ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ರೋಮನ್ನರಿಗೆ 6:1-23

6  ಹಾಗಾದರೆ ನಾವು ಏನು ಹೇಳೋಣ? ದೇವರ ಅಪಾತ್ರ ದಯೆಯು ಹೇರಳವಾಗಿ ಉಂಟಾಗಲಿ ಎಂದು ನಾವು ​ಪಾಪದಲ್ಲಿ ಮುಂದುವರಿಯೋಣವೇ?  ಹಾಗೆಂದೂ ಆಗದಿರಲಿ! ನಾವು ಪಾಪದ ಪಾಲಿಗೆ ಸತ್ತಿರುವುದರಿಂದ ಇನ್ನು ಮುಂದೆ ಅದರಲ್ಲೇ ಬದುಕುತ್ತಿರುವುದು ಹೇಗೆ?  ಅಥವಾ ಕ್ರಿಸ್ತ ಯೇಸುವಿನೊಂದಿಗೆ ಐಕ್ಯರಾಗಲಿಕ್ಕಾಗಿ ದೀಕ್ಷಾಸ್ನಾನ ಪಡೆದುಕೊಂಡಿರುವ ನಾವೆಲ್ಲರೂ ಅವನ ಮರಣದೊಂದಿಗೆ ಐಕ್ಯರಾಗಲಿಕ್ಕಾಗಿಯೂ ದೀಕ್ಷಾಸ್ನಾನ ಪಡೆದುಕೊಂಡೆವು ಎಂಬುದು ನಿಮಗೆ ತಿಳಿಯದೊ?  ಆದುದರಿಂದ ಅವನ ಮರಣ​ದೊಂದಿಗೆ ಐಕ್ಯರಾಗಲಿಕ್ಕಾಗಿ ನಮ್ಮ ದೀಕ್ಷಾಸ್ನಾನದ ಮೂಲಕ ಅವನೊಂದಿಗೆ ಹೂಣಲ್ಪಟ್ಟೆವು. ಏಕೆಂದರೆ ಕ್ರಿಸ್ತನು ಸತ್ತವರೊಳಗಿಂದ ತಂದೆಯ ಮಹಿಮೆಯ ಮೂಲಕ ಎಬ್ಬಿಸಲ್ಪಟ್ಟಂತೆಯೇ ನಾವು ಸಹ ಜೀವದ ನವೀನತೆಯಲ್ಲಿ ನಡೆಯಬೇಕು.  ನಾವು ಅವನ ಮರಣಕ್ಕೆ ಸದೃಶವಾದ ಮರಣದಲ್ಲಿ ಅವನೊಂದಿಗೆ ಐಕ್ಯಗೊಳಿಸಲ್ಪಟ್ಟಿರುವುದಾದರೆ ಖಂಡಿತವಾಗಿಯೂ ಅವನ ಪುನರುತ್ಥಾನಕ್ಕೆ ಸದೃಶವಾದ ಪುನರುತ್ಥಾನದಲ್ಲಿ ಅವನೊಂದಿಗೆ ಐಕ್ಯಗೊಳಿಸಲ್ಪಡುವೆವು;  ಏಕೆಂದರೆ ಇನ್ನು ಮುಂದೆ ನಾವು ಪಾಪಕ್ಕೆ ದಾಸರಾಗಿ ಉಳಿಯದಂತೆ ನಮ್ಮ ಪಾಪಭರಿತ ದೇಹವು ನಿಷ್ಕ್ರಿಯೆಗೊಳಿಸಲ್ಪಟ್ಟು ನಮ್ಮ ಹಳೆಯ ವ್ಯಕ್ತಿತ್ವವು ಅವನೊಂದಿಗೆ ಶೂಲಕ್ಕೇರಿಸಲ್ಪಟ್ಟಿತು ಎಂಬುದನ್ನು ನಾವು ಬಲ್ಲೆವು.  ಏಕೆಂದರೆ ಸತ್ತಿರುವವನು ತನ್ನ ಪಾಪದಿಂದ ಮುಕ್ತ​ನಾಗಿದ್ದಾನೆ.  ಮಾತ್ರವಲ್ಲದೆ, ನಾವು ಕ್ರಿಸ್ತನೊಂದಿಗೆ ಸತ್ತಿರುವುದಾದರೆ ಅವನೊಂದಿಗೆ ಜೀವಿಸುವೆವೆಂದೂ ನಾವು ನಂಬುತ್ತೇವೆ.  