದನ್ನು ಬಿಟ್ಟುಬಿಡಿರಿ ಮತ್ತು ಕಳವಳದ ಅನಿಶ್ಚಿತತೆಯನ್ನು ಬಿಟ್ಟು​ಬಿಡಿರಿ; 30  ಏಕೆಂದರೆ ಲೋಕದ ಜನಾಂಗಗಳು ಇವುಗಳನ್ನು ತವಕದಿಂದ ಬೆನ್ನಟ್ಟುತ್ತಿವೆ. ಆದರೆ ಇವು ನಿಮಗೆ ಬೇಕಾಗಿವೆ ಎಂಬುದು ನಿಮ್ಮ ತಂದೆಗೆ ತಿಳಿದಿದೆ. 31  ಆದರೆ ನೀವು ಆತನ ರಾಜ್ಯವನ್ನು ಹುಡುಕುತ್ತಾ ಇರಿ, ಆಗ ಇವೆಲ್ಲವೂ ನಿಮಗೆ ಕೂಡಿಸಲ್ಪಡುವವು. 32  “ಚಿಕ್ಕ ಹಿಂಡೇ, ಭಯಪಡಬೇಡ, ಏಕೆಂದರೆ ನಿಮಗೆ ರಾಜ್ಯವನ್ನು ಕೊಡುವುದಕ್ಕೆ ನಿಮ್ಮ ತಂದೆಯು ಒಪ್ಪಿಗೆ ಕೊಟ್ಟಿದ್ದಾನೆ. 33  ನಿಮ್ಮ ಸೊತ್ತುಗಳನ್ನು ಮಾರಿ ದಾನವಾಗಿ ಕೊಡಿ. ನಿಮಗೋಸ್ಕರ ಎಂದಿಗೂ ಸವೆದುಹೋಗದ ಹಣದ ಚೀಲಗಳನ್ನು ಮಾಡಿಕೊಳ್ಳಿ, ಎಂದಿಗೂ ನಷ್ಟವಾಗಿಹೋಗದ ನಿಧಿಯನ್ನು ಸ್ವರ್ಗದಲ್ಲಿ ಸೇರಿಸಿಡಿ. ಅಲ್ಲಿ ಕಳ್ಳನು ಸಮೀಪಕ್ಕೆ ಬರುವುದೂ ಇಲ್ಲ, ಅದು ನುಸಿಹಿಡಿದು ಹಾಳಾಗುವುದೂ ಇಲ್ಲ. 34  ನಿಮ್ಮ ನಿಧಿ ಇರುವಲ್ಲಿಯೇ ನಿಮ್ಮ ಹೃದಯಗಳೂ ಇರುವವು. 35  “ನಿಮ್ಮ ನಡುಗಳು ಕಟ್ಟಿರಲಿ ಮತ್ತು ನಿಮ್ಮ ದೀಪಗಳು ಉರಿಯುತ್ತಾ ಇರಲಿ. 36  ನೀವಾದರೋ ತಮ್ಮ ಯಜಮಾನನು ಮದುವೆಯಿಂದ ಯಾವಾಗ ಹಿಂದಿರುಗುತ್ತಾನೆ ಎಂದು ಕಾಯುತ್ತಿದ್ದು ಅವನು ಬಂದು ತಟ್ಟಿದ ಕೂಡಲೆ ಅವನಿಗಾಗಿ ಕದವನ್ನು ತೆರೆಯುವ ಜನರಂತಿರಿ. 37  ಯಜಮಾನನು ಬಂದಾಗ ಯಾವ ಆಳುಗಳು ಕಾಯುತ್ತಿರುವುದನ್ನು ಕಾಣುವನೋ ಅವರು ಸಂತೋಷಿತರು! ಆಗ ಅವನೇ ನಡುಕಟ್ಟಿಕೊಂಡು ಅವರನ್ನು ಊಟಕ್ಕೆ ಕೂರಿಸಿ ಹತ್ತಿರಕ್ಕೆ ಬಂದು ಅವರಿಗೆ ತಾನೇ ಸೇವೆಮಾಡುವನೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ. 38  ಅವನು ಎರಡನೆಯ ಜಾವದಲ್ಲಾಗಲಿ* ಮೂರನೆಯ ಜಾವದಲ್ಲಾಗಲಿ* ಬಂದು ಅವರು ಕಾಯುತ್ತಿರುವುದನ್ನು ನೋಡಿದರೆ ಅವರು ಸಂತೋಷಿತರು. 