ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ರೋಮನ್ನರಿಗೆ 4:1-25

4  ಹಾಗಿರುವಾಗ ವಂಶಾನುಕ್ರಮವಾಗಿ ನಮಗೆ ಪೂರ್ವಜನಾಗಿರುವ ಅಬ್ರಹಾಮನ ಕುರಿತು ನಾವು ಏನು ಹೇಳೋಣ?  ಉದಾಹರಣೆಗೆ, ಒಂದುವೇಳೆ ಅಬ್ರಹಾಮನು ಕ್ರಿಯೆಗಳ ಮೂಲಕ ನೀತಿವಂತನೆಂದು ನಿರ್ಣಯಿಸಲ್ಪಟ್ಟಿದ್ದಲ್ಲಿ ಹೊಗಳಿಕೊಳ್ಳಲು ಅವನಿಗೆ ಆಧಾರವಿರುತ್ತಿತ್ತು; ಆದರೆ ದೇವರ ಮುಂದೆ ಅಲ್ಲ.  ಶಾಸ್ತ್ರವಚನವು ಏನು ಹೇಳುತ್ತದೆ? “ಅಬ್ರಹಾಮನು ಯೆಹೋವನಲ್ಲಿ ನಂಬಿಕೆಯನ್ನಿಟ್ಟನು ಮತ್ತು ಅದು ಅವನ ಲೆಕ್ಕಕ್ಕೆ ನೀತಿಯೆಂದು ಎಣಿಸಲ್ಪಟ್ಟಿತು.”  ಕೆಲಸವನ್ನು ಮಾಡುವವನಿಗೆ ಕೊಡಲ್ಪಡುವ ಸಂಬಳವು ಅಪಾತ್ರ ದಯೆಯಾಗಿ ಅಲ್ಲ, ಸಲ್ಲತಕ್ಕದ್ದೆಂದು ಎಣಿಸಲ್ಪಡುತ್ತದೆ.  ಭಕ್ತಿಹೀನನನ್ನು ನೀತಿವಂತನೆಂದು ನಿರ್ಣಯಿಸುವಾತನಲ್ಲಿ ನಂಬಿಕೆಯಿಡುವ ವ್ಯಕ್ತಿಯು, ಕ್ರಿಯೆಗಳನ್ನು ಮಾಡದೆ ಇದ್ದರೂ ಅವನ ನಂಬಿಕೆಯೇ ಅವನಿಗೆ ನೀತಿಯೆಂದು ಎಣಿಸಲ್ಪಡುತ್ತದೆ.  ಕ್ರಿಯೆಗಳಿಲ್ಲದೆ ದೇವರು ಯಾವನನ್ನು ನೀತಿವಂತನೆಂದು ಎಣಿಸುತ್ತಾನೋ ಅವನು ಸಂತೋಷಿತನೆಂದು ದಾವೀದನು ಸಹ ಹೇಳಿದನು.  ಅವನಂದದ್ದು: “ಯಾರ ಅಧರ್ಮದ ಕೃತ್ಯಗಳು ಮನ್ನಿಸಲ್ಪಟ್ಟಿವೆಯೋ ಮತ್ತು ಯಾರ ಪಾಪಗಳು ಕ್ಷಮಿಸಲ್ಪಟ್ಟಿವೆಯೋ ಅವರು ಸಂತೋಷಿತರು;  ಯಾವನ ಪಾಪವನ್ನು ಯೆಹೋವನು ಲೆಕ್ಕಕ್ಕೆ ತೆಗೆದುಕೊಳ್ಳುವುದೇ ಇಲ್ಲವೋ ಆ ಮನುಷ್ಯನು ಸಂತೋಷಿತನು.”  ಹಾಗಾದರೆ ಈ ಸಂತೋಷವು ಸುನ್ನತಿಯಾದವರಿಗೆ ಮಾತ್ರ ದೊರಕುತ್ತದೋ ಅಥವಾ ಸುನ್ನತಿಯಿಲ್ಲದವರಿಗೂ ದೊರಕುತ್ತದೊ? ಏಕೆಂದರೆ, “ಅಬ್ರಹಾಮನ ನಂಬಿಕೆಯು ಅವನ ಲೆಕ್ಕಕ್ಕೆ ನೀತಿಯಾಗಿ ಎಣಿಸಲ್ಪಟ್ಟಿತು” ಎಂದು ನಾವು ಹೇಳುತ್ತೇವೆ. 10  ಹಾಗಾದರೆ ಯಾವ ಸನ್ನಿವೇಶಗಳ ಕೆಳಗೆ ಅದು ಹಾಗೆ ಎಣಿಸಲ್ಪಟ್ಟಿತು? ಅವನಿಗೆ ಸುನ್ನತಿಯಾದ ಬಳಿಕವೋ ಅಥವಾ ಸುನ್ನತಿಯಾಗುವುದಕ್ಕಿಂತ ಮುಂಚೆಯೊ? ಸುನ್ನತಿಯಾದ ಬಳಿಕ ಅಲ್ಲ, ಸುನ್ನತಿಯಾಗುವುದಕ್ಕಿಂತ ಮುಂಚೆಯೇ. 