ಏಕೆಂದರೆ ಕ್ರಿಸ್ತನು ಸತ್ತವರೊಳಗಿಂದ ಈಗ ಎಬ್ಬಿಸಲ್ಪಟ್ಟಿರುವುದರಿಂದ ಅವನು ಇನ್ನು ಮುಂದೆ ಸಾಯುವುದಿಲ್ಲ, ಇನ್ನು ಮುಂದೆ ಮರಣವು ಅವನ ಮೇಲೆ ಒಡೆಯನಾಗಿರುವುದಿಲ್ಲ ಎಂಬುದು ನಮಗೆ ತಿಳಿದಿದೆ. 10  ಅವನು ಅನುಭವಿಸಿದ ಮರಣವು ಪಾಪವನ್ನು ತೆಗೆದು​ಹಾಕಲಿಕ್ಕಾಗಿ ಎಲ್ಲ ಕಾಲಕ್ಕಾಗಿ ಒಂದೇ ಸಾರಿ ಅನುಭವಿಸಿದ ಮರಣವಾಗಿತ್ತು; ಆದರೆ ಅವನು ಜೀವಿಸುತ್ತಿರುವ ಜೀವನವು ​ದೇವರಿಗಾಗಿ ಜೀವಿಸುವ ಜೀವನವಾಗಿದೆ. 11  ತದ್ರೀತಿ​ಯಲ್ಲಿ ನೀವು ಸಹ ನಿಮ್ಮನ್ನು ಪಾಪದ ಪಾಲಿಗೆ ಸತ್ತವರಾಗಿಯೂ ಕ್ರಿಸ್ತ ಯೇಸುವಿನ ಮೂಲಕ ದೇವರಿಗಾಗಿ ಜೀವಿಸುವವರಾಗಿಯೂ ಎಣಿಸಿಕೊಳ್ಳಿರಿ. 12  ಆದುದರಿಂದ ನೀವು ನಿಮ್ಮ ಮರ್ತ್ಯ ದೇಹಗಳ ಆಶೆಗಳಿಗೆ ವಿಧೇಯರಾಗುವ ಮೂಲಕ ಪಾಪವು ನಿಮ್ಮ ಮೇಲೆ ಅರಸನಂತೆ ಆಳ್ವಿಕೆ ನಡೆಸುವುದನ್ನು ಮುಂದುವರಿಸಲು ಬಿಡಬೇಡಿರಿ. 13  ಮಾತ್ರವಲ್ಲದೆ ನಿಮ್ಮ ಅಂಗಗಳನ್ನು ಅನೀತಿಯ ಆಯುಧಗಳಾಗಿರಲಿಕ್ಕಾಗಿ ಅವುಗಳನ್ನು ಪಾಪಕ್ಕೆ ಒಪ್ಪಿಸುತ್ತಾ ಇರಬೇಡಿ; ಅದಕ್ಕೆ ಬದಲಾಗಿ ಸತ್ತವರೊಳಗಿಂದ ಜೀವಿತರಾದವರಂತೆ ನಿಮ್ಮನ್ನು ದೇವರಿಗೆ ಒಪ್ಪಿಸಿಕೊಡಿರಿ ಮತ್ತು ನಿಮ್ಮ ಅಂಗಗಳನ್ನು ಸಹ ನೀತಿಯ ಆಯುಧಗಳಾಗಿರಲಿಕ್ಕಾಗಿ ದೇವರಿಗೆ ಒಪ್ಪಿಸಿಕೊಡಿರಿ. 14  ನೀವು ಧರ್ಮಶಾಸ್ತ್ರದ ಕೆಳಗಿರದೆ ದೇವರ ಅಪಾತ್ರ ದಯೆಯ ಕೆಳಗಿರುವುದರಿಂದ ಪಾಪವು ನಿಮ್ಮ ಮೇಲೆ ಅಧಿಕಾರ ನಡೆಸ​ಬಾರದು. 15  ಹಾಗಾದರೆ ಏನು? ನಾವು ಧರ್ಮಶಾಸ್ತ್ರದ ಕೆಳಗಿರದೆ ದೇವರ ಅಪಾತ್ರ ದಯೆಯ ಕೆಳಗಿರುವುದರಿಂದ ಪಾಪವನ್ನು ಮಾಡಬಹುದೊ? ಹಾಗೆಂದೂ ಆಗದಿರಲಿ! 