39  ಮನೆಯ ಯಜಮಾನನಿಗೆ ಕಳ್ಳನು ಯಾವ ಗಳಿಗೆಯಲ್ಲಿ ಬರುತ್ತಾನೆಂಬುದು ಗೊತ್ತಿರುತ್ತಿದ್ದಲ್ಲಿ ಅವನು ಎಚ್ಚರವಾಗಿದ್ದು ಕಾಯುತ್ತಾ ತನ್ನ ಮನೆಗೆ ಕಳ್ಳನು ನುಗ್ಗುವಂತೆ ಬಿಡುತ್ತಿರಲಿಲ್ಲ ಎಂಬುದನ್ನು ತಿಳಿದುಕೊಳ್ಳಿರಿ. 40  ನೀವು ಸಹ ಸಿದ್ಧರಾಗಿರಿ, ಏಕೆಂದರೆ ಸಂಭವನೀಯವೆಂದು ನೀವು ನೆನಸದ ಗಳಿಗೆಯಲ್ಲಿ ಮನುಷ್ಯ​ಕುಮಾರನು ಬರುತ್ತಾನೆ” ಎಂದು ಹೇಳಿದನು. 41  ಆಗ ಪೇತ್ರನು, “ಕರ್ತನೇ, ನೀನು ಈ ದೃಷ್ಟಾಂತವನ್ನು ನಮಗೆ ಮಾತ್ರ ಹೇಳುತ್ತಿದ್ದೀಯೊ ಅಥವಾ ಎಲ್ಲರಿಗೂ ಹೇಳುತ್ತಿದ್ದೀಯೊ?” ಎಂದು ಕೇಳಿದನು. 42  ಅದಕ್ಕೆ ಕರ್ತನು, “ತಕ್ಕ ಸಮಯಕ್ಕೆ ತನ್ನ ಸೇವಕರ ಗುಂಪಿಗೆ ಅವರ ಪಾಲಿನ ಆಹಾರವನ್ನು ಅಳೆದುಕೊಡುತ್ತಾ ಇರಲಿಕ್ಕಾಗಿ ಯಜಮಾನನು ನೇಮಿಸುವ ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಮನೆವಾರ್ತೆಯವನು ನಿಜವಾಗಿಯೂ ಯಾರು? 43  ಯಜಮಾನನು ಬಂದಾಗ ಯಾವ ಆಳು ಹೀಗೆ ಮಾಡುತ್ತಿರುವುದನ್ನು ಕಾಣುವನೋ ಆ ಆಳು ಸಂತೋಷಿತನು! 44  ಅವನು ಆ ಆಳನ್ನು ತನ್ನ ಎಲ್ಲ ಆಸ್ತಿಯ ಮೇಲೆ ನೇಮಿಸುವನು ಎಂದು ನಿಮಗೆ ನಿಜವಾಗಿ ಹೇಳುತ್ತೇನೆ. 45  ಆದರೆ ಆ ಆಳು ಎಂದಾದರೂ ತನ್ನ ಹೃದಯದಲ್ಲಿ, ‘ನನ್ನ ಯಜಮಾನನು ಬರಲು ತಡಮಾಡುತ್ತಾನೆ’ ಅಂದುಕೊಂಡು, ಗಂಡಾಳುಗಳನ್ನು ಮತ್ತು ಹೆಣ್ಣಾಳುಗಳನ್ನು ಹೊಡೆಯಲಾರಂಭಿಸಿ ತಿಂದು ಕುಡಿದು ಮತ್ತನಾಗುವುದಾದರೆ 46  ಅವನು ಎದುರು​ನೋಡದಿರುವಂಥ ದಿನದಲ್ಲಿಯೂ ಅವನಿಗೆ ತಿಳಿಯದ ಗಳಿಗೆಯಲ್ಲಿಯೂ ಆ ಆಳಿನ ಯಜಮಾನನು ಬಂದು ಅವನಿಗೆ ಅತಿ ತೀಕ್ಷ್ಣವಾದ ದಂಡನೆಯನ್ನು ನೀಡಿ ಅಪನಂಬಿಗಸ್ತರೊಂದಿಗೆ ಅವನಿಗೆ ಒಂದು ಪಾಲನ್ನು ನೇಮಿಸುವನು. 