11  ಅವನು ಒಂದು ಗುರುತನ್ನು ಅಂದರೆ ಸುನ್ನತಿಯನ್ನು ನೀತಿಯ ಮುದ್ರೆಯಾಗಿ, ಸುನ್ನತಿಯಾಗಿರದ ಸ್ಥಿತಿಯಲ್ಲಿರುವಾಗ ಪಡೆದನು. ಹೀಗೆ ಸುನ್ನತಿ ಇಲ್ಲದವರಾಗಿರುವಾಗ ನಂಬಿಕೆಯಿರುವ ಎಲ್ಲರಿಗೆ ನೀತಿಯು ಲೆಕ್ಕಿಸಲ್ಪಡುವಂತೆ ಅವನು ತಂದೆಯಾದನು. 12  ಅಬ್ರಹಾಮನು ಸುನ್ನತಿಯಾಗಿರುವ ಸಂತತಿಗೆ ತಂದೆಯಾಗಿದ್ದಾನೆ; ಸುನ್ನತಿಗೆ ಅಂಟಿಕೊಂಡಿರುವವರಿಗೆ ಮಾತ್ರವಲ್ಲ, ನಮ್ಮ ತಂದೆಯಾದ ಅಬ್ರಹಾಮನಿಗೆ ಸುನ್ನತಿಯಿಲ್ಲದ ಸ್ಥಿತಿಯಲ್ಲಿ ಇದ್ದಂಥ ಆ ನಂಬಿಕೆಯ ಹೆಜ್ಜೆಜಾಡಿನಲ್ಲಿ ಕ್ರಮಬದ್ಧವಾಗಿ ನಡೆಯುವವರಿಗೆ ಸಹ ತಂದೆಯಾದನು. 13  ಅಬ್ರಹಾಮನು ಲೋಕಕ್ಕೆ ಬಾಧ್ಯಸ್ಥನಾಗುವನು ಎಂಬ ವಾಗ್ದಾನವು ಅವನಿಗಾಗಲಿ ಅವನ ಸಂತಾನಕ್ಕಾಗಲಿ ದೊರಕಿದ್ದು ಧರ್ಮಶಾಸ್ತ್ರದ ಮೂಲಕವಾಗಿ ಅಲ್ಲ, ನಂಬಿಕೆಯ ಮೂಲಕ ಸಿಕ್ಕಿದ ನೀತಿಯಿಂದ ದೊರಕಿತು. 14  ಧರ್ಮಶಾಸ್ತ್ರಕ್ಕೆ ಅಂಟಿಕೊಳ್ಳುವವರು ಬಾಧ್ಯಸ್ಥರಾದರೆ ನಂಬಿಕೆಯು ವ್ಯರ್ಥವಾದಂತಾಯಿತು ಮತ್ತು ವಾಗ್ದಾನವು ರದ್ದುಪಡಿಸಲ್ಪಟ್ಟಂತಾಯಿತು. 15  ವಾಸ್ತವದಲ್ಲಿ ಧರ್ಮಶಾಸ್ತ್ರವು ದೇವರ ಕ್ರೋಧವನ್ನು ಉಂಟುಮಾಡುತ್ತದೆ, ಆದರೆ ಎಲ್ಲಿ ಧರ್ಮಶಾಸ್ತ್ರವಿಲ್ಲವೋ ಅಲ್ಲಿ ಯಾವುದೇ ಅಪರಾಧವಿಲ್ಲ. 16  ಈ ಕಾರಣದಿಂದ ಆ ವಾಗ್ದಾನವು ದೇವರ ಅಪಾತ್ರ ದಯೆಯಿಂದ ನಂಬಿಕೆಯ ಮೂಲಕ ದೊರೆಯುತ್ತದೆ. ಹೀಗೆ ಆ ವಾಗ್ದಾನವು ಅಬ್ರಹಾಮನ ಸಂತಾನದವರೆಲ್ಲರಿಗೂ ಅಂದರೆ ಧರ್ಮಶಾಸ್ತ್ರಕ್ಕೆ ಅಂಟಿಕೊಂಡಿರುವವರಿಗೆ ಮಾತ್ರವಲ್ಲ ಅಬ್ರಹಾಮನ ನಂಬಿಕೆಗೆ ಅಂಟಿಕೊಂಡಿರುವವರಿಗೂ ಖಂಡಿತವಾಗಿಯೂ ದೊರಕುವುದು. (“ನಾನು ನಿನ್ನನ್ನು ಅನೇಕ ಜನಾಂಗಗಳಿಗೆ ತಂದೆಯಾಗಿ ನೇಮಿಸಿದ್ದೇನೆ” ಎಂದು ಬರೆಯಲ್ಪಟ್ಟಿರುವಂತೆಯೇ 17  ಅವನು