16  ನೀವು ಯಾವನಿಗಾದರೂ ವಿಧೇಯತೆ ತೋರಿಸಲು ಅವನಿಗೆ ನಿಮ್ಮನ್ನು ದಾಸರನ್ನಾಗಿ ಒಪ್ಪಿಸಿಕೊಡುತ್ತೀರಾದರೆ ನೀವು ಅವನಿಗೆ ವಿಧೇಯರಾಗುವುದರಿಂದ ಅವನಿಗೆ ದಾಸರಾಗಿದ್ದೀರಿ, ಮರಣಕ್ಕೆ ನಡಿಸುವ ಪಾಪಕ್ಕೆ ನೀವು ದಾಸರು ಇಲ್ಲವೆ ನೀತಿಗೆ ನಡಿಸುವ ವಿಧೇಯತೆಗೆ ದಾಸರು ಎಂಬುದು ನಿಮಗೆ ತಿಳಿದಿಲ್ಲವೊ? 17  ಆದರೆ ನೀವು ಹಿಂದೆ ಪಾಪಕ್ಕೆ ದಾಸರಾಗಿದ್ದರೂ ಈಗ ಯಾವುದಕ್ಕೆ ಒಪ್ಪಿಸಲ್ಪಟ್ಟಿರೋ ಆ ಬೋಧನಾ ರೀತಿಗೆ ಹೃದಯದಿಂದ ವಿಧೇಯರಾದದ್ದು ದೇವರಿಂದಾಗಿಯೇ. 18  ಹೌದು, ನೀವು ಪಾಪದಿಂದ ಬಿಡುಗಡೆಮಾಡಲ್ಪಟ್ಟದ್ದರಿಂದ ನೀತಿಗೆ ದಾಸರಾದಿರಿ. 19  ನಿಮ್ಮ ಶರೀರದ ಬಲಹೀನತೆಯ ದೆಸೆಯಿಂದ ನಾನು ಮಾನವ ಮಾತುಗಳಲ್ಲಿ ಇದನ್ನು ಹೇಳುತ್ತಿದ್ದೇನೆ. ನೀವು ಅಧರ್ಮಮಾಡುವುದಕ್ಕಾಗಿ ನಿಮ್ಮ ಅಂಗಗಳನ್ನು ಅಶುದ್ಧತೆಗೂ ಅಧರ್ಮಕ್ಕೂ ದಾಸರನ್ನಾಗಿ ಒಪ್ಪಿಸಿಕೊಟ್ಟಂತೆಯೇ ಈಗ ಪವಿತ್ರವಾದುದನ್ನು ಮಾಡಲಿಕ್ಕಾಗಿ ನಿಮ್ಮ ​ಅಂಗಗಳನ್ನು ನೀತಿಗೆ ದಾಸರನ್ನಾಗಿ ಒಪ್ಪಿಸಿಕೊಡಿರಿ. 20  ಏಕೆಂದರೆ ನೀವು ಪಾಪಕ್ಕೆ ದಾಸರಾಗಿದ್ದಾಗ ನೀತಿಯ ವಿಷಯದಲ್ಲಿ ಸ್ವತಂತ್ರರಾಗಿದ್ದಿರಿ. 21  ಹಾಗಾದರೆ ಆ ಸಮಯದಲ್ಲಿ ನಿಮಗೆ ಯಾವ ಫಲ ಸಿಗುತ್ತಿತ್ತು? ಈಗ ನೀವು ನಾಚಿಕೆಪಟ್ಟುಕೊಳ್ಳುವ ವಿಷಯಗಳೇ ಅಲ್ಲವೆ? ಅವುಗಳ ಅಂತ್ಯವು ಮರಣವೇ. 22  ಆದರೂ ಈಗ ನೀವು ಪಾಪದಿಂದ ಬಿಡುಗಡೆಮಾಡಲ್ಪಟ್ಟು ದೇವರಿಗೆ ದಾಸರಾಗಿರುವುದರಿಂದ ನೀವು ಪವಿತ್ರತೆಯ ರೂಪದಲ್ಲಿ ಫಲವನ್ನು ಪಡೆಯುತ್ತಿದ್ದೀರಿ ಮತ್ತು ಕೊನೆಯ ಪರಿಣಾಮವು ನಿತ್ಯಜೀವವಾಗಿರುತ್ತದೆ. 23  ಏಕೆಂದರೆ ಪಾಪವು ಕೊಡುವ ಸಂಬಳ ಮರಣ, ಆದರೆ ದೇವರು ಕೊಡುವ ವರವು ನಮ್ಮ ಕರ್ತನಾದ ಕ್ರಿಸ್ತ ಯೇಸುವಿನ ಮೂಲಕವಾಗಿರುವ ನಿತ್ಯಜೀವ.

ಪಾದಟಿಪ್ಪಣಿ