47  ಆ ಬಳಿಕ ತನ್ನ ಯಜಮಾನನ ಚಿತ್ತವನ್ನು ಅರ್ಥಮಾಡಿಕೊಂಡರೂ ಸಿದ್ಧನಾಗದ ಅಥವಾ ಅವನ ಚಿತ್ತಕ್ಕನುಸಾರ ನಡೆಯದ ಆಳನ್ನು ಬಹಳವಾಗಿ ಹೊಡೆಯಲಾಗುವುದು. 48  ಆದರೆ ಯಾರು ಅರ್ಥಮಾಡಿಕೊಳ್ಳದೆ ಹೊಡೆತಕ್ಕೆ ಪಾತ್ರವಾದ ಕೆಲಸಗಳನ್ನು ಮಾಡಿದನೋ ಅವನಿಗೆ ಸ್ವಲ್ಪವೇ ಹೊಡೆಯಲಾಗುವುದು. ಯಾವನಿಗೆ ಹೆಚ್ಚು ಕೊಡಲ್ಪಟ್ಟಿದೆಯೋ ಅವನಿಂದ ಹೆಚ್ಚು ಕೇಳಲ್ಪಡುವುದು ಮತ್ತು ಜನರು ಯಾವನನ್ನು ಹೆಚ್ಚಿನದ್ದರ ಮೇಲೆ ನೇಮಿಸಿದ್ದಾರೋ ಅವನಿಂದ ಸಾಮಾನ್ಯವಾದುದಕ್ಕಿಂತ ಹೆಚ್ಚನ್ನು ಕೇಳುವರು. 49  “ನಾನು ಭೂಮಿಯ ಮೇಲೆ ಬೆಂಕಿಯನ್ನು ಹೊತ್ತಿಸಲು ಬಂದೆನು; ಅದು ಈಗಾಗಲೇ ಹೊತ್ತಿಸಲ್ಪಟ್ಟಿರುವುದಾದರೆ ನನಗೆ ಇನ್ನೇನು ಬೇಕು? 50  ನಿಜಕ್ಕೂ, ನಾನು ದೀಕ್ಷಾಸ್ನಾನ ಹೊಂದಬೇಕಾದ ದೀಕ್ಷಾಸ್ನಾನ ಒಂದುಂಟು; ಅದು ಮುಗಿಯುವ ತನಕ ನಾನು ಎಷ್ಟು ಸಂಕಟದಲ್ಲಿದ್ದೇನೆ! 51  ನಾನು ಭೂಮಿಯ ಮೇಲೆ ಶಾಂತಿಯನ್ನು ನೀಡಲು ಬಂದೆನೆಂದು ನೀವು ಭಾವಿಸುತ್ತೀರೊ? ಇಲ್ಲ, ಅದಕ್ಕೆ ಬದಲಾಗಿ ಒಡಕನ್ನು ಉಂಟುಮಾಡಲು ಬಂದೆನೆಂದು ನಿಮಗೆ ನಿಜವಾಗಿ ಹೇಳುತ್ತೇನೆ. 52  ಹೇಗೆಂದರೆ ಇಂದಿನಿಂದ ಒಂದೇ ಮನೆಯಲ್ಲಿರುವ ಐದು​ಮಂದಿಯಲ್ಲಿ ಇಬ್ಬರಿಗೆ ವಿರುದ್ಧವಾಗಿ ಮೂವರೂ ​ಮೂವರಿಗೆ ವಿರುದ್ಧವಾಗಿ ಇಬ್ಬರೂ ವಿಂಗಡಿಸಲ್ಪಡುವರು. 53  ಮಗನಿಗೆ ವಿರೋಧವಾಗಿ ತಂದೆಯು, ತಂದೆಗೆ ವಿರೋಧವಾಗಿ ಮಗನು, ಮಗಳಿಗೆ ವಿರೋಧವಾಗಿ ತಾಯಿಯು, ತಾಯಿಗೆ ವಿರೋಧವಾಗಿ ಮಗಳು, ಸೊಸೆಗೆ ವಿರೋಧವಾಗಿ ಅತ್ತೆಯು, ಅತ್ತೆಗೆ ವಿರೋಧವಾಗಿ ಸೊಸೆಯು ವಿಭಾಗಿಸಲ್ಪಡುವರು” ಎಂದು ಹೇಳಿದನು. 