ನಮ್ಮೆಲ್ಲರಿಗೂ ತಂದೆಯಾಗಿದ್ದಾನೆ.) ಇದು ಅಬ್ರಹಾಮನು ನಂಬಿಕೆಯಿಟ್ಟಿದ್ದ ದೇವರ ಸನ್ನಿಧಿಯಲ್ಲಿ ಮಾಡಲ್ಪಟ್ಟಿತು. ಆತನು ಸತ್ತವರನ್ನು ಬದುಕಿಸುವಾತನೂ ಇಲ್ಲದಿರುವವುಗಳನ್ನು ಅವು ಇವೆಯೋ ಎಂಬಂತೆ ಕರೆಯುವಾತನೂ ಆಗಿದ್ದಾನೆ. 18  “ಹಾಗೆಯೇ ನಿನ್ನ ಸಂತಾನವೂ ಆಗುವುದು” ಎಂದು ತನಗೆ ಹೇಳಲ್ಪಟ್ಟ ಮಾತುಗಳಿಗನುಸಾರ ತಾನು ಅನೇಕ ಜನಾಂಗಗಳಿಗೆ ತಂದೆಯಾಗುವೆನು ಎಂಬ ನಂಬಿಕೆಯು ಅಬ್ರಹಾಮನಲ್ಲಿತ್ತು. ಅದು ನಿರೀಕ್ಷೆಗೆ ಮೀರಿದ್ದರೂ ನಿರೀಕ್ಷೆಯ ಆಧಾರದಿಂದ ಅವನು ನಂಬಿದನು. 19  ಅವನು ಸುಮಾರು ನೂರುವರ್ಷದವನಾಗಿದ್ದು ಈಗಾಗಲೇ ತಾನು ದುರ್ಬಲನಾಗಿದ್ದೇನೆ ಮತ್ತು ಸಾರಳು ಗರ್ಭಧರಿಸುವ ಕಾಲವು ಕಳೆದುಹೋಗಿದೆ ಎಂದು ಅವನು ಯೋಚಿಸಿದನಾದರೂ ಅವನ ನಂಬಿಕೆಯು ಕುಂದಿಹೋಗಲಿಲ್ಲ. 20  ಅವನು ದೇವರ ವಾಗ್ದಾನದಲ್ಲಿ ನಂಬಿಕೆಯ ಕೊರತೆಯನ್ನು ತೋರಿಸಿ ವಿಚಲಿತನಾಗಲಿಲ್ಲ; ಬದಲಾಗಿ ಅವನು ತನ್ನ ನಂಬಿಕೆಯಿಂದ ದೃಢನಾಗಿ ದೇವರಿಗೆ ಮಹಿಮೆಯನ್ನು ಸಲ್ಲಿಸಿದನು 21  ಮತ್ತು ದೇವರು ಏನನ್ನು ವಾಗ್ದಾನಿಸಿದ್ದನೋ ಅದನ್ನು ನೆರವೇರಿಸಲು ಸಹ ಶಕ್ತನಾಗಿದ್ದಾನೆ ಎಂಬ ಪೂರ್ಣ ಭರವಸೆ ಅವನಿಗಿತ್ತು. 22  ಆದುದರಿಂದ “ಇದು ಅವನ ಲೆಕ್ಕಕ್ಕೆ ನೀತಿಯೆಂದು ಎಣಿಸಲ್ಪಟ್ಟಿತು.” 23  “ಇದು ಅವನ ಲೆಕ್ಕಕ್ಕೆ ನೀತಿಯೆಂದು ಎಣಿಸಲ್ಪಟ್ಟಿತು” ಎಂದು ಬರೆಯಲ್ಪಟ್ಟಿರುವುದು ಅವನಿಗೋಸ್ಕರ ಮಾತ್ರವಲ್ಲ 24  ಹಾಗೆ ಎಣಿಸಲ್ಪಡಲು ವಿಧಿಸಲ್ಪಟ್ಟಿರುವ ನಮಗೋಸ್ಕರವೂ ಬರೆಯಲ್ಪಟ್ಟಿದೆ, ಏಕೆಂದರೆ ನಮ್ಮ ಕರ್ತನಾದ ಯೇಸುವನ್ನು ಸತ್ತವರೊಳಗಿಂದ ಎಬ್ಬಿಸಿದಾತನನ್ನು ನಾವು ನಂಬುತ್ತೇವೆ. 25  ಅವನು ನಮ್ಮ ಅಪರಾಧಗಳ ನಿಮಿತ್ತ ಮರಣಕ್ಕೆ ಒಪ್ಪಿಸಲ್ಪಟ್ಟನು ಮತ್ತು ನಮ್ಮನ್ನು ನೀತಿವಂತರೆಂದು ನಿರ್ಣಯಿಸುವುದಕ್ಕೋಸ್ಕರ ಎಬ್ಬಿಸಲ್ಪಟ್ಟನು.

ಪಾದಟಿಪ್ಪಣಿ