54  ಬಳಿಕ ಅವನು ಜನರ ಗುಂಪಿಗೆ ಸಹ, “ಪಶ್ಚಿಮ ದಿಕ್ಕಿನಲ್ಲಿ ಮೋಡವು ಏಳುವುದನ್ನು ನೋಡಿದ ಕೂಡಲೆ ನೀವು ‘ಬಿರುಮಳೆ ಬರುತ್ತದೆ’ ಎನ್ನುತ್ತೀರಿ ಮತ್ತು ಹಾಗೆಯೇ ಆಗುತ್ತದೆ. 55  ದಕ್ಷಿಣ ದಿಕ್ಕಿನ ಗಾಳಿಯು ಬೀಸುವುದನ್ನು ನೋಡಿದಾಗ ನೀವು ‘ಸೆಕೆ ಹುಟ್ಟುವುದು’ ಎನ್ನುತ್ತೀರಿ ಮತ್ತು ಅದು ಸಂಭವಿಸುತ್ತದೆ. 56  ಕಪಟಿ​ಗಳೇ, ಭೂಮ್ಯಾಕಾಶಗಳ ಬಾಹ್ಯಲಕ್ಷಣಗಳನ್ನು ಹೇಗೆ ಪರಿಶೀಲಿಸಬೇಕೆಂಬುದು ನಿಮಗೆ ಗೊತ್ತಿದೆ, ಆದರೆ ಈ ನಿರ್ದಿಷ್ಟ ಸಮಯವನ್ನು ಪರಿಶೀಲಿಸುವುದು ಹೇಗೆಂಬುದು ನಿಮಗೆ ಏಕೆ ಗೊತ್ತಿಲ್ಲ? 57  ನೀತಿಯುತವಾದದ್ದು ಯಾವುದೆಂದು ಸಹ ನೀವೇ ಏಕೆ ನಿರ್ಣಯಿಸಿಕೊಳ್ಳುವುದಿಲ್ಲ? 58  ಉದಾಹರಣೆಗೆ, ನೀನು ನಿನ್ನ ವಾದಿಯ ಸಂಗಡ ನ್ಯಾಯಾಧಿಪತಿಯ ಬಳಿಗೆ ಹೋಗುತ್ತಿರುವಾಗ ದಾರಿಯಲ್ಲಿರುವಾಗಲೇ ಅವನೊಂದಿಗಿರುವ ವ್ಯಾಜ್ಯದಿಂದ ಬಿಡಿಸಿಕೊಳ್ಳಲು ಪ್ರಯತ್ನಿಸು; ಇಲ್ಲದಿದ್ದರೆ ಅವನು ನಿನ್ನನ್ನು ನ್ಯಾಯಾಧಿಪತಿಯ ಮುಂದೆ ಎಳೆದುಕೊಂಡು ​ಹೋಗಬಹುದು ಮತ್ತು ನ್ಯಾಯಾಧಿಪತಿಯು ನಿನ್ನನ್ನು ನ್ಯಾಯಾಲಯದ ಅಧಿಕಾರಿಗೆ ಒಪ್ಪಿಸಬಹುದು; ಆ ಅಧಿಕಾರಿಯು ನಿನ್ನನ್ನು ಸೆರೆಮನೆಗೆ ಹಾಕಿಸಬಹುದು. 59  ನೀನು ತೀರ ಕಡಮೆ ಬೆಲೆಯ ಕೊನೆಯ ಚಿಕ್ಕ ಕಾಸನ್ನು ಸಲ್ಲಿಸುವ ವರೆಗೂ ಅಲ್ಲಿಂದ ನಿಶ್ಚಯವಾಗಿಯೂ ಹೊರಗೆ ಬರುವುದೇ ಇಲ್ಲವೆಂದು ನಾನು ನಿನಗೆ ಹೇಳುತ್ತೇನೆ” ಎಂದನು.

ಪಾದಟಿಪ್ಪಣಿ

ಲೂಕ 12:5 ಮತ್ತಾ 5:22ರ ಪಾದಟಿಪ್ಪಣಿಯನ್ನು ನೋಡಿ.
ಲೂಕ 12:25 ಮತ್ತಾ 6:27ರ ಪಾದಟಿಪ್ಪಣಿಯನ್ನು ನೋಡಿ.
ಲೂಕ 12:38 ರಾತ್ರಿ ಸುಮಾರು ಒಂಬತ್ತು ಗಂಟೆಯಿಂದ ಮಧ್ಯರಾತ್ರಿಯ ತನಕ.
ಲೂಕ 12:38 ಮಧ್ಯರಾತ್ರಿಯಿಂದ ಬೆಳಗ್ಗೆ ಸುಮಾರು ಮೂರು ಗಂಟೆಯ ತನಕ.